ಅಕ್ಸಿಯಮ್-4: ಶುಭಾಂಶು ಶುಕ್ಲಾ ಅವರೊಡನೆ ಭಾರತದ 11 ಸಂಶೋಧನಾ ದಿನಗಳು (ಜಾಗತಿಕ ಜಗಲಿ)

ಆಕ್ಸಿಯಮ್-4 ಯೋಜನೆ ಕೇವಲ ವೈಯಕ್ತಿಕ ಸಾಧನೆಯ ಯೋಜ‌ನೆಯಲ್ಲ. ಬದಲಿಗೆ, ಜಾಗತಿಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೆಚ್ಚುತ್ತಿರುವ ಭಾರತದ ಪಾತ್ರಕ್ಕೆ ಈ ಯೋಜ‌ನೆ ಸಾಕ್ಷಿಯಾಗಿದೆ.
Research Days of India with Shubanshu Shukla
ಅಕ್ಸಿಯಮ್-4 ಮಿಶನ್
Updated on

ಹನ್ನೊಂದು ದಿನಗಳ ಹಿಂದೆ, ಜೂನ್ 25, 2025ರಂದು, ಭಾರತೀಯ ಕಾಲಮಾನದಲ್ಲಿ ಬೆಳಗ್ಗೆ 11:51ಕ್ಕೆ ಸಮಸ್ತ ಭಾರತದ ಕಣ್ಗಳು ಕೇಪ್ ಕ್ಯಾನವೆರಾಲ್ ಮೇಲೆ ನೆಟ್ಟಿದ್ದವು. ಅಂದು ಸ್ಕ್ವಾಡ್ರನ್ ಲೀಡರ್ ಶುಭಾಂಶು 'ಶುಕ್ಸ್' ಶುಕ್ಲಾ ಅವರು ತನ್ನ ಹೆಸರನ್ನು ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮೂಡಿಸುವಂತಹ ಪ್ರಯಾಣದಲ್ಲಿ ತೊಡಗಿದ್ದರು. ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ತೆರಳಿದ ಶುಕ್ಲಾ, ಆಕ್ಸಿಯಮ್-4 (ಎಎಕ್ಸ್-4) ಯೋಜನೆಯ ನಾಲ್ವರು ಗಗನಯಾತ್ರಿಗಳಲ್ಲಿ ಒಬ್ಬರಾದರು. ಆ ಮೂಲಕ ಭೂಮಿಯ ಪರಿಭ್ರಮಣೆ ನಡೆಸಿದ 634ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಶುಭಾಂಶು ಪಾತ್ರರಾದರು. ಇನ್ನೂ ಪ್ರಮುಖವಾಗಿ, 1984ರಲ್ಲಿ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ತೆರಳಿದ ಬಳಿಕ, ಈ ಸಾಧನೆ ನಿರ್ಮಿಸಿದ ಎರಡನೇ ಭಾರತೀಯ ಎಂಬ ಸಾಧನೆಯನ್ನೂ ಶುಭಾಂಶು ನಿರ್ಮಿಸಿದರು. ಆಕ್ಸಿಯಮ್-4 ಯೋಜನೆ ಕೇವಲ ವೈಯಕ್ತಿಕ ಸಾಧನೆಯ ಯೋಜ‌ನೆಯಲ್ಲ. ಬದಲಿಗೆ, ಜಾಗತಿಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೆಚ್ಚುತ್ತಿರುವ ಭಾರತದ ಪಾತ್ರಕ್ಕೆ ಈ ಯೋಜ‌ನೆ ಸಾಕ್ಷಿಯಾಗಿದೆ.

