

ನೀವು ಕೆಲವೊಂದಿಷ್ಟು ವಾದಗಳನ್ನು ಕೇಳಿರುತ್ತೀರಿ.
ಭಾರತಕ್ಕೆ ಇತಿಹಾಸ ಪ್ರಜ್ಞೆಯೇ ಇಲ್ಲ. ಭಾರತೀಯರು ತಮ್ಮದು ಸಹಸ್ರಮಾನಗಳ ಇತಿಹಾಸ ಎದು ಹೇಳಿಕೊಳ್ಳುತ್ತಾರಾದರೂ ಅವನ್ನು ‘ಆಧಾರ’ಸಹಿತವಾಗಿ ನಿರೂಪಿಸಿಯೇ ಇಲ್ಲ. ರಾಮಾಯಣ ಅಂತಾರೆ, ಮಹಾಭಾರತ ಅಂತಾರೆ, ಪುರಾಣದಲ್ಲಿ ರಾಜರ ವಂಶಾವಳಿಗಳು ಬಂದಿವೆ ಅಂತಾರೆ… ಆದರೆ, ಅವೆಲ್ಲ ಕತೆಗಳು. ಅವುಗಳಲ್ಲಿ ಇತಿಹಾಸ ಹುಡುಕೋದಕ್ಕಾಗುವುದಿಲ್ಲ. ಎಲ್ಲಿವೆ ಉತ್ಖನನದ ಸಾಕ್ಷಿಗಳು? ಎಲ್ಲಿವೆ ಶಾಸನಗಳು? ರಾಮಾಯಣ-ಮಹಾಭಾರತ ಪುರಾಣಗಳೆಲ್ಲ ಯಾವಾಗಿನಿಂದಲೋ ಬಾಯಿಂದ ಬಾಯಿಗೆ ಹರಿದುಬಂದು ಕೆಲವೇ ಶತಮಾನಗಳ ಹಿಂದಷ್ಟೇ ಬರವಣಿಗೆಯಲ್ಲಿ ಇಡಲ್ಪಟ್ಟವು. ಹಾಗೆ ಇಡುವ ಹೊತ್ತಿಗೆ ಅವೆಷ್ಟೋ ಭಾಗ ಸೇರ್ಪಡೆಯಾಗಿದ್ದಿರಬಹುದು. ಅವೆಲ್ಲದರ ಪ್ರಾಚೀನತೆಗೆ ಏನು ಸಾಕ್ಷ್ಯ?... ಹೀಗೆಲ್ಲ ಇರುತ್ತದೆ ಆ ವಾದಸರಣಿಯ ಜಾಡು.
ಈಗಿನ ಆಧುನಿಕ ಶಿಕ್ಷಣದ ಪಾಕದಲ್ಲಿ ಹದಗೊಂಡವರಿಗೆ, ಇದು ಹೌದಲ್ಲ ಅಂತಲೂ ಅನಿಸಿಬಿಡುತ್ತದೆ. ಆದರೆ, ಇದೇ ತಾರ್ಕಿಕತೆ, ಆಧಾರಬದ್ಧತೆ ಇತ್ಯಾದಿಗಳನ್ನೆಲ್ಲ ಪಾಶ್ಚಾತ್ಯ ಇತಿಹಾಸಕ್ಕೆ ಅನ್ವಯಿಸಿದ್ದೇ ಆದರೆ ಅದರ ಆಧಾರವೇ ಅಲ್ಲಾಡಿಬಿಡುತ್ತದೆ. ಏಕೆಂದರೆ, ಇದೇ ಶಾಸನಗಳು, ಐತಿಹಾಸಿಕ ವ್ಯಕ್ತಿಯೊಬ್ಬನ ಜೀವಿತ ಕಾಲದಲ್ಲಿ ಬರೆಯಲಾದಂಥ ದಿನಚರಿ ಇಂಥವು ಮಾತ್ರವೇ ಆಧಾರ ಎನ್ನುವುದಾದರೆ ಏಸು ಕ್ರಿಸ್ತ ಅರ್ಥಾತ್ ಜೀಸಸ್ ಐತಿಹಾಸಿಕತೆಯನ್ನು ಸಹ ನಿರೂಪಿಸಲಾಗುವುದಿಲ್ಲ. ಇದರರ್ಥ, ಜೀಸಸ್ ಎಂಬ ವ್ಯಕ್ತಿಯೇ ಇರಲಿಲ್ಲ ಎಂದಲ್ಲ. ಆದರೆ, ಆ ವ್ಯಕ್ತಿಯ ಐತಿಹಾಸಿಕ ಪ್ರಾಮುಖ್ಯವನ್ನು ನಿರೂಪಿಸುವುದಕ್ಕೆ ಬೈಬಲ್ ಕತೆಗಳೇ ಆಧಾರವೇ ಹೊರತು ಅದಕ್ಕೆ ಮೀರಿ ಅವತ್ತಿನ ರೋಮನ್ ಸಾಮ್ರಾಜ್ಯದ ಆಡಳಿತಾತ್ಮಕ ದಾಖಲೆಯೇನೋ ಉಳಿದುಕೊಂಡಿದೆ ಎಂದೇನಿಲ್ಲ. ಕ್ರಿಸ್ಮಸ್ ಎದುರಲ್ಲಿ ಹೀಗೊಂದು ಐತಿಹಾಸಿಕ ಪರಿಪ್ರೇಕ್ಷವನ್ನು ಅರ್ಥಮಾಡಿಕೊಳ್ಳುವುದಕ್ಕೆ, ಐತಿಹಾಸಿಕವಾಗಿ ಜೀಸಸ್ ಏನು ಎಂಬುದರ ಬಗ್ಗೆ ವಿಶ್ಲೇಷಿಸೋಣ.
ಈ ಕ್ರೈಸ್ತಮತ ಎಂಬುದಕ್ಕೆ ಒಂದು ರೂಪು ಬಂದಿದ್ದು, ಚರ್ಚುಗಳು ಪ್ರವರ್ಧಮಾನಕ್ಕೆ ಬರತೊಡಗಿದ್ದು ಎರಡನೇ ಶತಮಾನದ ನಂತರ. ವಾಸ್ತವದಲ್ಲಿ ಜೀಸಸ್ ಜೀವಿಸಿದ್ದ ಸಮಯದಲ್ಲಿ ಹೊಸಮತವೊಂದು ಉದಯಿಸಲೇ ಇಲ್ಲ. ಯಹೂದಿಯಾಗಿ ಆ ಮತದ ಸುಧಾರಣೆ ಮತ್ತು ಪ್ರವರ್ಧಮಾನದ ಬಗ್ಗೆ ಜೀಸಸ್ ಮಾತಾಡಿದ್ದೇ ಹೊರತು ಹೊಸಮತದ ಸಂಸ್ಥಾಪಕರಾಗಿ ತಮ್ಮನ್ನು ಪ್ರಸ್ತುತಪಡಿಸಿಕೊಂಡಿರಲೇ ಇಲ್ಲ. ಜೀಸಸ್ ನಂತರದ ಹನ್ನೆರಡು ಜನರ ‘ಅಪೊಸ್ಟಲ್’ ವ್ಯವಸ್ಥೆ ನೀಡಿದ ವ್ಯಾಖ್ಯಾನಗಳ ಮೇಲೆ ಕ್ರೈಸ್ತ ಮತ ರೂಪುಗೊಂಡಿದೆ. ಈ ಅಪೊಸ್ಟಲ್ ಎಂಬ ಶಬ್ದಕ್ಕೆ ಕೇವಲ ಕ್ರೈಸ್ತನ ಅನುಯಾಯಿ ಎಂದಲ್ಲದೇ, ಸಂದೇಶ ಬಿತ್ತರಿಸುವುದಕ್ಕೆ ಜೀಸಸ್ ರಿಂದ ಕಳುಹಿಸಲ್ಪಟ್ಟವರು, ಕ್ರೈಸ್ತ ಪ್ರತಿನಿಧಿಗಳು ಎಂಬರ್ಥವಿದೆ.
