Justin Trudeau: ಅವಧಿಯುದ್ದಕ್ಕೂ ಹಗರಣ, ವ್ಯಾಪಾರ ಕೊರತೆ, ರಾಜತಾಂತ್ರಿಕ ಉದ್ವಿಗ್ನತೆ!

ಕೆನಡಾ ಅಪಾರ ಪ್ರಮಾಣದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲವನ್ನು ಅಮೆರಿಕಾಗೆ ಪೂರೈಸಿ, ಅದರ ಮುಖ್ಯ ಪೂರೈಕೆದಾರ ಎನಿಸಿದೆ. ಅದರೊಡನೆ, ಉಕ್ಕು, ಅಲ್ಯೂಮಿನಿಯಂ, ಮತ್ತು ಕಾರ್‌ಗಳಿಗಾಗಿ ಅಮೆರಿಕಾವೂ ಕೆನಡಾವನ್ನು ಅವಲಂಬಿಸಿದೆ.
Justin Trudeau: ಅವಧಿಯುದ್ದಕ್ಕೂ ಹಗರಣ, ವ್ಯಾಪಾರ ಕೊರತೆ, ರಾಜತಾಂತ್ರಿಕ ಉದ್ವಿಗ್ನತೆ!
Updated on

ಹತ್ತು ವರ್ಷಗಳ ಕಾಲ ಕೆ‌ನಡಾದ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ ಜಸ್ಟಿನ್ ಟ್ರುಡೋ ಅವರು ಪ್ರಧಾನಿ ಹುದ್ದೆ ಮತ್ತು ಲಿಬರಲ್ ಪಕ್ಷದ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಾಸ್ತವವಾಗಿ ಕೆನಡಾ ಮತ್ತು ಟ್ರುಡೋಗೆ ತೊಂದರೆಗಳು ನವೆಂಬರ್ ತಿಂಗಳ ಅಂತ್ಯದಲ್ಲಿ ಆರಂಭವಾದವು. ಅಮೆರಿಕಾದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು, ಕೆನಡಾ ಮತ್ತು ಮೆಕ್ಸಿಕೋಗಳು ಅಮೆರಿಕಾದೊಳಗೆ ಫೆಂಟಾನಿಲ್‌ನಂತಹ ಅಕ್ರಮ ಮಾದಕ ದ್ರವ್ಯಗಳು ಮತ್ತು ಅಕ್ರಮ ನುಸುಳುಕೋರರ ಪ್ರವೇಶವನ್ನು ತಡೆಯಲು ಸಮರ್ಪಕವಾಗಿ ಪ್ರಯತ್ನ ನಡೆಸುತ್ತಿಲ್ಲ ಎಂದು ಆರೋಪಿಸಿ, ಅವೆರಡೂ ದೇಶಗಳ ಆಮದಿನ ಮೇಲೆ 25%ದಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಜಸ್ಟಿನ್ ಟ್ರುಡೋ ಸಾಮರ್ಥ್ಯ ಹೊಂದಿಲ್ಲ ಎಂಬ ಅಭಿಪ್ರಾಯಗಳು ಕೆನಡಾದಲ್ಲಿ ವ್ಯಕ್ತವಾಗತೊಡಗಿದವು. ಇದಕ್ಕೆ ಪ್ರತಿಕ್ರಿಯಿಸಿದ ಟ್ರುಡೋ, ಕ್ಷಿಪ್ರವಾಗಿ ಟ್ರಂಪ್‌ರನ್ನು ಭೇಟಿಯಾಗಿ, ಗಡಿ ನಿಯಂತ್ರಣವನ್ನು ಇನ್ನಷ್ಟು ಬಲಪಡಿಸುವುದಾಗಿ ಭರವಸೆ ನೀಡಿದರು.

ಕೆನಡಾ ಅಪಾರ ಪ್ರಮಾಣದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲವನ್ನು ಅಮೆರಿಕಾಗೆ ಪೂರೈಸಿ, ಅದರ ಮುಖ್ಯ ಪೂರೈಕೆದಾರ ಎನಿಸಿದೆ. ಅದರೊಡನೆ, ಉಕ್ಕು, ಅಲ್ಯೂಮಿನಿಯಂ, ಮತ್ತು ಕಾರ್‌ಗಳಿಗಾಗಿ ಅಮೆರಿಕಾವೂ ಕೆನಡಾವನ್ನು ಅವಲಂಬಿಸಿದೆ.

ಡಿಸೆಂಬರ್ 16ರಂದು, ಕೆನಡಾದ ಉಪ ಪ್ರಧಾನಿ ಮತ್ತು ಹಣಕಾಸು ಸಚಿವರಾದ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ತಾನು ರಾಜೀನಾಮೆ ನೀಡುವುದಾಗಿ ಘೋಷಿಸಿದಾಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಮಾಧ್ಯಮ ವರದಿಗಳ ಪ್ರಕಾರ, 2023-24ನೇ ಸಾಲಿನ ಕೆನಡಾದ ಬಜೆಟ್ 61.9 ಬಿಲಿಯನ್ ಕೆನಡಿಯನ್ ಡಾಲರ್ ಕೊರತೆ (ಅಂದಾಜು 43 ಬಿಲಿಯನ್ ಡಾಲರ್) ಹೊಂದಿದ್ದು, ಅದು ಸರ್ಕಾರ ಮೊದಲು ಊಹಿಸಿದ್ದಕ್ಕಿಂತಲೂ ಬಹಳಷ್ಟು ಹೆಚ್ಚಾಗಿತ್ತು. ಅಂದರೆ, ಕೆನಡಾ ತಾನು ಸಂಪಾದಿಸುವುದಕ್ಕಿಂತಲೂ ಬಹಳಷ್ಟು ಹೆಚ್ಚಿನ ಹಣವನ್ನು ಈಗ ಖರ್ಚು ಮಾಡುತ್ತಿದ್ದು, ಅಂದುಕೊಂಡದ್ದಕ್ಕಿಂತ ಹೆಚ್ಚು ಆರ್ಥಿಕ ಅಂತರವನ್ನು ಸೃಷ್ಟಿಸುತ್ತಿದೆ.

