
ಜಪಾನ್ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿ ಆ ದೇಶದ ಜನರ ಶ್ರದ್ದೆ, ದೇಶಭಕ್ತಿ, ಅವಿರತ ದುಡಿಮೆ ನೆನಪಾಗುತ್ತದೆ. ಸಮಯಪಾಲನೆ ಎನ್ನುವ ಇನ್ನೊಂದು ಅಂಶ ಜಗತ್ತನ್ನು ಅಚ್ಚರಿಗೆ ದೂಡುತ್ತದೆ. ಹತ್ತು ದಿನದ ಜಪಾನ್ ಪ್ರವಾಸದಲ್ಲಿ ಕಂಡದ್ದು ಕೂಡ ಇದೆ. ಅಲ್ಲಿನ ಮೆಟ್ರೋ ಇರಬಹುದು, ಶಿನ್ಕನ್ಸೆನ್ (bullet train) ಇರಬಹುದು, ಹೇಳಿದ ಸಮಯಕ್ಕೆ ಸರಿಯಾಗಿ ಸರಿಯಾದ ಪ್ಲಾಟಫಾರ್ಮ್ ನಲ್ಲಿ ನಿಗದಿತ ಸೆಕೆಂಡಿಗೆ ತೆರೆದುಕೊಳ್ಳುತ್ತವೆ. ಒಮ್ಮೆಯಾದರೂ ಹೇಳಿದ ಸಮಯಕ್ಕಿಂತ ಏರುಪೇರಾಗುತ್ತದೇನೋ ಎಂದು ಕಾದದ್ದು ಲಾಭ, ಅವರು ಮಾತ್ರ ಒಂದು ಸೆಕೆಂಡು ಅತ್ತಿತ್ತ ಮಾಡುತ್ತಿರಲಿಲ್ಲ. ಈ ಪ್ರಿಡಿಕ್ಟಬಿಲಿಟಿ ಪ್ರವಾಸವನ್ನು ಪ್ರಯಾಸ ಇಲ್ಲದಂತೆ ಮಾಡುತ್ತವೆ. ಹೇಳಿದ ಸಮಯಕ್ಕೆ ಜಪಾನಿನ ಯಾವುದೇ ಸ್ಥಳಕ್ಕೂ ತಲುಪಬಹುದು ಎನ್ನುವ ಭರವಸೆಯನ್ನು ಇದು ನೀಡುತ್ತದೆ.
ಇನ್ನು ಇಲ್ಲಿನ ಜನರ ಸ್ವಚ್ಛತೆಯ ಬಗ್ಗೆಯೇ ದೊಡ್ಡ ಪುಸ್ತಕ ಬರೆದು ಬಿಡಬಹುದು. ಆದರೆ ಈ ಲೇಖನದ ಉದ್ದೇಶ ಅದಲ್ಲ, ಜಪಾನ್ ದೇಶದ ಗೊತ್ತಿರುವ ವಿಷಯಗಳ ಬಗ್ಗೆ ಹಾಡಿ ಹೊಗಳುವುದು ಕೂಡ ಅಲ್ಲ. ಬದಲಿಗೆ ಅಲ್ಲಿ ಕಂಡ ಒಂದು ಅದ್ಬುತ ವ್ಯಾಪಾರವನ್ನು ಹಣಕ್ಲಾಸು ಓದುಗರಿಗೆ ತಲುಪಿಸುವುದು. ಈ ವ್ಯಾಪಾರಕ್ಕೆ ಖಂಡಿತ ಭಾರತದಲ್ಲೂ ಒಳ್ಳೆಯ ಮಾರುಕಟ್ಟೆ ಇದ್ದೆ ಇರುತ್ತದೆ. ಭಾರತದಲ್ಲಿ ಯಾವುದನ್ನೇ ಆಗಲಿ ಶುರು ಮಾಡುವವರೆಗೆ ಮಾತ್ರ ಕಷ್ಟ. ಒಮ್ಮೆ ಅದು ಜನರಿಗೆ ಇಷ್ಟವಾದರೆ ಆ ವ್ಯಾಪಾರ ಅತ್ಯಂತ ವೇಗವಾಗಿ ಬೆಳೆಯುತ್ತದೆ. ಹತ್ತು , ಹದಿನೈದು ವರ್ಷದ ಕೆಳೆಗೆ ಜನ ಮನೆಯಲ್ಲಿ ಅಡುಗೆ ಕಡಿಮೆ ಮಾಡುತ್ತಾರೆ, ಹೆಚ್ಚು ತಮ್ಮ ಮೊಬೈಲ್ ಆಪ್ ಮೂಲಕ ಆರ್ಡರ್ ಮಾಡುತ್ತಾರೆ ಎಂದಿದ್ದರೆ ಅದನ್ನು ಯಾರೂ ನಂಬುತ್ತಿರಲಿಲ್ಲ. ಇಂದು ಸ್ವೀಗ್ಗಿ ಮತ್ತು ಝೋಮೋಟೋ ಬೆಳೆಯುತ್ತಿರುವ ವೇಗ ಅಚ್ಚರಿ ಹುಟ್ಟಿಸುತ್ತದೆ. ಅದೇ ರೀತಿ ಈ ಸೇವೆಯನ್ನು ಕೂಡ ಜನಪ್ರಿಯ ಗೊಳಿಸಬಹುದು.
