ಯೂರಿನರಿ ಬ್ಲಾಡರ್ ಕ್ಯಾನ್ಸರ್: ಕಾರಣ, ಲಕ್ಷಣ, ಚಿಕಿತ್ಸೆಗಳು (ಕುಶಲವೇ ಕ್ಷೇಮವೇ)

ಮೂತ್ರವನ್ನು ಸಂಗ್ರಹಿಸುವ ಹೊಟ್ಟೆಯ ಕೆಳಭಾಗದಲ್ಲಿರುವ ಯೂರಿನರಿ ಬ್ಲಾಡರ್ ಒಂದು ಟೊಳ್ಳಾದ ಅಂಗವಾಗಿದೆ.
Urinary Bladder Cancer
ಯೂರಿನರಿ ಬ್ಲಾಡರ್ ಕ್ಯಾನ್ಸರ್online desk
Updated on

ಇತ್ತೀಚೆಗೆ ಖ್ಯಾತ ನಟ ಶಿವರಾಜಕುಮಾರ್ ಅಮೆರಿಕದಲ್ಲಿ ಯೂರಿನರಿ ಬ್ಲಾಡರ್ (ಮೂತ್ರಚೀಲ) ಕ್ಯಾನ್ಸರಿಗೆ ಯಶಸ್ವಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ಯೂರಿನರಿ ಬ್ಲಾಡರ್ ಕ್ಯಾನ್ಸರಿನ ಬಗ್ಗೆ ಜನರಲ್ಲಿ ಚರ್ಚೆಯಾಗುತ್ತಿದೆ. ಈ ರೋಗ ಸಾಮಾನ್ಯವಾಗಿ 45-50 ವರ್ಷಗಳ ನಂತರ ಪುರುಷರು ಮತ್ತು ಮಹಿಳೆಯರಿಬ್ಬರಲ್ಲಿಯೂ ಕಂಡುಬರುತ್ತದೆ. ವಯಸ್ಸಾದವರಲ್ಲಿ ಅದರಲ್ಲಿಯೂ ವಿಶೇಷವಾಗಿ ಪುರುಷರಲ್ಲಿ ಮೂತ್ರಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ.

ಯೂರಿನರಿ ಬ್ಲಾಡರ್ ಕ್ಯಾನ್ಸರ್ ಮೂತ್ರಕೋಶದ ಜೀವಕೋಶಗಳಲ್ಲಿ ಪ್ರಾರಂಭವಾಗುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಮೂತ್ರವನ್ನು ಸಂಗ್ರಹಿಸುವ ಹೊಟ್ಟೆಯ ಕೆಳಭಾಗದಲ್ಲಿರುವ ಯೂರಿನರಿ ಬ್ಲಾಡರ್ ಒಂದು ಟೊಳ್ಳಾದ ಅಂಗವಾಗಿದೆ. ಹೆಚ್ಚಿನ ಮೂತ್ರಕೋಶದ ಕ್ಯಾನ್ಸರ್ಗಳು ಮೂತ್ರಕೋಶದ ಒಳಭಾಗದಲ್ಲಿರುವ ಮೂತ್ರನಾಳದ ಕೋಶಗಳಲ್ಲಿ ಪ್ರಾರಂಭವಾಗುತ್ತವೆ. ಚಿಕಿತ್ಸೆ ನೀಡದೆ ಬಿಟ್ಟರೆ ಈ ರೀತಿಯ ಕ್ಯಾನ್ಸರ್ ಬೆಳೆದು ಹತ್ತಿರದ ಅಂಗಾಂಶಗಳು, ದುಗ್ಧರಸ ಗ್ರಂಥಿಗಳು ಅಥವಾ ಇತರ ಅಂಗಗಳಿಗೆ ಹರಡಬಹುದು.

ಯೂರಿನರಿ ಬ್ಲಾಡರ್ ಕ್ಯಾನ್ಸರ್ ಗೆ ಕಾರಣಗಳು

ಮೂತ್ರಕೋಶದ ಕೋಶಗಳಲ್ಲಿನ ಡಿಎನ್‌ಎ ರೂಪಾಂತರಗಳಿಗೆ ಒಳಗಾದಾಗ ಮೂತ್ರಕೋಶದ ಕ್ಯಾನ್ಸರ್ ಸಂಭವಿಸುತ್ತದೆ, ಇದರಿಂದಾಗಿ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆದು ವಿಭಜನೆಯಾಗುತ್ತವೆ. ಈ ರೂಪಾಂತರಗಳ ನಿಖರವಾದ ಕಾರಣ ಯಾವಾಗಲೂ ಸ್ಪಷ್ಟವಾಗಿಲ್ಲ. ಆದರೆ ಹಲವಾರು ಅಂಶಗಳು ಅಪಾಯವನ್ನು ಹೆಚ್ಚಿಸಬಹುದು. ಅವುಗಳಲ್ಲಿ ಮುಖ್ಯವಾದವು:

