HMPV: ಚೀನಾ ಹಳೆ ವೈರಸ್ ಗೆ ತತ್ತರಿಸಿದ ಷೇರು ಮಾರುಕಟ್ಟೆ! ಒಂದೇ ದಿನದಲ್ಲಿ ಹನ್ನೊಂದುವರೆ ಲಕ್ಷ ಕೋಟಿ ರೂ ನಷ್ಟ! (ಹಣಕ್ಲಾಸು)

ಷೇರು ಮಾರುಕಟ್ಟೆ ಕುಸಿಯಲು ಒಂದು ಬಾಹ್ಯ ಕಾರಣ. ಎರಡು ಆತಂರಿಕ ಕಾರಣ. ಇವುಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡೋಣ. ಕೊನೆಯಲ್ಲಿ ಮಾರುಕಟ್ಟೆಯಲ್ಲಿ ಇರುವ ಹೂಡಿಕೆಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಸ್ವಲ್ಪ ತಿಳಿದುಕೊಳ್ಳೋಣ. (ಹಣಕ್ಲಾಸು-444)
China virus and share market
ಚೀನಾ ಹಳೆಯ ವೈರಸ್- ಷೇರು ಮಾರುಕಟ್ಟೆ ಕುಸಿತ (ಸಾಂಕೇತಿಕ ಚಿತ್ರ)online desk
Updated on

ಭಾರತೀಯ ಷೇರು ಮಾರುಕಟ್ಟೆ ಕಳೆದ ಮೂರ್ನಾಲ್ಕು ತಿಂಗಳಿಂದ ಹೂಡಿಕೆದಾರರಿಗೆ ಯಾವುದೇ ಹಣವನ್ನು ಮರಳಿ ಕೊಡುತ್ತಿಲ್ಲ. ಬದಲಿಗೆ ಪ್ರತಿ ದಿನ ಒಂದಲ್ಲ ಒಂದು ಕಾರಣಕ್ಕೆ ಮಾರುಕಟ್ಟೆ ಕುಸಿಯುತ್ತಿದೆ. ಈ ರೀತಿಯ ಮಾರುಕಟ್ಟೆ ಕುಸಿತಕ್ಕೆ ಮುಖ್ಯವಾಗಿ ನಾವು ಎರಡು ಕಾರಣಗಳನ್ನು ನೀಡಬಹುದು.

ಒಂದು ಬಾಹ್ಯ ಕಾರಣ. ಎರಡು ಆತಂರಿಕ ಕಾರಣ. ಇವುಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡೋಣ. ಕೊನೆಯಲ್ಲಿ ಮಾರುಕಟ್ಟೆಯಲ್ಲಿ ಇರುವ ಹೂಡಿಕೆಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಸ್ವಲ್ಪ ತಿಳಿದುಕೊಳ್ಳೋಣ.

ಬಾಹ್ಯ ಕಾರಣಗಳು: ಇಲ್ಲಿನ ಕಾರಣಗಳು ಭಾರತ ಅದೆಷ್ಟೇ ಚೆನ್ನಾಗಿ ಕಾರ್ಯ ನಿರ್ವಹಿಸಿದರು ಕೂಡ ಭಾರತಕ್ಕೆ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿರುತ್ತವೆ. ಕೇಲವೊಮ್ಮೆ ಈ ಕಾರಣಗಳು ಭಾರತಕ್ಕೆ ಅನುಕೂಲವನ್ನು ಕೂಡ ಮಾಡಿಕೊಡುತ್ತದೆ. ಸದ್ಯದ ಮಟ್ಟಿಗೆ ಅಂತಹ ಅಂಶಗಳೇನು ಎನ್ನುವುದನ್ನು ನೋಡೋಣ.

