
ಟ್ರಂಪ್ ಆಡಳಿತ ಸೂತ್ರದ ಮುಂಚೂಣಿ ವ್ಯಕ್ತಿಗಳಲ್ಲೊಬ್ಬರಾಗಿರುವ ಎಲಾನ್ ಮಸ್ಕ್ ಹಲವು ಕಾರಣಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಗಮನ ಸೆಳೆಯುತ್ತಿರುವುದು ತಮ್ಮ ಮುಖ್ಯ ಭೇಟಿ, ಸಭೆಗಳೆಲ್ಲ ತಮ್ಮ ಮಕ್ಕಳನ್ನೂ ಜತೆಗಿರಿಸಿಕೊಳ್ಳುವುದರ ಮೂಲಕ. ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಭೇಟಿಯಲ್ಲಿ ಸಹ ಎಲಾನ್ ಮಸ್ಕ್ ಮಕ್ಕಳ ಕಲರವ ಎಲ್ಲರ ಕಿವಿ ತಲುಪಿತು.
ಈ ಹಿನ್ನೆಲೆಯಲ್ಲಿ ಹಲವು ಚರ್ಚೆಗಳಾಗುತ್ತಿವೆ. ಅವುಗಳ ಧಾಟಿ ಈ ಬಗೆಗಳಲ್ಲಿದೆ.
“ಭಾರತದ್ದು ಕುಟುಂಬ ಆಧರಿತ ಸಾಮಾಜಿಕ ವ್ಯವಸ್ಥೆ ಎಂದೆಲ್ಲ ಹೆಮ್ಮೆ ಪಡುತ್ತಿದ್ದೇವೆ. ಆದರೆ, ಕುಟುಂಬ ವ್ಯವಸ್ಥೆಯನ್ನು ಗಟ್ಟಿ ಮಾಡಿಕೊಂಡಿರುವವರು ಪಾಶ್ಚಾತ್ಯರು.”
“ಕಚೇರಿಗಳಿಗೆ ಮಕ್ಕಳನ್ನು ಕರೆದುಕೊಂಡುಹೋಗುವುದನ್ನು ಸಾರ್ವತ್ರಿಕ ಹಾಗೂ ಸಾಮಾನ್ಯೀಕರಣಗೊಳಿಸಬೇಕು.”
“ಮಸ್ಕ್ ತನ್ನ ಪವರ್ ಸಮೀಕರಣವನ್ನು ಮಕ್ಕಳಿಗೆ ದಾಟಿಸುತ್ತಿರುವ ಬಗೆ ಇದು.” “ಆತ ಜಗತ್ತಿನ ಅತಿ ಶ್ರೀಮಂತ ಎಲಾನ್ ಮಸ್ಕ್ ಆಗಿರುವುದರಿಂದ ನಡೆಯುತ್ತದೆ. ಸಾಮಾನ್ಯ ಉದ್ಯೋಗದಲ್ಲಿರುವವರು ಈ ಮಾದರಿ ಅನುಸರಿಸುವುದಕ್ಕಾಗುವುದಿಲ್ಲ.”
ಈ ಮೇಲಿನ ಎಲ್ಲ ಗ್ರಹಿಕೆಗಳಲ್ಲೂ ತಕ್ಕಮಟ್ಟಿಗಿನ ತಥ್ಯವಿದೆಯಾದರೂ ಇವುಗಳಲ್ಲಿ ಯಾವುದೋ ಒಂದಂಶವೇ ಸಾರಾಂಶದಂತೆ ತೆಗೆದುಕೊಳ್ಳಬಹುದಾದಂತಹುದ್ದೇನೂ ಅಲ್ಲ. ಎಲಾನ್ ಮಸ್ಕ್ ಅನ್ನು ಈ ನಿಟ್ಟಿನಲ್ಲಿ ಹಾಗಿರಿಸಿರುವ ನಿಜ ಅಂಶ ಯಾವುದು ಮತ್ತು ಅದರಿಂದ ಸಾಮಾನ್ಯರಾದ ನಾವು ಯಾವ ಅಂಶ ಎತ್ತಿಕೊಳ್ಳಬಹುದು ಎಂಬುದನ್ನು ಮನದಟ್ಟು ಮಾಡಿಕೊಳ್ಳುವುದಕ್ಕೆ ಈ ವಿಷಯದಲ್ಲಿ ಇನ್ನೊಂದಿಷ್ಟು ಹಿನ್ನೆಲೆ ಅಗತ್ಯವಿದೆ ಎನಿಸುತ್ತಿದೆ.