  1. ಧೂಮಪಾನ: ಸಿಗರೇಟ್ ಸೇದಿದಾಗ ಅಥವಾ ತಂಬಾಕನ್ನು ಜಗಿದು ನುಂಗಿದಾಗ ಅದರಲ್ಲಿರುವ ಹಾನಿಕಾರಕ ರಸಾಯನಿಕಗಳನ್ನು ಮೂತ್ರಕೋಶಗಳು ಫಿಲ್ಟರ್ ಮಾಡಿ ಹೊರಹಾಕುತ್ತಿವೆ. ಈ ರಾಸಾಯನಿಕಗಳು ಕಾಲಕ್ರಮೇಣ ಮೂತ್ರಕೋಶದ ಒಳಪದರವನ್ನು ಹಾನಿಗೊಳಿಸಬಹುದು.

  2. ರಾಸಾಯನಿಕಗಳು: ಬಣ್ಣ, ರಬ್ಬರ್, ಚರ್ಮ ಮತ್ತು ಬಣ್ಣ ಕೈಗಾರಿಕೆಗಳಲ್ಲಿ ಬಳಸುವಂತಹ ಕೈಗಾರಿಕಾ ರಾಸಾಯನಿಕಗಳಿಗೆ ದೀರ್ಘಕಾಲದವರೆಗೆ ಕೆಲಸಗಾರರು ಒಡ್ಡಿಕೊಂಡಾಗ ಅವುಗಳ ಅತಿ ಸಣ್ಣ ಸಣ್ಣ ಕಣಗಳು ದೇಹವನ್ನು ಸೇರಿ ಈ ಕ್ಯಾನ್ಸರಿನ ಅಪಾಯವನ್ನು ಹೆಚ್ಚಿಸುತ್ತವೆ.

  3. ದೀರ್ಘಕಾಲದ ಮೂತ್ರನಾಳದ ಸೋಂಕುಗಳು: ಪದೇ ಪದೇ ಕಂಡುಬರುವ ಮೂತ್ರನಾಳದ ಸೋಂಕುಗಳು ಅಥವಾ ಮೂತ್ರಕೋಶದ ದೀರ್ಘಕಾಲದ ಕಿರಿಕಿರಿ (ಉದಾಹರಣೆಗೆ ಮೂತ್ರಕೋಶದ ಕಲ್ಲುಗಳಿಂದಾಗಿ) ಈ ಸಮಸ್ಯೆ ಬರಬಹುದು.

  4. ಕುಟುಂಬದ ಇತಿಹಾಸ: ಮೂತ್ರಕೋಶದ ಕ್ಯಾನ್ಸರ್ನ ಕುಟುಂಬದ ಇತಿಹಾಸ ಅಥವಾ ಆನುವಂಶಿಕ ಜೀನ್ ರೂಪಾಂತರಗಳು ಇಂತಹ ಸಮಸ್ಯೆಗಳನ್ನು ಹೆಚ್ಚಿಸಬಹುದು.

  5. ರೇಡಿಯೇಷನ್ (ವಿಕಿರಣ) ಮತ್ತು ಕೀಮೋಥೆರಪಿ: ವಿಕಿರಣ ಅಥವಾ ಕೆಲವು ಕೀಮೋಥೆರಪಿ ಔಷಧಿಗಳನ್ನು (ಉದಾ. ಸೈಕ್ಲೋಫಾಸ್ಫಮೈಡ್) ತೆಗೆದುಕೊಂಡಾಗ ಮೂತ್ರಚೀಲದ ಕ್ಯಾನ್ಸರಿನ ಅಪಾಯವನ್ನು ಎದುರಾಗಬಹುದು.

