
ಜಪಾನ್ ದೇಶದ ಜನರು ಬಹಳ ಸ್ನೇಹ ಜೀವಿಗಳು. ಭಾಷೆಯ ಕಾರಣ ಮತ್ತು ಇತರ ಸಹಜೀವಿಗಳ ಪ್ರೈವೆಸಿ ಕಾರಣ ಹೆಚ್ಚು ಮಾತನಾಡುವುದಿಲ್ಲ. ಆದರೆ ನಾವು ಮಾತನಾಡಿಸಿದರೆ ಅವರು ತಪ್ಪದೆ ಮಾತನಾಡುತ್ತಾರೆ.
ಗೂಗಲ್ ಗುರುಗಳು ಇದ್ದು ಕೂಡ ಕೆಲವೊಮ್ಮೆ ವಿಳಾಸ ಹೆಚ್ಚು ಕಡಿಮೆಯಾದಾಗ ದಾರಿಯಲ್ಲಿ ಯಾರನ್ನಾದರೂ ಕೇಳಿದರೆ ಅವರು ಸರಿಯಾದ ವಿಳಾಸಕ್ಕೆ ತಲುಪಿಸಿ ಹೋಗುತ್ತಾರೆ. ಭಾಷೆ ಇಲ್ಲಿ ಬಹು ದೊಡ್ಡ ಸಮಸ್ಯೆ. ಆದರೂ ಯಾರೊಬ್ಬರೂ ಭಾಷೆಯ ಕಾರಣ ಹೇಳಿ ಗೊತ್ತಿಲ್ಲ ಎಂದು ಹೇಳಿ ಹೋಗಿಲ್ಲ. ಮೊಬೈಲ್ ತೆಗೆದು ಟ್ರಾನ್ಸ್ಲೆಟರ್ ಆಪ್ ಬಳಸಿ ಸಂವಹನ ಮುಂದುವರಿಸುತ್ತಾರೆ. ಕೆಲವೊಂದು ವಿಷಯದಲ್ಲಿ ಜಪಾನಿಗರನ್ನು ಅದೆಷ್ಟು ಹೊಗಳಿದರೂ ಅದು ಕಡಿಮೆ ಎಂದು ನನ್ನ ಭಾವನೆ.
ಹೀಗೆಂದ ಮಾತ್ರಕ್ಕೆ ಜಪಾನೀಯರನ್ನು ಸುಲಭವಾಗಿ ಒಲಿಸಿಕೊಳ್ಳಬಹುದು ಅದರಲ್ಲೂ ವ್ಯಾಪಾರದ ವಿಷಯದಲ್ಲಿ ಎಂದುಕೊಂಡರೆ ಅದು ಸಾಧ್ಯವಿಲ್ಲದ ಮಾತು. ಜಗತ್ತಿನ ಯಾವ ಸಂಸ್ಥೆಗಳೇ ಇರಲಿ ಜಪಾನ್ ದೇಶದಲ್ಲಿ ನೆಲೆ ನಿಂತು ವ್ಯಾಪಾರ ಮಾಡಿ ಸೈ ಎನ್ನಿಸಿಕೊಳ್ಳುವುದು ಸುಲಭದ ವಿಷಯವಲ್ಲ. ಇದಕ್ಕೆ ಕಾರಣ ಜಪಾನೀಯರ ಮೂಲಗುಣ. ವಸ್ತು ಅಥವಾ ವ್ಯಕ್ತಿ, ವಿಷಯ ಯಾವುದೇ ಇರಲಿ ಅವರಿಗೆ ನಂಬಿಕೆ ಬಾರದ ಹೊರತು ಅವರು ವ್ಯವಹಾರ ಶುರು ಮಾಡುವುದಿಲ್ಲ. ಟ್ರಸ್ಟ್ ಎನ್ನುವ ಪದಕ್ಕೆ ಪರ್ಯಾಯ ಜಪಾನ್.
