Power Sharing: ಸಿದ್ದರಾಮಯ್ಯ ಅವರನ್ನು ನಿಭಾಯಿಸುವುದೇ ಹೈಕಮಾಂಡ್‌? (ನೇರ ನೋಟ)

ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರನ್ನು ಅವರ ಪಕ್ಷದ ವರಿಷ್ಠರು ನಿಭಾಯಿಸುವುದು ಕಷ್ಟ. ಸಿದ್ದರಾಮಯ್ಯ ಅವರು ಮತ್ತೊಬ್ಬ ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರಂತಲ್ಲ.
Siddaramaiah- Kharge (file photo)
ಸಿದ್ದರಾಮಯ್ಯ- ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ)online desk
Updated on

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವತ್ತು ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ನಿಂತು ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಅಂತ ಘರ್ಜಿಸಿದ್ದರು. ಇವತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಯ ಅಂಗಳದಲ್ಲಿ ನಿಂತು ಹೈಕಮಾಂಡ್ ಹೇಳಿದಾಗ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಅಂತ ಮೆಲುಧ್ವನಿಯಲ್ಲಿ ಮಾತಾಡುತ್ತಾರೆ. ಏನಿದರ ಅರ್ಥ? ಸಿದ್ದರಾಮಯ್ಯ ಮೆತ್ತಗಾಗಿದ್ದಾರೆ. ನಿಜ. ಹಾಗಂತ ಕೆಣಕಿದರೆ ಸಿಡಿದೇಳುವುದು ಗ್ಯಾರಂಟಿ.

ಸಿದ್ದರಾಮಯ್ಯ ಅವರು ಅವತ್ತು ದೆಹಲಿಯ ಹೈಕಮಾಂಡ್‌ ಅಂಗಳದಲ್ಲಿ ನಿಂತು ತಾವೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ. ಅಧಿಕಾರ ಹಂಚಿಕೆಯ ಒಪ್ಪಂದವೇ ಆಗಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವಿಲ್ಲ. 2028ರ ಅಸೆಂಬ್ಲಿ ಚುನಾವಣೆಗೂ ತಮ್ಮದೇ ನಾಯಕತ್ವ ಎಂದು ರಾಜಾರೋಷವಾಗಿ ಸಾರಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು. ಹೈಕಮಾಂಡ್‌ ಪ್ರತಿಕ್ರಿಯಿಸುವ ಗೋಜಿಗೆ ಹೋಗಿರಲಿಲ್ಲ.

ಇವತ್ತು ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ. ಹೈಕಮಾಂಡ್‌ ಹೇಳಿದಾಗ ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಾರೆ ಎಂದು ಕ್ಷೀಣಸ್ವರದಲ್ಲಿ ನುಡಿಯುತ್ತಾರೆ. ರಾಹುಲ್‌ ಗಾಂಧಿ ಅವರು ಕೈಗೊಳ್ಳುವ ನಿರ್ಧಾರದಂತೆ ನಡೆಯುತ್ತೇವೆ ಎಂದಿದ್ದಾರೆ. ಅಂದರೆ, ಅಲ್ಲಿಗೆ ಸಿದ್ದರಾಮಯ್ಯ ಹೈಕಮಾಂಡ್‌ ಎದುರು ತಗ್ಗಿದ್ದಾರೆ. ಹಾಗಂತ ಹೈಕಮಾಂಡ್‌ ಅವರನ್ನು ವಿಶ್ವಾಸಕ್ಕೆ ಪಡೆಯದೇ ನಿರ್ಧಾರ ಕೈಗೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ.

ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರನ್ನು ಅವರ ಪಕ್ಷದ ವರಿಷ್ಠರು ನಿಭಾಯಿಸುವುದು ಕಷ್ಟ. ಸಿದ್ದರಾಮಯ್ಯ ಅವರು ಮತ್ತೊಬ್ಬ ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರಂತಲ್ಲ. ಬಂಗಾರಪ್ಪ ಅಪಾಯವನ್ನು ಪರಿಗಣಿಸದೇ ಬಂಡೇಳುವ ನಾಯಕರಾಗಿದ್ದವರು. ಬಂಡೆದ್ದಾಗ ಅವರದು ರೋಷ, ಆವೇಶ, ಆಕ್ರೋಶ ಇರುತ್ತಿತ್ತು. ಆದರೆ, ಸಿದ್ದರಾಮಯ್ಯ ಸಮಯ ಕಾದು ತಿರುಗೇಟು ಕೊಡುವ ಚಾಣಾಕ್ಷ. ತಂತ್ರಗಾರ. ಜೊತೆಗೆ ಅಹಿಂದ ಸಮುದಾಯ ಅದರಲ್ಲೂ ಅವರ ಕುರುಬ ಸಮಾಜ ಅವರೊಂದಿಗೆ ಗಟ್ಟಿಯಾಗಿ ನಿಂತಿದೆ.

ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರವಿದ್ದಾಗಲೇ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ ನೀಡಿಲ್ಲ ಎಂದು ಸಿದ್ದರಾಮಯ್ಯ ಮುನಿಸಿಕೊಂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಇಳಿದಿರಲಿಲ್ಲ. ಒಂದು ಕಾಲದ ತಮ್ಮ ಆಪ್ತ ಸಿ.ಎಂ.ಇಬ್ರಾಹಿಂ ಅವರ ವಿಚಾರದಲ್ಲೂ ಹೈಕಮಾಂಡ್‌ ಬಗ್ಗೆ ಮುನಿಸಿಕೊಂಡಿದ್ದರು. ಹೀಗಿರುವಾಗ ಸಿದ್ದರಾಮಯ್ಯ ಅವರ ಮನವೊಲಿಸಿಯೇ ಹೈಕಮಾಂಡ್‌ ಹೆಜ್ಜೆ ಇರಿಸಬೇಕಿದೆ. ಅದಕ್ಕಾಗಿ ಈಗ ಕಸರತ್ತು ನಡೆಸಿದೆ.

Siddaramaiah- Kharge (file photo)
ಕಾಂಗ್ರೆಸ್‌, ಬಿಜೆಪಿ ಹೈಕಮಾಂಡ್‌ ಮೌನ: ಎಲ್ಲದಕ್ಕೂ ಸಮ್ಮತಿಯ ಲಕ್ಷಣ? (ನೇರ ನೋಟ)

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅವರ ಇಚ್ಚೆಗೆ ವಿರುದ್ಧವಾಗಿ ಕೆಳಗಿಳಿಸಿದರೆ ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ನಷ್ಟ ಕಾಂಗ್ರೆಸ್‌ಗೆ. ಇದು ಹೈಕಮಾಂಡ್‌ಗೂ ಗೊತ್ತಿದೆ. ಆದರೆ, ಅಧಿಕಾರ ಹಸ್ತಾಂತರದ ಮಾತು ಕೊಟ್ಟಿದ್ದರೆ ಅದು ಬೇರೆ ವಿಚಾರ. ಆಗಲೂ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ಪಡೆದರೆ ಮಾತ್ರ ಕಾರ್ಯ ಸಲೀಸು. ಇಲ್ಲದಿದ್ದರೆ ಆಟ ಕೆಡುತ್ತದೆ.

ಹೈಕಮಾಂಡ್‌ ಹೇಳಿದಂತೆ ಕೇಳುತ್ತೇನೆ ಅಂತ ಸಿದ್ದರಾಮಯ್ಯ ಇತ್ತೀಚೆಗೆ ಪದೇ ಪದೇ ಹೇಳುತ್ತಿದ್ದಾರೆ. ಆ ಮೂಲಕ ಅಧಿಕಾರ ತ್ಯಾಗದ ಸಂದೇಶವನ್ನು ರವಾನಿಸುತ್ತಿದ್ದಾರೆಯೇ? ಸಿದ್ದರಾಮಯ್ಯ ಸಂಕಷ್ಟದಲ್ಲಿದ್ದಾಗ ಕಾಂಗ್ರೆಸ್ ಅವರ ಕೈಹಿಡಿಯಿತು. ಈಗ ಕಾಂಗ್ರೆಸ್‌ ಹೈಕಮಾಂಡ್‌ ಸಂಕಷ್ಟದಲ್ಲಿದೆ ಎಂದು ಸಿದ್ದರಾಮಯ್ಯ ತಾವಾಗಿಯೇ ಕುರ್ಚಿ ಬಿಟ್ಟುಕೊಟ್ಟರೂ ಇದರ ಪರಿಣಾಮದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ಸಿಗೆ ಸಾಧ್ಯವಿಲ್ಲ. ಏಕೆಂದರೆ ಸಿದ್ದರಾಮಯ್ಯ ಅವರಿಗೆ ಅವರದ್ದೇ ಆದ ವೋಟು ಬ್ಯಾಂಕು ಇದೆ. ಇದು ವಾಸ್ತವ.

