
ಭಾರತ ಬಹು ದೊಡ್ಡ ದೇಶ. ಅದೆಷ್ಟು ದೊಡ್ಡ ದೇಶ ಎನ್ನುವುದಕ್ಕೆ ಉದಾಹರಣೆ ಹೇಳಬೇಕೆಂದರೆ ಈ ಬಾರಿ ಹತ್ತನೇ ತರಗತಿ ಸಿಬಿಎಸ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳ ಸಂಖ್ಯೆ ಸರಿಸುಮಾರು 32 ಲಕ್ಷ! ಇನ್ನು ಭಾರತದ ಎಲ್ಲಾ ರಾಜ್ಯಗಳಲ್ಲಿ ಸ್ಟೇಟ್ ಸಿಲಬಸ್ ತೆಗೆದುಕೊಂಡಿರುವ ಮಕ್ಕಳ ಲೆಕ್ಕಾಚಾರ ಬೇರೆಯದಿದೆ. ಒಟ್ಟಾರೆ ಎರಡೂ ಬೋರ್ಡ್ ಸೇರಿ ಹತ್ತನೇ ತರಗತಿ ಪರೀಕ್ಷೆ ಬರೆಯುವ ಮಕ್ಕಳ ಸಂಖ್ಯೆ ಸರಿಸುಮಾರು 1 ಕೋಟಿ 85 ಲಕ್ಷ ಎನ್ನುತ್ತದೆ ಅಂಕಿ-ಅಂಶ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ.
ಇದರಲ್ಲಿ ಸರಿ ಸುಮಾರು 90 ಪ್ರತಿಶತ ಮಕ್ಕಳು ಉತ್ತಿರ್ಣರಾಗಿ ಮುಂದಿನ ತರಗತಿಗೆ ಹೋಗುತ್ತಾರೆ ಎನ್ನುವುದು ಕೂಡ ಅಂಕಿ-ಅಂಶತಿಳಿಸುತ್ತಿದೆ. ಯೂರೋಪಿನ ಬಹಳಷ್ಟು ದೇಶಗಳ ಜನ ಸಂಖ್ಯೆ ಇದಕ್ಕಿಂತ ಕಡಿಮೆ ಇರುತ್ತದೆ ಎನ್ನುವುದನ್ನು ನಾವು ಗಮನಿಸಬೇಕು. ಶಿಕ್ಷಣ ಎನ್ನುವುದು ಬಹುಕೋಟಿ ಉದ್ಯಮವಾಗಿದೆ. ಓದಿದ ನಂತರ ಮುಂದೇನು ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ನಾವು ಕಂಡುಕೊಳ್ಳುತ್ತಿಲ್ಲ. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಎನ್ನುವುದು ಕೆಲಸವನ್ನು ಕಡಿಮೆ ಮಾಡುತ್ತದೆ ಎಂದಾಗ ಬಹಳಷ್ಟು ಜನ ಇದನ್ನು ಕಂಪ್ಯೂಟರ್ ಉಗಮಕ್ಕೆ ಹೋಲಿಸಿ, ಆಗ ಕೂಡ ಹೀಗೆ ಹೇಳಿದ್ದರು , ಕಂಪ್ಯೂಟರ್ ಆವಿಷ್ಕಾರದಿಂದ ಜನರಿಗೆ ಕೆಲಸವಿರುವುದಿಲ್ಲ ಎಂದಿದ್ದರು ಎನ್ನುವ ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ.