ತಮ್ಮ ವರ್ಕ್ ಎಥಿಕ್ಸ್ ಮತ್ತು ಸ್ಟ್ಯಾಂಡರ್ಡ್ ಗಳಿಗೆ ಸರಿಯಾಗಿದ್ದರೆ ಮಾತ್ರ ವ್ಯಾಪಾರ, ವಹಿವಾಟು ಶುರು ಮಾಡುತ್ತಾರೆ. ವ್ಯವಹಾರದಲ್ಲಿ ಟ್ರಸ್ಟ್ ಇಶ್ಯೂ ಬಂದರೆ ಅಲ್ಲಿಗೆ ಮುಗಿಯಿತು. ಮುಂದೆಂದೂ ಜಪಾನಿಯರು ಅವರೊಂದಿಗೆ ವ್ಯವಹರಿಸುವುದಿಲ್ಲ. ದೊಡ್ಡ ಸಂಸ್ಥೆಗಳ ಕಥೆಯಿದು ಎಂದು ನೀವು ಅಂದು ಕೊಂಡರೆ ಅದು ತಪ್ಪು. ಸಾಮಾನ್ಯ ಗ್ರಾಹಕ ಕೂಡ ವ್ಯವಹರಿಸುವುದು ನಂಬಿಕೆಯ ಆಧಾರದ ಮೇಲೆ ಮಾತ್ರ! ವಿದೇಶಿ ಸಂಸ್ಥೆಯಾಗಲಿ ಅಥಾವ ಜಪಾನಿ ಸಂಸ್ಥೆಯಾಗಲಿ ಗ್ರಾಹಕನ ನಂಬಿಕೆಯನ್ನು ಮುರಿದರೆ, ಮುಂದೆಂದೂ ಗ್ರಾಹಕ ಆ ಸಂಸ್ಥೆಯೊಂದಿಗೆ ವ್ಯವಹರಿಸುವುದಿಲ್ಲ. ಜಪಾನ್ ದೇಶದಲ್ಲಿ ನಂಬಿಕೆಗೆ ಪ್ರಥಮ ಸ್ಥಾನ. ಇದರೊಂದಿಗೆ ಇನ್ನೊಂದು ಅಂಶ ಕೂಡ ಪ್ರಥಮ ಸ್ಥಾನಕ್ಕೆ ಪೈಪೋಟಿ ನೀಡುತ್ತದೆ. ಮುಕ್ಕಾಲು ಪಾಲು ಎರಡೂ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಆ ಇನ್ನೊಂದು ಅಂಶ ಗುಣಮಟ್ಟ. ಪದಾರ್ಥವಿರಲಿ ಅಥವಾ ನೀಡುವ ಸೇವೆ ಎರಡರಲ್ಲೂ ಅತ್ಯುತ್ತಮ ಗುಣಮಟ್ಟ ಕಾಯ್ದು ಕೊಳ್ಳುವುದು ಜಪಾನೀಯರ ಇನ್ನೊಂದು ಮೂಲಗುಣ.
ಜಪಾನ್ ದೇಶದಲ್ಲಿ ಬಹುದೊಡ್ಡ ಬಹುರಾಷ್ಟ್ರೀಯ ಸಂಸ್ಥೆಗಳು ನೆಲೆ ನಿಲ್ಲಲು ಸಾಧ್ಯವಾಗದೆ ಇರುವುದು ಸರಕಾರದ ನಿಬಂಧನೆಗಳಿಂದ ಅಲ್ಲವೇ ಅಲ್ಲ. ಆದರೆ ಅಲ್ಲಿನ ಸಮಾಜ ಮತ್ತು ಜನರ ನಿರೀಕ್ಷಿತ ಮಟ್ಟಕ್ಕೆ ಸಂಸ್ಥೆಗಳು ಸೇವೆ ನೀಡುವುದರಲ್ಲಿ ಎಡವಿರುವ ಕಾರಣದಿಂದ ಮಾತ್ರ! ಜಪಾನ್ ಹನ್ನೆರೆಡೂವರೆ ಕೋಟಿ ಜನಸಂಖ್ಯೆ ಇಟ್ಟು ಕೊಂಡು ನಮ್ಮ ರಾಜಸ್ಥಾನಕ್ಕಿಂತ ಚೂರು ಜಾಸ್ತಿ ವಿಸ್ತೀರ್ಣ ಹೊಂದಿ, ಅದರಲ್ಲೂ 80 ಪ್ರತಿಶತ ಜಾಗ ಬೆಟ್ಟಗುಡ್ಡಗಳಿಂದ ಆವೃತವಾಗಿ ಕೇವಲ 14 ರಿಂದ 15 ಪ್ರತಿಶತ ಜಾಗವನ್ನು ಮಾತ್ರ ವಾಸಿಸಲು ಯೋಗ್ಯವನ್ನಾಗಿ ಪಡೆದುಕೊಂಡು ವಿಶ್ವಕ್ಕೆ ಸವಾಲಾಗಿ, ಅಚ್ಚರಿಯಾಗಿ ಬೆಳೆದು ನಿಂತಿದೆ.
