ಗ್ಲಿಯೊಬ್ಲಾಸ್ಟೊಮಾ ಎಂಬ ಮಾರಕ ಮೆದುಳಿನ ಗೆಡ್ಡೆ (ಕುಶಲವೇ ಕ್ಷೇಮವೇ)

ಗ್ಲಿಯೊಬ್ಲಾಸ್ಟೊಮಾದ ಲಕ್ಷಣಗಳು ಮೆದುಳಿನಲ್ಲಿ ಈ ಗೆಡ್ಡೆಯ ಗಾತ್ರ, ಸ್ಥಳ ಮತ್ತು ಬೆಳವಣಿಗೆಯ ವೇಗವನ್ನು ಅವಲಂಬಿಸಿ ಬದಲಾಗುತ್ತವೆ.
Glioblastoma
ಗ್ಲಿಯೊಬ್ಲಾಸ್ಟೊಮಾ online desk
Updated on

ಗ್ಲಿಯೊಬ್ಲಾಸ್ಟೊಮಾ (ಸಂಪೂರ್ಣ ಹೆಸರು ಗ್ಲಿಯೋಬ್ಲಾಸ್ಟೊಮಾ ಮಲ್ಟಿಫಾರ್ಮ್-ಜಿಬಿಎಂ) ಆಕ್ರಮಣಕಾರಿ ಮತ್ತು ಮಾರಕ ರೀತಿಯ ಮೆದುಳಿನ ಗೆಡ್ಡೆಯಾಗಿದೆ. ಇದು ಮೆದುಳಿನ ನರ ಕೋಶಗಳನ್ನು ಬೆಂಬಲಿಸುವ ಗ್ಲಿಯಲ್ ಕೋಶದ ಒಂದು ರೀತಿಯ ಆಸ್ಟ್ರೋಸೈಟುಗಳಿಂದ (astrocytes) ಉಂಟಾಗುತ್ತದೆ.

ಮೆದುಳಿನ ಕ್ಯಾನ್ಸರಿನ ಅತ್ಯಂತ ಮಾರಕ ರೂಪಗಳಲ್ಲಿ ಒಂದಾದ ಗ್ಲಿಯೊಬ್ಲಾಸ್ಟೊಮಾದ ಸಂಭವನೀಯತೆ ಎಲ್ಲಾ ಪ್ರಾಥಮಿಕ ಮೆದುಳಿನ ಗೆಡ್ಡೆಗಳಲ್ಲಿ ಸುಮಾರು ಶೇಕಡಾ 15ರಷ್ಟಿದೆ ಮತ್ತು ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಆದರೂ ಇದು ಯಾವುದೇ ವಯಸ್ಸಿನಲ್ಲಿಯಾದರೂ ಸಂಭವಿಸಬಹುದು. ವೈದ್ಯಕೀಯ ವಿಜ್ಞಾನದಲ್ಲಿ ಪ್ರಗತಿ ಸಾಕಷ್ಟಾಗಿದ್ದರೂ ಗ್ಲಿಯೊಬ್ಲಾಸ್ಟೊಮಾ ಬರುವುದು ಮುಂಚೆಯೇ ಸರಿಯಾಗಿ ಗೊತ್ತಾಗುವುದಿಲ್ಲ. ಹೀಗಾಗಿ ಇದರ ಚಿಕಿತ್ಸೆ ಮತ್ತು ನಿರ್ವಹಣೆಯು ಇಂದಿಗೂ ಒಂದು ಗಮನಾರ್ಹ ಸವಾಲಾಗಿಯೇ ಉಳಿದಿದೆ.

ಗ್ಲಿಯೊಬ್ಲಾಸ್ಟೊಮಾ ಸಾಮಾನ್ಯ ಲಕ್ಷಣಗಳು

ಗ್ಲಿಯೊಬ್ಲಾಸ್ಟೊಮಾದ ಲಕ್ಷಣಗಳು ಮೆದುಳಿನಲ್ಲಿ ಈ ಗೆಡ್ಡೆಯ ಗಾತ್ರ, ಸ್ಥಳ ಮತ್ತು ಬೆಳವಣಿಗೆಯ ವೇಗವನ್ನು ಅವಲಂಬಿಸಿ ಬದಲಾಗುತ್ತವೆ. ಆದರೂ ಇದರ ಸಾಮಾನ್ಯ ಲಕ್ಷಣಗಳು ಹೀಗಿವೆ:

  1. ತಲೆನೋವು: ನಿಧಾನವಾಗಿ ಉಲ್ಬಣಗೊಳ್ಳುವ ನಿರಂತರ ತಲೆನೋವು, ಅದರಲ್ಲಿಯೂ ಬೆಳಿಗ್ಗೆ ಅಥವಾ ದೈಹಿಕ ಚಟುವಟಿಕೆಯ ಸಮಯದಲ್ಲಿ ತಲೆನೋವು ಹೆಚ್ಚಾಗುವುದು.