ನಿಮಗೆ ಗೊತ್ತಿರಲಿ ಈಗಾಗಲೇ ಬಹಳಷ್ಟು ಕಂಪನಿಗಳು ಬಹಳಷ್ಟು ಕೆಲಸಗಳನ್ನು ತೆಗೆದು ಬಿಟ್ಟಿದ್ದಾರೆ. ಜಗತ್ತಿನಾದ್ಯಂತ ಲಕ್ಷಾಂತರ ಜನ ಕೆಲಸವನ್ನು ಕಳೆದುಕೊಂಡಿದ್ದಾರೆ. ಮುಂದಿನ ಐದು ವರ್ಷದಲ್ಲಿ ಇವತ್ತು ಪ್ರಸ್ತುತ ಎನ್ನಿಸಿಕೊಂಡಿರುವ ಬಹಳಷ್ಟು ಕೆಲಸಗಳು ಇರುವುದಿಲ್ಲ. ಜಗತ್ತು ಹಿಂದೆಂದಿಗಿಂತ ಹೆಚ್ಚು ವೇಗದಲ್ಲಿ ಬದಲಾಗುತ್ತಿದೆ. ಈ ಸಮಯದಲ್ಲಿ ನಮ್ಮ ಓದು ಎಷ್ಟು ಪ್ರಸ್ತುತ ಎನ್ನುವ ಪ್ರಶ್ನೆ ನಮ್ಮ ಮುಂದೆ ಎದುರಾಗಬೇಕು. ಯಾವ ಕೋರ್ಸ್ ಮಾಡಿದರೆ ಒಳ್ಳೆಯದು, ಯಾವ ವೃತ್ತಿಗಳಿಗೆ ಬೆಲೆಯಿರುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಏಕೆಂದರೆ ಇಂದಿಗೆ ಎಲ್ಲವೂ ಹಣಕಾಸಿನ ಮೇಲೆ ಅವಲಂಬಿತವಾಗಿದೆ. ಇಲ್ಲಿ ಎರಡು ಅಂಶಗಳನ್ನು ನಾವು ಗಮನಿಸಬೇಕು. ಮೊದಲಿಗೆ ಬಹಳಷ್ಟು ಸಮಯವನ್ನು ನಾವು ಇಲ್ಲಿ ಹೂಡಿಕೆ ಮಾಡಿರುತ್ತೇವೆ. ಎರಡನೆಯದಾಗಿ ಸಾಕಷ್ಟು ಹಣವನ್ನು ಕೂಡ ಹೂಡಿಕೆ ಮಾಡಿರುತ್ತೇವೆ. ಹೀಗೆ ಇಷ್ಟು ಹಣ ಮತ್ತು ಸಮಯವನ್ನು ವ್ಯಯಿಸಿ ಮಾಡಿದ ಕೋರ್ಸ್, ಕಲಿತ ವಿದ್ಯೆ ಕೈ ಹಿಡಿಯದೇ ಹೋದರೆ ಆಗೇನು ಮಾಡುವುದು? ಇದೊಂದು ಅತ್ಯಂತ ದೊಡ್ಡ ಪ್ರಶ್ನೆ.
ಈ ಪ್ರಶ್ನೆಗೆ ಉತ್ತರ ಕೊಡುವ ಗೋಜಿಗೆ ಶಿಕ್ಷಣ ಸಂಸ್ಥೆಗಳು ಹೋಗುತ್ತಿಲ್ಲ. ಇದು ತಪ್ಪು. ಮುಂದಿನ ಒಂದು ದಶಕದಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆ ಇರುವುದೇ ಸಂದೇಹ ಎನ್ನುವ ಮಟ್ಟಕ್ಕೆ ತಂತ್ರಜ್ಞಾನ ಬದಲಾಗುತ್ತಿದೆ. ಸಮಾಜ ಕೂಡ ಅಷ್ಟೇ ವೇಗದಲ್ಲಿ ಬದಲಾಗಲಿದೆ. ಶಾಲೆ, ಕಾಲೇಜು, ಯೂನಿವೆರ್ಸಿಟಿಗಳು ಮುಚ್ಚುವ ಹಂತಕ್ಕೆ ಪರ್ಯಾಯ ಕಲಿಕೆಯ ಮಾಧ್ಯಮಗಳು ಪ್ರಬಲವಾಗಲಿವೆ. ಇದನ್ನು ಅರಿತುಕೊಳ್ಳದಿದ್ದರೆ ಶಿಕ್ಷಣ ಕ್ಷೇತ್ರ ಕೂಡ ಬಡವಾಗಲಿದೆ. ಅವರ ಬಿಸಿನೆಸ್ ಕೂಡ ಮುಚ್ಚಿ ಹೋಗಲಿದೆ.