ಈ ಹನ್ನೆರಡು ಮಂದಿ ಅಪೊಸ್ಟಲ್ ವ್ಯಕ್ತಿಗಳು ಜೀಸಸ್ ಬಗ್ಗೆ ಏನು ಹೇಳಿದ್ದಾರೋ ಅವುಗಳ ಆಧಾರದಲ್ಲಿಯೇ ವಿಶ್ಲೇಷಕರು ಐತಿಹಾಸಿಕ ಕಥಾನಕವೊಂದನ್ನು ಪ್ರಸ್ತುತಗೊಳಿಸಿದ್ದಾರೆ. ಜೀಸಸ್ ಅವರನ್ನು ಶಿಲುಬೆಗೇರಿಸಿದ್ದು 30-33ರ ಕಾಮನ್ ಎರಾ ನಡುವೆ ಇದ್ದಿರಬಹುದೆಂದು ವಿಶ್ಲೇಷಿಸಲಾಗಿದೆ. ಹಾಗೆಂದು ಈ ಹೇಳಿಕೆಗಳೆಲ್ಲ ಪ್ರಮುಖ ಅಪೊಸ್ಟಲ್ ವ್ಯಕ್ತಿಗಳೆಲ್ಲ ನೇರವಾಗಿ ದಾಖಲಿಸಿದ್ದೂ ಅಲ್ಲ. ಪ್ರಮುಖವಾಗಿ ಮಾರ್ಕ್, ಮ್ಯಾಥ್ಯೂ, ಲೂಕ್, ಜಾನ್ ಎಂಬ ಅಪೊಸ್ಟೊಲ್ ಹಾಗೂ ಆ ವಲಯಕ್ಕೆ ಸೇರಿರುವ ವ್ಯಕ್ತಿಗಳು ಹೇಳಿರುವ ಆಧಾರದಲ್ಲಿ, ಅವುಗಳನ್ನೆಲ್ಲ ಸಂಗ್ರಹಿಸಿ ಮತ್ಯಾರೋ ಅಕ್ಷರ ರೂಪದಲ್ಲಿರಿಸಿರುವ ದಾಖಲೆಗಳು ಅವು. ಅವನ್ನು ಗಾಸ್ಪೆಲ್ಸ್ ಅರ್ಥಾತ್ ‘ಒಳ್ಳೆ ಸುದ್ದಿ’ ಎನ್ನುತ್ತಾರೆ. ಜೀಸಸ್ ಶಿಲುಬೆಗೇರಿ 40 -70 ವರ್ಷಗಳು ಸಂದುಹೋಗಿರುವ ಅವಧಿಯಲ್ಲಿ ಈ ಗಾಸ್ಪೆಲ್ಸ್ ಹುಟ್ಟಿಕೊಂಡಿದೆ. ಹೀಗಾಗಿ ಬೇರೆ ಬೇರೆ ಅಪೊಸ್ಟಲ್ ವಿವರಣೆಗಳ ನಡುವೆ ಹಲವಷ್ಟು ವ್ಯತ್ಯಾಸವೆನಿಸುವ ಘಟನೆಗಳೂ ಇವೆ. ಅಲ್ಲದೇ ಇವೆಲ್ಲ ರಚನೆಯಾಗಿದ್ದು ಪ್ಯಾಲಸ್ತೀನ್ ಪ್ರದೇಶದಿಂದ ಹೊರಗೆ, ಗ್ರೀಕ್ ಭಾಷೆಯಲ್ಲಿ. ಜೀಸಸ್ ಮತ್ತು ಅವರ ಕಾಲದ ಸಹವರ್ತಿಗಳು ಮಾತನಾಡುತ್ತಿದ್ದದ್ದು ಅರಾಮೈಕ್ ಭಾಷೆಯಲ್ಲಿ. ಹೀಗಾಗಿ ಮಾಹಿತಿ ಸಂಕ್ಷೇಪ, ಕ್ರೋಢೀಕರಣಗಳಲ್ಲಿ ಆಗಬಹುದಾದ ವ್ಯತ್ಯಾಸಗಳು ಇದ್ದದ್ದೇ.
