
ವಾರಕ್ಕೆ ಎಷ್ಟು ತಾಸುಗಳ ಕೆಲಸ ಒಳ್ಳೆಯದು? ಅರವತ್ತು ತಾಸುಗಳಾ, ಎಪ್ಪತ್ತಾ? ಈ ಚರ್ಚೆಯಿಂದ ತಪ್ಪಿಸಿಕೊಳ್ಳಹೊರಟವರೆಲ್ಲ ಸೋಮಾರಿಗಳಾ? ಈ ಬಗ್ಗೆ ಸಕಾರಾತ್ಮಕ ಧ್ವನಿ ಸೇರಿಸುತ್ತಿರುವವರೆಲ್ಲ ಮಹತ್ತಾದದನ್ನು ಸಾಧಿಸುತ್ತಿರುವವರಾ? ಇದು ಇತ್ತೀಚಿಗಿನ ತೀವ್ರ ಚರ್ಚೆಗಳಲ್ಲೊಂದು. ಭಾರತ ಪ್ರಗತಿಯಾಗಬೇಕೆಂದರೆ ಎಪ್ಪತ್ತು ತಾಸುಗಳ ಕೆಲಸ ಮಾಡಬೇಕು ಎಂದು ನಾರಾಯಣಮೂರ್ತಿಯವರು ಹೇಳಿದ್ದು ಮೊದಲಿಗೆ ಚರ್ಚೆಯಾಯಿತು. ನಂತರ, “ಭಾನುವಾರ ಹೆಂಡತಿಯ ಮುಖವನ್ನು ಗುರಾಯಿಸಿಕೊಂಡಿರುವುದಕ್ಕಿಂತ ಆ ದಿನವೂ ಕಚೇರಿಗೆ ಬಂದು ಕೆಲಸ ಮಾಡುವುದು ಒಳ್ಳೆಯದು” ಎಂಬರ್ಥದಲ್ಲಿ ಎಲ್ ಆ್ಯಂಡ್ ಟಿ ಚೇರ್ಮನ್ ಸುಬ್ರಮಣ್ಯನ್ ಹೇಳಿದ ಮಾತುಗಳು ಹಲವು ತಮಾಷೆ ಚಿತ್ರ (ಮೀಮ್)ಗಳಿಗೆ ದಾರಿ ಮಾಡಿಕೊಟ್ಟಿತು.
ಇಲ್ಲೊಂದು ಸ್ವಾರಸ್ಯ ಗಮನಿಸಬೇಕು. ಎರಡು ಬಗೆಯ ಜನ ಈ ಚರ್ಚೆಯಲ್ಲಿ ವ್ಯಸ್ತರಾಗಿದ್ದಾರೆ. ಮೂರ್ತಿ, ಸುಬ್ರಮಣ್ಯನ್, ಅನುಪಮ್ ಮಿತ್ತಲ್ ಹೀಗೆ ವೃತ್ತಿಯ ಉತ್ತುಂಗ ಬಿಂದುವಿನಲ್ಲಿ ಇರುವವರು ಒಂದು ಕಡೆ. ಈ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಇನ್ನೊಂದು ತುದಿ ಅದು ಈ ಲೇಖನ ಓದುತ್ತಿರಬಹುದಾದ ಹೆಚ್ಚಿನವರು. ಅಂದರೆ ನಗರಗಳಲ್ಲಿ ತಿಂಗಳ ಸಂಬಳದಲ್ಲಿದ್ದುಕೊಂಡು, ಇದುವರೆಗೆ ಹೆಚ್ಚಾದ ಐದು-ಹತ್ತು ಶೇಕಡದ ವಾರ್ಷಿಕ ಸಂಬಳ ಏರಿಕೆಗಳನ್ನು ನೆನಪಿಸಿಕೊಂಡು, ಇನ್ನು ಇಷ್ಟಾಗಿಬಿಟ್ಟರೆ ನಾನೂ ಒಂದು ಬಾಸ್ ಲೆವಲ್ಲಿಗೆ ಹೋಗಿಬಿಡುತ್ತೇನೆಂಬ ಆಸೆಯಲ್ಲಿರುವವರು.
