

ಇನ್ನೇನು ಬ್ರಿಕ್ಸ್ ಕರೆನ್ಸಿ ಉಗಮವಾಯಿತು. ಡಾಲರಿನ ಪ್ರಾಬಲ್ಯವನ್ನು ಬ್ರಿಕ್ಸ್ ಕರೆನ್ಸಿ ಮುರಿಯಲಿದೆ ಎನ್ನುವ ಮಾತುಗಳ ಮಧ್ಯೆ ಭಾರತ ಬ್ರಿಕ್ಸ್ ಕರೆನ್ಸಿಯಿಂದ ವಿಮುಖವಾಗಿವುದು ಇಂದಿಗೆ ಹಳೆಯ ಸುದ್ದಿ.
ಬ್ರಿಕ್ಸ್ ಒಕ್ಕೂಟದ ಸದಸ್ಯ ರಾಷ್ಟ್ರಗಳು ಭಾರತದ ಮೇಲೆ ಮುನಿಸಿಕೊಂಡಿವೆ ಎನ್ನುವುದು ಕೂಡ ಹಳೆಯ ಸುದ್ದಿ. ಇವೆಲ್ಲವುಗಳ ನಡುವೆ ಸದ್ದಿಲ್ಲದೇ ಒಂದಷ್ಟು ಘಟನೆಗಳು ಜಾಗತಿಕ ಮಟ್ಟದಲ್ಲಿ ನಡೆದು ಹೋಗಿದೆ. ಚೀನಾ ಸದಾ ಕಾಲ ತೈವಾನ್ ದೇಶವನ್ನು ಚೀನಾದ ಒಂದು ಭಾಗ ಎಂದು ವಾದಿಸುತ್ತಾ ಬಂದಿದೆ. ಆದರೆ ಜಾಗತಿಕವಾಗಿ ಇದಕ್ಕೆ ಒಪ್ಪಿಗೆಯ ಮುದ್ರೆ ಬಿದ್ದಿಲ್ಲ. ಜಗತ್ತಿನ 60 ಪ್ರತಿಶತ ಸೆಮಿ ಕಂಡಕ್ಟರ್ಸ್ ಚಿಪ್ ತಯಾರು ಮಾಡುವುದು ತೈವಾನ್ , ಅತ್ಯಾಧುನಿಕ ಚಿಪ್ ತಯಾರಿಕೆಯಲ್ಲಿ ಜಗತ್ತಿನ 90 ಪ್ರತಿಶತ ತೈವಾನ್ ನಿಂದ ಬರುತ್ತದೆ ಎನ್ನುವುದು ಜಗತ್ತಿನಲ್ಲಿ ತೈವಾನ್ ಎನ್ನುವ ಪುಟ್ಟ ದೇಶದ ಮೇಲಿನ ಹಿಡಿತ ಅದೆಷ್ಟು ಮುಖ್ಯ ಎನ್ನುವುದನ್ನು ಹೇಳುತ್ತದೆ. ಇಂತಹ ತೈವಾನ್ ದೇಶವನ್ನು ಚೀನಾದ ಭಾಗ ಎಂದು ಒಪ್ಪಿಕೊಂಡರೆ ಸಾಕು ಭಾರತದೊಂದಿಗಿನ ಎಲ್ಲಾ ಸಣ್ಣಪುಟ್ಟ ತಕರಾರುಗಳನ್ನೂ ಬಗೆಹರಿಸಿಕೊಳ್ಳಬಹುದು ಎನ್ನುವ ಚೀನಾದ ಆಹ್ವಾನಕ್ಕೆ ಅಧಿಕೃತವಾಗಿ ಒಪ್ಪಿಗೆ ನೀಡದಿದ್ದರೂ ಭಾರತ ಅನಧಿಕೃತವಾಗಿ ಇದನ್ನು ಒಪ್ಪಿಕೊಂಡಿದೆ. ಶಾಂತವಾಗಿರುವ ನಮ್ಮ ಗಡಿ, ಯುನೈಟೆಡ್ ನೇಷನಿನಲ್ಲಿ ಭಾರತ ಅಮೇರಿಕಾ ವಿರುದ್ಧ ಗುಡುಗಿದಾಗ ಚೀನಾ ಭಾರತದ ಬೆಂಬಲಕ್ಕೆ ನಿಂತದ್ದು ಇವುಗಳನ್ನು ಪುಷ್ಟಿಕರಿಸುತ್ತದೆ. ತೆರೆಮರೆಯಲ್ಲಿ ಅಮೆರಿಕಾವನ್ನು ಕಟ್ಟಿಹಾಕಲು ಚೀನಾ, ಭಾರತ ಮತ್ತು ರಷ್ಯಾ ದೇಶಗಳು ತಮ್ಮ ನಡುವಿನ ಒಂದಷ್ಟು ವೈಮನಸ್ಯಗಳನ್ನು ಬದಿಗಿಟ್ಟು ಒಂದಾಗುತ್ತಿವೆ. ಕಳೆದ ವಾರ ರಷ್ಯಾದ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ ನೀಡಿ ಬಹಳಷ್ಟು ಒಡಂಬಡಿಕೆಗಳಿಗೆ ಸಹಿ ಮಾಡಿ ಹೋಗಿದ್ದಾರೆ.
ಭಾರತ ಬ್ರಿಕ್ಸ್ ಕರೆನ್ಸಿಗೆ ಇಲ್ಲ ಎಂದ ಮೇಲೂ ರಷ್ಯಾ ಮತ್ತು ಚೀನಾ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವುದು ಇದರಿಂದ ವೇದ್ಯವಾಯ್ತು. ಭಾರತ ಬ್ರಿಕ್ಸ್ ಕರೆನ್ಸಿಗೆ ನೋ ಎಂದದ್ದು ವಿರೋಧಿಸಲು ಅಲ್ಲ. ಅದಕ್ಕೆ ಸಾಕಷ್ಟು ಕಾರಣಗಳಿವೆ. ಬ್ರಿಕ್ಸ್ ಕರೆನ್ಸಿ ಗೆ ಒಪ್ಪಿಗೆ ನೀಡುವುದು ತಾತ್ಕಾಲಿಕವಾಗಿ ಎಲ್ಲರಿಗೂ ಜಯ ಸಿಕ್ಕಂತೆ, ಅಮೆರಿಕಕ್ಕೆ ಹೊಡೆತ ನೀಡಿದಂತೆ ಭಾಸವಾಗುತ್ತದೆ. ಆದರೆ ದೀರ್ಘಾವಧಿಯಲ್ಲಿ ಇದರಿಂದ ಅನಾನುಕೂಲ ಹೆಚ್ಚು. ಅವೇನು ಕಾರಣಗಳು? ಭಾರತವೇಕೆ ಸ್ಪಷ್ಟ ಧ್ವನಿಯಲ್ಲಿ ಬ್ರಿಕ್ಸ್ ಕರೆನ್ಸಿ ಬೇಡವೆಂದಿತು? ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಎಲ್ಲಕ್ಕೂ ಮೊದಲಿಗೆ ಭಾರತದ ರೂಪಾಯಿ ಜಾಗತಿಕ ಮಟ್ಟದಲ್ಲಿ ಟ್ರೇಡ್ ಆಗುವುದಿಲ್ಲ. ವ್ಯಾಪಾರ ಬಿಡಿ, ಪ್ರವಾಸಿಯಾಗಿ ಹೋದರೂ ಬೇರೆ ದೇಶಗಳಲ್ಲಿ ರೂಪಾಯಿ ಕೊಟ್ಟು ಆ ದೇಶದ ಹಣವನ್ನು ಪಡೆಯಲು ಸಾಧ್ಯವಿಲ್ಲ. ಅಂದರೆ ಫಾರಿನ್ ಎಕ್ಸ್ಚೇಂಜ್ ಡಾಲರಿನಲ್ಲಿ ಆಗುತ್ತದೆ. ಇವತ್ತಿಗೆ ಬೆರೆಳೆಣಿಕೆ ದೇಶಗಳಲ್ಲಿ ಭಾರತದ ರೂಪಾಯಿ ಬದಲಾಯಿಸಿಕೊಳ್ಳಬಹುದು. ಇನ್ನು ವ್ಯಾಪಾರದ ಲೆಕ್ಕಾಚಾರದಲ್ಲಿ ರೂಪಾಯಿ ಜಾಗತಿಕ ಮಾನ್ಯತೆ ಪಡೆದುಕೊಂಡಿಲ್ಲ ಎನ್ನುವುದು ಸತ್ಯ. ಹೀಗಾಗಿ ಬ್ರಿಕ್ಸ್ ಕರೆನ್ಸಿ ಜಾರಿಗೆ ಬಂದರೆ ಅದು ಚೀನಾದ ಹಣ, ಇಲ್ಲವೇ ರಷ್ಯಾದ ಹಣ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್ ಹಣವನ್ನು ಮೂಲವನ್ನಾಗಿಸಿ ಬ್ರಿಕ್ಸ್ ಹಣದ ಮೌಲ್ಯ ನಿರ್ಧಾರವಾಗುತ್ತದೆ. ಇದು ಭಾರತದ ಹಣದ ಮೌಲ್ಯವನ್ನು ಕುಗ್ಗಿಸುತ್ತದೆ. ಯಾವ ದೇಶದ ಹಣವನ್ನು ಮೂಲವನ್ನಾಗಿಸಿ ಅಂದರೆ ಬೇಸ್ ಆಗಿ ಇಟ್ಟು ಕೊಳ್ಳುತ್ತೇವೆ ಆ ದೇಶದ ಕೈಯಲ್ಲಿ ಹೆಚ್ಚಿನ ಅಧಿಕಾರ ಉಳಿದುಕೊಳ್ಳುತ್ತದೆ. ಹೀಗಾಗಿ ಭಾರತ ಬ್ರಿಕ್ಸ್ ಕರೆನ್ಸಿಗೆ ನೋ ಎಂದಿದೆ.