ಯಾವ ತರಹದ ವಿದ್ಯೆ ಕಲಿತರೆ ಭವಿಷ್ಯವಿದೆ ಎನ್ನುವುದನ್ನು ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಎಂಜಿನಿಯರಿಂಗ್: ಕಳೆದ ಒಂದು ದಶಕದಿಂದ ಒಂದಷ್ಟು ಬಣ್ಣ ಕಳೆದುಕೊಂಡಿರುವ ಕೋರ್ಸ್ ಇದು. ಭಾರತದಲ್ಲಿ ಎಲ್ಲೇ ನಿಂತು ಕಲ್ಲೆಸದರೂ ಅದು ಯಾವ ಮನೆಯ ಮೇಲೆ ಬಿದ್ದರೂ ಅದು ಒಬ್ಬ ಇಂಜಿನಿಯರ್ ಮನೆಯಾಗಿರುತ್ತದೆ ಎನ್ನುವ ಮಟ್ಟಕ್ಕೆ ಇಂಜಿನಿಯರ್ಗಳು ನಮ್ಮಲ್ಲಿದ್ದಾರೆ. ಸಿಕ್ಕದ ಕೆಲಸ , ಬದಲಾದ ಸಮಾಜ ಇದಕ್ಕಿದ್ದ ಡಿಮ್ಯಾಂಡ್ ಕಡಿಮೆ ಮಾಡಿದೆ. ಈಗ ಮತ್ತೊಮ್ಮೆ ಮಧ್ಯಮ ವರ್ಗದ ಜನರಲ್ಲಿ ಈ ಕೋರ್ಸ್ ಬಗ್ಗೆ ಹೊಸ ಹುರುಪು ಬಂದಿದೆ. ಹಿಂದೆ ಕಂಪ್ಯೂಟರ್ ಸೈನ್ಸ್ ಗಿದ್ದ ಡಿಮ್ಯಾಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಮತ್ತು ಮಷೀನ್ ಲೆರ್ನಿಂಗ್, ರೊಬಾಟಿಕ್ಸ್ ಇತ್ಯಾದಿಗಗೆ ಬಂದಿದೆ ಎಂದು ಅವುಗಳನ್ನು ಹೆಚ್ಚೆಚ್ಚು ಕೊಡಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಬೇಸಿಕ್ ಇಂಜಿನಿಯರಿಂಗ್ ಆದ, ಮೆಕ್ಯಾನಿಕಲ್ , ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಜೊತೆಗೆ ಎಐ ಕಲಿಕೆ ಉತ್ತಮ. ಕೇವಲ ಎಐ ಯಿಂದ ಯಾವುದೇ ಪ್ರಯೋಜನವಿಲ್ಲ. ಈ ಕೋರ್ಸ್ ತೆಗೆದುಕೊಳ್ಳುವ ಮುಂಚೆ ಎಚ್ಚರ.
ಮೆಡಿಕಲ್ ಕೋರ್ಸ್ ಗಳು: ಎಂದಿಗೂ ಇದು ಹಸಿರಾದ ಕ್ಷೇತ್ರ, ಓದು ಎನ್ನಬಹುದು. ಎಲ್ಲರೂ ವೈದ್ಯರಾಗಲು ಇಂದು ಸಾಧ್ಯವಿಲ್ಲ. ಕನಿಷ್ಠ ಎರಡು ಕೋಟಿ ರೂಪಾಯಿ ಇಲ್ಲದೆ ವೈದ್ಯರಾಗುವುದು ಕನಸಿನ ಮಾತು ಎನ್ನುವಂತಾಗಿದೆ. ಇಷ್ಟಾಗಿಯೂ ಕೇವಲ ಎಂಬಿಬಿಎಸ್ ಮಾಡಿ ಪ್ರಯೋಜನವಿಲ್ಲ. ಎಂಡಿ ಮಾಡಲು ಇನ್ನೊಂದು ಕೋಟಿ! ರಿಟರ್ನ್ ಆನ್ ಇನ್ವೆಸ್ಟ್ಮೆಂಟ್ (ROI ) ಹುಟ್ಟುವುದು ಯಾವಾಗ? ಮೆಡಿಕಲ್ ಗೆ ಸಂಬಂಧಿಸಿದ ನರ್ಸಿಂಗ್, ಬಯೋ ಟೆಕ್ನಾಲಜಿ, ಇತ್ಯಾದಿ ಅಪರೋಕ್ಷವಾಗಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧ ಪಟ್ಟ ಕೋರ್ಸ್ ಗಳನ್ನು ಮಾಡುವುದು ಉತ್ತಮ.