ಇತಿಹಾಸಕಾರರು ಸಹ ಇವನ್ನೆಲ್ಲ ಹಾಗೆಯೇ ತೆಗೆದುಕೊಂಡಿದ್ದಾರೆ ಎಂದೇನಿಲ್ಲ. ಐತಿಹಾಸಿಕ ಜೀಸಸ್ ಅನ್ನು ಪ್ರಸ್ತುತಗೊಳಿಸಬೇಕಾದರೆ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಉದಾಹರಣೆಗೆ, ಗಾಸ್ಪೆಲ್ಸ್ ನಲ್ಲಿ ಹೇಳಲಾದ ವಿವರಣೆಗಳು ಒಂದನೇ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದ ಅಡಿಯಲ್ಲಿದ್ದ ಯಹೂದಿ ಪ್ರದೇಶಗಳ ಸ್ಥಿತಿಗತಿಗೆ ಹೊಂದಿರದೇ ಇದ್ದರೆ ಅಂಥವನ್ನು ಕೈಬಿಡಲಾಗಿದೆ. ಜೀಸಸ್ ಕಾಲದ ಎಷ್ಟೋ ವರ್ಷಗಳ ನಂತರ ಹುಟ್ಟಿಕೊಂಡ ಬೈಬಲ್ಲಿನ ಹೊಸ ಅವತರಣಿಕೆಯಲ್ಲಿನ ಕಾರ್ಯಸೂಚಿಗಳಿಗೆ ತುಂಬ ಹೊಂದಿಸಿ ಬರೆದಂತೆ ಕಾಣುವ ಭಾಗಗಳನ್ನು ಕೈಬಿಡಲಾಗಿದೆ. ಏಕೆಂದರೆ ಇಂಥ ಗಾಸ್ಪೆಲ್ಸ್ ಭಾಗಗಳು ನಂತರ ಸೇರಿಸಿದ್ದು ಎಂಬ ಅನುಮಾನವಿರುವುದರಿಂದ.
ಹೀಗೆ ಪವಾಡ ಮತ್ತು ಉತ್ಪ್ರೇಕ್ಷಿತ ವಿವರಗಳನ್ನೆಲ್ಲ ಬದಿಗಿರಿಸಿ ಐತಿಹಾಸಿಕ ಎನ್ನಬಹುದಾದ ಜೀಸಸ್ ಚಿತ್ರಣದಿಂದ ನಮಗೆ ಸಿಗುವ ಅಚ್ಚರಿಯ ಅಂಶ ಏನೆಂದರೆ, ರೋಮನ್ನರು ಜೀಸಸ್ ಅನ್ನು ಶಿಲುಬೆಗೇರಿಸಿದ್ದು ಆತ ಯಹೂದಿಗಳ ರಾಜ್ಯಕ್ಕೆ ಹೊಸ ನಾಯಕ ಎಂದು ತೋರ್ಪಡಿಸಿಕೊಳ್ಳುವುದಕ್ಕೆ ಹೊರಟಿದ್ದರೆಂಬ ಹೆದರಿಕೆಗೆ. ಕ್ರೈಸ್ತ ಯಹೂದಿಯಾಗಿ ಹುಟ್ಟಿದ್ದು. ಜೀವಿತಾವಧಿಯಲ್ಲಿ ಬೋಧಿಸಿದ್ದು ಯಹೂದಿಗಳಿಗೇ. ಯಹೂದಿ ತೋರಾ ಕಾಯ್ದೆಗಳನ್ನು ಅನುಸರಿಸಿ, ಅವತ್ತಿನ ಯಹೂದಿ ದೇವಾಲಯಕ್ಕೂ ನಡೆದುಕೊಳ್ಳುತ್ತಿದ್ದ ವ್ಯಕ್ತಿ ಜೀಸಸ್. ವಾಸ್ತವದಲ್ಲಿ ಕ್ರೈಸ್ತಮತ ಎಂಬುದೊಂದು ಕಲ್ಪನೆಯೇ ಜೀಸಸ್ ಕಾಲಾವಧಿಯಲ್ಲಿ ಇದ್ದಿರಲಿಲ್ಲ, ಇನ್ನು ಮತಾಂತರದ ಕಲ್ಪನೆಯಂತೂ ದೂರವೇ ಉಳಿಯಿತು. ಯಹೂದಿ ಪರಂಪರೆಯಲ್ಲೇ ‘ರಾಜ’ನೊಬ್ಬ ಬಂದಿರಬಹುದೇ ಎಂಬ ವ್ಯಾಖ್ಯಾನಕ್ಕಷ್ಟೇ ಆ ಕಾಲಕ್ಕೆ ಜಾಗವಿತ್ತೇ ಹೊರತು ಹೊಸಮತದ ಕಲ್ಪನೆ ಇದ್ದಿರಲೇ ಇಲ್ಲ. ಇತಿಹಾಸದ ಜೀಸಸ್ ಅನ್ನು ಮಾತ್ರವೇ ಇಟ್ಟುಕೊಂಡು ನೋಡಿದಾಗ ಇವತ್ತು ಜಗತ್ತು ನೋಡುತ್ತಿರುವ ಕ್ರೈಸ್ತಮತದ ಸ್ವರೂಪಕ್ಕೂ ಮೂಲಕ್ಕೂ ಸಂಬಂಧವೇ ಇಲ್ಲ!