ಇನ್ನು ಸಿಎಂ, ಡಿಸಿಎಂ ಮನೆಗಳಲ್ಲಿ ನಡೆದ ಪರಸ್ಪರ ಉಪಾಹಾರದ ಸಭೆಗಳು ರಂಗಪ್ರಹಸನಗಳಿಗೆ ಸೀಮಿತ. ಅಷ್ಟಕ್ಕೂ ಇವರಿಬ್ಬರೇ ಕುಳಿತು ಬಗೆಹರಿಸಿಕೊಳ್ಳಬಹುದಾದ ಬಿಕ್ಕಟ್ಟು ಇದಲ್ಲ. ಇವರಿಬ್ಬರ ನಿಯಂತ್ರಣ ಮೀರಿ ಬಿಕ್ಕಟ್ಟು ಬೆಳೆದಿದೆ. ಬ್ರೇಕ್‌ಫಾಸ್ಟ್‌ ಮೀಟಿಂಗ್‌ಗಳ ನಂತರವೂ ಮಂಗಳೂರಿನಲ್ಲಿ ಉಭಯ ನಾಯಕರ ಬೆಂಬಲಿಗರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಸಮ್ಮುಖದಲ್ಲೇ ತಮ್ಮ ನಾಯಕರ ಪರ ಘೋಷಣೆ ಕೂಗಿರುವುದು ಇದಕ್ಕೆ ಸಾಕ್ಷಿ.

ರಾಜಸ್ತಾನ್‌, ಹರಿಯಾಣ, ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್‌ ಎಡವಿದೆ. ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸದೇ ನಂತರದ ಚುನಾವಣೆಯಲ್ಲಿ ಅಲ್ಲಿ ಸೋತಿದೆ. ಇದರ ಪಾಠವನ್ನು ಹೈಕಮಾಂಡ್‌ ಕಲಿಯಬೇಕಿದೆ.

ಆಡಳಿತ ಪಕ್ಷ ಅಧಿಕಾರಕ್ಕಾಗಿ ಕಚ್ಚಾಡಿದಾಗ ಅವರು ಎಷ್ಟೇ ಉತ್ತಮವಾಗಿ ಆಡಳಿತ ನೀಡಿದ್ದರೂ ಚುನಾವಣೆಯಲ್ಲಿ ಜನರು ಅವರಿಗೆ ಪಾಠ ಕಲಿಸುತ್ತಾರೆ ಎಂಬುದು ಕರ್ನಾಟಕದಲ್ಲಿ ಈ ಹಿಂದೆ ಅನೇಕ ಬಾರಿ ಸಾಬೀತಾಗಿದೆ. ಕಾಂಗ್ರೆಸ್‌, ಜನತಾ ಪರಿವಾರ, ಬಿಜೆಪಿ ಈ ಮೂರು ಪಕ್ಷಗಳಲ್ಲಿ ಅಧಿಕಾರಕ್ಕಾಗಿ ನಾಯಕರು ಕಿತ್ತಾಡಿದಾಗ ನಂತರದ ಚುನಾವಣೆಯಲ್ಲಿ ಸೋಲು ಕಂಡಿರುವುದು ಇತಿಹಾಸ.

ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಶಿವಕುಮಾರ್‌ ಅವರ ಪ್ರಕಾರ, ಅಧಿಕಾರ ಹಸ್ತಾಂತರದ ಒಪ್ಪಂದದಂತೆ ಮುಖ್ಯಮಂತ್ರಿ ಸ್ಥಾನ ತಮಗೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಹೈಕಮಾಂಡ್‌ ಕೃಪೆಯಿಂದ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಆದರೆ, ಹೈಕಮಾಂಡ್ ದುರ್ಬಲವಾಗಿದೆ.

