Maha Kumbh 2025: ಕುಂಭಮೇಳ ಬಗ್ಗೆ "ಬುದ್ಧಿಜೀವಿ" ವಿಶ್ಲೇಷಣೆಗಳಿಗೆ ಪ್ರತಿಕ್ರಿಯೆ ಬೇಕಿಲ್ಲ, ಆದರೆ… (ತೆರೆದ ಕಿಟಕಿ)

ನಗ್ನವಾಗಿರುವವರೋ ಅಥವಾ ಚಿತ್ರ-ವಿಚಿತ್ರ ವೇಷಗಳಲ್ಲಿರುವವರೋ ಆ ಎಲ್ಲ ಸಾಧು ಸಮೂಹ ಹನ್ನೆರಡು ವರ್ಷಗಳಿಗೊಮ್ಮೆ ಹೀಗೆ ಕಲೆಯುತ್ತದೆ. ನಂತರ ದಶಕಗಳ ಕಾಲ ಅವರೇನೂ ನಾಗರಿಕ ಸಮಾಜದ ನಡುವೆ ವಿಜೃಂಭಿಸಿಕೊಂಡಿರುವುದಿಲ್ಲ.
File pic
ಸಾಂಕೇತಿಕ ಚಿತ್ರonline desk
Updated on

ಕುಂಭಮೇಳ, ಮಹಾಕುಂಭ ಈಗ ಪ್ರಚಲಿತ ಪದಗಳು. ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ ‘ಕೀ ವರ್ಡ್ ಸರ್ಚ್’ ಯೋಗ್ಯತೆಯನ್ನು ಹೊಂದಿದಂಥವು. ಹೀಗಾಗಿ ಈ Keyword ಸುತ್ತಮತ್ತ ಕಂಟೆಂಟ್ ಸೃಷ್ಟಿಸುವಲ್ಲಿ ಫಾಯಿದೆ ಇದೆ. ಅಂತರ್ಜಾಲ, ಸಾಮಾಜಿಕ ಮಾಧ್ಯಮ ಸೇರಿದಂತೆ ಸುಲಭಕ್ಕೆ ಕಣ್ಣಿಗೆ ಬೀಳುವ ಮಾರ್ಗವೆಂದರೆ ಈ ಶಬ್ದಗಳ ಸುತ್ತ ಸುತ್ತುವ ವಿಷಯಸೃಷ್ಟಿ.

ಅದಕ್ಕೇ ಇರಬಹುದೇನೋ... ಮಹಾಕುಂಭದ ಸುತ್ತ ಎರಡು ತೀವ್ರನೆಲೆಯ ಚರ್ಚೆಗಳು ನಮ್ಮೆಲ್ಲರನ್ನು ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮಗಳಲ್ಲಿ ಬಹುವಾಗಿ ಎಡತಾಗುತ್ತಿವೆ. “ಕುಂಭಮೇಳದಂಥ ಕೂಡುವಿಕೆಯೊಂದು ಇಡೀ ಪ್ರಪಂಚದಲ್ಲಿ ಮತ್ತೆಲ್ಲೂ ಕಾಣಲಿಕ್ಕೆ ಸಿಗುವುದಿಲ್ಲ. ಇಂಥ ವಿದ್ಯಮಾನದಲ್ಲಿ ಭಾಗಿಯಾಗುವವರೇ ಪುಣ್ಯವಂತರು” ಎಂಬ ನೆಲೆಯ ವಾದವು ನಿಧಾನಕ್ಕೆ ತನ್ನ ಭಾವತೀವ್ರತೆ ಹೆಚ್ಚಿಸಿಕೊಂಡು ಈ ಅಘೋರಿಗಳು-ಸಾಧುಗಳು ಇರುವುದರಿಂದಲೇ ಭಾರತಕ್ಕೊಂದು ರಕ್ಷೆಯಿದೆ, ಇವರು ತಮ್ಮ ಸಿದ್ಧಿ ಹಾಗೂ ಅಗತ್ಯಬಿದ್ದರೆ ದೈಹಿಕ ಬಲವನ್ನುಪಯೋಗಿಸಿ ಧರ್ಮಕ್ಕಾಗಿ ಏನೂ ಮಾಡಬಲ್ಲರು ಎಂಬೆಲ್ಲದರವರೆಗೆ ಮಾತುಗಳು ಹರಡಿಕೊಳ್ಳುತ್ತವೆ.

