ಈಗ ನಮ್ಮೆದುರಿಗೆ ಬದಲಾಗುತ್ತಿರುವುದು ಕ್ರೈಸ್ತ ವರ್ಷವಾ? ಕ್ಯಾಲೆಂಡರ್ ಹೇಳ್ತಿರೋದು ಬೇರೆಯದೇ ಕತೆಯಾ? (ತೆರೆದ ಕಿಟಕಿ)

ಈ ಜನವರಿಯಿಂದ ಡಿಸೆಂಬರಿನವರೆಗಿನ ಹನ್ನೆರಡು ತಿಂಗಳುಗಳಲ್ಲಿ ಚಾಚಿಕೊಂಡಿರುವ ಕ್ಯಾಲೆಂಡರ್ ಅನ್ನು ಗ್ರೆಗೊರಿಯನ್ ಕ್ಯಾಲೆಂಡರ್ ಎನ್ನುತ್ತೇವಾದ್ದರಿಂದ, ಇದೊಂದೇ ಪದಪುಂಜವನ್ನು ಹುಡುಕಿ ತಡಕಾಡಿದರೆ ಅದು ಕ್ರೈಸ್ತ ಮತದ ಬಾಗಿಲಿಗೇ ಹೋಗಿ ನಿಲ್ಲುವುದು ಹೌದು.
Calendar
ಕ್ಯಾಲೆಂಡರ್ online desk
Updated on

ಹೊಸವರ್ಷ ಎಂದಕೂಡಲೇ ಬಹಳಷ್ಟು ಮಂದಿ ತಕ್ಷಣಕ್ಕೆ ಎದುರಿಗಿಡುವ ವಾದ ಒಂದಿದೆ. “ಈ ಜನವರಿ ಪ್ರಾರಂಭ ಹಾಗೂ ಡಿಸೆಂಬರ್ ಅಂತ್ಯದ ಲೆಕ್ಕಾಚಾರಗಳೆಲ್ಲ ಪಾಶ್ಚಾತ್ಯ ಇಂಗ್ಲಿಷ್ ವ್ಯವಸ್ಥೆ. ಅದನ್ನು ನಾವು ಆಚರಿಸುವುದರಲ್ಲೇ ಗುಲಾಮಿತನ ಇದೆ” ಎಂಬುದರಿಂದ ಹಿಡಿದು, ಯುಗಾದಿಗೆ ಹೊಸವರ್ಷ ಆಚರಿಸುವುದು ಎಷ್ಟು ಅರ್ಥಪೂರ್ಣ ಹಾಗೂ ಜನವರಿಗೆ ಹೊಸದು ಎನ್ನಿಸಿಕೊಳ್ಳುವ ಯಾವ ಅರ್ಹತೆಗಳೂ ಏಕಿಲ್ಲ ಎಂಬ ಬಗ್ಗೆಯೆಲ್ಲ ಸುದೀರ್ಘ ವಿಶ್ಲೇಷಣೆಗಳು ಆಗುತ್ತವೆ. ನಮ್ಮದು ಪಂಚಾಂಗ, ಇದು ಗ್ರೆಗೊರಿಯನ್ ಕ್ಯಾಲೆಂಡರ್ ಎಂಬುದನ್ನೆಲ್ಲ ನೆನಪಿಸಿಕೊಳ್ಳುವ ಸಂದೇಶಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಗೊಳ್ಳುತ್ತವೆ.

ಸಾಂಪ್ರದಾಯಿಕ ದೃಷ್ಟಿಯ ಅರಿವು ಮತ್ತು ಅವುಗಳ ಹಿಂದಿನ ತರ್ಕ, ತತ್ತ್ವಗಳನ್ನೆಲ್ಲ ತಿಳಿದಿರುವುದು ಒಳ್ಳೆಯದೇ. ಹಾಗೆಂದು, ನಮ್ಮೆಲ್ಲ ವ್ಯಾವಹಾರಿಕ ಲೆಕ್ಕಾಚಾರಕ್ಕೆ ವರ್ಷಪೂರ್ತಿ ಬಳಸಿಕೊಂಡಿರುವ ಪಾಶ್ಟಾತ್ಯ ಕ್ಯಾಲೆಂಡರ್ ಬದಲಾಗುವಾಗಲೂ ಜನ ಹೊಸ ಸಂಕಲ್ಪಗಳನ್ನು ಮಾಡಿಕೊಂಡರೆ, ಹೊಸ ಭರವಸೆಗಳ ಹೊಸ್ತಿಲೊಂದನ್ನು ಕಲ್ಪಿಸಿಕೊಂಡು ಸಂಭ್ರಮಿಸಿದರೆ ಅದರಲ್ಲಿ ತಪ್ಪು ಹುಡುಕಬೇಕಾದದ್ದೂ ಏನಿಲ್ಲ. ಅದಿರಲಿ, ನಾವು ಯಾವುದನ್ನು ಇಂಗ್ಲಿಷರ ಕ್ಯಾಲೆಂಡರು ಎನ್ನುತ್ತಿದ್ದೇವೆಯೋ, ಯಾವುದನ್ನು ಕ್ರೈಸ್ತಮತದ ಪ್ರತಿನಿಧಿಯಂತೆ ನೋಡುತ್ತಿದ್ದೇವೆಯೋ ಅದು ವಾಸ್ತವದಲ್ಲಿ ಬೇರೆಯದೇ ಆಗಿದೆ ಎಂಬ ಚರಿತ್ರೆಯ ಕುತೂಹಲವೊಂದನ್ನು ಬಿಚ್ಚಿಡುವುದಕ್ಕೆ ಇಷ್ಟೆಲ್ಲ ಪ್ರಸ್ತಾವನೆ ಹಾಕಬೇಕಾಯಿತು.

