
ಹೂಡಿಕೆದಾರರು ನಾವು ಹೂಡಿದ ಹಣ ನಮಗೆ ಲಾಭ ತಂದುಕೊಡುತ್ತದೆ ಎನ್ನುವುದನ್ನು ಮಾತ್ರವಲ್ಲದೆ , ಮಾರುಕಟ್ಟೆ ಕುಸಿದರೆ ನಷ್ಟ ಕೂಡ ಆಗುತ್ತದೆ ಎನ್ನುವುದನ್ನು ನೆನಪಿನಲ್ಲಿ ಇಟ್ಟು ಕೊಳ್ಳಬೇಕು. ಐದರಿಂದ ಹತ್ತು ಪ್ರತಿಶತ ಮಾರುಕಟ್ಟೆ ಮೌಲ್ಯದಲ್ಲಿ ಕಡಿಮೆಯಾದರೆ ಅದನ್ನು ನಾವು ಕರೆಕ್ಷನ್ ಎಂದು ಕರೆಯಬಹುದು. ಅಂದರೆ ಮಾರುಕಟ್ಟೆಯಲ್ಲಿ ಹಲವಾರು ಕಾರಣಕ್ಕೆ ಮೂಲ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಕೆಲವು ಷೇರುಗಳು, ಸಂಸ್ಥೆಗಳು ಪಡೆದುಕೊಂಡು ಬಿಟ್ಟಿರುತ್ತವೆ.
ಹೀಗಾಗಿ ಇದು ಸಹಜ ಸ್ಥಿತಿಗೆ ಬಂದಾಗ ಅದನ್ನು ಮಾರುಕಟ್ಟೆ ಕುಸಿತ ಎನ್ನುವುದಕ್ಕಿಂತ ತಿದ್ದುಪಡಿ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಕರೆಕ್ಷನ್ ಒಂದರಿಂದ ಐದು ತಿಂಗಳಲ್ಲಿ ಆಗುತ್ತದೆ. ಅಂದರೆ ಈ ರೀತಿಯ ಮೌಲ್ಯ ಕಡಿಮೆಯಾಗಿ ತನ್ನ ನಿಜವಾದ ಮೌಲ್ಯಕ್ಕೆ ಮರಳಲು ಹೆಚ್ಚು ಎಂದರೆ ಐದು ತಿಂಗಳಾಗುತ್ತದೆ. ಈ ರೀತಿಯ ಸಮಯದಲ್ಲಿ ಕೆಲವೊಂದು ಷೇರುಗಳು, ಸಂಸ್ಥೆಗಳು ಕೂಡ ಮೌಲ್ಯ ಕಳೆದುಕೊಳ್ಳುತ್ತವೆ. ಅವುಗಳ ಮೌಲ್ಯ ಸರಿಯಾಗಿದ್ದು ಕೂಡ ಹೀಗಾಗುತ್ತದೆ. ಆದರೆ ಅವುಗಳು ಕೂಡ ತಮ್ಮ ನಿಜವಾದ ಮೌಲ್ಯವನ್ನು ಮತ್ತೆ ಮುಂದಿನ ಮೂರು ತಿಂಗಳಲ್ಲಿ ಕಂಡುಕೊಳ್ಳುತ್ತವೆ. ಮಾರುಕಟ್ಟೆ 10 ರಿಂದ 20 ಪ್ರತಿಶತ ಮೌಲ್ಯ ಕಳೆದುಕೊಂಡರೆ ಅದನ್ನು ಕುಸಿತ ಎನ್ನಲಾಗುತ್ತದೆ. 20 ಪ್ರತಿಶತಕ್ಕೂ ಹೆಚ್ಚಿನ ಮೌಲ್ಯ ಕುಸಿದರೆ ಅದನ್ನು ಕ್ರ‍್ಯಾಶ್ ಎಂದು ಕರೆಯಲಾಗುತ್ತದೆ. ಜಾಗತಿಕ ಷೇರು ಮಾರುಕಟ್ಟೆ ಇಂತಹ ಕ್ರ‍್ಯಾಶ್ ಗೆ ಒಳಗಾಗಿದೆ.
