ISRO Spadex: ಬಾಹ್ಯಾಕಾಶದಲ್ಲಿ ಅಲಸಂದೆ ಬೆಳೆ, ಉಪಗ್ರಹ ಮರುಬಳಕೆ; ಅಮೆರಿಕಾ, ರಷ್ಯಾ, ಚೀನಾ ಸಾಲಿಗೆ ಭಾರತ!

ಈಗಾಗಲೇ ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವ ಅಮೆರಿಕಾ, ರಷ್ಯಾ, ಚೀನಾಗಳ ಸಾಲಿಗೆ ಸೇರಲು ಭಾರತ ಪ್ರಯತ್ನಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಭಾರತ ತನ್ನ ಬಾಹ್ಯಾಕಾಶ ಅನ್ವೇಷಣಾ ಯಾತ್ರೆಯಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಲು ಸಿದ್ಧತೆ ನಡೆಸಿದೆ. ಡಿಸೆಂಬರ್ 30ರಂದು, ಭಾರತ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (ಸ್ಪೇಡ್ಎಕ್ಸ್) ಎಂಬ ಯೋಜನೆಯ ಉಡಾವಣೆಗೆ ಸನ್ನದ್ಧವಾಗುತ್ತಿದೆ. ಸ್ಪೇಡ್ಎಕ್ಸ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್‌ವಿ-ಸಿ60) ಉಡಾವಣಾ ವಾಹನದ ಮೂಲಕ ಉಡಾವಣೆಗೊಳಿಸಲಿದೆ. ಈ ರಾಕೆಟ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನದಲ್ಲಿ ರಾತ್ರಿ 9:58ಕ್ಕೆ ಗಗನಕ್ಕೆ ಚಿಮ್ಮಲಿದೆ.

ಈ ಯೋಜನೆ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಅತ್ಯಂತ ಮುಖ್ಯವಾಗಿರುವ, ಎರಡು ಬಾಹ್ಯಾಕಾಶ ನೌಕೆಗಳನ್ನು ಬಾಹ್ಯಾಕಾಶದಲ್ಲಿ ಡಾಕಿಂಗ್ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಆದ್ದರಿಂದ, ಇದು ಇಸ್ರೋ ಪಾಲಿಗೆ ಮಹತ್ತರ ಹೆಜ್ಜೆಯಾಗಿದೆ. ಈ ಯೋಜನೆಯ ಮುಖ್ಯ ಗುರಿಯೆಂದರೆ, ಎರಡು ಬಾಹ್ಯಾಕಾಶ ನೌಕೆಗಳನ್ನು ಹತ್ತಿರ ತಂದು ಜೊತೆಯಾಗಿಸಿ, ಡಾಕಿಂಗ್ ನಡೆಸಿ, ಬಳಿಕ ಅವುಗಳನ್ನು ಪ್ರತ್ಯೇಕಿಸಲು ಅವಶ್ಯಕವಾದ ತಂತ್ರಜ್ಞಾನವನ್ನು ಪರೀಕ್ಷಿಸುವುದಾಗಿದೆ.

ಯೋಜನಾ ವಿವರ ಮತ್ತು ಗುರಿಗಳು

ಸ್ಪೇಡೆಕ್ಸ್ ಯೋಜನೆ ಎರಡು ಒಂದೇ ರೀತಿಯ ಉಪಗ್ರಹಗಳಾದ ಚೇಸರ್ (ಎಸ್‌ಡಿಎಕ್ಸ್01) ಮತ್ತು ಟಾರ್ಗೆಟ್ (ಎಸ್‌ಡಿಎಕ್ಸ್02) ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇವೆರಡೂ ಉಪಗ್ರಹಗಳು ತಲಾ 220ಕೆಜಿ ತೂಕ ಹೊಂದಿರಲಿವೆ.

ಈ ಉಪಗ್ರಹಗಳನ್ನು ಭೂಮಿಯಿಂದ 470 ಕಿಲೋಮೀಟರ್ ಎತ್ತರದಲ್ಲಿರುವ ವೃತ್ತಾಕಾರದ ಕಕ್ಷೆಯಲ್ಲಿ, 55 ಡಿಗ್ರಿ ಕೋನದಲ್ಲಿ ಅಳವಡಿಸಲಾಗುತ್ತದೆ. ಈ ಯೋಜನೆಯ ಮುಖ್ಯ ಗುರಿಗಳೆಂದರೆ:

  1. ಎರಡು ಉಪಗ್ರಹಗಳನ್ನು ಹತ್ತಿರಕ್ಕೆ ತಂದು, ಅವುಗಳನ್ನು ಪರಸ್ಪರ ಸಂಪರ್ಕಿಸಲು ಬೇಕಾದ ಅವಶ್ಯಕ ಚಲನೆಗಳನ್ನು ಪ್ರದರ್ಶಿಸುವುದು.

  2. ಪರಸ್ಪರ ಸಂಪರ್ಕಿತವಾಗಿರುವ ಎರಡು ಉಪಗ್ರಹಗಳ ನಡುವೆ ಹೇಗೆ ವಿದ್ಯುತ್ ಶಕ್ತಿಯನ್ನು ಹಂಚಬಹುದು ಎಂದು ಪರೀಕ್ಷಿಸುವುದು.

  3. ಎರಡು ವರ್ಷಗಳ ಅವಧಿ ಹೊಂದಿರುವ ಈ ಯೋಜನೆಯಲ್ಲಿ, ಉಭಯ ಉಪಗ್ರಹಗಳು ಪ್ರತ್ಯೇಕಗೊಂಡ ಬಳಿಕ, ಅವುಗಳಲ್ಲಿರುವ ಪೇಲೋಡ್‌ಗಳು ಹೇಗೆ ಕಾರ್ಯಾಚರಿಸುತ್ತವೆ ಎಂದು ಗಮನಿಸುವುದು.

ಇಲ್ಲಿ ಪೇಲೋಡ್ ಎಂದರೆ, ಬಾಹ್ಯಾಕಾಶ ನೌಕೆ ತನ್ನ ಯೋಜನೆಯನ್ನು ಪೂರ್ಣಗೊಳಿಸುವ ಸಲುವಾಗಿ ಬಾಹ್ಯಾಕಾಶಕ್ಕೆ ಒಯ್ಯುವ ಉಪಕರಣಗಳಾಗಿದೆ. ಪೇಲೋಡ್ ಯೋಜನೆಯ ಗುರಿಗಳನ್ನು ಸಾಧಿಸಲು ನೇರವಾಗಿ ಕೊಡುಗೆ ನೀಡುವುದರಿಂದ, ಅವುಗಳು ಉಪಗ್ರಹದ ಬಹುಮುಖ್ಯ ಭಾಗವಾಗಿವೆ.