ಮೊದಲನೆಯದಾಗಿ, ಎಲಾನ್ ಮಸ್ಕ್ ಎಂಬ ‘ಯಶಸ್ವಿ’, ‘ದುಡ್ಡು ಮಾಡಿರುವ’ ವ್ಯಕ್ತಿ ಮಾಡಿದ ಎಂಬ ಕಾರಣಕ್ಕೆ ಎಲ್ಲವೂ ನಮಗೆ ಸಂಗತವಾಗಬೇಕಿಲ್ಲ, ಆದರ್ಶವೂ ಆಗಬೇಕಿಲ್ಲ. ಏಕೆಂದರೆ, ಹಲವು ಸಂಬಂಧಗಳಿಂದ ಹನ್ನೊಂದು ಮಕ್ಕಳನ್ನು ಪಡೆದಿರುವ ಎಲಾನ್ ಮಸ್ಕ್, ಕೌಟುಂಬಿಕವಾಗಿ ನಿಜಕ್ಕೂ ಯಶಸ್ವಿ ವ್ಯಕ್ತಿಯಾ ಎಂಬುದು ಚರ್ಚಾರ್ಹ ಪ್ರಶ್ನೆಯೇ ಆಗುತ್ತದೆ.
ಎಕ್ಸ್ ಎಂದು ಕರೆಸಿಕೊಳ್ಳುವ ಈ ಮಗನೀಗ ಎಲಾನ್ ಮಸ್ಕ್ ಹೆಗಲನ್ನೇರಿ ಫೋಟೊಕ್ಕೆ ವಸ್ತುವಾಗುತ್ತ, ಅಮೆರಿಕ ಅಧ್ಯಕ್ಷನ ಮೇಜಿಗೆ ಸಿಂಬಳ ಒರೆಸುತ್ತ ಇರುವಾಗಲೇ ಜಸ್ಟೀನ್ ಎಂಬ ಇನ್ನೊಬ್ಬ ಮಗ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣಾಗಿ ಬದಲಾಗಿ, ತಾನು ತನ್ನ ತಂದೆಯೊಂದಿಗೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳುವುದಿಲ್ಲ ಎಂದು ದೂರವಾಗಿರುವ ಇನ್ನೊಂದು ವಿದ್ಯಮಾನವೂ ಇದೆ. ಮಸ್ಕ್ ತನ್ನ ಕುಟುಂಬದ ಹಲವರೊಂದಿಗೆ ಸಂಬಂಧ ಬಿಗಡಾಯಿಸಿಕೊಂಡಿರುವ ಸುದ್ದಿಗಳು ಸಾಕಷ್ಟು ವರದಿಯೂ ಆಗಿವೆ. ಇದೀಗ ಈತನೇ ತನ್ನ ಉತ್ತರಾಧಿಕಾರಿ ಎಂದು ಮಸ್ಕ್ ತನ್ನೆಲ್ಲ ಭೇಟಿಗಳಿಗೆ ಜತೆ ಇಟ್ಟುಕೊಳ್ಳುತ್ತಿರುವ ಎಕ್ಸ್ ಎಂಬ ಹುಡುಗ ಈ ಕ್ಷಣಕ್ಕೆ ನಮ್ಮೆಲ್ಲರ ಗಮನ ತನ್ನತ್ತ ಸೆಳೆದುಕೊಳ್ಳುತ್ತಿರಬಹುದಾದರೂ, ದೀರ್ಘಾವಧಿಯಲ್ಲಿ ಆತನೊಂದು ಹೇರಿಕೆಯ ವ್ಯಕ್ತಿತ್ವದ ಭಾರದಲ್ಲಿ ನಲುಗಿಬಿಡಬಹುದಾ ಎಂಬ ಪ್ರಶ್ನೆಗೆ ಸಹ ಉತ್ತರವನ್ನು ಈಗ ಕೊಡಲಾಗುವುದಿಲ್ಲ, ಕಾಲವೇ ಕೊಡಬೇಕಾಗುತ್ತದೆ.
ಏಕೆಂದರೆ, ತನ್ನ ಬಾಲ್ಯದಲ್ಲಿ ತಾನು ಏಕಾಂಗಿತನದಿಂದ ನರಳಿದ್ದೆ ಎಂಬಂಶವನ್ನೇ ಇಟ್ಟುಕೊಂಡು ಆ ಭಾವಶೂನ್ಯತೆಯ ನೆನಪುಗಳನ್ನು ಈ ಎಕ್ಸ್ ಎಂಬ ಮಗನನ್ನು ಸಾರ್ವಜನಿಕವಾಗಿ ಮೆರೆಸುವ ಮೂಲಕ ಮಸ್ಕ್ ತುಂಬಿಕೊಳ್ಳುತ್ತಿದ್ದಾರೆ ಎಂಬ ವಾದಗಳಿವೆ. ಇದು ನಿಜವೇ ಆಗಿದ್ದರೆ, ನಮ್ಮ ಮಧ್ಯಮವರ್ಗದಲ್ಲಿ “ನಾನು ಡಾಕ್ಟರ್ ಆಗಲು ಆಗಲಿಲ್ಲವಾದ್ದರಿಂದ ನನ್ನ ಮಗನನ್ನೋ, ಮಗಳನ್ನೋ ಅದಾಗಿಸುತ್ತೇನೆ” ಅಂತ ಮಕ್ಕಳ ಮನದಾಸೆಯನ್ನೇ ಗಣಿಸದೇ ಒತ್ತಡ ಸೃಷ್ಟಿಸುವ ವ್ಯಕ್ತಿಗಳಿಗಿಂತ ಮಸ್ಕ್ ತುಂಬ ಭಿನ್ನ ಎಂದೇನೂ ಅನಿಸುವುದಿಲ್ಲ. ಉದ್ಯೋಗ-ಉದ್ಯಮ ಕ್ಷೇತ್ರಗಳಲ್ಲಿ ಬಹಳ ಕಠಿಣ ಸ್ವಭಾವದ ವ್ಯಕ್ತಿ ಎಂದೇ ವರ್ಚಸ್ಸು ಗಳಿಸಿಕೊಂಡಿರುವ ಎಲಾನ್ ಮಸ್ಕ್, ತಾವು ಹೋದಲ್ಲೆಲ್ಲ ನಾಲ್ಕು ವರ್ಷ ಪ್ರಾಯದ ಮಗನನ್ನು ಹೊತ್ತೊಯ್ಯುತ್ತಿರುವುದು ಮತ್ತೊಂದು ನೆಲೆಯಲ್ಲಿ ತಮ್ಮ ಮೃದು ವರ್ಚಸ್ಸನ್ನು ಗಳಿಸಿಕೊಳ್ಳುವ ಪ್ರಚಾರ ಕಾರ್ಯಸೂಚಿಯ ಭಾಗ ಎಂಬ ವಿಶ್ಲೇಷಣೆಗಳೂ ಇವೆ.