ಇದಕ್ಕೆ ಘಾತ ಕೊಡುವುದಕ್ಕೆಂದೇ ಇನ್ನೊಂದು ನೆಲೆಯ ವಾದವಿದೆ. “ಇದ್ಯಾವ ಸಂಸ್ಕೃತೀನ್ರೀ? ವಸ್ತ್ರಹೀನರಾಗಿ, ಬೂದಿ ಬಡಿದುಕೊಂಡು, ತಲೆಬುರುಡೆ ಮೂಳೆ ಇಟ್ಟುಕೊಂಡು ಕುಣಿದುಕೊಂಡಿರುವವರನ್ನು ವೈಭವೀಕರಿಸಬೇಕೆ? ಇದು ಮೂಢನಂಬಿಕೆಗಳ ಮೆರವಣಿಗೆ ಅಲ್ಲದೇ ಇನ್ನೇನು? ಅದ್ಯಾವ ವೈದಿಕ ಶಾಸ್ತ್ರದಲ್ಲಿ ಇದನ್ನೆಲ್ಲ ಉತ್ತಮ ಅಂತ ಹೇಳಲಾಗಿದೆ ತೋರಿಸಿ...” ಅಂತೆಲ್ಲ ಬುದ್ಧಿಜೀವಿ ನೆಲೆಯಲ್ಲಿರುವವರ ವಾದ.

“ಹಿಂದು ಧರ್ಮಕ್ಕೆ ಸೇರಿದ ಎಲ್ಲ ಆಚರಣೆಗಳಿಗೂ ಕೊಂಕು ತೆಗೆಯುವುದಕ್ಕೆ ಯಾವತ್ತೂ ಸಿದ್ಧವಾಗಿರ್ತೀರಾ...ಇಂಥದ್ದನ್ನು ಬೇರೆಯವರಿಗೆ ಹೇಳಿದ್ದೀರಾ” ಅಂತ ಇತ್ತಲಿನಿಂದ ಶುರುವಾಗುವ ವಾದಕ್ಕೆ ಅತ್ತಲಿನವರು ವೈಜ್ಞಾನಿಕತೆ, ತಾರ್ಕಿಕತೆ, ನಾಗರಿಕ ನಡವಳಿಕೆ ಅಂತೆಲ್ಲ ಕೆಲವು ಆಧುನಿಕ ಪದಗುಚ್ಛಗಳನ್ನು ಹಿಡಿದು ವಾಗ್ಯುದ್ಧ ಮುಂದುವರಿಸುತ್ತಾರೆ.

