ಡಾಲರ್ ಎದಿರು ಇನ್ನಷ್ಟು ಕುಸಿತ ಕಾಣಲಿದೆಯೇ ರೂಪಾಯಿ? (ಹಣಕ್ಲಾಸು)

ಈ ಬಾರಿ ರಿಸೆರ್ವ್ ಬ್ಯಾಂಕ್ ಮಧ್ಯ ಪ್ರವೇಶ ಮಾಡಿಲ್ಲ. ಇಲ್ಲಿಯವರೆಗೆ ತಾನು ಪಾಲಿಸುತ್ತಿದ್ದ ಮೂರನೇ ನಿಯಮದಿಂದ ಅದು ಎರಡನೇ ನಿಯಮಕ್ಕೆ ಶಿಫ್ಟ್ ಆಗಿದೆ. ಇದು ಬದಲಾದ ಭಾರತದ ದಿಟ್ಟ ನಡೆ.
Rupee falling against dollar (file photo)
ರೂಪಾಯಿ ಕುಸಿತ (ಸಂಗ್ರಹ ಚಿತ್ರ)online desk
Updated on

ಅಮೆರಿಕಾದ ಡಾಲರ್ ಎದುರು ಭಾರತೀಯ ರೂಪಾಯಿಯ ಕುಸಿತ ನಿಲ್ಲುವಂತೆ ಕಾಣಿಸುತ್ತಿಲ್ಲ. ಮುಂಬರುವ ದಿನಗಳಲ್ಲಿ ಇದು ಇನ್ನೂ ಕುಸಿತ ಕಾಣುತ್ತ ಹೋಗುವ ಸಂಭಾವ್ಯತೆ ಹೆಚ್ಚಾಗಿದೆ. ಮುಂದಿನ ಒಂದು ವರ್ಷದಲ್ಲಿ ಇದು 95 ರೂಪಾಯಿ ಆಸುಪಾಸಿಗೆ ಹೋದರೂ ಅಚ್ಚರಿ ಪಡಬೇಕಾಗಲಿಲ್ಲ.

ಒಂದು ದೇಶದ ಹಣವನ್ನು ಇನ್ನೊಂದು ದೇಶದ ಹಣದೊಂದಿಗೆ ಹೊಂದಿಸಿಕೊಳ್ಳುವುದು ಒಂದು ಮೆಕ್ಯಾನಿಸಂ. ಇದರಲ್ಲಿ ವ್ಯತ್ಯಾಸವಾದರೆ ದೇಶದ ಆರ್ಥಿಕತೆಯಲ್ಲಿ ಕೂಡ ಏರುಪೇರಾಗುತ್ತದೆ. ಭಾರತೀಯ ರೂಪಾಯಿ ಡಾಲರಿನ ಮುಂದೆ ಕುಸಿತ ಕಂಡ ತಕ್ಷಣ ಅದು ದೇಶದ ಕುಸಿತವೆಂದೂ, ರೂಪಾಯಿ ಏರಿಕೆ ಕಂಡರೆ ಅದು ದೇಶದ ಉತ್ತಮ ಆರ್ಥಿಕತೆಗೆ ಹಿಡಿದ ಕನ್ನಡಿ ಎನ್ನುವುದೂ ಸರಿಯಾಗುವುದಿಲ್ಲ. ಇವೆಲ್ಲವೂ ಏಕಮುಖ ವಿಶ್ಲೇಷಣೆ ಎನ್ನಿಸಿಕೊಳ್ಳುತ್ತವೆ. ಹಾಗೆ ನೋಡಲು ಹೋದರೆ ಭಾರತದ ಎಕಾನಮಿ ಹಿಂದಿಗಿಂತ ಬಲಿಷ್ಠವಾಗಿದೆ. ಅಭಿವೃದ್ಧಿ ಸೂಚ್ಯಂಕ ಕೂಡ ಏರುಗತಿಯಲ್ಲಿದೆ. ಸಾಮಾನ್ಯವಾಗಿ ಡಾಲರಿನ ಮುಂದೆ ಜಗತ್ತಿನ ಬೇರೆಲ್ಲಾ ದೇಶಗಳು ಹೇಗೆ ತಮ್ಮ ಹಣವನ್ನು ಹೊಂದಿಸಿಕೊಳ್ಳುತ್ತವೆ ಎನ್ನುವುದನ್ನು ತಿಳಿದುಕೊಳ್ಳೋಣ.

