
ಕಳೆದ ಜೂನ್ 16ಕ್ಕೆ ಭಾರತದ ತಂತ್ರಜ್ಞಾನಕ್ಷೇತ್ರದಲ್ಲೊಂದು ವಿಸ್ಮಯದ ಮಿನುಗು ಮಿನುಗಿತು. ಆ ಬಗ್ಗೆ ಈಗ ಬರೆಯುವುದಕ್ಕೆ, ಮೆಲುಕು ಹಾಕುವುದಕ್ಕೆ ಎರಡು ಕಾರಣಗಳಿವೆ.
ಜಗತ್ತು ಹೊಸ ಹೊಸ ಅನ್ವೇಷಣಾ ಸಾಧ್ಯತೆಗಳತ್ತ ಗಮನಹರಿಸುತ್ತಿರುವಾಗ ಭಾರತವು ಸಂಶೋಧನೆ ಮತ್ತು ಅಭಿವೃದ್ಧಿಗಳತ್ತ ಗಮನವನ್ನೇ ಹರಿಸುತ್ತಿಲ್ಲ, ಅದರಲ್ಲೂ ಸರ್ಕಾರಿ ಸಂಸ್ಥೆಗಳು ಏನನ್ನೂ ಮಾಡುತ್ತಲೇ ಇಲ್ಲ ಎಂಬ ಗ್ರಹಿಕೆ ಇದೆ. ಇದು ಸಂಪೂರ್ಣ ನಿಜವೇನಲ್ಲ ಹಾಗೂ ಈ ವಿಷಯದಲ್ಲಿ ಬದಲಾವಣೆಗಳು ಆಗುತ್ತಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಈ ವಿದ್ಯಮಾನವನ್ನು ಗಮನಿಸಬೇಕು.
ಎರಡನೆಯದಾಗಿ, ಈಗಿನ ಕಂಪ್ಯೂಟರ್ ಯುಗವೇ ಬೆರಗಿನದ್ದು ಎಂದುಕೊಳ್ಳುತ್ತಿರುವಾಗ ಇನ್ನೂ ಒಂದು ಅನೂಹ್ಯದ ಸೂಚನೆಗಳನ್ನು ಬಿಟ್ಟುಕೊಡುವ ವಿದ್ಯಮಾನ ಇದಾಗಿರುವುದರಿಂದ ಅದನ್ನು ಗಮನಿಸಿ ಚರ್ಚಿಸಬೇಕು. ಹೀಗೆ ಅನೂಹ್ಯವಾದದ್ದು ಎಂದು ಗುರುತಿಸುತ್ತಿರುವುದು ಸಾಕಾರವಾಗುವುದಕ್ಕೆ ಇನ್ನೂ ಹಲವು ಶತಮಾನಗಳೇ ಬೇಕಾಗಬಹುದೇನೋ. ಆದರೆ ಅದರ ಯಾನ ಪ್ರಾರಂಭವಾಗಿರುವುದರ ಕೌತುಕವನ್ನಾದರೂ ಮನಗಾಣಿಸಿಕೊಳ್ಳಬೇಕಲ್ಲವೇ? ಹಾಗಾದರೆ ಭಾರತದಲ್ಲಿ ಆಗಿರುವುದಾದರೂ ಏನು?
ಭಾರತದ ಅನ್ವೇಷಕರ ಸಮೂಹವು ಈಗೊಂದು ಹದಿನೈದಿಪ್ಪತ್ತು ದಿನಗಳ ಕೆಳಗೆ ಸಾಧಿಸಿದ ಅಂಶವೇನೆಂದರೆ, ಒಂದು ಕಿಲೊಮೀಟರಿನ ವ್ಯಾಪ್ತಿಯಲ್ಲಿ ಆಕಾಶದಲ್ಲೇ ಸಂವಹನವೊಂದನ್ನು ನಡೆಸಿ ‘ಕ್ವಾಂಟಂ ಸಂವಹನ’ ಸಾಧ್ಯತೆಯ ಅಂಬೆಗಾಲೊಂದನ್ನು ಇಟ್ಟು ತೋರಿಸಿದೆ.