  2. ವಾಕರಿಕೆ ಮತ್ತು ವಾಂತಿ: ಮೆದುಳಿನಲ್ಲಿ ಒತ್ತಡ ಹೆಚ್ಚಳದಿಂದ ವಾಕರಿಕೆ ಮತ್ತು ವಾಂತಿ ಉಂಟಾಗುತ್ತದೆ.

  3. ಸೆಳೆತ: ಮೆದುಳಿನ ಸೆಳೆತದ ಅನುಭವ ಗ್ಲಿಯೊಬ್ಲಾಸ್ಟೊಮಾದ ಸಾಮಾನ್ಯ ಲಕ್ಷಣಗಳಾಗಿವೆ.

  4. ಅರಿವಿನ ಮತ್ತು ವರ್ತನೆಯ ಬದಲಾವಣೆಗಳು: ಸ್ಮರಣ ಶಕ್ತಿ ನಷ್ಟ, ಗೊಂದಲ, ಒಂದು ವಿಷಯದಲ್ಲಿ ಗಮನ ಹರಿಸುವುದರಲ್ಲಿ ತೊಂದರೆ ಮತ್ತು ವ್ಯಕ್ತಿತ್ವ ಬದಲಾವಣೆಗಳು ಸಂಭವಿಸಬಹುದು.

  5. ನರವೈಜ್ಞಾನಿಕ ಸಮಸ್ಯೆಗಳು: ಗೆಡ್ಡೆಯ ಸ್ಥಳವನ್ನು ಅವಲಂಬಿಸಿ ಕೈಕಾಲುಗಳಲ್ಲಿ ದೌರ್ಬಲ್ಯ ಅಥವಾ ಮರಗಟ್ಟುವಿಕೆ, ಮಾತನಾಡುವಲ್ಲಿ ತೊಂದರೆ (ಅಫಾಸಿಯಾ), ಅಥವಾ ದೃಷ್ಟಿ ಸಮಸ್ಯೆಗಳು ಉಂಟಾಗಬಹುದು.

  6. ಆಯಾಸ: ದೈಹಿಕ ಮತ್ತು ಮಾನಸಿಕ ಬಳಲಿಕೆಯ ಸಾಮಾನ್ಯ ಭಾವನೆ ಕಾಣಿಸಿಕೊಳ್ಳುತ್ತದೆ.

Glioblastoma
ನೆನಪಿನ ಶಕ್ತಿಗಾಗಿ ಆಹಾರ-ವಿಹಾರ (ಕುಶಲವೇ ಕ್ಷೇಮವೇ)

ಗ್ಲಿಯೊಬ್ಲಾಸ್ಟೊಮಾ ಕಾರಣಗಳು ಮತ್ತು ಅಪಾಯಕಾರಿ ಅಂಶಗಳು

ಗ್ಲಿಯೊಬ್ಲಾಸ್ಟೊಮಾದ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಹಲವಾರು ಅಂಶಗಳು ಇದಕ್ಕೆ ಕಾರಣವೆಂದು ನಂಬಲಾಗಿದೆ. ಅವುಗಳಲ್ಲಿ ಕೆಲವು ಹೀಗಿವೆ:

  1. ಆನುವಂಶಿಕ ರೂಪಾಂತರಗಳು: ಕೆಲವು ನಿರ್ದಿಷ್ಟ ಜೀನ್ಗಳಲ್ಲಿನ ಬದಲಾವಣೆಗಳು ಗ್ಲಿಯೊಬ್ಲಾಸ್ಟೊಮಾಗೆ ಕಾರಣವಾಗುವ ಅಸಹಜ ಕೋಶ ವಿಭಜನೆಯನ್ನು ಪ್ರಚೋದಿಸಬಹುದು

  2. ವಯಸ್ಸು: ಈ ರೋಗದ ಅಪಾಯವು ವಯಸ್ಸಿನೊಂದಿಗೆ ಹೆಚ್ಚಾಗುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ.

  3. ವಿಕಿರಣಕ್ಕೆ ಒಡ್ಡಿಕೊಳ್ಳುವುದು: ಯಾವುದಾದರೂ ವೈದ್ಯಕೀಯ ಕಾರಣದಿಂದ ತಲೆಗೆ ಹೆಚ್ಚಿನ ಪ್ರಮಾಣದ ವಿಕಿರಣಕ್ಕೆ ಒಡ್ಡಿಕೊಂಡರೆ ಈ ರೋಗದ ಅಪಾಯ ಹೆಚ್ಚು.

  4. ಕುಟುಂಬ ಇತಿಹಾಸ: ಕುಟುಂಬದ ಇತಿಹಾಸವು ಮೆದುಳಿನ ಗೆಡ್ಡೆಗಳ ಅಪಾಯವನ್ನು ಸ್ವಲ್ಪ ಹೆಚ್ಚಿಸಬಹುದು.