ಡಾಲರ್ ಜಾಗತಿಕ ಕರೆನ್ಸಿ ಆಗಿರುವ ಕಾರಣ ಎಲ್ಲಾ ದೇಶಗಳೂ ಒಂದು ಡಾಲರಿಗೆ ಎಷ್ಟು ಅವರ ಹಣವಾಗುತ್ತದೆ ಎನ್ನುವ ಲೆಕ್ಕಾಚಾರ ಮಾಡಲೇಬೇಕಾಗುತ್ತದೆ. ಈ ಲೆಕ್ಕಾಚಾರ ಮೂರು ವಿಧದಲ್ಲಿ ಮಾಡಲಾಗುತ್ತದೆ.

ಒಂದು ಫಿಕ್ಸೆಡ್ ಅಥವಾ ನಿಗದಿತ ವಿನಿಮಯ. ಉದಾಹರಣೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ದಿರಾಹ್ಮ್ ಹಣವನ್ನು ಡಾಲರಿನೊಂದಿಗೆ ನಿಗದಿ ಪಡಿಸಿಕೊಂಡಿದೆ. ಒಂದು ಡಾಲರು 3.67 ದಿರಾಹ್ಮ್ ಎಂದು ಒಪ್ಪಂದ ಮಾಡಿಕೊಂಡಿದೆ. ಇದನ್ನು 1997 ರಲ್ಲಿ ನಿಗದಿ ಪಡಿಸಿಕೊಳ್ಳಲಾಯಿತು. ಇದರರ್ಥ ಜಾಗತಿಕವಾಗಿ ಡಾಲರಿನ ಹಣದಲ್ಲಿ ಏರಿಕೆ ಅಥವಾ ಇಳಿಕೆ ಏನಾದರೂ ಸರಿಯೇ ಡಾಲರ್ ಮತ್ತು ದಿರಾಹ್ಮ್ ವಿನಿಮಯದ ಲೆಕ್ಕಾಚಾರದಲ್ಲಿ ಬದಲಾವಣೆಯಾಗುವುದಿಲ್ಲ. ಸೌದಿ ಅರೇಬಿಯಾ, ಕತಾರ್, ಓಮನ್, ಹಾಂಗ್ ಕಾಂಗ್ ಹೀಗೆ ಹಲವಾರು ದೇಶಗಳು ಡಾಲರಿನ ಜೊತೆಗೆ ಈ ರೀತಿಯ ಫಿಕ್ಸೆಡ್ ವಿನಿಮಯ ದರವನ್ನು ಹೊಂದಿವೆ.