ಟ್ರಂಪ್ ಅಧಿಕಾರವಹಿಸಿಕೊಂಡ ನಂತರ ಏನಾಗುತ್ತದೆ?: ಟ್ರಂಪ್ ಅಧಿಕಾರವಹಿಸಿಕೊಂಡ ನಂತರ ಏನಾಗುತ್ತದೆ? ಎನ್ನುವ ಅಸ್ಥಿರತೆ , ಒಂದು ರೀತಿಯ ಭಯ ಎಲ್ಲಾ ದೇಶಗಳಲ್ಲೂ ಇದೆ. ಟ್ರಂಪ್ ಬೀಸು ಹೇಳಿಕೆಗಳನ್ನು ನೀಡುವುದಕ್ಕೆ ಹೆಚ್ಚು ಪ್ರಸಿದ್ದರು. ಚೀನಾದ ಜೊತೆಗೆ ಟ್ರೇಡ್ ವಾರ್ ಸುಳಿವನ್ನು ಅವರು ಈಗಾಗಲೇ ಬಿಟ್ಟು ಕೊಟ್ಟಿದ್ದಾರೆ. ಭಾರತವನ್ನು ಕೂಡ ಸ್ವಲ್ಪ ದೂರವಿರಿಸುವ ಮಾತನ್ನಾಡಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಆ ಪಟ್ಟಕ್ಕೆ ರಾಜೀನಾಮೆ ನೀಡಿದ ವೇಳೆಯಲ್ಲಿ ಕೆನಡಾ ದೇಶವನ್ನು ಅಮೇರಿಕಾದೊಂದಿಗೆ ವಿಲೀನಗೊಳಿಸುತ್ತೇವೆ. ಅದನ್ನು ಇನ್ನೊಂದು ರಾಜ್ಯವನ್ನಾಗಿ ಮಾಡಿಕೊಳ್ಳುತ್ತೇವೆ, ಎನ್ನುವ ಮಾತುಗಳನ್ನು ಅವರು ಆಡಿದ್ದಾರೆ. ಕುಸಿದಿರುವ ಅಮೆರಿಕಾದ ರೆಪ್ಯೂಟೇಷನ್ ಮತ್ತು ಜಾಗತಿಕವಾಗಿ ವಿಶ್ವದ ದೊಡ್ಡಣ್ಣನ ಪಟ್ಟಕ್ಕೆ ಚ್ಯುತಿ ಬಂದು ಆ ಜಾಗದಲ್ಲಿ ಐದಾರು ದೇಶಗಳು ಸಾಮೂಹಿಕ ನಾಯಕತ್ವ ವಹಿಸಿಕೊಳ್ಳಬಹುದು ಎನ್ನುವ ಪರಿಸ್ಥಿತಿಯಿಂದ ಅಮೇರಿಕಾ ದೇಶವನ್ನು ಮತ್ತೆ ಮೊದಲಿನ ಸ್ಥಾನಕ್ಕೆ ತರಲು ಟ್ರಂಪ್ ಇನ್ನಿಲ್ಲದ ಸಾಹಸ ಮಾಡುವುದು ಗೊತ್ತಿರುವ ವಿಷಯ. ಗಮನಿಸಿ ಇಡೀ ಜಗತ್ತಿನ ಅತ್ಯಂತ ಬಲಶಾಲಿ ದೇಶದ ,ಅತ್ಯಂತ ಬಲಶಾಲಿ ಮನುಷ್ಯ ಟ್ರಂಪ್ ಆಗಿದ್ದಾಗ ಏನು ಬೇಕಾದರೂ ಆಗಬಹುದು. ಆತನ ಪಾಲಿಸಿಗಳು ನಮಗೆ ವಾರವೂ ಆಗಬಹುದು , ಶಾಪವೂ ಆಗಬಹುದು.

ಏರುತ್ತಿರುವ ಡಾಲರ್, ಕುಸಿಯುತ್ತಿರುವ ರೂಪಾಯಿ: ಏರುತ್ತಿರುವ ಡಾಲರ್, ಕುಸಿಯುತ್ತಿರುವ ರೂಪಾಯಿ ಸಮಾಜದ ಒಂದು ವರ್ಗದ ಸಂಸ್ಥೆಗಳಿಗೆ ವರವಾಗಿದೆ. ಇನ್ನೊಂದು ವರ್ಗದ ಸಂಸ್ಥೆಗಳಿಗೆ ಶಾಪವಾಗಿದೆ. ಯಾರೆಲ್ಲಾ ಅಮೇರಿಕಾ ದೇಶಕ್ಕೆ ಸೇವೆಯನ್ನು ನೀಡುತ್ತಿದ್ದಾರೆ ಅಂದರೆ ಹೆಚ್ಚಾಗಿ ಐಟಿ ಕಂಪನಿಗಳಿಗೆ ಇದು ವರದಾಯಕವಾಗಿದೆ. ಉಳಿದಂತೆ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಮೂಲ ಯಾವ ದೇಶದಿಂದ ಬಂದಿದೆಯೋ ಅವರು ಬೆಲೆ ಹೆಚ್ಚು ಮಾಡದೆ ಕೂಡ ಹೆಚ್ಚಾಗುತ್ತದೆ. ಇದು ಭಾರತದ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ. ಐಟಿ ಷೇರುಗಳು ಧನಾತ್ಮಕವಾಗಿದ್ದರೆ ಇಂಪೋರ್ಟ್ ಮತ್ತು ಎಕ್ಸ್ಪೋರ್ಟ್ ಅವಲಂಬಿತ ಕಂಪನಿ ಷೇರುಗಳು ಕುಸಿತವನ್ನು ಕಾಣುತ್ತದೆ.