ಜಗತ್ತಿಗೆ ಅದು ನೀಡಿರುವ ಸಂಸ್ಥೆಗಳ ಪಟ್ಟಿ ದೊಡ್ಡದು. ತನ್ನೊಳಗೆ ಅದು ಬಿಟ್ಟು ಕೊಂಡಿರುವ ವಿದೇಶಿ ಸಂಸ್ಥೆಗಳ ಪಟ್ಟಿ ಸಣ್ಣದು ಅದಕ್ಕೆ ಕಾರಣ ಆಗಲೇ ವಿವರಿಸಿಯಾಗಿದೆ. ವಿದೇಶಿ ಸಂಸ್ಥೆಗಳು ಮೊದಲಿಗೆ ಜಪಾನಿಯರ ನಂಬಿಕೆ ಗಳಿಸಿಕೊಳ್ಳಬೇಕು. ಇಂದಿಗೂ ಜಪಾನ್ ದೇಶದ 69 ಪ್ರತಿಶತ ಜನ ತಾವು ನಂಬಿರುವ ಬ್ರಾಂಡ್ ಬಿಟ್ಟು ಬೇರೆ ಕೊಳ್ಳುವುದಿಲ್ಲ. Brand loyalty ಎನ್ನುವುದು ಇಲ್ಲಿ ಅತಿ ಹೆಚ್ಚು. ಇದರ ಜೊತೆಗೆ ಜಪಾನಿಯರ ಗುಣಮಟ್ಟ ಮ್ಯಾಚ್ ಮಾಡಬೇಕು. ಇಂದಿನ ದಿನದಲ್ಲಿ ಜಪಾನ್ ದೇಶದಲ್ಲಿ ಪರವಾಗಿಲ್ಲ ಎನ್ನುವ ಮಟ್ಟಿನ ಜಾಗ ಕಂಡು ಕೊಂಡಿರುವ ಸಂಸ್ಥೆಗಳಲ್ಲಿ ಆಪಲ್ ಮತ್ತು ಇಕೆಯ, ಸ್ಟಾರ್ ಬಕ್ಸ್ ಪ್ರಮುಖವಾಗಿವೆ. ನ್ಯೂ ಬ್ಯಾಲೆನ್ಸ್ ಎನ್ನುವ ಪಾದರಕ್ಷೆ ತಯಾರಿಸುವ ಸಂಸ್ಥೆ ಕೂಡ ಇಲ್ಲಿದೆ.