ಇತ್ತೀಚಿನ ಎರಡು ನೀತಿಗಳ ಕುರಿತಂತೆ ಫ್ರೀಲ್ಯಾಂಡ್ ಮತ್ತು ಟ್ರುಡೋ ನಡುವೆ ಸಹಮತ ಇರಲಿಲ್ಲ. ಮೊದಲನೆಯ ಯೋಜನೆ ಎಂದರೆ, ಮಕ್ಕಳ ಉಡುಪುಗಳು ಮತ್ತು ಬಿಯರ್ ಮೇಲೆ ತಾತ್ಕಾಲಿಕ ಮಾರಾಟ ತೆರಿಗೆ ವಿನಾಯಿತಿ ನೀಡುವುದು. ‌ಇನ್ನೊಂದು ನೀತಿ, ಪ್ರತಿಯೊಬ್ಬ ಕೆನಡಿಯನ್ ಪ್ರಜೆಗೂ ತಲಾ 250 ಕೆನಡಿಯನ್ ಡಾಲರ್ ಚೆಕ್ (174 ಡಾಲರ್) ವಿತರಿಸುವುದು. ಈಗಾಗಲೇ ಕೆನಡಾ ಅಮೆರಿಕಾದ ಹೆಚ್ಚುವರಿ ಸುಂಕದ ಭೀತಿಯನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ವೆಚ್ಚದಾಯಕ 'ರಾಜಕೀಯ ಗಿಮಿಕ್'ಗಳ ಭಾರವನ್ನು ಹೊರಲು ಸಾಧ್ಯವಿಲ್ಲ ಎಂದು ಫ್ರೀಲ್ಯಾಂಡ್ ಅಭಿಪ್ರಾಯ ಪಟ್ಟಿದ್ದರು. ಒಂದು ಕಾಲದಲ್ಲಿ ಉದಾರವಾದಿ ರಾಜಕೀಯದ ಮುಖ ಎಂದೇ ಬಿಂಬಿತವಾಗಿದ್ದ ಟ್ರುಡೋ ಅವರ ಜನಪ್ರಿಯತೆಯ ದರ 2024ರಲ್ಲಿ ಹಲವು ಬಾರಿ 30%ಕ್ಕಿಂತಲೂ ಕುಸಿತ ಕಂಡಿತ್ತು.

ತನ್ನ ರಾಜೀನಾಮೆ ಪತ್ರದಲ್ಲಿ, ಫ್ರೀಲ್ಯಾಂಡ್ ಅವರು ರಾಜೀನಾಮೆಗೆ ಕಾರಣವನ್ನು ವಿವರಿಸುತ್ತಾ, ಪ್ರಧಾನಿ ತನ್ನನ್ನು ಹಣಕಾಸು ಸಚಿವೆಯಾಗಿ ಮುಂದುವರಿಯುವ ಬದಲು, ಮಂತ್ರಿಮಂಡಲದಲ್ಲಿ ಬೇರೊಂದು ಖಾತೆಯನ್ನು ವಹಿಸುವಂತೆ ಹೇಳಿದ್ದರು ಎಂದಿದ್ದರು. ಅಮೆರಿಕಾ ಪ್ರಸ್ತುತ ತನ್ನ ಆರ್ಥಿಕತೆಗೆ ಮೊದಲ ಆದ್ಯತೆ ನೀಡುತ್ತಿದ್ದು, ಆ ದೇಶದೊಡನೆ ದರ ಸಮರಕ್ಕೆ ಇಳಿಯುವುದು ಬಹಳ ದುಬಾರಿಯಾದೀತು ಎಂದು ಫ್ರೀಲ್ಯಾಂಡ್ ಎಚ್ಚರಿಕೆ ನೀಡಿದ್ದರು. ಕೆನಡಾ ಈಗ ತನ್ನ ಖರ್ಚುಗಳನ್ನು ಜಾಗರೂಕವಾಗಿ ನಿರ್ವಹಿಸಿದರೆ, ಭವಿಷ್ಯದಲ್ಲಿ ಎದುರಾಗುವ ತೊಂದರೆಗಳನ್ನು ನಿಭಾಯಿಸಲು ಸಾಧ್ಯ ಎಂದು ಅವರು ಹೇಳಿದ್ದರು.

ಭರವಸೆಯ ಪ್ರತಿಭೆಯ ಕ್ಷಿಪ್ರ ಬೆಳವಣಿಗೆ

ಜಸ್ಟಿನ್ ಟ್ರುಡೋ ಅವರು ಪ್ರೌಢಶಾಲಾ ಶಿಕ್ಷಕನಾಗಿ ತನ್ನ ವೃತ್ತಿಜೀವನವನ್ನು ಆರಂಭಿಸಿ, ಬಳಿಕ ಶಿಕ್ಷಣ, ದಾನ ದತ್ತಿ, ಮತ್ತು ಲಿಬರಲ್ ಪಕ್ಷದೊಳಗೆ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದರು. 2013ರಲ್ಲಿ, ಟ್ರುಡೋ ಕೆ‌ನಡಾದ ಮಧ್ಯಮ - ಎಡಪಂಥೀಯ ಧೋರಣೆಯ ಲಿಬರಲ್ ಪಕ್ಷದ ನಾಯಕನಾದರು. ರಾಜಕೀಯ ಪ್ರವೇಶಕ್ಕೂ ಮುನ್ನ, ಟ್ರುಡೋ ನೈಟ್ ಕ್ಲಬ್ ಒಂದರಲ್ಲಿ ಬೌನ್ಸರ್ ಆಗಿ, ಸ್ನೋಬೋರ್ಡ್ ತರಬೇತುದಾರನಾಗಿಯೂ ಕೆಲಸ ಮಾಡಿದ್ದರು. ಟ್ರುಡೋ ಅವರ ಪತ್ನಿ ಒಂದು ಸಮಯದಲ್ಲಿ ಮಾಡೆಲ್, ಟಿವಿ ನಿರೂಪಕಿಯಾಗಿದ್ದರು. ಮೂವರು ಮಕ್ಕಳನ್ನು ಹೊಂದಿದ್ದ ದಂಪತಿ ಬಳಿಕ ವಿಚ್ಛೇದನ ಪಡೆದುಕೊಂಡರು.

