
ಬಾಹ್ಯಾಕಾಶ ಅನ್ವೇಷಣೆ ಅಂದುಕೊಂಡಷ್ಟು ಸುಲಭವಲ್ಲ. ಬಾಹ್ಯಾಕಾಶ ಯೋಜನೆಗಳು ಅಂದುಕೊಂಡಂತೆ ಸಾಗದಿದ್ದರೆ, ಬಹಳಷ್ಟು ಗಂಭೀರ ಸಮಸ್ಯೆಗಳು ಎದುರಾಗುತ್ತವೆ. 2024 ಬಾಹ್ಯಾಕಾಶ ಅನ್ವೇಷಣೆಗೆ ಸಾಕಷ್ಟು ಸವಾಲೊಡ್ಡಿದ ವರ್ಷವಾಗಿತ್ತು. ಈ ಲೇಖನದಲ್ಲಿ, ಕಳೆದ ವರ್ಷ ಕಡಿಮೆ ಯಶಸ್ಸು ಗಳಿಸಿದ ಒಂದಷ್ಟು ಬಾಹ್ಯಾಕಾಶ ಯೋಜನೆಗಳ ಕಡೆ ಗಮನ ಹರಿಸೋಣ.
ಚಂದ್ರನ ಅಂಗಳದ ಉದ್ದೇಶಿತ ಸ್ಥಳವನ್ನು ಹೊರತುಪಡಿಸಿ, ಇನ್ನೆಲ್ಲೋ ಇಳಿದ ಲ್ಯಾಂಡರ್‌ಗಳು, ರದ್ದಾದ ಯೋಜನೆಗಳು, ಹೆಚ್ಚಾದ ವೆಚ್ಚ, ಹೀಗೆ 2024ರಲ್ಲಿ ಕಡಿಮೆ ಯಶಸ್ಸು ಕಂಡು, ಬಾಹ್ಯಾಕಾಶ ಅನ್ವೇಷಣೆಯಲ್ಲಿ ಪಾಠ ಕಲಿಸಿದ ಕೆಲವು ಯೋಜನೆಗಳು ಇಲ್ಲಿವೆ.
ಭೂಮಿಯ ಕಕ್ಷೆ ಬಾಹ್ಯಾಕಾಶ ತ್ಯಾಜ್ಯಗಳಿಂದ ತುಂಬಿಹೋಗಿದ್ದು, ಅವುಗಳಲ್ಲಿ ಕೆಲವನ್ನು ಅವು ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಉರಿದುಹೋಗುತ್ತವೆ ಎಂದು ಭಾವಿಸಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್ಎಸ್) ಹೊರಹಾಕಲಾಗುತ್ತದೆ. ಆದರೆ, ಎಪ್ರಿಲ್ ತಿಂಗಳಲ್ಲಿ ಇಂತಹ ಕೆಲವು ತ್ಯಾಜ್ಯಗಳು ನಾವು ಅಂದುಕೊಳ್ಳುವುದಕ್ಕಿಂತಲೂ ಗಟ್ಟಿಯಾಗಿದ್ದೇವೆಂದು ತೋರಿಸಿದವು.
ಐಎಸ್ಎಸ್‌ನಿಂದ ಬಂದ ಇಂತಹ ತ್ಯಾಜ್ಯವೊಂದು ಅಲೆಜಾಂಡ್ರೋ ಒಟೆರೊ ಎಂಬ ಫ್ಲೋರಿಡಾ ನಿವಾಸಿಯ ಮನೆಯ ಮಹಡಿಗೆ ಅಪ್ಪಳಿಸಿತ್ತು. "ಬಾಹ್ಯಾಕಾಶ ತ್ಯಾಜ್ಯ ಬಂದು ಬಡಿದಾಗ ಜೋರಾದ ಸದ್ದು ಬಂತು. ಅದು ಬಹುತೇಕ ನನ್ನ ಮಗನಿಗೆ ಡಿಕ್ಕಿಯಾಗಿತ್ತು" ಎಂದು ಒಟೆರೊ ಹೇಳಿದ್ದರು.