ಅದ್ಧೂರಿ ಆರಂಭ: ನಕ್ಷತ್ರಗಳತ್ತ ಪಯಣ

ಕೂಲಂಕಷವಾಗಿ ರೂಪಿಸಿದ ಯೋಜನೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯ ಕಾರಣದಿಂದ, ಎಎಕ್ಸ್-4 ಆರಂಭಿಕ ಹಂತ ಸುಗಮವಾಗಿ ಸಾಗಿತು. 28 ಗಂಟೆಗಳ ಕಾಲ ಬಾಹ್ಯಾಕಾಶದಲ್ಲಿನ ಸುರಕ್ಷಿತ ಮತ್ತು ಕ್ಷಿಪ್ರ ಚಲನೆಯ ಬಳಿಕ, ಶುಕ್ಲಾ ಮತ್ತವರ ಸಹಯೋಗಿಗಳಾದ ಪೆಗ್ಗಿ ವ್ಹಿಟ್ಸನ್ (ಅಮೆರಿಕಾ), ಸ್ಲಾವೋಜ್ 'ಸ್ವೇವ್' ಉಜ್ನಾನ್ಸ್‌ಕಿ ವಿಸ್ನೀವ್ಸ್ಕಿ (ಪೋಲೆಂಡ್) ಮತ್ತು ಟಿಬರ್ ಕಾಪು (ಹಂಗರಿ) ಜೂನ್ 26ರಂದು, ಭಾರತೀಯ ಕಾಲಮಾನ ಸಂಜೆ 4:01ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್ ನಡೆಸಿದರು. ಅದಾಗಿ ಕೇವಲ 1 ಗಂಟೆ 52 ನಿಮಿಷಗಳ ಬಳಿಕ, ಗಗನಯಾತ್ರಿಗಳು ಆರಾಮವಾಗಿ ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸುವ ಪ್ರಯೋಗಾಲಯದಂತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್ಎಸ್) ಪ್ರವೇಶಿಸಿ, ತಮ್ಮ 14 ದಿನಗಳ ವೈಜ್ಞಾನಿಕ ಸಾಧನೆಗಳನ್ನು ಅಧಿಕೃತವಾಗಿ ಆರಂಭಿಸಿದರು.

ಶುಕ್ಲಾರ ಮುಖ್ಯ ಕೊಡುಗೆಗಳು: ಭೂಮಿ ಮತ್ತು ಅದರಾಚೆಗೆ ವಿಜ್ಞಾನ

ಕಳೆದ ಹನ್ನೊಂದು ದಿನಗಳ ಅವಧಿಯಲ್ಲಿ, ಸ್ಕ್ವಾಡ್ರನ್ ಲೀಡರ್ ಶುಭಾಂಶು ಶುಕ್ಲಾ ಹಲವಾರು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ. ಅವುಗಳ ಪರಿಣಾಮಗಳು ಕೇವಲ ಐಎಸ್ಎಸ್‌ಗೆ ಸೀಮಿತವಾಗಿಲ್ಲ. ಬದಲಿಗೆ, ಆಳ ಬಾಹ್ಯಾಕಾಶ ಅನ್ವೇಷಣೆಗಳು ಮತ್ತು ಇತರ ಜೀವಿಗಳಿಗೂ ಪ್ರಯೋಜನಕಾರಿಯಾಗಲಿವೆ.

ಸ್ನಾಯು ಕ್ಷೀಣತೆಯ ವಿರುದ್ಧ ಸಮರ: ಮಯೋಜೆನೆಸಿಸ್ ಪ್ರಯೋಗ

ಶೂನ್ಯ ಗುರುತ್ವಾಕರ್ಷಣೆಯಲ್ಲಿ ಸ್ನಾಯುಗಳು ಕ್ಷೀಣಗೊಳ್ಳುವುದು ದೀರ್ಘಾವಧಿಯ ಬಾಹ್ಯಾಕಾಶ ಯೋಜನೆಗಳಿಗೆ ಒಂದು ಮಹತ್ವದ ಸವಾಲಾಗಿದೆ. ವಿಶೇಷವಾದ ಲೈಫ್ ಸೈನ್ಸಸ್ ಗ್ಲೋವ್ ಬಾಕ್ಸ್ ಒಳಗೆ ಸೂಕ್ಷ್ಮವಾಗಿ ಕಾರ್ಯಾಚರಿಸುವ ಮೂಲಕ, ಶುಭಾಂಶು ಶುಕ್ಲಾ ಅವರು ಮಯೋಜೆನೆಸಿಸ್ ಪ್ರಯೋಗ ನಡೆಸುತ್ತಿದ್ದಾರೆ. ಅವರ ಅಧ್ಯಯನಗಳು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸ್ನಾಯುಗಳು ದುರ್ಬಲಗೊಳ್ಳುವುದರ ಹಿಂದಿನ ಜೀವಕೋಶದ ಕಾರ್ಯವಿಧಾನಗಳನ್ನು ಅರ್ಥೈಸಿಕೊಳ್ಳಲು ಮುಖ್ಯವಾಗಿವೆ. ಈ ಮೂಲಕ ಕಲೆಹಾಕುವ ಮಾಹಿತಿಗಳು ಭೂಮಿಯಲ್ಲೂ ಸ್ನಾಯುಗಳು ಸವೆತಕ್ಕೆ ಒಳಗಾಗುವುದಕ್ಕೆ ಸೂಕ್ತ ಚಿಕಿತ್ಸೆಗೆ ನಾಂದಿ ಹಾಡಬಹುದು. ಈ ಮೂಲಕ ಭೂಮಿಯಲ್ಲಿ ಮಿಲಿಯಾಂತರ ಜನರಿಗೆ ನೆಮ್ಮದಿ ನೀಡುವುದರ ಜೊತೆಗೆ, ಮಂಗಳ ಗ್ರಹದಂತಹ ಸುದೀರ್ಘ ಬಾಹ್ಯಾಕಾಶ ಯಾತ್ರೆ ನಡೆಸಲು ಗಗನಯಾತ್ರಿಗಳಿಗೆ ನೆರವಾಗಬಹುದು.