ಕಾಮರ್ಸ್ ಕೋರ್ಸ್ ಗಳು, ಹಣಕಾಸಿಗೆ ಸಂಬಂಧಿಸದ ಕೋರ್ಸ್ ಗಳು: ಇವತ್ತು ತಂತ್ರಜ್ಞಾನದ ಸಹಾಯದಿಂದ ಅಕೌಂಟೆಂಟ್ ಮಾಡುತ್ತಿದ್ದ ಕೆಲಸವನ್ನು ಮಷೀನ್ ಮಾಡಿ ಮುಗಿಸಿ ಬಿಡುತ್ತದೆ. ಡೇಟಾ ಎಂಟ್ರಿ ಕೆಲಸವಾದ ಪೆರ್ಚೆಸ್, ಸೇಲ್ಸ್, ಬ್ಯಾಂಕ್ ಇತ್ಯಾದಿ ಎಲ್ಲವನ್ನೂ ಈಗ ಅಕೌಂಟಿಂಗ್ ಸಾಫ್ಟ್ವೇರ್ ಗಳು ಮಾಡಿ ಮುಗಿಸುತ್ತವೆ. ಟ್ರಯಲ್ ಬ್ಯಾಲೆನ್ಸ್, ಬ್ಯಾಲೆನ್ಸ್ ಶೀಟ್ ಗಳನ್ನೂ ಕೂಡ ಅವೇ ಸಿದ್ದ ಪಡಿಸುತ್ತವೆ. ರೇಶ್ಯು ಅನಾಲಿಸಿಸ್, ಫಂಡ್ ಫ್ಲೋ, ಕ್ಯಾಶ್ ಫ್ಲೋ ಕೂಡ ಸಿದ್ದ ಪಡಿಸುತ್ತವೆ. ಅವುಗಳನ್ನು ಒಂದಷ್ಟು ನೋಡಿ, ಬೇಕಾದ ಒಂದಷ್ಟು ಬದಲಾವಣೆ ಮಾಡಿಕೊಂಡರೆ ಸಾಕು. ಹೀಗಾಗಿ ಹತ್ತು ಜನರ ಜಾಗದಲ್ಲಿ ಒಬ್ಬರು ಅಥವಾ ಇಬ್ಬರಿಗಷ್ಟೇ ಕೆಲಸ ಉಳಿದುಕೊಳ್ಳುತ್ತದೆ. ರಿಸ್ಕ್ ಅನಾಲಿಸಿಸ್, ಮಾರ್ಕೆಟ್ ಅನಾಲಿಸಿಸ್ ನಂತಹ ಕೆಲಸಕ್ಕೂ ಸಾಫ್ಟ್ ವೆರ್ ಸಿದ್ಧವಾಗಿದೆ. ಇವುಗಳನ್ನು ಮೀರಿದ ಅನಾಲಿಸ್ಟ್ ಗಳಿಗೆ ಮಾತ್ರ ಕೆಲಸ ಉಳಿದುಕೊಳ್ಳಲಿದೆ. ಸಿಎ ಅಂತಹ ಕೋರ್ಸುಗಳು ಸಹ ತಮ್ಮ ಹಿಂದಿನ ಹೊಳಪನ್ನು ಕಳೆದುಕೊಳ್ಳುತ್ತವೆ. ಇಂದಿನ ಕಾಲಘಟ್ಟದಲ್ಲಿ ಈಸ್ ಆಫ್ ಡುಯಿಂಗ್ ಬಿಸಿನೆಸ್ ಅಡಿಯಲ್ಲಿ ಯಾವುದಕ್ಕೂ ಆಡಿಟರ್ ಬೇಕಿಲ್ಲ ಎನ್ನುವ ಮಟ್ಟಕ್ಕೆ ಕಾನೂನು ಬದಲಾಗಿದೆ. ಹೊಸದಾಗಿ ಸಿಎ ಮಾಡಿದವರಿಗೆ ಸಿಗುತ್ತಿರುವ ವೇತನ ಕುಸಿದ ಮೌಲ್ಯವನ್ನು ತೋರಿಸುತ್ತಿದೆ. ವಿಶೇಷ ಜ್ಞಾನವಿಲ್ಲದ ಹೊರತು ಸುಮ್ಮನೆ ಈ ಕೋರ್ಸ್ ಗಳನ್ನು ಮಾಡಿ ಪ್ರಯೋಜನವಿಲ್ಲ .
ಜಾಬ್ ಓರಿಯೆಂಟೆಡ್ ಕೋರ್ಸುಗಳು: ಜಾಬ್ ಓರಿಯೆಂಟೆಡ್ ಎಂದರೆ ಕೆಲಸ ಸಿಕ್ಕುವ ಕೋರ್ಸುಗಳು ಎಂದರ್ಥ. ಎಲೆಕ್ಟ್ರಿಷಿಯನ್, ಪ್ಲಮ್ಬರ್, ಕಾರ್ಪೆನ್ಟೆರ್, ಇಂಟೀರಿಯರ್ ಡೆಕೋರೇಷನ್, ಇತ್ಯಾದಿ ಕೈಕೆಲಸಗಳಿಗೆ ಸದಾ ಡಿಮ್ಯಾಂಡ್ ಉಳಿದುಕೊಳ್ಳುತ್ತದೆ.