ನಿಜ. ಇವ್ಯಾವುದರ ಮೇಲೂ ಎಲಾನ್ ಮಸ್ಕ್ ಅವರನ್ನು ಇದಮಿತ್ಥಂ ಎಂದು ಜಡ್ಜ್ ಮಾಡಬೇಕಿಲ್ಲ. ಆದರೆ ಎಲಾನ್ ಮಸ್ಕ್ ಹಾಗೂ ಸಾಮಾನ್ಯರ ವಾಸ್ತವಗಳು ಭಿನ್ನ ನೆಲೆಯವಾದ್ದರಿಂದ ತೀರ ಒಂದೆರಡು ಆಕರ್ಷಕ ಫೂಟೇಜು-ಚಿತ್ರಗಳ ಪ್ರೇರಣೆಯಲ್ಲಿ ಅವರ ಯಾವುದೋ ಒಂದು ನಡೆಯನ್ನು ಆದರ್ಶವಾಗಿ ಸ್ವೀಕರಿಸಬೇಕಿಲ್ಲ ಎಂಬುದಕ್ಕೆ ಇಷ್ಟೆಲ್ಲ ಹೇಳಬೇಕಾಯಿತು. ಒಬ್ಬ ವ್ಯಕ್ತಿ ವ್ಯಾವಹಾರಿಕವಾಗಿ ಯಶಸ್ವಿಯಾಗಿದ್ದಾನೆ ಎಂದಾದರೆ ಆತನ ಅಥವಾ ಆಕೆಯ ಬದುಕಿನ ಬೇರೆಲ್ಲ ಆಯಾಮಗಳೂ ಆದರ್ಶವಾಗಿಬಿಟ್ಟಿರುತ್ತವೆ ಎಂದೇನಲ್ಲ. ಉದಾಹರಣೆಗೆ, ಅನ್ವೇಷಣಾಮತಿಯ ವಿಷಯ ಬಂದರೆ ಇವತ್ತಿಗೂ ಸ್ಟೀವ್ ಜಾಬ್ಸ್ ಸ್ಮರಣಾರ್ಹ. ಹಾಗಂತ, ತನ್ನ ಉದ್ಯೋಗಿಗಳ ಜತೆ ವ್ಯವಹರಿಸುವ ಮಾತು ಬಂದಾಗ, ಆತ ಅತಿ ಕೋಪಿಷ್ಠ ಬಾಸ್ ಆಗಿದ್ದ ಎಂಬ ಬಗ್ಗೆ ಢಾಳಾಗಿ ವಿವರಗಳಿವೆ. ದೊಡ್ಡದೇನೋ ಒಂದನ್ನು ಸಾಧಿಸಬೇಕಾದರೆ ಹಾಗೆಯೇ ನಿಷ್ಠುರವಾಗಿ ನಡೆದುಕೊಳ್ಳಬೇಕಾಗುತ್ತದೆ ಎಂದು ಸಮರ್ಥನೆಯನ್ನೇನೋ ಮಾಡಿಕೊಳ್ಳಬಹುದು. ಆದರೆ ಆತನ ಉದ್ಯೋಗಿಯ ಸ್ಥಾನದಲ್ಲಿ ಒಮ್ಮೆ ನಿಮ್ಮನ್ನು ಕಲ್ಪಿಸಿಕೊಳ್ಳುತ್ತಲೇ ಉತ್ತರ ಬೇರೆಯಾಗುತ್ತದೆ.
ಹೀಗಾಗಿ, ನಮ್ಮ ಬದುಕಿನ ನೆಲೆ ಹಾಗೂ ಬದುಕಿನಿಂದ ನಾವೇನನ್ನು ಬಯಸುತ್ತಿದ್ದೇವೆ, ಯಾವುದು ನಿಜಕ್ಕೂ ನಮಗೆ ಖುಷಿ ಕೊಡುತ್ತದೆ ಎಂಬುದರ ಮೇಲೆ ಮಾತ್ರವೇ ನಮಗೆ ಆದರ್ಶಗಳು ಹಾಗೂ ಮಾದರಿಗಳು ಪ್ರಸ್ತುತವಾಗುತ್ತವೆ.
