
ಇತ್ತೀಚೆಗೆ ರಾಜ್ಯಸಭೆಗೆ ನಾಮಕರಣಗೊಂಡವರ ಪಟ್ಟಿಯನ್ನು ನೋಡಿ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಸಂತಸ-ಸಮಾಧಾನಗಳನ್ನು ಹಂಚಿಕೊಂಡಿದ್ದಾರೆ. ತಾರಾ ಮೆರಗು ಹಾಗೂ ಪ್ರಚಾರದ ಕಣದಲ್ಲಿರುವ ಕ್ರಿಕೆಟಿಗರಿಗೋ, ನಟನಾ ರಂಗದವರಿಗೋ ಹೋಲಿಸಿದರೆ ಇಲ್ಲಿನ ಹೆಸರುಗಳನ್ನು ಸಾಮಾನ್ಯರೆನಿಸಿಕೊಂಡವರು ಹೆಚ್ಚಿನವರು ಕೇಳದೇ ಇದ್ದಿರಲಿಕ್ಕೂ ಸಾಕು. ಉಜ್ವಲ ನಿಕ್ಕಂ, ಹರ್ಷವರ್ಧನ ಶ್ರಿಂಗ್ಲ, ಸದಾನಂದ ಮಾಸ್ಟರ್, ಮೀನಾಕ್ಷೀ ಜೈನ್…
ವಿಧಾನಸೌಧದ ಪಾದಚಾರಿ ಮಾರ್ಗದ ಮೇಲೆ ಹೋಗುತ್ತಿರುವವರಿಗೆ ಮೈಕ್ ಹಿಡಿದು ಇವರೆಲ್ಲ ಯಾರು ಎಂದು ಕೇಳಿದರೆ ಹೆಚ್ಚಿನವರು ಉತ್ತರ ಹೇಳಲಿಕ್ಕಿಲ್ಲವೇನೋ. ಆದರೆ, ರಾಜ್ಯಸಭೆ ಎಂಬ ಚಿಂತಕರ ಚಾವಡಿ ಇರಬೇಕಿರುವುದೇ ಹಾಗೆ. ಮನರಂಜಿಸುವವರಿಗಿಂತ ಹೆಚ್ಚಾಗಿ, ನೇಪಥ್ಯದಲ್ಲಿದ್ದುಕೊಂಡೇ ಹೊಸ ಆಲೋಚನೆಗಳನ್ನು ಕಟ್ಟಿಕೊಟ್ಟವರು, ಸತ್ಯ ಕೆದಕಿದವರು ಇಲ್ಲಿಗೆ ಸಲ್ಲಬೇಕಾದವರು.
ಇವರೆಲ್ಲರ ಬಗ್ಗೆಯೂ ಹಲವು ವಿಚಾರಗಳನ್ನು ಬರೆಯಬಹುದಾದರೂ ಸದ್ಯದ ಅಂಕಣದ ವ್ಯಾಪ್ತಿ ಡಾ. ಮೀನಾಕ್ಷೀ ಜೈನ್ ಅವರ ಕಾರ್ಯಗಳನ್ನೊಮ್ಮೆ ಇದೇ ಸಂದರ್ಭವನ್ನು ನೆಪವಾಗಿರಿಸಿಕೊಂಡು ನೆನಪಿಸಿಕೊಳ್ಳುವುದು. ಹೊಸ ಭಾರತಕ್ಕೆ ಬೇಕೇ ಬೇಕಾಗಿರುವ ನಿಜ ಇತಿಹಾಸ ಕಥನವನ್ನು ಅವರು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಿರುವ ಬಗೆಯನ್ನು ಮನನ ಮಾಡಿಕೊಳ್ಳುವುದೆಂದರೆ ನಮಗೆ ನಾವು ಒಂದಿಷ್ಟು ಸ್ಫೂರ್ತಿ ತುಂಬಿಕೊಂಡಂತೆ.
ಆಗಿಹೋಗಿರುವ ಇತಿಹಾಸಕ್ಕೆ ಏಕಿಷ್ಟು ಮಹತ್ವ?