ಜಪಾನ್ ದೇಶದ ರಾಜಧಾನಿ ಟೋಕಿಯೋ ದಿಂದ ಕ್ಯೋಟೋ ಎನ್ನುವ ಚಾರಿತ್ರಿಕ ನಗರಕ್ಕೆ ಬುಲೆಟ್ ಟ್ರೈನ್ ಹಿಡಿದು ಪ್ರಯಾಣ ಮಾಡಲು ರೈಲ್ವೆ ನಿಲ್ದಾಣಕ್ಕೆ ಬಂದಾಗ ಅಲ್ಲಿನ ಸ್ಥಳೀಯರನ್ನು ನೋಡಿ ಸ್ವಲ್ಪ ಆಶ್ಚರ್ಯವಾಯ್ತು. ಎಲ್ಲರೂ ಕೈ ಬೀಸಿ ಕೊಂಡು ಅಥವಾ ಕೇವಲ ಹ್ಯಾಂಡ್ ಬ್ಯಾಗ್ ಕೈಲಿಡಿದು ಪ್ರಯಾಣ ಮಾಡುತ್ತಿದ್ದರು. ನಮ್ಮಲ್ಲಿ ಪಕ್ಕದ ಊರಿಗೆ ಹೊರಟರು ಕೂಡ ದೊಡ್ಡ ಎರಡು ಬ್ಯಾಗ್ ಕೈಯಲ್ಲಿ ಹಿಡಿದು ಹೋಗುವುದು ಸಾಮಾನ್ಯ. ಇವರಲ್ಲಿ ಅದೇಕಿಲ್ಲ? ಎನ್ನುವ ಸಹಜ ಪ್ರಶ್ನೆ ಮೂಡಿತ್ತು. ನಾವು ತಂಗಿದ್ದ ಹೋಟೆಲ್ನಲ್ಲಿ ಕೂಡ ನೀವು ಕ್ಯೋಟೋ ನಗರದ ಯಾವ ಹೋಟೆಲ್ನಲ್ಲಿ ತಂಗಲಿದ್ದೀರಾ ಎನ್ನುವುದರ ಮಾಹಿತಿ ಕೊಟ್ಟರೆ ನಿಮ್ಮ ಲಗೇಜನ್ನು ಆ ಹೋಟೆಲ್ ಗೆ ತಲುಪಿಸಿತ್ತೇವೆ ಎನ್ನುವ ಆಫರ್ ನೀಡಿದ್ದರು. 1200 ಯೆನ್ ನಿಂದ 2500 ಯೆನ್ ವರೆಗೆ ಅದಕ್ಕೆ ಶುಲ್ಕವಾಗುತ್ತದೆ ಎಂದಿದ್ದರು. ಸಾಮಾನ್ಯವಾಗಿ ಎಲ್ಲಾ ಬ್ಯಾಗುಗಳು ಕೂಡ ಎರಡೂವರೆ ಸಾವಿರ ಯೆನ್ ನೊಳಗೆ ವರ್ಗಾವಣೆಯಾಗುತ್ತವೆ. ಬ್ಯಾಗ್ ನ ಆಕಾರ ತೀರಾ ದೊಡ್ಡದಾಗಿದ್ದರೆ ಆಗ ಅದಕ್ಕೆ ಬೇರೆ ಶುಲ್ಕವಿರುತ್ತದೆ.