ಅರೆ, ಇದರಲ್ಲೇನು ಬಂತು? ನಾವು ಸೆಲ್ಫೋನಿನಲ್ಲಿ ಆಡುವ ಮಾತುಗಳೂ ಆಕಾಶದಲ್ಲೇ ತೇಲಿಹೋಗುತ್ತವೆ, ನಮ್ಮ ಸೇಲ್ಪೋನಿಗೇನು ತಂತಿ ಜೋಡಿಸಿಕೊಂಡಿದೆಯೇ ಎಂಬ ಪ್ರಶ್ನೆ ಬರಬಹುದೇನೋ. ಆದರೆ, ಇದಕ್ಕೂ ಕ್ವಾಂಟಂ ಸಂವಹನಕ್ಕೂ ದೊಡ್ಡ ವ್ಯತ್ಯಾಸವಿದೆ. ನಮ್ಮ ಅಂತರ್ಜಾಲ ವೈಫೈ, ಸೆಲ್ಫೋನ್ ಸೇರಿದಂತೆ ಹಲವು ನಮಗೆ ದೃಗ್ಗೋಚರವಾಗದ ಸಿಗ್ನಲ್ಲುಗಳ ಮೂಲಕ ಪ್ರಾಥಮಿಕ ಹಂತದಲ್ಲಿ ಕಾರ್ಯನಿರ್ವಹಿಸಿದರೂ ಮುಂದಿನ ಹಂತದಲ್ಲಿ ಅವು ಟವರಿನಿಂದ ಇನ್ಯಾವುದೋ ಫೈಬರ್ ಜಾಲಕ್ಕೆ ಬೆಸೆದುಕೊಂಡಿರುತ್ತವೆ. ಹಾಗೆಂದು, ತಂತಿಗೆ ಜೋಡಿಸಿಕೊಂಡಿರುವುದು ಮತ್ತು ಜೋಡಿಸಿಕೊಂಡಿಲ್ಲದೇ ಇರುವುದು ಎಂಬುದು ಸಹ ಮೇಲ್ಮಟ್ಟದ ಒಂದು ಭೌತಿಕ ಭಿನ್ನತೆ ಮಾತ್ರ. ಅದರಿಂದ ಈಗಿನ ಡಿಜಿಟಲ್ ಸಂವಹನಕ್ಕೂ ಹಾಗೂ ಮುಂದಿನ ಕ್ವಾಂಟಂ ಸಂವಹನಕ್ಕೂ ತಟ್ಟೆಂದು ವ್ಯತ್ಯಾಸ ಹೇಳಲಾಗುವುದಿಲ್ಲ. ಇಲ್ಲಿ ಮೂಲಭೂತವಾಗಿ ಆಗುತ್ತಿರುವುದೇನೆಂದರೆ, ನಮ್ಮ ಇವತ್ತಿನ ಎಲ್ಲ ಡಿಜಿಟಲ್ ಸಂವಹನಗಳೂ ಎಲೆಕ್ಟ್ರಾನ್ ಅನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತವೆ. ಎಲೆಕ್ಟ್ರಾನ್ ಎಂದರೆ ಚಾರ್ಜ್ ಆಗಲ್ಪಟ್ಟಿರುವ ಕಣ. ವೈರ್ ಹಾಗೂ ಸರ್ಕೀಟುಗಳಲ್ಲಿ ಇದರ ಹರಿದಾಟವೇ ಸಂವಹನವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಆದರೆ, ಕ್ವಾಂಟಂ ಪರಿಕಲ್ಪನೆಯಲ್ಲಿ ಎಲೆಕ್ಟ್ರಾನ್ ಮೂಲಕ ಅಲ್ಲದೇ ಫೊಟಾನ್ಸ್ ಅಂದರೆ ಬೆಳಕಿನ ಕಣದ ಮೂಲಕವೇ ಸಂವಹನ ನಡೆಸಲಾಗುತ್ತದೆ. ಅಂಥದೊಂದು ಮಾದರಿಯನ್ನು ಒಂದು ಕಿಲೊಮೀಟರಿನ ಸೀಮಿತ ವ್ಯಾಪ್ತಿಯಲ್ಲಿ ಭಾರತೀಯರು ಸಾಧಿಸಿದ್ದಾರೆ ಎಂಬುದು ಗಮನಿಸಬೇಕಾದ ಸುದ್ದಿ.