ಹಳೆಯದನ್ನು ಕೆದಕಿ ಏನು ಪ್ರಯೋಜನ ಎಂಬ ಸಿನಿಕತೆಯನ್ನು ಮನದಲ್ಲೆಲ್ಲ ಹೊದ್ದುಕೊಂಡಿರುವವರಿಗೂ ಇತಿಹಾಸವೆಂಬುದು ಪ್ರಭಾವಿಸಿಯೇ ಪ್ರಭಾವಿಸುತ್ತದೆ. ಈ ಇತಿಹಾಸ ಪ್ರಜ್ಞೆ ಅಭಾವ ರೂಪದಲ್ಲಿದ್ದರೂ ಅದರಿಂದಲೂ ಪ್ರಭಾವ ಉಂಟಲ್ಲ. ಸಿನಿಕತೆ ಮತ್ತು ಭಾವಶೂನ್ಯತೆಗಳೇ ಇತಿಹಾಸದರಿವಿನಭಾವದ ಮುಖ್ಯ ಪರಿಣಾಮ ಎನ್ನಬಹುದೇನೋ. ಭಾರತ ಅಂತಲ್ಲ, ಯಾವುದೇ ದೇಶದ ಇತಿಹಾಸದ ಪ್ರೇರಣಾ ಬಿಂದುಗಳೇ ಭವಿಷ್ಯದ ಓಟಕ್ಕೊಂದು ಉದ್ದೇಶವನ್ನೂ, ಗತಿಯನ್ನೂ ದೊರಕಿಸಿಕೊಡುವಂಥದ್ದು. “ಭಾರತದ ಇತಿಹಾಸ ಎಂದರೆ ಜಾತಿ ವೈಷಮ್ಯದಿಂದ, ಕಂದಾಚಾರಗಳಿಂದ ಕೂಡಿರುವಂಥದ್ದು….
ಯುರೋಪಿಯನ್ನರು ಬಂದು ನಮ್ಮನ್ನು ನಾಗರಿಕಗೊಳಿಸಿದರು, ಸಮಾನತೆ-ಸ್ವಾತಂತ್ರ್ಯದಂಥ ತತ್ತ್ವಗಳನ್ನು ಪರಿಚಯಿಸಿದರು, ಆವರೆಗೆ ಸೈನ್ಸ್ ಎಂಬುದು ನಮಗೆ ಗೊತ್ತೇ ಇರಲಿಲ್ಲ…ವಿಸ್ತರಣೆ ಬಯಸುವ ಎಲ್ಲ ರಾಜರು ಮತ್ತು ಸಾಮ್ರಾಜ್ಯಗಳಿಗಿರುವಂತೆ ಇಸ್ಲಾಂ ದಾಳಿಕೋರರರು ಸಹ ರಾಜಕಾರಣಕ್ಕೆ ಈ ನೆಲಕ್ಕೆ ಬಂದರು, ಇದರಲ್ಲಿ ಮತೀಯ ಕಾರಣಗಳಿರಲಿಲ್ಲ…ಅವರೊಂದು ಸಮ್ಮಿಶ್ರ ಸಂಸ್ಕೃತಿ ಕಟ್ಟಿದರು….” ಇಂಥವನ್ನೇ ಓದಿಕೊಂಡುಬಂದರೆ ನಮ್ಮ ಬಗ್ಗೆ ನಮಗೆ ಅಭಿಮಾನ ಬೆಳೆದೀತಾದರೂ ಹೇಗೆ?