ಶಿವಕುಮಾರ್ ಅವರಿಗೆ ಅವರ ಶಕ್ತಿಯೂ ಗೊತ್ತಿದೆ, ದೌರ್ಬಲ್ಯವೂ ತಿಳಿದಿದೆ. ಸಂಘಟನೆ ವಿಚಾರಕ್ಕೆ ಬಂದರೆ ಅವರು ದೈತ್ಯ. ಆದರೆ, ಶಾಸಕಾಂಗ ಪಕ್ಷದಲ್ಲಿ ಶಾಸಕರ ಬೆಂಬಲದ ಪ್ರಶ್ನೆ ಬಂದಾಗ ದುರ್ಬಲ. ಶಿವಕುಮಾರ್‌ ಕಾಂಗ್ರೆಸ್ಸಿನ ಅಂತಃಪುರದಲ್ಲಿ ಶಕ್ತಿಶಾಲಿ. ಮೈದಾನದ ರಾಜಕಾರಣಕ್ಕೆ ಇಳಿದರೆ ವರ್ಚಸ್ವಿ ನಾಯಕರಲ್ಲ. ರಾಜ್ಯಾದ್ಯಂತ ಮತಗಳನ್ನು ಸೆಳೆಯಬಲ್ಲ ಮಾಸ್‌ ಲೀಡರ್‌ ಅಲ್ಲ. ಹೀಗಾಗಿಯೇ ಹೈಕಮಾಂಡ್‌ ಕೃಪೆಯಿಂದಲೇ ಅವರು ಮುಖ್ಯಮಂತ್ರಿ ಆಗಬೇಕು. ಅದಕ್ಕೆ ಸಿದ್ದರಾಮಯ್ಯ ಒಪ್ಪಬೇಕು. ಇದು ಪರಿಸ್ಥಿತಿ.

Siddaramaiah- Kharge (file photo)
ಕೊಟ್ಟ ಮಾತಿನ ಕದನ: ಕಾಂಗ್ರೆಸ್‌ ಹೈಕಮಾಂಡ್‌ಗೆ ಈಗ ಹಗ್ಗದ ಮೇಲಿನ ನಡಿಗೆ! (ನೇರ ನೋಟ)

ದೇಶದಲ್ಲಿ ಕರ್ನಾಟಕ, ತೆಲಂಗಾಣ, ಹಿಮಾಚಲಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಸರಕಾರವಿದೆ. ತೆಲಂಗಾಣ, ಹಿಮಾಚಲಪ್ರದೇಶದಲ್ಲಿ ಮುಂದುವರಿದ ಜನಾಂಗದವರು ಮುಖ್ಯಮಂತ್ರಿ ಆಗಿದ್ದಾರೆ. ಕರ್ನಾಟಕದಲ್ಲಿ ಹಿಂದುಳಿದ ಕುರುಬ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಹಿಂದುಳಿದ ಸಮುದಾಯಗಳ ಪರ ಮಾತಾಡುವ ಕಾಂಗ್ರೆಸ್‌ ತನ್ನ ಏಕಮಾತ್ರ ಹಿಂದುಳಿದ ಸಮಾಜದ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸಬಲ್ಲದೇ?

ಇನ್ನು ಸಿದ್ದರಾಮಯ್ಯ ಅವರ ಸ್ವಭಾವವನ್ನೂ ಶಿವಕುಮಾರ್ ಬಲ್ಲರು. ಹೀಗಾಗಿ, ಅವರ ನಡೆ, ನುಡಿಯಲ್ಲಿ ನಾಜೂಕು, ಜಾಣ್ಮೆಯ ಪ್ರದರ್ಶನ. ಎಷ್ಟಾದರೂ ಶಿವಕುಮಾರ್ ಈಗ ಪಡೆದುಕೊಳ್ಳಬೇಕಾದವರು. ಹಾಗಾಗಿಯೇ ಪಟ್ಟ ದಕ್ಕುವವರೆಗಾದರೂ ಸಂಯಮ ಪ್ರದರ್ಶಿಸಬೇಕಾದದ್ದು ಅವರಿಗೆ ಅನಿವಾರ್ಯ. ಇಲ್ಲದಿದ್ದರೆ ಬಂಡೆದ್ದು ಮುಖ್ಯಮಂತ್ರಿ ಸ್ಥಾನ ದಕ್ಕಿಸಿಕೊಳ್ಳಬೇಕು. ಅದು ಅಪಾಯದ ನಡೆ. ಹಾದಿ ದುರ್ಗಮ. ಲೆಕ್ಕಾಚಾರ ಕೈಗೂಡುತ್ತದೆಯೇ ಎಂಬ ಗ್ಯಾರಂಟಿಯೂ ಇಲ್ಲ. ಇರುವ ಅಧಿಕಾರವನ್ನೂ ಕಳೆದುಕೊಳ್ಳಬಹುದಾದ ಸನ್ನಿವೇಶ ನಿರ್ಮಾಣವಾಗಬಹುದು.