2024ರ ಬಾಹ್ಯಾಕಾಶ ಅನ್ವೇಷಣೆಗಳಲ್ಲಿ ಕೆಲವೊಂದು ಕ್ಲಿಷ್ಟಕರ ಲ್ಯಾಂಡಿಂಗ್‌ಗಳೂ ಸೇರಿದ್ದವು. ಜನವರಿ ತಿಂಗಳಲ್ಲಿ, ಜಪಾನಿನ ಸ್ಲಿಮ್ (ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಟಿಂಗ್ ಮೂನ್) ಎಂಬ ಚಂದ್ರನ ಲ್ಯಾಂಡರ್ ತಲೆ ಕೆಳಗಾಗಿ ಇಳಿಯಲಾರಂಭಿಸಿತು.
ಸ್ಲಿಮ್ ಮೂಲಕ ಜಪಾನ್ ಚಂದ್ರನ ಅಂಗಳದಲ್ಲಿಳಿದ ಐದನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಸ್ಲಿಮ್ ಚಂದ್ರನ ಮೇಲೆ ಎರಡು ರೋವರ್‌ಗಳನ್ನೂ ಇಳಿಸಿತ್ತು. ಆದರೆ, ಅದು ತಲೆಕೆಳಗಾಗಿ ಇಳಿದುದರಿಂದ, ಅದರ ಸೌರ ಫಲಕಗಳ ಸ್ಥಾನ ಸರಿಯಾಗಿರದೆ, ಅದಕ್ಕೆ ಸೂರ್ಯನಿಗೆ ಎದುರಾಗುವುದು ಕಷ್ಟಕರವಾಗಿತ್ತು.
ಇಂತಹ ಕಠಿಣ ಲ್ಯಾಂಡಿಂಗ್ ಹೊರತಾಗಿಯೂ, ಸ್ಲಿಮ್ ತಾನು ನಿರೀಕ್ಷಿಸಿದ್ದಕ್ಕಿಂತಲೂ ಶಕ್ತಿಶಾಲಿ ಎಂದು ನಿರೂಪಿಸಿತು. ಫೆಬ್ರವರಿ ತಿಂಗಳ ಆರಂಭದಲ್ಲಿ, 14 ದಿನಗಳ ಚಂದ್ರನ ರಾತ್ರಿಗಾಗಿ ಅದನ್ನು ಸ್ಥಗಿತಗೊಳಿಸಿದಾಗ ಅದು ಮರಳಿ ಎದ್ದೇಳುವ ಭರವಸೆ ಯಾರಿಗೂ ಇರಲಿಲ್ಲ.
ಆದರೆ, ಸ್ಲಿಮ್ ಕೇವಲ ಎದ್ದದ್ದು ಮಾತ್ರವಲ್ಲದೆ, ಹಲವಾರು ಕಠಿಣ ಚಂದ್ರನ ರಾತ್ರಿಗಳನ್ನು ಯಶಸ್ವಿಯಾಗಿ ಎದುರಿಸಿ, ಅಂದುಕೊಂಡದ್ದಕ್ಕಿಂತ ಹೆಚ್ಚಿನ ಕಾಲ ಕಾರ್ಯಾಚರಿಸಿತು.
2024ರಲ್ಲಿ ಚಂದ್ರನಲ್ಲಿ ಲ್ಯಾಂಡಿಂಗ್ ನಡೆಸುವಾಗ ಸ್ಲಿಮ್ ಲ್ಯಾಂಡರ್ ಮಾತ್ರವೇ ಸವಾಲು ಎದುರಿಸಿರಲಿಲ್ಲ. ಫೆಬ್ರವರಿ ತಿಂಗಳಲ್ಲಿ, ಹ್ಯೂಸ್ಟನ್ ಮೂಲದ ಇಂಟ್ಯುಟಿವ್ ಮೆಷಿನ್ಸ್ ಸಂಸ್ಥೆ ಅಭಿವೃದ್ಧಿ ಪಡಿಸಿದ ಓಡೀ (ಒಡಿಸ್ಸಿಯಸ್) ಎಂಬ ಹೆಸರು ಹೊಂದಿದ್ದ ಐಎಂ-1 ಲ್ಯಾಂಡರ್ ಇತಿಹಾಸ ನಿರ್ಮಿಸಿತು. ಇದು ಚಂದ್ರನ ಮೇಲ್ಮೈ ತಲುಪಿದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ಎಂಬ ಗೌರವ ಪಡೆಯಿತು.