ಆದರೆ, ರೊಮಿಲಾ ಥಾಪರ್, ಇರ್ಫಾನ್ ಹಬೀಬ್, ಆರ್ ಎಸ್ ಶರ್ಮ, ಡಿ ಎನ್ ಝಾ ಸೇರಿದಂತೆ ಸರ್ಕಾರಿ ಖರ್ಚಿನಲ್ಲಿ ಇತಿಹಾಸ ರಚಿಸಿದ ಎಲ್ಲರೂ ಮಾಡಿಕೊಂಡು ಬಂದಿದ್ದು ಇದನ್ನೇ. ಕ್ರಿಸ್ತಪೂರ್ವ ಕಾಲದಿಂದಲೇ ಜಗತ್ತಿನ ಬಹುಭಾಗಗಳನ್ನು ಮುಟ್ಟಿದ್ದ ಭಾರತೀಯರ ನೌಕಾಯಾನ, ರೋಮ್ ಸಾಮ್ರಾಜ್ಯ ಟಂಕಿಸುತ್ತಿದ್ದ ಬಂಗಾರ-ಬೆಳ್ಳಿ ನಾಣ್ಯಗಳನ್ನೆಲ್ಲ ತನ್ನ ಮಸಾಲೆ-ಜವಳಿ ವ್ಯಾಪಾರಗಳ ಮೂಲಕ ಆಕರ್ಷಿಸಿ ವ್ಯಾಪಾರ ಪಾರಮ್ಯ ಮರೆದಿದ್ದ ನಮ್ಮ ಹಿರೀಕರು, ಇವತ್ತಿನ ಕಂಪ್ಯೂಟರ್ ವ್ಯವಸ್ಥೆಯನ್ನು ನಿರ್ದೇಶಿಸುತ್ತಿರುವ ಬೈನರಿ ವ್ಯವಸ್ಥೆಗೆ ಸಹ ಅಡಿಪಾಯ ಎಂಬಂತಿರುವ ಶೂನ್ಯದ ಪರಿಕಲ್ಪನೆಯನ್ನು ಭಾರತದ ಬ್ರಹ್ಮಗುಪ್ತನೇ ಜಗತ್ತಿಗೆ ನಿಚ್ಚಳವಾಗಿಸಿದ್ದೆಂಬ ಸತ್ಯ, ತುಕ್ಕು ಹಿಡಿಯದ ಉಕ್ಕಿನ ಬಿಲ್ಲೆ ಉತ್ಪಾದಿಸಿ ಡಮಾಸ್ಕಸ್ಸಿನ ಯೋಧರು ಅದಕ್ಕಾಗಿ ಹಾತೊರೆಯುವಂತೆ ಮಾಡಿದ್ದ ಪ್ರಾಚೀನ ಭಾರತದ ಕೌಶಲ, ಮೊಘಲ ಮತ್ತು ಬ್ರಿಟಿಷರಿಂದ ಒಟ್ಟಾಗಿ ಸಹಸ್ರಮಾನಗಳವರೆಗೆ ಗುಲಾಮಿತನಕ್ಕೆ ಸಿಲುಕಿದ್ದಾಗಲೂ ಬತ್ತದೇ ಹರಿವು ಉಳಿಸಿಕೊಂಡಿರುವ ಸನಾತನ ಆಚಾರ-ವಿಚಾರಗಳು… ಇಂಥ ಸಂಗತಿಗಳ್ಯಾವವೂ ಮುಖ್ಯ ಚರ್ಚೆಯಲ್ಲೇ ಇರದಿದ್ದರೆ ಯಾವುದೇ ಪೀಳಿಗೆಗೆ ತನ್ನ ದೇಶದ ಬಗ್ಗೆ ಅಭಿಮಾನ ಮೂಡೀತಾದರೂ ಹೇಗೆ?