ಇದರ ಜೊತೆಗೆ ಕಂಟೆಂಟ್ ಕ್ರಿಯೇಷನ್, ಕಥೆ ಹೇಳುವುದು, ಸ್ಟಾಂಡ್ ಅಪ್ ಕಾಮಿಡಿ, ಕೌನ್ಸೆಲ್ಲಿಂಗ್ ನಂತಹ ಕೆಲಸಗಳಿಗೆ ಅತೀವ ಮಹತ್ವ ಬರಲಿದೆ.
ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಎನ್ನುವುದು ಇಂದಲ್ಲ ಕಳೆದ ಎರಡು, ಮೂರು ದಶಕದಿಂದ ಆಗಲೇ ನಮ್ಮ ಜೊತೆಯಲ್ಲಿದೆ. ಇದೀಗ ಅದು ಇನ್ನೊಂದು ಮಟ್ಟಕ್ಕೆ ಬಡ್ತಿ ಪಡೆದು ಕೊಂಡಿದೆ ಅಷ್ಟೇ, ಇನ್ನು ಮಷೀನ್ ಲರ್ನಿಂಗ್ ಬಗ್ಗೆ ಹೇಳುವುದಾದರೆ ಅದು ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಗಿಂತ ಅಡ್ವಾನ್ಸಡ್, ಇದರಲ್ಲಿ ಮಷೀನ್ ನಿರ್ಧಾರ ತೆಗೆದುಕೊಂಡು ಕೆಲಸ ಮಾಡುತ್ತಾ ಹೋಗುತ್ತದೆ. ಮತ್ತು ತನ್ನ ತಪ್ಪುಗಳಿಂದ ಕಲಿಯುತ್ತ ಹೋಗುತ್ತದೆ. ಸಮಯ ಕಳೆದಂತೆ ಇದು ಅದೆಷ್ಟು ಪರ್ಫೆಕ್ಟ್ ಆಗುತ್ತದೆ ಎಂದರೆ ತಪ್ಪಿಗೆ ಅವಕಾಶ ಇಲ್ಲದಷ್ಟು! ಹೊಸ ಸನ್ನಿವೇಶದಲ್ಲಿ ಮಾತ್ರ ತಪ್ಪಾಗಬಹುದು , ಅದು ಅಲ್ಲಿಯೂ ಕಲಿಯುತ್ತದೆ, ಮತ್ತದೆ ತಪ್ಪು ಎಂದಿಗೂ ಮಾಡುವುದಿಲ್ಲ.
ಕೊನೆಮಾತು: ಇವತ್ತಿನ ಬಹುತೇಕ ಕೆಲಸಗಳು ಮಾಯವಾಗುತ್ತವೆ ಎನ್ನುವುದು ಸತ್ಯ. ಡೇಟಾ ಎಂಟ್ರಿ ಕೆಲಸಗಳು, ಸಾಫ್ಟ್ವೇರ್ ಟೆಸ್ಟಿಂಗ್ ಕೆಲಸಗಳು, ಮಾರ್ಕೆಟಿಂಗ್, ಅಕೌಂಟೆಂಟ್ ಹೀಗೆ ಹಲವಾರು ಕೆಲಸಗಳು ನೆನೆಗುದಿಗೆ ಬಿಳಲಿವೆ. ಹಾಗೆಂದು ನಾವು ಆತಂಕಕ್ಕೆ ಒಳಪಡಬೇಕಾಗಿಲ್ಲ. ನೀವೇ ಒಮ್ಮೆ ಯೋಚಿಸಿ ನೋಡಿ ಕಳೆದ ಮೂರು ದಶಕದಲ್ಲಿ ಅದೆಷ್ಟೋ ಕೆಲಸಗಳು ಮಾಯವಾಗಿವೆ. ಇದು ಹಾಗೆ. ನೂರು ಕೆಲಸ ಹೋದರೆ ಹೊಸದಾಗಿ ಐವತ್ತರಿಂದ ಅರವತ್ತು ಕೆಲಸ ಸೃಷ್ಟಿಯಾಗುತ್ತದೆ. ಸಮಾಜದ ಅರ್ಧದಷ್ಟು ಜನ ಕೆಲಸ ಕಳೆದುಕೊಳ್ಳುವುದು ಮಾತ್ರ ತಪ್ಪಿಸಲಾಗುವುದಿಲ್ಲ. ನಾವು ಉಳಿದರ್ಧದಲ್ಲಿ ಇರಬೇಕು ಎಂದರೆ ಬದಲಾವಣೆಗೆ ಸಿದ್ಧರಿರಬೇಕು.
Advertisement