ಈ ಕ್ಯಾಲೆಂಡರಿನ ಬೇರಿರುವುದು ಕ್ರೈಸ್ತಮತದಲ್ಲಲ್ಲ

ಈ ಜನವರಿಯಿಂದ ಡಿಸೆಂಬರಿನವರೆಗಿನ ಹನ್ನೆರಡು ತಿಂಗಳುಗಳಲ್ಲಿ ಚಾಚಿಕೊಂಡಿರುವ ಕ್ಯಾಲೆಂಡರ್ ಅನ್ನು ಗ್ರೆಗೊರಿಯನ್ ಕ್ಯಾಲೆಂಡರ್ ಎನ್ನುತ್ತೇವಾದ್ದರಿಂದ, ಇದೊಂದೇ ಪದಪುಂಜವನ್ನು ಹುಡುಕಿ ತಡಕಾಡಿದರೆ ಅದು ಕ್ರೈಸ್ತ ಮತದ ಬಾಗಿಲಿಗೇ ಹೋಗಿ ನಿಲ್ಲುವುದು ಹೌದು. 1582ರಲ್ಲಿ ಪೋಪ್ ಆಗಿದ್ದ ಹದಿಮೂರನೇ ಗ್ರೆಗೊರಿ, ಜನವರಿ ಒಂದನ್ನೇ ಹೊಸವರ್ಷ ಎಂದು ಘೋಷಿಸಿ, ಆವರೆಗೆ ಅಸ್ತಿತ್ವದಲ್ಲಿದ್ದ ಜುಲಿಯನ್ ಕ್ಯಾಲೆಂಡರ್ ಅನ್ನೇ ಪರಿಷ್ಕೃತಗೊಳಿಸಿದ. ಆದರೆ ಚರ್ಚಿನ ಈ ಆದೇಶವನ್ನು ಪಾಲಿಸಿದ್ದು ಇಟಲಿ, ಸ್ಪೇನ್, ಪೋರ್ಚುಗಲ್, ಫ್ರಾನ್ಸ್. ಅವತ್ತಿನ ಪ್ರಮುಖ ಶಕ್ತಿ ಇಂಗ್ಲೆಂಡ್ ಜನವರಿ ಒಂದನ್ನು ಹೊಸವರ್ಷ ಎಂದು ಒಪ್ಪಿಕೊಂಡಿದ್ದು, 1752ರಲ್ಲಿ. ರಷ್ಯ ಆ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದು 1918ರಲ್ಲಿ.

