
ನಮ್ಮ ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು 79 ನೇ ಸ್ವಂತಂತ್ರ್ಯ ದಿನಾಚರಣೆಯ ದಿನ ಭಾಷಣ ಮಾಡುತ್ತಾ 2017 ರ ನಂತರ ಜಿಎಸ್ಟಿ ಮರು ಪರಿಶೀಲನೆ ಮಾಡಿಲ್ಲ. ಇದೀಗ ಅದಕ್ಕೆ ಸೂಕ್ತ ಸಮಯ ಬಂದಿದೆ. ಜಿಎಸ್ಟಿಯನ್ನು ಸರಳ ಮಾಡುವುದರ ಜೊತೆಗೆ ತೆರಿಗೆ ಬೆಲೆಯನ್ನು ಸಹ ಕಡಿಮೆ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ ಮುಂದುವರೆದು ಇದು ಈ ದೀಪಾವಳಿಯ ವೇಳೆಗೆ ಜಾರಿಗೆ ಬರಲಿದ್ದು ಅದನ್ನು ನೀವು ಹಬ್ಬದ ಉಡುಗೊರೆ ಎಂದು ಪರಿಗಣಿಸಬಹುದು ಎಂದಿದ್ದರು.
ಸದ್ಯದ ಜಿಎಸ್ಟಿ ತೆರಿಗೆ ರಚನೆ ಹೇಗಿದೆ ಮತ್ತು ಅದನ್ನು ಹೇಗೆ ಬದಲಿಸಲು ಬಯಸಿದ್ದಾರೆ ಮತ್ತು ಇದರಿಂದ ಜನ ಸಾಮಾನ್ಯನಿಗೆ ಏನು ಉಪಯೋಗವಾಗಲಿದೆ. ಇದು ಸಂಸ್ಥೆಗಳ ಮೇಲೆ ಮತ್ತು ಷೇರು ಮಾರುಕಟ್ಟೆಯ ಮೇಲೆ ಏನು ಪರಿಣಾಮ ಬೀರಬಲ್ಲದು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.
ಇಂದಿಗೆ ಜಿಎಸ್ಟಿ ತೆರಿಗೆಯನ್ನು ಹಲವು ಸ್ಥರದಲ್ಲಿ ವಿಧಿಸಲಾಗುತ್ತಿದೆ. ಅವುಗಳಲ್ಲಿ ಮುಖ್ಯವಾಗಿ 5,12,18 ಮತ್ತು 28 ಪ್ರತಿಶತವಾಗಿವೆ. ಭಾರತ ಸರಕಾರ ಇದನ್ನು ಅತ್ಯಂತ ಸರಳವಾದ ಎರಡು ಸ್ಥರದಲ್ಲಿ ವಿಧಿಸಲು ಕರಡು ಪ್ರತಿಯನ್ನು ತಯಾರಿಸಿದೆ. ಅದರ ಪ್ರಕಾರ ಬಹಳಷ್ಟು ವಸ್ತುಗಳು 5 ಪ್ರತಿಶತ ಮತ್ತು 18 ಪ್ರತಿಶತದಲ್ಲಿ ಬರಲಿವೆ. ಅತ್ಯಂತ ಐಷಾರಾಮಿ ವಸ್ತುಗಳ ಮೇಲೆ 40 ಪ್ರತಿಶತ ತೆರಿಗೆಯನ್ನು ವಿಧಿಸುವ ಯೋಜನೆಯನ್ನು ಸಹ ಹಾಕಿಕೊಳ್ಳಲಾಗಿದೆ. ಹೀಗಾಗಿ ಇನ್ನು ಮುಂದೆ 5,18 ಮತ್ತು 40 ಪ್ರತಿಶತ ಜಿಎಸ್ಟಿ ತೆರಿಗೆ ಇರಲಿದೆ.
5 ಪ್ರತಿಶತ ತೆರಿಗೆ: ದಿನ ಬಳಕೆ ಮತ್ತು ಅವಶ್ಯಕ ಪದಾರ್ಥಗಳು ಈ ಸ್ಲಾಬ್ ಅಡಿಯಲ್ಲಿ ಬರುತ್ತಿದೆ.