ಉಳಿದಂತೆ, ಬೆಳಗ್ಗೆ ನಾಲ್ಕೂವರೆ-ಐದಕ್ಕೆಲ್ಲ ಸಾಮಾನು ಸರಂಜಾಮುಗಳನ್ನು ಖಾತ್ರಿಪಡಿಸಿಕೊಂಡು ಆ ದಿನದ ವಹಿವಾಟಿಗೆ ಸಿದ್ಧನಾಗುವ ಹೊಟೇಲಿಗನಾಗಲೀ, ಇವತ್ತು ಕೆಲಸಗಾರರು ಬಂದರೆ ದೊಡ್ಡ ಕೆಲಸಕ್ಕೆ ಕೈಹಾಕೋಣ-ಇಲ್ಲದಿದ್ದರೆ ವೈಯಕ್ತಿಕವಾಗಿ ಸಾಧ್ಯವಾಗುವ ಕೆಲಸ ಮಾಡೋಣ ಎಂದು ನಿರ್ಧರಿಸಿಕೊಂಡು ದಿನವನ್ನು ಎದುರುಗೊಳ್ಳುವ ಕೃಷಿಕನಾಗಲೀ, ಇದೊಂದು ಬೋಲ್ಟ್ ವಿನ್ಯಾಸವನ್ನು ಇಷ್ಟೇ ಬದಲಿಸಿದ್ದೇ ಆದರೆ ಅದು ಬಾಹ್ಯಾಕಾಶಕ್ಕೆ ತೆರಳುವ ಪರಿಕರದ ಕಾರ್ಯಕ್ಷಮತೆಯನ್ನು ಹೇಗೆಲ್ಲ ಸುಧಾರಿಸಬಹುದು ಎಂದು ವ್ಯಸ್ತನಾಗಿರುವ ಇಸ್ರೊದ ತಂತ್ರಜ್ಞೆಯಾಗಿರಲಿ…ಇಂಥ ಎಷ್ಟೋ ಕೆಲಸಗಳಲ್ಲಿರುವವರು ಇವತ್ತು ಎಷ್ಟು ತಾಸು ಕೆಲಸ ಮಾಡಿದೆ ಎಂದು ಲೆಕ್ಕಾಚಾರಕ್ಕೂ ಇಳಿಯುವುದಿಲ್ಲ, ಈ ಚರ್ಚೆಗಳೆಲ್ಲ ಅವರನ್ನು ಪರ-ವಿರೋಧಗಳ ನೆಲೆಯಲ್ಲಿ ಆಕರ್ಷಿಸುವುದೂ ಇಲ್ಲ. ಅವರೊಂದು ಬೇರೆಯದೇ ಜೋನ್. ಹೊಟ್ಟೆ-ಬಟ್ಟೆಗಾಗುವ ದುಡಿಮೆ ಖಂಡಿತ ಅಲ್ಲೆಲ್ಲ ಇರುತ್ತದೆಯಾದರೂ, ಇವರ್ಯಾರೂ ತಮ್ಮ ಯಶಸ್ಸನ್ನು ಕೇವಲ ವಾರ್ಷಿಕ ಆದಾಯದ ಮಾನದಂಡದಲ್ಲಷ್ಟೇ ಅಳೆದುಕೊಳ್ಳುವವರಲ್ಲ.
ಹೀಗಾಗಿ, ದಿನಕ್ಕೆ ಎಷ್ಟು ತಾಸುಗಳ ಕೆಲಸ ಮಾಡಬೇಕು ಎಂಬುದು ಹೀಗೆ ಒಂದು ಜೋನ್ ಅಲ್ಲಿ ದಾಖಲಾಗದೇ ಇರುವ ನಮ್ಮಂಥವರ ಸಮಸ್ಯೆ. ಇಂಥ ನಮ್ಮಂಥವರ ಸಂಖ್ಯೆ ದೊಡ್ಡದೇ ಇರುವುದರಿಂದ, “ಎಷ್ಟು ತಾಸುಗಳ ದುಡಿಮೆ ಉತ್ತಮ” ಎಂಬ ವಿಷಯವನ್ನು ಆ ಉಪದೇಶ ಮಾಡುತ್ತಿರುವವರ ನೆಲೆಯಿಂದಲೂ, ಉಪದೇಶ ಸ್ವೀಕರಿಸುತ್ತಿರುವ ನಮ್ಮಲ್ಲಿ ಹೆಚ್ಚಿನವರ ನೆಲೆಯಿಂದಲೂ ಗಮನಿಸೋಣ.