ಎರಡನೆಯದ್ದು ಮಾರ್ಕೆಟ್ ಫ್ಲೋಟಿಂಗ್ ರೇಟ್ ವಿನಿಮಯ ದರ: ಇದನ್ನು ಜಗತ್ತಿನ ಬಹುತೇಕ ದೇಶಗಳು ಅಪ್ಪಿಕೊಂಡಿವೆ. ಅಂದರೆ ಅವತ್ತಿನ ದಿನದ, ಸಮಯದ ಡಿಮ್ಯಾಂಡ್ ಎಷ್ಟಿದೆ ಎನ್ನುವುದರ ಆಧಾರದ ಮೇಲೆ ವಿನಿಮಯ ದರವನ್ನು ನಿಗದಿ ಪಡಿಸಿಕೊಳ್ಳಲಾಗುತ್ತದೆ. ಇಷ್ಟೊಂದು ಏರಿಳಿತ ಬೇಡ ಎನ್ನುವ ಸಂಸ್ಥೆಗಳು ಕೆಲವು ಬ್ಯಾಂಕುಗಳ ಜೊತೆಗೆ ಒಪ್ಪಂದ ಮಾಡಿಕೊಂಡು ವಿನಿಮಯ ದರವನ್ನು ಲಾಕ್ ಮಾಡಿಕೊಳ್ಳುತ್ತವೆ. ಆದರೆ ದೇಶ ಒಟ್ಟಾರೆಯಾಗಿ ಈ ರೀತಿಯ ಓಪನ್ ರೇಟ್ ವಿನಿಮಯ ದರಕ್ಕೆ ಸರಿ ಎನ್ನುತ್ತವೆ. ಸರಳವಾಗಿ ಹೇಳಬೇಕೆಂದರೆ ದೇಶ ಡಾಲರಿನ ಜೊತೆಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಬದಲಿಗೆ ಆಯಾ ದಿನದ ಏರಿಳಿತವನ್ನು ಒಪ್ಪಿಕೊಳ್ಳುವ ನಿಯಮವನ್ನು ಪಾಲಿಸುತ್ತವೆ. ಜಾಗತಿಕವಾಗಿ ಮೆಜಾರಿಟಿ ದೇಶಗಳು ಮಾಡುವುದು ಹೀಗೆಯೇ. ಆದರೆ ಆ ದೇಶದಲ್ಲಿ ಇರುವ ಬಹುದೊಡ್ಡ ಸಂಸ್ಥೆಗಳಿಗೆ ದಿನ ನಿತ್ಯದ ಈ ರಗಳೆಯನ್ನು ಸಹಿಸುವ ಕ್ಷಮತೆ ಇರುವುದಿಲ್ಲ. ಹೀಗಾಗಿ ಅವರು ಬ್ಯಾಂಕುಗಳ ಜೊತೆಗೆ ಒಂದು ರೆಟ್ ನಿಗದಿ ಪಡಿಸಿಕೊಳ್ಳುತ್ತಾರೆ. ಅದು ಬೇರೆ ಕಥೆ.

ಮೂರನೆಯದು ಫ್ಲೋಟಿಂಗ್ ರೇಟ್ ಏನಿದೆ ಅದನ್ನೇ ಒಪ್ಪಿಕೊಳ್ಳುವ ದೇಶಗಳು. ಆದರೆ ಅತಿ ಹೆಚ್ಚು ಕುಸಿತ ಅಥವಾ ಏರಿಕೆಯಾದಾಗ ತಮ್ಮ ಸೆಂಟ್ರಲ್ ಬ್ಯಾಂಕ್ ಮೂಲಕ ಡಾಲರ್ ಮಾರುವ ಮೂಲಕ ಅಥವಾ ಖರೀದಿ ಮಾಡುವ ಮೂಲಕ ವಿನಿಮಯ ದರವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತವೆ. ಭಾರತ ಮೂರನೇ ನೀತಿಯನ್ನು ಅನುಸರಿಸುತ್ತಿತ್ತು. ಅಂದರೆ ಭಾರತದ ರೂಪಾಯಿ ತೀವ್ರ ಕುಸಿತ ಕಂಡರೆ ಆಗ ಅದು ತನ್ನ ಫಾರಿನ್ ರಿಸೆರ್ವ್ ನಲ್ಲಿರುವ ಡಾಲರ್ ಹಣವನ್ನು ಮಾರಿ ಮಾರುಕತೆಯಲ್ಲಿ ಹೆಚ್ಚಿನ ಡಾಲರ್ ಇರುವಂತೆ ನೋಡಿಕೊಳ್ಳುತ್ತಿತ್ತು. ಆಗ ವಿನಿಮಯ ದರ ನಿಯಂತ್ರಣಕ್ಕೆ ಬರುತ್ತಿತ್ತು. ಯಾವಾಗ ಡಾಲರಿನ ಡಿಮ್ಯಾಂಡ್ ಹೆಚ್ಚುತ್ತದೆ. ಆಗ ದೇಶೀ ಹಣದ ಮೌಲ್ಯ ಕುಸಿಯುತ್ತದೆ. ಇಂತಹ ಸಮಯದಲ್ಲಿ ಭಾರತದ ರಿಸೆರ್ವ್ ಬ್ಯಾಂಕ್ ಮಧ್ಯ ಪ್ರವೇಶಿಸಿ ಹೆಚ್ಚಿನ ಡಾಲರ್ ಸಿಗುವಂತೆ ನೋಡಿಕೊಳ್ಳುತ್ತಿತ್ತು. ಈ ಕಾರಣದಿಂದ ರೂಪಾಯಿ ಕುಸಿತ ತಪ್ಪುತ್ತಿತ್ತು. ಇವೆಲ್ಲವೂ ಸಾಮಾನ್ಯವಾಗಿ ದಿನ ನಿತ್ಯ ಆಗುತ್ತಿರುವ ಸಹಜ ಕ್ರಿಯೆಗಳು.