ಈ ಪ್ರಶ್ನೆಗೆ ಸರಳ ಉತ್ತರ ಎಂದರೆ ಆ ಕಾಲದಲ್ಲಿ ಯಹೂದಿಗಳ ಪಾಲಿಗೆ ಬದಲಾಗಿದ್ದ ರಾಜಕೀಯ ಸ್ಥಿತಿ. ನೀವು ಈ ಹಿಂದಿನ ವಾರದ ತೆರೆದ ಕಿಟಕಿ ಅಂಕಣವನ್ನು ಓದಿದರೆ, ಅಲ್ಲಿ ಯಹೂದಿ ಇತಿಹಾಸದ ಪ್ರಾರಂಭ ಬಿಂದು, ಮುಖ್ಯವಾಗಿ ಯಹೂದಿಗಳಿಗಷ್ಟೇ ಅಲ್ಲದೇ ಕ್ರೈಸ್ತ, ಇಸ್ಲಾಂ ಮತಾನುಯಾಯಿಗಳಿಗೂ ಸಮ್ಮತವಾಗಿರುವ ಅಬ್ರಹಾಂ ಎಂಬ ಮೂಲಪುರುಷನ ಬಗ್ಗೆ ವಿವರಿಸಲಾಗಿತ್ತು.
ಜೀಸಸ್ ಐತಿಹಾಸಿಕ ಪ್ರಾಮುಖ್ಯವು ಆ ಕತೆಯ ಮುಂದುವರಿಕೆಯೊಂದಿಗೆ ಹೆಣೆದುಕೊಂಡಿದೆ. ದೈವವಾಣಿಯ ವಿಶ್ವಾಸ ಪಡೆದು ತನ್ನವರಿಗಾಗಿ ಒಂದು ದೇಶ ಕಂಡುಕೊಳ್ಳುವ ನಿಟ್ಟಿನಲ್ಲಿ ಅಬ್ರಹಾಂ ಇರಾಕಿನ ಪ್ರದೇಶದಿಂದ ಇವತ್ತಿಗೆ ಇಸ್ರೇಲ್ -ಪ್ಯಾಲಸ್ತೀನ್ ಎಂದು ಕರೆಸಿಕೊಳ್ಳುವ ಕ್ಯಾನನ್ ಪ್ರದೇಶಕ್ಕೆ ಕುಟುಂಬಸಮೇತ ಪ್ರಯಾಣ ಬೆಳೆಸುವುದರೊಂದಿಗೆ ಕತೆ ಶುರುವಾಗುತ್ತದಷ್ಟೆ. ಅಬ್ರಹಾಂ ನಂತರದ ಪೀಳಿಗೆಯೇ ಇಸ್ರೇಲಿನ 12 ಬುಡಕಟ್ಟುಗಳಾಗಿ ರೂಪುಗೊಳ್ಳುತ್ತವೆ. ಆದರೆ, ಇವರೇನೂ ರಾಜಾಡಳಿತ ವ್ಯವಸ್ಥೆ ಹೊಂದಿದವರಾಗಿರಲಿಲ್ಲ. ಹಾಗೆಂದೇ ಪ್ಯಾಲಸ್ತೀನಿನ ಇತರ ಪ್ರದೇಶಗಳಿಂದ ತಮ್ಮ ಬದುಕು-ಆಸ್ತಿಗಳ ಮೇಲೆ ದಾಳಿಗಳಾಗುವ ಭಯ ಇದ್ದೇ ಇತ್ತು. ಸಾವುಲ್ ಎಂಬಾತ ನಂತರ ಇಸ್ರೇಲಿನ ಮೊದಲ ರಾಜನಾಗುತ್ತಾನೆ. ಆದರೆ ಆತನ ಆಡಳಿತ ಅಷ್ಟೇನೂ ಸ್ಥಿರತೆ ಕಾಣುವುದಿಲ್ಲ.