ಇವರೆಲ್ಲ ಪ್ರಾರಂಭದಲ್ಲಿ ಜನವರಿ ಒಂದನ್ನು ಹೊಸವರ್ಷವಾಗಿ ಆಚರಿಸುವುದಕ್ಕೆ ವಿರೋಧಿಸಿದ್ದರು. ಕಾರಣ ಏನು ಗೊತ್ತೇ? ತಾವು ನಿಕೃಷ್ಟವಾಗಿ ‘ಪೇಗನ್’ ಎಂಬ ಪದದಿಂದ ಬದಿಗೆ ಸರಿಸಿದ್ದ ರೋಮನ್ನರ ಲೆಕ್ಕಾಚಾರಕ್ಕೆ ನಾವೇಕೆ ತಲೆಗೊಡಬೇಕು ಎಂಬುದು ಇಂಗ್ಲಿಷರಿಗೆ ಕಾಡಿದ್ದ ಬಿಕ್ಕಟ್ಟು. ಲ್ಯಾಟಿನ್ ನಲ್ಲಿ ಪಗುಸ್ ಎಂದರೆ ಹಳ್ಳಿ, ಪಗನುಸ್ ಎಂದರೆ ಹಳ್ಳಿಹೈದರು. ಎರಡನೇ ಶತಮಾನದ ನಂತರದಲ್ಲಿ ಯುರೋಪ್ ಕ್ರೈಸ್ತೀಕರಣ ಆಗುವುದಕ್ಕೆ ತೊಡಗಿದಾಗ ಅದರ ಮೊದಲ ಅಲೆಗಳು ನಗರ ಪ್ರದೇಶದಲ್ಲಿದ್ದವು. ಹೀಗಾಗಿ ತಮ್ಮ ತೆಕ್ಕೆಗಿನ್ನೂ ಬಾರದೇ ತಮ್ಮ ಕಣ್ಣಿಗೆ ಚಿತ್ರ-ವಿಚಿತ್ರವಾಗಿ ತೋರುವ ದೇವತೆಗಳನ್ನೆಲ್ಲ ಪೂಜಿಸಿಕೊಂಡಿದ್ದ ಹಳ್ಳಿಹೈದರೆಲ್ಲ ಆಂಗ್ಲ ಕ್ರೈಸ್ತರ ಪಾಲಿಗೆ ಪೇಗನ್ ಆದರು. ಅವರೆಲ್ಲರೂ ಅನಾಗರಿಕರು ಎಂಬರ್ಥದಲ್ಲಿ ಪೇಗನ್ ಪದ ಬಳಕೆ ಆಗಿದ್ದು. ಇಂಥ ಪೇಗನ್ ಸಂಸ್ಕೃತಿಯ ಭಾಗವಾಗಿದ್ದ ರೋಮನ್ ರಾಜರು ಹುಟ್ಟುಹಾಕಿರುವ ಜನವರಿ ಒಂದರ ಹೊಸವರ್ಷವನ್ನು ನಾವೇಕೆ ಆಚರಿಸಬೇಕೆಂಬುದು ಅವರ ಪ್ರಶ್ನೆಯಾಗಿತ್ತು.

Calendar
ಜೀಸಸ್ ಇತಿಹಾಸ ಕಥನಕ್ಕೆ ಕೈ ಇಟ್ಟರೆ ಎಷ್ಟೊಂದು ಕೌತುಕಗಳ ದರ್ಶನ! (ತೆರೆದ ಕಿಟಕಿ)