ಈ ರೀತಿ ಅಮೇರಿಕಾ ಮಾರುಕಟ್ಟೆ ಕುಸಿತಕ್ಕೆ ಕಾರಣ ಚೀನಾದ ಎಐ ಮಾಡಲ್ ಡೀಪ್ ಸೀಕ್ . ಇದು ಅಮೆರಿಕಾದ ಚಾಟ್ ಜಿಪಿಟಿಯ ನಕಲು ಎನ್ನಬಹುದು. ವ್ಯತ್ಯಾಸವೆಂದರೆ chat gpt ಮಾಡುವ ಕೆಲಸಕ್ಕಿಂತ ಹೆಚ್ಚು ನಿಖರತೆ, ಹೆಚ್ಚು ವೇಗ ಮತ್ತು ಚಾಟ್ ಜಿಪಿಟಿಗಿಂತ ಅತೀ ಹೆಚ್ಚು ಕಡಿಮೆ ಬೆಲೆಯಲ್ಲಿ ಇದು ಲಭ್ಯವಿದೆ. ಅಮೆರಿಕಾದ ಎಐ ಕಂಪನಿಗಳು ಈ ತಂತ್ರಜ್ಞಾನವನ್ನು ಬಹಳ ದೊಡ್ಡದು, ಬಹು ಮೌಲ್ಯವುಳ್ಳದ್ದು ಎನ್ನುವ ರೀತಿಯಲ್ಲಿ ಬಿಂಬಿಸಿದ್ದರು. ಚೀನಿಯರು ಅಮೆರಿಕಾದ ಈ ಗುಳ್ಳೆಯನ್ನು ಒಂದೇ ಏಟಿನಲ್ಲಿ ಹೊಡೆದು ಹಾಕಿದ್ದಾರೆ. ಆ ಮೂಲಕ ಅಮೆರಿಕಾದ ಸಾರ್ವಬೌಮತ್ವಕ್ಕೆ ಇನ್ನಿಲ್ಲದ ಪೆಟ್ಟು ಕೊಟ್ಟಿದ್ದಾರೆ. ಈ ಕಾರಣದಿಂದ ಅಮೇರಿಕಾ ಮಾರುಕಟ್ಟೆಯಲ್ಲಿ ಎಐ ಗೆ ಸಂಬಂಧಿಸಿದ ಎಲ್ಲಾ ಷೇರುಗಳನ್ನು ಹೂಡಿಕೆದಾರರು ಪ್ಯಾನಿಕ್ ಸೆಲ್ಲಿಂಗ್ ಮಾಡಲು ಶುರು ಮಾಡಿದರು. ಒಂದೇ ದಿನದಲ್ಲಿ 86 ಲಕ್ಷ 50 ಸಾವಿರ ಕೋಟಿ ಹಣವನ್ನು ಹೂಡಿಕೆದಾರರು ಕಳೆದು ಕೊಂಡಿದ್ದಾರೆ. ಅಂದರೆ ಒಂದು ಲಕ್ಷ ಕೋಟಿ ರೂಪಾಯಿ ಹಣವನ್ನು ಒಂದು ದಿನದಲ್ಲಿ ಮಾರುಕಟ್ಟೆ ಕಳೆದುಕೊಂಡಿದೆ. ಇದರಲ್ಲಿ ಸರಿಸುಮಾರು 600 ಬಿಲಿಯನ್ ಹಣವನ್ನು ಎನ್ವಿಡಿಯ (NVidia) ಎನ್ನುವ ಸಂಸ್ಥೆಯೊಂದೇ ಕಳೆದುಕೊಂಡಿದೆ.