ಎರಡನೇಯದಾಗಿ ಬ್ರಿಕ್ಸ್ ಇಂದಿಗೆ 11 ದೇಶಗಳನ್ನು ಒಳಗೊಂಡಿದೆ. ಜಗತ್ತಿನ 45 ಪ್ರತಿಶತ ಜನಸಂಖ್ಯೆ ಮತ್ತು ಜಿಡಿಪಿಯ 35 ಪ್ರತಿಶತ ಈ ಬ್ರಿಕ್ಸ್ ದೇಶಗಳಿಂದ ಬರುತ್ತದೆ. ಇದು ದೊಡ್ಡ ಸಂಖ್ಯೆ. ಹೀಗಾಗಿ ಬ್ರಿಕ್ಸ್ ಕರೆನ್ಸಿಗೆ ಭಾರತ ನೋ ಎಂದು ತಪ್ಪು ಮಾಡಿತು ಎನ್ನಿಸುತ್ತದೆ. ಆದರೆ ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕು. ಒಂದು ದೇಶದ ಕರೆನ್ಸಿ ಮೌಲ್ಯ ನಿರ್ಧಾರವಾಗುವುದು ಆ ದೇಶದ ಅಭಿವೃದ್ಧಿಯ ಮೇಲೆ. ಇಲ್ಲಿನ ಹನ್ನೊಂದು ದೇಶದಲ್ಲಿ ಯಾವ ದೇಶದಲ್ಲಿ ಯಾವುದೇ ಕಾರಣಕ್ಕೆ ಹಿಂಜರಿತ ಉಂಟಾದರೆ ಅದು ಪೂರ್ಣ ಬ್ರಿಕ್ಸ್ ಕರೆನ್ಸಿಯ ಮೌಲ್ಯದ ಮೇಲೆ ಹೊಡೆತ ಬೀಳುತ್ತದೆ. ಅಂದರೆ ಭಾರತದ ಆರ್ಥಿಕತೆ ತುಂಬಾ ಚನ್ನಗಿದ್ದರೂ, ಚೀನಾ, ರಷ್ಯಾ ಅಥವಾ ಈಜಿಪ್ಟಿನ ಆರ್ಥಿಕತೆ ನೆಲ ಕಚ್ಚಿದರೆ ಅದು ಭಾರತದ ಆರ್ಥಿಕತೆಗೂ ಹೊಡೆತ ಬೀಳುತ್ತದೆ. ಈಗಷ್ಟೆ ಜಾಗತಿಕವಾಗಿ ಒಂದು ಶಕ್ತಿಯಾಗಿ ಹೊರ ಹೊಮ್ಮುತ್ತಿರುವ ಭಾರತಕ್ಕೆ ಇದು ತೊಡಕಾಗುತ್ತದೆ. ಹೀಗಾಗಿ ಭಾರತ ನೋ ಎಂದಿದೆ.