  5. ಪರಿಸರದ ಅಂಶಗಳು: ಖಚಿತವಾಗಿ ಸಾಬೀತಾಗಿಲ್ಲದಿದ್ದರೂ, ಕೆಲವು ರಾಸಾಯನಿಕಗಳು ಅಥವಾ ಕಾರ್ಸಿನೋಜೆನ್ನುಗಳಿಗೆ (ಕ್ಯಾನ್ಸರ್ ಕಾರಕಗಳು) ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಈ ರೋಗ ಬರಲು ಕಾರಣವಾಗಬಹುದು.

ಗ್ಲಿಯೊಬ್ಲಾಸ್ಟೊಮಾ ರೋಗದ ಬೆಳವಣಿಗೆ

ಮೆದುಳಿನಲ್ಲಿರುವ ನಕ್ಷತ್ರಾಕಾರದ ಪೋಷಕ ಕೋಶಗಳಾದ ಆಸ್ಟ್ರೋಸೈಟುಗಳ ಡಿಎನ್‌ಎ ರೂಪಾಂತರಗಳಿಗೆ ಒಳಗಾದಾಗ ಗ್ಲಿಯೊಬ್ಲಾಸ್ಟೊಮಾಗಳು ಬೆಳೆಯುತ್ತವೆ. ಈ ರೂಪಾಂತರಗಳು ಜೀವಕೋಶಗಳು ಅನಿಯಂತ್ರಿತವಾಗಿ ವೃದ್ಧಿಯಾಗಲು ಅವುಗಳ ಬೆಳವಣಿಗೆಯನ್ನು ಬೆಂಬಲಿಸಲು ಹೊಸ ರಕ್ತನಾಳಗಳನ್ನು ರೂಪಿಸಲು ಮತ್ತು ಸುತ್ತಮುತ್ತಲಿನ ಆರೋಗ್ಯಕರ ಮೆದುಳಿನ ಅಂಗಾAಶವನ್ನು ಆಕ್ರಮಿಸಲು ಕಾರಣವಾಗುತ್ತವೆ. ಈ ಆಕ್ರಮಣಕಾರಿ ಸ್ವಭಾವವು ಗ್ಲಿಯೊಬ್ಲಾಸ್ಟೊಮಾದ ಚಿಕಿತ್ಸೆಯನ್ನು ಅತ್ಯಂತ ಕಷ್ಟಕರವಾಗಿಸುತ್ತದೆ ಮತ್ತು ಚಿಕಿತ್ಸೆಯ ನಂತರವೂ ಆಗಾಗ್ಗೆ ಮರುಕಳಿಸುವಿಕೆಗೆ ಕಾರಣವಾಗುತ್ತದೆ.

ಗ್ಲಿಯೊಬ್ಲಾಸ್ಟೊಮಾ ಚಿಕಿತ್ಸಾ ಆಯ್ಕೆಗಳು

ಗ್ಲಿಯೊಬ್ಲಾಸ್ಟೊಮಾ ಚಿಕಿತ್ಸೆಯು ಸಾಮಾನ್ಯವಾಗಿ ಪರಿಣಾಮಕಾರಿ ಬಹುಶಿಸ್ತೀಯ ವಿಧಾನವನ್ನು ಒಳಗೊಂಡಿರುತ್ತದೆ. ಚಿಕಿತ್ಸೆಯಲ್ಲಿ ಪ್ರಗತಿಯಾದರೂ ಸಂಪೂರ್ಣ ಗುಣವಾಗುವುದು ಸವಾಲಿನ ಸಂಗತಿಯಾಗಿದೆ. ಇದರ ಚಿಕಿತ್ಸಾ ವಿಧಾನಗಳು ಹೀಗಿವೆ:

  1. ಶಸ್ತ್ರಚಿಕಿತ್ಸೆ: ಸಾಮಾನ್ಯವಾಗಿ ಸಾಧ್ಯವಾದಷ್ಟು ಸುರಕ್ಷಿತವಾಗಿ ಅಪಾಯಕಾರಿ ಗೆಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯು ಸರಳ ವಿಧಾನವಾಗಿದೆ (ಗರಿಷ್ಠ ಸುರಕ್ಷಿತ ಛೇದನ). ಗೆಡ್ಡೆಯ ಆಕ್ರಮಣಕಾರಿ ಸ್ವಭಾವದಿಂದಾಗಿ ಸಂಪೂರ್ಣ ತೆಗೆಯುವಿಕೆ ಸಾಮಾನ್ಯವಾಗಿ ಆಗುವುದಿಲ್ಲ.