ಹೀಗಿರುವಾಗ, ಯಹೂದಿಗಳ ನಡುವಿಂದ ಎದ್ದು ಬಲಶಾಲಿ ರಾಜನಾಗುವವನೇ ಡೇವಿಡ್. ಈತನ ಕಾಲಾವಧಿ ಕ್ರಿಸ್ತಪೂರ್ವ 1,000 ವರ್ಷಗಳಷ್ಟು ಹಿಂದಕ್ಕೆ. ಯಹೂದಿಗಳ ಪಾಲಿಗೆ ಎಲ್ಲವೂ ಬದಲಾಗಿದ್ದು, ಪ್ರಬಲ ರಾಜಕೀಯ ಐಡೆಂಟಿಟಿ ರೂಪುಗೊಂಡಿದ್ದು ಇಲ್ಲಿಂದಲೇ. ಈತ ಇಸ್ರೇಲಿನ ಹನ್ನೆರಡು ಯಹೂದಿ ಪಂಗಡಗಳನ್ನು ಒಟ್ಟುಗೂಡಿಸಿ, ಮಿಲಿಟರಿ ಶಕ್ತಿಯಾಗಿ ಬೆಳೆದು, ಜೆರುಸಲೇಂ ಅನ್ನು ವಶಪಡಿಸಿಕೊಳ್ಳುತ್ತಾನೆ. ಈತನ ಬಗ್ಗೆ ‘ಡೇವಿಡ್ ಮತ್ತು ಗೊಲಿಯಾಥ್’ ಎಂಬ ರಮ್ಯಕಥಾನನಕ ಪ್ರಚಲಿತದಲ್ಲಿದೆ. ಅಬ್ರಹಾಂರಿಗೆ ಕೇಳಿಸಿದ್ದ ದೇವವಾಣಿ ಹೇಳಿದ್ದಿದ್ದಂತಹ “ಪ್ರಾಮಿಸ್ಡ್ ಲ್ಯಾಂಡ್” ನಿಜಾರ್ಥದಲ್ಲಿ ಸಾಕಾರವಾಗಿದ್ದು ಡೇವಿಡ್ ಕಾಲದಲ್ಲಾಗಿದ್ದರಿಂದ ಯಹೂದಿಗಳ ಚರಿತ್ರೆಯಲ್ಲಿ ಈ ರಾಜನಿಗೆ ಬಹುದೊಡ್ಡ ಗೌರವವಿದೆ. ಅಷ್ಟೇ ಅಲ್ಲ, ಡೇವಿಡ್ ಪಾಲಿಗೆ ಸಹ ದೈವವಾಣಿ ಅನುರಣಿಸುತ್ತದೆ ಹಾಗೂ ನಿನ್ನ ವಂಶದವರೇ ಇಸ್ರೇಲನ್ನು ಆಳುತ್ತಾರೆ ಎಂದು ಹೇಳುತ್ತದೆ.
ಡೇವಿಡ್ ನಂತರ ರಾಜನಾದ ಅವರ ಮಗ ಸೊಲೊಮನ್ ಸಹ ಯಹೂದಿ ರಾಜ್ಯಾಧಿಕಾರವನ್ನು ಉತ್ತುಂಗಕ್ಕೆ ಏರಿಸಿದ. ಜೆರುಸಲೇಂನಲ್ಲಿ ಯಹೂದಿಗಳ ಮೊದಲ ದೇವಾಲಯ ತಲೆ ಎತ್ತಿದ್ದು ಇವನ ಕಾಲದಲ್ಲೇ. ಆದರೆ ಸೊಲೊಮನ್ ಕಾಲದ ನಂತರ ಯಹೂದಿಗಳ ಪ್ರದೇಶ ಬ್ಯಾಬಿಲೋನಿಯನ್ನರ ಆಕ್ರಮಣಕ್ಕೆ ಒಳಗಾಯಿತು. ದೇವಾಲಯ ಉರುಳಿತು. ಯಹೂದಿಗಳು ರಾಜಾಧಿಕಾರ ಕಳೆದುಕೊಂಡರು. ಅಲ್ಲಿಂದಲೇ ಯಹೂದಿಗಳಿಗೆ ಡೇವಿಡ್ ಥರದಲ್ಲಿ ಇನ್ನೊಬ್ಬರು ತಮ್ಮ ಪಾಲಿಗೆ ಬರುತ್ತಾರೆ ಹಾಗೂ ಮತ್ತೆ ತಾವು ರಾಜಾಧಿಕಾರ ಪಡೆದುಕೊಳ್ಳುತ್ತೇವೆ ಎಂಬ ನಂಬಿಕೆ ಬಲಗೊಳ್ಳತೊಡಗಿತು.