ಈ ಜನವರಿಯಿಂದ ಡಿಸೆಂಬರ್ ಮಾದರಿ ಗ್ರೀಕರ ಕಾಲದಿಂದಲೂ ಇದೆಯಾದರೂ, ಜನವರಿ ಒಂದು ಎಂಬುದು ವರ್ಷದ ಪ್ರಾರಂಭ ಆಗಿರಲಿಲ್ಲ. ಪ್ರಾಚೀನ ಜಗತ್ತಿನಲ್ಲಿ ಆಯಾ ನಾಗರಿಕತೆಗಳು ತಮ್ಮ ಸಂಸ್ಕೃತಿಗೆ ತಕ್ಕಂತೆ ವರ್ಷದ ಪ್ರಾರಂಭವನ್ನು ರೂಪಿಸಿಕೊಂಡಿದ್ದವು. ಋತು ಬದಲಾವಣೆಯ ಚೈತ್ರ ಮಾಸವನ್ನು ಹೇಗೆ ಭಾರತವು ಹೊಸ ವರ್ಷವೆಂದು ಆಚರಿಸಿಕೊಂಡುಬಂತೋ, ಅಂತೆಯೇ ಅವುಗಳ ಹಿಂದೆಯೂ ಲಾಜಿಕ್ ಇತ್ತು. ಅವನ್ನೆಲ್ಲ ನಂತರ ಗಮನಿಸೋಣ. ಆದರೆ, ಕ್ರಿಸ್ತಪೂರ್ವ 46ರ ಹೊತ್ತಿಗೆ ರೋಮ್ ಚುಕ್ಕಾಣಿ ಹಿಡಿದ ಜೂಲಿಯಸ್ ಸೀಸರ್ ಜನವರಿ ಒಂದನ್ನೇ ಹೊಸವರ್ಷದ ಪ್ರಾರಂಭ ಎಂದು ಮಾಡಿದನಲ್ಲದೇ, ಜನವರಿಯಿಂದ ಡಿಸೆಂಬರ್ ವರೆಗಿನ ಕಾಲಗಣನೆಯಲ್ಲಿದ್ದ ಅಸ್ತವ್ಯಸ್ತವನ್ನು ಹೋಗಲಾಡಿಸುವುದಕ್ಕೆ ಪ್ರಯತ್ನಿಸಿದ. ಈ ಸೌರ ಕ್ಯಾಲೆಂಡರ್ ಅಂದರೆ ಮತ್ತೇನಲ್ಲವಷ್ಟೇ… ಸೂರ್ಯನ ಸುತ್ತ ಭೂಮಿ ಒಂದು ಬಾರಿ ಸುತ್ತಿ ಬರುವುದಕ್ಕೆ ತೆಗೆದುಕೊಳ್ಳುವ ದಿನಗಳ ಲೆಕ್ಕ. ಅದು 365.2422 ದಿನಗಳು. ಆದರೆ ಈ ಡೆಸಿಮಲ್ ಸಂಖ್ಯೆಗಳನ್ನು ವರ್ಷದ ಲೆಕ್ಕಾಚಾರದಲ್ಲಿ ಕೂರಿಸುವುದು ಹೇಗೆ? ಈ ಸೀಸರ್ ವರ್ಷಕ್ಕೆ 365 ದಿನಗಳನ್ನಷ್ಟೇ ನಿಗದಿಪಡಿಸಿ, ನಾಲ್ಕು ವರ್ಷಗಳಿಗೊಮ್ಮೆ 366 ದಿನಗಳ ವರ್ಷವನ್ನು ಲೆಕ್ಕ ಹಾಕುವ ಮೂಲಕ ಗಣಿತವನ್ನು ಸರಿದೂಗಿಸುವುದಕ್ಕೆ ನೋಡಿದ. ಇಲ್ಲೂ 11 ನಿಮಿಷಗಳ ವ್ಯತ್ಯಾಸ ಬರುತ್ತಿತ್ತು. ತಾತ್ಕಾಲಿಕವಾಗಿ ಅದೇನೂ ತೊಂದರೆ ತಂದೊಡ್ಡದಿದ್ದರೂ, ಪ್ರತಿ 128 ವರ್ಷಗಳಿಗೆ ಒಂದು ಹೆಚ್ಚುವರಿ ದಿನ ಸೇರಿಕೊಂಡು, 1500ನೇ ಇಸ್ವಿ ಹೊತ್ತಿಗೆಲ್ಲ 10 ದಿನಗಳ ವ್ಯತ್ಯಾಸ ಬರತೊಡಗಿತು. ಇದು ಹಬ್ಬಗಳ ಆಚರಣೆಗೆ ಹಾಗೂ ಕೃಷಿ ಕಾರ್ಯಕ್ಕೆ ದಿನ ನಿಗದಿ ಮಾಡಿಕೊಳ್ಳುವುದಕ್ಕೆ ತೊದರೆ ಆಯಿತು. ಇದನ್ನೇ ಪೋಪ್ ಗ್ರೆಗೊರಿ ಪರಿಷ್ಕರಿಸಿದ ಹಾಗೂ ಇದರ ಪರಿಣಾಮವಾಗಿ 3300 ವರ್ಷಗಳಿಗೆ ಒಂದು ಹೆಚ್ಚುವರಿ ದಿನ ಸೇರಿಕೊಳ್ಳುವಷ್ಟರಮಟ್ಟಿಗೆ ಸುಧಾರಿಸಿತು.

ಹಾಗೆ ನೋಡಿದರೆ, ಜೂಲಿಯಸ್ ಸೀಸರ್ ಪರಿಷ್ಕರಣೆಯಲ್ಲೂ ಧಾರ್ಮಿಕ ಕಾರಣಗಳು ಅಂತೇನಿರಲಿಲ್ಲ. ಅವತ್ತಿನ ಆಡಳಿತ ಮತ್ತು ಹಣಕಾಸುಗಳಿಗೆ ನಿಯಮಬದ್ಧತೆ ತರುವುದಕ್ಕೆ ಜನವರಿ ಒಂದನ್ನೇ ವರ್ಷದಾರಂಭ ಎಂದಿದ್ದಾಗಿತ್ತು. ಆದರೆ ಗ್ರೆಗೊರಿ ಇದನ್ನೇ ಪರಿಷ್ಕರಿಸಿ ಮತ್ತೆ ಜನವರಿ 1ನ್ನೆ ಹೊಸ ವರ್ಷದಾರಂಭ ಎಂದು ಹೇಳಿದ ಮೇಲೆ ಅವತ್ತಿನ ಕ್ರೈಸ್ತರಿಗೆ ಕೆಲವು ಧಾರ್ಮಿಕ ಆಯಾಮಗಳು ಗೋಚರಿಸಿದವು.

ಈ ಜನವರಿ ಎಂಬ ಮಾಸದ ಹೆಸರು ಬಂದಿದ್ದೇ, ರೋಮನ್ನರ ದೇವತೆ ಜಾನುಸ್ ಗೌರವದಲ್ಲಿ. ಎರಡು ಮುಖಗಳುಳ್ಳ, ಹಿಂದಕ್ಕೆ ಮತ್ತು ಮುಂದಕ್ಕೆ ಎರಡೂ ಏಕಕಾಲದಲ್ಲಿ ನೋಡಬಲ್ಲ ಈ ದೇವತೆ ರೋಮನ್ನರ ಪಾಲಿಗೆ ಆರಂಭ ಮತ್ತು ಮುಕ್ತಾಯಗಳನ್ನು, ಸಮಯದ ಸಂಕ್ರಮಣವನ್ನು ಪ್ರತಿನಿಧಿಸುವ ಪ್ರತೀಕ. ಆವರೆಗೆ ಕ್ರೈಸ್ತರೆಲ್ಲ ಮಾರ್ಚ್ 25ಕ್ಕೆ ಹೊಸವರ್ಷವನ್ನು ಆಚರಿಸುತ್ತಿದ್ದರು. ಏಕೆಂದರೆ ಅಂದು ಮೇರಿಯು ಜೀಸಸ್ ಅನ್ನು ಗರ್ಭಧರಿಸಿದ ದಿನ ಎಂದು ದೇವತೆ ಗೆಬ್ರಿಯಲ್ ಘೋಷಣೆ ಮಾಡಿದ್ದಾಗಿ ಬೈಬಲ್ ಹೇಳುತ್ತದೆಯಾದ್ದರಿಂದ. ಹೀಗಿರುವಾಗ, ಜಾನುಸ್ ಎಂಬ ರೋಮನ್ ದೇವತೆಗೆ ಪ್ರಾಮುಖ್ಯದ ಅರ್ಥ ತಂದಿಡುವ ಜನವರಿಗೇಕೆ ತಾವು ಜೋತು ಬೀಳಬೇಕೆಂಬುದು ಅವತ್ತಿನ ಬಹುದೊಡ್ಡ ಕ್ರೈಸ್ತ ಗುಂಪುಗಳ ವಾದವಾಗಿತ್ತು.

ತಿಂಗಳ ಹೆಸರುಗಳಲ್ಲಿದೆ ಬಹುದೇವತಾರಾಧನೆ ಸಂಸ್ಕೃತಿಯ ನೆನಪು

ಯುರೋಪನ್ನು ಒಂದು ದೈವ, ಒಂದು ಪುಸ್ತಕ, ಒಂದು ಪ್ರವಾದಿ ಎಂಬ ಸೂತ್ರಕ್ಕೆ ಕ್ರೈಸ್ತಮತವು ಹೊಂದಿಸಿದ ನಂತರ, ಆ ನೆಲದ ಪೂರ್ವ ನಾಗರೀಕತೆಗಳು ಜೀವಂತಿಕೆ ಕಳೆದುಕೊಂಡವು. ಆದರೆ ಯಾವುದೇ ನಾಗರೀಕತೆಗೆ ಸತ್ತ ನಂತರವೂ ಶಬ್ದ ಮಾಡುವಷ್ಟು ಶಕ್ತಿ ಇರುತ್ತದೆ. ಏಕೆಂದರೆ, ಅವುಗಳ ಕಥಾನಕ ಹಾಗೂ ಕಲ್ಪನಾಶಕ್ತಿಗಳು ಪರ್ಯಾಯವಿಲ್ಲವೆಂಬಂತೆ ಬೆಳೆದುಬಿಟ್ಟಿರುತ್ತವೆ. ಹಾಗೆಂದೇ ನಾಸಾದ ಬಾಹ್ಯಾಕಾಶ ಯೋಜನೆಯೊಂದು ಅಪೊಲೊ ಎಂಬ ಹೆಸರು ಪಡೆಯುತ್ತದೆ. ಬೆಳಕು-ಜ್ಞಾನದ ಅಧಿದೇವತೆ ಅಪೊಲೊ. ಸೂರ್ಯನ ರಥದ ಸಾರಥಿ ಅಪೊಲೊ! ಮುಂದೆ, ಚಂದ್ರನ ಮೇಲೆ ಮತ್ತೆ ಮಹಿಳಾ ಯಾನಿಯನ್ನಿಳಿಸುವ ಯೋಜನೆಗೆ ಅರ್ಟೆಮಿಸ್ ಎನ್ನಲಾಗಿದೆ. ಏಕೆಂದರೆ ಈ ಅಪೊಲೊ ಸಹೋದರಿಯೇ ಚಂದ್ರನ ಅಧಿದೇವತೆ.