ಮೈಕ್ರೋಸಾಫ್ಟ್ ಹೂಡಿಕೆ: ಮೈಕ್ರೋಸಾಫ್ಟ್ ಸಂಸ್ಥೆ ಹಂತ ಹಂತವಾಗಿ 2030ರ ವೇಳೆಗೆ 3 ಬಿಲಿಯನ್ ಡಾಲರ್ ಹಣವನ್ನು ಭಾರತದ ಎಐ ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಲಿದೆ. ಇದು ಭಾರತಕ್ಕೆ, ಷೇರುಮಾರುಕಟ್ಟೆಗೆ ಪಾಸಿಟಿವ್ ನ್ಯೂಸ್.

ಕೆನಡಾದಲ್ಲಿನ ಬದಲಾವಣೆ: ಕೆನಡಾ ದೇಶದಲ್ಲಿನ ಬದಲಾವಣೆಗಳು ಕೂಡ ಭಾರತಕ್ಕೆ ವರದಾನವಾಗುವ ಸಾಧ್ಯತೆಯಿದೆ. ಮಾಜಿ ಪ್ರಧಾನಿ ಜಸ್ಟಿನ್ ಭಾರತದ ವಿರುದ್ದದ ನಿಲುವನ್ನು ಹೊಂದಿದ್ದರು. ಹೀಗಿದ್ದೂ ಭಾರತಕ್ಕಿಂತ ಕೆನಡಾಕ್ಕೆ ಹೆಚ್ಚು ನಷ್ಟವಾಗುತ್ತಿತ್ತು. ಹೊಸದಾಗಿ ಬರುವ ಪ್ರಧಾನಿ ಭಾರತದ ವಿರುದ್ಧ ನಿಲುವು ಹೊಂದಿರುವ ಸಾಧ್ಯತೆ ಬಹಳ ಕಡಿಮೆ. ಆಗೊಮ್ಮೆ ಅವರು ಕೂಡ ಜಸ್ಟಿನ್ ರಂತೆ ನಿಲುವನ್ನು ಹೊಂದಿದ್ದರೂ ಭಾರತಕ್ಕೆ ಹೆಚ್ಚಿನ ನಷ್ಟವಿಲ್ಲ.

China virus and share market
ಮುನ್ನೋಟ 2025: ಹೊಸ ವರ್ಷ ಜಾಗತಿಕ ವಿತ್ತ ಜಗತ್ತಿನ ಮುಂದೆ ಹೊತ್ತು ತರಲಿದೆ ಸವಾಲು ಮತ್ತು ಅವಕಾಶ! (ಹಣಕ್ಲಾಸು)

ಚೀನಾ ಗಡಿ ತಗಾದೆ: ಚೀನಾ ಗಡಿಯಲ್ಲಿ ಮತ್ತೊಮ್ಮೆ ತಗಾದೆ ತೆಗೆದಿದೆ. ಚೀನಾ ಪೂರ್ಣ ಪ್ರಮಾಣದ ಯುದ್ಧವನ್ನು ಸಾರುವ ಸ್ಥಿತಯಲ್ಲಿ ಇಲ್ಲ. ಅದು ಕೂಡ ಸಾಕಷ್ಟು ಏರಿಳಿತಗಳನ್ನು ಅನುಭವಿಸುತ್ತಿದೆ. ಆದರೆ ಅದರ ಈ ರೀತಿಯ ಸಣ್ಣ ಪುಟ್ಟ ಗದ್ದಲಗಳು ಷೇರು ಮಾರುಕಟ್ಟೆಯನ್ನು ಅಲ್ಲಾಡಿಸುವುದು ಮಾತ್ರ ತಪ್ಪುವುದಿಲ್ಲ.