ಎರಡು ವರ್ಷಗಳ ಬಳಿಕ, ಟ್ರುಡೋ ನೇತೃತ್ವದಲ್ಲಿ ಲಿಬರಲ್ ಪಕ್ಷ ಫೆಡರಲ್ ಚುನಾವಣೆಯಲ್ಲಿ ಭಾರೀ ಗೆಲುವು ಸಾಧಿಸಿ, ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವನ್ನು ಸೋಲಿಸಿ, ಸಂಸತ್ತಿನಲ್ಲಿ ಬಹುಮತ ಪಡೆದುಕೊಂಡಿತು.

2015ರಲ್ಲಿ, ತನ್ನ 43ರ ವಯಸ್ಸಿನಲ್ಲಿ ಕೆನಡಾದ ಪ್ರಧಾನಿಯಾದ ಟ್ರುಡೋ, ಕೆನಡಾ ಕಂಡ ಎರಡನೇ ಅತ್ಯಂತ ಸಣ್ಣ ವಯಸ್ಸಿನ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾದರು. ಅದೇ ವರ್ಷ, ವೋಗ್ ನಿಯತಕಾಲಿಕ ಟ್ರುಡೋ ಅವರನ್ನು 'ಕೆನಡಾದ ರಾಜಕಾರಣದ ಯುವ ಮುಖ' ಎಂದು ಬಣ್ಣಿಸಿತು. ಇತರ ಮಾಧ್ಯಮಗಳೂ ಅವರ ವರ್ಚಸ್ಸು, ಸೌಂದರ್ಯವನ್ನು ವರ್ಣಿಸುವಲ್ಲಿ ಹಿಂದುಳಿದಿರಲಿಲ್ಲ!

ಪ್ರಧಾನಿಯಾದ ಆರಂಭದಲ್ಲಿ, ಟ್ರುಡೋ ಸರ್ಕಾರ ಹಲವು ಮುಖ್ಯ ನೀತಿಗಳನ್ನು ಪರಿಚಯಿಸಿತು. ಅವುಗಳಲ್ಲಿ, 2016ರಲ್ಲಿ ದಯಾ ಮರಣವನ್ನು ಕಾನೂನುಬದ್ಧಗೊಳಿಸುವುದು, ಗಾಂಜಾ ಸಸ್ಯದಿಂದ ತಯಾರಿಸುವ ಮನರಂಜನಾ ಗಾಂಜಾ ಬಳಕೆಗೆ ಅನುಮತಿಸುವುದು, ಮತ್ತು 2018ರಲ್ಲಿ ಕೆನಡಾ - ಯುಎಸ್ - ಮೆಕ್ಸಿಕೊ ವ್ಯಾಪಾರ ಒಪ್ಪಂದವನ್ನು (ಕುಸ್ಮಾ - CUSMA) ಅಂತಿಮಗೊಳಿಸಿದ್ದು ಸೇರಿವೆ.

ಜಸ್ಟಿನ್ ಟ್ರುಡೋ ಅವರ ತಂದೆ, ಪಿಯರ್ ಟ್ರುಡೋ ಅವರೂ ಕೆನಡಾದ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. 1968ರಿಂದ, ಬಹುತೇಕ 16 ವರ್ಷಗಳ ಕಾಲ ಕೆನಡಾದ ಪ್ರಧಾನಿಯಾಗಿದ್ದ ಪಿಯರ್, ತನ್ನ ಪ್ರಗತಿಪರ ನೀತಿಗಳು, ಅದರಲ್ಲೂ ವಲಸೆಗೆ ಬೆಂಬಲದಂತಹ ಕ್ರಮಗಳಿಂದ ಇಂದಿಗೂ ಜನರಿಗೆ ನೆನಪಾಗುತ್ತಾರೆ. ಜಾನ್ ಎಫ್ ಕೆನಡಿ ಅವರಿಗೆ ಹೋಲಿಸಲ್ಪಡುವ ಪಿಯರ್, ಅಮೆರಿಕಾದಲ್ಲಿ ವ್ಯಾಪಕವಾಗಿ ಗುರುತಿಸಲ್ಪಡುವ ಕೆಲವೇ ಕೆನೆಡಿಯನ್ ನಾಯಕರಲ್ಲಿ ಒಬ್ಬರಾಗಿದ್ದರು.

Justin Trudeau: ಅವಧಿಯುದ್ದಕ್ಕೂ ಹಗರಣ, ವ್ಯಾಪಾರ ಕೊರತೆ, ರಾಜತಾಂತ್ರಿಕ ಉದ್ವಿಗ್ನತೆ!
ಹಿಮಾಲಯದಲ್ಲಿ ಜಲವಿದ್ಯುತ್ ಯೋಜನೆ: ಟಿಬೆಟ್‌ನಲ್ಲಿ ಅಣೆಕಟ್ಟು ನಿರ್ಮಿಸಲು ಚೀನಾ ಮುಂದು; ಭಾರತಕ್ಕೆ ಕಳವಳ? (ಜಾಗತಿಕ ಜಗಲಿ)

ಕುಸ್ಮಾ: ನಾಫ್ತಾದ ಆಧುನಿಕ ಉತ್ತರಾಧಿಕಾರಿ

ಕೆನಡಾ - ಅಮೆರಿಕಾ ಮತ್ತು ಮೆಕ್ಸಿಕೊಗಳ ನಡುವೆ ಇದ್ದ ನಾರ್ತ್ ಅಮೆರಿಕನ್ ಫ್ರೀ ಟ್ರೇಡ್ ಅಗ್ರಿಮೆಂಟ್ (ನಾಫ್ತಾ - NAFTA) ಒಂದು ಐತಿಹಾಸಿಕ ವ್ಯಾಪಾರ ಒಪ್ಪಂದವಾಗಿತ್ತು. ಇದು 1994ರಿಂದ 2020ರ ತನಕ ಈ ದೇಶಗಳ ನಡುವಿನ ವ್ಯಾಪಾರವನ್ನು ನಿರ್ವಹಿಸುತ್ತಿತ್ತು. ವ್ಯಾಪಾರದ ಅಡಚಣೆಗಳನ್ನು ತೊಡೆದುಹಾಕಿ, ಸರಕು ಮತ್ತು ಸೇವೆಗಳು ನಿರಂತರವಾಗಿ ಪೂರೈಕೆಯಾಗುವಂತೆ ಮಾಡುವುದು ಇದರ ಗುರಿಯಾಗಿತ್ತು.