ಇದು 1972ರ ಬಳಿಕ ಚಂದ್ರನ ಮೇಲಿಳಿದ ಮೊದಲ ಅಮೆರಿಕನ್ ಬಾಹ್ಯಾಕಾಶ ನೌಕೆಯಾಗಿತ್ತು. ಆದರೆ, ಇದರ ಲ್ಯಾಂಡಿಂಗ್ ಅಂದುಕೊಂಡಷ್ಟು ಪರಿಪೂರ್ಣವಾಗಿರಲಿಲ್ಲ. ಇದು ಚಂದ್ರನ ಅಂಗಳಕ್ಕಿಳಿದು, ಜಾರಿದ ಪರಿಣಾಮವಾಗಿ, ಅದರ ಆರು ಕಾಲುಗಳ ಪೈಕಿ ಒಂದು ಮುರಿಯಿತು.
ಇದರಿಂದಾಗಿ ಓಡಿ ಒಂದು ಬದಿಗೆ ವಾಲಿದಂತಾಗಿ, ಭೂಮಿಗೆ ಹೆಚ್ಚಿನ ಮಾಹಿತಿ ರವಾನಿಸುವುದು ಕಷ್ಟಕರವಾಯಿತು.
ಒಂದು ವಾರದ ಬಳಿಕ ಚಂದ್ರನ ರಾತ್ರಿ ಆರಂಭವಾದುದರಿಂದ ಬಾಹ್ಯಾಕಾಶ ನೌಕೆಯನ್ನು ಸ್ಥಗಿತಗೊಳಿಸಲಾಯಿತು. ಆದರೆ, ಬಳಿಕ ಅದನ್ನು ಮರಳಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ಅಮೆರಿಕಾದ ಪೆನ್ಸಿಲ್ವೇನಿಯಾದ ಆ್ಯಸ್ಟ್ರಾಬಾಟಿಕ್ ಟೆಕ್ನಾಲಜಿ ಎಂಬ ಖಾಸಗಿ ಸಂಸ್ಥೆ ಅಭಿವೃದ್ಧಿ ಪಡಿಸಿದ ಪೆರಿಗ್ರಿನ್ ಲೂನಾರ್ ಲ್ಯಾಂಡರ್‌ಗೆ ಸ್ಲಿಮ್ ಅಥವಾ ಓಡಿಯಂತೆ ಚಂದ್ರನ ಮೇಲಿಳಿಯುವ ಅದೃಷ್ಟವಿರಲಿಲ್ಲ. ಪೆರಿಗ್ರೀನ್ ಫೆಬ್ರವರಿ ತಿಂಗಳ ಆರಂಭದಲ್ಲಿ ಚಂದ್ರನ ಮೇಲಿಳಿದು, ಈ ಸಾಧನೆ ಮಾಡಿದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ಎನಿಸುವ ಗುರಿ ಹೊಂದಿತ್ತು.
ಆದರೆ, ಉಡಾವಣೆಯಾದ ಬೆನ್ನಲ್ಲೇ ಪೆರಿಗ್ರಿನ್ ಸಮಸ್ಯೆಗಳನ್ನು ಎದುರಿಸಿತು. ಜನವರಿ ತಿಂಗಳಲ್ಲಿ ಅದು ಉಡಾವಣೆಗೊಂಡ ಬೆನ್ನಲ್ಲೇ ಅದರ ಇಂಧನ ನಷ್ಟವಾಗತೊಡಗಿತು. ಈ ಸಮಸ್ಯೆಯ ಕಾರಣದಿಂದಾಗಿ ಮರುದಿನವೇ ಯೋಜನೆಯನ್ನು ಕೈಬಿಡಲಾಯಿತು.
2024ರ ಚಂದ್ರಾನ್ವೇಷಣೆಯಲ್ಲಿ ಅತಿದೊಡ್ಡ ನಿರಾಸೆ ಜುಲೈ ತಿಂಗಳಲ್ಲಿ ನಾಸಾ ತಾನು ವೈಪರ್ ಯೋಜನೆಯನ್ನು ಕೈಬಿಡುವುದಾಗಿ ಘೋಷಿಸಿದಾಗ ಉಂಟಾಗಿತ್ತು.