ಭಾರತಕ್ಕೆ ಹೋಲಿಸಿದರೆ ಪಾಶ್ಚಾತ್ಯರ ಕಚೇರಿ ವ್ಯವಸ್ಥೆಗಳಲ್ಲಿ ಮಕ್ಕಳ ನಿರ್ವಹಣೆ ಸಂಬಂಧ ಕೆಲವು ಪೂರಕ ವ್ಯವಸ್ಥೆಗಳು ಹೆಚ್ಚಿರಬಹುದಾದರೂ, ಬೇಕೆಂದಾಗಲೆಲ್ಲ ಮಕ್ಕಳನ್ನು ಜತೆಗೆ ಕರೆದುಕೊಂಡುಹೋಗುವ ವ್ಯವಸ್ಥೆ ಯಾವ ಕಚೇರಿಗಳಲ್ಲೂ ಇರುವುದಿಲ್ಲ. ಕೌಟುಂಬಿಕ ಭಾವನಾತ್ಮಕ ಅಂಶಗಳನ್ನಿಟ್ಟುಕೊಂಡು ಏನೇ ಮಾತಾಡುವುದಕ್ಕೆ ಹೋದರೂ ಅಂಥದೊಂದು ವ್ಯವಸ್ಥೆ ವೃತ್ತಿಪರತೆ ಹಾಗೂ ಔದ್ಯೋಗಿಕ ಪರಿಸರಕ್ಕೆ ಪೂರಕವೂ ಅಲ್ಲ. ಅನಿವಾರ್ಯ ಕಾರಣಗಳಲ್ಲಿ ಹಾಗೂ ವರ್ಷದ ನಿರ್ದಿಷ್ಟ ದಿನಗಳಲ್ಲಿ ಹೀಗೆ ಕಚೇರಿಯೊಳಗೆ ಮಕ್ಕಳನ್ನು ಬಿಟ್ಟುಕೊಳ್ಳುವ ವ್ಯವಸ್ಥೆ ಸರಿ. ಆದರೆ, ಬಿಸಿನೆಸ್ ಮೀಟಿಂಗಿಗೂ ಸಣ್ಣ ಮಕ್ಕಳನ್ನು ಕರೆದುಕೊಂಡುಹೋಗುವುದು ಎಲಾನ್ ಮಸ್ಕ್ ಥರದ ವ್ಯಕ್ತಿಗಳ ವಿಷಯದಲ್ಲಿ ಮಾತ್ರವೇ ಸಾಧ್ಯವಾಗುತ್ತದೆ. ಇದು ನಮ್ಮಂಥ ಸಾಮಾನ್ಯರ ಬದುಕಿನಲ್ಲೂ ಸಾಧ್ಯವಾಗಲಿ ಎಂದು ಕನಸನ್ನು ಸಹ ಕಾಣಬೇಕಿಲ್ಲ, ಏಕೆಂದರೆ ಮಕ್ಕಳು ಮುಕ್ಕಾಲು ಪಾಲು ಬೆಳೆಯಬೇಕಿರುವುದು ಅವರ ಸರಿವಯಸ್ಸಿನವರ ಜತೆಯಲ್ಲೇ. ಭವಿಷ್ಯದಲ್ಲಿ ಈ ಜೀವವನ್ನು ಮಹತ್ತರ ವ್ಯಕ್ತಿಯಾಗಿಸಿಬಿಡುತ್ತೇನೆ ಎನ್ನುತ್ತ ಮಗುವೊಂದನ್ನು ಆರಂಭದಿಂದಲೇ ಪ್ರೌಢ ಪರಿಸರದಲ್ಲಿಟ್ಟು ಅದರ ಮೇಲೆ ‘ಅಡಲ್ಟ್’ತನವೊಂದನ್ನು ಹೇರುವುದು ಸಹ ಎಷ್ಟು ಸೂಕ್ತ ಎಂಬುದು ಯೋಚಿಸಬೇಕಾದ ವಿಷಯ.