ಆದರೆ, ಜಾಗತಿಕ ವ್ಯಾಪಾರ ಅಭಿವೃದ್ಧಿ ಹೊಂದಿದಂತೆ, ಈ ಒಪ್ಪಂದದ ಆಧುನೀಕರಣದ ಅವಶ್ಯಕತೆ ಎದುರಾಯಿತು. ಇದರಿಂದಾಗಿ ಕುಸ್ಮಾ ಒಪ್ಪಂದದ ಕುರಿತು ಮಾತುಕತೆಗಳಾಗಿ, ಅದು 2018ರಲ್ಲಿ ಅಂತಿಮಗೊಂಡಿತು. ಈ ಒಪ್ಪಂದ 2018ರಲ್ಲಿ ಪೂರ್ಣಗೊಂಡರೂ, ಅದು ಜುಲೈ 1, 2020ರಿಂದ ಮೂರೂ ದೇಶಗಳ ಅನುಮೋದನೆ ಪಡೆದ ಬಳಿಕ, ನಾಫ್ತಾ ಬದಲಿಗೆ ಜಾರಿಗೆ ಬಂತು.

ಕುಸ್ಮಾ ಸಹ ನಾಫ್ತಾ ಒಪ್ಪಂದದ ತಳಹದಿಯ ಮೇಲೆಯೇ ನಿರ್ಮಾಣಗೊಂಡಿದ್ದು, 21ನೇ ಶತಮಾನದ ಆರ್ಥಿಕತೆಗೆ ಅವಶ್ಯಕವಾದ ಅಂಶಗಳು ಮತ್ತು ನಿಬಂಧನೆಗಳನ್ನು ಒಳಗೊಂಡಿದೆ. ಇದರಲ್ಲಿ ವಾಹನ ಉತ್ಪಾದನೆಗೆ ಕಟ್ಟುನಿಟ್ಟಿನ ನಿಯಮಗಳು, ಕೆನಡಿಯನ್ ಡೈರಿ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಮತ್ತು ಆಧುನಿಕ ಡಿಜಿಟಲ್ ವ್ಯಾಪಾರ ನಿಯಮಗಳು ಸೇರಿದ್ದವು.

ಪ್ರಧಾನಿ ಟ್ರುಡೋರ ಕ್ಷಮಾಪಣೆ ಮತ್ತು ಕ್ರಮಗಳು

ಜಸ್ಟಿನ್ ಟ್ರುಡೋ ಕೆನಡಾದ ಮೂಲ ನಿವಾಸಿಗಳಿಗೆ, ಅಂದರೆ, ವಸಾಹತುಶಾಹಿ ಕಾಲಕ್ಕೂ ಮುನ್ನ ಕೆನಡಾದಲ್ಲಿದ್ದ ಜನರಾದ ಫಸ್ಟ್ ನೇಷನ್ಸ್, ಇನುಯಿತ್ ಮತ್ತು ಮೆಟಿಸ್ ಜನಾಂಗಗಳಿಗೆ ವಸತಿ ಶಾಲೆಗಳಿಂದ ಉಂಟಾದ ತೊಂದರೆಗಳಿಗೆ ಕ್ಷಮಾಪಣೆ ಕೋರಿದ್ದರು. ಈ ಶಾಲೆಗಳಲ್ಲಿ, ಮೂಲನಿವಾಸಿ ಮಕ್ಕಳನ್ನು ಅವರ ಕುಟುಂಬಗಳಿಂದ ಬೇರ್ಪಡಿಸಿ ಸೇರಿಸಿಕೊಂಡು, ಹೆಚ್ಚಾಗಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು. ಟ್ರುಡೋ ಸಾವಿರಾರು ನಿರಾಶ್ರಿತರಿಗೆ ಕೆನಡಾದ ಬಾಗಿಲು ತೆರೆದು, ಅವರಿಗೆ ವಾಸಿಸಲು ಸುರಕ್ಷಿತ ತಾಣ ಒದಗಿಸಿದರು.

ಕೆನಡಾದ ಮೂಲ ನಿವಾಸಿಗಳು ತಮ್ಮ ನೆಲ, ಭಾಷೆ ಮತ್ತು ಸಮುದಾಯದೊಡನೆ ಆಳವಾದ ಸಂಬಂಧ ಹೊಂದಿದ್ದರು. ಆದರೆ, ಕೆನಡಾದ ವಸತಿ ಶಾಲೆಗಳು ಸ್ಥಳೀಯ ಸಂಸ್ಕೃತಿಯನ್ನು ಇಲ್ಲವಾಗಿಸುವ ಗುರಿ ಹೊಂದಿದ್ದವು. ಮಕ್ಕಳನ್ನು ಅವರ ಕುಟುಂಬಗಳಿಂದ ಬೇರ್ಪಡಿಸಿ, ಅವರ ಸಂಪ್ರದಾಯವನ್ನು ಪಾಲಿಸುವುದಕ್ಕಾಗಿ ಶಿಕ್ಷಿಸಿ, ಯುರೋಪಿಯನ್ ಭಾಷೆಗಳು ಮತ್ತು ರಿವಾಜುಗಳನ್ನು ಕಲಿಯುವಂತೆ ಒತ್ತಾಯಿಸುತ್ತಿದ್ದವು. ಇದು ಮೂಲ ನಿವಾಸಿಗಳಲ್ಲಿ ಅಪಾರ ಯಾತನೆ ಮತ್ತು ಸಾಂಸ್ಕೃತಿಕ ನಷ್ಟಕ್ಕೆ ಕಾರಣವಾಗಿತ್ತು.