ಇವನ್ನೆಲ್ಲ ಸರಿಮಾಡುವ ನಿಟ್ಟಿನಲ್ಲಿ ಮೀನಾಕ್ಷೀ ಜೈನ್ ಕೇವಲ ಭಾವನಾತ್ಮಕತೆ ಮುಂದುಮಾಡದೇ, ಅಧ್ಯಯನ ಹಾಗೂ ತರ್ಕಬದ್ಧತೆಯ ಪರಿಧಿಯಲ್ಲೇ ಅವೆಲ್ಲವಕ್ಕೂ ಪರ್ಯಾಯ ಆಲೋಚನೆಗಳನ್ನು ಹಾಗೂ ಕಥನಗಳನ್ನು ಕಟ್ಟಿಕೊಟ್ಟರೆಂಬುದಕ್ಕೆ ಮುಖ್ಯರಾಗುತ್ತಾರೆ. ಅವರ ಪುಸ್ತಕಗಳು ಹಾಗೂ ಅವುಗಳ ಆಧಾರದಲ್ಲಿಯೇ ಆನ್ಲೈನ್ ಮಾತುಕತೆಗಳಲ್ಲಿ ಅವರು ಹೇಳಿರು ಮಾತುಗಳು ಇವೆಲ್ಲವೂ ಇವತ್ತಿಗೆ ಎಲ್ಲರಿಗೂ ಕೈಗೆಟಕುವಂತಿವೆ. ಈ ಎಲ್ಲ ವಿಭಾಗಗಳಲ್ಲಿ ಮೀನಾಕ್ಷೀ ಜೈನ್ ಅವರು ನೀಡಿರುವ ಆಧಾರಬದ್ಧ ಇತಿಹಾಸದ ನೋಟಗಳನ್ನು ಕೆಲವು ಉದಾಹರಣೆಗಳ ಮೂಲಕ ಗಮನಿಸೋಣ.
ಇಸ್ಲಾಂ ಆಕ್ರಮಣಕ್ಕೆ ಸುಮ್ಮನೇ ತಲೆಬಾಗಿತೇ ಹಿಂದು ಸಮಾಜ?
ಇಸ್ಲಾಮಿನ ಕ್ರೂರ ಆಕ್ರಮಣವನ್ನು ದಾಖಲಿಸುತ್ತಲೇ, ಇರಾನ್-ಸಿರಿಯಾ ಸೇರಿದಂತೆ ಪಾಶ್ಚಾತ್ಯರು ಸುಲಭವಾಗಿ ತುತ್ತಾದಂತೆ ಭಾರತೀಯರು ಈಡಾಗಲಿಲ್ಲವೆಂಬ ಸಂಘರ್ಷದ ಅಂಶವನ್ನೂ ತಮ್ಮ ಬರಹ-ಮಾತುಗಳಲ್ಲಿ ಮೀನಾಕ್ಷೀ ಜೈನ್ ಅನನ್ಯವಾಗಿ ತೆರೆದಿಡುತ್ತ ಹೋಗುತ್ತಾರೆ. ಈಗಿನ ಪಾಕಿಸ್ತಾನದಲ್ಲಿರುವ ಸಿಂಧ್ ಅನ್ನು ಆಕ್ರಮಿಸಿಕೊಳ್ಳುವುದಕ್ಕೇ ಇಸ್ಲಾಮಿ ಶಾಸನಕ್ಕೆ ಎಪ್ಪತ್ತೈದು ವರ್ಷಗಳ ಪ್ರಯತ್ನ ಬೇಕಾಯಿತು. ಅದಾದ ನಂತರವೂ ದೆಹಲಿಯವರೆಗೆ ಬರುವುದಕ್ಕೆ ಅದಕ್ಕೆ ಶತಮಾನಗಳೇ ಹಿಡಿದವು. ಕ್ಷಾತ್ರವಿಲ್ಲದಿದ್ದರೆ, ಶ್ರದ್ಧಾರಹಿತರಾಗಿದ್ದರೆ ನಮ್ಮ ಹಿರಿಯರು ಇಂಥದೊಂದು ಪ್ರತಿರೋಧ ಒಡ್ಡುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ.