539 ಬಿಸಿಇ ಹೊತ್ತಿಗೆ ಬ್ಯಾಬಿಲೋನಿಯನ್ನರನ್ನು ಪರ್ಶಿಯಾದ ಸೈರಸ್ ಮಣಿಸಿದ ನಂತರ ಆತ ಯಹೂದಿಗಳಿಗೆ ಜೆರೊಸಲೇಂನಲ್ಲಿ ಇನ್ನೊಂದು ದೇವಾಲಯ ಕಟ್ಟುಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟ. ಡೇವಿಡ್ ವಂಶವಾಹಿಯಲ್ಲಿ ಬಂದ ಯಹೂದಿ ವ್ಯಕ್ತಿಯ ನೇತೃತ್ವದಲ್ಲೇ ಎರಡನೇ ಬಾರಿಗೆ ದೇವಾಲಯ ಎದ್ದು ನಿಂತಿತು.
ಇದರ ನಂತರದ ಕಾಲಘಟ್ಟದಲ್ಲಿ ಈ ಪ್ರದೇಶವನ್ನು ವಶಪಡಿಸಿಕೊಂಡವರೇ ರೋಮನ್ನರು. ರೋಮನ್ನರ ಆಡಳಿತದಲ್ಲಿ ಯಹೂದಿಗಳ ಮತಾಚರಣೆಗೆ ಸಂಪೂರ್ಣ ಅಡ್ಡಿಯೇನೂ ಬರಲಿಲ್ಲವಾದರೂ ಇವರು ಹಲವು ವಿಧದ ಕಾಯಿದೆಗಳು ಹಾಗೂ ಮುಖ್ಯವಾಗಿ ಯಹೂದಿಗಳ ಮೇಲೆ ವಿಧಿಸಿದ ಅತಿಯಾದ ತೆರಿಗೆ ಅಸಹನೆಯನ್ನು ಹುಟ್ಟುಹಾಕಿತ್ತು. ಯಹೂದಿಗಳ ದೇವಾಲಯ ನಿರ್ವಹಣೆ ವರ್ಗವು ರೋಮನ್ನರಿಗೆ ಹತ್ತಿರವಾಯಿತು, ಆದರೆ ಸಾಮಾನ್ಯ ಯಹೂದಿಗಳಿಂದ ದೂರವಾಗಿತ್ತು.
ಒಟ್ಟಿನಲ್ಲಿ ಯಹೂದಿಗಳೆಲ್ಲ, ದೇವರು ಇನ್ನೊಮ್ಮೆ ತನ್ನ ಪರ ಯಾರಾನ್ನಾದರೂ ಕಳುಹಿಸಿ ನಮ್ಮನ್ನು ರಕ್ಷಿಸುತ್ತಾನೆ ಎಂಬ ಆಶಯ ಹೊಂದಿದ್ದ ಕಾಲಘಟ್ಟದಲ್ಲಿ ಜೀಸಸ್ ಪ್ರವರ್ಧಮಾನಕ್ಕೆ ಬಂದಿದ್ದು. ಜೀಸಸ್ ಪರೋಕ್ಷವಾಗಿ ರೋಮನ್ ನೀತಿಗಳನ್ನು ಪ್ರಶ್ನಿಸಿದ. ರೋಮನ್ನರ ಹಾಗೂ ಅವತ್ತಿನ ಕೆಲವು ಯಹೂದಿ ದೇಗುಲ ಪ್ರಮುಖರ ಅನ್ಯಾಯವನ್ನು ಕೊನೆಗೊಳಿಸಿ, ದೇವರ ಆಡಳಿತವಿರುವ ಹೊಸ ವ್ಯವಸ್ಥೆಯೊಂದು ಬರುತ್ತದೆ ಎಂಬುದು ಜೀಸಸ್ ಬೋಧನೆಗಳ ಸಾರಾಂಶ. ಇವತ್ತು ಅಪೊಕಲಿಪ್ಸ್ ಎಂಬ ಶಬ್ದವನ್ನು ಹಾಲಿವುಡ್ ಹಾಗೂ ಕ್ರೈಸ್ತಮತ ಪ್ರಚಾರಕರೆಲ್ಲ ಸೇರಿಕೊಂಡು