

ಬೊಂಡಿ ಬೀಚ್ ಅಟ್ಯಾಕ್. ಪ್ರಚಲಿತದಲ್ಲಿ ಚರ್ಚೆಯಲ್ಲಿರುವ ವಿಷಯ. ಇದು ಇಸ್ಲಾಂ ಮತಕ್ಕೆ ಸೇರಿದ ಇಬ್ಬರು ವ್ಯಕ್ತಿಗಳ ಮತೀಯ ಅಸಹನೆ ಎಂದು ಹೇಳುವುದಕ್ಕಂತೂ ಢಾಳಾದ ಕಾರಣಗಳೇ ಸಿಗುತ್ತವೆ. ಪ್ರಾರಂಭದಲ್ಲಿ ಅವರ ಮೂಲ ಪಾಕಿಸ್ತಾನ ಎಂದು ವರದಿಯಾಗಿದ್ದು ಹಲವು ಬಗೆಯ ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು. ಇದೀಗ, ಇದರಲ್ಲಿ ಹತನಾಗಿರುವ ಒಬ್ಬ ಉಗ್ರ 27 ವರ್ಷಗಳ ಹಿಂದೆ ಹೈದರಾಬಾದಿನಿಂದ ಹೋಗಿದ್ದನೆಂಬ ಕಾರಣಕ್ಕೆ ಕೆಲವರಿಗದು ಭಾರತಕೇಂದ್ರಿತ ಚರ್ಚೆಯೂ ಆಗಿದೆ. ದಾಳಿಕೋರರಲ್ಲಿ ಒಬ್ಬನನ್ನು ಅಡ್ಡಗಟ್ಟಿ ನಿಲ್ಲಿಸಿದವ ಹಣ್ಣಿನ ವ್ಯಾಪಾರಿ ಮುಸ್ಲಿಂ ಆಗಿರುವುದರಿಂದ ಆ ಬಗ್ಗೆಯೂ ಚರ್ಚೆಗಳಾಗಲಿ ಎಂಬುದು ಕೆಲವರ ಅಭಿಮತ.
ಇದು ಉಗ್ರ ದಾಳಿ ಎಂದಿರುವ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದು ‘ಆ್ಯಂಟಿ-ಸೆಮಟಿಕ್’ ಎಂಬ ಪದಪುಂಜವನ್ನೂ ಪ್ರಯೋಗಿಸಿದ್ದಾರೆ. ಯಹೂದಿಗಳ ವಿರುದ್ಧದ ದಾಳಿಯನ್ನು ಸೆಮೆಟಿಕ್ ವಿರೋಧಿ ಎಂದು ಕರೆಯುವುದು ರೂಢಿ. ಆಸ್ಟ್ರೇಲಿಯದ ಬೊಂಡಿ ಸಮುದ್ರತೀರದಲ್ಲಿ ಯಹೂದಿ ಹಬ್ಬವಾದ ಹನುಕ್ಕಾ ಆಚರಣೆಯಲ್ಲಿದ್ದಾಗ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ 12 ಮಂದಿಯನ್ನು ಕೊಂದು 30 ಮಂದಿಯನ್ನು ಗಾಯಗೊಳಿಸಿರುವುದು ಯಹೂದಿಗಳ ವಿರುದ್ಧದ ದ್ವೇಷದ ಕೃತ್ಯ ಎಂಬುದಂತೂ ಸ್ಪಷ್ಟ. ಆದರೆ, ಸೆಮೆಟಿಕ್ ಎಂಬ ಪದದ ಮೂಲ ಅಗೆಯುವುದಕ್ಕೆ ಹೋದರೆ ಅದೊಂದು ಭಾಷಾ ಪರಿವಾರದ ಸೂಚಕ ಶಬ್ದ ಎಂಬುದು ಮುನ್ನೆಲೆಗೆ ಬರುತ್ತದೆ. ಹಿಬ್ರೂ, ಅರಾಮೆಕ್, ಅರೆಬಿಕ್, ಅಕ್ಕಾದಿಯನ್, ಪೊನೆಸಿಯನ್, ಸಿರಿಯಾಕ್ ಎಲ್ಲವೂ ಸೆಮೆಟಿಕ್ ಭಾಷೆಗಳು. ಹೀಗಿರುವಾಗ ಯಹೂದಿಗಳಷ್ಟೇ ಅಲ್ಲದೇ ಮೂಲತಃ ಅರಾಮೆಕ್ ಮಾತಾಡುತ್ತಿದ್ದ ಜೀಸಸ್ ಮೂಲದ ಕ್ರೈಸ್ತರು, ಅರೆಬಿಕ್ ಭಾಷಾಮೂಲ ಹೊಂದಿರುವ ಮುಸ್ಲಿಮರು ಎಲ್ಲರೂ ಸೆಮೆಟಿಕ್ ಆಗುತ್ತಾರೆ. ಆದರೆ, ಹಿಟ್ಲರ್ ಕಾಲದಲ್ಲಾದ ಯಹೂದಿಗಳ ಹತ್ಯಾಕಾಂಡವನ್ನು ಆ್ಯಂಟಿ-ಸೆಮೆಟಿಕ್ ಎಂದು ಗುರುತಿಸಿದ್ದರಿಂದ ಆ ಪದ ನಿರ್ದಿಷ್ಟವಾಗಿ ಯಹೂದಿಗಳ ವಿರುದ್ಧದ ಹಿಂಸೆ ಹಾಗೂ ಜನಾಂಗೀಯ ನಿಂದನೆಗಳನ್ನು ಬಿಂಬಿಸುವ ಶಬ್ದವಾಗಿ ರೂಢಿಯಲ್ಲಿದೆ.
ಈ ಎಲ್ಲ ಹಿನ್ನಲೆಗಳಲ್ಲಿ, ಈ ಅಂಕಣದ ಮುಖ್ಯ ವ್ಯಾಪ್ತಿ ಇರುವುದು ಈ ಸೆಮೆಟಿಕ್ ದಾರದಲ್ಲಿ ಪೊಣಸಿಕೊಂಡಿರುವ ಈ ಮೂರು ಮತಗಳು ಅದೇಕೆ ತಮ್ಮ ತಮ್ಮಲ್ಲಿ ನಿರಂತರವಾಗಿ ಬಡಿದಾಡಿಕೊಂಡಿವೆ ಎಂಬ ಮೂಲ ಪ್ರಶ್ನೆಯನ್ನು ಕೆದಕುವುದು. ಯಾರೋ ಇಬ್ಬರು ಬಂದೂಕು ಎತ್ತಿಕೊಂಡ ಮಾತ್ರಕ್ಕೆ ಇಡೀ ಮತವನ್ನು ದೂಷಿಸಲಾಗುವುದಿಲ್ಲ, ಎಲ್ಲರೂ ದ್ವೇಷಭಾವನೆ ಹೊಂದಿದ್ದಾರೆ ಎಂದು ವ್ಯಾಖ್ಯಾನಿಸುವುದಕ್ಕಾಗುವುದಿಲ್ಲ ಎಂಬ ವಾದಗಳೆಲ್ಲ ಸರಿ. ಆದರೆ, ಹೀಗೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ಹಲವರಾದರೂ ಹೀಗೆ ದ್ವೇಷ ಭಾವನೆ ತಾಳಿಕೊಳ್ಳುವುದಕ್ಕೆ ಪ್ರೇರೇಪಣೆ ನೀಡಬಲ್ಲ ವಿನ್ಯಾಸವೇನಾದರೂ ಮೂಲದಲ್ಲೇ ಇದೆಯಾ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ.