ಈ ಮಾದರಿಯನ್ನು ಹೆಚ್ಚಿನವರು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ನೋಡಿರುತ್ತೀರಿ. ಅಷ್ಟೇ ಅಲ್ಲ, ಇದರ ಪರ-ವಿರೋಧ ತೀವ್ರತೆ ಇದರಲ್ಲಿ ನಮ್ಮನ್ನೂ ಭಾಗಿಯಾಗುವಂತೆ ಮಾಡಿರುತ್ತದೆ. ಈ ಒಟ್ಟಾರೆ ಚರ್ಚೆಯಲ್ಲಿ ತೀರ “ವೈಜ್ಞಾನಿಕರು”, “ಪ್ರಗತಿಪರರು” ಎಂದು ಗುರುತಿಸಿಕೊಳ್ಳುವವರೊಂದಿಗೆ ಹೆಚ್ಚಿನ ಚರ್ಚೆಗೆ ಆಸ್ಪದವಿಲ್ಲ. ಏಕೆಂದರೆ, ಯಾವುದೇ ರೂಢಿ, ಪದ್ಧತಿ, ಸಂಪ್ರದಾಯಗಳನ್ನು ಗೇಲಿ ಮಾಡುವುದಕ್ಕೆ, ಆ ಮೂಲಕ ಪ್ರಸಿದ್ಧರಾಗುವುದಕ್ಕೆ ಹೆಚ್ಚಿನ ಶ್ರಮವನ್ನೇನೂ ಹಾಕಬೇಕಿಲ್ಲ. ಆಕ್ರೋಶಿತ ಪ್ರತಿಘಾತಗಳನ್ನು ತಮಗೆ ಸಿಗುತ್ತಿರುವ ಮಹತ್ತ್ವ ಎಂಬುದಾಗಿ ಅರ್ಥಮಾಡಿಕೊಂಡು ಮತ್ತಷ್ಟು ಕುಹಕಗಳ ಮಾತಿನ ಇಲ್ಲವೇ ಅಕ್ಷರದ ಬಾಣಗಳನ್ನು ಎಸೆಯುವ ಮನಸ್ಥಿತಿ ಇದ್ದರೆ ಅಷ್ಟೇ ಸಾಕು.

ಪ್ರಶ್ನೆಗಳುಂಟು ಶ್ರದ್ಧಾಳುಗಳೆನ್ನುವವರಿಗೆ!

ನಂಬಿಕೆ, ಪರಂಪರೆ, ಪದ್ಧತಿ ಇತ್ಯಾದಿಗಳಿಗೆ ಒಳಪಡುತ್ತೇನೆ ಎಂದು ಗುರುತಿಸಿಕೊಳ್ಳುವವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆದರೆ, ಈ ಕುಂಭಮೇಳ ಇತ್ಯಾದಿ ಸಂಗತಿಗಳು ಹೇಗೆ ಬುದ್ಧಿಜೀವಿ ಇತ್ಯಾದಿ ಹಣೆಪಟ್ಟಿಗಳಲ್ಲಿ ಗುರುತಿಸಿಕೊಂಡಿರುವ ಒಂದು ವರ್ಗಕ್ಕೆ ಭಿನ್ನ ಅಭಿಪ್ರಾಯ ಕೊಟ್ಟು ತಮ್ಮ ಪ್ರಚಾರ ಪಡೆದುಕೊಳ್ಳುವುದಕ್ಕೆ ಇರುವ ಅವಕಾಶ ಎಂದಾಗುತ್ತಿವೆಯೋ ಅದೇ ರೀತಿಯಲ್ಲಿ ಶ್ರದ್ಧಾಳುಗಳ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಿರುವ ನಮ್ಮಲ್ಲಿ ಅನೇಕರಿಗೆ ಸಹ ಪ್ರಚಾರ ಬಿಂದುವಾಗಿ ಮಾತ್ರವೇ ಉಪಯೋಗವಾಗುತ್ತಿದೆ ಎಂದೆನಿಸುತ್ತದೆ.