ಟ್ರುಡೋ ಅವರಿಗೆ 63%ದಷ್ಟು ಬೆಂಬಲ ದರವಿತ್ತು. ಆದರೆ, 2019ರಲ್ಲಿ ಹೊರಬಂದ 'ಬ್ಲ್ಯಾಕ್ ಫೇಸ್' ಹಗರಣ ಅವರ ಚಿತ್ರಣವನ್ನು ಹಾಳುಗೆಡವಿತು. 1990ರ ದಶಕ ಮತ್ತು 2001ರ ಫೋಟೋಗಳು ಮತ್ತು ವೀಡಿಯೋಗಳು ಟ್ರುಡೋ ಅವರು ಕಪ್ಪು ಮುಖವಾಡ ಮತ್ತು ಕಂದು ಮುಖವಾಡ ಧರಿಸಿರುವುದನ್ನು ತೋರಿಸಿ, ಪ್ರಗತಿಪರ ಮತ್ತು ಉದಾರವಾದಿ ನಾಯಕ ಎಂಬ ಟ್ರುಡೋ ಗೌರವಕ್ಕೆ ಧಕ್ಕೆ ತಂದಿದ್ದವು.

ಏನು ಈ ಬ್ಲ್ಯಾಕ್ ಫೇಸ್ ಹಗರಣ?

2019ರ ಚುನಾವಣೆಯ ಸಂದರ್ಭದಲ್ಲಿ, ಟ್ರುಡೋ ಬ್ಲ್ಯಾಕ್ ಫೇಸ್ (ಕಪ್ಪು ಮುಖವಾಡ) ಧರಿಸಿರುವ ಹಳೆಯ ಛಾಯಾಚಿತ್ರಗಳು ಹಂಚಲ್ಪಟ್ಟು, ಹೊಸ ಸವಾಲುಗಳನ್ನು ಸೃಷ್ಟಿಸಿದವು. ಈ ಕಪ್ಪು ಮುಖವಾಡ ಕರಿಯ ಜನಾಂಗದ ಜನರನ್ನು ಆಡಿಕೊಳ್ಳುವ ರೀತಿಯಲ್ಲಿ ಪ್ರತಿನಿಧಿಸುವುದು ಎನ್ನಲಾಗಿದೆ. ಇಂತಹ ಮೂರು ಘಟನೆಗಳು ಹೊರಬಂದಿದ್ದು, ಒಂದು ಫೋಟೋ 2001ರಲ್ಲಿ ಟ್ರುಡೋ ಶಿಕ್ಷಕರಾಗಿದ್ದಾಗಿನ ಇಯರ್ ಬುಕ್‌ನಲ್ಲಿದ್ದರೆ, ಇನ್ನೊಂದು ಫೋಟೋ ಅವರ ಪ್ರೌಢಶಾಲಾ ದಿನಗಳದಾಗಿತ್ತು. ಇನ್ನೊಂದು ವೀಡಿಯೋ ಅವರೊಬ್ಬ ಯುವಕನಾಗಿದ್ದ ಸಮಯದ್ದಾಗಿತ್ತು.

ಕೆನಡಾದ ವ್ಯಾಂಕೋವರ್‌ನ ವೆಸ್ಟ್ ಪಾಯಿಂಟ್ ಗ್ರೇ ಅಕಾಡೆಮಿ ಎಂಬ ಖಾಸಗಿ ಶಾಲೆಯಲ್ಲಿ ಟ್ರುಡೋ ಶಿಕ್ಷಕರಾಗಿದ್ದರು. ಆ ಶಾಲೆಯ 2001ರ ಇಯರ್ ಬುಕ್‌ನ ಫೋಟೋ ಒಂದನ್ನು ಟೈಮ್ ನಿಯತಕಾಲಿಕ ಪ್ರಕಟಿಸಿದಾಗ ಈ ವಿಚಾರ ಹೊರಬಂತು. ಆ ಶಾಲೆ ಅರೇಬಿಯನ್ ನೈಟ್ಸ್ ಥೀಮಿನ ಸಮಾರಂಭವೊಂದನ್ನು ಆಯೋಜಿಸಿತ್ತು. ಆಗ ಟ್ರುಡೋ 'ಬ್ಲ್ಯಾಕ್ ಫೇಸ್' ಮತ್ತು ಟರ್ಬನ್ ಧರಿಸಿ, ಅಲಾದಿನ್ ರೀತಿ ವೇಷ ಹಾಕಿಕೊಂಡಿದ್ದರು. ಟೈಮ್ ನಿಯತಕಾಲಿಕೆ ಈ ಫೋಟೋವನ್ನು ವೆಸ್ಟ್ ಪಾಯಿಂಟ್ ಗ್ರೇ ಅಕಾಡೆಮಿಗೆ ಸಂಬಂಧಿಸಿದ ವ್ಯಾಂಕೋವರ್ ಉದ್ಯಮಿ ಮೈಕೇಲ್ ಆ್ಯಡಮ್ಸನ್ ಹಂಚಿಕೊಂಡಿದ್ದರು ಎಂದಿತ್ತು.

ಈ ಬೆಳವಣಿಗೆಯಿಂದ ಟ್ರುಡೋ ಭಾರೀ ಟೀಕೆಗಳನ್ನು ಎದುರಿಸಿ, ತನ್ನ ಚುನಾವಣಾ ಪ್ರಚಾರ ಬಸ್‌ನಲ್ಲೇ ತುರ್ತು ಪತ್ರಿಕಾಗೋಷ್ಠಿ ಕರೆಯಬೇಕಾಯಿತು. "ನಾನು ಮಾಡಿದ ತಪ್ಪಿಗೆ ನಾನೇ ಸಂಪೂರ್ಣ ಜವಾಬ್ದಾರಿ ವಹಿಸುತ್ತೇನೆ. ನಾನು ಆ ರೀತಿ ಮಾಡಬಾರದಿತ್ತು" ಎಂದು ಟ್ರುಡೋ ಕ್ಷಮೆಯಾಚಿಸಿದ್ದರು. "ನಾನು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿತ್ತು. ನಾನು ನಿಜಕ್ಕೂ ಕ್ಷಮೆ ಕೇಳುತ್ತಿದ್ದೇನೆ" ಎಂದಿದ್ದರು. ಟ್ರುಡೋ ಅವರ ಲಿಬರಲ್ ಪಕ್ಷ ಆ ಫೋಟೋ ಮತ್ತು ವೀಡಿಯೋಗಳಲ್ಲಿದ್ದುದು ಟ್ರುಡೋ ಎಂದು ಖಚಿತಪಡಿಸಿದರೂ, ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಲಿಲ್ಲ.