ಇನ್ಫಿ, ಎಲ್ ಆ್ಯಂಡ್ ಟಿ ಮುಖ್ಯಸ್ಥರ ವಿಭಿನ್ನ ನೆಲೆ
ನಾರಾಯಣಮೂರ್ತಿ ಅಥವಾ ಅವರಂಥ ಹಲವು ಸಾಧಕರು ಸುಮ್ಮನೇ ಮಾತಾಡುವವರು ಎಂದೇನಲ್ಲ. ಅವರ ಸಾಧನೆ-ಸಮರ್ಪಣೆಗಳು ದೊಡ್ಡದಿವೆ, ಭಾರತದಲ್ಲಿ ಮಧ್ಯಮವರ್ಗದ ವ್ಯಾಪ್ತಿ ವಿಸ್ತರಿಸುವಲ್ಲಿ ಇಂಥವರ ಕೊಡುಗೆ ಇದೆ. ಹಾಗಂತ ನಾರಾಯಣಮೂರ್ತಿಯವರು ವಾರಕ್ಕೆ 70 ತಾಸು ದುಡಿಯಲು ಹೇಳಿರುವುದು ಅವರದ್ದೇ ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡಲು ಬಂದಿರುವವರ ಬದುಕಿಗೆ ಅನ್ವಯವಾಗಬೇಕಿಲ್ಲ, ಹೆಚ್ಚಿನ ಸಂದರ್ಭಗಳಲ್ಲಿ ಆಗುವುದೂ ಇಲ್ಲ. ಎಪ್ಪತ್ತು ತಾಸು ಕೆಲಸ ಮಾಡಿದರೆ ಆ ಸಂಸ್ಥೆಯ ಸಿಇಒಗೆ ಸಿಗುವ ಸಂಬಳ-ಭತ್ಯೆ-ಸ್ಥಾನಮಾನಗಳು, ಅದೇ ಕಚೇರಿಯಲ್ಲಿ ಲೆಕ್ಕಿಗನಾಗಿ ಕೆಲಸ ಮಾಡುವವ ಅಷ್ಟೇ ತಾಸು ಕೆಲಸ ಮಾಡಿದರೂ ಒಲಿಯುವಂಥದ್ದೇನಲ್ಲ. ಈ ಹಣಕಾಸಿನ ದೃಷ್ಟಿಯನ್ನು ಬದಿಗಿರಿಸಿ ನೋಡಿದರೂ ‘ಉದ್ದೇಶ ಪ್ರಾಪ್ತಿ’ಯ ನೆಲೆಯಿಂದಲೂ ಮುಖ್ಯಸ್ಥನಿಗೆ ಸಿಗುವ ತೃಪ್ತಿ ಸಾಮಾನ್ಯ ನೌಕರನದ್ದಾಗಿರುವುದಿಲ್ಲ. ಉದಾಹರಣೆಗೆ, ಜಾಗತಿಕ ಹಂತದಲ್ಲಿ ಐಟಿ ಕಂಪನಿಯೊಂದನ್ನು ಕಟ್ಟಿ ನಿಲ್ಲಿಸುವುದೆಂದರೆ ಅದರರ್ಥ ಭಾರತದ ಸೇವಾ ರಫ್ತಿನಲ್ಲಿ ಭಾಗಿಯಾಗಿ, ಭಾರತಕ್ಕೆ ಡಾಲರುಗಳ ಸಂಚಯವು ಹರಿದುಬರುವುದಕ್ಕೆ ಕಾರಣವಾದೆನೆಂಬ ತೃಪ್ತಿ. ಈ ‘ದರ್ಶನ’ದಲ್ಲಿ ಕಂಪನಿಯ ಸ್ಥಾಪಕ ಹಾಗೂ ಆತನ ಅತಿ ಹತ್ತಿರದ ಕಾರ್ಯಕಾರಿ ತಂಡ ಭಾಗಿಯಾಗಿರುತ್ತದೆಯೇ ಹೊರತು ಎಲ್ಲರೂ ಅಲ್ಲ. ಹೀಗಾಗಿ, ಸಾಮಾನ್ಯ ನೌಕರನಾದವನಿಗೆ ವಾರಕ್ಕೆ ಎಪ್ಪತ್ತು ತಾಸು ಕೆಲಸ ಮಾಡುವುದರಿಂದ ನನಗೇನು ದಕ್ಕುತ್ತದೆ ಎಂಬ ವ್ಯಾವಹಾರಿಕ ಪ್ರಶ್ನೆ ಬಂದರೆ ಅದನ್ನು ಕೇವಲವಾಗಿ ಕಾಣಬೇಕಿಲ್ಲ. ದೇಶದ ಆರ್ಥಿಕ ಪ್ರಗತಿಯಲ್ಲಿ ನಿನ್ನದೊಂದು ಅಳಿಲು ಸೇವೆ ಎಂದುಕೊ ಎಂದೆಲ್ಲ ಉಪದೇಶ ಹೇಳುವುದಕ್ಕೆ ಸಾಧ್ಯವಾಗದ ಕಂದರವೊಂದು ಮಾರುಕಟ್ಟೆ ವ್ಯವಸ್ಥೆಯಲ್ಲಿದೆ.