ನಗ್ನವಾಗಿರುವವರೋ ಅಥವಾ ಚಿತ್ರ-ವಿಚಿತ್ರ ವೇಷಗಳಲ್ಲಿರುವವರೋ ಆ ಎಲ್ಲ ಸಾಧು ಸಮೂಹ ಹನ್ನೆರಡು ವರ್ಷಗಳಿಗೊಮ್ಮೆ ಹೀಗೆ ಕಲೆಯುತ್ತದೆ. ನಂತರ ದಶಕಗಳ ಕಾಲ ಅವರೇನೂ ನಾಗರಿಕ ಸಮಾಜದ ನಡುವೆ ವಿಜೃಂಭಿಸಿಕೊಂಡಿರುವುದಿಲ್ಲ. ಹೀಗಿರುವಾಗ ನಮಗೂ ಸಹ ಅವರೇ ಚರ್ಚಾವಸ್ತುವೇನೂ ಆಗಬೇಕಿಲ್ಲ. ಅವರ ಆಧ್ಯಾತ್ಮಿಕ ಪಥದ ಬಗ್ಗೆ ಆಸಕ್ತಿ ಇದ್ದುಕೊಳ್ಳಲಿ. ಆದರೆ, ಶ್ರದ್ಧಾಳುವಿನ ನೆಲೆಯಲ್ಲಿ ಸಹ ಅವರ ಭಿನ್ನ ವೇಷಭೂಷಣಗಳು, ವಸ್ತ್ರಹೀನತೆ, ಅವರ ಮಾತು-ಕುಣಿತ-ಸಿಟ್ಟು ಇಂಥವೇ ಆಕರ್ಷಣೆಯ ಜಾತ್ರೆ ಎಂದು ಕಳೆದುಹೋಗಬಾರದಷ್ಟೇ. ವಿಶಾಲ ಸನಾತನ ಪ್ರವಾಹದಲ್ಲಿ ಈ ಸಾಧು ಸಮೂಹವೂ ಒಂದು ದೊಡ್ಡ ತೊರೆಯೇ ಹೊರತೂ, ಅದುವೇ ಹಿಂದುಧರ್ಮ ಎಂಬಷ್ಟರಮಟ್ಟಿಗೆ ನಾವೂ ಭಾವಾತಿರೇಕಕ್ಕೆ ತುತ್ತಾಗಬೇಕಿಲ್ಲ.

File pic
ಯಶಸ್ವಿಯಾಗೋಕೆ ಎಷ್ಟು ತಾಸು ಕೆಲಸ ಮಾಡಬೇಕು? ಎಲ್ಲರಿಗೂ ಒಂದೇ ಲಾಜಿಕ್ work ಆಗುತ್ತಾ? (ತೆರೆದ ಕಿಟಕಿ)

ಯಾರೋ ಐಐಟಿ ಪದವೀಧರ ಈಗ ಬಾಬಾ ಆಗಿ ಎಷ್ಟು ಚೆಂದ ಮಾತಾಡ್ತಿದ್ದಾರೆ ನೋಡಿ, ಸ್ಮಶಾನಸಾಧನೆ ಮಾಡುವ ಈ ಸಾಧುಗಳ ಗುಂಪಿನ ಶಸ್ತ್ರನೈಪುಣ್ಯತೆ ಹೇಗಿದೆ ನೋಡಿ...ಇಂಥವೆಲ್ಲದರಿಂದಲೇ ಹಿಂದುಧರ್ಮ ಉಳಿದಿದೆ...ಔರಂಗಜೇಬನ ವಿರುದ್ಧ ಇಂಥವರೇ ಹೋರಾಡಿದ್ದಂತೆ... ಈ ಎಲ್ಲ ನೆಲೆಗಳಲ್ಲಿ ಶ್ರದ್ಧಾಳುಗಳೆನಿಸಿಕೊಂಡವರು ರೀಲ್ಸ್-ವಾಟ್ಸಾಪುಗಳಲ್ಲಿ ಭಕ್ತಿಯಲ್ಲಿ ಮಿಂದೇಳುತ್ತಿದ್ದಾರೆ. ಈ ಅಭಿಮಾನ ಸಾರಾಸಗಟು ತಪ್ಪಲ್ಲ. ಆದರೆ, ಒಟ್ಟಾರೆ ಹಿಂದು ಸಮಾಜಕ್ಕೆ ಇಲ್ಲೊಂದು ಅಪಾಯವೂ ಕಾಣುತ್ತಿದೆ. ಅದೆಂದರೆ, ನಾವು ಹೀಗೆಲ್ಲ ಸಂಭ್ರಮಿಸುವುದನ್ನು, ಚರ್ಚೆಯ ಭಾಗವಾಗುವುದನ್ನು, ಬುದ್ಧಿಜೀವಿಗಳ ಕೊಂಕಿನೆದುರು ನಾಗಾ ಸಾಧುಗಳನ್ನು ಸಮರ್ಥಿಸಿಕೊಳ್ಳುವುದನ್ನು ಮಾತ್ರವೇ ಹಿಂದುತ್ವದ ಅಭಿವ್ಯಕ್ತಿ ಎಂದುಕೊಂಡು, ನಮ್ಮ ನಿತ್ಯಾನುಷ್ಠಾನಗಳನ್ನು ತೊರೆಯುತ್ತಿದ್ದೇವೆಯೇ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ಇದನ್ನೇ ಬೇರೆ ಮಾತಿನಲ್ಲಿ ಹೇಳುವುದಾದರೆ, ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಕುಂಭದಲ್ಲಿ ಯಾವುದೇ ಆಹ್ವಾನವಿಲ್ಲದೇ ಕೋಟ್ಯಂತರ ಹಿಂದುಗಳು-ಸಾಧುಗಳು ಸೇರುತ್ತಾರೆ ಎಂಬುದು ಸನಾತನ ಪರಂಪರೆಯ ಅತಿದೊಡ್ಡ ಬಲವೇ ಹೌದಾದರೂ, ಅದೊಂದಾಗುತ್ತಿದೆ ಎಂದ ಮಾತ್ರಕ್ಕೆ ದಿನನಿತ್ಯ ಹಾಗೂ ವರ್ಷಂಪ್ರತಿ ತಾನೇನೂ ಮಾಡಬೇಕಿಲ್ಲವೆಂಬ ಭಾವಕ್ಕೆ ಹಿಂದು ತುತ್ತಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ.