ಯಹೂದಿ, ಕ್ರೈಸ್ತ, ಇಸ್ಲಾಂ ಈ ಮೂರೂ ಮತಗಳು ಹುಟ್ಟಿಕೊಂಡಿದ್ದು ಭೌಗೋಳಿಕವಾಗಿ ಒಂದೆಡೆ ಇರುವ ನೆಲೆಗಳಲ್ಲೇ. ಹಿಬ್ರೂ ಬೈಬಲ್ ಎಂಬುದು ಈ ಮೂರೂ ಮತಗಳಿಗೂ ಪ್ರಸ್ತುತವೇ. ಆದರೆ ವ್ಯಾಖ್ಯಾನಗಳು ಭಿನ್ನ ಭಿನ್ನ. ಪ್ರಾರಂಭದಲ್ಲಿ ವಿಶ್ವಸೃಷ್ಟಿ ಇತ್ಯಾದಿಗಳ ಬಗ್ಗೆ ಕಲ್ಪನೆಗಳನ್ನು ಹರಿಬಿಟ್ಟ ನಂತರ, ಗ್ರಂಥದ ಮಾನವ ಕತೆ ಶುರುವಾಗುವುದು ಅಬ್ರಹಾಂ ಜತೆಗೆ. ಅಬ್ರಹಾಂ ಮೂರೂ ಮತದವರಿಗೂ ಪ್ರಸ್ತುತ.
ಇವತ್ತಿನ ದಕ್ಷಿಣ ಇರಾಕಿನಲ್ಲಿ ಗುರುತಿಸಬಹುದಾದ ಅಂದಿನ ಮೆಸಪೊಟಮಿಯಾದ ಉರ್ ಎಂಬಲ್ಲಿ ತನ್ನ ಮಡದಿ ಸಾರಾ ಜತೆಗೆ ವಾಸಿಸುತ್ತಿದ್ದ ಎಪ್ಪತ್ತೈದರ ವ್ಯಕ್ತಿ ಅಬ್ರಹಾಂರಿಗೆ ಸಂತಾನವಿಲ್ಲ. ಅವರಿಗೆ ಮೊಳಗಿದ ದೈವವಾಣಿ ಹೇಳುತ್ತದೆ- “ನೀನು ನಿನ್ನ ಜನರೊಂದಿಗೆ ನಾನು ತೋರಿಸುವ ಪ್ರದೇಶದತ್ತ ಹೋಗು. ನಿನಗಾಗಿ ಒಂದು ದೇಶವನ್ನೇ ಕೊಡುತ್ತೇನೆ. ನೀನು ಯಾರನ್ನು ಆಶೀರ್ವದಿಸುವೆಯೋ ಅವರಿಗೆ ನನ್ನ ಆಶೀರ್ವಾದವೂ ಇರುತ್ತದೆ. ನಿನ್ನಿಂದ ಶಪಿತವಾದವರಿಗೆಲ್ಲ ನನ್ನ ಶಾಪವೂ ತಟ್ಟುತ್ತದೆ. ಭೂಮಿಯ ಎಲ್ಲರನ್ನೂ ನಾನು ನಿನ್ನ ಮೂಲಕವೇ ಆಶೀರ್ವದಿಸುತ್ತೇನೆ.”