ಚೀನ ಹೊಸದಾಗಿ ಮಾರುಕಟ್ಟೆಗೆ ಬಿಟ್ಟಿರುವ ಈ ಎಐ ಮಾಡಲ್ ಒಂದು ಪುಟಾಣಿ ಆಟಿಕೆ, ಚೀನಾದ ಬಳಿ ಇದಕ್ಕಿಂತ ಹೆಚ್ಚು ಪ್ರಬಲಶಾಲಿಯಾದ ಇನ್ನಷ್ಟು ಎಐ ಟೂಲ್ ಗಳು ಸಿದ್ಧವಿವೆ. ಚೀನಾ ತನ್ನೆಲ್ಲಾ ಟೂಲ್ ಗಳನ್ನು ಮಾರುಕಟ್ಟೆಗೆ ಬಿಟ್ಟರೆ ಜಾಗತಿಕ ತಲ್ಲಣ ಇನ್ನಷ್ಟು ಹೆಚ್ಚಾಗುತ್ತದೆ. ಚೀನಾ ಜಗತ್ತಿನ ಎಲ್ಲಾ ದೇಶಗಳನ್ನೂ ಮೀರಿಸಿ ಬಹಳ ಮುಂದೆ ಹೋಗಿದೆ. ಆದರೆ ಚೀನಾ ಕೂಡ ತಕ್ಷಣ ಇದನ್ನು ರಿಲೀಸ್ ಮಾಡುವ ಶಕ್ತಿಯನ್ನು ಹೊಂದಿಲ್ಲ. ಏಕೆಂದರೆ ಗಮನಿಸಿ ಇಂತಹ ಎಐ ಮಾಡಲ್ಗಳಿಂದ ಜಗತ್ತಿಗೆ ಯಾವ ಸವಾಲು, ತೊಂದರೆ ಉಂಟಾಗುತ್ತದೆ ಅದು ಚೀನಾಗೆ ಕೂಡ ತಟ್ಟುತ್ತದೆ. ಚೀನಾ ಇದನ್ನು ಸೃಷ್ಟಿಸುವಲ್ಲಿ ಜಯಗಳಿಸಿದೆ. ಆದರೆ ಇದರಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದ ತನ್ನನ್ನು ತಾನು ಕಾಪಾಡಿಕೊಳ್ಳುವ ಮಾರ್ಗವನ್ನು ಇನ್ನೂ ಹುಡುಕಿಕೊಂಡಿಲ್ಲ.
ಗಮನಿಸಿ ಇಂದು ವಿಶ್ವ ಒಂದು ಪುಟಾಣಿ ಹಳ್ಳಿಯಂತೆ ಬದಲಾಗಿದೆ. ಎಲ್ಲಾ ದೇಶಗಳೂ ಒಂದರ ಮೇಲೊಂದು ಬಹುವಾಗಿ ಅವಲಂಬಿಸಿವೆ. ಹೀಗಾಗಿ ಅಮೇರಿಕಾ ಕುಸಿದರೆ ನನಗೇನು ಎನ್ನುವ ಸ್ಥಿತಿಯಲ್ಲಿ ಚೀನಾ ಕೂಡ ಇಲ್ಲ. ಅಮೇರಿಕಾ ಪೂರ್ಣ ಕುಸಿತ ಕಾಣುವುದು ಜಗತ್ತಿಗೆ ಮತ್ತು ಚೀನಾಕ್ಕೆ ಕೂಡ ಒಳ್ಳೆಯದಲ್ಲ. ಆದರೆ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಮೊದಲ ದಿನವೇ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡರು. ಚೀನಾ ದೇಶದ ಮೇಲೆ ಪ್ರೈಸ್ ವಾರ್, ಟ್ಯಾಕ್ಸ್ ವಾರ್ ಮಾಡುವ ಮಾತುಗಳನ್ನು ನೇರವಾಗಿ ಗೆಲುವಿಗೆ ಮುಂಚಿನಿಂದ ಹೇಳಿಕೊಂಡು ಬರುತ್ತಿದ್ದರು. ಟ್ರಂಪ್ ಮೊದಲ ಅವಧಿಯ ಕೊನೆಯಲ್ಲಿ ಮತ್ತೊಮ್ಮೆ ಚುನಾವಣೆಗೆ ನಿಂತಾಗ ಕೂಡ ಕರೋನ ಶಾಕ್ ಚೀನಾ ನೀಡಿದ್ದು ನಾವು ಮರೆಯುವಂತಿಲ್ಲ.