ಕುಂಭಮೇಳ ಉದಾಹರಣೆ ಮಾತ್ರ. ನಾಳೆ ಅಂತರ್ಯುದ್ಧವಾದರೆ ನಾಗಾ ಸಾಧುಗಳೆಲ್ಲ ಕತ್ತಿ ಹಿಡಿದುಬಂದು ಹಿಂದುಗಳನ್ನು ರಕ್ಷಿಸಿಬಿಡುತ್ತಾರೆ ಎಂಬ ರಮ್ಯಕಲ್ಪನೆ ಹೇಗೆ ಹೆಚ್ಚಿನವರನ್ನು ಆವರಿಸಿಕೊಳ್ಳುತ್ತಿದೆಯೋ, ಅಂತೆಯೇ ಯಾವುದೋ ಸಮಾವೇಶವನ್ನು, ಮತ್ಯಾವುದೋ ಧಾರ್ಮಿಕ ಉತ್ಸವವನ್ನು ದೊಡ್ಡದಾಗಿ ಆಚರಿಸಿಬಿಡುವುದು ನಮ್ಮ ದಿನನಿತ್ಯದ ಆಚರಣೆ-ಪದ್ಧತಿಗಳನ್ನು ಆಚರಿಸಲಾಗದ್ದರ ಪ್ರಾಯಶ್ಚಿತ್ತ ಎಂಬ ಭಾವನೆ ಬೆಳೆಯುತ್ತಿರುವಂತಿದೆ.

ಈ ಭಾವನೆಯೇಕೆ ಅಪಾಯಕಾರಿ ಗೊತ್ತೇ?