ಅಬ್ರಹಾಂರಿಗೆ ದೇವರು ಭಾಷೆ ಕೊಟ್ಟ ಆ ಜಾಗವೆಂದರೆ ಇವತ್ತಿನ ಇಸ್ರೇಲ್-ಪ್ಯಾಲಸ್ತೀನ್ ಜಾಗ, ಅವತ್ತಿಗೆ ಕ್ಯಾನ್ನನ್ ಎಂದು ಕರೆಸಿಕೊಳ್ಳುತ್ತಿದ್ದ ಭೂಪ್ರದೇಶ. ಅಬ್ರಹಾಂ ತನ್ನ ಮಡದಿ ಸಾರಾ, ಸೇವಕಿ ಹಗರ್ ಹಾಗೂ ಸೋದರ ಸಂಬಂಧಿ ಲಾಟ್ ಜತೆ ಆ ಪ್ರದೇಶಕ್ಕೆ ಹೋಗುತ್ತಾರೆ. ಆದರೆ, 86 ವರ್ಷಗಳಾದರೂ ಅಬ್ರಹಾಂರಿಗೆ ಮಕ್ಕಳಾಗುವುದಿಲ್ಲ. ಈ ಹಂತದಲ್ಲಿ ಪತ್ನಿ ಸಾರಾ, ತನ್ನ ಪತಿಯ ಜತೆ ಸೇವಕಿ ಹಗರ್ ಕೂಡುವಂತೆ ಮಾಡಿ ಅವರಿಗೊಂದು ಮಗುವಾಗುತ್ತದೆ. ಆ ಮಗುವಿನ ಹೆಸರು ಇಶ್ಮಾಯಲ್. ಕಾಲಾಂತರದಲ್ಲಿ ಸಾರಾ ಮತ್ತು ಹಗರ್ ನಡುವೆ ಸಂಘರ್ಷವಾಗಿ ಆಕೆ ತನ್ನ ಸೇವಕಿ ಮತ್ತು ಮಗುವನ್ನು ಹೊರದೂಡುತ್ತಾಳೆ. ಅಬ್ರಹಾಂ 99ನೇ ವರ್ಷದಲ್ಲಿದ್ದಾಗ ದೇವರು ಪ್ರತ್ಯಕ್ಷವಾಗಿ, ತಾನು ನಿನ್ನನ್ನು ಹಲವು ದೇಶಗಳ ತಂದೆಯನ್ನಾಗಿಸುತ್ತೇನೆ, ಅವರೆಲ್ಲರ ದೇವರು ನಾನು. ಆದರೆ ನನ್ನ-ನಿನ್ನ ನಡುವಿನ ಒಪ್ಪಂದ ಚರ್ಮದ ಮೇಲೆ ಅಳಿಸಲಾಗದಂತೆ ಬರೆದಿರುವಂತದ್ದಾಗಿರಬೇಕು. ಹಾಗೆಂದೇ ಮೊದಲಿಗೆ ನೀನು ಜನನಾಂಗದ ಚರ್ಮದ ಪದರ ಕತ್ತರಿಸಿಕೊಳ್ಳಬೇಕು. ಅದು ನನ್ನ-ನಿನ್ನ ನಡುವಿನ ಒಪ್ಪಂದದ ಮುದ್ರೆ. ನಿನ್ನ ಮುಂದಿನ ಜನಾಂಗ ಸಹ, ಹುಟ್ಟಿ ಎಂಟು ದಿನವಾದ ಎಲ್ಲ ಗಂಡುಮಕ್ಕಳೂ ಇದಕ್ಕೆ ಒಳಗಾಗಬೇಕು. ಯಾರನ್ನು ಖರೀದಿಸಿ ತಂದಿದ್ದೀಯೋ ಅವರ ಗಂಡುಮಕ್ಕಳಿಗೂ ಈ ಪ್ರಕ್ರಿಯೆ ಆಗಬೇಕು. ಯಾರು ಈ ಒಪ್ಪಂದಪೂರ್ವಕ ಚರ್ಮ ಛೇದ ಪ್ರಕ್ರಿಯೆಗೆ ಒಳಗಾಗುವುದಿಲ್ಲವೋ ಅವರು ಸಮುದಾಯದಿಂದ ಬೇರ್ಪಡುತ್ತಾರೆ.