Urinary Bladder Cancer
ಗ್ಲಿಯೊಬ್ಲಾಸ್ಟೊಮಾ ಎಂಬ ಮಾರಕ ಮೆದುಳಿನ ಗೆಡ್ಡೆ (ಕುಶಲವೇ ಕ್ಷೇಮವೇ)

ಯೂರಿನರಿ ಬ್ಲಾಡರ್ ಕ್ಯಾನ್ಸರ್ ಲಕ್ಷಣಗಳು

ಮೂತ್ರಕೋಶದ ಕ್ಯಾನ್ಸರ್ನ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಬದಲಾಗಬಹುದು. ಆದರೆ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ:

  • ಮೂತ್ರದಲ್ಲಿ ರಕ್ತ (ಹೆಮಚೂರಿಯಾ): ಇದು ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಮೂತ್ರವು ಗುಲಾಬಿ, ಕೆಂಪು ಅಥವಾ ಕೋಲಾ ಬಣ್ಣದಲ್ಲಿ ಅಗಬಹುದು. ಕೆಲವೊಮ್ಮೆ ಮೂತ್ರ ಪರೀಕ್ಷೆಯ ಸಮಯದಲ್ಲಿ ಮಾತ್ರ ರಕ್ತ ಪತ್ತೆಯಾಗುತ್ತದೆ.

  • ಆಗಾಗ್ಗೆ ಮೂತ್ರ ವಿಸರ್ಜನೆ: ಹೆಚ್ಚು ನೀರು ಕುಡಿಯದೆಯೂ ಮೂತ್ರ ವಿಸರ್ಜಿಸಲು ಪ್ರಚೋದನೆ ಉಂಟಾಗಬಹುದು.

  • ನೋವು ಅಥವಾ ಉರಿಯ ಸಂವೇದನೆ: ಮೂತ್ರ ವಿಸರ್ಜಿಸುವಾಗ ನೋವು ಅಥವಾ ಉರಿಯುವ ಭಾವನೆ ಉಂಟಾಗಬಹದು.

  • ಸೊಂಟ (ಪೆಲ್ವಿಸ್) ನೋವು: ಹೊಟ್ಟೆಯ ಕೆಳಭಾಗ ಅಥವಾ ಬೆನ್ನಿನಲ್ಲಿ ನೋವು ಆಗಾಗ ಕಾಣಿಸಿಕೊಳ್ಳಬಹುದು.

  • ಮೂತ್ರನಾಳದ ಸೋಂಕುಗಳು: ಪದೇ ಪದೇ ಉಂಟಾಗುವ ಮೂತ್ರನಾಳದ ಸೋಂಕುಗಳು ಕೆಲವೊಮ್ಮೆ ಮೂತ್ರಕೋಶದ ಕ್ಯಾನ್ಸರ್ ಲಕ್ಷಣಗಳನ್ನು ಮರೆಮಾಡಬಹುದು. ಇವೆಲ್ಲದರ ಬಗ್ಗೆ ಹುಷಾರಾಗಿದ್ದು ವೈದ್ಯರನ್ನು ಕಾಣಬೇಕು.

ಯೂರಿನರಿ ಬ್ಲಾಡರ್ ಕ್ಯಾನ್ಸರ್ ರೋಗನಿರ್ಣಯ

ಮೂತ್ರಕೋಶದ ಕ್ಯಾನ್ಸರನ್ನು ಕೆಲವು ಪರೀಕ್ಷೆಗಳ ಮೂಲಕ ಕಂಡುಹಿಡಿಯಬಹುದು. ಅವುಗಳೆಂದರೆ:

  1. ಮೂತ್ರ ಪರೀಕ್ಷೆಗಳು: ಮೂತ್ರದಲ್ಲಿ ಕ್ಯಾನ್ಸರ್ ಕೋಶಗಳು ಅಥವಾ ರಕ್ತವನ್ನು ಪತ್ತೆಹಚ್ಚಲು ಮೂತ್ರ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

  2. ಸಿಸ್ಟೊಸ್ಕೋಪಿ: ಕ್ಯಾಮೆರಾ ಇರುವ ತೆಳುವಾದ ಟ್ಯೂಬನ್ನು ಮೂತ್ರಕೋಶಕ್ಕೆ ನೇರವಾಗಿ ತೂರಿಸಿ ಪರೀಕ್ಷೆ ಮಾಡಲಾಗುತ್ತದೆ.

  3. ಇಮೇಜಿಂಗ್ ಸ್ಕ್ಯಾನ್: ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನಿಂಗ್ ಅಥವಾ ಅಲ್ಟ್ರಾಸೌಂಡ್ ವಿಧಾನದ ಮೂಲಕ ವಿವರವಾದ ಚಿತ್ರಗಳನ್ನು ತೆಗೆದು ರೋಗನಿರ್ಣಯ ಮಾಡಬಹುದು.

  4. ಬಯಾಪ್ಸಿ: ಕ್ಯಾನ್ಸರನ್ನು ದೃಢೀಕರಿಸಲು ವಿಶ್ಲೇಷಣೆಗಾಗಿ ಅಂಗಾಂಶ ಮಾದರಿಯನ್ನು ತೆಗೆದುಕೊಂಡು ತಜ್ಞರು ಪರೀಕ್ಷೆ ಮಾಡುತ್ತಾರೆ.