ಇವುಗಳು ಇಲ್ಲಿ ನೆಲೆ ನಿಲ್ಲಲು ಕಾರಣ ಅವುಗಳು ಜಪಾನ್ ದೇಶದ ನೇಟಿವಿಟಿಗೆ ಹೊಂದಿಕೊಂಡಿವೆ. ನ್ಯೂ ಬ್ಯಾಲೆನ್ಸ್ ಇಲ್ಲಿನ ಸಂಸ್ಥೆಗಳೊಂದಿಗೆ ಸಹಯೋಗದ ಸಹಾಯದಿಂದ ಇಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯವಾಗಿದೆ. ಹಾಗೆಯೇ ಇಲ್ಲಿನ ಸುತ್ತಾಟದಲ್ಲಿ ಕಣ್ಣಿಗೆ ಬಿದ್ದ ಅಂಶವೆಂದರೆ ಸ್ಟಾರ್ ಬಕ್ಸ್ ಕಾಫಿ ಜಗತ್ತಿನ ಬೇರೆಲ್ಲಾ ಕಡೆಯಲ್ಲಿ ಸಿಗುವ ಕಾಫಿ ರುಚಿಯಂತೆ ಇರದೆ ಅವರು ಜಪಾನೀಯರ ಕಾಫಿ ರುಚಿಗೆ ತಕ್ಕಂತೆ ಬದಲಾಗಿರುವುದು! ಅದೊಂದೇ ಅಲ್ಲದೆ ತಮ್ಮ Coffee shop ಹೀಗೆ ಇರಬೇಕು ಎನ್ನುವ ಫಾರ್ಮಟ್ನಲ್ಲಿ ಕೂಡ ಇಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜಗತ್ತಿನೆಲ್ಲೆಡೆ ಸ್ಟಾರ್ ಬಕ್ಸ್ ಎಂದರೆ ಅದೇನೋ ವಿಶೇಷ ಎನ್ನುವಂತೆ ಬಿಂಬಿಸಲಾಗುತ್ತದೆ. ಹೀಗಾಗಿ ವಿಭಿನ್ನವಾಗಿರುವ ಪ್ರಯತ್ನಗಳೂ ಅಲ್ಲಿರುತ್ತವೆ. ಜಪಾನ್ ನಲ್ಲಿ ಮಾತ್ರ ಅದು ಹತ್ತು ಕಾಫಿ ಶಾಪ್ನಲ್ಲಿ ಹನ್ನೊಂದನೆಯದು ಅಷ್ಟೇ. ಅದಕ್ಕೆ ವಿಶೇಷ ಸ್ಥಾನಮಾನ ಇಲ್ಲಿಲ್ಲ.
ಡೊಕೊಮೊ ಎನ್ನುವುದು ಮೊಬೈಲ್ ನೆಟ್ವರ್ಕ್ ಆಪರೇಟಿಂಗ್ ಸಂಸ್ಥೆ. ಜಪಾನ್ ದೇಶದ 41 ಪ್ರತಿಶತ ಮಾರುಕಟ್ಟೆಯ ಹಿಡಿತವನ್ನು ಇದು ಹೊಂದಿದೆ. ನಿಮಗೆಲ್ಲಾ ನೆನಪಿರಬಹುದು ಟಾಟಾ ಗ್ರೂಪ್ ಜೊತೆಯಲ್ಲಿ ಇದು ಭಾರತಕ್ಕೂ ಕಾಲಿಟ್ಟಿತ್ತು. ಟಾಟಾ ಡೊಕೊಮೊ ಎನ್ನುವ ಹೆಸರಿನಲ್ಲಿ ಇಲ್ಲಿ ಕೂಡ ಒಂದಷ್ಟು ವರ್ಷ ಸೇವೆಯನ್ನು ನೀಡಿತ್ತು. ಇದರ ಜೊತೆಗೆ ಸಾಫ್ಟ್ ಬ್ಯಾಂಕ್, au, ರಿಕ್ರುಯ್ಟ್, ಸುಂತೋರಿ, ಜಪಾನ್ ಏರ್ಲೈನ್ಸ್, ನಿಸ್ಸಿನಿ ಸಂಸ್ಥೆಗಳು ಜಪಾನ್ ಜನರ ನಂಬಿಕೆಯನ್ನು ಗೆದ್ದಿರುವ ಲೋಕಲ್ ಸಂಸ್ಥೆಗಳು.