ಅದೊಂದು ವಿಶ್ವವನ್ನು ಕೊನೆಗೊಳಿಸುವ ಮಹಾಪ್ರಳಯ ಎಂದು ಬಿಂಬಿಸಿಬಿಟ್ಟಿದ್ದಾರೆ. ಆದರೆ ಜೀಸಸ್ ಎಂಬ ವ್ಯಕ್ತಿತ್ವವನ್ನು ಚರಿತ್ರೆಯ ಚೌಕಟ್ಟಿನಲ್ಲಿಟ್ಟು ನೋಡಿದಾಗ, ಅವರ ಬೋಧನೆಯಲ್ಲಿದ್ದದ್ದು ಯಹೂದಿಗಳಿಗೆ ಮತ್ತೆ ಸ್ವಾತಂತ್ರ್ಯದ ದಿನಗಳು ಬರುವ ಹಾಗೂ ಅದಕ್ಕಾಗಿ ರೋಮನ್ ವ್ಯವಸ್ಥೆ ಕೊನೆಗೊಳ್ಳಲಿಗೆ ಎಂಬ ಪರಿಕಲ್ಪನೆ ಅಷ್ಟೆ ಎಂಬುದು ಸ್ಪಷ್ಟವಾಗುತ್ತದೆ. ಇದೇ ಕಾರಣಕ್ಕಾಗಿಯೇ ರೋಮನ್ನರು ಜೀಸಸ್ ರನ್ನು ಶಿಲುಬೆಗೇರಿಸಿದ್ದು.
ಇವತ್ತಿಗೆ, ಹಿಬ್ರೂ ಬೈಬಲ್ಲಿನ ಆಶಯದಂತೆ ಡೇವಿಡ್ ವಂಶದ ಪುನರಾಗಮನ ಜೀಸಸ್ ಮೂಲಕ ಆಗಿಬಿಟ್ಟಿದೆ ಎಂದು ಪ್ರತಿಪಾದಿಸುವವರು ಕ್ರೈಸ್ತರಾಗಿದ್ದಾರೆ. ಡೇವಿಡ್ ಪಾಲಿಗೆ ದೇವವಾಣಿಯಾಗಿದ್ದರ ಪುರಾವೆಯಾಗಿ ಬರಬೇಕಿರುವ ಪ್ರವಾದಿ ಜೀಸಸ್ ಅಲ್ಲ. ಹಾಗೆ ಬರಬೇಕಿರುವಾತ ಬಂದು ತಮಗೆ ನಿಜಾರ್ಥದಲ್ಲಿ ರಾಜಸತ್ತೆ ಹಾಗೂ ‘ಪ್ರಾಮಿಸ್ಡ್ ಲ್ಯಾಂಡ್’ ಸಿಗಬೇಕಿರುವುದು ಇನ್ನೂ ಬಾಕಿಯಿದೆ ಎಂದು ಪ್ರತಿಪಾದಿಸುತ್ತ, ರೋಮನ್ನರ ಕಾಲದಲ್ಲಿ ಉರುಳಿದ ಎರಡನೇ ದೇವಾಲಯವನ್ನು ಮರಳಿ ಕಟ್ಟಿಸದೇ, ಡೇವಿಡ್ ಸಂತಾನದ ಆಗಮನಕ್ಕೆ ಕಾಯುತ್ತ ಅವಶೇಷದ ಗೋಡೆಗೆ ಹಣೆ ಅಂಟಿಸಿ ನಿಂತಿರುವವರೆಲ್ಲ ಯಹೂದಿಗಳಾಗಿದ್ದಾರೆ.
ಹಾಗೆಂದೇ ಇತಿಹಾಸದ ಕತೆ ಮುಗಿದಿಲ್ಲ. ಪ್ಯಾಲಸ್ತೀನ್ ಕತೆ ಅಷ್ಟು ಸುಲಭದ್ದಲ್ಲ. ವ್ಯಾವಹಾರಿಕ ಮೇಲ್ನೋಟಕ್ಕೆ ಬೆಂಜಮಿನ್ ನೆತನ್ಯಾಹು ಹಾಗೂ ಡೊನಾಲ್ಡ್ ಟ್ರಂಪ್ ಒಂದೇ ಎಂದೆನಿಸಿದರೂ ಅದು ಹಾಗಲ್ಲ!
- ಚೈತನ್ಯ ಹೆಗಡೆ
cchegde@gmail.com
Advertisement