  2. ವಿಕಿರಣ ಚಿಕಿತ್ಸೆ: ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಮತ್ತು ಗೆಡ್ಡೆಯನ್ನು ಕಡಿಮೆ ಮಾಡಲು ಹೆಚ್ಚಿನ ಶಕ್ತಿಯ ಕಿರಣಗಳನ್ನು ಗೆಡ್ಡೆ ಇರುವ ಸ್ಥಳಕ್ಕೆ ಹಾಯಿಸಲಾಗುತ್ತದೆ.

  3. ಕೀಮೋಥೆರಪಿ: ಸಾಮಾನ್ಯವಾಗಿ ಬಳಸುವ ಔಷಧವೆಂದರೆ ಟೆಮೊಜೊಲೊಮೈಡ್. ಇದು ರಕ್ತ-ಮಿದುಳಿನ ತಡೆಗೋಡೆಯನ್ನು ಭೇದಿಸುವ ಮೌಖಿಕ ಕೀಮೋಥೆರಪಿ ಔಷಧವಾಗಿದೆ.

  4. ಉದ್ದೇಶಿತ ಚಿಕಿತ್ಸೆ: ರಕ್ತನಾಳಗಳ ರಚನೆಯನ್ನು (ಆಂಜಿಯೋಜೆನೆಸಿಸ್) ಪ್ರತಿಬಂಧಿಸುವ ಔಷಧವಾದ ಬೆವಾಸಿಜುಮಾಬ್ ಅನ್ನು ಕೆಲವೊಮ್ಮೆ ಗೆಡ್ಡೆಯ ಬೆಳವಣಿಗೆಯನ್ನು ನಿಧಾನಗೊಳಿಸಲು ಬಳಸಲಾಗುತ್ತದೆ.

  5. ಗೆಡ್ಡೆ-ಚಿಕಿತ್ಸಾ ಕ್ಷೇತ್ರಗಳು: ಈ ನವೀನ ಚಿಕಿತ್ಸೆಯು ಕ್ಯಾನ್ಸರ್ ಕೋಶ ವಿಭಜನೆಯನ್ನು ಅಡ್ಡಿಪಡಿಸಲು ವಿದ್ಯುತ್ ಕ್ಷೇತ್ರಗಳನ್ನು ಬಳಸುತ್ತದೆ ಮತ್ತು ಇದನ್ನು ಹೆಚ್ಚಾಗಿ ಕೀಮೋಥೆರಪಿಯೊಂದಿಗೆ ಸಂಯೋಜಿಸಲಾಗುತ್ತದೆ.

  6. ಸಹಾಯಕ ಆರೈಕೆ: ಮೆದುಳಿನ ಊತವನ್ನು ಕಡಿಮೆ ಮಾಡಲ, ಸೆಳೆತ ಮತ್ತು ನೋವಿನಂತಹ ಲಕ್ಷಣಗಳನ್ನು ನಿಯಂತ್ರಿಸಲು ಕಾರ್ಟಿಕೊಸ್ಟೆರಾಯ್ಡ್ಗಳಂತಹ ಔಷಧಿಗಳನ್ನು ಬಳಸಲಾಗುತ್ತದೆ.

ಆಕ್ರಮಣಕಾರಿ ಚಿಕಿತ್ಸೆಯ ಹೊರತಾಗಿಯೂ, ಗ್ಲಿಯೊಬ್ಲಾಸ್ಟೊಮಾ ಆಗಾಗ್ಗೆ ಮರುಕಳಿಸುತ್ತದೆ.

Glioblastoma
HMP ವೈರಸ್: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)

ಗ್ಲಿಯೊಬ್ಲಾಸ್ಟೊಮಾ ತಡೆಗಟ್ಟುವ ವಿಧಾನಗಳು

ಗ್ಲಿಯೊಬ್ಲಾಸ್ಟೊಮಾವನ್ನು ತಡೆಗಟ್ಟಲು ಯಾವುದೇ ಸಾಬೀತಾದ ಕ್ರಮಗಳಿಲ್ಲ. ಆದರೂ ಮೆದುಳಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು; ಸಮತೋಲಿತ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ ಬಹಳ ಮುಖ್ಯ; ತಂಬಾಕಿನAತಹ ಕ್ಯಾನ್ಸರ್ ಜನಕ ವಸ್ತುಗಳನ್ನು ಸೇವಿಸುವುದನ್ನು ಬಿಡಬೇಕು; ಯಾವಾಗಲೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು; ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಮತ್ತು ಕುಟುಂಬದಲ್ಲಿ ಮೆದುಳಿನ ಗೆಡ್ಡೆಗಳ ಇತಿಹಾಸ ಹೊಂದಿರುವ ವ್ಯಕ್ತಿಗಳಿಗೆ ನಿಯಮಿತ ತಪಾಸಣೆ ಮಾಡಿಸಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com