ಸಾಮಾನ್ಯವಾಗಿ ಇಲ್ಲಿನ ಮೆಟ್ರೋ ಅಥವಾ ಬುಲೆಟ್ ಟ್ರೈನ್ಗಳು 30 ಸೆಕೆಂಡು ನಿಲ್ಲುತ್ತವೆ. ಕೆಲವೊಂದು ಬುಲೆಟ್ ಟ್ರೈನ್ ಎರಡರಿಂದ ಮೂರು ನಿಮಿಷ ಕೂಡ ನಿಲ್ಲುತ್ತವೆ. ಆ ಸಮಯಕ್ಕೆ ತಕ್ಕಂತೆ ಇಳಿಯುವ ಜನರಿರುತ್ತಾರೆ. ಇಳಿಯುವ ಜನರೆಲ್ಲಾ ಇಳಿದ ಮೇಲೆ ಹತ್ತಬೇಕು. ಒಬ್ಬರ ಮೇಲೆ ಒಬ್ಬರು ಬೀಳುವಂತಿಲ್ಲ , ಸಾಲಿನಲ್ಲಿ ನಿಲ್ಲಬೇಕು. ಇಷ್ಟೆಲ್ಲಾ ನಿಗದಿತ ಸಮಯದಲ್ಲಿ ಆಗಬೇಕು. ಹೀಗಾಗಿ ಇಲ್ಲಿನ ಜನ ತಮ್ಮ ದೊಡ್ಡ ಬ್ಯಾಗುಗಳನ್ನು ತಾವು ಹೋಗಬೇಕಾಗಿರುವ ಸ್ಥಳಕ್ಕೆ ಟಾಕುಹೈಬಿನ್ ಅಂದರೆ ಡೋರ್ ಟು ಡೋರ್ ಡೆಲಿವೆರಿ ಸರ್ವಿಸ್ ಬಳಸಿ ಕಳುಹಿಸಿ ಬಿಡುತ್ತಾರೆ. ಟ್ರೈನ್ನಲ್ಲಿ ಕೂಡ ಇಂತಹ ಲಗೇಜ್ ಒಯ್ಯಬಹುದು. ಅದನ್ನು ಇಡಲು ಕೂಡ ಪ್ರತ್ಯೇಕ ಸ್ಥಳವಿರುತ್ತದೆ. ಆದರೆ ಅಲ್ಲಿ ಇಡಲು ಕೂಡ ಮುಂಗಡ ಬುಕಿಂಗ್ ಮಾಡಿ ಅದಕ್ಕೆ ಕೂಡ ಹಣವನ್ನು ಪಾವತಿಸಬೇಕು. ಈ ಎಲ್ಲಾ ರಗಳೆ ಬೇಡ ಎಂದು ಈ ಸೇವೆಯನ್ನು ಜನ ಬಳಸುತ್ತಾರೆ.