18 ಪ್ರತಿಶತ ತೆರಿಗೆ: ನಿತ್ಯ ಬಳಕೆ ಮತ್ತು ಅತ್ಯಂತ ಅವಶ್ಯಕ ಎನ್ನಿಸಿಕೊಳ್ಳುವ ವಸ್ತುಗಳನ್ನು ಬಿಟ್ಟು ಬೇರೆಲ್ಲವೂ ಇದರ ಅಡಿಯಲ್ಲಿ ಬರುತ್ತವೆ.
40 ಪ್ರತಿಶತ ತೆರಿಗೆ: ನಿಷಿದ್ಧ ಅಥವಾ ಅತ್ಯಂತ ಐಷಾರಾಮಿ ವಸ್ತುಗಳ ಮೇಲೆ ಇಷ್ಟು ದೊಡ್ಡ ಮೊತ್ತದ ತೆರಿಗೆಯನ್ನು ವಿಧಿಸಲು ತೀರ್ಮಾನಿಸಲಾಗಿದೆ.
ಇದರಲ್ಲಿ ಅತ್ಯಂತ ಪ್ರಮುಖವಾಗಿ ಗಮನಿಸಬೇಕಾದ ಅಂಶ ಮತ್ತು ಅದು ಬಹುತೇಕ ನಾಗರಿಕರಿಗೆ ಖುಷಿ ಕೊಡುವ ಮತ್ತು ಜೇಬಿನ ಭಾರವನ್ನು ತಗ್ಗಿಸುವ ಸುದ್ದಿಯೆಂದರೆ ಇನ್ಸುರೆನ್ಸ್ ಪ್ರೀಮಿಯಂ ಕೂಡ ಅವಶ್ಯಕ ಪಟ್ಟಿಯಲ್ಲಿ ಗುರುತಿಸಿಕೊಳ್ಳುವ ಕಾರಣ ಅದು 5 ಪ್ರತಿಶತಕ್ಕೆ ಇಳಿಯಲಿದೆ. ಇವತ್ತಿಗೆ ನಾವೆಲ್ಲರೂ ಇದಕ್ಕೆ 18 ಪ್ರತಿಶತ ತೆರಿಗೆಯನ್ನು ನೀಡುತ್ತಿದ್ದೇವೆ. ಮೆಡಿಕಲ್ ಎಕ್ಯುಪ್ಮೆಂಟ್ಸ್ ಕೂಡ 5 ಪ್ರತಿಶತ ತೆರಿಗೆಯ ಅಡಿಯಲ್ಲಿ ತರಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇನ್ಸೂರೆನ್ಸ್ ಪ್ರೀಮಿಯಂ ಅದರಲ್ಲೂ ಹೆಲ್ಥ್ ಇನ್ಸೂರೆನ್ಸ್ ಪ್ರೀಮಿಯಂನ್ನು ತೆರಿಗೆ ಮುಕ್ತ ಮಾಡಲಾಗುತ್ತದೆ ಎನ್ನುವ ಅಂಶ ಜನ ಸಾಮಾನ್ಯರಿಗೆ ನಿಜಕ್ಕೂ ಹಬ್ಬದ ಉಡುಗೊರೆಯಾಗಲಿದೆ. ಇದು ಐದು ಪ್ರತಿಶತವಾದರೂ ಕೂಡ ಬಹಳ ಉಳಿತಾಯವಾಗಲಿದೆ. ಇಂದಿಗೆ ನಾವು ಹೆಲ್ತ್ ಇನ್ಸೂರೆನ್ಸ್ ನಂತಹ ಅತ್ಯಂತ ಅವಶ್ಯಕ ಪಾಲಿಸಿ ಮೇಲೆ ಕೂಡ ಪ್ರತಿ 100 ರುಪಾಯಿಗೆ 18 ರೂಪಾಯಿ ತೆರಿಗೆಯನ್ನು ನೀಡುತ್ತಿದ್ದೆವು.
