
ಎರಡು ಸಾವಿರದ ಹದಿನೇಳನೆ ಇಸವಿಯಲ್ಲಿ ಜಿಎಸ್ಟಿ ಯನ್ನು ಭಾರತದಲ್ಲಿ ಜಾರಿಗೆ ತರಲಾಯಿತು. ಅಂದಿನ ದಿನದಲ್ಲಿ ಕೂಡ ಇದರ ಬಗ್ಗೆ ವರ್ತಕರಿಗೆ, ಗ್ರಾಹಕರಿಗೆ ಸಣ್ಣದೊಂದು ಕಾರ್ಯಾಗಾರವನ್ನು ಸಹ ಏರ್ಪಡಿಸದೆ ಒಮ್ಮೆಲೆ , ಆತುರತರವಾಗಿ ಇದನ್ನು ಜಾರಿಗೆ ತರಲಾಯಿತು. ಅಂದಿನ ದಿನಗಳಲ್ಲಿ ಸಣ್ಣ ಉದ್ದಿಮೆದಾರರಲ್ಲಿ ಮನೆ ಮಾಡಿದ್ದ ಆತಂಕ ಎಷ್ಟರಮಟ್ಟದ್ದು ಎನ್ನುವುದನ್ನು ಕಂಡಿದ್ದೇನೆ. ಜಿಎಸ್ಟಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಪೂರ್ಣವಾಗಿ ತಿಳಿಯಬೇಕಾದರೆ ನೀವು 348 ಪುಟಗಳ ಪುಸ್ತಕವನ್ನು ಓದಬೇಕು. ಅದನ್ನು ಅರ್ಥೈಸಿಕೊಳ್ಳಬೇಕು. ಅದರಲ್ಲೂ ನಾವು ಅರ್ಥೈಸಿಕೊಂಡ ರೀತಿ ಬೇರೆಯದಿರಬಹುದು. ಕಾನೂನು ಹೇಳುವ ಅರ್ಥ ಬೇರೆಯದಿರಬಹುದು. ಇಂತಹ ಸಂದರ್ಧಭದಲ್ಲಿ ಕೋರ್ಟಿನಲ್ಲಿ ಕೇಸುಗಳು ದರ್ಜಾಗುತ್ತದೆ. ಅಲ್ಲಿಂದ ಬರುವ ರೂಲಿಂಗನ್ನು ಕೇಸ್ ಸ್ಟಡೀಸ್ ಎನ್ನಲಾಗುತ್ತದೆ. ಅವುಗಳ ಕಥೆಯನ್ನು ಓದುತ್ತ ಕುಳಿತರೆ ಅದು ಇನ್ನೊಂದು ಬೃಹತ್ ಗ್ರಂಥವಾಗುತ್ತದೆ. ಒಟ್ಟಾರೆ ಯಾವ ನಿಯಮವನ್ನು ಯಾವಾಗ ಮತ್ತು ಹೇಗೆ ಬಳಸಿಕೊಳ್ಳಬಹುದು ಎನ್ನುವುದು ಕಾನೂನು ಮಾಡಿದವರಿಗೆ ತಿಳಿದಿರುತ್ತದೆ. ಜಿಎಸ್ಟಿ ಸಂಸ್ಥೆ ಇದರ ಬಗ್ಗೆ ಗ್ರಾಹಕರಿಗೆ ಮತ್ತು ಸಣ್ಣ ಉದ್ದಿಮೆದಾರರಿಗೆ ಮಾಹಿತಿಯನ್ನು ನೀಡುವ, ಅವರ ಅರಿವಿನ ಮಟ್ಟವನ್ನು ಹೆಚ್ಚಸುವ ಕೆಲಸವನ್ನು ಮಾಡಬೇಕು.