ಇದು ಬಹಳ ಸರಳವಾಗಿ ಕಾರ್ಯ ನಿರ್ವಹಿಸುತ್ತದೆ. ನಮ್ಮ ಕೊರಿಯರ್ ಸೇವೆಯಂತೆ ಇದು ಬಹಳ ಕಡಿಮೆ ಸಮಯ ಮತ್ತು ಫಾರ್ಮಾಲಿಟಿಸ್ ನಲ್ಲಿ ಮುಗಿಯುತ್ತದೆ. ಡೋರ್ ಟು ಡೋರ್ ಸೇವೆಯನ್ನು ನೀಡುವ ಹಲವಾರು ಸಂಸ್ಥೆಗಳು ಇಲ್ಲಿವೆ. ಯಮತೋ ಎನ್ನುವ ಸಂಸ್ಥೆ ಈ ಸೇವೆಯನ್ನು ನೀಡುವ ಅಗ್ರಗಣ್ಯ ಸಂಸ್ಥೆಯಾಗಿದೆ. ಈ ವ್ಯಾಪಾರದ 41 ಪ್ರತಿಶತ ಮಾರುಕಟ್ಟೆ ಹಿಡಿತವನ್ನು ಈ ಸಂಸ್ಥೆಯೊಂದೇ ಹೊಂದಿದೆ. ಮೊದಲೇ ಹೇಳಿದಂತೆ ಈ ರೀತಿಯ ಸೇವೆ ನೀಡುವ ಇತರ ಸಂಸ್ಥೆಗಳು ಕೂಡ ಇವೆ. ಸಾಮಾನ್ಯವಾಗಿ ಇಂತಹ ಸಂಸ್ಥೆಗಳು ತಮ್ಮ ವೇಗ, ನಿಖರತೆ ಮತ್ತು ಕಡಿಮೆ ಖರ್ಚಿನಲ್ಲಿ ಲಗೇಜು ಸಾಗಾಣಿಕೆಗೆ ಹೆಸರುವಾಸಿಯಾಗಿವೆ. ಇವುಗಳನ್ನು ನಾವು ರಸ್ತೆಯಲ್ಲಿ ಕಾಣುವ ಕನ್ವಿನಿಯೆನ್ಸ್ ಸ್ಟೋರ್ಸ್ ಗಳಲ್ಲಿ, ಹೋಟೆಲ್ ಫ್ರಂಟ್ ಡೆಸ್ಕ್ನಲ್ಲಿ, ರೈಲ್ವೆ ನಿಲ್ದಾಣದಲ್ಲಿ, ಏರ್ಪೋರ್ಟ್ಗಳಲ್ಲಿ ಹೀಗೆ ಜನ ಸಾಮಾನ್ಯ ಹೆಚ್ಚು ಕಷ್ಟಪಡದೆ ಆತ ನಡೆದಾಡುವ ಜಾಗಗಳಲ್ಲಿ ಇವುಗಳ ಸೆಂಟರ್ ಇರುತ್ತವೆ. ಅಲ್ಲಿ ಕಳುಹಿಸಬೇಕಾಗಿರುವ ಲಗೇಜು ತೋರಿಸಿ , ಒಂದು ಸಣ್ಣ ಅರ್ಜಿಯಲ್ಲಿ ಎಲ್ಲಿಗೆ ತಲುಪಿಸಬೇಕು ಎನ್ನುವ ವಿಳಾಸ, ಮತ್ತು ಕಳುಹಿಸುತ್ತಿರುವವರ ವಿಳಾಸ ತುಂಬಿ ನಿಗದಿತ ಹಣ ನೀಡಿದರೆ ಅಲ್ಲಿಗೆ ಮುಗಿಯಿತು. ಸಾಮಾನ್ಯವಾಗಿ ಅದೇ ದಿನದಲ್ಲಿ ತಲುಪುತ್ತದೆ. ಕೆಲವೊಮ್ಮೆ ತಲುಪಬೇಕಾದ ಜಾಗದ ಮೇಲೆ ಮರುದಿನ ತಲುಪುತ್ತದೆ.