ಉದಾಹರಣೆಗೆ, ಎಲ್ ಆ್ಯಂಡ್ ಟಿ ಚೇರ್ಮನ್ ಎಸ್ ಎನ್ ಸುಬ್ರಮಣ್ಯನ್ ಅವರ ಉದಾಹರಣೆಯನ್ನೇ ಗಮನಿಸೋಣ. ಅವರು ಭಾನುವಾರ ಮನೆಯಲ್ಲಿ ಹೆಂಡತಿ ಮುಖವನ್ನು ದಿಟ್ಟಿಸದೇ ಕಚೇರಿಗೆ ಬಂದು ಕೆಲಸ ಮಾಡಿದ್ದಕ್ಕೆ ಅವರಿಗೆ ಸಿಕ್ಕಿರುವ ‘ಖೋತಾಭರ್ತಿ’ ಯಾವ ಮಟ್ಟದ್ದು? 2024ರ ವಿತ್ತೀಯ ವರ್ಷದಲ್ಲಿ ಸುಬ್ರಮಣ್ಯನ್ ಅವರು ಕಂಪನಿಯಿಂದ ಗಳಿಸಿರುವ ವಾರ್ಷಿಕ ಆದಾಯ 51 ಕೋಟಿ ರುಪಾಯಿಗಳು. ಇದರಲ್ಲಿ 3.6 ಕೋಟಿ ರುಪಾಯಿಗಳ ಮೂಲ ಸಂಬಳ, 1.67 ಕೋಟಿ ರುಪಾಯಿಗಳ ವಿಶೇಷ ಶಹಭಾಸ್ ಗಿರಿಯ ವೇತನ, 35.28 ಕೋಟಿ ರುಪಾಯಿಗಳ ಕಮಿಷನ್ ಇತ್ಯಾದಿಗಳೆಲ್ಲ ಸೇರಿವೆ. ಇದಕ್ಕೆ ಪ್ರತಿಯಾಗಿ ಆ ಕಂಪನಿಯಲ್ಲಿ ಕೆಲಸ ಮಾಡುವ ನೌಕರರ ಸರಾಸರಿ ಸಂಬಳವು ವಾರ್ಷಿಕ 9.77 ಲಕ್ಷ ರುಪಾಯಿಗಳು.
ಎಲ್ ಆ್ಯಂಡ್ ಟಿ ಚೇರ್ಮನ್ ಅಥವಾ ಅಂಥ ಹುದ್ದೆಯಲ್ಲಿ ಇರುವವರು ಯಾರೇ ಆಗಿದ್ದರೂ ಸಾರ್ವಜನಿಕ ಸಾರಿಗೆಯ ದಟ್ಟಣೆಯಲ್ಲಿ ಜಾಗ ಮಾಡಿಕೊಂಡು ಪ್ರಯಾಣಿಸುವುದನ್ನೋ, ಅಥವಾ ಸಂಚಾರದ ಉದ್ವಿಗ್ನತೆ ಹೊದ್ದುಕೊಂಡಿರುವಂಥ ನಗರದ ರಸ್ತೆಗಳಲ್ಲಿ ತಾವೇ ವಾಹನವನ್ನು ಚಲಾಯಿಸಿಕೊಂಡು ಕಚೇರಿಗೆ ಬರುವುದನ್ನೋ ಮಾಡಬೇಕಿಲ್ಲ. ತನ್ನನ್ನು ಕಚೇರಿಗೆ ತಲುಪಿಸುವುದಕ್ಕೆ, ತನ್ನ ಮಕ್ಕಳನ್ನು ಶಾಲೆಗೆ ತಲುಪಿಸುವುದಕ್ಕೆ, ಹೆಂಡತಿಯನ್ನು ಖರೀದಿ ಸಂತೆಗಳಿಗೆ ಕಳುಹಿಸುವುದಕ್ಕೆ ಈ ಎಲ್ಲ ಆಯಾಮಗಳಲ್ಲೂ ವ್ಯವಸ್ಥೆ ಹೊಂದಿರುವವರು ಅವರು. ಆದರೆ ಸಾಮಾನ್ಯ ಉದ್ಯೋಗಿಗೆ ಇವೆಲ್ಲವೂ ‘ಕೆಲಸ’ದೊಂದಿಗೇ ಜೋಡಿಸಿಕೊಂಡಿರುತ್ತವೆ. ವಿದೇಶದ ಬಿಸಿನೆಸ್ ಟ್ರಿಪ್ಪಿಗೆ ಹೋದಾಗ ಜತೆಗೆ ಹೆಂಡತಿಯನ್ನೂ ಕರೆದುಕೊಂಡುಹೋದರೆ ಅಲ್ಲಿಗೆ ಅಂಥವರ ಫ್ಯಾಮಿಲಿ ಟೈಮ್ ಸಂಪನ್ನವಾಗಿಬಿಡುತ್ತದೆ. ಸಾಮಾನ್ಯ ನೌಕರನಿಗೆ ಹಾಗಲ್ಲವಾದ್ದರಿಂದ ಆತ ಅಥವಾ ಆಕೆ ‘ವರ್ಕ್ ಲೈಫ್ ಬ್ಯಾಲೆನ್ಸ್’ ಬಗ್ಗೆ ಮಾತನಾಡುವುದರಲ್ಲಿ ದೋಷವೇನಿಲ್ಲ.
ಹಾಗಾದರೆ ಮಹಾತ್ತ್ವಾಕಾಂಕ್ಷೆಗಳಿಗೇನರ್ಥ?
ನೋಡಿ…ಎಲ್ಲ ಸ್ಥಾಪಕರೂ ಪ್ರಾರಂಭದಲ್ಲೇ ಕೋಟಿ-ಕೋಟಿ ರುಪಾಯಿಗಳನ್ನು ದುಡಿದಿಲ್ಲ. ಇವತ್ತಿಗೂ ನವೋದ್ದಿಮೆಗಳ ಸ್ಥಾಪಕರು ಅಂಥ ರಿಸ್ಕ್ ತೆಗೆದುಕೊಂಡೇ ಕೆಲಸ ಮಾಡುತ್ತಾರೆ. ಈ ಹಂತದಲ್ಲಿ ತಾಸುಗಳ ಲೆಕ್ಕ ಇಡದೇ ದುಡಿಯುವ ಅಪೇಕ್ಷೆಯನ್ನು ಹೊಂದುವುದು ಸಹಜವಲ್ಲವೇ ಎಂಬ ವಾದಗಳು ಬರುತ್ತವೆ.
ಫೈನ್. ಈ ಹಂತದಲ್ಲಿ ಎರಡು ಪ್ರಶ್ನೆಗಳನ್ನಿಡಬೇಕಾಗುತ್ತದೆ. ಒಂದು ವ್ಯಾವಹಾರಿಕ ಹಾಗೂ ಇನ್ನೊಂದು ತಾತ್ತ್ವಿಕ. ಒಂದೊಮ್ಮೆ ನವೋದ್ದಿಮೆ ಯಶಸ್ಸಾದರೆ ನಿಮ್ಮೊಂದಿಗೆ ವಾರದಲ್ಲಿ 70-80 ತಾಸು ದುಡಿದ ಉದ್ಯೋಗಿಗೆ ನೀವು ಕೊಡಲು ಬದ್ಧರಾಗಿರುವ ಪಾಲು ಏನು? ಇದಕ್ಕೆ ಉತ್ತರಿಸುವುದಕ್ಕೆ ಹಿಂದೇಟು ಹಾಕುವ ಸ್ಥಾಪಕನಿಗೆ, ದೇಶದ ಆರ್ಥಿಕತೆಗಾಗಿ ದುಡಿಯಿರಿ ಎಂದೆಲ್ಲ ಉಪದೇಶ ಹೇಳುವ ಅರ್ಹತೆ ಬರುವುದಿಲ್ಲ. ಎರಡನೆಯ ತಾತ್ತ್ವಿಕ ಆಯಾಮ ಎಂದರೆ- ಯಾವ ಉದ್ದೇಶ ಪ್ರಾಪ್ತಿಗಾಗಿ ನೀನು ನಿನ್ನ ನೌಕರನನ್ನು ವಾರಕ್ಕೆ 60-70 ತಾಸು ದುಡಿಯುವುದಕ್ಕೆ ಹೇಳುತ್ತಿದ್ದೀಯಾ? ಈಗಾಗಲೇ ನೂರು ಇಕಾಮರ್ಸ್ ಸಂಸ್ಥೆಗಳು ಥರಹೇವಾರಿ ವಸ್ತುಗಳನ್ನು ಬಿಕರಿಯಾಗಿಸುತ್ತಿವೆ, ಹೀಗಿರುವಾಗ ಇನ್ನೊಂದು ‘ಡಿಫರೆಂಟ್’ ಆಗಿ ತರುತ್ತೇನೆ ಎನ್ನುವುದು ಕನಸೇ? ವಿದೇಶದ ಯಾವುದೋ ಸಂಸ್ಥೆ-ಬ್ಯಾಂಕಿನ ವಹಿವಾಟಿಗೆ ಮಾಹಿತಿ ತಂತ್ರಜ್ಞಾನ ಪೂರೈಸಿಕೊಂಡುವುದಕ್ಕೆ ಹಲವು ಸಂಸ್ಥೆಗಳು ಪೈಪೋಟಿಯಲ್ಲಿವೆ, ಇದೇ ರೀತಿ ನಾನೂ ನನ್ನದೊಂದನ್ನು ತರುತ್ತೇನೆ ಎಂಬು ಕನಸೇ? ಹದಿನೈದಿಪ್ಪತ್ತು ಸುದ್ದಿವಾಹಿನಿಗಳು ಅವವೇ ರಾಜಕಾರಣಿಗಳು, ನಟರು, ಆಟಗಾರರ ಹಿಂದೆ ಒಂದು ಬಿಸಿನೆಸ್ ಮಾಡೆಲ್ ಕಂಡುಕೊಂಡಿರುವಾಗ ನಾನು ‘ಡಿಫರೆಂಟ್’ ಆಗಿ ಇನ್ನೊಂದು ತರುತ್ತೇನೆ, ಬನ್ನಿ ವಾರಕ್ಕೆ ಎಪ್ಪತ್ತು ತಾಸು ಕೆಲಸ ಮಾಡೋಣ ಎನ್ನೋಣವೇ?
ಇಂಥ ಎಲ್ಲವಕ್ಕೂ ಎಲ್ಲರೂ ಸ್ವತಂತ್ರರು, ಮತ್ತಿವುಗಳಲ್ಲಿ ಕೆಲವು ವ್ಯಾವಹಾರಿಕವಾಗಿ ಯಶಸ್ವಿಯೂ ಆಗಬಹುದು. ಆದರೆ ಇವ್ಯಾವವೂ ವ್ಯಕ್ತಿಯೊಬ್ಬನ ವಾರದ 60-70 ತಾಸನ್ನು ಹೀರಿಕೊಂಡಿದ್ದಕ್ಕೆ ಪ್ರತಿಯಾಗಿ ಮಹಾಮೌಲ್ಯವೊಂದನ್ನೇನೂ ಸೃಷ್ಟಿಸುವಂಥವುಗಳಲ್ಲ. ಇಂಥವೆಲ್ಲ ದೇಶದ ಆರ್ಥಿಕ ಪ್ರಗತಿಯ ಒಂದು ಹಂತದಲ್ಲಿ ಮಹಾತ್ತ್ವಾಕಾಂಕ್ಷೆಗಳೇ ಆಗಿದ್ದವು ಮತ್ತು ಆ ಕಾಲಘಟ್ಟದಲ್ಲಿ ಉದ್ಯೋಗಿಯೊಬ್ಬನಿಗೆ ಈ ಉದ್ದೇಶಪೂರ್ತಿಗಾಗಿ ಸಮಯ ನೋಡದೇ ಕೆಲಸ ಮಾಡುವುದರಲ್ಲಿ ಸಂತೃಪ್ತಿ ಇತ್ತು. ಈಗ ಇರಬೇಕಿಲ್ಲ.