ಇದರ ಜೊತೆಗೆ 12 ಪ್ರತಿಶತ ತೆರಿಗೆ ಅಡಿಯಲ್ಲಿ ಬರುತ್ತಿದ್ದ ಬಹುತೇಕ ಎಲ್ಲಾ ವಸ್ತುಗಳು ಕೂಡ 5 ಪ್ರತಿಶತ ತೆರಿಗೆ ಅಡಿಯಲ್ಲಿ ಬರಲಿವೆ. ಹಾಗೆ 28 ಪ್ರತಿಶತ ತೆರಿಗೆಯ ಅಡಿಯಲ್ಲಿ ಬರುತ್ತಿದ್ದ ವಸ್ತುಗಳು 18 ಪ್ರತಿಶತ ತೆರಿಗೆ ಅಡಿಯಲ್ಲಿ ಬರಲಿವೆ. ಇದು ಗ್ರಾಹಕ ಮತ್ತು ಮಾರಾಟಗಾರರಿಗೆ ಬಹಳಷ್ಟು ಉತ್ತೇಜನವನ್ನು ನೀಡುತ್ತದೆ. ಇದು ಭಾರತದ ಎಕಾನಮಿ ಇನ್ನೊಂದು ಮಗ್ಗುಲು ಬದಲಾಯಿಸಲು ಸಹಾಯ ಮಾಡಲಿದೆ.
ಟಿವಿ, ಫ್ರಿಡ್ಜ್, 350ಸಿಸಿ ಗಿಂತ ಕಡಿಮೆ ಶಕ್ತಿಯ ಬೈಕುಗಳು, ಸಣ್ಣ ಕಾರುಗಳು ಮತ್ತು ಹೈಬ್ರಿಡ್ ಪ್ಯಾಸೆಂಜರ್ ಕಾರುಗಳು 28 ರಿಂದ 18ಕ್ಕೆ ವರ್ಗಾವಣೆಯಾಗಲಿವೆ. ಇದು ಆಟೋಮೊಬೈಲ್ ವಲಯದಲ್ಲಿ ಹೆಚ್ಚಿನ ವಹಿವಾಟಿಗೆ ಅನುಕೂಲ ಮಾಡಿಕೊಡಲಿದೆ.
ಒಟ್ಟಾರೆ ಇದು ಸಾಮಾನ್ಯ ಗ್ರಾಹಕನ ಜೇಬನ್ನು ಇನ್ನಷ್ಟು ಹಗುರ ಮಾಡುತ್ತದೆ. ಆತನ ಖರೀದಿ ಶಕ್ತಿ ಹೆಚ್ಚುತ್ತದೆ. ನಿಮಗೆಲ್ಲಾ ಗೊತ್ತಿರಲಿ ಭಾರತದ ಆರ್ಥಿಕತೆ 4.2 ಟ್ರಿಲಿಯನ್ ಇದು ಜಿಡಿಪಿ ಆಧಾರದಲ್ಲಿ ಹೇಳುತ್ತೇವೆ. ಖರೀದಿ ಶಕ್ತಿಯ ಆಧಾರದಲ್ಲಿ ನಮ್ಮದು ಸರಿಸುಮಾರು 17 ಟ್ರಿಲಿಯನ್ ಎಕಾನಮಿ ! ಈ ಕಾರಣದಿಂದ ಚೀನಾ ಮತ್ತು ಪಾಶ್ಚಾತ್ಯ ದೇಶಗಳು ಭಾರತವನ್ನು ಕಡೆಗಣಿಸಿ ಯಾವುದೇ ನಿರ್ಧಾರವನ್ನು ಕೂಡ ತೆಗೆದುಕೊಳ್ಳಲು ಸಾಧ್ಯವಿಲ್ಲ. ತೆರಿಗೆಯ ಕಾರಣ ಬೆಲೆ ಕಡಿಮೆಯಾದಾಗ ಸಹಜವಾಗೇ ಮಾರಾಟ ಹೆಚ್ಚಾಗುತ್ತದೆ.
ಹೌದು ಇದರಿಂದ ಭಾರತದ ಎಕಾನಮಿಗೆ ಹೊಸ ಶಕ್ತಿ ತುಂಬಿದಂತಾಗುತ್ತದೆ. ಗ್ರಾಹಕನಿಗೂ ಉಳಿತಾಯವಾಗುತ್ತದೆ. ಆದರೆ ಸರಕಾರದ ಆದಾಯಕ್ಕೆ ಕತ್ತರಿ ಬೀಳುವುದಿಲ್ಲವೇ? ಇದು ಅಭಿವೃದ್ಧಿ ಕಾರ್ಯಾಗಳ ಮೇಲೆ ಪರಿಣಾಮ ಬಿರುವುದಿಲ್ಲವೇ ಎನ್ನುವ ಪ್ರಶ್ನೆ ಕೂಡ ಜವಾಬ್ದಾರಿಯುತ ನಾಗರಿಕನ ಮನಸ್ಸಿನಲ್ಲಿ ಉದ್ಭವವಾಗಿರುತ್ತದೆ. ಇದರಲ್ಲಿ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ ಹೇಗೆ ಎನ್ನುವುದನ್ನು ಕೂಡ ಸ್ವಲ್ಪ ತಿಳಿದುಕೊಳ್ಳೋಣ.
ಇಂದಿನ ಪರಿಸ್ಥಿತಿಯಲ್ಲಿ ಸರಕಾರದ ಬೊಕ್ಕಸಕ್ಕೆ ಜಿಎಸ್ಟಿ ಮೂಲಕ ಬರುತ್ತಿರುವ ಆದಾಯದ 67 (ಆರವತ್ತೇಳು) ಪ್ರತಿಶತ 18% ಸ್ಲಾಬ್ ಮೂಲಕ ಬರುತ್ತಿದೆ. 11 ಪ್ರತಿಶತ 28% ಸ್ಲಾಬ್ ಮೂಲಕ ಬರುತ್ತಿದೆ. ಉಳಿದ ಮೂಲಗಳಿಂದ ಅಂದರೆ 5,12 ಮತ್ತು ಇತರ ಸ್ಪೆಷಲ್ ರೇಟ್ಗಳ ಮೂಲಕ ಬರುತ್ತದೆ. ಇಲ್ಲಿ ಅತ್ಯಂತ ಮುಖ್ಯವಾಗಿ ಗಮನಿಸಬೇಕಾಗಿರುವುದು 28 % ಸ್ಲಾಬ್ ತೆಗೆದು ಹಾಕುವುದರಿಂದ ನೇರವಾಗಿ 11 ಪ್ರತಿಶತ ಆದಾಯದಲ್ಲಿ 10 ಪ್ರತಿಶತ ಕಡಿಮೆಯಾಗುತ್ತದೆ. ಜೊತೆಗೆ 18 ಮತ್ತು 12 ರ ಸ್ಲಾಬ್ ನ ಕೆಲವು ಪದಾರ್ಥಗಳಲ್ಲಿ ಕೂಡ ಒಂದಷ್ಟು ಆದಾಯ ಕುಸಿತವಾಗುತ್ತದೆ. ಇದನ್ನು ಸರಿದೂಗಿಸಲು 40 ಪ್ರತಿಶತ ಸ್ಲಾಬ್ ಹಾಕಲಾಗಿದೆ. ಹೀಗಾಗಿ ಅಳೆದು ತೂಗಿ ನೋಡಿದರೆ ಸರಕಾರಕ್ಕೆ ಆದಾಯ ನಷ್ಟವೂ ಆಗುವುದಿಲ್ಲ, ಜೊತೆಗೆ ಎಕಾನಮಿಗೆ ಕೂಡ ಅವಶ್ಯಕವಾಗಿ ಬೇಕಾಗಿದ್ದ ಬೆಂಬಲ ಸಿಕ್ಕಂತಾಯ್ತು.