ಗ್ರೀಕರ ನಂತರ ಬಂದವರು ರೋಮನ್ನರು. ಅವರು ಗ್ರೀಕರನ್ನು ಮಿಲಿಟರಿ ಬಲದಲ್ಲಿ ಹಣಿದು ಅಧಿಕಾರ ಸೂತ್ರ ಹಿಡಿದರಾದರೂ ಸೋತವರ ಸಂಸ್ಕೃತಿ ಹಾಗೂ ನಾಗರಿಕ ಮೌಲ್ಯಗಳನ್ನೇ ತುಸು ಮಾರ್ಪಡಿಸಿ ಮುಂದುವರಿಸಿದರು. ಗ್ರೀಕ್ ದೇವತೆ ಝೆಯುಸ್ ರೋಮನ್ನರ ಪಾಲಿಗೆ ಜುಪಿಟರ್ ಆದದ್ದು, ಗ್ರೀಕರ ಅಪ್ರೊಡೈಟ್ ಅನ್ನು ರೋಮನ್ನರು ವೀನಸ್ ಆಗಿಸಿದ್ದು ಹೀಗೆಲ್ಲ ಉದಾಹರಣೆಗಳು ಕೊಡಬಹುದು.

ಈ ದೇವತೆ ಕಲ್ಪನೆ ದಟ್ಟವಾಗಿ ಮಿಳಿತಗೊಂಡಿರುವುದೇ ತಿಂಗಳುಗಳ ಹೆಸರುಗಳಲ್ಲಿ. ಜನವರಿಯ ಜತೆಗಿನ ದೇವತೆಯನ್ನು ಅದಾಗಲೇ ಉಲ್ಲೇಖಿಸಿದ್ದಾಯಿತು. ಇನ್ನು ಫೆಬ್ರವರಿಗೆ ಆಧಾರವಾಗಿರುವ ಫೆಬ್ರುವಾ ಎಂಬ ರೋಮನ್ ದೇವತೆ ಶುದ್ಧೀಕರಣಕ್ಕೆ ಸಂಬಂಧಿಸಿದ ಶಕ್ತಿ. ಮಾರ್ಸ್ ಅರ್ಥಾತ್ ಮಂಗಳನ ಗೌರವದಲ್ಲಿ ಮಾರ್ಚ್ ತಿಂಗಳು. ರೋಮನ್ನರ ಪಾಲಿಗೆ ಇದು ಯುದ್ಧ ದೇವತೆ, ಪ್ರಹಾರಗಳಿಂದ ರಕ್ಷಿಸುವ ದೈವ. ನಮ್ಮಲ್ಲೂ ಮಂಗಳವು ಸುರಸೈನ್ಯ ಸೇನಾಪತಿಯಾದ ಸ್ಕಂದನೊಂದಿಗೆ ತಳುಕು ಹಾಕಿಕೊಂಡಿರುವುದನ್ನು ಗಮನಿಸಬಹುದು. ಅಪ್ರೊಡೈಟ್ ಅರ್ಥಾತ್ ಶುಕ್ರನ ಗೌರವದಲ್ಲಿ ಅಪ್ರೈಲ್ ಅರ್ಥಾತ್ ಇಂದಿನ ಏಪ್ರಿಲ್ ಎಂಬ ವ್ಯಾಖ್ಯಾನವಿದೆ. ಮೇನ ಹಿಂದಿರುವ ಮೈಯಾ ರೋಮನ್ನರ ಭೂದೇವತೆಯಾದರೆ, ಜೂನ್ ಅನ್ನು ಪ್ರೇರೇಪಿಸಿರುವ ಜುನೊ ಮದುವೆ ಮತ್ತು ಮಹಿಳೆಯರ ರಕ್ಷಕ ದೇವತೆ.

ಇಲ್ಲಿಂದ ಮುಂದಿನ ತಿಂಗಳುಗಳನ್ನೆಲ್ಲ ಕೇವಲ ಸಂಖ್ಯೆ ಆಧಾರದ ಮೇಲೆ ರೋಮನ್ನರು ಹೆಸರಿಸಿದ್ದಾಗಿದೆ. ಕ್ವಿಂಟಿಲೀಸ್, ಸೆಕ್ಸ್ಟಿಲೀಸ್ ಎಂಬುವವು ನಂತರದ ಎರಡು ತಿಂಗಳುಗಳಾಗಿದ್ದವು. ಕ್ರಮವಾಗಿ ಐದನೆಯ ಮತ್ತು ಆರನೆಯ ಎಂಬರ್ಥವಷ್ಟೆ. ಕ್ವಿಂಟಲೀಸ್ ಅನ್ನು ಜುಲಿಯಸ್ ಸೀಸರ್ ತನ್ನ ನೆನಪನ್ನು ಪ್ರತಿಷ್ಠಾಪಿಸುವುದಕ್ಕೆ ಜುಲೈ ಆಗಿಸಿದ. ಅವನ ನಂತರದ ರಾಜ ಅಗಸ್ಟಿಸ್, ಸೆಕ್ಸ್ಟಿಲೀಸ್ ಅನ್ನು ಬದಲಿಸಿ ಆಗಸ್ಟ್ ಆಗಿಸಿಕೊಂಡ.