ಆದರೆ ಈ ಬಾರಿ ರಿಸೆರ್ವ್ ಬ್ಯಾಂಕ್ ಮಧ್ಯ ಪ್ರವೇಶ ಮಾಡಿಲ್ಲ. ಇಲ್ಲಿಯವರೆಗೆ ತಾನು ಪಾಲಿಸುತ್ತಿದ್ದ ಮೂರನೇ ನಿಯಮದಿಂದ ಅದು ಎರಡನೇ ನಿಯಮಕ್ಕೆ ಶಿಫ್ಟ್ ಆಗಿದೆ. ರೂಪಾಯಿ ತನ್ನ ಲಯವನ್ನು ತಾನು ಕಂಡು ಕೊಳ್ಳುತ್ತದೆ ಎನ್ನುವ ಹೇಳಿಕೆಯನ್ನು ಸಹ ನೀಡಿದೆ. ಇದು ಜಾಗತಿಕ ವಿತ್ತ ಜಗತ್ತು ಎದುರು ನೋಡದೆ ಇರುವ ನಡೆ. ಬದಲಾದ ಭಾರತದ ದಿಟ್ಟ ನಡೆ. ತನ್ನ ಕರೆನ್ಸಿ ಕುಸಿತವನ್ನು ಭಾರತ ತಡೆಯುತ್ತದೆ ಎನ್ನುವ ಎಲ್ಲಾ ವಿತ್ತ ಪಂಡಿತರ ಲೆಕ್ಕಾಚಾರವನ್ನು ಭಾರತ ಬುಡಮೇಲು ಮಾಡಿದೆ.

Rupee falling against dollar (file photo)
ಭಾರತ ಬ್ರಿಕ್ಸ್ ಕರೆನ್ಸಿ ಬೇಡ ಎಂದದ್ದೇಕೆ? (ಹಣಕ್ಲಾಸು)

ಸರಿ ಭಾರತ ಜಗತ್ತನ್ನು ಅಚ್ಚರಿಗೆ ತಳ್ಳಿದೆ, ಒಪ್ಪುವ ಮಾತು. ಇದು ಸ್ಟ್ರಾಟರ್ಜಿ ಎನ್ನುವ ಮಾತನ್ನೂ ಒಪ್ಪೋಣ. ಆದರೆ ಇದರಿಂದ ಭಾರತಕ್ಕೆ ನಷ್ಟವಾಗುವುದಿಲ್ಲವೇ? ಅಥವಾ ಭಾರತಕ್ಕೆ ಲಾಭವಾಗುತ್ತದೆಯೇ? ಎನ್ನುವುದಷ್ಟೆ ಸಾಮಾನ್ಯ ಜನರಿಗೆ ಬೇಕಾಗಿರುವುದು. ದೀರ್ಘಾವಧಿ , ಪ್ಲಾನ್ , ಸ್ಟ್ರಾಟರ್ಜಿ ಇತ್ಯಾದಿ ಪದಗಳು ಅವರಿಗೆ ಬೇಕಿಲ್ಲ. ತಾವು ದಿನ ನಿತ್ಯ ಬಳಸುವ ಪದಾರ್ಥಗಳ ಬೆಲೆ ಏರಿಕೆ ಆಗದಿದ್ದರೆ ಅಷ್ಟು ಸಾಕು ಎನ್ನುವುದು ಜನ ಸಾಮಾನ್ಯನ ನಿಲುವು. ಅದು ಭಾರತವಾದರೂ ಅಷ್ಟೇ , ಅಮೆರಿಕವಾದರೂ ಅಷ್ಟೇ. ಅಮೇರಿಕಾದಲ್ಲಿ ಜನ ಸಾಮಾನ್ಯ ಬೀದಿಗೆ ಇಳಿಯುತ್ತಿರುವುದು ಹೆಚ್ಚುತ್ತಿರುವ ಬೆಲೆಯ ಕಾರಣದಿಂದ ಎನ್ನುವುದನ್ನು ನಾವು ಮರೆಯಬಾರದು.