ಮೂರನೆಯದಾಗಿ ಇಲ್ಲಿನ ಹನ್ನೊಂದು ದೇಶಗಳ ನಡುವಿನ ರಾಜತಾಂತ್ರಿಕ ಒಪ್ಪಂದಗಳು ಅದ್ಬುತವಾಗೇನೂ ಇಲ್ಲ. ನಾವು ರಷ್ಯಾದೊಂದಿಗೆ ಮಾತ್ರ ಒಳ್ಳೆಯ ಸಂಬಂಧವನ್ನು ಹೊಂದಿದ್ದೇವೆ. ಉಳಿದಂತೆ ಬೇರೆಲ್ಲಾ ದೇಶಗಳ ನಡುವಿನ ಒಪ್ಪಂದಗಳು ವ್ಯಾವಹಾರಿಕ ಒಪ್ಪಂದಗಳು. ಇವತ್ತಿನ ಸಮಸ್ಯೆಯನ್ನು ಪರಿಹರಿಸಬೇಕು, ಅಮೆರಿಕಾವನ್ನು ಮಟ್ಟ ಹಾಕಬೇಕು ಎನ್ನುವ ಉದ್ದೇಶದಿಂದ ಯಸ್ ಎಂದರೆ ಅದು ನಾಳೆ ಇನ್ನೊಂದು ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಭಾರತ ನೋ ಎಂದಿದೆ.
ನಾಲ್ಕನೆಯದಾಗಿ ಭೌಗೋಳಿಕವಾಗಿ ಈ ಎಲ್ಲಾ ದೇಶಗಳು ಅಕ್ಕಪಕ್ಕದಲಿಲ್ಲ, ರಾಜಕೀಯ ಕಾರಣಗಳನ್ನು ಹೊರತುಪಡಿಸಿ ಕೂಡ ಆಯಾ ದೇಶದಲ್ಲಿ ಆಗುವ ಆಂತರಿಕ ಬದಲಾವಣೆಗಳು ಕೂಡ ಬ್ರಿಕ್ಸ್ ಕರೆನ್ಸಿ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಈಜಿಪ್ಟಿನಲ್ಲಿ ಹಣದುಬ್ಬರ ಹೆಚ್ಚಾದರೆ ಬಡ್ಡಿಯ ದರವನ್ನು ಬದಲಿಸಬೇಕಾಗುತ್ತದೆ. ಅದು ಈಜಿಪ್ಟಿನ ಆರ್ಥಿಕತೆಗೆ ಅವಶ್ಯಕವಾಗಿರುತ್ತದೆ. ಆದರೆ ಈ ರೀತಿಯ ಬಡ್ಡಿ ಬದಲಾವಣೆ ಭಾರತದ ಆರ್ಥಿಕತೆಗೆ ಬೇಕಿರುವುದಿಲ್ಲ. ಅಥವಾ ಚೀನಾಕ್ಕೆ ಬೇಕಿರುವುದಿಲ್ಲ. ಅರ್ಥ ಪ್ರತಿ ದೇಶದ ಆರ್ಥಿಕತೆಯ ಓಟ ಬೇರೆ ಬೇರೆ, ಹಣದುಬ್ಬರ ಬೇರೆ ಬೇರೆ, ಅದಕ್ಕೆ ತಕ್ಕಂತೆ ವಿತ್ತ ನೀತಿಗಳನ್ನು ಬದಲಿಸುತ್ತಿರಬೇಕು. ಒಕ್ಕೂಟದಲ್ಲಿ ಇಂತಹ ಬದಲಾವಣೆ ಕಷ್ಟ. ಡಾಲರಿಗೆ ಸೆಡ್ಡು ಹೊಡಯಬೇಕು ಎನ್ನುವ ಕಾರಣಕ್ಕೆ ಉದಯವಾದ ಯುರೋ ಏನಾಗಿದೆ? ಅಲ್ಲಿ ಯಾವೆಲ್ಲಾ ಸಮಸ್ಯೆಗಳಿವೆ ಎನ್ನುವುದು ಭಾರತಕ್ಕೆ ಗೊತ್ತಿದೆ. ಅದಕ್ಕೆ ಬ್ರಿಕ್ಸ್ ಕರೆನ್ಸಿಗೆ ನೋ ಎಂದಿದೆ.