ನನಗೆ ವರ್ಷಪೂರ್ತಿ ಪೂಜಾ ಪದ್ಧತಿಯೊಂದನ್ನು ಅನುಸರಿಸುವುದು ಸಾಧ್ಯವಿಲ್ಲ. ಆದರೆ, ಒಮ್ಮೆ ಯಾವುದೋ ತೀರ್ಥಕ್ಷೇತ್ರಕ್ಕೆ ಹೋಗಿ ಮುಳುಗೆದ್ದು ಬಂದಿದ್ದೇನಾದ್ದರಿಂದ ಅಡ್ಡಿಯಿಲ್ಲ.... ನಿತ್ಯ ನನಗೆ ಧ್ಯಾನವನ್ನೋ ಉಪಾಸನಾ ಪದ್ಧತಿಯನ್ನೋ ಇಟ್ಟುಕೊಳ್ಳುವುದಕ್ಕೆ ಪುರಸೊತ್ತಿಲ್ಲ, ಆದರೇನಂತೆ ಊರಿನ ದೇವಸ್ಥಾನಕ್ಕೆ ಭರ್ಜರಿ ದೇಣಿಗೆ ಕೊಟ್ಟಿದ್ದೇನೆ...ನಮ್ಮ ಕುಲದೇವರು ಸರಿಯಾಗಿ ಗೊತ್ತಿಲ್ಲ, ಆದರೆ ಕುಂಭಮೇಳಕ್ಕೆ ಹೋಗಿ ಬಂದಿದ್ದೇನಾದ್ದರಿಂದ ಪುಣ್ಯದ ಫಲ ದೊಡ್ಡದು....ಇಂಥ ಯೋಚನೆಗಳಿಗೆ ಶ್ರದ್ಧಾಳುಗಳೆನಿಸಿಕೊಂಡವರು ಹೆಚ್ಚು ಹೆಚ್ಚು ವಶವಾಗುತ್ತಿದ್ದೇವಾ ಎಂಬುದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. 

ಬೇರೆ ಮತಗಳಿಗೆ ಹೋಲಿಸಿದಾಗ ಸನಾತನಕ್ಕಿರುವ ವಿಭಿನ್ನ ನೆಲೆಗಳಲ್ಲೊಂದು ಜ್ಞಾನಾನೂಭೂತಿ. ಅಂದರೆ ಪರಂಪರೆಯಲ್ಲಿ ದೊಡ್ಡವರೆನಿಸಿಕೊಂಡಿರುವ ಗುರುಗಳು, ಮಹರ್ಷಿಗಳು ದೇವರನ್ನು ತಲುಪುವ ಮಾರ್ಗದ ಬಗ್ಗೆ ಏನೆಲ್ಲ ಭಿನ್ನ ಭಿನ್ನ ಹಾದಿಗಳನ್ನು ಹೊಳೆಯಿಸಿದ್ದಿರಬಹುದು. ಆದರೆ ಅದರ ಬಗ್ಗೆ ಮಾಹಿತಿ ಇದ್ದ ಮಾತ್ರಕ್ಕೆ ಶ್ರದ್ಧಾಳುವಾಗುವುದು ಸಾಧ್ಯವಿಲ್ಲ. ಬೇರೆ ಮತಗಳಲ್ಲಿ ಪ್ರವಾದಿಯಾಗಿ ಬಂದವರು ಹೀಗೆ ಮಾಡು-ಹೀಗೆ ಮಾಡಬೇಡ ಅಂತ ಹೇಳಿದ್ದನ್ನು ಅನುಸರಿಸಬೇಕಷ್ಟೆ.

ಆದರೆ ಸನಾತನ ಧರ್ಮದಲ್ಲಿ ಈ ಹಿಂದೆ ಪರಂಪರೆಯಲ್ಲಿ ಬಂದವರಿಗೆ ದೇವರು ದಕ್ಕಿದ್ದಾಗಿದೆ ಎಂದು ಸುಮ್ಮನಾಗುವಂತಿಲ್ಲ. ಅವರು ಹೇಳಿರುವ ತತ್ತ್ವವನ್ನು ಶ್ರದ್ಧಾಳುವಾದವನು ಸಹ ತನ್ನ ನೆಲೆಯಲ್ಲಿ ಸಾಕ್ಷಾತ್ಕರಿಸಿಕೊಳ್ಳಬೇಕು, ಅನುಭೂತಿಗೆ ಒಳಗಾಗಬೇಕು. ಹೀಗಾಗಿ ಈ ದಾರಿಗೆ ಸೂಕ್ತವಾದ ಉಪಾಸನಾ ಪದ್ಧತಿಯೊಂದನ್ನು ಶ್ರದ್ಧಾಳು ಆರಿಸಿಕೊಳ್ಳಬೇಕಾಗುತ್ತದೆ. 