ಹಾಗಾದರೆ, ಭುಜದ ಮೇಲೆ ಮಗುವನ್ನು ಹೊತ್ತು ಮೀಟಿಂಗ್ ಗಳಲ್ಲಿ ಕಾಣಿಸಿಕೊಳ್ಳುವ ಎಲಾನ್ ಮಸ್ಕ್ ಅಧ್ಯಾಯದಿಂದ ನಾವು ಹೆಕ್ಕಿಕೊಳ್ಳಬಹುದಾಗಿದ್ದು ಏನೂ ಇಲ್ಲವೇ? ಮಕ್ಕಳಿಗೆ ನೈಜ ಜಗತ್ತಿನ ಅನುಸಂಧಾನವಿರಬೇಕು ಎಂಬ ಒಂದಂಶವನ್ನು ಖಂಡಿತ ಎತ್ತಿಕೊಳ್ಳಬಹುದು. ಆದರೆ ಅದೂ ಸಹ ನಮ್ಮ ನಮ್ಮ ವ್ಯಾಪ್ತಿಗೆ ಎಷ್ಟು ದಕ್ಕುತ್ತದೆ ಎಂಬ ಆಧಾರದಲ್ಲಿ.
ನರ್ಸರಿಯಿಂದ ಆರಂಭವಾಗುವ ಶಾಲೆ ವ್ಯವಸ್ಥೆಯಲ್ಲಿ ಹತ್ತನೇ ತರಗತಿಯವರೆಗೂ ಮಕ್ಕಳನ್ನು ಅಗತ್ಯಕ್ಕಿಂತ ಹೆಚ್ಚು ವ್ಯಸ್ತವಾಗಿಸಿಬಿಟ್ಟಿದ್ದೇವಾ? ಆ ವ್ಯವಸ್ಥೆಯಲ್ಲಿ ಹತ್ತು ವರ್ಷ ಮಗು ಏನನ್ನು ಕಲಿಯುತ್ತದೋ ಅದರಲ್ಲಿ ಮುಖ್ಯವಾದುದನ್ನು ಕಲಿಯುವುದಕ್ಕೆ, ಇವತ್ತಿನ ಡಿಜಿಟಲ್ ಯುಗದ ಹಿನ್ನೆಲೆಯಲ್ಲಿ ಐದೇ ವರ್ಷ ಸಾಕೇನೋ. ಹೀಗಾಗಿ ಶಾಲಾ ಸಮಯದಲ್ಲಿ ಜಗತ್ತಿನ ಕೆಲ ನೈಜ ಅನುಭವಗಳಿಗೆ ಒಗ್ಗಿಸಿಕೊಳ್ಳುವುದರತ್ತ ಯೋಚಿಸಬಹುದೇನೋ. ಅಂದರೆ- ಮಗುವನ್ನು ಯಾವುದೋ ಸಾಮಾಜಿಕ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುವುದು ಸಹ ರಜೆಯಲ್ಲ, ಕಲಿಕೆಯೇ. ಆದರೆ ಅದನ್ನು ಕಲಿಕೆಯಾಗಿಸಬೇಕಾದ ಜವಾಬ್ದಾರಿ ಪಾಲಕರದ್ದು. ಅಂದರೆ, ಶಾಲೆಗೆ ರಜೆ ಹಾಕಿಸಿ ಮದುವೆ ಮನೆಗೆ ಮಕ್ಕಳನ್ನು ಕರೆದುಕೊಂಡು ಹೋಗುವುದಕ್ಕೆ ಹಿಂಜರಿಕೆ ಇರಬಾರದು. ಹಾಗಂತ, ಅಲ್ಲಿ ಹೋಗಿ ಮೊಬೈಲ್ ಫೋನ್ ಕೊಟ್ಟು ಕೂರಿಸಿದೆ ಅಂತಾಗಬಾರದು. ಅಲ್ಲಿ ಮಗುವು ಸಂಬಂಧಗಳ ಬಗ್ಗೆ ಕಲಿಯಬೇಕು, ಇತರರ ಜತೆ ಮಾತನಾಡುವ ಬಗೆ ಅರಿತುಕೊಳ್ಳಬೇಕು. ಆ ಸಮಾರಂಭಕ್ಕೆ ಮಾಡಿರುವ ತಯಾರಿ ಹಾಗೂ ಆ ಎಲ್ಲ ತಯಾರಿಗಳಿಗೆ ಬೇಕಿರುವ ಕೌಶಲಗಳ ಬಗ್ಗೆ ಕುತೂಹಲ ಇವೆಲ್ಲವುದರಲ್ಲೇ ಕಲಿಕೆ ತೆರೆದುಕೊಳ್ಳಬೇಕು.