712ರಲ್ಲಿ ಕಾಸಿಂ ಸಿಂಧ್ ಅನ್ನು ವಶಪಡಿಸಿಕೊಂಡಾಗ ಮುಲ್ತಾನಿನ ಸೂರ್ಯ ದೇವಾಲಯವನ್ನು ಹಾಗೆಯೇ ಉಳಿಸುತ್ತಾನೆ. ಏಕೆಂದರೆ, ದೇಶದ ಎಲ್ಲೆಡೆಯಿಂದ ಯಾತ್ರಿಕರು ಬಂದು ಅಪಾರ ಪ್ರಮಾಣದ ಧನಸಂಗ್ರಹ ಆಗುತ್ತಿರುವುದರಿಂದ ಅದನ್ನು ನಿಲ್ಲಿಸಿದರೆ ತನ್ನ ಖಜಾನೆಗೆ ಬರುವ ಹಣ ನಿಂತುಹೋಗುತ್ತದೆ ಎಂಬ ಕಾರಣಕ್ಕೆ. ಆದರೆ, ಮೂರ್ತಿಗೆ ಗೋಮಾಂಸ ತೊಡಿಸುವ ಮೂಲಕ ತನ್ನ ಮತಾಧಾರಿತ ವಿಕೃತಿಯನ್ನೂ ತೋರ್ಪಡಿಸುತ್ತಾನೆ. ನಂತರದ ದಾಳಿಗಳಲ್ಲಿ ಸೂರ್ಯ ದೇವಾಲಯ ಸಂಪೂರ್ಣ ನಾಶವಾಗುತ್ತದೆ. ಆದರೆ ಅಲ್ಲಿನ ಜನ ದೇವರ ಮೇಲಿನ ಆಸ್ಥೆಯನ್ನು ಬಿಡಲಾರದೇ ಕಟ್ಟಿಗೆಯ ವಿಗ್ರಹಗಳನ್ನು ಇಟ್ಟುಕೊಳ್ಳುತ್ತಾರೆ. ಇಂಥ ತಥ್ಯಗಳನ್ನೆಲ್ಲ ಆ ಕಾಲದ ಮುಸ್ಲಿಂ ಆಕ್ರಮಣಕಾರರ ಜತೆಗಿರುತ್ತಿದ್ದವರು ದಾಖಲಿಸಿರುವ ದಿನಚರಿ, ಆ ನಂತರದ ಕಾಲಘಟ್ಟದಲ್ಲಿ ಅಲ್ ಬರೂನಿಯಂಥ ಪ್ರವಾಸಿಗರ ದಾಖಲೆ ಇಂಥವನ್ನೆಲ್ಲ ಇಟ್ಟುಕೊಂಡು ಸಾಧಾರವಾಗಿ ಮೀನಾಕ್ಷೀ ಜೈನ್ ಕಟ್ಟಿಕೊಟ್ಟಿದ್ದಾರೆ.
ದೈವಕ್ಕಾಗಿ ಹಿರಿಯರು ಹೋರಾಡಿದ ಪರಿ
ಇಸ್ಲಾಂ ಆಕ್ರಮಣ ಪ್ರವಾಹದಲ್ಲಿ ಪುರಿಯ ಜಗನ್ನಾಥ ದೇವಾಲಯವೂ ಸಿಲುಕಿದಾಗ ಅಲ್ಲಿನ ಪೂಜಾರಿಗಳು ವಿಗ್ರಹಗಳನ್ನು ತೆಗೆದುಕೊಂಡುಹೋಗಿ ಗಂಜಾಂ ಬಳಿಯ ಅರಣ್ಯದಲ್ಲಿ ಆಶ್ರಯ ಪಡೆಯುತ್ತಾರೆ. ಹದಿನೆಂಟು ವರ್ಷಗಳ ಕಾಲ ಅವರು ಅಲ್ಲಿಯೇ ಆಜ್ಞಾತರಾಗಿದ್ದುಕೊಂಡು ಪೂಜಾ ಕೈಂಕರ್ಯಗಳನ್ನು ನಡೆಸುತ್ತ, ಪರಿಸ್ಥಿತಿ ಸುಧಾರಿಸಿದ ನಂತರವಷ್ಟೇ ಪುರಿಗೆ ಮರಳುತ್ತಾರೆ.