ಯೂರಿನರಿ ಬ್ಲಾಡರ್ ಕ್ಯಾನ್ಸರ್ ಗೆ ಚಿಕಿತ್ಸಾ ಆಯ್ಕೆಗಳು

ಚಿಕಿತ್ಸೆಯು ಕ್ಯಾನ್ಸರ್ನ ಹಂತ ಮತ್ತು ದರ್ಜೆಯನ್ನು ಅವಲಂಬಿಸಿರುತ್ತದೆ. ಶಸ್ತ್ರಚಿಕಿತ್ಸೆ ಮೂಲಕ ಮೂತ್ರಪಿಂಡದಲ್ಲಿರುವ ಕ್ಯಾನ್ಸರ್ ಗೆಡ್ಡೆಗಳನ್ನು ತೆಗೆದುಹಾಕುತ್ತದೆ. ಕೆಲವೊಮ್ಮೆ ಸಿಸ್ಟೆಕ್ಟಮಿ ಮಾಡಿ ಮೂತ್ರಕೋಶದ ಬಾಧಿತ ಭಾಗಶಃ ಅಥವಾ ಸಂಪೂರ್ಣ ತೆಗೆಯುವಿಕೆ ಮಾಡುತ್ತಾರೆ.

ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಔಷಧಿಗಳನ್ನು ನೇರವಾಗಿ ಮೂತ್ರಕೋಶಕ್ಕೆ ತಲುಪಿಸಲಾಗುತ್ತದೆ. ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಅಥವಾ ಗೆಡ್ಡೆಗಳನ್ನು ಕಡಿಮೆ ಮಾಡಲು ಕೀಮೋಥೆರಪಿಯ ಔಷಧಿಗಳನ್ನು ಬಳಸಲಾಗುತ್ತದೆ.

ವಿಕಿರಣ ಚಿಕಿತ್ಸೆ ಮೂಲಕ ಹೆಚ್ಚಿನ ಶಕ್ತಿಯ ಕಿರಣಗಳನ್ನು ಬಾಧಿತ ಕೋಶಗಳಿಗೆ ಹಾಯಿಸಿದಾಗ ಅವು ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿಕೊಂಡು ಕೊಲ್ಲುತ್ತವೆ. ಇದಲ್ಲದೇ ಇಮ್ಯುನೊಥೆರಪಿ ಮಾಡಿ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ವರ್ಧಿಸಲಾಗುತ್ತದೆ.

Urinary Bladder Cancer
HMP ವೈರಸ್: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)

ಯೂರಿನರಿ ಬ್ಲಾಡರ್ ಕ್ಯಾನ್ಸರ್ ರೋಗ ತಡೆಗಟ್ಟುವುದು ಹೇಗೆ?

ಈ ರೋಗವನ್ನು ತಡೆಗಟ್ಟಲು ಮೊದಲು ಧೂಮಪಾನ ಬಿಡಬೇಕು. ಹಾಗೆಯೇ ತಂಬಾಕನ್ನು ಯಾವುದೇ ರೀತಿಯಲ್ಲಿಯೂ ಸೇವಿಸಬಾರದು (ಗುಟ್ಕಾ, ಜರದಾ ಇತ್ಯಾದಿ). ರಾಸಾಯನಿಕಗಳಿಗೆ ಹೆಚ್ಚಾಗಿ ಮೈ ಒಡ್ಡಿಕೊಳ್ಳಬಾರದು. ಸಾಕಷ್ಟು ನೀರನ್ನು ಪ್ರತಿದಿನ ಸೇರಿಸಿ ದೇಹದಿಂದ ತ್ಯಾಜ್ಯ ಪದಾರ್ಥಗಳನ್ನು ನಿಯಮಿತವಾಗಿ ಹೊರಹೋಗುವಂತೆ ನೋಡಿಕೊಳ್ಳಬೇಕು. ಆರೋಗ್ಯವಾಗಿರಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಮತೋಲಿತ ಆಹಾರ, ತಾಜಾ ಹಣ್ಣುತರಕಾರಿಗಳು, ಹಸಿರು ಸೊಪ್ಪುಗಳು ಮತ್ತು ವ್ಯಾಯಾಮ-ಬಿರುಸು ನಡಿಗೆ ಮಾಡಬೇಕು. ಮೂತ್ರಕೋಶದ ಸಮಸ್ಯೆ ಏನಾದರೂ ಕಂಡುಬAದರೆ ತಡಮಾಡದೇ ತಜ್ಞವೈದ್ಯರನ್ನು ಕಾಣಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com