ನೀವು ಪ್ರವಾಸಿಗರಾಗಿ ಹೋಗಿದ್ದರೆ ಇದು ಇನ್ನೂ ಸುಲಭ. ಮುಕ್ಕಾಲು ಪಾಲು ಎಲ್ಲಾ ಹೋಟೆಲ್ ಈ ಸೇವೆಯನ್ನು ನೀಡುತ್ತವೆ. ಅವರು ಕೂಡ ಇಂತಹ ಸೇವೆಯನ್ನು ನೀಡುವ ಸಂಸ್ಥೆಯ ಸಹಾಯ ಪಡೆಯುತ್ತಾರೆ. ಆದರೆ ಪ್ರವಾಸಿಗರಾಗಿ ನಮಗೆ ಹೆಚ್ಚು ತ್ರಾಸಾಗದಂತೆ ಮುಂದಿನ ನಮ್ಮ ಹೋಟೆಲ್ ಯಾವುದು ಎನ್ನುವುದನ್ನು ಕೇಳಿ ತಿಳಿದುಕೊಂಡು ಅವರೇ ಅದನ್ನು ಅಲ್ಲಿಗೆ ಕಳುಹಿಸುತ್ತಾರೆ. ನಿಗದಿತ ಹಣವನ್ನು ಕೊಟ್ಟರೆ ಸಾಕು. ಸಾಮಾನ್ಯವಾಗಿ ಹೋಟೆಲ್ಗಳು ಇದಕ್ಕೆ ಅವರು ಚಾರ್ಜ್ ಮಾಡುವುದಿಲ್ಲ. ಗ್ರಾಹಕರಿಗೆ ಇದನ್ನು ಸೇವೆಯ ರೂಪದಲ್ಲಿ ನೀಡುತ್ತಾರೆ. ನಾವು ನಮ್ಮ ಮುಂದಿನ ಹೋಟೆಲ್ ತಲುಪುದಕ್ಕೆ ಮುಂಚೆ ನಮ್ಮ ಬ್ಯಾಗ್ ನಮಗಾಗಿ ಕಾಯುತ್ತಿರುತ್ತದೆ.
ಜಪಾನ್ ದೇಶದ ಎಲ್ಲಾ ನಗರಗಳಲ್ಲೂ ಸೆವೆನ್ ಇಲೆವೆನ್ ಮತ್ತು ಫ್ಯಾಮಿಲಿ ಮಾರ್ಟ್ ಎನ್ನುವ ಕನ್ವಿನಿಯೆನ್ಸ್ ಸ್ಟೋರ್ಸ್ ಕಾಣಸಿಗುತ್ತವೆ. ಇಲ್ಲಿ ಕೂಡ ಈ ಸೇವೆಯನ್ನು ಪಡೆಯಬಹುದು. ಜಪಾನೀಯರು ಮನೆಯಿಂದ ಇದನ್ನು ಪಿಕ್ ಮಾಡಿಕೊಳ್ಳುವ ಸೌಲಭ್ಯವನ್ನು ಕೂಡ ಬಳಸಿಕೊಳ್ಳುತ್ತಾರೆ. ಏರ್ಪೋರ್ಟ್ ನಿಂದ ಇಳಿದ ತಕ್ಷಣ ಬ್ಯಾಗೇಜ್ ಪಡೆದುಕೊಂಡು ಹೊರಗೆ ಬಂದರೆ ಅಲ್ಲಿ ನೀವು ಈ ಸೇವೆ ನೀಡುವ ಸಂಸ್ಥೆಗಳ ಕೌಂಟರ್ ಕಾಣಬಹುದು. ಮನೆಯ ವಿಳಾಸ ಮತ್ತು ನಿಗದಿತ ಹಣ ನೀಡಿದರೆ ಸಾಕು. ಮನೆ ತಲುಪುವ ಮುನ್ನ ಅದು ನಮ್ಮ ಮನೆಯ ಬಾಗಿಲಿನಲ್ಲಿ ನಮಗಾಗಿ ಕಾಯುತ್ತಿರುತ್ತದೆ. ಬೇರೆ ದೇಶಕ್ಕೆ ಹೋಗುವಾಗ ಕೂಡ ಸರಿಯಾದ ಟರ್ಮಿನಲ್ ನಮೂದಿಸಿದರೆ ಸಾಕು ನಮ್ಮ ಲಗೇಜು ಮನೆಯಿಂದ ಏರ್ಪೋರ್ಟ್ ತಲುಪಿರುತ್ತದೆ.