ಇಸ್ರೋ ತನ್ನ ಪಿಎಸ್ಎಲ್‌ವಿ-ಸಿ60 ರಾಕೆಟ್ ನ್ನು ಸಂಪೂರ್ಣವಾಗಿ ಜೋಡಿಸಲಾಗಿದ್ದು, ಅದನ್ನು ಯೋಜನೆಯ ಪೂರ್ವಭಾವಿಯಾಗಿ ಅಂತಿಮ ಪರೀಕ್ಷೆಗಳನ್ನು ನಡೆಸುವ ಸಲುವಾಗಿ ಉಡಾವಣಾ ವೇದಿಕೆಗೆ ಒಯ್ಯಲಾಗಿದೆ ಎಂದಿದೆ.

ಬಾಹ್ಯಾಕಾಶ ನಿಲ್ದಾಣ ನಿರ್ಮಾಣದತ್ತ ಭಾರತದ ಪ್ರಗತಿ

"ಭಾರತಕ್ಕೆ ತನ್ನ ಬಾಹ್ಯಾಕಾಶ ಅನ್ವೇಷಣಾ ಗುರಿಗಳನ್ನು ಸಾಧಿಸಲು ಸ್ಪೇಡೆಕ್ಸ್ ಯೋಜನೆ ಬಹಳ ಮುಖ್ಯ ಹೆಜ್ಜೆಯಾಗಿದೆ. ಈ ಯೋಜನೆ ಯಶಸ್ವಿಯಾದರೆ, ಜಗತ್ತಿನಲ್ಲಿ ಆಧುನಿಕ ಡಾಕಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ" ಎಂದು ಇಸ್ರೋ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಒಂದೇ ಗುರಿಯನ್ನು ಸಾಧಿಸಲು ಹಲವಾರು ಉಡಾವಣೆಗಳ ಅವಶ್ಯಕತೆ ಹೊಂದಿರುವ ಯೋಜನೆಗಳನ್ನು ಯಶಸ್ವಿಯಾಗಿಸಲು ಈ ತಂತ್ರಜ್ಞಾನ ಅತ್ಯಂತ ಅವಶ್ಯಕವಾಗಿದೆ. ಉಪಗ್ರಹಗಳನ್ನು ದುರಸ್ತಿಗೊಳಿಸಲು, ಹಲವಾರು ಉಪಗ್ರಹಗಳನ್ನು ಒಂದು ಸಂರಚನೆಯಲ್ಲಿ ಹಾರಾಟ ನಡೆಸುವಂತೆ ಮಾಡಲು, ಮತ್ತು ಭಾರತದ ಉದ್ದೇಶಿತ ಬಾಹ್ಯಾಕಾಶ ನಿಲ್ದಾಣವಾದ ಭಾರತೀಯ ಅಂತರಿಕ್ಷ ಸ್ಟೇಷನ್ (ಬಿಎಎಸ್) ನಂತಹ ಸಂಕೀರ್ಣ ರಚನೆಗಳನ್ನು ಬಾಹ್ಯಾಕಾಶದಲ್ಲಿ ನಿರ್ಮಿಸಲು ಈ ತಂತ್ರಜ್ಞಾನ ನೆರವಾಗಲಿದೆ.

ಪಿಎಸ್ಎಲ್‌ವಿಯ ನಾಲ್ಕನೇ ಹಂತದ ಸದ್ಬಳಕೆ: ಡಾಕಿಂಗ್ ಗುರಿಗಳ ಸಾಧನೆಯ ಹೊರತಾಗಿ, ಈ ಯೋಜನೆ ಪಿಎಸ್ಎಲ್‌ವಿ ರಾಕೆಟ್‌ನ ಬಳಕೆಯಾಗಿರುವ ನಾಲ್ಕನೇ ಹಂತವಾದ ಪಿಒಇಎಂ-4 (ಪಿಎಸ್ಎಲ್‌ವಿ ಆರ್ಬಿಟಲ್ ಎಕ್ಸ್‌ಪರಿಮೆಂಟಲ್ ಮಾಡ್ಯುಲ್) ಅನ್ನು ಬಳಸಿಕೊಳ್ಳಲಿದೆ. ಇದನ್ನು ವ್ಯರ್ಥವಾಗಿ ಎಸೆಯುವ ಬದಲು, ಈ ಹಂತವನ್ನು ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗಗಳನ್ನು ನಡೆಸಲು ಒಂದು ವೇದಿಕೆಯಾಗಿ ಬಳಸಿಕೊಂಡು, ವಿಜ್ಞಾನಿಗಳಿಗೆ ವಿವಿಧ ಪರೀಕ್ಷೆಗಳನ್ನು ಕೈಗೊಳ್ಳಲು ಮತ್ತು ಬಾಹ್ಯಾಕಾಶದ ಪರಿಸ್ಥಿತಿಗಳನ್ನು ತಿಳಿಯಲು ಬಳಸಲಾಗುತ್ತದೆ. ಈ ಯೋಜನೆ ವಿವಿಧ ಶೈಕ್ಷಣಿಕ ಸಂಸ್ಥೆಗಳು ಮತ್ತು ಸ್ಟಾರ್ಟಪ್‌ಗಳು ನಿರ್ಮಿಸಿರುವ 24 ಪೇಲೋಡ್‌ಗಳನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ.

ಸಂಗ್ರಹ ಚಿತ್ರ
European solar mission - ಪ್ರೋಬಾ-3 ಕೈಹಿಡಿದ ಇಸ್ರೋ: ಸೂರ್ಯನ ಅಧ್ಯಯನಕ್ಕಾಗಿ ಕೃತಕ ಗ್ರಹಣ ನಿರ್ಮಾಣ!

ಪ್ರಯೋಗಗಳಿಗೆ ಪರಿವರ್ತಿಸಲಾದ ಪಿಎಸ್ಎಲ್‌ವಿ ನಾಲ್ಕನೇ ಹಂತ

ಪಿಎಸ್ಎಲ್‌ವಿ ನಾಲ್ಕನೇ ನಾಲ್ಕನೇ ಹಂತ ಉಪಗ್ರಹಗಳನ್ನು ಅವುಗಳ ಕಕ್ಷೆಯಲ್ಲಿ ಅಳವಡಿಸಲು ನೆರವಾಗುತ್ತದೆ. ಒಂದು ಬಾರಿ ಅದರ ಉದ್ದೇಶ ಪೂರ್ಣಗೊಂಡ ಬಳಿಕ, ಆ ಹಂತ ಬಾಹ್ಯಾಕಾಶ ತ್ಯಾಜ್ಯವಾಗಿ, ಯಾವುದೇ ಕಾರ್ಯವಿಲ್ಲದೆ ಕಕ್ಷೆಯಲ್ಲಿ ಸುತ್ತತೊಡಗುತ್ತದೆ.