ವೈಪರ್ ಯೋಜನೆ ಚಂದ್ರನ ಧ್ರುವ ಪ್ರದೇಶಗಳಲ್ಲಿ ನೀರಿನ ಅಂಶವನ್ನು ಹುಡುಕುವ ಉದ್ದೇಶ ಹೊಂದಿತ್ತು. ಮೂಲತಃ ಅದು 2022ರಲ್ಲಿ ಚಂದ್ರನ ಮೇಲೆ ಇಳಿಯಬೇಕಾಗಿತ್ತು.
ಆದರೆ, ವೈಪರ್ ರೋವರ್ ಅನ್ನು ಒಯ್ಯಬೇಕಾದ ಲ್ಯಾಂಡರ್ ಅನ್ನು ಒದಗಿಸುವಲ್ಲಿ ಪೆರಿಗ್ರಿನ್ ಲ್ಯಾಂಡರ್ ನಿರ್ಮಿಸಿದ ಆ್ಯಸ್ಟ್ರಾಬಾಟಿಕ್ ಸಂಸ್ಥೆ ಹಲವು ಬಾರಿ ವಿಳಂಬಗೊಳಿಸಿತು. ಇದು ಯೋಜನೆಯನ್ನು ರದ್ದುಪಡಿಸಲು ನಾಸಾಗೆ ಬಹುದೊಡ್ಡ ಕಾರಣವಾಯಿತು.
ನಾಸಾ ಮುಂದಿನ ಯೋಜನೆಗಳಲ್ಲಿ ವೈಪರ್‌ನ ಭಾಗಗಳು ಬಳಕೆಯಾಗಲಿವೆ ಎಂದಿದೆ.
ನಾಸಾದ ಓಸಿರಿಸ್-ಆರ್‌ಇಎಕ್ಸ್ 2020ರಲ್ಲಿ ಯಶಸ್ವಿಯಾಗಿ ಬೆನ್ನು ಕ್ಷುದ್ರಗ್ರಹದ ಬೆನ್ನೇರಿತ್ತು.
ಅದು ಕ್ಷುದ್ರಗ್ರಹವನ್ನು ತಲುಪಿ, ಅಲ್ಲಿನ ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿತು. ಬಳಿಕ, ಅವುಗಳನ್ನು ಬಿಗಿಯಾಗಿ ಮುಚ್ಚಿಟ್ಟ ಸಂಗ್ರಾಹಕದೊಳಗೆ ತುಂಬಿ, ಸೆಪ್ಟೆಂಬರ್ 2023ರಲ್ಲಿ ಯಶಸ್ವಿಯಾಗಿ ಭೂಮಿಗೆ ತಂದಿತು.
ಆದರೆ, ಆ ಸಂಗ್ರಾಹಕ ಎಷ್ಟು ಗಟ್ಟಿಯಾಗಿ ಮುಚ್ಚಲ್ಪಟ್ಟಿತ್ತು ಎಂದರೆ, ನಾಸಾ ವಿಜ್ಞಾನಿಗಳಿಗೆ ಅದನ್ನು ತಕ್ಷಣವೇ ತೆರೆಯುವುದು ಹೇಗೆಂದು ತಿಳಿಯಲಿಲ್ಲ.
ನಾಸಾ ಈ ಸಮಸ್ಯೆಯನ್ನು 2023 ಅಕ್ಟೋಬರ್‌ನಲ್ಲಿ ಹಂಚಿಕೊಂಡು, ಇನ್ನುಳಿದ ತಿಂಗಳುಗಳನ್ನು ಒಳಗಿರುವ ಮಾದರಿಗೆ ಹಾನಿಯಾಗದಂತೆ ಸಂಗ್ರಾಹಕವನ್ನು ತೆರೆಯುವಲ್ಲಿ ಕಳೆಯಿತು.
ಅಂತಿಮವಾಗಿ, ಮೂರು ತಿಂಗಳ ಬಳಿಕ, ಜನವರಿಯಲ್ಲಿ ಅದನ್ನು ತೆರೆಯಲಾಯಿತು. ಅದೃಷ್ಟವಶಾತ್ ಒಳಗಿದ್ದ ಬೆಲೆಬಾಳುವ ಮಾದರಿಗಳಿಗೆ ಯಾವುದೇ ಹಾನಿಯಾಗಲಿಲ್ಲ.