ಅಬ್ರಹಾಂಗೆ ನೂರನೇ ವಯಸ್ಸಿನಲ್ಲಿ ಪತ್ನಿ ಸಾರಾ ಕಡೆಯಿಂದ ಹುಟ್ಟಿದ ಮಗು ಐಸಾಕ್. ಈ ಐಸಾಕ್ ಮೂಲಕವೇ ತಾವು ಅಬ್ರಹಾಂ ವಾರಸುದಾರರೆಂದು ಯಹೂದಿಗಳು ಪ್ರತಿಪಾದಿಸುತ್ತಾರೆ. ಐಸಾಕ್ ಗೆ ಜಾಕೊಬ್ ಮತ್ತು ಎಸೌ ಎಂಬ ಇಬ್ಬರು ಮಕ್ಕಳು. ನಂತರ, ಜಾಕೊಬ್ ಗೆ ಹನ್ನೆರಡು ಮಕ್ಕಳು. ಐತಿಹಾಸಿಕ ಕಾಲಘಟ್ಟಕ್ಕೆ ಬಂದಾಗ ಇಸ್ರೇಲಿಯರು ಹನ್ನೆರಡು ಬುಡಕಟ್ಟುಗಳ ಒಂದು ಜನಾಂಗವಾಗಿ ಪ್ರಾರಂಭದಲ್ಲಿ ಗುರುತಿಸಿಕೊಂಡಿದ್ದಾರೆ.
ಅಂದಹಾಗೆ, ಅಬ್ರಹಾಂ ಕುಟುಂಬದಿಂದ ಆ ಸೇವಕಿ ಮತ್ತು ಮಗು ದೂರವಾದ ಕತೆ ಅಲ್ಲಿಗೇ ನಿಂತಿತಲ್ಲ. ಹಿಬ್ರೂ ಬೈಬಲ್ ಚೌಕಟ್ಟಿನಲ್ಲಿ ಆ ಕತೆಯೇನೂ ಮುಂದುವರಿಯುವುದಿಲ್ಲ. ಅಬ್ರಹಾಂರಿಗೆ ಆಗ ವೇದನೆಯಾದರೂ ದೇವರು ಇಶ್ಮಾಯೆಲ್ ಸಹ ದೇಶದ ಹುಟ್ಟಿಗೆ ಕಾರಣನಾಗುವನೆಂದು ಸಮಾಧಾನ ಹೇಳುತ್ತಾನಾದ್ದರಿಂದ ಸಮಾಧಾನಪಟ್ಟುಕೊಂಡರು. ಮರುಭೂಮಿಗೆ ಹೊರಟುಹೋದ ತಾಯಿ-ಮಗು. ಮುಂದೆ ಇಶ್ಮಾಯೆಲ್ ಬಿಲ್ಲುಗಾರನಾದನೆಂದು ಹೇಳಲಾಗುತ್ತದೆ.
ಆದರೆ, ಮುಂದೆ ಇಸ್ಲಾಂ ಮತದ ಉದಯವಾದಾಗ ಆ ಜನಾಂಗವು ಅರಬ್ಬರು ಅಬ್ರಹಾಂನ ನಿಜವಾದ ವಾರಸುದಾರರೆಂದು ಪ್ರತಿಪಾದಿಸಿತು. ಮರುಭೂಮಿಗೆ ಸೇರಿದ ಅಮ್ಮ-ಮಗು ಬಂದಿದ್ದು ಮತ್ತೆಲ್ಲಿಗೂ ಅಲ್ಲ, ಅರೇಬಿಯದ ಮೆಕ್ಕಾಕ್ಕೆ ಎಂಬ ವ್ಯಾಖ್ಯಾನ ಹುಟ್ಟಿಕೊಂಡಿತು. ಹಗರ್ ಹಜಾರ ಆಗಿ, ಇಶ್ಮಾಯೆಲ್ ಇಸ್ಮಾಯಿಲ್ ಆಗಿ ಇಸ್ಲಾಂ ಸ್ಮೃತಿಯನ್ನು ಸೇರಿಕೊಂಡರು. ಪ್ರವಾದಿ ಮೊಹಮ್ಮದ್, ಇಸ್ಮಾಯಿಲ್ ವಂಶಸ್ಥರೆಂಬುದು ಇಸ್ಲಾಂ ಪ್ರತಿಪಾದನೆ. ಇಲ್ಲಿಯೂ ಸಹ ದೇವರು ಮತ್ತು ಅನುಯಾಯಿಗಳ ನಡುವೆ ಚರ್ಮದಲ್ಲಿ ಮುದ್ರೆಯೊತ್ತಿಕೊಂಡು ಆಗಿರುವ ಒಪ್ಪಂದದ ಪರಿಕಲ್ಪನೆ ಮುಂದುವರಿದಿದೆ.