ಗಮನಿಸಿ ನೋಡಿ ಭಾರತದ ಷೇರು ಮಾರುಕಟ್ಟೆಯಿಂದ ಬಹಳಷ್ಟು ಹಣವನ್ನು ಹೂಡಿಕೆದಾರರು ತೆಗೆದು ಅದನ್ನು ಅಮೆರಿಕಕ್ಕೆ ಕಳುಹಿಸುತ್ತಿದ್ದಾರೆ. ಇದು ಕೂಡ ದಿನ ನಿತ್ಯ ಆಗುವ ರೊಟಿನ್. ಆದರೆ ಹಣ ಬರುವುದಕ್ಕಿಂತ ಹೊರಗೆ ಹೋಗುವುದು ಹೆಚ್ಚಾಗಿದೆ. ಹೀಗೆ ಹಣವನ್ನು ಹೊರಗೆ ಕಳುಹಿಸಲು ಬಯಸುವವರು ಡಾಲರಿನ ಮೂಲಕ ಕಳುಹಿಸಬೇಕಾಗುತ್ತದೆ. ಅವರು ಹಣವನ್ನು ಭಾರತದ ಒಳಗೆ ತಂದಾಗ ಅದನ್ನು ಭಾರತೀಯ ರುಪಾಯಿಗೆ ಬದಲಾಯಿಸಲಾಗುತ್ತದೆ. ಈಗ ವಾಪಸ್ಸು ಕಳಿಸುವಾಗ ಮತ್ತೆ ಅದನ್ನು ಡಾಲರಿಗೆ ಬದಲಿಸಬೇಕಾಗುತ್ತದೆ. ಕುಸಿದ ಭಾರತೀಯ ರೂಪಾಯಿ ಅವರಿಗೆ ದೊಡ್ಡ ಪೆಟ್ಟು ನೀಡುತ್ತದೆ. ಹಣವನ್ನು ಹೊರತೆಗೆಯದೇ ಭಾರತದಲ್ಲಿ ಉಳಿಸಿಕೊಳ್ಳುವಂತೆ ಅವರ ಮೇಲೆ ಒತ್ತಡ ಹೇರುತ್ತದೆ. ಹೇಗೆ ಎನ್ನುವುದನ್ನು ಉದಾಹರೆಣೆಯ ಮೂಲಕ ನೋಡೋಣ .

FDI ಮೂಲಕ 1 ಡಾಲರ್ ಭಾರತಕ್ಕೆ ಬಂದಿತು ಎಂದುಕೊಳ್ಳೋಣ. ಆಗ ಒಂದು ಡಾಲರಿಗೆ 83 ರೂಪಾಯಿ ಎಂದುಕೊಳ್ಳೋಣ. ಇದೀಗ ಅವರು ಈ ಹಣವನ್ನು ಮರಳಿ ಪಡೆದು ವಾಪಸ್ಸು ಕಳಿಸಬೇಕು. ಇಂದಿನ ದರ 91 ರೂಪಾಯಿ ಎಂದುಕೊಳ್ಳೋಣ. ಈ ಮಧ್ಯೆ ಅವರು ಹೂಡಿಕೆ ಮಾಡಿದ ಹಣದ ಮೇಲೆ 10 ಪ್ರತಿಶತ ಲಾಭವನ್ನು ಕೂಡ ಮಾಡಿದ್ದಾರೆ ಎಂದುಕೊಳ್ಳೋಣ. ಈಗ ಲೆಕ್ಕಾಚಾರ ಮಾಡೋಣ.