ಆದರೆ, ಇಸ್ರೋ ಅದನ್ನು ಪಿಒಇಎಂ ಎಂಬ ವೈಜ್ಞಾನಿಕ ವೇದಿಕೆಯಾಗಿ ಪರಿವರ್ತಿಸಿ, ಅದನ್ನು ಮರುಬಳಕೆ ಮಾಡುವ ಹೊಸ ವಿಧಾನವನ್ನು ಕಂಡುಕೊಂಡಿದೆ. ಈಗ ಪಿಎಸ್ಎಲ್‌ವಿ ನಾಲ್ಕನೇ ಹಂತ ವ್ಯರ್ಥವಾಗುವ ಬದಲು, ಬಾಹ್ಯಾಕಾಶದಲ್ಲಿ ವಿಶೇಷವಾಗಿ ಸೂಕ್ಷ್ಮ ಗುರುತ್ವಾಕರ್ಷಣೆಗೆ ಸಂಬಂಧಿಸಿದ ಸಣ್ಣಪುಟ್ಟ ಪ್ರಯೋಗಗಳು, ಪರೀಕ್ಷೆಗಳನ್ನು ನಡೆಸಲು ಬಳಕೆಯಾಗಲಿದೆ. ಇದರಿಂದ ರಾಕೆಟ್‌ನ ಸಮರ್ಪಕ ಬಳಕೆಯಾಗಿ, ಬಾಹ್ಯಾಕಾಶ ತ್ಯಾಜ್ಯ ಕಡಿಮೆಯಾಗುತ್ತದೆ.

ಉಪಗ್ರಹಗಳನ್ನು ಅವುಗಳ ಉದ್ದೇಶಿತ ಕಕ್ಷೆಗಳಿಗೆ ಅಳವಡಿಸಿದ ಬಳಿಕ, ಪಿಎಸ್ಎಲ್‌ವಿಯ ನಾಲ್ಕನೇ ಹಂತ (ಪಿಎಸ್4) ಉಳಿದ ಇಂಧನ, ತಾನು ಹೊಂದಿರುವ ಸಿಸ್ಟಮ್‌ಗಳಾದ ಬ್ಯಾಟರಿಗಳು, ಸೌರ ಫಲಕಗಳು, ಮತ್ತು ಸಂವಹನ ಉಪಕರಣಗಳೊಡನೆ ಬಾಹ್ಯಾಕಾಶದಲ್ಲಿ ಉಳಿಯಲಿದೆ. ಇಸ್ರೋ ಈ ಹಂತವನ್ನು ಮಾರ್ಪಡಿಸಿ, ಪ್ರಯೋಗಗಳಿಗೆ ಸೂಕ್ತ ವೇದಿಕೆಯನ್ನಾಗಿಸಲಿದೆ.

ಉಡಾವಣೆಗೂ ಮುನ್ನವೇ ಪಿಎಸ್ಎಲ್‌ವಿ ನಾಲ್ಕನೇ ಹಂತಕ್ಕೆ ಅವಶ್ಯಕವಾದ ವೈಜ್ಞಾನಿಕ ಉಪಕರಣಗಳು, ಸೆನ್ಸರ್‌ಗಳನ್ನು ಅಳವಡಿಸುವುದರಿಂದ, ಅದು ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗಗಳು, ನೂತನ ತಂತ್ರಜ್ಞಾನಗಳ ಪರೀಕ್ಷೆ, ಹಾಗೂ ಬಾಹ್ಯಾಕಾಶ ಪರಿಸ್ಥಿತಿಗಳ ಅಧ್ಯಯನ ನಡೆಸಲು ಶಕ್ತವಾಗುತ್ತದೆ. ಅದರಲ್ಲಿ ಉಳಿದಿರುವ ಇಂಧನ ಸಣ್ಣ ಪುಟ್ಟ ಹೊಂದಾಣಿಕೆಗಳನ್ನು ನಡೆಸಲು ನೆರವಾಗುತ್ತದೆ. ಇನ್ನು ಅದರಲ್ಲಿರುವ ವಿದ್ಯುತ್ ಶಕ್ತಿ ಪ್ರಯೋಗಗಳನ್ನು ಮುಂದುವರಿಸುತ್ತಾ, ನಿರುಪಯೋಗಿಯಾಗಬೇಕಿದ್ದ ಬಿಡಿಭಾಗವನ್ನು ಕಡಿಮೆ ವೆಚ್ಚದಾಯಕ ಬಾಹ್ಯಾಕಾಶ ಪ್ರಯೋಗಾಲಯವಾಗಿ ಪರಿವರ್ತಿಸುತ್ತದೆ.

ಯೋಜನಾ ವಿನ್ಯಾಸ ಮತ್ತು ಕಾರ್ಯಾಚರಣಾ ವಿಧಾನ

ಚೇಸರ್ ಮತ್ತು ಟಾರ್ಗೆಟ್ ಉಪಗ್ರಹಗಳನ್ನು ಏಕಕಾಲದಲ್ಲಿ, ಆದರೆ ಎರಡು ಪ್ರತ್ಯೇಕ ವಸ್ತುಗಳಾಗಿ ಕಕ್ಷೆಗೆ ಬಿಡುಗಡೆಗೊಳಿಸಲಾಗುತ್ತದೆ.

ಪಿಎಸ್ಎಲ್‌ವಿ ರಾಕೆಟ್ ಅತ್ಯಂತ ನಿಖರವಾಗಿದ್ದು, ಇದು ಉಪಗ್ರಹಗಳ ವೇಗದಲ್ಲಿ ಅತ್ಯಂತ ಕನಿಷ್ಠ ವ್ಯತ್ಯಾಸ ಇರುವಂತೆ ಅವುಗಳನ್ನು ಕಕ್ಷೆಗೆ ಜೋಡಿಸಲಿದೆ. ಅಂದರೆ, ಎರಡೂ ಉಪಗ್ರಹಗಳು ಬಹುತೇಕ ಜೊತೆಯಾಗಿಯೇ ಸಂಚಾರ ಆರಂಭಿಸಲಿದ್ದು, ಅವುಗಳನ್ನು ನಿಯಂತ್ರಿಸಲು, ಬಾಹ್ಯಾಕಾಶದಲ್ಲಿ ಅವುಗಳ ಚಲನೆಯನ್ನು ನಿರ್ವಹಿಸಲು ಸುಲಭವಾಗಲಿದೆ.

ಟಾರ್ಗೆಟ್ ಉಪಗ್ರಹ ತನ್ನಲ್ಲಿ ಅಳಗಡಿಸಲಾಗಿರುವ ಥ್ರಸ್ಟರ್‌ಗಳನ್ನು ಬಳಸಿಕೊಂಡು, ಚೇಸರ್ ಉಪಗ್ರಹದಿಂದ ಕೊಂಚ ದೂರಕ್ಕೆ ಸಾಗಿ, ಅವೆರಡರ ನಡುವೆ 10-20 ಕಿಲೋಮೀಟರ್ ಅಂತರವನ್ನು ಸೃಷ್ಟಿಸಲಿದೆ. ಈ ಹಂತವನ್ನು 'ಫಾರ್ ರೆಂಡೆಜ್ವಸ್' (ಬಾಹ್ಯಾಕಾಶದಲ್ಲಿ ಯೋಜಿತ ಭೇಟಿ) ಎಂದು ಕರೆಯಲಾಗುತ್ತದೆ. ಇಲ್ಲಿ, ಉಪಗ್ರಹಗಳು ಒಂದರಿಂದ ಒಂದು ದೂರದಲ್ಲಿದ್ದರೂ, ಪರಸ್ಪರ ಸಂವಹಿಸಲು ಮತ್ತು ಯೋಜನೆಯ ಮುಂದಿನ ಹಂತಗಳಿಗೆ ಸಿದ್ಧತೆ ನಡೆಸಲು ಸಾಕಾಗುವಷ್ಟು ಸನಿಹದಲ್ಲಿರಲಿವೆ.

ಚೇಸರ್ ಉಪಗ್ರಹ ಬಳಿಕ ನಿಧಾನವಾಗಿ, ಹಂತಹಂತವಾಗಿ ಟಾರ್ಗೆಟ್ ಉಪಗ್ರಹದ ಬಳಿಗೆ ಚಲಿಸುತ್ತದೆ. ಉಭಯ ಉಪಗ್ರಹಗಳ ನಡುವಿನ ಅಂತರ 5 ಕಿಲೋಮೀಟರ್, 1.5 ಕಿಲೋಮೀಟರ್, ಬಳಿಕ 500 ಮೀಟರ್, 225 ಮೀಟರ್, 15 ಮೀಟರ್, ಬಳಿಕ ಅಂತಿಮವಾಗಿ 3 ಮೀಟರ್‌ಗಳಿಗೆ ಇಳಿಯಲಿದೆ. ಈ ಅಂತಿಮ ಹಂತದಲ್ಲಿ, ಎರಡೂ ರಾಕೆಟ್‌ಗಳು ಒಂದಕ್ಕೊಂದು ಜೋಡಿಸಲ್ಪಡಲಿವೆ, ಅಥವಾ 'ಡಾಕಿಂಗ್' ನಡೆಸಲಿವೆ. ಅವೆರಡು ಡಾಕಿಂಗ್ ನಡೆಸಿದ ಬಳಿಕ, ಯೋಜನೆಯ ಮುಂದಿನ ಹಂತದಲ್ಲಿ ಒಂದು ಉಪಗ್ರಹದಿಂದ ಇನ್ನೊಂದಕ್ಕೆ ವಿದ್ಯುತ್ ಶಕ್ತಿಯನ್ನು ಪೂರೈಸುವ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆ ಪೂರ್ಣಗೊಂಡ ಬಳಿಕ, ಉಪಗ್ರಹಗಳು ಪರಸ್ಪರ ಬೇರ್ಪಟ್ಟು, ತಮ್ಮ ಪೇಲೋಡ್‌ಗಳನ್ನು ಬಳಸಿ ಪ್ರಯೋಗಗಳನ್ನು ಕೈಗೊಳ್ಳಲಿವೆ.

ಚೇಸರ್ ಉಪಗ್ರಹ ಅತ್ಯಂತ ಹೆಚ್ಚಿನ ಗುಣಮಟ್ಟದ ಕ್ಯಾಮರಾ ಹೊಂದಿದೆ. ಟಾರ್ಗೆಟ್ ಉಪಗ್ರಹ ಭೂಮಿ ಮತ್ತು ಬಾಹ್ಯಾಕಾಶದ ಅಧ್ಯಯನ ನಡೆಸಲು ವಿಶೇಷ ಉಪಕರಣಗಳನ್ನು ಹೊಂದಿದೆ. ಇದು ಒಂದು ಮಲ್ಟಿ ಸ್ಪೆಕ್ಟ್ರಲ್ ಸೆನ್ಸರ್ ಹೊಂದಿದ್ದು, ಬೆಳಕಿನ ವಿವಿಧ ತರಂಗಾಂತರದಲ್ಲಿ ವಿಸ್ತೃತ ಛಾಯಾಚಿತ್ರಗಳನ್ನು ತೆಗೆಯುತ್ತದೆ. ಇವುಗಳು ನೈಸರ್ಗಿಕ ಸಂಪನ್ಮೂಲಗಳು, ಅರಣ್ಯಗಳ ಆರೋಗ್ಯ, ಮತ್ತು ವಾತಾವರಣದ ಅಧ್ಯಯನ ನಡೆಸಲು ನೆರವಾಗುತ್ತವೆ. ಅದರೊಡನೆ, ಇದು ಒಂದು ವಿಕಿರಣ ಮಾನಿಟರ್ ಹೊಂದಿದ್ದು, ಅದು ಬಾಹ್ಯಾಕಾಶ ವಿಕಿರಣವನ್ನು ಅಳೆದು, ಭವಿಷ್ಯದ ಅನ್ವೇಷಣೆಗಳಿಗೆ ಅವಶ್ಯಕವಾದ ಮಾಹಿತಿಗಳನ್ನು ಕಲೆಹಾಕುತ್ತದೆ.

ಸ್ಪೇಡೆಕ್ಸ್ ಯಾಕೆ ಮುಖ್ಯ?

ಸ್ಪೇಡೆಕ್ಸ್ ಯೋಜನೆ ಕೇವಲ ತಂತ್ರಜ್ಞಾನ ಪರೀಕ್ಷೆ ಮಾತ್ರವಲ್ಲ. ಇದು ಇಸ್ರೋದ ಭವಿಷ್ಯದ ದೊಡ್ಡ ಯೋಜನೆಗಳಿಗೆ ಬಹುಮುಖ್ಯ ಹೆಜ್ಜೆಯಾಗಿದೆ. ಚಂದ್ರನಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರುವುದು, ಇತರ ಗ್ರಹಗಳ ಅನ್ವೇಷಣೆ ನಡೆಸುವುದು, ಹಾಗೂ ಬಾಹ್ಯಾಕಾಶದಲ್ಲಿ ದೀರ್ಘಾವಧಿಯಲ್ಲಿ ಮಾನವ ಉಪಸ್ಥಿತಿಗೆ ವ್ಯವಸ್ಥೆ ಕಲ್ಪಿಸುವಂತಹ ಯೋಜನೆಗಳಿಗೆ ಬಾಹ್ಯಾಕಾಶ ನೌಕೆಗಳ ಡಾಕಿಂಗ್ ನಡೆಸುವುದನ್ನು ಕಲಿಯುವುದು ಅತ್ಯವಶ್ಯಕವಾಗಿದೆ.