ಬಹುಶಃ 2024ರಲ್ಲಿ ಬೋಯಿಂಗ್‌ನಷ್ಟು ಯಾವ ಸಂಸ್ಥೆಯೂ ಕಷ್ಟಪಟ್ಟಿಲ್ಲವೇನೋ! ಬೋಯಿಂಗ್ ವಿಮಾನಗಳ ಸಮಸ್ಯೆಗಳಂತೂ ಜನಜನಿತ. ಆದರೆ, ಅದರ ಬಾಹ್ಯಾಕಾಶ ಕಾರ್ಯಕ್ರಮಗಳೂ ಸ್ಟಾರ್‌ಲೈನರ್ ಸಮಸ್ಯೆಗಳ ಕಾರಣದಿಂದ ಉದ್ದೇಶಿತ ಯಶಸ್ಸು ಕಾಣಲಿಲ್ಲ.
ಬೋಯಿಂಗ್‌ನ ಸ್ಟಾರ್‌ಲೈನರ್ 2014ರಲ್ಲಿ ಐಎಸ್ಎಸ್‌ಗೆ ಗಗನಯಾತ್ರಿಗಳನ್ನು ಒಯ್ಯಲು ಬದಲಿ ಬಾಹ್ಯಾಕಾಶ ನೌಕೆ ನಿರ್ಮಿಸಲು ಒಪ್ಪಂದ ಮಾಡಿಕೊಂಡಾಗಿನಿಂದಲೂ ಸಮಸ್ಯೆಗಳನ್ನು ಎದುರಿಸುತ್ತಿತ್ತು. (ಇನ್ನೊಂದು ಒಪ್ಪಂದ ಸ್ಪೇಸ್ ಎಕ್ಸ್ ಸಂಸ್ಥೆಯ ಡ್ರ್ಯಾಗನ್ ಬಾಹ್ಯಾಕಾಶ ನೌಕೆಗೆ ಸೇರಿತ್ತು).
ಹಲವು ವರ್ಷಗಳ ಸಮಸ್ಯೆಗಳ ಬಳಿಕ, ಸ್ಟಾರ್‌ಲೈನರ್ ಅಂತಿಮವಾಗಿ ಜೂನ್ ತಿಂಗಳಲ್ಲಿ ಉಡಾವಣೆಗೊಂಡಿತು. ಅದಕ್ಕೂ ಮುನ್ನವೇ ಬೋಯಿಂಗ್ ಸಿಇಒ ಡೇವ್ ಕಾಲ್ಹೌನ್ ಎಲ್ಲವೂ ಸಮರ್ಪಕವಾಗಿ ನಡೆಯುತ್ತದೆ ಅಂದುಕೊಳ್ಳಬೇಡಿ ಎಂದು ಎಚ್ಚರಿಸಿದ್ದರು.
ಸ್ಟಾರ್‌ಲೈನರ್ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅವರನ್ನು ಯಶಸ್ವಿಯಾಗಿ ಐಎಸ್ಎಸ್‌ಗೆ ಒಯ್ದರೂ, ನಾಸಾ ಅದರಲ್ಲಿದ್ದ ತಾಂತ್ರಿಕ ಸಮಸ್ಯೆಗಳಿಗೆ ಹೆದರಿ, ಗಗನಯಾತ್ರಿಗಳನ್ನು ಮರಳಿ ತರಲು ಅದನ್ನು ಬಳಸದಿರಲು ನಿರ್ಧರಿಸಿತು.
ಸ್ಟಾರ್‌ಲೈನರ್ ಭೂಮಿಗೆ ಮರಳಿದರೂ, ಗಗನಯಾತ್ರಿಗಳಿಬ್ಬರು ಐಎಸ್ಎಸ್‌ನಲ್ಲೇ ಉಳಿದಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ, ಗಗನಯಾತ್ರಿಗಳಿಲ್ಲದೆ ಸ್ಟಾರ್‌ಲೈನರ್ ಭೂಮಿಗೆ ಮರಳಿತು. ಅವರಿಬ್ಬರು ಫೆಬ್ರವರಿ 2025ರ ತನಕ ಐಎಸ್ಎಸ್‌ನಲ್ಲಿ ಉಳಿಯಲಿದ್ದು, ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಭೂಮಿಗೆ ಮರಳಲಿದ್ದಾರೆ.
ಎಲ್ಲ ಬಾಹ್ಯಾಕಾಶ ಪ್ರಯಾಣಗಳೂ ಪರಿಪೂರ್ಣವಾಗಿರಬೇಕೆಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ಸ್ಟಾರ್‌ಲೈನರ್ ಸಮಸ್ಯೆಗಳಂತೂ ಬಹಳ ಗಂಭೀರವೇ ಆಗಿದ್ದವು.
2024ರಲ್ಲಿ ಸ್ಪೇಸ್ಎಕ್ಸ್ ಯಾವುದೇ ರಾಕೆಟ್ ಸ್ಫೋಟಿಸದಂತೆ ನೋಡಿಕೊಂಡಿತು. 2023ರಲ್ಲಿ ಸಂಭವಿಸಿದ ಸ್ಟಾರ್‌ಶಿಪ್ ರಾಕೆಟ್ ಸ್ಫೋಟದಿಂದಾಗಿ ವಾತಾವರಣದಲ್ಲಿ ಒಂದು ತೂತಾಗಿತ್ತು. ಹಾಗೆಂದು 2024 ಸ್ಪೇಸ್ ಎಕ್ಸ್‌ಗೂ ಅಷ್ಟೊಂದು ಸುಗಮವಾಗಿರಲಿಲ್ಲ.
ಮೊದಲಿಗೆ, ಸ್ಪೇಸ್ಎಕ್ಸ್ ಹಲವಾರು ಪರವಾನಗಿ ಮತ್ತು ನಿಯಮಗಳನ್ನು ಉಲ್ಲಂಘಿಸಿರುವ ಆರೋಪಗಳನ್ನು ಎಫ್ಎಎ ತನಿಖೆ ನಡೆಸುತ್ತಿದೆ. ಇದು ಸ್ಪೇಸ್ಎಕ್ಸ್‌ಗೆ ಅಸಮಾಧಾನದ ವಿಚಾರವಾಗಿದೆ.
ಟೆಕ್ಸಾಸಿನ ಬೋಕಾ ಚಿಕಾದಲ್ಲಿರುವ ತನ್ನ ಉಡಾವಣಾ ಘಟಕದಲ್ಲಿ ಸ್ಪೇಸ್ಎಕ್ಸ್ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.
ಹಲವು ವರ್ಷಗಳ ಕಾಲ, ಅದು ಪರಿಸರಕ್ಕೆ ಹಾನಿಯುಂಟು ಮಾಡುತ್ತದೆಂದು ಸ್ಥಳೀಯರು ಆರೋಪಿಸಿದ್ದರು. ಉಡಾವಣೆಯ ಸದ್ದಿಗೆ ಹಕ್ಕಿಗಳು ಸಾವಿಗೀಡಾಗಿ, ಕಟ್ಟಡಗಳೂ ಹಾನಿಯಾಗಿದ್ದವು.
ಅದರೊಡನೆ, ಆಗಸ್ಟ್‌ನಲ್ಲಿ ಇಪಿಎ ಸ್ಪೇಸ್ಎಕ್ಸ್ ವಿರುದ್ಧ ಉಡಾವಣಾ ಸ್ಥಳದಲ್ಲಿ ಪಾದರಸಯುಕ್ತ ಮಲಿನ ನೀರನ್ನು ಸುರಿಯುವ ಆರೋಪ ಹೊರಿಸಿದೆ.
ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (ಐಸಿಬಿಎಂ) ಹೊಂದಿರುವ ಕೇವಲ ಎಂಟು ರಾಷ್ಟ್ರಗಳ ಪೈಕಿ ರಷ್ಯಾ ಒಂದಾಗಿದೆ.
ಐಸಿಬಿಎಂಗಳು ಬಹಳ ಶಕ್ತಿಶಾಲಿಯಾಗಿದ್ದು, ಅಷ್ಟೇ ಅಪಾಯಕಾರಿಯೂ ಹೌದು. ಒಂದು ವೇಳೆ ಪರೀಕ್ಷೆಯಲ್ಲೇನಾದರೂ ಸಮಸ್ಯೆ ಉಂಟಾದರೆ, ಪರಿಣಾಮ ಅನಾಹುತಕಾರಿಯಾಗುತ್ತದೆ.