ಹೂಡಿಕೆ ಹಣ 1*83 = 83

ಲಾಭ 10% = 8.30

ಒಟ್ಟು ಹಣ = 91.30

ಇಂದಿನ ವಿನಿಮಯ ಹಣ 91. ಹೀಗಾಗಿ ಅವರು ಡಾಲರಿಗೆ ಕನ್ವರ್ಟ್ ಮಾಡಲು ಹೋದರೆ ಅವರಿಗೆ ಸಿಗುವುದು ಮತ್ತದೇ 1 ರೂಪಾಯಿ.30 ಪೈಸೆ ತೆರಿಗೆ ಮತ್ತಿತರ ಖರ್ಚುಗಳಿಗೆ ಹೋಗುತ್ತದೆ. ಕೆಲವೊಮ್ಮೆ ತೆರಿಗೆ ಕಟ್ಟಿದ ಮೇಲೆ ನಷ್ಟವಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಇಂತಹ ಸಮಯದಲ್ಲಿ ಹೂಡಿಕೆದಾರ ಹಣವನ್ನು ಮರಳಿ ಪಡೆಯಲು ಹಿಂಜರಿಯುತ್ತಾರೆ. ಏಕೆಂದರೆ ಲೆಕ್ಕಾಚಾರದಲ್ಲಿ ಲಾಭವಾಗಿದ್ದರೂ ರೂಪಾಯಿ ಕುಸಿತದ ಕಾರಣ ಅವರಿಗೆ ಯಾವ ಲಾಭವೂ ಆಗುವುದಿಲ್ಲ. ಹೀಗಾಗಿ ಅವರು ಕಾದು ನೋಡುವ ತಂತ್ರವನ್ನು ಅಳವಡಿಸಿಕೊಳ್ಳುತ್ತಾರೆ. ಇದೊಂದು ಎಫ್ ಡಿಐ ಉಳಿಸಿಕೊಳ್ಳುವ ಮೆಕ್ಯಾನಿಸಂ ಕೂಡ ಹೌದು. ತೀರಾ ಅಗ್ಗ್ರೆಸಿವ್ ಹೂಡಿಕೆದಾರರು ಹಣವನ್ನು ತೆಗೆದೇ ತೆಗೆಯುತ್ತಾರೆ, ಅದು ಇನ್ನೊಂದು ಕಥೆ.

Rupee falling against dollar (file photo)
ಉಳಿಸಬೇಕು ಎನ್ನುವುದು ಮನಸ್ಥಿತಿಯೇ ಹೊರತು ಆದಾಯಕ್ಕೆ ಸಂಬಂಧಿಸಿದ್ದಲ್ಲ! (ಹಣಕ್ಲಾಸು)