2017ರಲ್ಲಿ ಟ್ರುಡೋ ಆಘಾ ಖಾನ್ ಅವರ ಖಾಸಗಿ ದ್ವೀಪದಲ್ಲಿ ಕ್ರಿಸ್ಮಸ್ ರಜಾ ಕಳೆದಿದ್ದರು ಎಂಬ ವಿಚಾರ ಬಯಲಾದಾಗ, ಅವರು 'ಹಿತಾಸಕ್ತಿ ಸಂಘರ್ಷದ' ನಿಯಮಗಳನ್ನು ಮುರಿದಿದ್ದಾರೆ ಎಂದು ನೈತಿಕ ಆಯುಕ್ತರ ವಿಚಾರಣೆ ಎದುರಿಸಬೇಕಾಯಿತು.

ಏನು ಈ ಆಘಾ ಖಾನ್ ಹಗರಣ?

ಅಘಾ ಖಾನ್, ಪ್ರಿನ್ಸ್ ಶಾ ಕರೀಮ್ ಅಲ್ ಹುಸೇನಿ ಪ್ರಾಥಮಿಕವಾಗಿ ಫ್ರಾನ್ಸ್‌ನಲ್ಲಿ ನೆಲೆಸಿದ್ದರೂ, ಇಸ್ಮಾಯಿಲಿ ಮುಸ್ಲಿಂ ಸಮುದಾಯದ ಧಾರ್ಮಿಕ ನಾಯಕನಾಗಿರುವುದರಿಂದ ಹೆಚ್ಚಾಗಿ ಸಂಚರಿಸಬೇಕಾಗುತ್ತದೆ. ಅವರು ಕೆನಡಾ ವಿರೋಧಿ ವ್ಯಕ್ತಿಯಲ್ಲ. ವಾಸ್ತವವಾಗಿ, ಅವರು ಕೆನಡಾ ಜೊತೆ ಸುಭದ್ರ ಸಂಬಂಧ ಹೊಂದಿದ್ದರು. ಅಘಾ ಖಾನ್ ಡೆವಲಪ್ಮೆಂಟ್ ನೆಟ್‌ವರ್ಕ್ (ಎಕೆಡಿಎನ್) ಹಲವು ಮಾನವೀಯ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಕೆನಡಾ ಜೊತೆ ಸಹಯೋಗ ಹೊಂದಿದೆ. ಅದರೊಡನೆ, 2009ರಲ್ಲಿ ಅವರ ಜಾಗತಿಕ ಅಭಿವೃದ್ಧಿ ಮತ್ತು ಮಾನವೀಯ ಕಾರ್ಯಗಳನ್ನು ಗುರುತಿಸಿ, ಅವರಿಗೆ ಕೆನಡಾದ ಗೌರವ ಪೌರತ್ವ ನೀಡಲಾಯಿತು.

ಜಸ್ಟಿನ್ ಟ್ರುಡೋ ಮತ್ತವರ ಕುಟುಂಬ 2016ರಲ್ಲಿ ಅಘಾ ಖಾನ್ ಅವರ ಖಾಸಗಿ ದ್ವೀಪದಲ್ಲಿ ರಜೆ ಕಳೆದುದರಿಂದ ಹಿತಾಸಕ್ತಿ ಸಂಘರ್ಷದ ಪ್ರಕರಣ ರೂಪು‌ ತಳೆಯಿತು. ಅಘಾ ಖಾನ್ ಫೌಂಡೇಶನ್ ಕೆನಡಾಗೆ ಕೆನಡಿಯನ್ ಸರ್ಕಾರದಿಂದ ಹೂಡಿಕೆ ಲಭಿಸುತ್ತದೆ. ಆದ್ದರಿಂದ, ಫೆಡರಲ್ ಸರ್ಕಾರದಿಂದ ಹಣ ಪಡೆಯುವ ವ್ಯಕ್ತಿಯ ಜೊತೆ ಟ್ರುಡೋ ಸಂಪರ್ಕ ಹೊಂದಿರುವುದು ಅವರ ನಿಷ್ಪಕ್ಷಪಾತ ನಿಲುವಿನ ಕುರಿತು ಪ್ರಶ್ನೆಗಳನ್ನು ಮೂಡಿಸಿದ್ದವು.

ಕೆನಡಾದ ಸಾರ್ವಜನಿಕ ಅಧಿಕಾರಿಗಳು ತಮ್ಮ ನಿರ್ಧಾರಗಳ ಮೇಲೆ ಪರಿಣಾಮ ಬೀರುವಂತಹ ಉಡುಗೊರೆಗಳನ್ನು ಪಡೆಯುವುದನ್ನು ಕೆನಡಾ ನೈತಿಕ ನಿಯಮಗಳು ನಿರ್ಬಂಧಿಸಿವೆ. ಅಘಾ ಖಾನ್ ದ್ವೀಪದಲ್ಲಿ ಸಮಯ ಕಳೆದುದಕ್ಕೆ ಟ್ರುಡೋ ಹಣ ಪಾವತಿಸದ್ದರಿಂದ, ಅದನ್ನು ಉಡುಗೊರೆ ಎಂದು ಪರಿಗಣಿಸಲಾಗಿತ್ತು. 2017ರಲ್ಲಿ, ನೈತಿಕ ಆಯುಕ್ತರು ಟ್ರುಡೋ ಅಲ್ಲಿಗೆ ತೆರಳುವ ಮೂಲಕ 'ಹಿತಾಸಕ್ತಿ ಸಂಘರ್ಷದ' ನಿಯಮವನ್ನು ಮುರಿದಿದ್ದಾರೆ ಎಂದು ತೀರ್ಪು ನೀಡಿದ್ದರು.

Justin Trudeau: ಅವಧಿಯುದ್ದಕ್ಕೂ ಹಗರಣ, ವ್ಯಾಪಾರ ಕೊರತೆ, ರಾಜತಾಂತ್ರಿಕ ಉದ್ವಿಗ್ನತೆ!
ISRO Spadex: ಬಾಹ್ಯಾಕಾಶದಲ್ಲಿ ಅಲಸಂದೆ ಬೆಳೆ, ಉಪಗ್ರಹ ಮರುಬಳಕೆ; ಅಮೆರಿಕಾ, ರಷ್ಯಾ, ಚೀನಾ ಸಾಲಿಗೆ ಭಾರತ!