ಈಗ ಆತ ಮತ್ತೆ ಗೆದ್ದು ಎರಡನೇ ಅವಧಿಯ ಮೊದಲ ದಿನವೇ ಮತ್ತು ಅದಕ್ಕಿಂತ ಮುಂಚಿನಿಂದಲೂ ಚೀನಾ ವಿರುದ್ದದ ನೀತಿಯನ್ನು ಹೇಳುತ್ತಾ ಬಂದಿದ್ದರು. ಚೀನಾ ಈ ಬಾರಿ ಡೀಪ್ ಸೀಕ್ ಎನ್ನುವ ತಂತ್ರಜ್ಞಾನವನ್ನು ಪುಕ್ಕಟೆ ಎನ್ನುವಷ್ಟು ಮಟ್ಟಿಗಿನ ಬೆಲೆಗೆ ಮಾರುಕಟ್ಟೆಗೆ ಬಿಡುವ ಮೂಲಕ ಹೊಸ ಪ್ರೈಸ್ ವಾರ್ ಗೆ ಮುಂದಾಗಿದೆ. ಚಾಟ್ ಜಿಪಿಟಿ ಗಿಂತ ಹೆಚ್ಚಿನ ಕ್ಷಮತೆಯನ್ನು ಡೀಪ್ ಸೀಕ್ ಹೊಂದಿದೆ ಎನ್ನಲಾಗುತ್ತಿದೆ. ಆದರೆ ಚಾಟ್ ಜಿಪಿಟಿ ತಯಾರಿಕೆಗೆ ಖರ್ಚು ಮಾಡಿದ ಹಣದಲ್ಲಿನ ಚಿಲ್ಲರೆ ಹಣದಲ್ಲಿ ಇದನ್ನು ತಯಾರಿಸಲಾಗಿದೆ ಎಂದು ಹೇಳಾಗುತ್ತಿದೆ. ಇಷ್ಟು ಒಳ್ಳೆಯ ಗುಣಮಟ್ಟದ ತಂತ್ರಜ್ಞಾನವನ್ನು ಇಷ್ಟು ಕಡಿಮೆ ಹಣದಲ್ಲಿ ತಯಾರಿಸಬಹುದು ಎನ್ನುವ ಅಂಶ ಅಮೆರಿಕಾದ ಟೆಕ್ ಕಂಪನಿಗಳನ್ನು ಅದರಲ್ಲೂ ಎಐ ಸಂಬಂಧಿಸಿದ ಸಂಸ್ಥೆಗಳನ್ನು ಮಕಾಡೆ ಮಲಗಿಸಿ ಬಿಟ್ಟಿದೆ. ಇದರ ಜೊತೆಗೆ ಚೀನಾದ ಬಳಿ ಇಂತಹ ಇನ್ನೂ ಎಷ್ಟೋ ಎಐ ಉಪಕರಣಗಳು ಸಿದ್ಧವಿದೆ ಎನ್ನುವ ಗಾಳಿಮಾತು ಮಾರುಕಟ್ಟೆಯನ್ನು ಇನ್ನೊಂದು ಹಂತದ ಕುಸಿತಕ್ಕೆ ಕರೆದೊಯ್ದಿದೆ. ಅಮೇರಿಕಾ ಷೇರು ಮಾರುಕಟ್ಟೆ ಕುಸಿತ ಭಾರತಕ್ಕೂ ತಟ್ಟಿದೆ.
ಷೇರುಮಾರುಕಟ್ಟೆಯಲ್ಲಿ ಪ್ರಮುಖವಾಗಿ ಫಂಡಮೆಂಟಲ್ ಅನಾಲಿಸಿಸ್ ಮತ್ತು ಟೆಕ್ನಿಕಲ್ ಅನಾಲಿಸಿಸ್ ಮೂಲಕ ಹಣವನ್ನು ಹೂಡುವುದು ಮತ್ತು ತೆಗೆಯುವುದು ಮಾಡಲಾಗುತ್ತದೆ. ಇವು ಸಾಮಾನ್ಯ ಸಮಯದಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಆದರೆ ಕ್ರೈಸಿಸ್ ವೇಳೆಯಲ್ಲಿ ಇದ್ಯಾವುದನ್ನೂ ಹೂಡಿಕೆದಾರ ಗಮನಿಸುವುದಿಲ್ಲ. ಅಲ್ಲಿ ಆಗ ವರ್ಕ್ ಆಗುವುದು ಕೇವಲ ಸೆಂಟಿಮೆಂಟ್. ಯಾವ ಅನಾಲಿಸಿಸ್ ತಪ್ಪಾದರೂ ಸ್ನೇಟಿಮೆಂಟಲ್ ಅನಾಲಿಸಿಸ್ ತಪ್ಪಾಗುವುದಿಲ್ಲ.