ಸರಿ, ಈ ಭಾರತೀಯ ಅನ್ವೇಷಕರು ಎಂದರೆ ಯಾರು? ಡಿ ಆರ್ ಡಿ ಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಇತ್ತೀಚಿನ ವರ್ಷಗಳಲ್ಲಿ ಐಐಟಿ, ಐಐಎಸ್ಸಿ ಹಾಗೂ ಕೆಲವು ವಿಶ್ವವಿದ್ಯಾಲಯಗಳ ಜತೆಗೂಡಿ ಸುಮಾರು 15 ಉತ್ಕೃಷ್ಟತೆಯ ಕೇಂದ್ರಗಳನ್ನು (Centres of Excellence) ರೂಪಿಸಿದೆ. ಅವುಗಳಲ್ಲಿ ಒಂದಾಗಿರುವ ಐಐಟಿ ದೆಹಲಿ ಕೇಂದ್ರವು ಕ್ವಾಂಟಂ ಸಂವಹನದ ಮಾದರಿಯೊಂದನ್ನು ಅತಿ ಸೀಮಿತ ಪರಿಧಿಯಲ್ಲಿ ಯಶಸ್ವಿಯಾಗಿ ನಡೆಸಿ ಸುದ್ದಿಯಾಗಿದೆ.
ಅದಾಗಲೇ ಜಗತ್ತಿನಲ್ಲಿ ನಿಬ್ಬೆರಗಾಗಿಸುವಮಟ್ಟಿಗಿನ ಸಂವಹನ ಮಾದರಿಗಳಿವೆ. ಆದರೂ ಭಾರತವೂ ಸೇರಿದಂತೆ ಜಗತ್ತೇಕೆ ಕ್ವಾಂಟಂ ಸಂವಹನ ಹಾಗೂ ಕ್ವಾಂಟಂ ಗಣಕವ್ಯವಸ್ಥೆ ಅಭಿವೃದ್ಧಿಗೆ ಹೆಣಗಾಡುತ್ತಿದೆ? ಏಕೆಂದರೆ ಕ್ವಾಂಟಂ ಸಂವಹನ ಎಂಬುದು ಹ್ಯಾಕ್ ಮಾಡುವುದಕ್ಕೆ, ಕದ್ದಾಲಿಸುವುದಕ್ಕೆ, ತಿರುಚುವುದಕ್ಕೆ ಸಾಧ್ಯವಾಗದೇ ಇರುವಂಥದ್ದು. ಈಗಿನ ವ್ಯವಸ್ಥೆ ಎಷ್ಟೇ ಬೆರಗಿನದ್ದೆನಿಸಿದರೂ, ಅದೆಷ್ಟೇ ಸುರಕ್ಷತೆ ಹೊಂದಿದೆ ಎಂದಾದರೂ ತಂತ್ರಜ್ಞಾನ ಪರಿಣತರ ತಂಡವು ನಿರಂತರ ಪ್ರಯತ್ನದ ಮೂಲಕ ಅವನ್ನು ಬೇಧಿಸಬಹುದಾಗಿದೆ. ಕ್ವಾಂಟಂ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ. ಅಲ್ಲಿ ಏನನ್ನೇ ತಡವಿದರೂ ಮತ್ತೊಂದರ ಗಮನಕ್ಕೆ ಬಂದೇ ಬರುತ್ತದೆ ಎಂಬಂತಹ ವ್ಯವಸ್ಥೆ ಅದು. ಹೀಗಾಗಿ ಇಂಥದೊಂದು ಅಬೇಧ್ಯ ಸಂವಹನವನ್ನು ತನ್ನದಾಗಿಸಿಕೊಳ್ಳುವುದಕ್ಕೆ ಜಗತ್ತಿನ ದೇಶಗಳೆಲ್ಲವೂ ಪೈಪೋಟಿಯಲ್ಲಿ ಸಂಶೋಧನೆಗಿಳಿದಿವೆ. ಹಾಗೆಂದೇ ಭಾರತದ ರಕ್ಷಣಾ ವಲಯದಲ್ಲಿರುವ ಡಿಆರ್ಡಿಒ ಸಹ. ಕ್ವಾಂಟಂ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ಯಾರು ಮೊದಲಿಗೆ ಅಭಿವೃದ್ಧಿಪಡಿಸಬಲ್ಲರೋ ಅವರು ಈಗಿನ ಗಣಕಯಂತ್ರದ ವ್ಯವಸ್ಥೆಯಲ್ಲಿರುವ ಏನನ್ನೇ ಆದರೂ ಬೇಧಿಸಬಲ್ಲರು. ಅರ್ಥಾತ್, ರಕ್ಷಣಾ ತಂತ್ರಜ್ಞಾನ, ಫೈನಾನ್ಸ್ ಮತ್ತವುಗಳ ಸುತ್ತಲಿರುವ ಸೈಬರ್ ಸೆಕ್ಯುರಿಟಿ ವ್ಯವಸ್ಥೆ ಇವ್ಯಾವವೂ ಕ್ವಾಂಟಂ ಎದುರಿಗೆ ನಿಲ್ಲಲಾಗುವುದಿಲ್ಲ ಎಂಬುದು ತಜ್ಞರು ಮುಂದಿಡುತ್ತಿರುವ ಪರಿಕಲ್ಪನೆ.
ಹೀಗಾಗಿ, ಚೀನಾ, ಅಮೆರಿಕ ಸೇರಿದಂತೆ ಎಲ್ಲರೂ ಸದ್ದಿಲ್ಲದೇ ಕ್ವಾಂಟಂ ಕಂಪ್ಯೂಟಿಂಗ್ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತವು ಈ ಕ್ವಾಂಟಂ ಗಣಕವ್ಯವಸ್ಥೆಯ ಪರಿಸರವನ್ನು ಎದ್ದುನಿಲ್ಲಿಸುವುದಕ್ಕೆ 2023 ಮತ್ತು 2030ರ ಅವಧಿಗೆ 6000 ಕೋಟಿ ರುಪಾಯಿಗಳ ಬಜೆಟ್ ಇಟ್ಟುಕೊಂಡು, ‘ನ್ಯಾಷನಲ್ ಕ್ವಾಂಟಂ ಮಿಷನ್’ ಹೆಸರಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಕ್ವಾಂಟಂ ಕಂಪ್ಯೂಟಿಂಗ್ ಪರಿಕಲ್ಪನೆಗೂ ಮುನ್ನ, ಈಗ ಸಾಧಿಸಲು ಹೊರಟಿರುವ ಕ್ವಾಂಟಂ ಸಂವಹನವನ್ನೇ ತೆಗೆದುಕೊಳ್ಳೋಣ. ಇದರರ್ಥ ಈಗಿರುವ ಫೋನ್, ಲ್ಯಾಪ್ಟಾಪ್ ಇನ್ಯಾವುದೋ ಸ್ಮಾರ್ಟ್ ರೀತಿಯಲ್ಲಿ ಉನ್ನತಿ ಹೊಂದುತ್ತವೆ ಎಂಬ ಕಲ್ಪನೆಗೆ ಅವಕಾಶವಿಲ್ಲ. ಕ್ವಾಂಟಂ ಸಂವಹನವೇ ಈಗಿರುವ ರೀತಿನೀತಿಗಳಿಗಿಂತ ತುಂಬ ಭಿನ್ನವಾದದ್ದು. ಮೂಲತಃ ಕ್ವಾಂಟಂ ಸಂವಹನ ಎಂಬುದು ಈಗಿರುವ ‘ಸಂದೇಶ ರವಾನೆ’ ಅಲ್ಲವೇ ಅಲ್ಲ.