ಈ ಮಧ್ಯೆ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಮತ್ತೊಂದು ವಾದವೂ ಇದೆ. ಸಿದ್ದರಾಮಯ್ಯ ಅವರಲ್ಲಿ ಮೊದಲ ಅವಧಿಯಲ್ಲಿದ್ದ ಆಡಳಿತ ನಡೆಸುವ ಹುಮ್ಮಸ್ಸು ಈಗಿಲ್ಲ. ಸುದೀರ್ಘ ಕಾಲದ ರಾಜಕಾರಣದಿಂದಾಗಿ ಹೊಸ ವಿಚಾರಗಳು, ಆಡಳಿತದಲ್ಲಿ ನಾವೀನ್ಯತೆ ಇಲ್ಲದೇ ಅವರ ನಾಯಕತ್ವಕ್ಕೆ ಒಂದು ರೀತಿಯ ಜಡತ್ವ ಆವರಿಸುತ್ತಿದೆ. ಬದಲಾವಣೆ ಜಗದ ನಿಯಮ ಎಂಬುದನ್ನು ಅವರು ಅರಿಯಬೇಕು. ರಾಷ್ಟ್ರಮಟ್ಟದಲ್ಲಿ ಪಕ್ಷದಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ದರಾಗಬೇಕು. ಸಿದ್ದರಾಮಯ್ಯ ಅವರಂತಹ ಅಹಿಂದ ನಾಯಕರು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ಸಿಗೆ ಇವತ್ತು ಅಗತ್ಯವಾಗಿದೆ. ರಾಷ್ಟ್ರಮಟ್ಟದಲ್ಲಿ ಅಹಿಂದ ಸಂಘಟನೆಗೆ ಸಿದ್ದರಾಮಯ್ಯ ಏಕೆ ದೃಷ್ಟಿ ಹರಿಸಬಾರದು ಎಂಬ ಪ್ರಶ್ನೆ ಕಾಂಗ್ರೆಸ್‌ನಲ್ಲೇ ಒಂದು ವಲಯದಲ್ಲಿದೆ.

ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಎಷ್ಟೇ ಚರ್ಚೆ ಮಾಡಿದರೂ ಕೊನೆಗೆ ಬಂದು ನಿಲ್ಲುವುದು ದೆಹಲಿಯ ಹೈಕಮಾಂಡ್‌ ಅಂಗಳದಲ್ಲೇ. ಇದು ಅಲ್ಲೇ ತೀರ್ಮಾನ ಆಗಬೇಕು. ಹೈಕಮಾಂಡ್‌ ಹೇಳಿದಂತೆ ನಾನು ಕೇಳುತ್ತೇನೆ ಎಂದು ಸಿದ್ದರಾಮಯ್ಯ ಪದೇಪದೇ ಹೇಳಿದರೂ ಹೈಕಮಾಂಡ್‌ ಏಕೆ ಏನನ್ನೂ ಹೇಳುತ್ತಿಲ್ಲ? ಮೌನವೇಕೆ? ಏಕೆಂದರೆ ಈ ವಿಚಾರದಲ್ಲಿ ಹೈಕಮಾಂಡ್‌ ನಲ್ಲೇ ಒಡಕಿದೆ. ಇದೇ ಈ ಬಿಕ್ಕಟ್ಟನ್ನು ಇತ್ಯರ್ಥಪಡಿಸಲು ಇರುವ ಅಡ್ಡಿ. ಭವಿಷ್ಯದ ಸವಾಲುಗಳನ್ನು ನೋಡಿಕೊಂಡು ಈ ಬಿಕ್ಕಟ್ಟನ್ನು ಬಗೆಹರಿಸಬೇಕಾದ ಪರಿಸ್ಥಿತಿ. ಕಾಂಗ್ರೆಸ್‌ ಹೈಕಮಾಂಡ್‌ಗೆ ಸತ್ವ ಪರೀಕ್ಷೆಯ ಕಾಲ ಇದು.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com