ಆದರೆ ಶ್ರದ್ಧಾಳುಗಳಲ್ಲಿ ‘ಬುದ್ಧಿಜೀವಿತನ’ವೊಂದಿದೆ. “ಕನಸಿನಲ್ಲಿ ನಮಗೆ ಸುಖ-ದುಃಖ, ನೋವು-ನಲಿವು ಎಲ್ಲ ಅನುಭವಕ್ಕೆ ಬರುತ್ತವೆ. ಹಾಗಂತ ಕಣ್ಣು ಬಿಟ್ಟಾಗ ಅವೆಲ್ಲ ಇಲ್ಲವಾಗುತ್ತವೆ. ಈ ಜಾಗೃತಾವಸ್ಥೆಯೂ ಅಷ್ಟೆ. ವಾಸ್ತವದಲ್ಲಿ ಇವನ್ನೆಲ್ಲ ಗಮನಿಸುತ್ತಿರುವ ಸಾಕ್ಷಿಭಾವವೇ ನಾನು, ಅದೇ ಪರಮಸತ್ಯ” ಎಂಬ ಧಾಟಿಯಲ್ಲಿ ಬಹಳ ಗಹನವಾಗಿ ಮಾತನಾಡುತ್ತಾರೆ. ಆದರೆ ಅದನ್ನು ಅನುಭವಕ್ಕೆ ತಂದುಕೊಳ್ಳುವ ನಿಟ್ಟಿನಲ್ಲಿ ಶ್ರಮ ವಹಿಸುವುದು ಬೇಕಿಲ್ಲ. ಪರಬ್ರಹ್ಮ ವಸ್ತುವು ನಿರ್ಗುಣ, ನಿರಾಕಾರವಾಗಿರುವಾಗ ಅದಕ್ಕೆ ರೂಪ ನೀಡುವುದೇನನ್ನು, ಪೂಜೆ ಏನಕ್ಕೆ ಎಂದೆಲ್ಲ ವಾದಿಸುವವರೂ ನಂಬಿಕೆಯ ಚೌಕಟ್ಟಿನಲ್ಲೇ ಸಿಗುತ್ತಾರೆ. ಒಟ್ಟಿನಲ್ಲಿ ತಮ್ಮ ದೈವದ ಪರಿಕಲ್ಪನೆ ರಿಚುವಲ್, ಪೂಜಾ ಪದ್ಧತಿಗಳನ್ನು ಮೀರಿದ್ದು ಎಂಬಂತಿರುವವರು. ತಮಾಷೆ ಏನೆಂದರೆ, ಶಂಕರಾಚಾರ್ಯರಂಥವರ ಮಾರ್ಗವೇ ಹೀಗಿರಲಿಲ್ಲ. ವೇದಾಂತ ಸಾರುವವರು ಕಾಳಿ, ಲಕ್ಷ್ಮೀನೃಸಿಂಹ ಹೀಗೆಲ್ಲ ಉಪಾಸನೆಗೆ ಬೇಕಾದ ಶ್ಲೋಕಗಳನ್ನು ಬರೆದರು. ಅವರ ತತ್ತ್ವವನ್ನು ಪ್ರಚುರಪಡಿಸುವ ಪೀಠಗಳ ಪೀಠಾಧಿಪತಿಗಳು ಸಹ ನಿತ್ಯೋಪಾಸನೆ ತಪ್ಪಿಸುವವರಲ್ಲ.