ನಿಮಗೆಲ್ಲಾ ನೆನಪಿರಬಹುದು 2019/2020 ರಲ್ಲಿ ಸಣ್ಣ ಉದ್ದಿಮೆದಾರರಿಗೆ, ಯಾವೆಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ಜಿಎಸ್ಟಿ ಸಂಖ್ಯೆಯನ್ನು ನಮೂದಿಸಿಲ್ಲ ಅವರಿಗೆ ನೋಟಿಸ್ ಜೊತೆಗೆ ದಂಡದ ಬಿಲ್ ನೀಡ ತೊಡಗಿದ್ದರು. ಮೊದಲೇ ಹೇಳಿದಂತೆ ಜಿಎಸ್ಟಿ 350 ಪುಟದ ಪುಸ್ತಕದ ಯಾವುದೋ ಒಂದು ಪುಟದಲ್ಲಿನ ಒಂದು ಸಾಲಿನಲ್ಲಿ ಜಿಎಸ್ಟಿ ಸಂಖ್ಯೆ ಉದ್ಯಮ ನಡೆಸುವ ಜಾಗದಲ್ಲಿ ದೊಡ್ಡದಾಗಿ ಹಾಕಬೇಕು ಎನ್ನುವುದನ್ನು ಬರೆದಿದ್ದಾರೆ. ಸಾಮಾನ್ಯ ವರ್ತಕ ಅದನ್ನು ಹೇಗೆ ತಾನೇ ತಿಳಿದುಕೊಳ್ಳಲು ಸಾಧ್ಯ ? ಆತನ ಹಣಕಾಸು ವಹಿವಾಟು ನೋಡಿಕೊಳ್ಳುವ ಜನರೇ ಅದನ್ನು ಓದಿಲ್ಲ ಎಂದ ಮೇಲೆ ಸಾಮಾನ್ಯ ವರ್ತಕನ ಪಾಡೇನು? ಆತನಿಗೆ ತಿಳುವಳಿಕೆ ನೀಡುವುದು ಬಿಟ್ಟು ಕಾನೂನಿನ ಪುಸ್ತಕದಲ್ಲಿರುವ ಯಾವುದೋ ಒಂದು ಸಾಲನ್ನು ಹಿಡಿದುಕೊಂಡು ಅವರನ್ನು ಇದನ್ನು ಫಾಲೋ ಮಾಡಿಲ್ಲ ದಂಡ ಕಟ್ಟು ಎನ್ನುವುದು ಎಷ್ಟು ಸರಿ ? ಅವತ್ತಿನ ದಿನಗಳಲ್ಲಿ ಹೀಗೆ ದಂಡದ ನೋಟಿಸ್ ಪಡೆದವರು ಅಷ್ಟು ದಂಡ ನೀಡಲಾಗದೆ ಮತ್ತದೇ ಹೊಂದಾವಣಿಕೆ ಇಳಿದದ್ದು ಗೊತ್ತಿರುವ ವಿಚಾರ. ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ಎನ್ನುವುದು ಯಾವ ಮಟ್ಟದಲ್ಲಿದೆ ಎನ್ನುವುದಕ್ಕೆ ಇಂತಹ ಘಟನೆಗಳು ಸಾಕ್ಷಿ.