ಅಬ್ರಹಾಂ ಕತೆ ತುಂಬ ಪ್ರಾಚೀನವಾದದ್ದು. ಆ ನಂತರದ ಕಾಲಪ್ರವಾಹದಲ್ಲಿ ಕ್ರೈಸ್ತಮತ ಹಾಗೂ ಇಸ್ಲಾಂ ಹುಟ್ಟುವುದಕ್ಕೆ ಮುಂಚೆ ಯಹೂದಿಗಳು ಸವೆಸಿರುವ ಹಾದಿ ದೊಡ್ಡದು. ದೇಶದಿಂದ ಹೊರಹಾಕಿಸಲ್ಪಟ್ಟಿದ್ದಾರೆ, ವಲಸೆಗೆ ಒಳಗಾಗಿದ್ದಾರೆ, ಸಾಮ್ರಾಜ್ಯಗಳ ಶೋಷಣೆಗೂ ಸಿಲುಕಿದ್ದಾರೆ. ಹೀಗೊಂದು ಸಂಘರ್ಷದ ಕಾಲದ ಯಹೂದಿ ಸ್ಮೃತಿ ಹಾಗೂ ಆಗ ಅವರು ಪಾಲ್ಗೊಂಡಿದ್ದ ಯುದ್ಧವರ್ಣನೆಯಲ್ಲೇ ಇವತ್ತಿನ ಜಿಹಾದ್ ಹಾಗೂ ಅದಕ್ಕೂ ಹಿಂದಿನ ಕ್ರೂಸೇಡಿಗೆ ಸ್ಫೂರ್ತಿ ಇದೆ ಎಂದರೆ ನಿಮಗೆ ಅಚ್ಚರಿ ಎನಿಸಬಹುದು. ಅದು ಪ್ರತ್ಯೇಕ ಚರ್ಚೆ ಆಗಿಬಿಡುವುದರಿಂದ ಇನ್ನೆಂದಾದರೂ ಗಮನಿಸೋಣ.
ಕ್ರೈಸ್ತ ಮತ ಪ್ರವರ್ಧಮಾನಕ್ಕೆ ಬಂದಾಗ ಅದು ಜೀಸಸ್ ಹಾಗೂ ದೇವರ ನಡುವೆ ಆಗಿರುವ ಒಪ್ಪಂದ ವಿಶ್ವಾಸದ ತಳಹದಿಯದ್ದು ಎಂದು ಪ್ರತಿಪಾದಿಸಿಕೊಂಡು, ಪುರುಷರ ಜನನಾಂಗ ಛೇದ ಪ್ರಕ್ರಿಯೆಯಿಂದ ದೂರ ಉಳಿಯಿತು. ಇಷ್ಟಕ್ಕೂ, ಐತಿಹಾಸಿಕ ಜೀಸಸ್ ವ್ಯಕ್ತಿತ್ವದ ವಿವರಣೆಗಳನ್ನು ಓದಿಕೊಂಡರೆ ನಿಜಕ್ಕೂ ಅಲ್ಲಿದ್ದದ್ದು ಯಹೂದಿಗೆ ಹೊರತಾದ ಮತಸ್ಥಾಪನೆಯ ಉದ್ದೇಶವಾ ಎಂಬುದರ ಬಗ್ಗೆ ಪ್ರಶ್ನೆಗಳು ಏಳುತ್ತವೆ. ಈ ಕತೆಯನ್ನು ಸಹ ಮುಂದೆಂದಾದರೂ ಗಮನಿಸೋಣ.
- ಚೈತನ್ಯ ಹೆಗಡೆ
cchegde@gmail.com
Advertisement