ಚೀನಾದಲ್ಲಿ ಹೊಸ ವೈರಸ್?: ಚೀನಾದ ಹೊಸ ವೈರಸ್ HMPV ಎನ್ನುವ ವೈರಸ್ ನಿಜಕ್ಕೂ ಹೊಸತಲ್ಲ. ಅದು ಹಳೆಯ ವೈರಸ್. ಅದು ಜೀವಘಾತಕ ಕೂಡ ಅಲ್ಲ. ಆದರೆ ಸುದ್ದಿ ಸಂಸ್ಥೆಗಳ ಅಬ್ಬರಕ್ಕೆ ಒಂದೇ ದಿನದಲ್ಲಿ ೧೧ ಲಕ್ಷ ಕೋಟಿ ರೂಪಾಯಿ ಕಳೆದು ಕೊಂಡಿತು. ಜನರಲ್ಲಿ ಭಯ ಬಿತ್ತಿದ ಮಾಧ್ಯಮಗಳು ಪ್ಯಾನಿಕ್ ಸೆಲ್ಲಿಂಗ್ ಗೆ ಕಾರಣ ಒದಗಿಸಿಕೊಟ್ಟವು.

ಜಾಗತಿಕ ರಾಜಕೀಯ: ಜಗತ್ತಿನಾದ್ಯಂತ ನಡೆಯುತ್ತಿರುವ ರಾಜಕೀಯದಾಟಗಳು , ಉದಾಹರಣೆಗೆ ನಾರ್ತ್ ಕೊರಿಯಾ ಮಿಸೈಲ್ ಉಡಾವಣೆ, ಉಕ್ರೈನ್ ಕದನ ,ಸಿರಿಯಾ ಬಿಕ್ಕಟ್ಟು , ಬಾಂಗ್ಲಾ ದೇಶದ ಬಿಕ್ಕಟ್ಟು , ದಿವಾಳಿ ಆಗಿರುವ ಪಾಕಿಸ್ತಾನ , ಅರಾಜಕತೆಯಲ್ಲಿರುವ ಶ್ರೀಲಂಕಾ , ಹೀಗೆ ಇವುಗಳಲ್ಲಿ ಯಾವುದು ಬೇಕಾದರೂ ಜಾಗತಿಕ ಹುಣ್ಣಾಗಿ ಮಾರ್ಪಾಟಾಗಬಹುದು. ಷೇರು ಮಾರುಕಟ್ಟೆ ಕಂಪನಕ್ಕೆ ಗಾಳಿಸುದ್ದಿಯೂ ಸಾಕು.

ಆತಂರಿಕ ಕಾರಣಗಳು: ಭಾರತದಲ್ಲಿ ಉತ್ಪತಿಯಾಗಿರುವ , ಅಥವಾ ಉತ್ಪನ್ನವಾಗಲಿರುವ ಕಾರಣಗಳು ಕೂಡ ಮಾರುಕಟ್ಟೆಯ ಏರಿಳಿತಕ್ಕೆ ದೇಣಿಗೆಯನ್ನು ನೀಡುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ಗಮನಿಸೋಣ:

  • ಮಾರ್ಚ್ 2020 ರಲ್ಲಿ ಭಾರತದಲ್ಲಿದ್ದ ಡಿಮ್ಯಾಟ್ ಅಕೌಂಟ್ ಸಂಖ್ಯೆ ಸರಿಸುಮಾರು 5 ಕೋಟಿ! ಇಂದಿಗೆ, ಅಂದರೆ ಸೆಪ್ಟೆಂಬರ್ 2024ರಲ್ಲಿ ಸಿಕ್ಕಿರುವ ಅಂಕಿಅಂಶದ ಪ್ರಕಾರ ಭಾರತದಲ್ಲಿ ಇರುವ ಡಿಮ್ಯಾಟ್ ಸಂಖ್ಯೆ 17.5! ಕೇವಲ ನಾಲ್ಕು ವರ್ಷದಲ್ಲಿ ಹನ್ನೆರೆಡೂವರೆ ಕೋಟಿ ಡಿಮ್ಯಾಟ್ ಅಕೌಂಟ್ ಕ್ರಿಯೇಟ್ ಆಗಿದೆ. ಅವುಗಳಲ್ಲಿ ಮುಕ್ಕಾಲು ಪಾಲು ಅಕೌಂಟ್ ಮ್ಯೂಚುಯಲ್ ಫಂಡ್ ಹೂಡಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕೊಂಡರೂ , ನಾಲ್ಕು ವರ್ಷದಲ್ಲಿ ನಾಲ್ಕು ಕೋಟಿ ಹೊಸ ಹೂಡಿಕೆದಾರರು ಮಾರುಕಟ್ಟೆಗೆ ಬಂದಿರುವುದು ಸತ್ಯ. ಗಮನಿಸಿ ನೋಡಿ, ಈ ಹೊಸ ಹೂಡಿಕೆದಾರರು ಮಾರುಕಟ್ಟೆಯ ಕುಸಿತವನ್ನು ಕಂಡಿರಲಿಲ್ಲ. ಕೋವಿಡ್ ನಂತರ ಈ ಮಟ್ಟದ ಕುಸಿತವನ್ನು ಅವರು ನೋಡಿಯೇ ಇಲ್ಲ. ಮಾರುಕಟ್ಟೆಯಲ್ಲಿ ಆಗುವ ಸಣ್ಣ ಕುಸಿತಕ್ಕೂ ಹೆದರಿ ಮಾರುವವರ ಸಂಖ್ಯೆ ಹೆಚ್ಚಾಗಿದೆ. ಪ್ಯಾನಿಕ್ ಸೆಲ್ಲಿಂಗ್ ಮಾರುಕಟ್ಟೆ ಕುಸಿತಕ್ಕೆ ಬಹು ಮುಖ್ಯ ಕಾರಣ.