ನಿಮ್ಮ ಬಳಿ ಎರಡು ಮ್ಯಾಜಿಕ್ ದಾಳಗಳಿವೆ ಎಂದುಕೊಳ್ಳಿ. ಅದರಲ್ಲೊಂದನ್ನು ನೀವು ಬೆಂಗಳೂರಿನಲ್ಲಿ ಉರುಳಿಸಿದರೆ ಅದು ಎಷ್ಟು ಸಂಖ್ಯೆಯನ್ನು ತೋರುತ್ತದೋ, ಇನ್ನೊಂದು ದಾಳವು ಅಲ್ಲೆಲ್ಲೋ ನ್ಯೂಯಾರ್ಕಿನಲ್ಲಿ ಅದೇ ಸಮಯಕ್ಕೆ ಉರುಳಿಕೊಂಡು ಅದೇ ಸಂಖ್ಯೆಯನ್ನು ತೋರಿಸುತ್ತದೆ. ಕ್ವಾಂಟಂ ಎಂಟ್ಯಾಗಲ್ಮೆಂಟ್ ಎಂಬ ಈ ಪರಿಕಲ್ಪನೆಯನ್ನು ಕನ್ನಡದಲ್ಲಿ ಸೂಕ್ಷ್ಮಬಂಧ ಎಂದು ಕರೆದುಕೊಳ್ಳಬಹುದೇನೋ. ಹೀಗೆ ಎರಡು ಸಂಗತಿಗಳನ್ನು ಪ್ರಾರಂಭದಲ್ಲೇ ಸೂಕ್ಷ್ಮಬಂಧಕ್ಕೊಳಪಡಿಸಿ ನಂತರ ಎಷ್ಟೇ ಅಂತರಕ್ಕೆ ಸಾಗಿದರೂ ಏಕರೂಪ ವರ್ತನೆ ತೋರಿಸುವ ಮೂಲಕ ಸಾಧಿಸುವ ಸಂವಹನವೇ ಕ್ವಾಂಟಂ ಕಮ್ಯುನಿಕೇಶನ್.
ಇದೇಕೋ ಈ ಅಂಕಣಕಾರ ಯಾವುದೋ ವಾಟ್ಸಾಪ್ ಬರಹವನ್ನಿಟ್ಟುಕೊಂಡು ವಿಜ್ಞಾನ ಎಂದು ಹೇಳಹೊರಟಿದ್ದಾನೆ ಎಂದೆಲ್ಲ ಅನುಮಾನಿಸಬೇಡಿ. ಕ್ವಾಂಟಂ ಸಿದ್ಧಾಂತಗಳಿರುವುದೇ ಹಾಗೆ. ಪ್ರಾರಂಭದಲ್ಲಿ ನಮ್ಮ ಜಗತ್ತು ಚಿಕ್ಕದಿತ್ತು. ಚಕ್ಕಡಿ ಗಾಡಿ, ಬಿಲ್ಲಿನಿಂದ ನುಗ್ಗುವ ಬಾಣ, ನಭಕ್ಕೆ ಚಿಮ್ಮುವ ವಿಮಾನ, ಚಲಿಸುವ ಗ್ರಹಗಳು ಇಂಥ ಸಂಗತಿಗಳೆಲ್ಲದರ ತರ್ಕಬದ್ಧ ಕಾರ್ಯಕಾರಣ ಸಂಬಂಧಗಳನ್ನು ನ್ಯೂಟನ್ನನ ಚಲನೆಯ ನಿಯಮಗಳು ವಿವರಿಸಿದ್ದವು. ಆದರೆ, ಯಾವಾಗ ತಾರಾಮಂಡಲ, ಕಪ್ಪುಕುಳಿಗಳು ಇಂಥವೆಲ್ಲ ವಿಸ್ಮಯಕ್ಕೆ ತೆರೆದುಕೊಂಡವೋ ಆಗವನ್ನು ವಿವರಿಸುವುದಕ್ಕೆ ನ್ಯೂಟನ್ನನ ನಿಯಮಗಳು ಸಾಕಾಗಲಿಲ್ಲ. ಆಗ ಬಂದ ಪ್ರಚಂಡ ಬುದ್ಧಿವಂತ ಆಲ್ಬರ್ಟ್ ಐನಸ್ಟೀನ್ ಸಾಪೇಕ್ಷತಾ ಸಿದ್ಧಾಂತದ ಮೂಲಕ ವಿಶ್ವವನ್ನು ವಿವರಿಸಿದರು.