ಭಾರತ ಭೇಟಿಯ ವೇಳೆ ಟ್ರುಡೋ ವೇಷಭೂಷಣ

ಫೆಬ್ರವರಿ 2018ರಲ್ಲಿ, ಟ್ರುಡೋ ಎಂಟು ದಿನಗಳ ಭಾರತ ಭೇಟಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ, ಅವರು ಮತ್ತು ಕುಟುಂಬದವರು ಬಹಳ ವೈಭವಯುತ ವೇಷಭೂಷಣ ಧರಿಸಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಎದುರಿಸಬೇಕಾಯಿತು. ಅವರು ಭೇಟಿಯಾಗಿದ್ದ ಭಾರತೀಯ ಅಧಿಕಾರಿಗಳು ಸರಳವಾಗಿ ಸೂಟ್‌ಗಳನ್ನು ಧರಿಸಿದ್ದರು.

1986ರಲ್ಲಿ ಓರ್ವ ಭಾರತೀಯ ರಾಜಕಾರಣಿಯನ್ನು ಕೆನಡಾದಲ್ಲಿ ಹತ್ಯೆಗೆ ಯತ್ನಿಸಿ ಅಪರಾಧಿ ಎಂದು ಗುರುತಿಸಲಾದ ಖಲಿಸ್ತಾನಿ ತೀವ್ರವಾದಿ ಜಸ್ಪಾಲ್ ಅತ್ವಾಲ್ ಎಂಬಾತನನ್ನು ಟ್ರುಡೋರಿಗೆ ನವದೆಹಲಿಯಲ್ಲಿ ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನಿಸಲಾಗಿತ್ತು. ಇದು ತೀವ್ರ ಮುಜುಗರಕ್ಕೆ ಕಾರಣವಾಗಿ, ಟ್ರುಡೋರ ಭಾರತ ಭೇಟಿಯ ಕುರಿತು ಕಳವಳ ಮೂಡಿಸಿತ್ತು. ಅತ್ವಾಲ್ 1986ರಲ್ಲಿ ವ್ಯಾಂಕೋವರ್‌ಗೆ ಭೇಟಿ ನೀಡಿದ್ದ ಪಂಜಾಬಿನ ಸಚಿವರಾದ ಮಲ್ಕಿಯಾತ್ ಸಿಂಗ್ ಸಿಧು ಅವರ ಹತ್ಯೆಗೆ ಯತ್ನಿಸಿ, 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಆ ಸಂದರ್ಭದಲ್ಲಿ, ಅತ್ವಾಲ್ ನಿಷೇಧಿತ ಸಿಖ್ ಯೂತ್ ಫೆಡರೇಷನ್ ಎಂಬ ಸಿಖ್ ಪ್ರತ್ಯೇಕತಾವಾದಿ ಗುಂಪಿನ ಸದಸ್ಯನಾಗಿದ್ದ.

ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ, ಇದೇ ಅತ್ವಾಲ್ ಟ್ರುಡೋರ ಪತ್ನಿ ಸೋಫೀ ಗ್ರೆಗೊರೀ ಮತ್ತು ಇತರ ಹಿರಿಯ ಅಧಿಕಾರಿಗಳ ಜೊತೆ ಫೋಟೋ ತೆಗೆಸಿಕೊಂಡು, ಟ್ರುಡೋಗೆ ಮತ್ತೆ ಮುಜುಗರ ಉಂಟುಮಾಡಿದ್ದ. ಟ್ರುಡೋರ ಮೊದಲ ಅಧಿಕೃತ ಭಾರತ ಭೇಟಿಯ ವೇಳೆಯಲ್ಲೇ ಈ ಘಟನೆ ನಡೆದಿತ್ತು. ಹಳೆ ದೆಹಲಿಯ ಮಸೀದಿಯೊಂದರ ಬಳಿ ಫೋಟೋ ತೆಗೆಯುವಾಗ, ಓರ್ವ ಪತ್ರಕರ್ತ ಟ್ರುಡೋರನ್ನು "ನೀವು ಯಾಕೆ ಖಲಿಸ್ತಾನಿ ಭಯೋತ್ಪಾದಕನನ್ನು ಔತಣಕೂಟಕ್ಕೆ ಆಹ್ವಾನಿಸಿದ್ದೀರಿ?" ಎಂದು ಜೋರಾಗಿ ಪ್ರಶ್ನಿಸಿದ್ದರು.

ಕ್ಯಾಸಿನೋ ಕಿಂಗ್‌ಪಿ‌ನ್ ಕತೆ

2020ರಲ್ಲಿ, ವೇಯ್ ವೇಯ್ ಎಂಬ ಟೊರಾಂಟೋ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ತನ್ನ ಮಹಲಿನಲ್ಲಿ ಅನಧಿಕೃತ ಕ್ಯಾಸಿನೋ ನಡೆಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿ, ಅದರ ಮೇಲೆ ದಾಳಿ ನಡೆಸಿದ್ದರು. ಆದರೆ, ಇದೇ ವೇಯ್ ವೇಯ್ 2016ರಲ್ಲಿ ಕನಿಷ್ಠ ಎರಡು ಸಂದರ್ಭದಲ್ಲಿ ಟ್ರುಡೋರನ್ನು ಭೇಟಿಯಾಗಿದ್ದರು. ಚೀನಾ ಸರ್ಕಾರ ಬೆಂಬಲಿಸಿದ್ದ, ಟ್ರುಡೋರ ಜೊತೆ ಮಾತುಕತೆ ನಡೆಸಿದ್ದ ಉದ್ಯಮ ಗುಂಪಿನಲ್ಲೂ ವೆಯ್ ವೇಯ್ ಇದ್ದರು. ಈ ಗುಂಪಿನ ಓರ್ವ ಸದಸ್ಯ ಟ್ರುಡೋ ಫೌಂಡೇಶನ್ನಿಗೆ 1 ಮಿಲಿಯನ್ ಡಾಲರ್ ಕೊಡುಗೆ ನೀಡಿದ್ದರು ಮತ್ತು ಪಿಯರ್ ಟ್ರುಡೋರ ಪ್ರತಿಮೆಗೆ ಹಣ ಒದಗಿಸಿದ್ದರು. ಈ ಸಭೆ ಕ್ರಮೇಣ ಲಿಬರಲ್ ಪಕ್ಷದ ನಿಧಿ ಸಂಗ್ರಹಣಾ ನಿಯಮಗಳಲ್ಲಿ ಬದಲಾವಣೆ ತರಲು ಕಾರಣವಾಯಿತು.