ಉಳಿದಂತೆ ಏಳನೆಯ ತಿಂಗಳು ಸೆಪ್ಟೆಮ್, ಎಂಟು ಎಂದು ಹೇಳುವುದಕ್ಕೆ ಅಕ್ಟೊ, ಒಂಬತ್ತು ಎಂಬುದಕ್ಕೆ ನೊವೆಮ್, ಹತ್ತು ಎಂಬುದಕ್ಕೆ ಡಿಸೆಮ್… ಇವುಗಳ ಆಧಾರದಲ್ಲಿಯೇ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್. ಅರೆ, ಇವು ಸಂಸ್ಕೃತ ಸಂಖ್ಯಾವಾಚಕ ಸಪ್ತಮ, ಅಷ್ಟಮ, ನವಮ, ದಶಮ ಎಂಬಂತೆ ಇವೆಯಲ್ಲ ಎನಿಸಿದರೆ, ಅದು ಅಸಹಜವಲ್ಲ. ಲ್ಯಾಟಿನ್ ಮತ್ತು ಸಂಸ್ಕೃತಗಳಲ್ಲಿ ಈ ಸಾಮ್ಯವನ್ನು ಇನ್ನೂ ಹಲವು ಶಬ್ದಗಳಲ್ಲಿ ಕಾಣಬಹುದು.

Calendar
ಹೌದು… ಯಾರದು ರಾಮನ ಕೈಗೆ ಶಸ್ತ್ರ ಕೊಟ್ಟದ್ದು? (ತೆರೆದ ಕಿಟಕಿ)

ವರ್ಷ ಪರಿಕಲ್ಪನೆ - ಭಾರತೀಯ ಧಾಟಿಯಲ್ಲೇ ಪ್ರಾಚೀನ ನಾಗರಿಕತೆಗಳು

ಇಂಗ್ಲಿಷರು ಕಣ್ಣುಬಿಡುವುದಕ್ಕೂ ಸಾವಿರಾರು ವರ್ಷಗಳ ಮೊದಲಿನಿಂದಲೇ ಇದ್ದ ಈ ಜನವರಿಯಿಂದ ಡಿಸೆಂಬರ್ ಅನ್ನು ಜಗತ್ತಿನ ಹಲವು ಭಾಗಗಳು ವ್ಯಾವಹಾರಿಕ ಕಾರಣಗಳಿಗೆ ಮೊದಲಿನಿಂದ ಒಪ್ಪಿದ್ದವಾದರೂ, ಪ್ರಾಚೀನ ಜಗತ್ತಿನಲ್ಲಿ ಜನವರಿ ಹೊಸವರ್ಷವಾಗಿರಲಿಲ್ಲ.

ಈ ನಿಟ್ಟಿನಲ್ಲಿ ಭಾರತೀಯರ ಕಾಲಗಣನೆ ವಿನ್ಯಾಸಗಳು ಅತ್ಯುನ್ನತ ಎಂಬುದರಲ್ಲಿ ಎರಡು ಮಾತಿಲ್ಲ. ಗ್ರಹಣಗಳನ್ನು ಸಹ ನಿರ್ದಿಷ್ಟವಾಗಿ ಹೇಳಬಲ್ಲ ಭಾರತೀಯ ಕಾಲಗಣನೆಯ ಪಾರಮ್ಯ ಬಹುಶಃ ಜಗತ್ತಿನ ಉಳಿದವರಿಗೆ ಪ್ರಾರಂಭದಲ್ಲಿ ದಕ್ಕಿರಲಿಕ್ಕಿಲ್ಲ. ಆದರೆ, ವರ್ಷಾರಂಭದ ವಿಚಾರದಲ್ಲಿ ಎಲ್ಲ ನಾಗರಿಕತೆಗಳದ್ದೂ ನಿಸರ್ಗದೊಂದಿಗೆ ಬೆರೆತ ಲೆಕ್ಕಾಚಾರವೇ ಆಗಿದೆ.