40 % ಸ್ಲಾಬ್ ಅಡಿಯಲ್ಲಿ, ಗುಟುಕ, ಪಾನ್ ಮಸಾಲಾ ಮತ್ತು ಎಲ್ಲಾ ರೀತಿಯ ತಂಬಾಕು ಪದಾರ್ಥವನ್ನು ಸೇರಿಸಲಾಗಿದೆ. ಹೀಗಾಗಿ ಈ ಸ್ಲಾಬ್ ಗೆ ನಿಷಿದ್ಧ ಪದಾರ್ಥಗಳು ಎಂದು ಹೆಸರಿಸಲಾಗಿದೆ. ಐಷಾರಾಮಿ ಕಾರುಗಳು, ಎಸ್ಯುವಿ ಗಳು ಮತ್ತು ಬೆಟ್ಟಿಂಗ್, ಆನ್ಲೈನ್ ಗೇಮಿಂಗ್ ಗಳನ್ನೂ ಕೂಡ ಇಲ್ಲಿ ಸೇರಿಸಲಾಗಿದೆ. ಹೀಗಾಗಿ ಆದಾಯದಲ್ಲಿ ಕುಸಿತವಾಗದಂತೆ ನೋಡಿಕೊಳ್ಳಲಾಗಿದೆ.
ಷೇರು ಮಾರುಕಟ್ಟೆ ಜಿಎಸ್ಟಿ ತೆರಿಗೆ ರಿಫಾರ್ಮ್ಸ್ ಸುದ್ದಿ ಕೇಳಿ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ. ಬಹಳಷ್ಟು ವಲಯಗಳ ಮೇಲೆ ಇದು ಪ್ರಭಾವ ಬೀರುವ ಕಾರಣ ಈ ರೀತಿಯ ಪಾಸಿಟಿವ್ ವಾತಾವರಣ ಷೇರು ಮಾರುಕಟ್ಟೆಯಲ್ಲಿ ಕಂಡು ಬಂದಿತು. ಬಹುತೇಕ ಎಲ್ಲಾ ವಲಯಗಳು ಕೂಡ ಸರಕಾರದ ಈ ನೀತಿಯನ್ನು ಸ್ವಾಗತಿಸಿವೆ. ಆಟೋಮೊಬೈಲ್ ವಲಯದಲ್ಲಿ ಮಾತ್ರ ಮಿಶ್ರ ಪ್ರತಿಕ್ರಿಯೆಯಿದೆ. ಇಲ್ಲೂ ಕೂಡ ಧನಾತ್ಮಾಕ ಅಂಶವೇ ಹೆಚ್ಚಾಗಿದೆ. ಕೇವಲ ಐಷಾರಾಮಿ ಕಾರುಗಳ ಮೇಲೆ ಮಾತ್ರ ಪ್ರತಿಶತ ತೆರಿಗೆಯನ್ನು ವಿಧಿಸಲಾಗಿದೆ. ಇಂತಹ ಐಷಾರಾಮಿ ಮತ್ತು ಅತಿ ಐಷಾರಾಮಿ ಕಾರುಗಳನ್ನು ಕೊಳ್ಳುವವರು ಹಣವಂತರು ಮತ್ತು ಸ್ಥಿತಿವಂತರು ಆಗಿರುವ ಕಾರಣ ಮತ್ತು ಅದು ಅವರಿಗೆ ಹೆಚ್ಚಿನ ಭಾದೆಯನ್ನು ಸಹ ಉಂಟು ಮಾಡದ ಕಾರಣ ಇದರ ಪರಿಣಾಮ ಬಹಳ ಕಡಿಮೆ ಎಂದು ಅಂದಾಜಿಸಲಾಗಿದೆ. ಹಾಗೆ ತಂಬಾಕು ಪದಾರ್ಥಗಳ ಮೇಲೆ ಎಷ್ಟೇ ತೆರಿಗೆ ಹಾಕಿದರೂ ಸಹ ಅವುಗಳ ಮೇಲಿನ ಬೇಡಿಕೆ ಕುಸಿತವಾಗುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.