ಉಳಿದಂತೆ ಭಾರತದ ರಫ್ತು ಮಾರಾಟಗಾರರಿಗೆ ಬಹಳ ಲಾಭವಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಕೃಷಿ ಉತ್ಪನ್ನಗಳ ವಿಚಾರದಲ್ಲಿ ಮತ್ತು ಸೇವೆ ನೀಡುವ ಸಂಸ್ಥೆಗಳ ವಿಚಾರದಲ್ಲಿ ಸರಿ. ಉಳಿದಂತೆ ಇಲೆಕ್ಟ್ರಾನಿಕ್ ಮತ್ತಿತರ ಪದಾರ್ಥಗಳ ವಿಚಾರದಲ್ಲಿ ಇದು ಪೂರ್ಣ ನಿಜವಲ್ಲ. ಏಕೆಂದರೆ ಅವರು ಕೆಲವೊಂದು ಕಚ್ಚಾ ಪದಾರ್ಥವನ್ನು ಆಮದು ಮಾಡಿಕೊಂಡಿರುತ್ತಾರೆ. ಅಂದರೆ ಡಾಲರಿನಿಂದ ನಮಗೆ ಹಣ ಬರುವಾಗ ಲಾಭವಾಗುತ್ತದೆ. 83 ರೂಪಾಯಿ ಜಾಗದಲ್ಲಿ 91 ಸಿಕ್ಕರೆ ಪ್ರತಿ ಡಾಲರಿಗೆ 8 ರೂಪಾಯಿ ಏನೂ ಮಾಡದೆ ಲಾಭ ಸಿಕ್ಕಹಾಗೆ ಆಯ್ತು. ನಾವು ಡಾಲರಿನಲ್ಲಿ ಸಂದಾಯ ಮಾಡಬೇಕಾದರೆ ಇದು ನಷ್ಟದ ಬಾಬತ್ತು. ನಾವು ಒಂದು ಡಾಲರ್ ಕೊಡಬೇಕು. ಆದರೆ 83 ರ ಜಾಗದಲ್ಲಿ ಇವತ್ತು 91 ರೂಪಾಯಿ ನೀಡಿ ಡಾಲರ್ ಕೊಳ್ಳಬೇಕು. ಹೀಗಾಗಿ ಇದು 8 ರೂಪಾಯಿ ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ.

ಕೊನೆಮಾತು: ಇದು ದೇಶದ ಟ್ರೇಡ್ ಡೆಫಿಕ್ಟ್ ಅಡ್ಜಸ್ಟ್ ಮಾಡಿಕೊಳ್ಳಲು ಕೂಡ ಅವಶ್ಯಕವಾಗಿದೆ. ಹೀಗಾಗಿ ನಾವು ಇದನ್ನು ಕೇವಲ ಒಂದು ಆಯಾಮದಿಂದ ನೋಡಿ ಇದು ಸರಿ , ಇದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ ನಷ್ಟವೂ ಇದೆ. ಲಾಭವೂ ಇದೆ. ಇವತ್ತಿನ ದಿನದಲ್ಲಿ ಇದು ಹಿಂದಿನಂತೆ ಸಹಜವಾಗಿ ಆಗುತ್ತಿದ್ದ ಏರಿಳಿತವಾಗಿ ಉಳಿದಿಲ್ಲ. ಇದೊಂದು ಜಾಗತಿಕ ರಾಜಕೀಯ ರೂಪವನ್ನು ಪಡೆದುಕೊಂಡಿದೆ. ರೂಪಾಯಿ ಚೀಪ್ ಆದಾಗ ಅಮೆರಿಕನ್ ವ್ಯಾಪಾರಿಗಳು ಭಾರತದೊಂದಿಗೆ ವ್ಯಾಪಾರ ಮಾಡಲು ಮುಂದಾಗುತ್ತಾರೆ. ಭಾರತದ ಜೊತೆಗೆ ಈಗಾಗಲೇ ಟ್ರೇಡ್ ಡೆಫಿಸಿಟ್ ನಲ್ಲಿರುವ ಅಮೇರಿಕಾ ದೇಶಕ್ಕೂ ಇದು ಸಿಹಿ ಸುದ್ದಿಯಲ್ಲ. ಅದು ಆ ದೇಶಕ್ಕೂ ಪೆಟ್ಟು. ಹೀಗಾಗಿ ಭಾರತ ಸಹಜವಾಗಿ, ಅದ್ಯಾವ ರೂಪ ಪಡೆದುಕೊಳ್ಳುತ್ತದೆ ನೋಡೋಣ ಎನ್ನುವ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ರಿಸರ್ವ್ ಬ್ಯಾಂಕ್ ಏನೂ ಮಾಡದೆ ತಟಸ್ಥವಾಗಿದೆ. ಈ ಹಗ್ಗಜಗ್ಗಾಟದಲ್ಲಿ ರೂಪಾಯಿ ಇನ್ನಷ್ಟು ಕುಸಿತ ಕಾಣುವುದು ಖಚಿತ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com