ಬ್ಯಾಬಿಲೋನಿಯನ್ನರು ಮಾರ್ಚ್-ಏಪ್ರಿಲ್ ನಡುವಿನ 12 ದಿನಗಳನ್ನು ಹೊಸವರ್ಷವಾಗಿ ಆಚರಿಸುತ್ತಿದ್ದರು. ಬಾರ್ಲಿಯನ್ನು ಬಿತ್ತುವ ಕಾಲ ಆಗ ಶುರುವಾಗುತ್ತಿತ್ತು. ಬ್ಯಾಬಿಲೋನಿನ ಪರಮೋಚ್ಚ ದೇವನಾದ ಮಾರ್ಡುಕ್ ನನ್ನು ಆತನ ಪುತ್ರನ ಜತೆಗೂಡಿ ಆರಾಧಿಸುವ ಮೂಲಕ ವರ್ಷದ ಹೊಸತನ ಆರಂಭವಾಗುತ್ತಿತ್ತು. ಹನ್ನೆರಡೂ ದಿನವೂ ಬೇರೆ ಬೇರೆ ಬಗೆಯ ಆಚರಣೆಗಳು. ಅವುಗಳಲ್ಲಿ ಒಂದು ದಿನ ರಾಜನು ಮಾರ್ಡುಕ್ ದೇವನ ದೇವಸ್ಥಾನಕ್ಕೆ ಹೋಗಿ ಅಲ್ಲಿ ತನ್ನ ರಾಜಭೂಷಣವನ್ನೆಲ್ಲ ಕಳಚಿ ತಪ್ಪುಗಳನ್ನು ಮನ್ನಿಸುವಂತೆ ಆರ್ತನಾಗಿ ಕೂಗಿಕೊಳ್ಳಬೇಕು. ಅಲ್ಲಿನ ಪುರೋಹಿತ ರಾಜನ ಕೆನ್ನೆಗೊಂದು ಬಾರಿಸಬೇಕು. ನಂತರ ಪ್ರಾಯಶ್ಚಿತ್ತವಾಯಿತೆಂದು ರಾಜ ಮತ್ತೆ ತನ್ನ ಧಿರಿಸು ಧರಿಸಿ ಹಿಂತಿರುಗಬೇಕು. ಭಾರತದಲ್ಲೂ ರಾಜನ ಬಗ್ಗೆ ಕತೆ ಇದೆಯಲ್ಲ… ಆತ ಪಟ್ಟಾಭಿಶಿಕ್ತನಾದಾಗ “ನಾನು ದಂಡನೆಗೆ ಮೀರಿದವನು” ಎನ್ನುತ್ತಾನೆ. ಆಗ ಗುರುವು ಅವನ ತಲೆ ಮೇಲೆ ದಂಡದಿಂದ ಮೊಟಕಿ “ಧರ್ಮವು ನಿನಗಿಂತ ಮೇಲಿದ್ದು ನಿನ್ನನ್ನು ದಂಡಿಸುತ್ತದೆ” ಎನ್ನುತ್ತಾರೆ. ಅಂದರೆ, ಪ್ರಾಚೀನರಲ್ಲಿದ್ದ ಮೌಲ್ಯ ಹೀಗೊಂದು ಸಾಮ್ಯವನ್ನೇ ಹೊಂದಿತ್ತು.

ಚೀನಾದ ಪಾಲಿಗೆ ಘೋರ ಚಳಿಗಾಲ ಮುಗಿಯುವುದು ಜನವರಿ 20 ಮತ್ತು ಫೆಬ್ರವರಿ 20ರ ಸಮಯದಲ್ಲಿ. ಅವರ ಹೊಸವರ್ಷವೂ ಅದೇ ಸಂದರ್ಭಕ್ಕೆ ಬರುತ್ತದೆ. ಇನ್ನು ಕೃಷಿಗೆ ತಯಾರಿ ಮಾಡಿಕೊಳ್ಳಬಹುದು ಎಂದು ಸೂಚಿಸುವ ರೀತಿಯಲ್ಲಿ. ಪ್ರಾಚೀನ ಈಜಿಪ್ತಿಯನ್ನರು ಜುಲೈ ಆಸುಪಾಸಿನಲ್ಲಿ ಹೊಸವರ್ಷ ಆಚರಿಸುತ್ತಿದ್ದರು. ಏಕೆಂದರೆ ಸಾಮಾನ್ಯವಾಗಿ ನೈಲ್ ನದಿ ಪ್ರವಾಹಕ್ಕೆ ಬರುವ ಸಮಯ ಅದು. ಹಾಗಾದಾಗ ಅದು ಫಲವತ್ತಾದ ಮಣ್ಣನ್ನು ತೀರಕ್ಕೆಲ್ಲ ತಂದುಹಾಕಿ ಹೋಗುತ್ತಿತ್ತು. ಅದರ ನಂತರದಲ್ಲೇ ಕೃಷಿ ಚಟುವಟಿಕೆ ಶುರುವಾಗುತ್ತಿತ್ತು.

ಒಂದರ್ಥದಲ್ಲಿ, ಈಗ ನಮ್ಮೆದುರು ರೂಢಿಯಲ್ಲಿರುವ ಆಧುನಿಕ ಕ್ಯಾಲೆಂಡರ್ ಎನ್ನುವುದು ಮನುಕುಲವು ಕಳೆದುಕೊಂಡಿರುವ ಅವೆಷ್ಟೋ ದೈವಗಳ ಬೆಳಕಿಂಡಿ! ನಾಗರಿಕತೆಯ ಕಥನ ಕಣಜ ಸಹ.

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com