ಈಗ ಮಹಾತ್ವಾಕಾಂಕ್ಷೆ ಎಂದರೆ- ಸ್ಕೈರೂಟ್ ಏರೋಸ್ಪೇಸ್, ಧ್ರುವ್ ಸ್ಪೇಸ್ ಥರದ ನವೋದ್ದಿಮೆಗಳ ಮೂಲಕ ಬಾಹ್ಯಾಕಾಶ ವಿಭಾಗದಲ್ಲಿ ಕೆಲಸ ಮಾಡಲು ಇಚ್ಚಿಸುವ ಭಾರತೀಯ ಪ್ರತಿಭೆಗಳಿಗೆ ಅವಕಾಶ ತೆರೆದಿಡುವುದು, ಏಜ್ ಆಫ್ ಎಂಪೈರ್ ಥರದ ವಿಡಿಯೊ ಗೇಮ್ ಅನ್ನು ನಮ್ಮ ಮಹಾಭಾರತದ ಅವತರಣಿಕೆಯಲ್ಲಿ ಸೃಷ್ಟಿಸಿ ಜಗತ್ತಿಗೇ ಹುಚ್ಚುಹಿಡಿಸೋಣ ಬನ್ನಿ ಎಂದು ಕನಸು ಕಾಣುವುದು, ಇಲ್ಲವೇ ಭಾರತೀಯ ವೇದ-ಪುರಾಣ-ಇತಿಹಾಸಗಳ ಬಗ್ಗೆ ಮೂಲ ಆಕರಗಳನ್ನು ಆಧರಿಸಿ ಉತ್ತರಿಸುವ, ಕ್ರಿಯಾತ್ಮಕ ಕತೆಗಳನ್ನು ಕಟ್ಟಿಕೊಡುವ, ದೇಸೀ ಸೊಗಡಿನಲ್ಲಿ ಅವಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸೃಜಿಸುವ ಎಐ ಮಾದರಿಯೊಂದನ್ನು ಅಭಿವೃದ್ಧಿಪಡಿಸೋಣ ಬನ್ನಿ ಎನ್ನುವುದು…. ಹೀಗೆಲ್ಲ ವಿಷನ್ ತೆರೆದಿಟ್ಟಾಗ ಅದು ಮಹಾತ್ವಾಕಾಂಕ್ಷೆ ಆಗುತ್ತದೆ. ಮತ್ತಿದಕ್ಕೆ ಕೆಲಸ ಮಾಡಲು ಬರುವ ಉದ್ಯೋಗಿಗಳು ಎಷ್ಟು ತಾಸು ಕೆಲಸ ಮಾಡಬೇಕು ಎಂಬ ಪ್ರಶ್ನೆಯನ್ನು ಕೇಳುವುದೇ ಇಲ್ಲ. ಏಕೆಂದರೆ ಅಂಥವರನ್ನೇ ಇಂಥ ಕಾರ್ಯಗಳು ಸೆಳೆಯುತ್ತವೆ.
ಇಂಥ ಯಾವ ದೃಷ್ಟಿಗಳೂ ಇರದೇ ತಮ್ಮ ಕಂಪನಿಯ ವ್ಯಾಲ್ಯುವೇಷನ್ ಸಂಖ್ಯೆಯನ್ನು ಮಾತ್ರವೇ ಮುಂದಿಟ್ಟು, ಇಲ್ಲವೇ ಡಾಲರ್ ಅನ್ನುರುಪಾಯಿಯಾಗಿ ಪರಿವರ್ತಿಸಿದಾಗ ಹೆಚ್ಚಾಗುವ ಲಾಭವನ್ನೇ ತೋರಿಸಿಕೊಂಡು ಮಹಾತ್ತ್ವಾಕಾಂಕ್ಷೆ ಹಾಗೂ ದೇಶ ಹಿತದ ಕತೆ ಹೇಳುವವರನ್ನೆಲ್ಲ ವಿಪರೀತವಾಗಿ ಆರಾಧಿಸಬೇಕಿಲ್ಲ.
ಸಾಮಾನ್ಯ ನೌಕರನಾಗಿ ನಾನು ಹೇಗೆ ಯೋಚಿಸಲಿ?