ಐದನೆಯದಾಗಿ, ಭಾರತ ತನ್ನ ಬ್ರಿಕ್ಸ್ ಸದಸ್ಯ ದೇಶಗಳ ಮೇಲೆ ಹೆಚ್ಚು ಅವಲಂಬಿತವಾಗುತ್ತದೆ. ಎಲ್ಲಾ ನಿರ್ಣಯಗಳನ್ನೂ ಒಟ್ಟಾಗಿ ತೆಗೆದುಕೊಳ್ಳಬೇಕು ಎನ್ನುವ ಕಟ್ಟುಪಾಡಿಗೆ ಒಳಪಡುತ್ತದೆ. ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತದ ಅಭಿವೃದ್ಧಿ ಓಟಕ್ಕೆ ಇದು ಸ್ಪೀಡ್ ಬ್ರೇಕ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಸರಳವಾಗಿ ಹೇಳಬೇಕೆಂದರೆ ನಾವು ನಮ್ಮ ನಿರ್ಧಾರದ ಸ್ವಾತಂತ್ರ್ಯವನ್ನು ಬಹಳಷ್ಟು ಮಟ್ಟಿಗೆ ಕಳೆದುಕೊಳ್ಳುತ್ತೇವೆ.
ಆರನೆಯದಾಗಿ ಮೊದಲೇ ಹೇಳಿದಂತೆ ಭಾರತ ಬ್ರಿಕ್ಸ್ ಒಕ್ಕೂಟದಲ್ಲಿ ಇಂದಿಗೆ ಮೂರನೆಯ ಅಥವಾ ನಾಲ್ಕನೆಯ ಸ್ಥಾನದಲ್ಲಿದೆ. ಇದು ದೇಶದ ಹಣವನ್ನು ಜಾಗತಿಕ ಹಣದ ರೂಪದಲ್ಲಿ ನೋಡಿದಾಗ ಕಂಡು ಬರುವ ಅಂಶ. ಬ್ರಿಕ್ಸ್ ಕರೆನ್ಸಿ ಗೆ ಯೆಸ್ ಅಂದರೆ ಭಾರತ ಈ ಸ್ಥಾನದಿಂದ ಮೇಲೇರುವ ಸಾಧ್ಯತೆಗಳಿಗೆ ತೆರೆ ಬೀಳುತ್ತದೆ. ನಾವು ಕೆಳಗಿರುವಾಗ ಇಂತಹ ಒಪ್ಪಂದಗಳನ್ನು ಮಾಡಿಕೊಂಡರೆ ಅದು ನಮಗೆ ನಷ್ಟ ಉಂಟು ಮಾಡುತ್ತದೆ. ಶಕ್ತಿಶಾಲಿ ಸದಸ್ಯ ರಾಷ್ಟ್ರಗಳ ಕೈಗೆ ನಿರ್ಧಾರ ಮಾಡುವ ಅಧಿಕಾರ ನಾವು ನೀಡಿದಂತಾಗುತ್ತದೆ. ಆರ್ಥಿಕತೆಯ ಲೆಕ್ಕಾಚಾರದಲ್ಲಿ ನಮ್ಮ ಮುಂದೆ ಮಗುವಿನಂತಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ಈ ವಿಚಾರದಲ್ಲಿ ನಮಗಿಂತ ಒಂದು ಹೆಜ್ಜೆ ಮುಂದೆ ನಿಂತಿರುತ್ತದೆ. ನಮಗೆ ಒಳ್ಳೆಯ ಡೀಲ್ ಸಿಗುವುದಿಲ್ಲ. ಇದು ಭಾರತಕ್ಕೆ ಗೊತ್ತಿದೆ. ಅದಕ್ಕೆ ನೋ ಎಂದಿದೆ.
ಹೀಗೆ ಇನ್ನೂ ಅನೇಕ ಕಾರಣಗಳನ್ನು ಪಟ್ಟಿ ಮಾಡಬಹುದು. ಕೊನೆಯದಾಗಿ ಇಲ್ಲಿನ ಯಾವ ದೇಶಗಳೂ ಒಂದಕ್ಕೊಂದು ಸಾಮ್ಯತೆಯನ್ನು ಹೊಂದಿಲ್ಲ. ಯಾವುದೇ ಒಂದು ಒಕ್ಕೂಟ ಬಲಿಷ್ಠವಾಗಿ ಉಳಿದುಕೊಳ್ಳಬೇಕು ಎಂದರೆ ಒಂದಷ್ಟು ಸಾಮಾನ್ಯ ಅಂಶಗಳು ಇರಬೇಕು. ಡಾಲರಿನ ಮೇಲಿನ ಕೋಪವನ್ನು ಬಿಟ್ಟು ಬೇರಾವ ಸಾಮಾನ್ಯ ಅಂಶವೂ ಇಲ್ಲಿಲ್ಲ. ಇದು ಒಕ್ಕೂಟವನ್ನು ಬಹಳಷ್ಟು ಕಾಲ ಹಿಡಿಟ್ಟುಕೊಳ್ಳುವುದಿಲ್ಲ. ಇದು ಭಾರತಕ್ಕೆ ಗೊತ್ತಿದೆ. ಅದಕ್ಕೆ ನೋ ಎಂದಿದೆ.