ಇಂದಿನ ದಿನಗಳಲ್ಲಿ ಮತ್ತೆ ಸಣ್ಣ ಉದ್ದಿಮೆದಾರ ಮೇಲೆ ಚಾಟಿ ಏಟು ಬೀಸಿದ್ದಾರೆ. ಅರೆರೇ ಚಾಟಿ ಏಟು ಹೇಗಾಗುತ್ತದೆ ? ಬ್ಯಾಂಕಿನ ಮೂಲಕ ಇಷ್ಟು ವಹಿವಾಟು ಆಗಿದೆ ಆದರೆ ಅವರು ಕಡಿಮೆ ವಹಿವಾಟಿಗೆ ತೆರಿಗೆಯನ್ನು ಕಟ್ಟಿದ್ದಾರೆ ಹೀಗಾಗಿ ನೋಟೀಸು ನೀಡಿದ್ದಾರೆ ಇದರಲ್ಲಿ ತಪ್ಪೆಲ್ಲಿದೆ? ಎನ್ನುವ ಮಾತುಗಳು ನೂರಕ್ಕೆ ನೂರು ಸತ್ಯ. ಈ ಸತ್ಯವನ್ನು ಅವರು ದಾರಿ ತಪ್ಪುತ್ತಿದ್ದ ಮೊದಲ ದಿನಗಳಲ್ಲಿ ಏಕೆ ಹೇಳಲಿಲ್ಲ. ಮೊದಲ ವರ್ಷದಲ್ಲೇ ಸ್ವಾಮಿ ಹೀಗಾಗಿದೆ ಎಚ್ಚರ, ಇಷ್ಟು ದಂಡ ಕಟ್ಟಿ ಎಂದಿದ್ದರೆ ಅವರು ಅಂದಿನ ದಿನಕ್ಕೆ ಅಷ್ಟು ಮೊತ್ತ ಕಟ್ಟಿ ಎಚ್ಚೆತ್ತು ಕೊಳ್ಳುತ್ತಿದ್ದರು. ಜಿಎಸ್ಟಿ ಅಧಿಕಾರಿಗಳು ದೀರ್ಘ ನಿದ್ದೆಯಿಂದ ಈಗ ಎಚ್ಚೆತ್ತು ನೋಟೀಸ್ ಮೇಲೆ ನೋಟೀಸ್ ನೀಡಲು ಪ್ರಾರಂಭಿಸಿದರೆ, ಅದೂ 25 ಲಕ್ಷ, 30 ಲಕ್ಷದ ನೋಟೀಸ್ ನೀಡಿದರೆ ಅವರು ಅದನ್ನು ಹೇಗೆ ತಾನೇ ಕಟ್ಟಿಯಾರು? ಬಹಳಷ್ಟು ವರ್ಷ ನಿದ್ದೆ ಮಾಡಿದ್ದು ನಿಮ್ಮ ತಪ್ಪು, ಇದೀಗ ಆ ತಪ್ಪಿಗೂ ತೆರಿಗೆಯ ಮೇಲೆ ಕೂಡ ಬಡ್ಡಿ ಹಾಕುವುದು ಏಕೆ? ಆಯಾ ವರ್ಷವೇ ತಪ್ಪನ್ನು ಹೇಳಿದ್ದರೆ ಅವರು ತಿದ್ದಿ ಕೊಳ್ಳುತ್ತಿದ್ದರಲ್ಲವೇ? ಡಿಪಾರ್ಟ್ಮೆಂಟ್ ಜನರಿಗೆ ಈಗ ಜ್ಞಾನೋದಯವಾಗಿದೆ, ಸಣ್ಣ ಉದ್ದಿಮೆದಾರರು ಅವರದಲ್ಲದೆ ತಪ್ಪಿಗೆ ಈಗ ದಂಡದ ಜೊತೆಗೆ ಬಡ್ಡಿಯನ್ನು ಕೂಡ ಕಟ್ಟಬೇಕಾಗಿದೆ.
