ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ (ಕುಶಲವೇ ಕ್ಷೇಮವೇ)

ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ವಿಳಂಬಗೊಳಿಸುವುದರಿಂದ ನೋವು ಹದಗೆಡುತ್ತದೆ, ಚಲನಶೀಲತೆ ಕಡಿಮೆಯಾಗುತ್ತದೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟ ಕಡಿಮೆಯಾಗುತ್ತದೆ.
Knee replacement Surgery
ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ online desk
Updated on

ವಯಸ್ಸಾಗುತ್ತಿದ್ದಂತೆ ಜನರಲ್ಲಿ ಸಾಮಾನ್ಯವಾಗಿ ಸಣ್ಣದಾಗಿ ಕಾಣಿಸಿಕೊಳ್ಳುವ ಮಂಡಿ (ಮೊಣಕಾಲು) ನೋವು ಕೆಲವೊಮ್ಮೆ ಹೆಚ್ಚು ತ್ರಾಸದಾಯವಾಗುತ್ತದೆ. ಜೊತೆಗೆ ದೀರ್ಘ ಕಾಲ ಕಾಡುತ್ತದೆ. ಇದರಿಂದ ಓಡಾಡುವುದು ಕಷ್ಟವಾಗುತ್ತದೆ. ಈ ನೋವು ಮಾನಸಿಕ ಸ್ಥಿತಿ ಮೇಲೆ ಕೂಡ ಪರಿಣಾಮ ಬೀರುತ್ತದೆ. ಕೆಲವರಿಗೆ ಜೀವನ ಚಲನೆಯಿಲ್ಲದೇ ಬೇಸರವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಈ ನೋವು ನಿಯಂತ್ರಣ ಹೆಚ್ಚು ಕಷ್ಟಕರವಾಗುತ್ತದೆ. ಕೀಲು ನೋವಿನ ಸಮಸ್ಯೆ ಹೆಚ್ಚುವುದರ ಜೊತೆಗೆ ಊತಕ್ಕೆ ಕೂಡ ಕಾರಣವಾಗುತ್ತದೆ. ಈ ಕೀಲು ನೋವು ಅಸಾಧ್ಯವಾದ ಮಂಡಿ ನೋವಿಗೆ ಕಾರಣವಾಗುತ್ತದೆ.

ಮಂಡಿ ನೋವಿಗೆ ಶಸ್ತ್ರಚಿಕಿತ್ಸೆ

ಮಂಡಿ ನೋವು ಸಾಮಾನ್ಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಮಾಡುತ್ತಿದ್ದರೆ ತಕ್ಷಣ ವೈದ್ಯರನ್ನು ಕಾಣಬೇಕು. ಮಂಡಿ ನೋವಿನ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಹೊರತಾದ ಚಿಕಿತ್ಸೆಗಳನ್ನು ಕೂಡ ಪರಿಶೀಲನೆ ನಡೆಸಬೇಕಾಗುತ್ತಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗುವುದರಿಂದ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು. ಮೊಣಕಾಲು ಕೀಲುಗಳ ತೀವ್ರ ಸಂಧಿವಾತ, ಮೊಣಕಾಲಿನ ಸುತ್ತಲಿನ ಗಾಯಗಳಿಂದ ಉಂಟಾಗುವ ಸಂಧಿವಾತ, ರುಮಟಾಯ್ಡ್ ಸಂಧಿವಾತ, ದೀರ್ಘಕಾಲದ ಮೊಣಕಾಲು ನೋವು ಮತ್ತು ಊತ ದೈನಂದಿನ ಚಟುವಟಿಕೆಗಳು ಮತ್ತು ವೈಯಕ್ತಿಕ ಆರೈಕೆಗೆ ತೊಂದರೆಯಾಗುವ ನೋವು ಮತ್ತು ಕಾಲುಗಳ ತೀವ್ರ ವಿರೂಪತೆ ಇದ್ದಾಗ ಮಂಡಿಯ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು.

ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ ಹೇಗೆ ನಡೆಯುತ್ತದೆ?

ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯು ಹಾನಿಗೊಳಗಾದ ಅಥವಾ ಸವೆದ ಮಂಡಿಯ ಕೀಲುಗಳನ್ನು ಕೃತಕ ಸಾಧನದೊಂದಿಗೆ (ಇಂಪ್ಲಾಂಟ್) ಬದಲಾಯಿಸುತ್ತದೆ. ಈ ಶಸ್ತ್ರಚಿಕಿತ್ಸಾ ವಿಧಾನವನ್ನು ಮಂಡಿ ಬದಲಾವಣೆ ಚಿಕಿತ್ಸೆ (ಇಂಗ್ಲೀಷಿನಲ್ಲಿ knee replacement surgery) ಎಂದು ಕರೆಯಲಾಗುತ್ತದೆ. ತೀವ್ರವಾದ ಸಂಧಿವಾತ ಅಥವಾ ಇತರ ಸಮಸ್ಯಾತ್ಮಕ ಸ್ಥಿತಿಗಳಿಂದ ಬಳಲುತ್ತಿರುವ ಜನರಿಗೆ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದು ಮಂಡಿ ನೋವನ್ನು ನಿವಾರಿಸಲು ಮತ್ತು ಚಲನೆಯ ವ್ಯಾಪ್ತಿ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇಂದು ಸಂಪೂರ್ಣ ಮಂಡಿ ಬದಲಾವಣೆ, ಭಾಗಶಃ ಮಂಡಿ ಬದಲಾವಣೆ, ಲಿಂಗ-ನಿರ್ದಿಷ್ಟ ಮಂಡಿ ಬದಲಾವಣೆ ಮತ್ತು ಪರಿಷ್ಕರಣೆ ಮಂಡಿ ಬದಲಾವಣೆ ಸೇರಿದಂತೆ ಹಲವಾರು ರೀತಿಯ ಮಂಡಿ ಬದಲಾವಣೆ ವಿಧಾನಗಳಿವೆ. ರೋಗಿಯ ವೈಯಕ್ತಿಕ ಅಗತ್ಯತೆಗಳು ಮತ್ತು ಮಂಡಿಯ ಹಾನಿಯ ಪ್ರಮಾಣವನ್ನು ಅವಲಂಬಿಸಿ ವೈದ್ಯರು ನಿರ್ದಿಷ್ಟ ಮಂಡಿ ಬದಲಾವಣೆ ವಿಧಾನವನ್ನು ಸೂಚಿಸುತ್ತಾರೆ.

ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯ ಸಾಧಕ ಬಾಧಕಗಳು

ಯಾವುದೇ ಶಸ್ತ್ರಚಿಕಿತ್ಸೆಯಂತೆ, ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯು ಕೆಲವು ಅಪಾಯಗಳನ್ನು ಹೊಂದಿದೆ, ಸಂಭಾವ್ಯ ಅಪಾಯಗಳಲ್ಲಿ ಸೋಂಕು, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಅರಿವಳಿಕೆಗೆ ಪ್ರತಿಕೂಲ ಪ್ರತಿಕ್ರಿಯೆಗಳು ಸೇರಿವೆ. ಒಟ್ಟಾರೆ ಅಪಾಯವು ತುಲನಾತ್ಮಕವಾಗಿ ಕಡಿಮೆಯಾಗಿದೆ ಮತ್ತು ಸಂಪೂರ್ಣ ಪೂರ್ವ-ಶಸ್ತ್ರಚಿಕಿತ್ಸಾ ಮೌಲ್ಯಮಾಪನಗಳು ತೊಡಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಆದರೂ ಇದನ್ನು ಸಾಮಾನ್ಯವಾಗಿ ಅನೇಕ ರೋಗಿಗಳಿಗೆ ಸುರಕ್ಷಿತ ಮತ್ತು ಯಶಸ್ವಿ ಎಂದು ಪರಿಗಣಿಸಲಾಗಿದೆ. ಮಂಡಿ ಬದಲಾವಣೆಯನ್ನು ಪರಿಗಣಿಸುವ ವ್ಯಕ್ತಿಗಳು ತಮ್ಮ ಆರೋಗ್ಯ ತಂಡದೊಂದಿಗೆ ಸಂಭಾವ್ಯ ಅಪಾಯಗಳು ಮತ್ತು ಪ್ರಯೋಜನಗಳನ್ನು ಚರ್ಚಿಸುವುದು ಅತ್ಯಗತ್ಯ.

ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಗೆ ನಿರ್ದಿಷ್ಟ ವಯಸ್ಸಿನ ಅವಶ್ಯಕತೆಯಿಲ್ಲ. ಮಂಡಿ ಬದಲಾವಣೆ ಚಿಕಿತ್ಸೆಗೆ ಒಳಗಾಗುವ ನಿರ್ಧಾರವು ಮೊಣಕಾಲು ಸಂಧಿವಾತದ ತೀವ್ರತೆ, ನೋವಿನ ಮಟ್ಟ ಮತ್ತು ರೋಗಿಯ ಜೀವನದ ಗುಣಮಟ್ಟದ ಮೇಲಿನ ಪರಿಣಾಮದಂತಹ ಅಂಶಗಳನ್ನು ಆಧರಿಸಿದೆ. ವಯಸ್ಸಾದವರಲ್ಲಿ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಗಳು ಹೆಚ್ಚು ಸಾಮಾನ್ಯ. ಇದು ಅವರ ಆರೋಗ್ಯ ಸ್ಥಿತಿ ಮತ್ತು ಮೊಣಕಾಲಿನ ಹಾನಿಯ ಪ್ರಮಾಣವನ್ನು ಅವಲಂಬಿಸಿರುತ್ತದೆ.

Knee replacement Surgery
ಯೂರಿನರಿ ಬ್ಲಾಡರ್ ಕ್ಯಾನ್ಸರ್: ಕಾರಣ, ಲಕ್ಷಣ, ಚಿಕಿತ್ಸೆಗಳು (ಕುಶಲವೇ ಕ್ಷೇಮವೇ)

ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ವಿಳಂಬಗೊಳಿಸುವುದರಿಂದ ನೋವು ಹದಗೆಡುತ್ತದೆ, ಚಲನಶೀಲತೆ ಕಡಿಮೆಯಾಗುತ್ತದೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟ ಕಡಿಮೆಯಾಗುತ್ತದೆ. ಸಂಧಿವಾತ ಮುಂದುವರೆದಂತೆ ಕೀಲುಗಳಿಗೆ ಆಗಿರುವ ಹಾನಿಯನ್ನು ಬದಲಾಯಿಸಲಾಗದು, ಇದರಿಂದ ಶಸ್ತ್ರಚಿಕಿತ್ಸೆ ಹೆಚ್ಚು ಸಂಕೀರ್ಣವಾಗಬಹದು.

ಅತಿ ಹೆಚ್ಚು ಮೊಣಕಾಲು ನೋವನ್ನು ಅನುಭವಿಸುತ್ತಿರುವ ಜನರು ಶಸ್ತ್ರಚಿಕಿತ್ಸೆಗೆ ಸೂಕ್ತ ಸಮಯವನ್ನು ನಿರ್ಧರಿಸಲು ಮೂಳೆ ತಜ್ಞರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಸಂಪೂರ್ಣ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯು ಹಾನಿಗೊಳಗಾದ ಭಾಗಗಳನ್ನು ಕೃತಕ ಇಂಪ್ಲಾಂಟ್ಗಳು ಅಥವಾ ಪ್ರಾಸ್ಥೆಟಿಕ್ಸ್ಗಳೊಂದಿಗೆ ಬದಲಾಯಿಸಲು ಒಂದು ಪ್ರಮುಖ ಶಸ್ತ್ರಚಿಕಿತ್ಸೆಯಾಗಿದೆ. ವಿಶೇಷ ಉಪಕರಣಗಳ ಬಳಕೆಯಿಂದ, ಹಾನಿಗೊಳಗಾದ ಭಾಗವನ್ನು ಇಂಪ್ಲಾಂಟುಗಳೊಂದಿಗೆ ಬದಲಾಯಿಸಲಾಗುತ್ತದೆ. ಹೀಗೆ ಅಳವಡಿಸಲಾದ ಕೃತಕ ಮಂಡಿಯು ಹೊಸ ಕೀಲಿನ ಬಹುತೇಕ ಸಾಮಾನ್ಯ ಕಾರ್ಯವನ್ನು ನಿರ್ವಹಿಸುತ್ತದೆ. ಅದರೆ ಶಸ್ತ್ರಚಿಕಿತ್ಸೆ ನಂತರ ನೆಲದ ಮೇಲೆ ಕಾಲುಗಳನ್ನು ಕುಳಿತುಕೊಳ್ಳಲು ಆಗುವುದಿಲ್ಲ.

ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಗಳು ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತವೆ ಮತ್ತು 12 ವರ್ಷಗಳ ನಂತರವೂ ಸುಮಾರು ಶೇಕಡಾ 97ರಷ್ಟು ಉತ್ತಮ ಯಶಸ್ಸಿನ ಪ್ರಮಾಣವನ್ನು ತೋರಿಸುತ್ತವೆ. ಈ ಶಸ್ತ್ರಚಿಕಿತ್ಸೆಯಿಂದ ಜೀವನದ ಗುಣಮಟ್ಟ ಸುಧಾರಿಸುತ್ತದೆ. ನಡಿಗೆ, ಮೆಟ್ಟಿಲುಗಳನ್ನು ಹತ್ತುವುದು, ವಾಹನ ಚಾಲನೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಮೊದಲಿನಂತೆ ಆರಾಮವಾಗಿ ತೊಡಬಹುದು.

ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯ ವೆಚ್ಚವು ರೋಗಿಗಳ ಸ್ಥಳ, ಆಸ್ಪತ್ರೆಗಳು ಮತ್ತು ಲಭ್ಯವಿರುವ ಸೇವೆಗಳಂತಹ ಹಲವಾರು ಅಂಶಗಳ ಆಧಾರದ ಮೇಲೆ ಬದಲಾಗುತ್ತದೆ. ಮಂಡಿನೋವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕು. ಸರಿಯಾದ ತೂಕ. ಮೊಣಕಾಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರಿಂದ ನೋವು ಬರುವುದಿಲ್ಲ. ಬಿರುಸು ನಡಿಗೆ ಮತ್ತು ನಿಯಮಿತ ವ್ಯಾಯಾಮ ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ.

ಸ್ಟ್ರೆಚ್ & ವಾರ್ಮ್ ಅಪ್ ವ್ಯಾಯಾಮಗಳನ್ನು ಮನೆಯಲ್ಲಿಯೂ ಮಾಡಿದರೂ ಕಾಲಿಗೆ ಸಂಬಂಧಿಸಿದ ತೊಂದರೆಗಳನ್ನು ತಡೆಗಟ್ಟಬಹುದು. ಸರಿಯಾದ ಪಾದರಕ್ಷೆಗಳನ್ನು ಧರಿಸಬೇಕು. ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ತಪ್ಪಾಗಿ ನಿಲ್ಲುವುದನ್ನು ತಪ್ಪಿಸಿಬೇಕು. ಅಗತ್ಯವಿದ್ದಾಗ ವಿಶ್ರಾಂತಿ ಪಡೆಯಿರಿ. ಮೊಣಕಾಲುಗಳನ್ನು ಹೆಚ್ಚು ಒತ್ತಡಕ್ಕೆ ಒಳಪಡಿಸಬಾರದು. ಮೂಳೆಗಳನ್ನು ಬಲಪಡಿಸಲು ಒಮೆಗಾ-3 (ಮೀನು, ಒಣ ಬೀಜಗಳು), ವಿಟಮಿನ್ ಡಿ (ಸೂರ್ಯನ ಬೆಳಕು, ಹಾಲಿನ ಉತ್ಪನ್ನಗಳು) ಮತ್ತು ಕ್ಯಾಲ್ಸಿಯಂ (ಹಸಿರು ಸೊಪ್ಪು, ಬಾದಾಮಿ) ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ದಿನ ನಿತ್ಯ ಬಳಸುವ ತಾಜಾ ತರಕಾರಿ, ಹಣ್ಣುಗಳು, ಹಸಿರು ಸೊಪ್ಪುಗಳು ಮತ್ತು ಬೇಳೆಕಾಳುಗಳಲ್ಲಿಯೇ ಈ ಎಲ್ಲಾ ಪೌಷ್ಟಿಕಾಂಶಗಳಿವೆ. ಕೀಲುಗಳ ಚಲನೆಯನ್ನು ಸುಧಾರಿಸಲು ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com