ಈಗಾಗಲೇ ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವ ಅಮೆರಿಕಾ, ರಷ್ಯಾ, ಚೀನಾಗಳ ಸಾಲಿಗೆ ಸೇರಲು ಭಾರತ ಪ್ರಯತ್ನಿಸುತ್ತಿದೆ. ಈ ಯೋಜನೆ, ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ನಿರ್ಮಿಸುವ ಇಸ್ರೋದ ಬದ್ಧತೆಗೆ ಸಾಕ್ಷಿಯಾಗಿದೆ.

ಇದೇ ಮೊದಲ ಬಾರಿಗೆ, ಇಸ್ರೋ ಬಾಹ್ಯಾಕಾಶ ತ್ಯಾಜ್ಯಗಳನ್ನು ಸಂಗ್ರಹಿಸುವ ರೋಬಾಟಿಕ್ ಕೈಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಅದರ ಪರೀಕ್ಷೆ ನಡೆಸುತ್ತಿದೆ. ಇದರೊಡನೆ, ಭಾರತದ ಮೊದಲ ಬಾಹ್ಯಾಕಾಶ ಜೀವಶಾಸ್ತ್ರೀಯ ಪ್ರಯೋಗಗಳನ್ನು (ಬಾಹ್ಯಾಕಾಶದಲ್ಲಿ ಜೀವನ ಮತ್ತು ಬಾಹ್ಯಾಕಾಶದ ವಾತಾವರಣದಲ್ಲಿ ಹೇಗೆ ಜೀವಿಗಳು ಉಳಿಯಬಹುದು ಎಂಬ ಅಧ್ಯಯನ) ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಈ ಪ್ರಯೋಗಗಳನ್ನು, ಬೆಂಗಳೂರಿನ ಆರ್‌ವಿ ಇಂಜಿನಿಯರಿಂಗ್ ಕಾಲೇಜ್ ಮತ್ತು ಮುಂಬೈನ ಅಮಿಟಿ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿವೆ. ಈ ಪ್ರಯೋಗಗಳು ಪಿಒಇಎಂ ವೇದಿಕೆ ಒಯ್ಯಲಿರುವ 24 ಪೇಲೋಡ್‌ಗಳ ಭಾಗವಾಗಿವೆ.

ಒಟ್ಟು 24 ಪೇಲೋಡ್‌ಗಳ ಪೈಕಿ, 14 ಪೇಲೋಡ್‌ಗಳನ್ನು ಇಸ್ರೋದ ಬಾಹ್ಯಾಕಾಶ ವಿಭಾಗ ಸಿದ್ಧಪಡಿಸಿದೆ. ಇವುಗಳಲ್ಲಿ ಒಂದು ಪೇಲೋಡ್, ಬಾಹ್ಯಾಕಾಶದಲ್ಲಿ ಅಥವಾ ಇತರ ಗ್ರಹಗಳಲ್ಲಿ ಸಸ್ಯಗಳನ್ನು ಬೆಳೆಯಲು ಮತ್ತು ಉಳಿಸಲು ಅವಶ್ಯಕವಾದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವತ್ತ ಗಮನ ಹರಿಸಲಿದೆ. ಇನ್ನುಳಿದ ಹತ್ತು ಪೇಲೋಡ್‌ಗಳು ಸರ್ಕಾರೇತರ ಸಂಸ್ಥೆಗಳಿಗೆ ಸೇರಿದ್ದು, ಶೈಕ್ಷಣಿಕ ಸಂಸ್ಥೆಗಳೂ ಇವುಗಳಿಗೆ ಕೊಡುಗೆ ನೀಡಿವೆ.

ಬೆಂಗಳೂರಿನ ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್ (ಆರ್‌ವಿಸಿಇ) ವಿದ್ಯಾರ್ಥಿಗಳ ಒಂದು ತಂಡ ಬಾಹ್ಯಾಕಾಶ ಸಂಶೋಧನೆಗಾಗಿ ಭಾರತದ ಮೊತ್ತಮೊದಲ ಮೈಕ್ರೋಬಯಾಲಜಿ ಪ್ರಯೋಗವನ್ನು ಅಭಿವೃದ್ಧಿ ಪಡಿಸಿದೆ. ಟೀಮ್ ಅಂತರಿಕ್ಷ ನಿರ್ಮಿಸಿರುವ ಈ ಯೋಜನೆ, ಬಾಹ್ಯಾಕಾಶದ ವಾತಾವರಣದಲ್ಲಿ ಕರುಳಿನ ಬ್ಯಾಕ್ಟೀರಿಯಾಗಳು ಹೇಗೆ ಕಾರ್ಯಾಚರಿಸಲಿವೆ ಎಂದು ಅಧ್ಯಯನ ನಡೆಸಲಿದೆ. ಈ ಯೋಜನಾ ವ್ಯವಸ್ಥಾಪಕಿಯಾಗಿರುವ 20 ವರ್ಷ ವಯಸ್ಸಿನ ಜಿಎಸ್ ವರ್ಷಿಣಿ ಈ ಯೋಜನೆಯ ಕುರಿತು ಮಾಹಿತಿ ನೀಡಿದ್ದು, ಪ್ರಸ್ತುತ ಸಂಶೋಧನೆ ಮಾನವರ ಆರೋಗ್ಯದ ಮೇಲೆ ಬಾಹ್ಯಾಕಾಶ ಹೇಗೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ನಡೆಸಲಿದೆ ಎಂದಿದ್ದಾರೆ. ನಮ್ಮ ಒಟ್ಟಾರೆ ಆರೋಗ್ಯ ನಿರ್ವಹಣೆಯಲ್ಲಿ ನಿರ್ದಿಷ್ಟ ಕರುಳಿನ ಬ್ಯಾಕ್ಟೀರಿಯಾಗಳು ಮುಖ್ಯ ಪಾತ್ರ ವಹಿಸಲಿವೆ.