ಪುಟಾಣಿ ಜಪಾನ್ ವಿಶ್ವ ಪ್ರಸಿದ್ಧ ಸಂಸ್ಥೆಗಳನ್ನು ಜಗತ್ತಿಗೆ ನೀಡಿದೆ. ಜಪಾನ್ ತಂತ್ರಜ್ಞಾನ ಎಂದರೆ ಜಗತ್ತು ಅದನ್ನು ನಂಬುತ್ತದೆ. ಆ ಮಟ್ಟಿನ ವಿಶ್ವಾಸವನ್ನು ಅದು ಪಡೆದುಕೊಂಡಿದೆ. ಈ ರೀತಿಯ ವಿಶ್ವ ಪ್ರಸಿದ್ಧ ಜಪಾನಿ ಸಂಸ್ಥೆಗಳ ಹೆಸರಲ್ಲಿ ಮೊದಲಿಗೆ ಬರುವುದು Toyata. ಇದೊಂದು ಕಾರು ಉತ್ಪಾದಕ ಸಂಸ್ಥೆಯಾಗಿದ್ದು , ಅಮೆರಿಕಾದ ಹಲವಾರು ದೈತ್ಯ ಕಾರು ಉತ್ಪಾದಕ ಸಂಸ್ಥೆಗಳನ್ನು ಹಿಂದಿಕ್ಕಿ ವಿಶ್ವಾಸ ನಂಬರ್ ಒನ್ ಸಂಸ್ಥೆ ಎನ್ನುವ ಹೆಗ್ಗಳಿಕೆ ಕೂಡ ಗಳಿಸಿಕೊಂಡಿತ್ತು. ಇಂದಿಗೆ ಟೆಸ್ಲಾ ಆಗಮನದಿಂದ ಟೊಯೋಟಾ ವಿಶ್ವ ranking ನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಅಚ್ಚರಿಯ ವಿಷಯವೆಂದರೆ ಹೋಂಡಾ ಎನ್ನುವ ಇನ್ನೊಂದು ಆಟೋಮೊಬೈಲ್ ದೈತ್ಯ ಸಂಸ್ಥೆ ಕೂಡ ಜಪಾನ್ ದೇಶಕ್ಕೆ ಸೇರಿದ್ದು. ನಿಸ್ಸಾನ್ ಎನ್ನುವ ಇನ್ನೊಂದು ಸಂಸ್ಥೆ ಕೂಡ ಆಟೋಮೊಬೈಲ್ ಕ್ಷೇತ್ರಕ್ಕೆ ಸೇರಿದೆ.
ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದಕ ಕ್ಯಾನನ್ (CANON) ಸೊನಿ (SONY ) ಮತ್ತು ಪ್ಯಾನಸೋನಿಕ್ (PANASONIC ) ಸಂಸ್ಥೆಗಳ ಹೆಸರನ್ನು ಕೇಳದವರು ಯಾರಿದ್ದಾರೆ ? ಇವೆಲ್ಲವೂ ತಮ್ಮ ಗುಣಮಟ್ಟ ಮತ್ತು ದೀರ್ಘ ಬಾಳಿಕೆಯ ಕಾರಣ ವಿಶ್ವದಲ್ಲಿ ಮನೆಮಾತಾಗಿವೆ. ಇವುಗಳಷ್ಟು ಪ್ರಸಿದ್ಧವಲ್ಲದ ಆದರೆ ಜಗತ್ತಿನ ಬೇರೆ ದೇಶಗಳಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಗಳ ದೊಡ್ಡ ಪಟ್ಟಿ ಜಪಾನ್ ದೇಶದಲ್ಲಿದೆ.