File pic
H1B Visa: ಅಮೆರಿಕ ಬಾಗಿಲು ಮುಚ್ಚುತ್ತಿದೆಯೋ ಅಥವಾ ಇನ್ನಷ್ಟು ದೊಡ್ಡದಾಗಿ ತೆರೆಯಹೊರಟಿದೆಯೋ? (ತೆರೆದ ಕಿಟಕಿ)

ಆದರೆ ಆಸ್ತಿಕರು ಎಂದು ತಮ್ಮನ್ನು ತಾವು ಅಂದುಕೊಳ್ಳುತ್ತಿರುವವರು ಹೀಗೊಂದು ಬುದ್ಧಿಜೀವಿತನ, ಇಲ್ಲವೇ ಇನ್ನೊಂದು ಬಗೆಯ ಸೋಮಾರಿತನದಿಂದ ಸಂತ್ರಸ್ತರಾಗುತ್ತಿದ್ದಾರೆ. ನಾವು ಕುಂಭಮೇಳದ ಹಿಂದಿರುವ ಪುರಾಣವನ್ನೂ ಸಂಭ್ರಮಿಸೋಣ, ಸಾಧ್ಯವಾದರೆ ಅಲ್ಲಿ ವಿಜ್ಞಾನವನ್ನೂ ಹುಡುಕೋಣ, ಅದು ಸೃಷ್ಟಿಸುವ ಎಕಾನಮಿಯನ್ನೂ ಹೊಗಳಿಕೊಳ್ಳೋಣ…ಆದರೆ, ಪ್ರತಿದಿನ ಅರ್ಧತಾಸಾದರೂ ಯಾವುದೇ ಉಪಾಸನಾ ಪದ್ಧತಿಯ ಅಭ್ಯಾಸವಿರಬೇಕು. ಹೀಗೆ ಪ್ರತಿದಿನದ ಅಭ್ಯಾಸಕ್ಕೆ ಸಿಕ್ಕು ಹುರಿಗೊಳ್ಳದಿದ್ದರೆ ಅಲ್ಲಿ ಗಂಗೆಯಲ್ಲಿ ಮುಳುಗು ಹಾಕಿದಾಗ ದೈವವೇ ಪ್ರತ್ಯಕ್ಷವಾದರೂ ಅದನ್ನು ತಡೆದುಕೊಳ್ಳುವ ಶಕ್ತಿ ನಮಗಿರಲಾರದು. ಬಲ್ಬಿನ ಸಾಮರ್ಥ್ಯಕ್ಕೆ ಮೀರಿ ಅದರೊಳಗೆ ವಿದ್ಯುತ್ ಹರಿದಾಗ ಅದು ಬೆಳಗುವ ಮಾತೆಲ್ಲಿಯದು? ಪವಿತ್ರ ಜಲದೊಳಗೆ ಅನೂಹ್ಯ ಶಕ್ತಿಯೇ ಆವಿರ್ಭವಿಸಿದರೂ ತುಂಬಿಕೊಳ್ಳುವ ಪಾತ್ರೆ ಇರದಿದ್ದಾಗ ಅರ್ಥಾತ್ ನಮ್ಮಲ್ಲಿ ಪಾತ್ರತ್ವ ಇರದಿದ್ದಾಗ ಪ್ರಯೋಜನ ದಕ್ಕುವುದಾದರೂ ಎಲ್ಲಿಂದ?

ಮಹಾಕುಂಭದ ಕುರಿತು ಬುದ್ಧಿಜೀವಿಗಳ ನಿರೀಕ್ಷಿತ ವಿಶ್ಲೇಷಣೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯ ಶ್ರದ್ಧಾಳುಗಳಿಗಿಲ್ಲ. ಆದರೆ ಮೇಲಿನ ಪ್ರಶ್ನೆಗಳಿಗೆ ಮಾತ್ರ ಉತ್ತರ ಹುಡುಕಿಕೊಳ್ಳಬೇಕು.

- ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com