ಒಟ್ಟಾರೆ ಪ್ರಯಾಣ ಎಲ್ಲಿಂದ ಎಲ್ಲಿಗೆ ಇರಲಿ ಇಲ್ಲಿನ ಜನ ಕೈ ಬೀಸಿ ಹೋಗುತ್ತಾರೆ. ಅವರ ಲಗೇಜು ತಲುಪಿಸುವ ಜವಾಬ್ದಾರಿ ಹೊರಲು ಸಾಕಷ್ಟು ಸಂಸ್ಥೆಗಳಿವೆ. ನಿಮಗೆ ಅಚ್ಚರಿ ಎನ್ನಿಸುತ್ತದೆ. 2023 ನೇ ವರ್ಷದಲ್ಲಿ ಈ ರೀತಿ ಸಾಗಾಣಿಕೆ ಮಾಡಿದ ಒಟ್ಟು ಲಗೇಜಿನ ಸಂಖ್ಯೆ ಐದು ಬಿಲಿಯನ್ ದಾಟುತ್ತದೆ. ಪ್ರತಿ ಲಗೇಜಿಗೆ ಎರಡು ಸಾವಿರ ಯೆನ್ ಶುಲ್ಕ ಎಂದುಕೊಂಡರೂ ಇದು ವಾರ್ಷಿಕ 10ಸಾವಿರ ಬಿಲಿಯನ್ ಯೆನ್ ವಹಿವಾಟು. ಅಮೆರಿಕನ್ ಡಾಲರ್ ಲೆಕ್ಕಾಚಾರದಲ್ಲಿ 66 ಬಿಲಿಯನ್ ಗೂ ಹೆಚ್ಚು ! ವರ್ಷದಿಂದ ವರ್ಷಕ್ಕೆ ಇದರ ಸಂಖ್ಯೆ ಹೆಚ್ಚುತ್ತಿದೆ.
ಪ್ರವಾಸಿಗರಾಗಿ ಹೋದವರಿಗೆ ಇಲ್ಲಿನ ಹೋಟೆಲ್ ಚೆಕ್ ಇನ್ ಮಾಡಲು ಬಿಡುವುದು ಮೂರು ಗಂಟೆಯ ನಂತರ, ಬೆಳಿಗ್ಗೆ ತಲುಪಿದವರು ಲಗೇಜು ಹಿಡಿದು ಪರದಾಡುವ ಅವಶ್ಯಕತೆಯಿಲ್ಲ. ಬಸ್, ಮೆಟ್ರೋ, ರೈಲ್ವೆ ಎಲ್ಲಡೆ ಕಾಯಿನ್ ಲಾಕರ್ಸ್ ಲಭ್ಯವಿದೆ. ಬೇರೆ ಬೇರೆ ಸೈಜ್ ನಲ್ಲಿ ಈ ಲಾಕರ್ ಸಿಗುತ್ತದೆ. ಪೂರ್ಣ ದಿನಕ್ಕೆ 300 ರಿಂದ 700 ಯೆನ್ ಪಾವತಿ ಮಾಡಿ ಈ ಸೇವೆಯನ್ನು ಬಳಸಿ ಕೊಳ್ಳಬಹುದು.
ಕೊನೆ ಮಾತು: ಭಾರತದಂತಹ ದೇಶದಲ್ಲಿ ಈ ರೀತಿಯ ಸೇವೆಗಳಿಗೆ ಖಂಡಿತ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗುತ್ತದೆ. ವಯಸ್ಸಾದವರು, ಕೈಲಾಗದವರು, ಎಲ್ಲಕ್ಕೂ ಮಿಗಿಲಾಗಿ ಭಾರವಿಲ್ಲದೆ ಹಗುರಾಗಿ ಓಡಾಡಬೇಕು ಎಂದು ಬಯಸುವ ಕೋಟ್ಯಂತರ ಜನ ಈ ಸೇವೆಯನ್ನು ಖಂಡಿತ ಬಳಸಿಕೊಳ್ಳುತ್ತಾರೆ. ಇಂತಹ ಒಂದು ಸೇವೆ ನಮ್ಮ ದೇಶದಲ್ಲೂ ಶುರುವಾಗಲಿ. ಸೇವೆಯ ಜೊತೆಗೆ ಇದು ಲಕ್ಷಾಂತರ ಜನರಿಗೆ ಕೆಲಸವನ್ನು ನೀಡುತ್ತದೆ, ದೇಶದ ಜಿಡಿಪಿಗೆ ಕೂಡ ದೇಣಿಗೆ ನೀಡುತ್ತದೆ.
Advertisement