ಬೇರೆಯವರು ಜಪಾನ್ನಲ್ಲಿ ನೆಲೆ ನಿಲ್ಲುವುದು ಸುಲಭದ ಮಾತಲ್ಲ. ಆದರೆ ಜಪಾನ್ ಸುಲಭವಾಗಿ ಬೇರೆ ದೇಶದಲ್ಲಿ ತನ್ನ ಸಂಸ್ಥೆಯನ್ನು ವಿಜಯ ಪತಾಕೆಯತ್ತ ಕರೆದೊಯ್ಯುತ್ತದೆ ಎನ್ನುವ ಮಾತಿದೆ. ಅದು ನಿಜವೂ ಹೌದು. ಜಪಾನ್ ಸಂಸ್ಥೆಗಳಲ್ಲ ನಮ್ಮ ಭಾರತೀಯ ಸಂಸ್ಥೆಗಳು ಕೂಡ ಜಾಗತಿಕ ಮಟ್ಟದಲ್ಲಿ ವಿಜಯ ಸಾಧಿಸಬಹುದು. ಜಪಾನ್ ಸಂಸ್ಥೆಗಳ ಜಯಕ್ಕೆ ಕಾರಣವಾದ ಅಂಶಗಳನ್ನು ನಾವು ಅನುಕರಿಸಿದರೆ. ಅಷ್ಟೇ ಶ್ರದ್ದೆ ಮತ್ತು ಉತ್ಸಾಹ ನಮ್ಮದಾದರೆ ಎಲ್ಲವೂ ಸಾಧ್ಯ. ಕೆಳಗಿನ ಸಾಲುಗಳಲಿನ ಅಂಶಗಳನ್ನು ಕೇವಲ ದೊಡ್ಡ ಸಂಸ್ಥೆಗಳು ಮಾತ್ರ ಅಡಾಪ್ಟ್ ಮಾಡಿಕೊಳ್ಳಬೇಕು ಎಂದಿಲ್ಲ. ಸಣ್ಣ ಉದ್ಯಮಿಗಳು ಕೂಡ ಇದನ್ನು ಅಳವಡಿಸಿಕೊಂಡರೆ ಜಯದ ಹಾದಿ ಸುಲಭವಾಗುತ್ತದೆ.
ಜಪಾನ್ ದೇಶದ ಸಂಸ್ಥೆಗಳು ವಿಶ್ವ ಪ್ರಸಿದ್ದಿ ಪಡೆದು ಜಾಗಾತಿಕ ಮಟ್ಟದ ವ್ಯಾಪಾರದಲ್ಲಿ ಉತ್ತಮ ಸ್ಥಾನಗಳಿಸಲು ಅವರು ಪಾಲಿಸುವ ಅಂಶಗಳು ಕಾರಣ, ಅವುಗಳಲ್ಲಿ ಪ್ರಮುಖವಾಗಿ:
ಗ್ರೌಂಡ್ ವರ್ಕ್ ಸರಿಯಾಗಿ ಮಾಡಿರಬೇಕು: ಯಾವುದೇ ದೇಶದಲ್ಲಿ ವ್ಯಾಪಾರ ಮಾಡುವ ಮುನ್ನ ಆ ದೇಶದ ಬಗ್ಗೆ, ಜನರ ಬಗ್ಗೆ, ಅವರ ನಂಬಿಕೆ, ಆಚಾರ ವಿಚಾರಗಳ ಬಗ್ಗೆ ಬಹಳಷ್ಟು ಮಾಹಿತಿಯನ್ನು ಕಲೆ ಹಾಕಬೇಕು. ಯಾವುದೇ ಕಾರಣಕ್ಕೂ ಸ್ಥಳೀಯ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ನಡವಳಿಕೆ ಇರಬಾರದು. ಹೀಗಾಗಿ ಮೂಲಭೂತ ಅಂಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
ಲೋಕಲ್ ಜನರ ಸಮಸ್ಯೆಗಳಿಗೆ ಪರಿಹಾರ ಹುಡಕುವ ಕೆಲಸ ಮಾಡಬೇಕು: ಅವರಿಗೆ ಅವಶ್ಯಕತೆ ಇರುವ ಪದಾರ್ಥ ಅಥವಾ ಸೇವೆಯನ್ನು ನೀಡುವುದಕ್ಕೆ ಪ್ರಾರಂಭಿಸಿದರೆ ಗೆಲುವು ಸರಳವಾಗುತ್ತದೆ.