ಈ ರೀತಿಯ ಘಟನೆ ಘಟಿಸಬಹುದು ಎನ್ನುವುದನ್ನು 2017 ರಲ್ಲಿ ಮನಗಂಡು ಅದರ ಬಗ್ಗೆ ಎಚ್ಚರಿಸಿ ಒಂದು ಲೇಖನವನ್ನು ಬರೆದಿದ್ದೆ. ಜಿಎಸ್ಟಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನ ವಿವರವಾಗಿ ತಿಳಿಯಬೇಕಾದ ಅವಶ್ಯಕತೆ ಎಲ್ಲಾ ನೊಂದಾಯಿತ ವರ್ತಕರಿಗೂ ಹಾಗು ಸಂಸ್ಥೆಗಳಿಗೂ ಹೆಚ್ಚಾಗಿದೆ. ಅಲ್ಲದೆ ಜಿಎಸ್ಟಿಯ ಮೂಲ ಉದ್ದೇಶ ನೊಂದಾಯಿತವಲ್ಲದ ಜನರನ್ನ ನೊಂದಾವಣಿ ಮಾಡಿಸಿಕೊಳ್ಳಲು ಪ್ರೇರೇಪಿಸುವುದು ಮತ್ತು ಸಾಧ್ಯವಾದಷ್ಟು ವ್ಯಾಪಾರದಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಆಗಿದೆ. ಈ ನಿಟ್ಟಿನಲ್ಲಿ ಜಿಎಸ್ಟಿ ಬಗ್ಗೆ ಹೆಚ್ಚು ಮಾಹಿತಿ ತಿಳಿದು ಕೊಂಡಷ್ಟು ಉತ್ತಮ. ಇಲ್ಲವಾದರೆ ಮುಂದಿನದಿನಗಳಲ್ಲಿ ನೀವು ಕಟ್ಟಿದ ತೆರಿಗೆ ಮೊತ್ತ ಸರಿಯಾಗಿಲ್ಲ ಎನ್ನುವ ನೋಟೀಸ್ ಬರಬಹದು, ಅಂತಹ ನೋಟಿಸ್ ನಿಮ್ಮ ಲಾಭಕ್ಕಾದರೆ ಸರಿ, ಇನ್ನಷ್ಟು ತೆರಿಗೆ ಹಣ ತುಂಬಬೇಕು ಎಂದಾದರೆ? ಹೀಗಾಗಿ ಇನ್ಪುಟ್ ಅತಸ್ ಕ್ರೆಡಿಟ್ ಮತ್ತು ರಿವರ್ಸ್ ಟ್ಯಾಕ್ಸ್ ಮೆಕ್ಯಾನಿಸಂ ಬಗ್ಗೆ ಇರಲಿ ಹೆಚ್ಚು ಗಮನ. ಎನ್ನುವ ಮಾತುಗಳನ್ನು ಅಂದಿನ ದಿನದಲ್ಲಿ ಹೇಳಿದ್ದೆ. ಅಂದಿನ ಮಾತುಗಳು ಈಗ 2025ರಲ್ಲಿ ನಿಜವಾಗುತ್ತಿದೆ. ಸರಕಾರ ಸದಾ ತನ್ನ ಬೊಕ್ಕಸಕ್ಕೆ ಎಷ್ಟು ಹಣವನ್ನು ತುಂಬಿಸಿಕೊಳ್ಳಬಹುದು ಎನ್ನುವುದರ ಚಿಂತೆಯಲ್ಲಿರುತ್ತದೆ. ಇಲ್ಲಿ ರಾಜಕೀಯ ಬೆರೆಸುವುದು ಬೇಡ. ಯಾವ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೂ ಎಲ್ಲರೂ ಮಾಡುವುದು ಇದನ್ನೇ, ಹೀಗಾಗಿ ಪೆಟ್ಟು ತಿನ್ನುವುದು ಮಾತ್ರ ಸಣ್ಣ ಉದ್ದಿಮೆದಾರ. ಬಹಳಷ್ಟು ದೊಡ್ಡ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಾರರು ತಮ್ಮ ವಹಿವಾಟು ನೋಡಿಕೊಳ್ಳಲು ವೃತ್ತಿಪರರನ್ನು ನೇಮಿಸಿಕೊಂಡಿರುತ್ತಾರೆ. ಹೀಗಾಗಿ ಅವರು ಇಂತಹ ತಪ್ಪುಗಳನ್ನು ಮಾಡುವುದಿಲ್ಲ.