ಆದರೆ…ಈ ಬಸ್ಸು-ವಿಮಾನ, ಆಕಾಶಕಾಯಗಳ ಯಾನ ಇವೆಲ್ಲವಕ್ಕೆ ನ್ಯೂಟನ್ -ಐನಸ್ಟೀನರ ತರ್ಕಗಳು ತಾಳೆಯಾದವಷ್ಟೆ. ಪರಮಾಣುಗಳ ಹಂತಕ್ಕೆ ಇಳಿದು ಅವುಗಳ ವರ್ತನೆಯನ್ನು ವಿವರಿಸುವುದಕ್ಕೆ ಹೋದಾಗ ಇವರಿಬ್ಬರ ಸಿದ್ಧಾಂತಗಳೂ ಸಾಕಾಗಲಿಲ್ಲ. ಅಲ್ಲಿಂದಲೇ ಕ್ವಾಂಟಂ ಸಿದ್ಧಾಂತ ರೂಪುಗೊಳ್ಳುತ್ತ, ಈಗ ಆ ಸಿದ್ಧಾಂತಗಳ ಆಧಾರದಲ್ಲಿ ಚಿಕ್ಕಪುಟ್ಟ ಪ್ರಯೋಗಗಳನ್ನು ಮಾಡುವಷ್ಟರಮಟ್ಟಿಗೆ ಪ್ರಗತಿಯಾಗಿದೆ.
ಸರಳವಾಗಿ ದಕ್ಕುವಷ್ಟರಮಟ್ಟಿಗೆ ಕ್ವಾಂಟಂ ಅನ್ನು ಅರ್ಥಮಾಡಿಕೊಳ್ಳುವುದಾದರೆ ಹೇಗೆ? ನೀವೊಂದು ನಾಣ್ಯವನ್ನು ಮೇಲೆ ಚಿಮ್ಮಿದರೆ ಅದು ಹೆಡ್ ಇಲ್ಲವೇ ಟೇಲ್ ಎಂಬ ಸಾಧ್ಯತೆಗಳಲ್ಲಿ ಬೀಳಬೇಕಲ್ಲವೇ? ಇವತ್ತಿನ ಗಣಕ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವುದು 0 ಮತ್ತು 1ರ ಈ ಬೈನರಿ ರೂಪುರೇಷೆಯ ಆಧಾರದಲ್ಲೇ. ಕ್ವಾಂಟಂ ಹೇಳುವುದೇನೆಂದರೆ ಕಣವು ಏಕಕಾಲದಲ್ಲಿ ಬೇರೆ ಬೇರೆ ಅವಸ್ಥೆಗಳಲ್ಲಿರುತ್ತದೆ ಎಂಬುದನ್ನು. ಅಂದರೆ ನಾಣ್ಯವು ಏಕಕಾಲದಲ್ಲಿ ಹೆಡ್ಸ್ ಮತ್ತು ಟೇಲ್ಸ್ ಎರಡೂ ಅವಸ್ಥೆಯನ್ನು ಪ್ರಕಟೀಕರಿಸಬಲ್ಲದು. ಇದನ್ನಾಧರಿಸಿಯೇ ಎರಡು ಸಂಗತಿಗಳ ನಡುವೆ ಸೂಕ್ಷ್ಮಬಂಧ ನೆಲೆಗೊಳಿಸಿ ಸಂವಹನ ನಡೆಸುವ ಅನ್ವೇಷಣಾ ಪ್ರಯತ್ನವು ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆ ಪ್ರಗತಿಯಲ್ಲಿದೆ.