  • ಕಳೆದ ನಾಲ್ಕು ವರ್ಷಗಳಿಂದ ಒಂದೇ ಸಮನೆ ಏರುಗತಿಯಲ್ಲಿದ್ದ ಮಾರುಕಟ್ಟೆಗೆ ತಿದ್ದುಪಡಿಯ ಅವಶ್ಯಕತೆ ಇತ್ತು. ಹೀಗಾಗಿ ಕೆಲವು ವಲಯಗಳಲ್ಲಿ ಆ ತಿದ್ದುಪಡಿ ಆಗುತ್ತಿರುವುದು ಕೂಡ ಮಾರುಕಟ್ಟೆಯ ಒಟ್ಟಾರೆ ಕುಸಿತಕ್ಕೆ ಕಾರಣವಾಗಿದೆ.

  • ಇವತ್ತಿನ ಭಾರತದಲ್ಲಿ ಚಿಕ್ಕಪುಟ್ಟ ವಯಸ್ಸಿನ ಹುಡುಗರು , ಅದು ಕೂಡ ಹೆಚ್ಚಿನ ಮಾರುಕಟ್ಟೆಯ ಜ್ಞಾನವಿಲ್ಲದವರು ಡಿಜಿಟಲ್ ಮೀಡಿಯಾದಲ್ಲಿ ಸಿಕ್ಕ ಯಶಸ್ಸನ್ನು ಬಳಸಿಕೊಂಡು ಹೆಚ್ಚು ಜನರನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಾರುಕಟ್ಟೆ ಕುಸಿತ ಕುರಿತು ಅವರಿಗೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಈ ರೀತಿ ಪ್ರಥಮ ಬಾರಿಗೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಜನ ಪ್ರಥಮ ಚುಂಬನಂ ದಂತ ಭಗ್ನ೦ ಎನ್ನುವಂತೆ ಮತ್ತೆ ಷೇರು ಮಾರುಕಟ್ಟೆಗೆ ತಿರುಗಿ ಬರುವುದಿಲ್ಲ. ಇದು ಕೂಡ ಮಾರುಕಟ್ಟೆಯ ದೃಷ್ಟಿಯಿಂದ ಲಾಸು.

China virus and share market
Year 2025 Financial Planning: 10 ಸೂತ್ರಗಳನ್ನು ಪಾಲಿಸಿ; ಈ ತಪ್ಪುಗಳನ್ನು ಮಾಡಲೇಬೇಡಿ... (ಹಣಕ್ಲಾಸು)
  • ಫೆಬ್ರವರಿ ತಿಂಗಳಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಮಾರುಕಟ್ಟೆಯನ್ನು ಉತ್ತೇಜಿಸುವ ಅಥಾವ ಇನ್ನಷ್ಟು ಇಳಿಕೆಯ ಹಾದಿಯಲ್ಲಿ ಸಾಗಿಸುವ ಶಕ್ತಿಯನ್ನು ಹೊಂದಿದೆ. ಮಧ್ಯಮವರ್ಗದ ಜನರ ಕೈಯಲ್ಲಿ ಹಣ ಉಳಿಯುವಂತೆ ತೆರಿಗೆ ಸುಧಾರಣೆ ತಂದರೆ ಖಂಡಿತ ಆ ಹಣ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆಯಾಗುತ್ತದೆ. ಭಾರತದ ಬೆನ್ನೆಲುಬು ಮಧ್ಯಮವರ್ಗ , ಮತ್ತು ಸಣ್ಣ ಉದ್ದಿಮೆಗಳು. ಅವರಿಗೆ ಸರಕಾರ ಹೆಚ್ಚು ಪೆಟ್ಟು ನೀಡುತ್ತಿದೆ. ಸರಕಾರ ತನ್ನ ಧೋರಣೆಯನ್ನು ಬದಲಿಸಿಕೊಂಡರೆ ಅದರಿಂದ ಖಂಡಿತ ಮಾರುಕಟ್ಟೆ ಚೇತರಿಕೆ ಕಾಣುತ್ತದೆ.