ನಮ್ಮ ಸಮಾಜದಲ್ಲಿದ್ದ ಹಲವಾರು ಅಪರೋಕ್ಷ ತೆರಿಗೆಯನ್ನು ತೆಗೆದು ಒಂದು ತೆರಿಗೆ ಪದ್ದತಿಯನ್ನು ಜಾರಿಗೆ ತಂದಿದ್ದಾರೆ. ಅದೇ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್. ಸೇವೆ ತವ ಸರುಕಿನಲ್ಲಿ ಮೌಲ್ಯವರ್ಧನೆಯಾದಾಗ ಪ್ರತಿ ಹಂತದಲ್ಲೂ ಅದರ ಮೇಲೆ ತೆರಿಗೆಯನ್ನು ಹಾಕಲಾಗುತ್ತದೆ. ಮೇಲ್ನೋಟಕ್ಕೆ ಜಿಎಸ್ಟಿ ತೆರಿಗೆ ಹೆಚ್ಚು ಅನ್ನಿಸಿದರೂ, ವಿವಿಧ ರೀತಿಯ ತೆರಿಗೆಗಳು ತೆಗೆದು ಇದೊಂದನ್ನೇ ಅಳವಡಿಸಿರುವ ಕಾರಣ ಒಟ್ಟಾರೆ ಇದು ಸರಿ ಎನ್ನಿಸುತ್ತದೆ. ಉದ್ದಿಮೆ ನಡೆಸಲು ಬಯಸುವರು ಜಿಎಸ್ಟಿ ನಂಬರ್ ಪಡೆಯುವುದು ಕಡ್ಡಾಯ. ವ್ಯಕ್ತಿಯೊಬ್ಬರ ವಾರ್ಷಿಕ ಟರ್ನ್ಓವರ್ ೪೦ ಲಕ್ಷಕ್ಕಿಂತ ಕಡಿಮೆ ಇದ್ದಾಗ, ನೀಡುವ ಸೇವೆಯ ಟರ್ನ್ಓವರ್ 20 ಲಕ್ಷಕ್ಕಿಂತ ಕಡಿಮೆಯಿದ್ದಾಗ ಮತ್ತು ಕೆಲವೊಂದು ವಿಶೇಷ ವರ್ಗಕ್ಕೆ ಕೆಲವೊಂದು ವಿಶೇಷ ರಾಜ್ಯಗಳಲ್ಲಿ 10 ಲಕ್ಷದವರೆಗೂ ಜಿಎಸ್ಟಿ ನಂಬರ್ ಪಡೆಯುವ ಅವಶ್ಯಕತೆಯಿಲ್ಲ.
ಜಿಎಸ್ಟಿ ಕಂಪೊಸಿಶನ್ ಸ್ಕೀಮ್ ಅಡಿಯಲ್ಲಿ ವಾರ್ಷಿಕ ಒಂದೂವರೆ ಕೋಟಿ ರುಪಾಯಿ ತನಕ ವಹಿವಾಟು ನಡೆಸುವ ವ್ಯಾಪಾರಿಗಳು ಒಟ್ಟು 1 ರಿಂದ 6 ಜಿಎಸ್ಟಿ ಪಾವತಿಸಿದರೆ ಸಾಕಾಗುತ್ತದೆ. ಉದಾಹರಣೆಗೆ ಸಣ್ಣ ವ್ಯಾಪಾರಿಯೊಬ್ಬ ವರ್ಷಕ್ಕೆ ಒಂದೂವರೆ ಕೋಟಿ ರುಪಾಯಿಗಳಷ್ಟು ವ್ಯಾಪಾರ ಮಾಡಿದರೆ ಆಗ ಒಂದೂವರೆ ಲಕ್ಷ ರುಪಾಯಿ ಜಿಎಸ್ಟಿ ಕಟ್ಟಿದರೆ ಸಾಕಾಗುತ್ತದೆ. ಹೀಗಾಗಿ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ಈ ಸ್ಕೀಮ್ ವರದಾನವಾಗಲಿದೆ. ಗಮನಿಸಿ ಈಶಾನ್ಯ ರಾಜ್ಯಗಳು ಮತ್ತು ಹಿಮಾಚಲ ಪ್ರದೇಶದಲ್ಲಿದ ವ್ಯಾಪಾರಿಗಳಿಗೆ ಇದರ ಮಿತಿ ವಾರ್ಷಿಕ 75 ಲಕ್ಷ ರುಪಾಯಿಗಳ ವಹಿವಾಟು ಮಿತಿ ತನಕ 1 ಪ್ರತಿಶತ ಜಿಎಸ್ಟಿ ಇರುತ್ತದೆ.ಇನ್ನೊಂದು ಅಂಶ ಕೂಡ ನೆನಪಿನಲ್ಲಿರಲಿ ಈ ಕಂಪೋಸಿಷನ್ ಸ್ಕೀಮ್ ಅಡಿಯಲ್ಲಿ ಅಂತಾರಾಜ್ಯ ಬಿಸಿನೆಸ್ ನಡೆಸಲು ಸಾಧ್ಯವಾಗುವುದಿಲ್ಲ ಮತ್ತು ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಅಲ್ಲದೆ ಇಲ್ಲಿ ಪ್ರತಿ ತಿಂಗಳೂ ಜಿಎಸ್ಟಿ ಡಿಕ್ಲೇರ್ ಮಾಡುವ ಬದಲು ಮೂರು ತಿಂಗಳಿಗೊಮ್ಮೆ ಮಾಡಿದರೆ ಸಾಕಾಗುತ್ತದೆ. ಇದನ್ನು ಬಿಟ್ಟು ಇನ್ನು ಎರಡು ರೀತಿ ಜಿಎಸ್ಟಿ ವಿಧಾನಗಳಿಗೆ ಒಂದು ರೆಗ್ಯುಲರ್ ಅಂದರೆ ಎಲ್ಲರೂ ಬಳಸಬೇಕಾಗಿರುವುದು QRPM ಅಂದರೆ ಕ್ವಾರ್ಟರ್ಲಿ ರಿಟರ್ನ್ ಮಂತ್ಲಿ ಪೇಮೆಂಟ್. ಪ್ರತಿ ತಿಂಗಳು ರಿಟರ್ನ್ ಫೈಲ್ ಮಾಡಬೇಕಾಗುತ್ತದೆ. ಆದರೆ ಐಎಸ್ಟಿ ಹಣವನ್ನು ಮೂರು ತಿಂಗಳಿಗೊಮ್ಮೆ ಕಟ್ಟಿದರೆ ಸಾಕಾಗುತ್ತದೆ. ಈ ಮೂರರಲ್ಲಿ ಯಾವುದು ನಮಗೆ ಹೆಚ್ಚು ಸೂಕ್ತ ಎನ್ನಿಸುತ್ತದೆ ಅದರಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಇದರ ಜೊತೆಗೆ ಪದಾರ್ಥದಿಂದ ಪದಾರ್ಥಕ್ಕೆ ಜಿಎಸ್ಟಿ ರೇಟ್ ಬದಲಾಗುತ್ತದೆ. ತಿಂಗಳಲ್ಲಿ ನೂರಾರು ಮಾರಾಟದ, ಖರೀದಿಯ ಬಿಲ್ ಗಳು ಉತ್ಪನ್ನವಾಗುತ್ತವೆ. ಹೀಗಾಗಿ ಇದನ್ನು ಸರಿಯಾಗಿ ನೋಡಿಕೊಳ್ಳಲು ವೃತ್ತಿಪರ ಸಹಾಯ ಪಡೆಯುವುದು ಉತ್ತಮ.