ಅಂದರೆ, ಮಿಲಿಟರಿ ಪ್ರತಿರೋಧದ ಹೊರತಾಗಿ, ಭಾರತೀಯ ಸಾಮಾನ್ಯರು ಧರ್ಮವನ್ನೂ ನಾಗರಿಕತೆಯನ್ನೂ ಕಾಪಿಟ್ಟುಕೊಂಡುಬಂದ ಬಗೆಯ ಬಗ್ಗೆ ಜೈನ್ ಅವರು ಕಟ್ಟಿಕೊಡುವ ಇತಿಹಾಸ ಚಿತ್ರಣ ಈಗಲೂ ಸ್ಫೂರ್ತಿ ತುಂಬುವಂತಿದೆ.
ಸಿಕಂದರ್ ಬುತ್ಶಿಕನ್ ಹದಿನಾಲ್ಕನೇ ಶತಮಾನದ ಉತ್ತರಾರ್ಧದಲ್ಲಿ ಮಾರ್ತಾಂಡ ಸೂರ್ಯ ದೇವಾಲಯವನ್ನು ಸಂಪೂರ್ಣ ನಾಶಗೊಳಿಸಿದ ಮೇಲೂ ಹಿಂದುಗಳು ಆ ಜಾಗದ ಸುತ್ತ ತಮ್ಮ ಉಪಸ್ಥಿತಿಯನ್ನೂ, ಅದರ ಕುರಿತಾದ ಕತೆಗಳನ್ನೂ ನಿರಂತರ ಜಾರಿಯಲ್ಲಿಟ್ಟುಕೊಂಡು ಬಂದಿದ್ದರಿಂದಲೇ ಅದರ ನೆನಪುಗಳು ಉಳಿಯುವಂತಾಗಿದೆ ಎಂಬಂಶಗಳ ಮೇಲೆಲ್ಲ ಜೈನ್ ತಮ್ಮ ಕೃತಿಗಳಲ್ಲಿ ಬೆಳಕು ಚೆಲ್ಲಿದ್ದಾರೆ.
ಸತಿ ಸಹಗಮನದ ಹೆಸರಲ್ಲಿ ಅಪಪ್ರಚಾರ
ಭಾರತದಲ್ಲಿ ಬ್ರಿಟಿಷರಿಗಿದ್ದದ್ದು ಪ್ರಾರಂಭಿಕವಾಗಿ ವ್ಯಾಪಾರಿ ಲಾಭ. ಆದರೆ ಅವರಿಲ್ಲಿ ವಿಸ್ತರಿಸಿಕೊಂಡ ನಂತರ ಕ್ರೈಸ್ತ ಮತ ಪ್ರಚಾರಕರಿಗೆ ಇಲ್ಲಿ ಬರುವುದಕ್ಕೊಂದು ಮಾರ್ಗ ಬೇಕಿತ್ತು. ಹಾಗೆಂದೇ ಬ್ರಿಟಿಷ್ ಸಂಸತ್ತಿಗೆ ಅವರು ತಾವು ಭಾರತಕ್ಕೆ ಬರಲೇಬೇಕಾದ ಸ್ಥಿತಿ ಏಕಿದೆ ಹಾಗೂ ಭಾರತೀಯರನ್ನು ‘ನಾಗರಿಕ’ಗೊಳಿಸಬೇಕಾದ ಅಗತ್ಯ ಎಷ್ಟಿದೆ ಎಂಬುದನ್ನು ಮನದಟ್ಟು ಮಾಡುವುದಕ್ಕೆ ಹಲವು ಚಿತ್ರಣಗಳನ್ನು ಕಟ್ಟಿಕೊಟ್ಟರು. ಅವುಗಳಲ್ಲೊಂದು ಸತಿ ಪದ್ಧತಿ.