ಪ್ರಾಯೋಗಿಕವಾಗಿ ನೋಡುವುದಾದರೆ, ಒಂದು ಹಂತದವರೆಗೆ ಉದ್ಯೋಗಕ್ಕಾಗಿ ಉದ್ಯೋಗ ಮಾಡಬೇಕಾಗುತ್ತದೆ. ಅಲ್ಲಿ ಒಂದಿಷ್ಟು ದುಡಿಮೆ ಹಾಗೂ ಅದರಿಂದ ಮೂಲಭೂತ ಅವಶ್ಯಗಳು ಸುಧಾರಿಸುತ್ತವೆ. ಒಳ್ಳೆಯದ್ದೋ, ಕೆಟ್ಟದ್ದೋ ಒಟ್ಟಿನಲ್ಲಿ ಒಂದಿಷ್ಟು ಅನುಭವಗಳಾಗುತ್ತವೆ. ಆರ್ಥಿಕವಾಗಿ ಹುಟ್ಟುತ್ತಲೇ ಅದೃಷ್ಟವಂತರಲ್ಲದವರು ಇಷ್ಟು ಮಾಡುವುದು ಅನಿವಾರ್ಯ. ಇಷ್ಟಕ್ಕೂ ಸುಮಾರು 30 ವರ್ಷ ಪ್ರಾಯದವರೆಗೆ ವರ್ಕ್-ಲೈಫ್ ಬ್ಯಾಲೆನ್ಸ್ ಎಂಬುದೆಲ್ಲ ಹೆಚ್ಚಿನವರಿಗೆ ವ್ಯತ್ಯಾಸವಾಗುವುದಿಲ್ಲ.
ನಂತರದಲ್ಲಿ ಎರಡು ಮಾರ್ಗಗಳು ಗೋಚರಿಸುತ್ತವೆ. ಒಂದೋ, ಜೀವನಶೈಲಿ ಸರಳವಾಗಿರಿಸಿಕೊಂಡು ಸಣ್ಣಪಟ್ಟಣಗಳಲ್ಲಿ ಬದುಕು ಕಂಡುಕೊಳ್ಳುವುದು. ಆಗ ಅತಿ ದುಬಾರಿ ರಿಯಲ್ ಎಸ್ಟೇಟ್, ದುಬಾರಿ ಶಾಲೆ, ದುಬಾರಿ ಸಾಮಾಜಿಕ ಪ್ರಸ್ಟೀಜುಗಳೆಲ್ಲ ತಗ್ಗುತ್ತಾವಾದ್ದರಿಂದ ಕಡಿಮೆ ದುಡಿದರೂ ಬದುಕಿನಲ್ಲಿ ಗುಣಮಟ್ಟ ಇಟ್ಟುಕೊಳ್ಳಬಹುದು. ಆಗ ವಾರಕ್ಕೆ 60-70 ತಾಸು ದುಡಿಮೆಯೆಂಬ ಚರ್ಚೆಯಿಂದ ಹೊರಬೀಳಬಹುದು.
ಇನ್ನೊಂದು, ಈ ಮಹಾತ್ತ್ವಾಕಾಂಕ್ಷೆ ವರ್ತುಲದಲ್ಲೇ ಇದ್ದುಕೊಂಡು, ಆ ಉನ್ನತ ಗುರಿಯನ್ನು ಕೇವಲ ಸಂಬಳಕ್ಕಲ್ಲದೇ ಮೇಲೆ ವಿವರಿಸಿದ ಉದ್ದೇಶತೃಪ್ತಿಗೆ ನಂಟು ಹಾಕಿಕೊಳ್ಳುವುದು. ಅಂಥ ಕಂಪನಿಗಳು, ಅಂಥ ಜನರ ನಡುವಿನಲ್ಲೇ ಉದ್ಯೋಗ ಅರಸಿಕೊಳ್ಳುವುದು. ಹಾಗೆ ನಾವು ಮಾಡುತ್ತಿರುವ ಕೆಲಸವು ಸಂಬಳದ ಜತೆ-ಜತೆಯಲ್ಲಿ ವಿಷನ್ ಅಥವಾ ದರ್ಶನದ ಭಾಗವಾಗಿದ್ದಾಗ, ಮತ್ತದರ ಭಾವವನ್ನೂ ನೀವೂ ಹಂಚಿಕೊಳ್ಳುತ್ತಿದ್ದಾಗ, ಭಾನುವಾರ ಕೆಲಸ ಬಂದರೂ, ಕೆಲವು ಸೀಸನ್ನುಗಳಲ್ಲಿ ವಾರಕ್ಕೆ 70 ತಾಸು ಕೆಲಸವಾದರೂ ಅದು ಹೊರೆ ಎನ್ನಿಸುವುದಿಲ್ಲ.
- ಚೈತನ್ಯ ಹೆಗಡೆ
cchegde@gmail.com
Advertisement