ಪ್ರಸ್ತುತ ಪ್ರಯೋಗ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಕರುಳಿನ ಬ್ಯಾಕ್ಟೀರಿಯಾಗಳು ಹೇಗೆ ಬೆಳೆಯುತ್ತವೆ ಎನ್ನುವುದರ ಅಧ್ಯಯನ ನಡೆಸಲಿದೆ. ಪ್ರಿಬಯಾಟಿಕ್ಸ್ (ಬ್ಯಾಕ್ಟೀರಿಯಾಗಳು ಬೆಳೆಯಲು ಅವಶ್ಯಕವಾದ ಪೋಷಕಾಂಶಗಳು) ಒದಗಿಸಿ, ಭೂಮಿಗೆ ಹೋಲಿಸಿದರೆ ಬಾಹ್ಯಾಕಾಶದಲ್ಲಿ ಈ ಬ್ಯಾಕ್ಟೀರಿಯಾಗಳು ಹೇಗೆ ಬೆಳೆಯಲಿವೆ ಎಂದು ಈ ಯೋಜನೆ ಅಧ್ಯಯನ ನಡೆಸಲಿದೆ. ಮಾನವರ ದೇಹದ ಸೂಕ್ಷ್ಮಾಣುಜೀವಿಗಳು ಬಾಹ್ಯಾಕಾಶದಲ್ಲಿ ಹೇಗೆ ಕಾರ್ಯಾಚರಿಸುತ್ತವೆ ಎಂದು ಇದರಿಂದ ತಿಳಿಯುವುದರಿಂದ, ಗಗನಯಾತ್ರಿಗಳ ಆರೋಗ್ಯದ ಕುರಿತು ಈ ಸಂಶೋಧನೆ ಹೊಸ ಬೆಳಕು ಚೆಲ್ಲಲಿದೆ. ಇದರ ಫಲಿತಾಂಶಗಳು ಬಾಹ್ಯಾಕಾಶದಲ್ಲಿ ತ್ಯಾಜ್ಯ ನಿರ್ವಹಣೆ, ಮಲಿನಕಾರಕಗಳ ಸ್ವಚ್ಛತೆ, ಮತ್ತು ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ನೂತನ ಆ್ಯಂಟಿ ಬಯಾಟಿಕ್‌ಗಳ ನಿರ್ಮಾಣಗಳಿಗೆ ನೆರವಾಗಲಿವೆ.

ಬಾಹ್ಯಾಕಾಶ ತ್ಯಾಜ್ಯಗಳ ಸಂಗ್ರಹ ಮತ್ತು ಕ್ರಾಪ್ಸ್ ಸಂಶೋಧನೆ

ಕ್ರಾಪ್ಸ್ (ಕಾಂಪ್ಯಾಕ್ಟ್ ರಿಸರ್ಚ್ ಮಾಡ್ಯುಲ್ ಫಾರ್ ಆರ್ಬಿಟಲ್ ಪ್ಲಾಂಟ್ ಸ್ಟಡೀಸ್) ಪೇಲೋಡ್ ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸಲು ಮತ್ತು ನಿರ್ವಹಿಸಲು ಇಸ್ರೋಗೆ ನೆರವಾಗಲು ವಿನ್ಯಾಸಗೊಂಡಿದೆ. ದೀರ್ಘಾವಧಿಯ ಬಾಹ್ಯಾಕಾಶ ಯೋಜನೆಗಳಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

ರೋಬಾಟಿಕ್ ಕೈ ಬಾಹ್ಯಾಕಾಶದ ತ್ಯಾಜ್ಯಗಳನ್ನು ಹೇಗೆ ಸಂಗ್ರಹಿಸುತ್ತದೆ ಎಂದು ಪರೀಕ್ಷಿಸುವ ಸಲುವಾಗಿ ಅದನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಈ ಪ್ರಯೋಗದ ಅಂಗವಾಗಿ, ರೊಬೋಟಿಕ್ ಕೈಗೆ ಡೆಬ್ರಿಸ್ ಕ್ಯೂಬ್ ಎಂದು ಕರೆಯಲಾಗುವ ಘನಾಕೃತಿ ಒಂದನ್ನು ಟೆದರ್ (ದಾರ, ಸರಪಳಿ ಅಥವಾ ಜೋಡಿಸಲು ಅಥವಾ ಅಳವಡಿಸಲು ಬಳಸುವ ಸಣ್ಣ ಉಪಕರಣ) ಮೂಲಕ ಅಳವಡಿಸಲಾಗುತ್ತದೆ. ಈ ಘನಾಕೃತಿಯನ್ನು ಬಾಹ್ಯಾಕಾಶದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಬಳಿಕ, ರೊಬಾಟಿಕ್ ಕೈ ಅದನ್ನು ಹಿಡಿಯಲು ಪ್ರಯತ್ನಿಸುತ್ತದೆ. ಈ ಪರೀಕ್ಷೆ ಭವಿಷ್ಯದಲ್ಲಿ ಬಾಹ್ಯಾಕಾಶ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ತಂತ್ರಜ್ಞಾನ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲದು.

ಅಲಸಂದೆ ಕಾಳು ಬೆಳೆಯುವ ಪ್ರಯೋಗ

ವಿಎಸ್ಎಸ್‌ಸಿ ಅಭಿವೃದ್ಧಿ ಪಡಿಸಿರುವ ಕ್ರಾಪ್ಸ್ ಪೇಲೋಡ್ ಇಸ್ರೋಗೆ ಬಾಹ್ಯಾಕಾಶದಲ್ಲಿ ಅಥವಾ ಇತರ ಗ್ರಹಗಳಲ್ಲಿ ಸಸ್ಯಗಳನ್ನು ಬೆಳೆಯಲು ಅನುಕೂಲವಾಗುವಂತಹ ಹಂತ ಹಂತದ ವೇದಿಕೆಗಳನ್ನು ಒಳಗೊಂಡಿದೆ.

ಇದೊಂದು ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯಾಗಿದ್ದು, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಬೀಜಗಳು ಮೊಳಕೆಯೊಡೆದು, ಸಣ್ಣ ಸಸ್ಯಗಳಾಗಿ (ಎರಡು ಎಲೆಯ ಗಿಡದ ಹಂತ) ಮೂಡಬಹುದೇ ಎಂದು ಪರಿಶೀಲಿಸುವ ಐದರಿಂದ ಏಳು ದಿನಗಳ ಪ್ರಯೋಗ ನಡೆಸಲಿದೆ.