ಕೊನೆಮಾತು: ಈ ತೆರಿಗೆ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ 12% ನಲ್ಲಿದ್ದವು 5 ಕ್ಕೂ ಮತ್ತು 28% ದಲ್ಲಿದ್ದವು 18 ಕ್ಕೂ ಬಂದಿವೆ. ಕೆಲವು 28 %ದಲಿದ್ದವು 40 ಪ್ರತಿಶತಕ್ಕೆ ಹೋಗಿವೆ. ಜನ ಸಾಮಾನ್ಯನಿಗೆ ತೆರಿಗೆ ಕಡಿಮೆಯಾಗುವಂತೆ ನೋಡಿಕೊಳ್ಳಲಾಗಿದೆ. ಇದು ಉಪಭೋಗವನ್ನು ಹೆಚ್ಚಿಸುತ್ತದೆ. ಸಮಾಜದಲ್ಲಿ ಹೆಚ್ಚಿನ ವಹಿವಾಟು ಆಗುತ್ತದೆ. ಜಿಡಿಪಿ ಹೆಚ್ಚುತ್ತದೆ. ಇವೆಲ್ಲವೂ ಸಾಮನ್ಯವಾಗಿ ಕಂಡುಬರುವ ಅಂಶಗಳು. ಮೇಲ್ನೋಟಕ್ಕೆ ದಕ್ಕುವ ಅಂಶಗಳು. ಇವು ನಿಜಕ್ಕೂ ಉಪಕಾರಿ. ಇವೆಲ್ಲವನ್ನೂ ಮೀರಿದ ಒಂದಂಶವಿದೆ. ಅದು ಜಿಎಸ್ಟಿ ನೀತಿಯನ್ನು ಬದಲಿಸುವುದು, ಸಂಶಯ, ತೆರಿಗೆ ಕಳ್ಳತನ, ವಾಗ್ವಾದ ಕಡಿಮೆ ಮಾಡುವುದು ಮತ್ತು ಜಿಎಸ್ಟಿ ತೆರಿಗೆಯನ್ನು ಸಾಧ್ಯವಾದ್ದಷ್ಟು ಸರಳಗೊಳ್ಳಿಸುವುದು. ಇದರ ಮೂಲಕ ಹೆಚ್ಚು ಗ್ರಾಹಕ ಮತ್ತು ಉತ್ಪಾದಕ, ಮಾರಾಟಗಾರ ಪ್ರೇಮಿ ತೆರಿಗೆ ನೀತಿಯನ್ನು ತರುವುದು ತನ್ಮೂಲಕ ಇನ್ನಷ್ಟು ಹೆಚ್ಚಿನ ತೆರಿಗೆಯನ್ನು ಸಂಗ್ರಹಿಸುವ ಉದ್ದೇಶವನ್ನು ಕಾಣಬಹುದು. ಇವತ್ತಿಗಿರುವ ಕನ್ಫ್ಯೂಷನ್ ಮಾಯವಾಗುತ್ತದೆ. ಸ್ಥೂಲವಾಗಿ ಮೂರು ವರ್ಗಿಕರಣ ಇರುವುದರಿಂದ ಮತ್ತು ಯಾವ ಯಾವ ಸೇವೆ ಮತ್ತು ಸರುಕು ಅದರಡಿಯಲ್ಲಿ ಬರುತ್ತದೆ ಎನ್ನುವ ನಿಖರ ಮಾಹಿತಿ ಇರುವುದರಿಂದ ಈ ಹಿಂದೆ ಇದ್ದ ಒಂದಷ್ಟು ಸಂಶಯಗಳು ನಿವಾರಣೆ ಆಗಲಿದೆ. ಜಿಎಸ್ಟಿ ಕೌನ್ಸಿಲ್ ಮತ್ತು ಗ್ರಾಹಕ, ಮಾರಾಟಗಾರರ ನಡುವೆ ಇರುವ ವಿವಾದಗಳು ಕೂಡ ಇಲ್ಲವಾಗಲಿವೆ. ಈ ನಿಟ್ಟಿನಲ್ಲಿ ನೋಡಿದಾಗ ಇದನ್ನು ನೆಕ್ಸ್ಟ್ ಜನರೇಷನ್ ಸುಧಾರಣೆ ಎನ್ನಲು ಅಡ್ಡಿಯಿಲ್ಲ.
Advertisement