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಯುಪಿಐ ಮೂಲಕ ಹಣವನ್ನು ಪಡೆದಿದ್ದಾರೆ. ಅವರ ವಹಿವಾಟು ಮೇಲೆ ಹೇಳಿದ ಸಂಖ್ಯೆಯೆಗಳನ್ನು ದಾಟಿದೆ. ಆದರೆ ಅವರು ತೆರಿಗೆಯನ್ನು ಕಡಿಮೆ ಟರ್ನ್ ಓವರ್ ಮೇಲೆ ಕಟ್ಟಿ ಸುಮ್ಮನಾಗಿದ್ದಾರೆ. ಈಗ ಜಿಎಸ್ಟಿ ಅಧಿಕಾರಿಗಳು ನಿದ್ದೆಯಿಂದ ಎದ್ದು ನೋಡಿದಾಗ ಬಹಳಷ್ಟು ತೆರಿಗೆ ಸೋರಿಕೆಯಾಗಿರುವುದು ಗಮನಕ್ಕೆ ಬಂದಿದೆ. ನೋಟಿಸ್ ನೀಡಲು ಶುರು ಮಾಡಿದ್ದಾರೆ. ಕಾನೂನಿನ ಪ್ರಕಾರ ಅವರು ಮಾಡುತ್ತಿರುವುದು ಸರಿಯಿದೆ. ಆದರೆ ನೈತಿಕವಾಗಿ ಇದೆಷ್ಟು ಸರಿ? ಸಣ್ಣ ಉದ್ದಿಮೆದಾರರನ್ನು ಮೊದಲೇ ಏಕೆ ಎಚ್ಚರಿಸಲಿಲ್ಲ ? ಈಗ ಅವರಿಗೆ ಲಕ್ಷಾಂತರ ರೂಪಾಯಿ ತೆರಿಗೆ ಸೋರಿಕೆಯಾಗಿದೆ ಕಟ್ಟಿ ಎಂದರೆ ಅವರು ಎಲ್ಲಿಂದ ತರುತ್ತಾರೆ? ವ್ಯವಸ್ಥೆಯಲ್ಲಿ ದೋಷವಿದೆ ಅದಕ್ಕೆ ಕೇವಲ ಸಣ್ಣ ಉದ್ದಿಮೆದಾರರ ಮೇಲೆ ಮಾತ್ರ ಬರೆ ಎಳೆಯುವ ಕೆಲಸವೇಕೆ ? ಜಿಎಸ್ಟಿ ಸಂಸ್ಥೆ , ಸರಕಾರ , ವರ್ಕ್ ಪ್ರೋಸೆಸ್ ಎಲ್ಲರೂ ಸಮಾನ ತಪ್ಪಿತಸ್ಥರು. ಆದರೆ ಶಿಕ್ಷೆ ಸಣ್ಣ ಉದ್ದಿಮೆದಾರರಿಗೆ ಮಾತ್ರ ಏಕೆ?
ಕೊನೆ ಮಾತು: 2017ರಿಂದ ಇದೆ ಮಾತುಗಳನ್ನು ಹೇಳುತ್ತಾ ಬರುತ್ತಿದ್ದೇನೆ. ಈಗಲೂ ಮತ್ತದೇ ಮಾತನ್ನು ಹೇಳುತ್ತೇನೆ. ಸರಕಾರ ಮತ್ತು ಅಧೀನ ಸಂಸ್ಥೆಗಳು ಗ್ರಾಹಕರ ಮತ್ತು ಸಣ್ಣ ವರ್ತಕರಿಗೆ ಜ್ಞಾನ ಹೆಚ್ಚಿಸುವ ಮಾಹಿತಿಯನ್ನು ಕಾಲದಿಂದ ಕಾಲಕ್ಕೆ ಹೇಳುವ ಕೆಲಸ ಮಾಡಬೇಕು. ಹೀಗಿದ್ದೂ ತಪ್ಪಾದಲ್ಲಿ ಆಗ ದಂಡ ವಿಧಿಸಲಿ. ಈ ಘಟನೆಯಲ್ಲಿ ಎಲ್ಲರೂ ಸಮಾನ ತಪ್ಪಿತಸ್ಥರು. ತಪ್ಪನ್ನು ತಿದ್ದಿಕೊಳ್ಳುವ ಕಾರ್ಯವಾಗಬೇಕು. ಕೇವಲ ಸಣ್ಣ ಉದ್ದಿಮೆದಾರರ ಮೇಲೆ ಪ್ರಹಾರ ಮಾಡುವುದು ನೈತಿಕವಾಗಿ ಸರಿಯಾದ ನಡೆಯಲ್ಲ.
Advertisement