ಎಲಾನ್ ಮಸ್ಕ್ ತನ್ನ ಮಕ್ಕಳನ್ನು ಸಾರ್ವತ್ರಿಕ ಶಾಲಾ ವ್ಯವಸ್ಥೆಗೆ ಒಳಪಡಿಸಿಲ್ಲ. ಕಂಪನಿಯ ಉದ್ಯೋಗಿಗಳ ಕೆಲ ಮಕ್ಕಳನ್ನೂ ಒಟ್ಟುಹಾಕಿಕೊಂಡು ‘ಹೋಮ್ ಸ್ಕೂಲಿಂಗ್’ ಮೂಲಕ ಮಕ್ಕಳಿಗೆ ರಾಕೆಟ್ ಸೇರಿದಂತೆ ವಸ್ತುಗಳೆಲ್ಲ ಮೂಲಭೂತವಾಗಿ ಹೇಗೆ ನಿರ್ಮಿತವಾಗುತ್ತವೆ ಎಂಬುದರ ಬಗ್ಗೆ ಕಲಿಸಲಾಗುತ್ತದೆ.
ಭಾರತದಲ್ಲೂ ಸಹ ಹೋಮ್ ಸ್ಕೂಲಿಂಗ್ ಪದ್ಧತಿ ಇದೆ. ಹತ್ತನೇ ತರಗತಿಗೆ ಮಾತ್ರ ಪರೀಕ್ಷೆಯಲ್ಲಿ ಹಾಜರಾಗಿ ಸಾಮರ್ಥ್ಯ ತೋರಿಸಿ ಪ್ರಮಾಣಪತ್ರ ಪಡೆದುಕೊಳ್ಳುವ ಮಾರ್ಗವಿದು. ಹಲವು ಮಕ್ಕಳು ಕಲೆತು ಕಲಿಯಬಹುದಾದ ಒಂದು ಉತ್ತಮ ಸಮುದಾಯ ವ್ಯವಸ್ಥೆ ಇದೆ ಅಂತಾದರೆ ಈ ಮಾರ್ಗ ಮಕ್ಕಳಿಗೆ ವರವಾಗಬಲ್ಲದು. ಅದಲ್ಲದೇ, ಈಗಿನ ವ್ಯವಸ್ಥೆಯಲ್ಲಿ ಸಹ, ಮಗುವನ್ನು ಕೇವಲ ಶಾಲಾಪಠ್ಯ ಮತ್ತು ಕೊಠಡಿಗೆ ಮಾತ್ರವೇ ಸೀಮಿತವಾಗಿರಸದೇ ಅನುಭವಗಳಿಗೆ ಅಭಿಮುಖವಾಗಿಸುವ ಮಾರ್ಗ ಪ್ರಸ್ತುತ. ಒಬ್ಬ ಕೃಷಿಕ ಜಮೀನಿನಲ್ಲಿ ಏನೆಲ್ಲ ಕೆಲಸ ಮಾಡುತ್ತಾನೆ, ಸ್ಥಳೀಯವಾಗಿಯೇ ಪರಿಕರಗಳನ್ನು ಹೇಗೆ ರೂಪಿಸಿಕೊಳ್ಳುತ್ತಾನೆ ಎಂಬುದರ ಅನುಭವಕ್ಕೆ ಮಕ್ಕಳನ್ನು ಭಾಗವಾಗಿಸಬಹುದು. ವೆಲ್ಡಿಂಗ್ ಅಂಗಡಿ, ಎಲೆಕ್ಟ್ರಿಕ್ ಶಾಪ್ ಇಲ್ಲೆಲ್ಲ ಆಗುವ ಕೆಲಸಗಳೇನು ಹಾಗೂ ಈ ಕೆಲಸಗಾರರು ಬಳಸುತ್ತಿರುವ ತರ್ಕಗಳೇನು? ಆ ಪ್ರದೇಶದಲ್ಲಿ ಕಟ್ಟಡವೊಂದು ನಿರ್ಮಾಣವಾಗುತ್ತಿದ್ದರೆ ಅಲ್ಲಿ ಅನ್ವಯಿಸಲಾಗುತ್ತಿರುವ ಲೆಕ್ಕಾಚಾರಗಳೇನು…ಇಂಥವಕ್ಕೆಲ್ಲ ಸಾಮಾನ್ಯರಾದ ನಾವೂ ಮಗುವನ್ನು ಪರಿಚಯಿಸಬಹುದು. ಇವೆಲ್ಲದರ ಅರ್ಥ ನಾಳೆ ಆ ಮಗು ಕೃಷಿಕನೇ ಆಗಬೇಕು, ಸಿವಿಲ್ ಎಂಜಿನಿಯರ್ ಆಗಬೇಕು ಅಥವಾ ನಾವು ಪರಿಚಯಿಸುತ್ತಿರುವ ಯಾವುದೇ ವೃತ್ತಿಯ ಭಾಗವಾಗಬೇಕು ಎಂಬುದಲ್ಲ. ಅಲ್ಲಿಂದ ಯಾವ ತರ್ಕವನ್ನು, ವಿಶ್ಲೇಷಣಾ ಸಾಮರ್ಥ್ಯವನ್ನು ಮಗು ಎತ್ತಿಕೊಳ್ಳುತ್ತದೆ ಎಂಬುದಷ್ಟೇ ಮುಖ್ಯ. ಈ ಸಾಮರ್ಥ್ಯವೇ ಮುಂದೆ ಯಾವುದೋ ಕಸುಬು ಅಥವಾ ಜೀವನಕೌಶಲಕ್ಕೆ ಅವರನ್ನು ಅರ್ಹರಾಗಿಸಬಲ್ಲದು.
ಕೃತಕ ಬುದ್ಧಿಮತ್ತೆ ಮತ್ತು ತಾಂತ್ರಿಕತೆ ವೇಗವಾಗಿ ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಮೊದಲಿನಂತೆ ಮಗುವನ್ನು ಯಾವುದೋ ಕೋರ್ಸ್, ವೃತ್ತಿಗೆ ತಯಾರು ಮಾಡುವುದು ಕಷ್ಟ. ಏಕೆಂದರೆ ಓದು ಮುಗಿಸುವಷ್ಟರಲ್ಲಿ ಆ ವೃತ್ತಿಗಳೇ ಇಲ್ಲವಾಗಬಹುದು. ಹೀಗಾಗಿ ಮಗುವಿಗೆ ರೂಢಿಸಬಹುದಾಗಿದ್ದು ತರ್ಕ, ಗಣಿತ, ಸೃಜನಾತ್ಮಕತೆ, ವಿಶ್ಲೇಷಣಾ ಸಾಮರ್ಥ್ಯಗಳನ್ನು ಮಾತ್ರ. ಈ ಅಂಶವನ್ನು ಮಾತ್ರ ಮಗುವನ್ನೆತ್ತಿಕೊಂಡ ಮಸ್ಕ್ ಚಿತ್ರಣದಿಂದ ಸಾಮಾನ್ಯರು ಎತ್ತಿಕೊಳ್ಳಬಹುದಾಗಿದೆ.
- ಚೈತನ್ಯ ಹೆಗಡೆ
cchegde@gmail.com
Advertisement