ಕೊನೆಮಾತು: ಚೀನಾ, ರಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತಿತರ ಸದಸ್ಯ ರಾಷ್ಟ್ರಗಳಿಗೆ ಭಾರತ ಈ ನಿಲುವು ಬೇಸರ ತರಿಸಿಲ್ಲ. ಅವುಗಳಿಗೂ ಈ ಎಲ್ಲ ಅಂಶಗಳು ಗೊತ್ತಿವೆ. ಭಾರತ ಭಾವನಾತ್ಮಕ ನಿರ್ಧಾರ ತೆಗೆದುಕೊಂಡಿದ್ದರೆ ಆಗ ಅದು ಆಶ್ಚರ್ಯ ತರಿಸುತ್ತಿತ್ತು. ಎಲ್ಲಾ ದೇಶಗಳೂ ತಮ್ಮ ಆರ್ಥಿಕತೆಯ ಮೂಗುದಾರವನ್ನು ತಾವೇ ಹಿಡಿದುಕೊಂಡು ಕೂಡ ಡಾಲರಿನ ಡಾಮಿನೆನ್ಸಿಗೆ ಕಡಿವಾಣ ಹಾಕಬಹುದು ಎನ್ನುವ ಭಾರತದ ನಿಲುವು ಎಲ್ಲರಿಗೂ ಒಪ್ಪಿಗೆಯಾಗಿದೆ. ಬ್ರಿಕ್ಸ್ ಕರೆನ್ಸಿ ಬದಲು ಬ್ರಿಕ್ಸ್ ಒಕ್ಕೂಟದಲ್ಲಿ ವ್ಯಾಪಾರ ಮಾಡಿದಾಗ ಆಯಾ ದೇಶದ ಹಣವನ್ನು ಬಳಸುವುದು ಎನ್ನುವ ಭಾರತ ನಿಲುವು ಬಲ ಪಡೆದುಕೊಂಡಿದೆ. ಉದಾಹರಣೆಗೆ ರಷ್ಯಾ ಮತ್ತು ಭಾರತದ ನಡುವೆ ವ್ಯಾಪಾರವಾದಾಗ ರೂಪಾಯಿಯಲ್ಲಿ ಮತ್ತು ರೊಬೆಲ್ ನಲ್ಲಿ ಸಂದಾಯ ಮಾಡುವುದು ಬ್ರಿಕ್ಸ್ ಕರೆನ್ಸಿ ಗಿಂತ ಉತ್ತಮ. ಭಾರತ ರಷ್ಯಾದಿಂದ ವಸ್ತು ಖರೀದಿಸಿ ಅದಕ್ಕೆ ಹಣ ಸಂದಾಯ ರೂಪಾಯಿಯಲ್ಲಿ ಮಾಡುತ್ತದೆ. ರಷ್ಯಾ ಖರೀದಿ ಮಾಡಿದಾಗ ರೊಬೆಲ್ ನಲ್ಲಿ ಹಣ ಪಾವತಿಸುತ್ತದೆ. ನಿಜ ಹೇಳಬೇಕು ಅಂದರೆ ಟ್ರೇಡ್ ಅಕೌಂಟ್ ಇಟ್ಟುಕೊಂಡು ಬಹಳಷ್ಟು ವೇಳೆ ನಿಜವಾದ ಹಣದ ವರ್ಗಾವಣೆ ಇಲ್ಲದೆ ಹಳೆಯ ಕಾಲದ ಬಾರ್ಟರ್ ಸಿಸ್ಟಮ್ ನಂತೆ ಕೂಡ ಇದು ಕಾರ್ಯ ನಿರ್ವಹಿಸಬಹುದು. ವರ್ಷಕ್ಕೊಮ್ಮೆ ಅಕೌಂಟ್ ಸೆಟಲ್ ಮಾಡಿಕೊಂಡರೆ ಆಯ್ತು. ಎಲ್ಲಾ ದೇಶಗಳೂ ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಕೂಡ ಡಾಲರಿಗೆ ನೋ ಎನ್ನಬಹುದು. ಹೀಗಾಗಿ ಭಾರತ ಬ್ರಿಕ್ಸ್ ಕರೆನ್ಸಿಗೆ ನೋ ಎಂದಿದೆ.
Advertisement