ಈ ಪ್ರಯೋಗಕ್ಕೆ ಏಳು ಅಲಸಂದೆ ಕಾಳುಗಳನ್ನು ಬಳಸಲಾಗುತ್ತದೆ. ಈ ಕಾಳುಗಳನ್ನು ನಿಯಂತ್ರಿತ ತಾಪಮಾನದಲ್ಲಿರುವ ಮುಚ್ಚಿಟ್ಟ ಪೆಟ್ಟಿಗೆಯಲ್ಲಿ ಬೆಳೆಸಲಾಗುತ್ತದೆ. ಇಲ್ಲಿ ಆಮ್ಲಜನಕ (O2) ಮತ್ತು ಇಂಗಾಲದ ಡೈಆಕ್ಸೈಡ್ (CO2) ಮಟ್ಟ, ಆರ್ದ್ರತೆ, ತಾಪಮಾನ, ಮತ್ತು ಮಣ್ಣಿನ ತೇವಾಂಶಗಳನ್ನು ನಿರಂತರವಾಗಿ ಗಮನಿಸಲಾಗುತ್ತದೆ. ಈ ಪ್ರಯೋಗದಲ್ಲಿ ಸಸ್ಯಗಳ ಬೆಳವಣಿಗೆಯ ಪ್ರತಿಯೊಂದು ಹಂತವನ್ನು ಗಮನಿಸಲು ಕ್ಯಾಮರಾಗಳು ಛಾಯಾಚಿತ್ರಗಳನ್ನು ತೆಗೆಯಲಿವೆ. ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ಹೇಗೆ ಆಹಾರ ಧಾನ್ಯಗಳನ್ನು ಬೆಳೆಯಲು ಸಾಧ್ಯ ಎಂದು ತಿಳಿಯಲು ಈ ಸಂಶೋಧನೆ ನೆರವಾಗಲಿದೆ.

ಬಾಹ್ಯಾಕಾಶ ತ್ಯಾಜ್ಯ ಸಂಗ್ರಹಣೆಗೆ ರೋಬಾಟಿಕ್ ಕೈ

ಡೆಬ್ರಿಸ್ ಕ್ಯಾಪ್ಚರ್ ರೋಬಾಟಿಕ್ ಮ್ಯಾನಿಪ್ಯುಲೇಟರ್: ವಿಎಸ್ಎಸ್‌ಸಿ ಅಭಿವೃದ್ಧಿ ಪಡಿಸಿರುವ ಈ ಪ್ರಯೋಗ, ಒಂದು ಟೆದರ್ ಅನ್ನು ಬಳಸಿಕೊಂಡು ರೋಬಾಟಿಕ್ ಕೈ ಹೇಗೆ ಬಾಹ್ಯಾಕಾಶ ತ್ಯಾಜ್ಯವನ್ನು ಸಂಗ್ರಹಿಸಲಿದೆ ಎಂಬುದನ್ನು ಪರೀಕ್ಷಿಸಲು ವಿನ್ಯಾಸಗೊಂಡಿದೆ. ರೋಬಾಟಿಕ್ ಕೈ ಕ್ಯಾಮರಾಗಳು ಮತ್ತು ಆಧುನಿಕ ಚಲನೆ ಊಹಿಸುವ ತಂತ್ರಜ್ಞಾನವನ್ನು ಬಳಸಿ, ಬಾಹ್ಯಾಕಾಶದಂತಹ ವಾತಾವರಣದಲ್ಲಿ ಚಲಿಸುತ್ತಿರುವ ತ್ಯಾಜ್ಯಗಳನ್ನು ಪತ್ತೆಹಚ್ಚಿ ಸಂಗ್ರಹಿಸಲಿದೆ. ಈ ರೋಬಾಟಿಕ್ ಕೈ ಪ್ಯಾರಲಲ್ ಎಂಡ್ ಇಫೆಕ್ಟರ್ ಎಂದು ಕರೆಯುವ ವಿಶೇಷ ಉಪಕರಣವನ್ನೂ ಪರೀಕ್ಷಿಸಲಿದೆ. ಇದೂ ರೋಬಾಟಿಕ್ ಕೈಯ ರೀತಿಯಲ್ಲಿದ್ದು, ಬಾಹ್ಯಾಕಾಶದಲ್ಲಿರುವ ವಸ್ತುಗಳನ್ನು ಸುರಕ್ಷಿತವಾಗಿ ಹಿಡಿಯುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ಇದು ಬಾಹ್ಯಾಕಾಶ ತ್ಯಾಜ್ಯ ಮತ್ತು ಇತರ ವಸ್ತುಗಳ ಸಂಗ್ರಹಣೆಯನ್ನು ಸುಲಭಗೊಳಿಸಲಿದೆ.

ಸಂಗ್ರಹ ಚಿತ್ರ
INS Arighaat: ಪರಮಾಣು ದಾಳಿ ಸಾಮರ್ಥ್ಯದ ಕಲಾಂ-4 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ! ಭಾರತದ ಸಬ್‌ಮರೀನ್ ಪಡೆಗೆ ಆನೆಬಲ ಹೇಗೆ?

ಒಂದು ವೇಳೆ ಈ ಪ್ರಯೋಗ ಯಶಸ್ಸು ಕಂಡರೆ, ರೋಬಾಟಿಕ್ ಕೈಯನ್ನು ಭವಿಷ್ಯದ ಸಂಕೀರ್ಣ ಬಾಹ್ಯಾಕಾಶ ಯೋಜನೆಗಳಲ್ಲೂ ಬಳಕೆಗೆ ತರಬಹುದು. ಉದಾಹರಣೆಗೆ, ಇದು ಸ್ವತಂತ್ರವಾಗಿ ಚಲಿಸುತ್ತಿರುವ ಬಾಹ್ಯಾಕಾಶ ತ್ಯಾಜ್ಯಗಳನ್ನು (ಯಾವುದಕ್ಕೂ ಬಂಧಿಯಾಗಿರದೆ ಸ್ವತಂತ್ರವಾಗಿ ಬಾಹ್ಯಾಕಾಶದಲ್ಲಿ ಸಾಗುತ್ತಿರುವ ವಸ್ತುಗಳು) ಹಿಡಿಯಲು, ಬಾಹ್ಯಾಕಾಶ ನೌಕೆಗಳಿಗೆ ಇಂಧನ ಮರುಪೂರಣ ನಡೆಸಲು ಬಳಕೆಯಾಗಲಿವೆ. ಈ ಸಾಮರ್ಥ್ಯಗಳು ಭವಿಷ್ಯದ ಪಿಒಇಎಂ ಯೋಜನೆಗಳಿಗೆ ಬಹಳ ಉಪಯುಕ್ತವಾಗಿದ್ದು, ಬಾಹ್ಯಾಕಾಶ ತ್ಯಾಜ್ಯಗಳನ್ನು ನಿವಾರಿಸಿ, ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಹೆಚ್ಚು ಉತ್ತಮವಾಗಿಸಬಲ್ಲದು. ಬಾಹ್ಯಾಕಾಶ ತ್ಯಾಜ್ಯ ಒಂದು ಬೆಳೆಯುತ್ತಿರುವ ಸಮಸ್ಯೆಯಾಗಿದ್ದು, ಇದನ್ನು ನಿವಾರಿಸಲು ಮತ್ತು ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಗಳ ನಿರ್ವಹಣೆಯನ್ನು ಉತ್ತಮಪಡಿಸಲು ಈ ಸಂಶೋಧನೆ ಮುಖ್ಯ ಹೆಜ್ಜೆಯಾಗಿದೆ.

ಬಾಹ್ಯಾಕಾಶದಲ್ಲಿ ಪಾಲಕ್ ಬೆಳೆ

ಒಂದು ವಿಶಿಷ್ಟ ಪ್ರಯೋಗದಲ್ಲಿ, ಮುಂಬೈನ ಅಮಿಟಿ ವಿಶ್ವವಿದ್ಯಾಲಯ ತನ್ನ ಅಮಿಟಿ ಪ್ಲಾಂಟ್ ಎಕ್ಸ್‌ಪರಿಮೆಂಟಲ್ ಮಾಡ್ಯುಲ್ ಇನ್ ಸ್ಪೇಸ್ (ಎಪಿಇಎಂಎಸ್) ಪೇಲೋಡ್ ಬಳಸಿ, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸಸ್ಯಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದನ್ನು ಅಧ್ಯಯನ ನಡೆಸಲಿದೆ.

ಅಮಿಟಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಸಂತೋಷ್ ಕುಮಾರ್ ಅವರು ಈ ಪ್ರಯೋಗ ಪಾಲಕ್ (ಸ್ಪಿನಾಸಿಯಾ ಒಲೆರಾಸಿಯಾ) ಸಸ್ಯವನ್ನು ಬಳಸಿ, ಸಸ್ಯಗಳ ಕೋಶಗಳು ಹೇಗೆ ಬೆಳೆಯುತ್ತವೆ ಮತ್ತು ಬಾಹ್ಯಾಕಾಶ ಹಾಗೂ ಭೂಮಿಯ ಗುರುತ್ವಾಕರ್ಷಣೆಯಲ್ಲಿ ಹೇಗೆ ಬದಲಾವಣೆ ಹೊಂದುತ್ತವೆ ಎಂದು ಅಧ್ಯಯನ ನಡೆಸಲಿದೆ ಎಂದಿದ್ದಾರೆ. ಸೆನ್ಸರ್‌ಗಳು ಮತ್ತು ಕ್ಯಾಮರಾಗಳು ಕ್ಯಾಲಸ್ ಬೆಳವಣಿಗೆ ಮತ್ತು ಬಣ್ಣವನ್ನು ಗಮನಿಸಲಿದ್ದು, ವಿಜ್ಞಾನಿಗಳಿಗೆ ಸಸ್ಯಗಳು ಹೇಗೆ ಬೇರೆ ಬೇರೆ ಗುರುತ್ವಾಕರ್ಷಣಾ ಪರಿಸ್ಥಿತಿಗೆ ಭಿನ್ನವಾಗಿ ವರ್ತಿಸುತ್ತವೆ ಎಂದು ತಿಳಿಯಲು ನೆರವಾಗುತ್ತವೆ. ಈ ಸಂಶೋಧನೆ ಸುದೀರ್ಘ ಬಾಹ್ಯಾಕಾಶ ಯೋಜನೆಗಳಲ್ಲಿ ಸಸ್ಯಗಳನ್ನು ಬೆಳೆಸಲು ಮತ್ತು ಭೂಮಿಯಲ್ಲಿ ಕೃಷಿಯ ಅಭಿವೃದ್ಧಿಗೆ ನೆರವಾಗಲಿದೆ.

ಆದಿಚುಂಚನಗಿರಿಯ ಬಿಜಿಎಸ್ ಅರ್ಪಿತ್: ಬಾಹ್ಯಾಕಾಶ ಮತ್ತು ಭೂಮಿಗೆ ಸೇತುವೆ

ಕರ್ನಾಟಕದ ಆದಿಚುಂಚನಗಿರಿಯ ಎಸ್‌ಸಿಜೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಭಿವೃದ್ಧಿ ಪಡಿಸಿರುವ ಬಿಜಿಎಸ್ ಅರ್ಪಿತ್ ಪೇಲೋಡ್ ಬಾಹ್ಯಾಕಾಶದಿಂದ ಧ್ವನಿ, ಅಕ್ಷರ ಮತ್ತು ಚಿತ್ರಗಳನ್ನು ಭೂಮಿಗೆ ಕಳುಹಿಸುವ ಉಪಕರಣವಾಗಿದೆ. ಇದು ವಿಎಚ್ಎಫ್ ಫ್ರೀಕ್ವೆನ್ಸಿಯಲ್ಲಿ ಬ್ಯಾಂಡಿನಲ್ಲಿರುವ ಎಫ್ಎಂ ಸಂಕೇತಗಳನ್ನು ಬಳಸಿಕೊಳ್ಳುತ್ತದೆ. ಮತ್ತು ಪ್ರಪಂಚದಾದ್ಯಂತ ಇರುವ ಅಮೇಚರ್ ರೇಡಿಯೋ ಸೇವೆಯನ್ನು ಬೆಂಬಲಿಸುತ್ತದೆ. ಭಾರತದ ಬಾಹ್ಯಾಕಾಶ ವಲಯದಲ್ಲಿ ಹೆಚ್ಚುತ್ತಿರುವ ಸ್ಟಾರ್ಟಪ್‌ಗಳು ಮತ್ತು ವಿದ್ಯಾರ್ಥಿಗಳನ್ನು ಉತ್ತೇಜಿಸಲು ವಿನ್ಯಾಸಗೊಂಡಿರುವ ಈ ಪೇಲೋಡ್, ಭಾರತದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಲಿದೆ. ಬಿಜಿಎಸ್ ಅರ್ಪಿತ್ ಎಸ್‌ಜೆಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಯು ಆರ್ ರಾವ್ ಬಾಹ್ಯಾಕಾಶ ಕೇಂದ್ರದ ಉಪಗ್ರಹ ಅಮೆಚೂರ್ ರೇಡಿಯೋ ಕ್ಲಬ್‌ಗಳ (ಯುಪಿಎಆರ್‌ಸಿ) ಜಂಟಿ ಸಹಯೋಗದಿಂದ ನಿರ್ಮಾಣಗೊಂಡಿದೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com