ಕ್ವಾಂಟಂ ಗಣಕ ವ್ಯವಸ್ಥೆ ಸಾಧ್ಯವಾಗಿದ್ದೇ ಆದರೆ ಅದು ಯಾರೂ ನಡುವೆ ನುಸುಳಲಾಗದ, ತಿರುಚಲಾಗದ ಸಂವಹನ ವ್ಯವಸ್ಥೆಯೊಂದನ್ನು ರೂಪಿಸುತ್ತದೆ ಎಂಬುದು ಒಂದಂಶ. ಅದರ ಬೆನ್ನಲ್ಲೇ ಹಲವು ಕ್ರಾಂತಿಗಳು ತೆರೆದುಕೊಳ್ಳುತ್ತವೆ. ಉದಾಹರಣೆಗೆ, ಜೀವಕಣಗಳ ಹಲವು ಸಮೀಕರಣಗಳನ್ನು ಕ್ವಾಂಟಂ ಲೆಕ್ಕವು ಕ್ವಚಿತ್ತಾಗಿ ವಿವರಿಸಿ ಪರಿಣಾಮಕಾರಿ ಔಷಧಗಳನ್ನು ಸೃಷ್ಟಿಸಬಲ್ಲದು. ಹವಾಮಾನ, ಆಹಾರ ಬೆಳೆ ಎಲ್ಲವನ್ನೂ ಅತಿ ಕರಾರುವಾಕ್ಕಾಗಿ ಲೆಕ್ಕಕ್ಕೆ ಸಿಕ್ಕಿಸಿ ಪರಿಣಾಮಕಾರಿ ಯೋಜನೆಗೆ ಕಾರಣವಾಗಬಲ್ಲದು. ಇದೇ ಮಾದರಿಯಲ್ಲಿ ಆಡಳಿತದಿಂದ ಶಿಕ್ಷಣದವರೆಗೆ ಇಲ್ಲಿಯವರೆಗೆ ಇದ್ದಿರದ ವ್ಯವಸ್ಥೆಯನ್ನೇ ಕ್ವಾಂಟಂ ಕಂಪ್ಯೂಟಿಂಗ್ ರೂಪಿಸಬಲ್ಲದು.
ಹಾಗೆಂದು ಇದು ಹತ್ತೆಂಟು ವರ್ಷಗಳಲ್ಲಿ ಆಗುತ್ತದೆ ಎಂದೇನಿಲ್ಲ. ಆದರೆ, ಸಾಧ್ಯತೆಯೊಂದರ ಪ್ರಯಾಣ ಶುರುವಾಗಿದೆ ಹಾಗೂ ಅದರ ಹುರುಪು ಭಾರತದಲ್ಲೂ ಮಿನುಗಿದೆ ಎಂಬುದು ಸದ್ಯಕ್ಕೆ ನಾವು ಕುತೂಹಲ ಮತ್ತು ಹೆಮ್ಮೆಗಳನ್ನಿರಿಸಿಕೊಳ್ಳಬಹುದಾದ ಅಂಶ.
- ಚೈತನ್ಯ ಹೆಗಡೆ
cchegde@gmail.com
Advertisement