ಸ್ಥಳೀಯ ಸಂಸ್ಥೆಗಳೊಂದಿಗೆ ಕೋಲಾಬ್ರೇಷನ್ ಬಹಳ ಮುಖ್ಯ: ಸ್ಥಳೀಯ ಜನರಲ್ಲಿ ಒಂದು ಮಟ್ಟದ ನಂಬಿಕೆ ಗಳಿಸಿರುವ ಸ್ಥಳೀಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಅವರ ಸಹಯೋಗದಲ್ಲಿ ಕೆಲಸ ಮಾಡುವುದು ವೇಗವಾಗಿ ಬೆಳೆಯಲು, ವ್ಯಾಪಾರ ವೃದ್ಧಿಸಲು ಸಹಕಾರಿ.
ಉತ್ತಮ ಗುಣಮಟ್ಟದ ಪದಾರ್ಥಗಳನ್ನು ನೀಡುವುದು: ಮಾರುಕಟ್ಟೆಯಲ್ಲಿ ಈಗಾಗಲೇ ಲಬ್ಯವಿರುವ ಪದಾರ್ಥಕ್ಕಿಂತ ಉತ್ತಮ ಗುಣಮಟ್ಟದ ಪದಾರ್ಥ ನೀಡಿದರೆ ಮತ್ತು ಹೆಚ್ಚು ಬಾಳಿಕೆ ಬರುವಂತಿದ್ದರೆ ಆಗ ಜನ ಸಹಜವಾಗಿ ಖರೀದಿಗೆ ಮುಂದಾಗುತ್ತಾರೆ.
ವಿಭಿನ್ನವಾಗಿದ್ದೂ ಕೂಡ ಜನ ಸಾಮಾನ್ಯನ ಕೈಗೆಟುಕುವ ಬೆಲೆ ಇರಬೇಕು: ಉತ್ತಮ ಗುಣಮಟ್ಟ ನೀಡಬೇಕು ನಿಜ. ಅದೇ ಸಮಯದಲ್ಲಿ ಯಾವ ದೇಶದಲ್ಲಿ ವ್ಯಾಪಾರ ಮಾಡುತ್ತೇವೆ ಆ ದೇಶದ ಜನ ಸಾಮಾನ್ಯನ ಕೈಗೆಟುಕುವ ಬೆಲೆಯಲ್ಲಿ ಕೂಡ ಪದಾರ್ಥವಿರಬೇಕು. ಬೆಲೆ ಹೆಚ್ಚಾದರೆ ಪದಾರ್ಥದ ಮಾರಾಟ ಕುಂಠಿತವಾಗುತ್ತದೆ.
ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತ, ಪದಾರ್ಥದಲ್ಲಿ, ನೀಡುವ ಸೇವೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತ ಸಾಗಬೇಕು.
ಹೋಗುವ ಮುನ್ನ: ಜಪಾನೀಯರು ವಿಶ್ವದ ಮನೆಮಾತಾಗಲು ಕಾರಣ ಅವರ ಜೀವನಶೈಲಿ. ಹೆಚ್ಚು ಕೆಲಸ, ಕಡಿಮೆ ಮಾತು ಅವರ ಧೋರಣೆ. ಪದಾರ್ಥದಲ್ಲಿ ತೊಂದರೆಯಿದೆ ಎಂದರೆ ಪದಾರ್ಥವನ್ನು ವಾಪಸ್ಸು ಪಡೆದು ಹೊಸದು ನೀಡುವ ದಾಷ್ಟಿಕತೆ ಅವರಿಗೆ 'ಲೆಂಜೆನ್ಡ್; ಪಟ್ಟವನ್ನು ನೀಡಿದೆ. ಮೇಲೆ ಹೇಳಿದ ಅಂಶಗಳನ್ನು ನಾವು ಕೂಡ ಪಾಲಿಸಲು ಶುರು ಮಾಡಿದರೆ ಐದಾರು ವರ್ಷದಲ್ಲಿ ಭಾರತವೂ ಅಂತಹ ಪಟ್ಟವನ್ನು ಪಡೆಯಬಹುದು. ಅದಕ್ಕೆ ಬೇಕಾದ ಮಾನಸಿಕ ಸಿದ್ದತೆಗೆ ನಾವು ಸಿದ್ಧವಿದ್ದೇವೆಯೇ?
Advertisement