ನೀವೇ ಗಮನಿಸಿ ನೋಡಿ, ಅಪಾಯ ಎಂದ ತಕ್ಷಣ ಅದಕ್ಕೆ ಸ್ಪಂದಿಸುವುದು ಮನುಷ್ಯ ಸಹಜ ಗುಣ. ಅದು ಡಿಫೆನ್ಸ್ ಮೆಕಾನಿಸಂ. ಹೇಗಾದರೂ ಸರಿ ಅಪಾಯದಿಂದ ಪಾರಾಗಬೇಕು, ಉಳಿದುಕೊಳ್ಳಬೇಕು ಎನ್ನುವುದು ಮತ್ತು ಅದಕ್ಕಾಗಿ ಕಾರ್ಯತತ್ಪರರಾಗುವುದು ಮನುಷ್ಯ ಸಹಜ ಗುಣ. ಹೀಗಾಗಿ ಮಾರುಕಟ್ಟೆ ಬೀಳುತ್ತದೆ ಎನ್ನುವ ಸಣ್ಣ ಸುಳಿವು, ಗಾಳಿಮಾತು ಕೇಳಿ, ತಮ್ಮ ಹೂಡಿಕೆಯ ಹಣವನ್ನು ಸಂರಕ್ಷಿಸಿ ಕೊಳ್ಳಲು ಹೂಡಿಕೆದಾರರು ಶುರು ಮಾಡುತ್ತಾರೆ. ಇದು ಕೂಡ ವೇಗವಾಗಿ ಹಬ್ಬುತ್ತದೆ. ಹೀಗಾಗಿ ಇದು ಸಮೂಹ ಸನ್ನಿಯಾಗಿ ಮಾರ್ಪಾಡಗುತ್ತದೆ. ಜನ ಜಿದ್ದಿಗೆ ಬಿದ್ದವರಂತೆ ಲಾಸ್ ಬುಕ್ ಮಾಡಿಕೊಳ್ಳಲು ಶುರು ಮಾಡುತ್ತಾರೆ. ಈ ಕ್ರಿಯೆ ಮಾರುಕಟ್ಟೆಯ ಪತನ ಅಥವಾ ಕ್ರ‍್ಯಾಶ್ ಗೆ ಕಾರಣವಾಗುತ್ತದೆ.
ಅಮೇರಿಕಾ ಮತ್ತು ಚೀನಾ ನಡುವೆ ನಡೆಯುತ್ತಿರುವ ಈ ತಂತ್ರಜ್ಞಾನದ ಯುದ್ಧದಲ್ಲಿ ತಕ್ಷಣಕ್ಕೆ ಭಾರತಕ್ಕೆ ಆಗಿರುವ ನಷ್ಟ ಬಹುದೊಡ್ಡದು ಎನ್ನಿಸದಿರಬಹುದು. ಏಕೆಂದರೆ ನಮ್ಮ ಜನಸಂಖ್ಯೆಯ 8 ಪ್ರತಿಶತ ಜನರೂ ಕೂಡ ಷೇರು ಮಾರುಕಟ್ಟೆಯಲ್ಲಿ ಸಕ್ರಿಯವಾಗಿಲ್ಲ. ಹೀಗಾಗಿ ಭಾರತದ ಮಟ್ಟಿಗೆ ಇದೊಂದು ಸಣ್ಣ ಹೊಡೆತ ಎನ್ನುವ ಭಾವನೆ ಬರುತ್ತದೆ. ಆದರೆ ಮುಂಬರುವ ದಿನಗಳಲ್ಲಿ ಇದು ಭಾರತವೂ ಸೇರಿ ಅನೇಕ ದೇಶಗಳನ್ನು ಚೀನಾ ಮತ್ತು ಅಮೇರಿಕಾ ದಾಸ್ಯಕ್ಕೆ ಗುತ್ತಿಗೆ ಪಡೆದುಕೊಳ್ಳುತ್ತವೆ.
ನಿಮಗೆಲ್ಲಾ ಗೊತ್ತಿರಲಿ ಇನ್ನು ಮುಂದೆ ಹಣ ಎಂದರೆ ಅದು ನಿಜವಾದ ಹಣವಲ್ಲ, ನಾವು ಮತ್ತು ನಮ್ಮ ನಡವಳಿಕೆಯ ಸಹಿತ ಎಲ್ಲಾ ಚಿಕ್ಕಪುಟ್ಟ ಅಂಶಗಳ ಸಂಗ್ರಹಣೆ ನಿಜವಾದ ಹಣ. ಡೇಟಾ ಕಲೆಕ್ಷನ್ ಎನ್ನುವುದು ಮುಂದಿನ ಜಾಗತಿಕ ಹಿರಿಯಣ್ಣ ಯಾರು ಎನ್ನುವುದನ್ನು ನಿರ್ಧರಿಸುತ್ತದೆ. ಚೀನಾದಲ್ಲಿ ಈಗಾಗಲೇ ಕೋಟ್ಯಂತರ ಸಂಖ್ಯೆಯಲ್ಲಿ ಕ್ಯಾಮರಾ ಅಳವಡಿಸಿಲಾಗಿದೆ. ಇದರ ಮೂಲಕ ಯಾವೊಬ್ಬ ವ್ಯಕ್ತಿ ಮನೆಯಿಂದ ಯಾವ ವೇಳೆಗೆ ಹೊರಬಂದ , ಯಾವಾಗ ಮತ್ತೆ ಮನೆ ಸೇರಿಕೊಂಡ ಎನ್ನುವ ಅತ್ಯಂತ ನಿಕೃಷ್ಟ ಡೇಟಾ ಕೂಡ ಸಂಗ್ರಹಿಸಿ ಇಟ್ಟು ಕೊಳ್ಳುತ್ತಿದ್ದಾರೆ. ಸಮಯ ಬಂದಾಗ ಅಂತಹ ನಿಕೃಷ್ಟ ಡೇಟಾ ಕೂಡ ಕೆಲಸಕ್ಕೆ ಬರುತ್ತದೆ. ಒಬ್ಬ ವ್ಯಕ್ತಿಯನ್ನು ಈ ಮಾಹಿತಿಗಳ ಮೂಲಕ ತಮ್ಮ ಅನುಕೂಲಕ್ಕೆ ತಕ್ಕಂತೆ ಅಲ್ಲಿನ ಸರಕಾರ ಬಳಸಿಕೊಳ್ಳುವ ತಾಕತ್ತು ಹೊಂದಿದೆ. ಡೀಪ್ ಸೀಕ್ ಇರಬಹುದು ಅಥವಾ ಚಾಟ್ ಜಿಪಿಟಿ ಇವೆಲ್ಲವೂ ತನ್ನ ಬಳಕೆದಾರನ ಪ್ರತಿಯೊಂದು ಮಾಹಿತಿಯನ್ನೂ ಸಂಗ್ರಹಿಸಿ ಕೊಳ್ಳುತ್ತವೆ.
ಹೀಗೆ ಸಂಗ್ರಹವಾದ ಮಾಹಿತಿ ಈ ಕ್ಷಣಕ್ಕೆ ನಗಣ್ಯ ಎನ್ನಿಸಬಹುದು. ಆದರೆ ಈ ರೀತಿಯ ಡೇಟಾ ಕಲೆಕ್ಷನ್ ನಿಜವಾದ ಹಣವನ್ನು ಉತ್ಪಾದಿಸಿ ಕೊಡಲಿದೆ. ನಿಮಗೆಲ್ಲಾ ಗೊತ್ತಿರಲಿ ಅಮೆರಿಕಾದ ಎನ್ವಿದಿಯ ಸಂಸ್ಥೆ ಭಾರತದ ರಿಲಯನ್ಸ್ ಸಂಸ್ಥೆಯ ಜೊತೆಗೆ ಇಂತಹ ಡೇಟಾ ಕಲೆಕ್ಷನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ರಿಲಯನ್ಸ್ ಭಾರತದಲ್ಲಿ ಅತಿ ಹೆಚ್ಚು ಡೇಟಾ ಶೇಖರಣೆ ಮಾಡಿಕೊಂಡಿರುವ ಸಂಸ್ಥೆಯಾಗಿದೆ. ಯಾರ ಬಳಿ ಅತಿ ಹೆಚ್ಚು ಡೇಟಾ ಇರುತ್ತದೆ, ಅವರು ದೇಶವನ್ನು, ಜಗತ್ತನ್ನು ಆಳುತ್ತಾರೆ. ಈ ನಿಟ್ಟಿನಲ್ಲಿ ನೋಡಿದಾಗ ಭಾರತಕ್ಕೆ ಅತ್ಯಂತ ತುರ್ತಾಗಿ ತನ್ನದೇ ಅದ ಎಐ ಟೂಲ್ ಹೊಂದುವುದು ಅಗತ್ಯವಾಗಿದೆ. ಇಲ್ಲದೆ ಹೋದ ಪಕ್ಷದಲ್ಲಿ ಜನ ಸಾಮಾನ್ಯ ಚಾಟ್ ಜಿಪಿಟಿ ಅಥವಾ ಡೀಪ್ ಸೀಕ್ ಟೂಲ್ ಗಳನ್ನು ಬಳಸಲು ಶುರು ಮಾಡುತ್ತಾನೆ. ಒಮ್ಮೆ ಒಂದಕ್ಕೆ ಹೊಂದಿಕೊಂಡರೆ ಅವರನ್ನು ಮರಳಿ ಬೇರೆಯ ಕಡೆಗೆ ತಿರುಗಿಸುವುದು ಬಹಳ ಕಷ್ಟ , ಜೊತೆಗೆ ಆಗಲೇ ಡೇಟಾ ಇನ್ನೊಂದು ದೇಶದ ಬಳಿ ಸಂಗ್ರಹಣೆಯಾಗಿರುತ್ತದೆ. ಒಬ್ಬ ವ್ಯಕ್ತಿ, ಸಮಾಜ , ರಾಜ್ಯ, ದೇಶ ಮತ್ತು ಜಗತ್ತನ್ನು ಕ್ಷಣಾರ್ಧದಲ್ಲಿ ರಣರಂಗವನ್ನಾಗಿ ಮಾರ್ಪಡಿಸುವ ಶಕ್ತಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಡೇಟಾವನ್ನು ಅನಲೈಸ್ ಮಾಡುವುದರ ಮೂಲಕ ಮತ್ತು ತನ್ನ ಮೂಗಿನ ನೇರಕ್ಕೆ ಇಂಟೆರ್ಪ್ರಿಟ್ ಮಾಡುವುದರ ಮೂಲಕ ಪಡೆದುಕೊಳ್ಳಲಿದೆ.
ಹೋಗುವ ಮುನ್ನ: ಚೀನಾ ತನ್ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತನ್ನ ಮೂಗಿನ ನೇರಕ್ಕೆ, ತನಗೆ ಅನುಕೂಲವಾಗುವಂತೆ ಸಿದ್ದ ಮಾಡಿಕೊಳ್ಳುತ್ತದೆ. ಅಮೇರಿಕಾ ಕೂಡ ಅಷ್ಟೇ, ನಾವು ಕೂಡ ಜಾಗತಿಕ ವಿತ್ತ ಜಗತ್ತಿನ ಮೇಲಾಟದಲ್ಲಿ ನಮ್ಮ ಜಾಗವನ್ನು ಹೊಂದಲು, ಕೊನೆಪಕ್ಷ ಬೇರೆ ದೇಶದ ಅಡಿಯಾಳು ಆಗದಂತೆ ತಪ್ಪಿಸಿಕೊಳ್ಳಲು ನಮ್ಮದೇ ಅದ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಹೊಂದುವುದು ಇಂದಿನ ತುರ್ತು ಅಗತ್ಯವಾಗಿದೆ. ನಮ್ಮ ನೆರೇಟಿವ್, ನಮ್ಮತನ ಉಳಿಸಿಕೊಳ್ಳಲು ಇದು ಬೇಕೇ ಬೇಕು. ಇಲ್ಲದಿದ್ದರೆನಾವು ತಿರುಚಿದ ಚರಿತ್ರೆಯನ್ನು ನಂಬಿದ ಹಾಗೆ ನಮ್ಮ ಮಕ್ಕಳು ಎಲ್ಲಾ ತಿರುಚಿದ ಮಾಹಿತಿಯನ್ನು ನಿಜವೆಂದು ನಂಬುತ್ತಾರೆ. ಅದು ಸುಳ್ಳು ಎಂದು ಹೇಳಿ, ಇದು ನಿಜ ಎಂದು ಸಾಬೀತು ಪಡಿಸಲಾದರೂ ನಮ್ಮ ಬಳಿ ನಮ್ಮದೇ ಅದ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬೇಕು. ಆದರೆ ಇನ್ನೂ ಜಾತಿ ಧರ್ಮದ ಗುದ್ದಾಟದಿಂದ ನಾವು ಮೇಲೇರುವ ಲಕ್ಷಣಗಳು ನನಗಂತೂ ಕಾಣುತ್ತಿಲ್ಲ.
Advertisement