ಸತಿ ಮತ್ತು ಜೋಹರ್ ಪ್ರಚಲಿತದಲ್ಲಿದ್ದದ್ದು ಪ್ರಮುಖವಾಗಿ ರಾಜಸ್ಥಾನದಲ್ಲಿ. ಅಲ್ಲೂ ಸಹ ಕೆಲವು ಪ್ರಕರಣಾಧರಿತವಾಗಿ ಪದ್ಧತಿ ಚಾಲ್ತಿಯಲ್ಲಿತ್ತೇ ಹೊರತು ಗಂಡ ಸತ್ತೊಡನೆ ಹೆಂಡತಿ ಚಿತೆ ಪ್ರವೇಶಿಸುವುದು ಸಾರ್ವತ್ರಿಕ ಎಂಬ ಪರಿಸ್ಥಿತಿ ಇದ್ದಿರಲಿಲ್ಲ. ಭಾರತದ ಬಂಗಾಳದಲ್ಲಿ ವರ್ಷಕ್ಕೆ ಐವತ್ತು ಸಾವಿರ, ಅರವತ್ತು ಸಾವಿರಗಳ ಲೆಕ್ಕದಲ್ಲಿ ಸತಿ ಪ್ರಕರಣಗಳಾಗುತ್ತವೆ ಎಂಬ ಚಿತ್ರಣವನ್ನು ಮಿಷನರಿಗಳು ಕಟ್ಟಿಕೊಟ್ಟವು. ರಾಜಸ್ಥಾನದಲ್ಲಿ ಪ್ರಚಲಿತದಲ್ಲಿದ್ದ ಪದ್ಧತಿಯನ್ನು ಅತಿ ವ್ಯಾಪಕವಾಗಿ ಬಂಗಾಳಕ್ಕೇಕೆ ಆರೋಪಿಸಲಾಯಿತೆಂದರೆ, ಬ್ರಿಟಿಷರ ಮೂಲ ನೆಲೆ ಇದ್ದದ್ದು ಅಲ್ಲೆಂಬ ಕಾರಣಕ್ಕೆ. ಹಾಗೆಂದು ಸತಿ ಪ್ರಕರಣಗಳಾಗುತ್ತಿರಲಿಲ್ಲ ಎಂದೇನಲ್ಲ. ಆದರೆ ಬಲವಂತದ ಸಾರ್ವತ್ರಿಕತೆ ಅಲ್ಲಿರಲಿಲ್ಲ ಎಂಬುದನ್ನು ಮೀನಾಕ್ಷೀ ಜೈನ್ ಅವರು ಅವತ್ತಿನ ಪೋರ್ಚುಗೀಸ್ ಹಾಗೂ ಆಂಗ್ಲರ ದಾಖಲೆಗಳನ್ನಿಟ್ಟುಕೊಂಡೇ ತೋರಿಸಿದ್ದಾರೆ.
ಇತಿಹಾಸ ಮರುಕಥನ, ಮರು ಮನನ
ಸ್ವಾತಂತ್ರ್ಯಾನಂತರ ಅಧಿಕಾರ ಸೂತ್ರ ಹಿಡಿದವರ ಕೃಪಾಕಟಾಕ್ಷದೊಂದಿಗೆ ಇತಿಹಾಸಕಾರರೆನಿಸಿಕೊಂಡ ಒಂದು ವರ್ಗವು ಒಂದು ಕಡೆ ಭಾರತೀಯ ನಿರಭಿಮಾನವನ್ನು ಬಿಂಬಿಸುವುದಕ್ಕೆ ಪ್ರಯತ್ನಿಸಿತಲ್ಲದೇ, ಮತ್ತೊಂದೆಡೆ ಸಾಮಾನ್ಯೀಕರಣ ಹಾಗೂ ನಿರಾಕರಣಗಳೆಂಬ ಆಯುಧಗಳನ್ನೂ ಜಳಪಳಿಸಿತು. ಏನಿವು ಎಂದಿರಾ? ಭಾರತದಲ್ಲಿ ಯಾವುದೇ ಎರಡು ರಾಜರ ನಡುವೆ ಯುದ್ಧವಾದಾಗಲೂ ಹೇಗೆ ವಿಧ್ವಂಸಗಳಾಗುತ್ತಿದ್ದವೋ, ಇಸ್ಲಾಮಿ ಸೇನೆಯ ಆಕ್ರಮಣದಲ್ಲಾಗಿದ್ದೂ ಅಷ್ಟೇ ಎಂಬ ಸಾಮಾನ್ಯೀಕರಣವನ್ನು ಪಠ್ಯಗಳಲ್ಲಿ ತುಂಬಲಾಯಿತು. ಒಬ್ಬ ರಾಜ ತಾನು ಗೆದ್ದ ಪ್ರದೇಶದಲ್ಲಿ ಈ ಹಿಂದಿನ ರಾಜ ಕಟ್ಟಿಸುತ್ತಿದ್ದ ದೇವಾಲಯವನ್ನು, ಜನಕಲ್ಯಾಣ ಕೆಲಸಗಳನ್ನು ಮುಂದುವರಿಸಿದ ಹಾಗೂ ಅವನ್ನು ಮತ್ತಷ್ಟು ವಿಸ್ತಾರಕ್ಕೊಳಪಡಿಸಿದ ಉದಾಹರಣೆಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ.