ಸೆಪ್ಟೆಂಬರ್‌ನಲ್ಲಿ ಆರ್‌ಎಸ್-28 ಸರ್ಮಾತ್ ಪರೀಕ್ಷೆಯಲ್ಲಿ ಇಂತಹದ್ದೇ ಘಟನೆ ನಡೆದಂತೆ ತೋರುತ್ತದೆ. ರಷ್ಯನ್ ಬಾಹ್ಯಾಕಾಶ ಸಂಸ್ಥೆಯ ಮಾಜಿ ಮುಖ್ಯಸ್ಥ ಡಿಮಿಟ್ರಿ ರೊಗೊಜಿನ್ 'ಸೂಪರ್ ವೆಪನ್' ಎಂದು ಕರೆದ ಕ್ಷಿಪಣಿಯ ಪರೀಕ್ಷೆ ಅಂದುಕೊಂಡಂತೆ ನಡೆದಿಲ್ಲ.
ರಷ್ಯಾ ಅಲ್ಲೇನು ನಡೆಯಿತು ಎಂದು ಒಪ್ಪಿಕೊಳ್ಳದಿದ್ದರೂ, ಉಡಾವಣೆಗೆ ಮುನ್ನ ಮತ್ತು ನಂತರದ ಉಪಗ್ರಹ ಚಿತ್ರಗಳು ಬೇರೆಯೇ ಕತೆ ಹೇಳಿವೆ.
ಪರೀಕ್ಷೆಗೆ ಮುನ್ನ ಅಲ್ಲಿ ಮರಗಳು, ಕಟ್ಟಡಗಳು, ಕ್ಷಿಪಣಿ ವ್ಯವಸ್ಥೆಯಿದ್ದರೆ, ಉಡಾವಣೆಯ ಬಳಿಕ ಒಂದು ದೊಡ್ಡ ಹೊಂಡ ಮಾತ್ರವೇ ಉಳಿದಿತ್ತು!
2014ರಲ್ಲಿ ಭೂಮಿಯ ವಾತಾವರಣದ ಮೂಲಕ ತೂರಿಬಂದ ಬಹುದೊಡ್ಡ ಬೆಂಕಿಯ ಉಂಡೆ ಪಪುವಾ ನ್ಯೂಗಿನಿಯಾ ಬಳಿ ಸಮುದ್ರಕ್ಕೆ ಬಿದ್ದಿತ್ತು. ಇದು ಅನ್ಯಗ್ರಹ ಜೀವಿಗಳ (ಏಲಿಯನ್) ಕುರಿತು ಹಲವು ಸಿದ್ಧಾಂತಗಳಿಗೆ ಕಾರಣವಾಗಿತ್ತು.
ಮೊದಲಿಗೆ ಜನರು ಆ ಉಲ್ಕಾಶಿಲೆಯೇ ಯಾವುದೋ ಏಲಿಯನ್ ತಂತ್ರಜ್ಞಾನ ಇರಬಹುದೇ ಎಂದುಕೊಂಡಿದ್ದರು. ಬಳಿಕ, ಸ್ಥಳೀಯ ಮಾನಸ್ ದ್ವೀಪದಲ್ಲಿ ಗ್ರಹಿಸಲಾದ ಭೂಮಿಯ ಕಂಪನಗಳ ಕುರಿತು ಪ್ರಶ್ನೆಗಳೆದ್ದವು.
ಈ ಕಂಪನಗಳು ಹಾಗಾದರೆ ಅನ್ಯಗ್ರಹ ಜೀವಿಗಳ ಸಂಕೇತವಾಗಿದ್ದವೇ? ಖಂಡಿತಾ ಇಲ್ಲ! ಮಾರ್ಚ್ ತಿಂಗಳಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಕಂಪನಕ್ಕೆ ಕಾರಣ ಪಕ್ಕದ ರಸ್ತೆಯಲ್ಲಿ ಸಾಗುತ್ತಿದ್ದ ಒಂದು ಟ್ರಕ್ ಅಷ್ಟೇ! ಅದರಾಚೆಗೆ ಯಾವುದೇ ಅನ್ಯಗ್ರಹ ಜೀವಿಯ ಸಂಕೇತವೂ ಬಂದಿರಲಿಲ್ಲ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement