ಭಾರತೀಯ ಸೇನಾ ದಿನಾಚರಣೆ 2025: ಭೂಮಿಯಿಂದ ಕಕ್ಷೆಯ ತನಕ ಭಾರತದ ರಕ್ಷಣಾ ಹೊಣೆ (ಜಾಗತಿಕ ಜಗಲಿ)

21ನೇ ಶತಮಾನದಲ್ಲಿ ಯುದ್ಧಗಳು ನಡೆಯುವ ರೀತಿ ಬಹಳಷ್ಟು ಬದಲಾಗಿದೆ. ಈಗ ಬಾಹ್ಯಾಕಾಶವೂ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಮುಖ್ಯ ವಲಯವಾಗಿ ಹೊರಹೊಮ್ಮಿದೆ.
Indian Army day
ಸೇನಾ ದಿನಾಚರಣೆ (ಸಂಗ್ರಹ ಚಿತ್ರ)online desk
Updated on

ಪ್ರತಿವರ್ಷವೂ ಜನವರಿ 15ರಂದು, ಭಾರತ ತನ್ನ ಸೇನಾ ದಿನಾಚರಣೆಯನ್ನು ಆಚರಿಸುತ್ತದೆ. 1949ರ ಜನವರಿ 15ರಂದು ಲೆಫ್ಟಿನೆಂಟ್ ಜನರಲ್ (ಬಳಿಕ ಫೀಲ್ಡ್ ಮಾರ್ಷಲ್) ಕೆ ಎಂ ಕಾರ್ಯಪ್ಪ ಅವರು ಭಾರತೀಯ ಸೇನೆಯ ನೇತೃತ್ವವನ್ನು ವಹಿಸಿ, ಸ್ವಾತಂತ್ರ್ಯಾನಂತರ ಭಾರತೀಯ ಸೇನೆಯ ಮೊದಲ ಭಾರತೀಯ ಮಹಾದಂಡನಾಯಕರಾದರು.

ಆ ದಿನವನ್ನು ಸ್ಮರಿಸುವ ಸಲುವಾಗಿ, ಪ್ರತಿವರ್ಷವೂ ಜನವರಿ 15ರಂದು ಸೇನಾ ದಿನವನ್ನು ಆಚರಿಸುತ್ತಾ ಬರಲಾಗಿದೆ. ಈ ಐತಿಹಾಸಿಕ ನಾಯಕತ್ವ ಹಸ್ತಾಂತರ, ಸ್ವಾತಂತ್ರ್ಯಾನಂತರ ಭಾರತ ಬೆಳೆಸಿಕೊಂಡ ಸಾರ್ವಭೌಮತ್ವ, ಸ್ವಾವಲಂಬನೆಗೆ ಸಾಕ್ಷಿಯಾಗಿತ್ತು. ಅಂದು ಕೊನೆಗೂ ಓರ್ವ ಭಾರತೀಯ ವ್ಯಕ್ತಿ ದೇಶದ ಸೇನೆಯ ಮುಖ್ಯಸ್ಥನ ಸ್ಥಾನವನ್ನು ವಹಿಸಿದ್ದರು.

ಆದರೆ, 2025ರ ಸೇನಾ ದಿನಾಚರಣೆ ಕೇವಲ ಇತಿಹಾಸವನ್ನು ನೆನಪಿಸುವುದಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಇದು ಭಾರತೀಯ ಸೇನೆ ಹೇಗೆ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ, ಹೊಸ ಸವಾಲುಗಳಿಗೆ ಒಗ್ಗಿಕೊಂಡಿದೆ, ಮತ್ತು ಅತ್ಯಂತ ಸಂಕೀರ್ಣವಾದ ಜಗತ್ತಿನಲ್ಲಿ ಭಾರತದ ರಕ್ಷಣೆಯನ್ನು ಸಾಧಿಸುವ ಸಲುವಾಗಿ ಹೇಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ ಎಂಬುದನ್ನು ಸಾರುತ್ತಿದೆ. ಇದರಲ್ಲಿ ಕಾರ್ಯತಂತ್ರದ ದೃಷ್ಟಿಯಿಂದ ಬಹಳಷ್ಟು ಮಹತ್ವ ಹೊಂದಿರುವ ಬಾಹ್ಯಾಕಾಶ ಕ್ಷೇತ್ರವೂ ಸೇರಿದೆ. ಭಾರತೀಯ ಸೇನೆ ಪ್ರಸ್ತುತ ತನ್ನ ಕಾರ್ಯಾಚರಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ದೇಶದ ಗಡಿಗಳಾಚೆಗೂ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬಾಹ್ಯಾಕಾಶ ಆಧಾರಿತ ವ್ಯವಸ್ಥೆಗಳನ್ನು ಸಕ್ರಿಯವಾಗಿ ಒಳಗೊಳ್ಳುತ್ತಿದೆ.

ಬಾಹ್ಯಾಕಾಶ: ಹೊಸದಾದ ಯುದ್ಧರಂಗ!

21ನೇ ಶತಮಾನದಲ್ಲಿ ಯುದ್ಧಗಳು ನಡೆಯುವ ರೀತಿ ಬಹಳಷ್ಟು ಬದಲಾಗಿದೆ. ಈಗ ಬಾಹ್ಯಾಕಾಶವೂ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಮುಖ್ಯ ವಲಯವಾಗಿ ಹೊರಹೊಮ್ಮಿದೆ. ಸಂವಹನ, ಸಂಚರಣೆ (ನ್ಯಾವಿಗೇಶನ್), ಕಣ್ಗಾವಲು ಮತ್ತು ಗುಪ್ತಚರ ಮಾಹಿತಿ ಕಲೆಹಾಕುವಿಕೆಗಳಿಗೆ ಉಪಗ್ರಹಗಳು ಅಪಾರ ನೆರವು ನೀಡುತ್ತಿವೆ. ಶತ್ರು ದೇಶಗಳ ಇಂತಹ ಬಾಹ್ಯಾಕಾಶ ವ್ಯವಸ್ಥೆಗಳನ್ನು ಹಾಳು ಮಾಡುವುದು ಅಥವಾ ನಾಶಗೊಳಿಸುವುದರಿಂದ, ಅವುಗಳ ಕಮಾಂಡ್ ಮತ್ತು ಕಂಟ್ರೋಲ್ (ಆದೇಶ ಮತ್ತು ನಿಯಂತ್ರಣ) ವ್ಯವಸ್ಥೆಗಳನ್ನೇ ಬಲಹೀನಗೊಳಿಸಿ, ಅವುಗಳನ್ನು ಮಣಿಸಲು ಸಾಧ್ಯವಾಗುತ್ತದೆ.

ಈ ವಾಸ್ತವವನ್ನು ಅರ್ಥ ಮಾಡಿಕೊಂಡಿರುವ ಭಾರತೀಯ ಸೇನೆ, ತನ್ನ ಕಾರ್ಯಾಚರಣಾ ಸಿದ್ಧಾಂತಗಳಲ್ಲಿ ಬಾಹ್ಯಾಕಾಶ ಆಧರಿತ ಸಾಮರ್ಥ್ಯಗಳನ್ನೂ ಒಳಗೊಳ್ಳುತ್ತಿದೆ. ಇದಕ್ಕಾಗಿ, ಸೇನೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಡನೆ (ಇಸ್ರೋ) ಕೈಜೋಡಿಸಿದ್ದು, ನೂತನವಾಗಿ ಸ್ಥಾಪಿಸಿರುವ ಡಿಫೆನ್ಸ್ ಸ್ಪೇಸ್ ಏಜೆನ್ಸಿ (ಡಿಎಸ್ಎ) ಮೂಲಕ ಮಿಲಿಟರಿಗಾಗಿಯೇ ಬಾಹ್ಯಾಕಾಶ ಸಾಮರ್ಥ್ಯವನ್ನು ವೃದ್ಧಿಸುತ್ತಿದೆ.

ಭಾರತೀಯ ಸೇನೆಯ ಬಲವರ್ಧಕ - ಬಾಹ್ಯಾಕಾಶ

ಬಾಹ್ಯಾಕಾಶ ತಂತ್ರಜ್ಞಾನ ಹೇಗೆ ಭಾರತೀಯ ಸೇನೆಯ ಸಾಮರ್ಥ್ಯಗಳನ್ನು ವೃದ್ಧಿಸುತ್ತಿದೆ ಎಂಬುದನ್ನು ಇಲ್ಲಿ ಗಮನಿಸೋಣ:

ಸುಧಾರಿತ ಸಂವಹನ: ಯಾವುದೇ ಸೇನಾ ಕಾರ್ಯಾಚರಣೆಗೂ ಸುರಕ್ಷಿತ ಮತ್ತು ನಂಬಿಕಾರ್ಹ ಸಂವಹನವೇ ಜೀವಾಳವಾಗಿರುತ್ತದೆ. ಭಾರತದ ಉಪಗ್ರಹಗಳು ಭಾರತೀಯ ಸೇನಾಪಡೆಗೆ ಸದೃಢ ಸಂವಹನ ಜಾಲವನ್ನು ಒದಗಿಸಿದ್ದು, ಸವಾಲಿನ, ವಿಶಾಲವಾದ ಭೂ ಪ್ರದೇಶಗಳಲ್ಲೂ ಮಿತಿಯಿಲ್ಲದ ಸಂವಹನವನ್ನು ಕಲ್ಪಿಸುತ್ತವೆ. ಸೇನಾ ಪಡೆಗಳ ಸಂಚಾರವನ್ನು ವ್ಯವಸ್ಥಿಗೊಳಿಸಲು, ವಾಸ್ತವ ಸಮಯದಲ್ಲಿ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳಲು, ಮತ್ತು ದುರ್ಗಮ ಗಡಿ ಪ್ರದೇಶಗಳಲ್ಲಿ ಆದೇಶ ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು ನಿರ್ವಹಿಸಲು ಉಪಗ್ರಹ ಸೇವೆಗಳು ಮಹತ್ತರವಾಗಿವೆ.

ನಿಖರ ಸಂಚರಣೆ (ನ್ಯಾವಿಗೇಶನ್): ನಿಖರ ನ್ಯಾವಿಗೇಶನ್ ವ್ಯವಸ್ಥೆ ಆಧುನಿಕ ಯುದ್ಧದಲ್ಲಿ ಬಹಳ ಮುಖ್ಯವಾಗಿದೆ. ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್‌ನಂತಹ (ಐಆರ್‌ಎನ್ಎಸ್ಎಸ್) ಉಪಗ್ರಹ ಆಧಾರಿತ ನ್ಯಾವಿಗೇಶನ್ ವ್ಯವಸ್ಥೆಗಳು ಭಾರತೀಯ ಸೇನೆಗೆ ನಿಖರ ಸ್ಥಳಗಳ ಮಾಹಿತಿ ಒದಗಿಸಲು, ಸೇನಾಪಡೆಗಳ ನಿಯೋಜನೆ ನಡೆಸಲು ಮತ್ತು ಸಮರ್ಥ ಸಾಗಾಣಿಕೆ ನಡೆಸಲು ನೆರವಾಗುತ್ತವೆ.

ವಿಚಕ್ಷಣೆ ಮತ್ತು ಕಣ್ಗಾವಲು: ದೇಶಕ್ಕೆ ಧಕ್ಕೆ ತಂದೊಡ್ಡಬಲ್ಲ ಸಂಭಾವ್ಯ ಅಪಾಯಗಳ ಮೇಲೆ ಸದಾ ಎಚ್ಚರಿಕೆಯ ಕಣ್ಣಿಡುವುದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಅತ್ಯಾಧುನಿಕ ಕ್ಯಾಮರಾಗಳು ಮತ್ತು ಸೆನ್ಸರ್‌ಗಳನ್ನು ಹೊಂದಿರುವ ಉಪಗ್ರಹಗಳು ಭಾರತೀಯ ಸೇನೆಗೆ ಯುದ್ಧರಂಗದ ಸಮಗ್ರ ಚಿತ್ರಣ ನೀಡಿ, ವಾಸ್ತವ ಸಮಯದಲ್ಲಿ ಕಣ್ಗಾವಲು ನಡೆಸಿ, ಗುರಿಗಳನ್ನು ಗುರುತಿಸಲು ಮತ್ತು ಹಾನಿಯನ್ನು ಅಂದಾಜಿಸಲು ನೆರವಾಗುತ್ತವೆ. ಗಡಿ ಪ್ರದೇಶಗಳ ಮೇಲೆ ನಿಗಾ ವಹಿಸಲು, ಶತ್ರುಗಳ ಸಂಚಾರವನ್ನು ಗಮನಿಸಲು ಮತ್ತು ಗುಪ್ತಚರ ಮಾಹಿತಿ ಕಲೆಹಾಕಲು ಈ ವ್ಯವಸ್ಥೆ ಅತ್ಯಂತ ಮೌಲ್ಯಯುತವಾಗಿದೆ.

Indian Army day
Year 2024: ವಿಫಲಗೊಂಡ ಬಾಹ್ಯಾಕಾಶ ಯೋಜನೆಗಳು (ಜಾಗತಿಕ ಜಗಲಿ)

ಶೀಘ್ರ ಮುನ್ನೆಚ್ಚರಿಕಾ ವ್ಯವಸ್ಥೆಗಳು: ಪರಿಣಾಮಕಾರಿ ಭದ್ರತಾ ವ್ಯವಸ್ಥೆಯನ್ನು ಹೊಂದುವ ಸಲುವಾಗಿ, ಶತ್ರು ಕ್ಷಿಪಣಿಗಳ ಉಡಾವಣೆ ಮತ್ತು ಇತರ ಅಪಾಯಗಳನ್ನು ಶೀಘ್ರವಾಗಿ ಗುರುತಿಸುವುದು ಅವಶ್ಯಕವಾಗಿದೆ. ಬಾಹ್ಯಾಕಾಶದಲ್ಲಿ ಕಾರ್ಯಾಚರಿಸುವ ಸೆನ್ಸರ್‌ಗಳು ಭಾರತೀಯ ಸೇನೆಗೆ ಮೊದಲೇ ಎಚ್ಚರಿಕೆ ನೀಡಿ, ಕ್ಷಿಪ್ರ ಪ್ರತಿಕ್ರಿಯೆಗೆ ಸಿದ್ಧವಾಗಿ, ಸಂಭಾವ್ಯ ಹಾನಿಯನ್ನು ಕನಿಷ್ಠಗೊಳಿಸಲು ನೆರವಾಗುತ್ತವೆ.

ನೆಟ್‌ವರ್ಕ್ ಕೇಂದ್ರಿತ ಯುದ್ಧ: ಆಧುನಿಕ ಯುದ್ಧಗಳಂತೂ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ನೆಟ್‌ವರ್ಕ್ ವ್ಯವಸ್ಥೆಗಳನ್ನು ಅವಲಂಬಿಸುತ್ತಿವೆ. ನೆಟ್‌ವರ್ಕ್ ಕೇಂದ್ರಿತ ಯುದ್ಧ ಕೈಗೊಳ್ಳಲು ಬಾಹ್ಯಾಕಾಶ ಆಧರಿತ ವ್ಯವಸ್ಥೆಗಳು ನೆರವಾಗುತ್ತವೆ. ಇವುಗಳು ಭಾರತೀಯ ಸೇನೆಗೆ ಮಾಹಿತಿಗಳನ್ನು ಕ್ಷಿಪ್ರವಾಗಿ ವಿನಿಮಯಗೊಳಿಸಿ, ಕಾರ್ಯಾಚರಣೆಗಳನ್ನು ಸಂಘಟಿತಗೊಳಿಸಿ, ಎಲ್ಲ ಹಂತದ ಕಮಾಂಡ್‌ಗಳಲ್ಲೂ ವಾಸ್ತವ ಪರಿಸ್ಥಿತಿಯ ಅರಿವು ಮೂಡಿಸಲು ನೆರವಾಗುತ್ತವೆ.

ಡಿಎಸ್ಎ: ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಯ ನಾಯಕ

2019ರಲ್ಲಿ ಸ್ಥಾಪನೆಗೊಂಡ ಡಿಎಸ್ಎಗೆ ಭಾರತೀಯ ಸೇನಾಪಡೆಗಳಿಗೆ ಅವಶ್ಯಕವಾದ ಬಾಹ್ಯಾಕಾಶ ವ್ಯವಸ್ಥೆಗಳನ್ನು ಸಿದ್ಧಗೊಳಿಸಿ, ಅವುಗಳನ್ನು ಉಡಾವಣೆಗೊಳಿಸುವ ಜವಾಬ್ದಾರಿ ವಹಿಸಲಾಗಿದೆ. ಬಾಹ್ಯಾಕಾಶ ಸಂಬಂಧಿತ ಚಟುವಟಿಕೆಗಳನ್ನು ಸಂಘಟಿಸಲು ಇದು ಮುಖ್ಯ ಪಾತ್ರ ವಹಿಸುತ್ತದೆ. ಆ ಮೂಲಕ, ಮಿಲಿಟರಿ ಕಾರ್ಯಾಚರಣೆಗಳಲ್ಲಿ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಬಳಸಿ, ದೇಶದ ಬಾಹ್ಯಾಕಾಶ ಮೂಲಭೂತ ವ್ಯವಸ್ಥೆಗಳನ್ನು ಸುರಕ್ಷಿತವಾಗಿಡಲು ಡಿಎಸ್ಎ ನೆರವಾಗುತ್ತದೆ.

ಹೆಚ್ಚುತ್ತಿರುವ ಡಿಎಸ್ಎ ಪಾತ್ರ

ಮಿಲಿಟರಿಗೆ ಮೀಸಲಾದ ಉಪಗ್ರಹಗಳು: ಡಿಎಸ್ಎ ಸಂವಹನ, ಕಣ್ಗಾವಲು ಮತ್ತು ನ್ಯಾವಿಗೇಶನ್ ಪ್ರಕ್ರಿಯೆಗಳಿಗೆ ಬಳಕೆಯಾಗುವ, ಮಿಲಿಟರಿ ಬಳಕೆಗೆಂದೇ ಮೀಸಲಾದ ಉಪಗ್ರಹಗಳನ್ನು ಸಕ್ರಿಯವಾಗಿ ಪಡೆದುಕೊಳ್ಳುತ್ತಿದೆ. ಆ ಮೂಲಕ, ಭಾರತೀಯ ಸೇನಾಪಡೆಯ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಮಿಲಿಟರಿ ವ್ಯವಹಾರಗಳ ಇಲಾಖೆ ಡಿಸೆಂಬರ್ 2024ರಲ್ಲಿ ರಕ್ಷಣಾ ಸಚಿವಾಲಯದ ಹಿರಿಯ ಸದಸ್ಯರು, ಡಿಆರ್‌ಡಿಓ ಮತ್ತು ಇಸ್ರೋಗಳಿಗೆ 52 ನೂತನ ಮಿಲಿಟರಿ ಉಪಗ್ರಹಗಳನ್ನು ಹೊಂದುವ ಯೋಜನೆಯನ್ನು ಪ್ರಸ್ತಾಪಿಸಿತು.

ಉಪಗ್ರಹ ನಿರೋಧಕ ಸಾಮರ್ಥ್ಯ: 2019ರಲ್ಲಿ, ಭಾರತ ಭೂಮಿಯ ಕೆಳಕಕ್ಷೆಯಲ್ಲಿದ್ದ ಉಪಗ್ರಹವೊಂದನ್ನು ಯಶಸ್ವಿಯಾಗಿ ಧ್ವಂಸಗೊಳಿಸಿ, ಉಪಗ್ರಹ ನಿರೋಧಕ ಸಾಮರ್ಥ್ಯವನ್ನು (ಎಎಸ್ಎಟಿ) ಪ್ರದರ್ಶಿಸಿತು. ಈ ಪರೀಕ್ಷೆ ಭಾರತ ತನ್ನ ಬಾಹ್ಯಾಕಾಶ ಸಂಪತ್ತುಗಳನ್ನು ರಕ್ಷಿಸುವ, ಶತ್ರುಗಳು ಹಿಂಜರಿಯುವಂತೆ ಮಾಡುವ ಶಕ್ತಿಯನ್ನು ಸಂಪಾದಿಸಿದೆ ಎಂದು ಸಾಬೀತುಪಡಿಸಿತು.

ಬಾಹ್ಯಾಕಾಶದ ಪರಿಸ್ಥಿತಿಯ ಅರಿವು: ಡಿಎಸ್ಎ ಈಗಾಗಲೇ ಬಾಹ್ಯಾಕಾಶ ತ್ಯಾಜ್ಯಗಳನ್ನು ಗಮನಿಸಿ, ಭಾರತೀಯ ಉಪಗ್ರಹಗಳಿಗೆ ಎದುರಾಗಬಹುದಾದ ಹಾನಿಯನ್ನು ಗಮನಿಸುವ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುತ್ತಿದೆ. ಆ ಮೂಲಕ ದೇಶದ ಉಪಗ್ರಹ ವ್ಯವಸ್ಥೆಗಳನ್ನು ಸುರಕ್ಷಿತವಾಗಿಡಲು ಸಾಧ್ಯವಾಗುತ್ತದೆ.

ಅಂತಾರಾಷ್ಟ್ರೀಯ ಸಹಯೋಗ: ಡಿಎಸ್ಎ ಬಾಹ್ಯಾಕಾಶ ಸಹಕಾರ ಮತ್ತು ಉತ್ತಮ ಯೋಜನೆಗಳನ್ನು ಕೈಗೊಳ್ಳುವ ಸಲುವಾಗಿ ಅಂತಾರಾಷ್ಟ್ರೀಯ ಸಹಯೋಗಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದೆ.

Indian Army day
ಹಿಮಾಲಯದಲ್ಲಿ ಜಲವಿದ್ಯುತ್ ಯೋಜನೆ: ಟಿಬೆಟ್‌ನಲ್ಲಿ ಅಣೆಕಟ್ಟು ನಿರ್ಮಿಸಲು ಚೀನಾ ಮುಂದು; ಭಾರತಕ್ಕೆ ಕಳವಳ? (ಜಾಗತಿಕ ಜಗಲಿ)

ಸವಾಲುಗಳು ಮತ್ತು ಮುಂದಿನ ಹಾದಿ

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ತನ್ನ ದಾಪುಗಾಲು ಇಡುತ್ತಾ ಸಾಗಿದ್ದರೂ, ಭಾರತೀಯ ಸೇನೆಯ ಕಾರ್ಯಾಚರಣಾ ವ್ಯವಸ್ಥೆಗೆ ಬಾಹ್ಯಾಕಾಶ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅಳವಡಿಸುವುದು ಸವಾಲಿನ ವಿಚಾರವಾಗಿದೆ.

ತಂತ್ರಜ್ಞಾನ ಅಭಿವೃದ್ಧಿ: ಬಾಹ್ಯಾಕಾಶ ತಂತ್ರಜ್ಞಾನ ದಿನೇ ದಿನೇ ಅಭಿವೃದ್ಧಿ ಹೊಂದುತ್ತಾ, ಬದಲಾಗುತ್ತಾ ಸಾಗುತ್ತಿದೆ. ಇವುಗಳ ವೇಗಕ್ಕೆ ಹೊಂದಿಕೊಂಡು, ಅತ್ಯಾಧುನಿಕ ಬಾಹ್ಯಾಕಾಶ ಸಾಮರ್ಥ್ಯವನ್ನು ಗಳಿಸಲು ಭಾರತ ಸಂಶೋಧನೆ ಮತ್ತು ಅಭಿವೃದ್ಧಿಗೆ (ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ - ಆರ್&ಡಿ) ನಿರಂತರವಾಗಿ ಹೂಡಿಕೆ ನಡೆಸಬೇಕಾಗುತ್ತದೆ.

ಅಂತರ ಸಂಸ್ಥೆಗಳ ಸಹಯೋಗ: ಬಾಹ್ಯಾಕಾಶ ಆಧರಿತ ವ್ಯವಸ್ಥೆಗಳನ್ನು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಸಮರ್ಥವಾಗಿ ಬಳಸಿಕೊಳ್ಳಲು ಡಿಎಸ್ಎ, ಇಸ್ರೋದಂತಹ ಸಂಸ್ಥೆಗಳು ಮತ್ತು ಭಾರತೀಯ ಸೇನೆಯ ನಡುವೆ ಉತ್ತಮ ಸಹಕಾರ ಮತ್ತು ಸಹಯೋಗದ ಅಗತ್ಯವಿದೆ.

ಸೈಬರ್ ಭದ್ರತಾ ಸಮಸ್ಯೆಗಳು: ಬಾಹ್ಯಾಕಾಶ ವಲಯ ನಿರಂತರವಾಗಿ ಬೆಳೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ದೇಶದ ಬಾಹ್ಯಾಕಾಶ ವ್ಯವಸ್ಥೆಗಳನ್ನು ಸಂಭಾವ್ಯ ಸೈಬರ್ ದಾಳಿಗಳಿಂದ ರಕ್ಷಿಸುವುದು ಮತ್ತು ಮಾಹಿತಿಗಳನ್ನು ಸುರಕ್ಷಿತವಾಗಿ, ಶತ್ರುಗಳ ಕೈಗೆ ಲಭಿಸದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಮತ್ತು ಕಷ್ಟಕರ ವಿಚಾರವಾಗಿದೆ.

ಬಾಹ್ಯಾಕಾಶ ತ್ಯಾಜ್ಯದ ಸಮಸ್ಯೆ: ಬಾಹ್ಯಾಕಾಶ ತ್ಯಾಜ್ಯಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾರ್ಯಾಚರಿಸುತ್ತಿರುವ ಉಪಗ್ರಹಗಳಿಗೂ ಸವಾಲು, ಅಪಾಯವಾಗಿ ಪರಿಣಮಿಸಲಿವೆ. ಇದನ್ನು ನಿಯಂತ್ರಿಸಲು ಕಾರ್ಯತಂತ್ರವನ್ನು ರೂಪಿಸುವ ಅವಶ್ಯಕತೆಯಿದೆ.

ಭವಿಷ್ಯದ ಪಡೆಯಾಗಲಿದೆ ಭಾರತೀಯ ಸೇನೆ

ಭಾರತ 2025ರ ಭಾರತೀಯ ಸೇನಾ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಭಾರತೀಯ ಸೇನೆ ಭೂಮಿಯ ಗಡಿಗಳಿಂದಾಚೆಗೆ, ವಿಶಾಲ ಬಾಹ್ಯಾಕಾಶಕ್ಕೂ ವ್ಯಾಪಿಸಲಿರುವ ಭವಿಷ್ಯದ ಯುದ್ಧದ ಯುಗದತ್ತ ಮುಖ ಮಾಡಿದೆ. ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಬಳಕೆಗೆ ತಂದು, ನಾವೀನ್ಯತೆಗಳನ್ನು ಅಭಿವೃದ್ಧಿ ಪಡಿಸಿ, ಕಾರ್ಯತಂತ್ರದ ಸಹಯೋಗಗಳನ್ನು ಹೊಂದಿ, ಭಾರತೀಯ ಸೇನೆ ತನ್ನನ್ನು ತಾನು ಬಹು ಆಯಾಮಗಳ ಪಡೆಯಾಗಿ ಪರಿವರ್ತಿಸುತ್ತಿದೆ. ಆ ಮೂಲಕ ಭೂಮಿ ಮತ್ತು ಭೂಮಿಯಾಚೆಗೂ ದೇಶದ ಹಿತಾಸಕ್ತಿಗಳನ್ನು ರಕ್ಷಿಸುವ ಸಾಮರ್ಥ್ಯ ಪ್ರದರ್ಶಿಸುತ್ತಿದೆ. ಬಾಹ್ಯಾಕಾಶ ಆಧಾರಿತ ಸಾಮರ್ಥ್ಯಗಳನ್ನು ಗಳಿಸುವತ್ತ ಭಾರತೀಯ ಸೇನೆಯ ನಡೆ ಅದರ ಹೊಂದಿಕೊಳ್ಳುವ ಗುಣ, ಹೊಸ ತಂತ್ರಜ್ಞಾನಗಳ ಅಳವಡಿಕೆಯ ವಿಚಾರದಲ್ಲಿ ಬದ್ಧತೆ, ಮತ್ತು ದೇಶವನ್ನು ರಕ್ಷಿಸುವಲ್ಲಿ ನಿರಂತರ ಸಿದ್ಧತೆಗೆ ಸಾಕ್ಷಿಯಾಗಿದೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com