ಆದರೆ ಇಸ್ಲಾಮಿ ಆಕ್ರಮಣದ ಉದ್ದೇಶ ಇದಕ್ಕಿಂತ ಭಿನ್ನವೆಂಬುದು ಬಹಳ ಸ್ಪಷ್ಟ. ಆದಾಗ್ಯೂ ನಿರಾಕರಣವೆಂಬ ಇನ್ನೊಂದು ಅಸ್ತ್ರವನ್ನೂ ಪ್ರಯೋಗಿಸಲಾಯಿತು. ಅಂದರೆ, ಅಷ್ಟೆಲ್ಲ ದೇವಾಲಯ ನಾಶ ಹಾಗೂ ಬಲವಂತದ ಮತಾಂತರಗಳನ್ನು ಇಸ್ಲಾಮಿನ ಆಡಳಿತ ಮಾಡಿರಲೇ ಇಲ್ಲ ಎಂಬುದು. ಆದರೆ, ಅರಬ್ಬರು, ಸುಲ್ತಾನರು, ಮೊಘಲರೆಲ್ಲ ತಮ್ಮ ಜತೆ ಇರಿಸಿಕೊಂಡಿದ್ದ ಇತಿಹಾಸಕಾರರೇ ತಮ್ಮ ದೊರೆಯ ವಿಧ್ವಂಸಗಳನ್ನು ತುಂಬು ಅಭಿಮಾನದಿಂದ ವಿವರವಾಗಿ ದಾಖಲಿಸಿದ್ದಾರೆ. ಅಂಥ ದಾಖಲೆಗಳ ಮೇಲೆ ಮೀನಾಕ್ಷೀ ಜೈನ್ ಅವರ ಬರಹ ಹಾಗೂ ಮಾತುಗಳು ಸಾಕಷ್ಟು ಬೆಳಕು ಚೆಲ್ಲುತ್ತವೆ.
ಭವಿಷ್ಯತ್ತನ್ನು ನೇರ್ಪುಗೊಳಿಸುವುದಕ್ಕೆ ನಾವ್ಯಾರು ಎಂಬುದರ ಅರಿವು ಮುಖ್ಯ. ಅದು ಬರುವುದು ಇತಿಹಾಸ ಕಥನದಿಂದ. ಇದೀಗ ವೈಭವದ ಭವಿಷ್ಯಕ್ಕೆ ಹಂಬಲಿಸಿ ತನ್ನ ನೈಜ ಇತಿಹಾಸದ ಮರುಕಥನದಲ್ಲಿ ಆಸಕ್ತವಾಗಿರುವ ಭಾರತಕ್ಕೆ ಮೀನಾಕ್ಷೀ ಜೈನ್ ಹಾಗೂ ಅವರಂಥ ಲೇಖಕರು ಮತ್ತು ಚಿಂತಕರು ಬಹಳ ಮುಖ್ಯವಾಗುತ್ತಾರೆ.
- ಚೈತನ್ಯ ಹೆಗಡೆ
cchegde@gmail.com
Advertisement