ಅಲ್ಪ ಬೆಂಬಲ ಹೊಂದಿದ್ದ ಸರ್ಕಾರ ಮತ್ತು ಕೋವಿಡ್

ಟ್ರುಡೋ ನೇತೃತ್ವದಲ್ಲಿ ಲಿಬರಲ್ ಪಕ್ಷ 2019ರ ಚುನಾವಣೆಯಲ್ಲಿ ಗೆಲುವಿನ ಸನಿಹಕ್ಕೆ ಬಂದಿತ್ತಾದರೂ, ಅವರ ಸರ್ಕಾರ ಪೂರ್ಣ ಬಹುಮತ ಗಳಿಸಲು ಸಾಧ್ಯವಾಗಲಿಲ್ಲ. ಅದಾಗಿ ಎರಡು ವರ್ಷಗಳ ಬಳಿಕ, (ಸೆಪ್ಟೆಂಬರ್ 20, 2021) ಕೋವಿಡ್-19 ಸಾಂಕ್ರಾಮಿಕದ ನಾಲ್ಕನೇ ಅಲೆಯ ವೇಳೆ ಟ್ರುಡೋ ಅವಧಿ ಪೂರ್ವ ಚುನಾವಣೆಗೆ ಕರೆ ನೀಡಿದರು. ಸಾಂಕ್ರಾಮಿಕವನ್ನು ತಾನು ನಿರ್ವಹಿಸಿದ ರೀತಿ, ಕೆನಡಾ ಹೊಂದಿದ್ದ ಅತ್ಯಧಿಕ ಲಸಿಕಾ ದರ ತನಗೆ ಗೆಲುವು ಸಾಧಿಸಲು ನೆರವಾಗಬಹುದು ಎಂದು ಟ್ರುಡೋ ಭಾವಿಸಿದ್ದರು. ಆದರೆ, ಈ ಲೆಕ್ಕಾಚಾರಗಳೂ ಅಂತಹಾ ಪ್ರಯೋಜನ ನೀಡಲಿಲ್ಲ. ಟ್ರುಡೋರ ಪಕ್ಷಕ್ಕೆ ಸಂಸತ್ತಿನಲ್ಲಿ ಬಹುಮತ ಲಭಿಸಲಿಲ್ಲ.

ಕೆನಡಾ ಜಗತ್ತಿನಲ್ಲೇ ಅತ್ಯಂತ ಸೌಮ್ಯವಾದ ದಯಾ ಮರಣ ನಿಯಮಾವಳಿಗಳನ್ನು ಹೊಂದಿದೆ. ಆದರೆ, 2022ರ ಆರಂಭದಲ್ಲಿ, ಈ ಕಾನೂನುಗಳು ಟೀಕೆಗೊಳಗಾದವು. ಬಹಳಷ್ಟು ಜನರು ದಯಾ ಮರಣವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅವರಿಗೆ ತಮ್ಮ ನೋವು, ಕಷ್ಟಗಳನ್ನು ನಿರ್ವಹಿಸಲು ಸರ್ಕಾರದಿಂದ ಅವಶ್ಯಕ, ಸೂಕ್ತ ಬೆಂಬಲ ಲಭಿಸಿದರೆ ಅವರು ಈ ನಿರ್ಧಾರ ಕೈಗೊಳ್ಳುವುದರಿಂದ ಹಿಂದೆ ಸರಿಯಬಹುದು ಎಂದು ನ್ಯಾಯವಾದಿಗಳು ವಾದಿಸಿದ್ದರು. ಅವರು ಈ ವ್ಯವಸ್ಥೆಯನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಮರು ಪರಿಶೀಲಿಸಬೇಕೆಂದು ಆಗ್ರಹಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ, ಟ್ರುಡೋರ ಜನಪ್ರಿಯತೆ ಬಹಳಷ್ಟು ಕುಸಿತ ಕಂಡಿದೆ. ಇದಕ್ಕೆ ಹೆಚ್ಚಿನ ವಲಸೆ, ಅತಿಯಾಗಿ ಹೆಚ್ಚಿರುವ ಮನೆಗಳ ಬೆಲೆ ಮತ್ತು ಅತ್ಯಧಿಕ ಹಣದುಬ್ಬರ ಕಾರಣವೆಂದು ಹೇಳಲಾಗಿದೆ. ಟ್ರುಡೋರ ನೇತೃತ್ವದಲ್ಲಿ ದೇಶ ದಿವಾಳಿಯಾಗಿದೆ ಎಂದು 70%ಕ್ಕೂ ಹೆಚ್ಚು ಜನರು ಸಮೀಕ್ಷೆಗಳಲ್ಲಿ ಹೇಳಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ, ಟ್ರುಡೋ ಅವರು 2025ರ ವೇಳೆ ಕೆನಡಾ ಶಾಶ್ವತ ವಲಸೆಯನ್ನು 21%ಗೆ ಕಡಿಮೆಗೊಳಿಸುವುದಾಗಿ ಘೋಷಿಸಿದ್ದರು. ಈ ವಲಸೆಯ ಸಂಖ್ಯೆಯನ್ನು 5 ಲಕ್ಷದಿಂದ 3,95,000ಕ್ಕೆ ಇಳಿಸುವುದಾಗಿ ಘೋಷಿಸಿದ್ದರು. ಹಿಂದಿನ ಗುರಿಯಲ್ಲಿ ಸರ್ಕಾರಕ್ಕೆ 'ಸರಿಯಾದ ಸಮತೋಲನ' ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಟ್ರುಡೋ ಹೇಳಿದ್ದರು.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com