  • ಷೇರುಪೇಟೆಯಲ್ಲಿನ ವಹಿವಾಟುಗಳ ಮೇಲೆ ವಿಧಿಸುವ , ಅಂದರೆ ಟ್ರಾನ್ಸಾಕ್ಷನ್ ಟ್ಯಾಕ್ಸ್ ಖಡಿತ ಮಾಡುವುದು ಕೂಡ ಮಾರುಕಟ್ಟೆಯ ಚೇತರಿಕೆಗೆ ಇಂಬು ನೀಡುತ್ತದೆ.

  • ಮಾಧ್ಯಮಗಳು ನಿಖರ ಮಾಹಿತಿಯಿಲ್ಲದೆ ಸುಮ್ಮನೆ ಜನರನ್ನು ದಾರಿತಪ್ಪಿಸುವುದರ ವಿರುದ್ಧ ಕಾನೂನು ತರುವ ಅವಶ್ಯಕತೆ ಕೂಡ ಇದೆ. ಒಂದೇ ಧೀನದಲ್ಲಿ ಹನ್ನೊಂದುವರೆ ಲಕ್ಷ ಕೋಟಿ ರೂಪಾಯಿ ನಷ್ಟಕ್ಕೆ ಯಾರು ಹೊಣೆ?

ಕೊನೆಮಾತು: ನಿಮಗೆಲ್ಲಾ ಗೊತ್ತಿರಲಿ ಭಾರತೀಯ ಬ್ಯಾಂಕುಗಳು ಲಿಕ್ವಿಡಿಟಿ ಕೊರತೆಯಿಂದ ನರಳುತ್ತಿವೆ. ಅದಕ್ಕೆ ಕಾರಣ ಷೇರುಮಾರುಕಟ್ಟೆಯಲ್ಲಿ ಹೊಸದಾಗಿ ಹೂಡಿಕೆ ಮಾಡುತ್ತಿರುವ ಹನ್ನೆರೆಡೂವರೆ ಕೋಟಿ ಜನ . ಇವರು ಮರಳಿ ಬ್ಯಾಂಕಿಗೆ ಹೋಗಲು ಅಲ್ಲಿರುವ ಅತಿ ಕಡಿಮೆ ಬಡ್ಡಿದರ ಅಡ್ಡ ಬರುತ್ತದೆ. ಇತ್ತ ಮಾರುಕಟ್ಟೆಯಲ್ಲಿ ಉಳಿಯಲು ಕೂಡ ಆಗುತ್ತಿಲ್ಲ. ಸರಕಾರ ಇಲ್ಲವೇ ಬಡ್ಡಿದರವನ್ನು ಏರಿಸಬೇಕು. ಆದರೆ ಇದು ಸಾಧ್ಯವಿಲ್ಲ. ಹೊಸ ಆರ್ಬಿಐ ಗವರ್ನರ್ ಬಡ್ಡಿಯನ್ನು ಕಡಿಮೆ ಮಾಡುವ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಸರಕಾರ ಫೆಬ್ರವರಿ ಬಜೆಟ್ನಲ್ಲಿ ಒಂದಷ್ಟು ತೆರಿಗೆ ವಿನಾಯ್ತಿ ನೀಡಬೇಕಿದೆ. ಜನ ತೆರಿಗೆ ಎನ್ನುವ ಹೆಸರಿನಿಂದ ರೋಸತ್ತು ಹೋಗಿದ್ದಾರೆ. ಸರಕಾರ ಬಜೆಟ್ನಲ್ಲಿ ಒಂದಷ್ಟು ಜನಪರ ಅಂಶಗಳನ್ನು ನೀಡದೆ ಹೋದರೆ ಈ ವರ್ಷ ಮಾರುಕಟ್ಟೆಯಲ್ಲಿ ಹಿಂದಿಗಿಂತ ಹೆಚ್ಚಿನ ಏರಿಳಿತ ಇರಲಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com