ಸುಸ್ಥಿರ ಜೀವ ಬೆಂಬಲ: ಮೈಕ್ರೋ ಆಲ್ಗೇ ಮತ್ತು ಸೈನೋಬ್ಯಾಕ್ಟೀರಿಯಾ

ಸೂಕ್ಷ್ಮ ಪಾಚಿ ಮತ್ತು ಸೈನೋ ಬ್ಯಾಕ್ಟೀರಿಯಾಗಳ ಅಧ್ಯಯನದಲ್ಲಿ ಶುಕ್ಲಾ ತೊಡಗಿಕೊಳ್ಳುವುದು ಬಾಹ್ಯಾಕಾಶದಲ್ಲಿ ಸುಸ್ಥಿರ ಜೀವ ಬೆಂಬಲ ವ್ಯವಸ್ಥೆಯ ನಿರ್ಮಾಣಕ್ಕೆ ನೆರವಾಗಲಿದೆ. ಈ ಸೂಕ್ಷ್ಮ ಜೀವಿಗಳು ಅವಶ್ಯಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ, ಆಳ ಬಾಹ್ಯಾಕಾಶ ಪ್ರಯಾಣಗಳನ್ನು ಸುಗಮವಾಗಿಸಬಲ್ಲವು. ಭವಿಷ್ಯದಲ್ಲಿ ಗಗನಯಾತ್ರಿಗಳು ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ ತಮ್ಮದೇ ಆಹಾರವನ್ನು ಬೆಳೆಯುವುದನ್ನು, ಉಸಿರಾಟಕ್ಕೆ ಅವಶ್ಯಕವಾದ ಆಮ್ಲಜನಕವನ್ನು ಉತ್ಪಾದಿಸುವುದನ್ನು, ಮತ್ತು ಈ ಸೂಕ್ಷ್ಮ ಜೀವಾಣುಗಳಿಂದ ಇಂಧನವನ್ನೂ ಪಡೆದುಕೊಳ್ಳುವುದನ್ನು ಕಲ್ಪಿಸಿಕೊಳ್ಳಿ. ಇಸ್ರೋ ನೇತೃತ್ವದ ಸೈನೋಬ್ಯಾಕ್ಟೀರಿಯಾ ಪ್ರಯೋಗ ಬಾಹ್ಯಾಕಾಶ ನೌಕೆಯ ಗಾಳಿಯನ್ನು ಸ್ವಚ್ಛಗೊಳಿಸುವ, ಮತ್ತು ಬಳಸಿದ, ಅಮೂಲ್ಯವಾದ ನೀರನ್ನು ಮರುಬಳಕೆ ಮಾಡಲು ನೆರವಾಗಿ, ದೀರ್ಘಾವಧಿಯ ಯೋಜನೆಗಳಿಗೆ ಅವಶ್ಯಕವಾದ ಮರುಪೂರೈಕೆಯ ಭಾರವನ್ನು ಕಡಿಮೆಗೊಳಿಸಲಿದೆ.

ಭವಿಷ್ಯದ 'ಬೆಳೆ': ಮೊಳಕೆ ಪ್ರಯೋಗ

ತನ್ನ ಬಹುಮುಖವನ್ನು ಪ್ರದರ್ಶಿಸುತ್ತಿರುವ ಶುಭಾಂಶು ಶುಕ್ಲಾ ಅವರು 'ಬಾಹ್ಯಾಕಾಶ ರೈತ'ನ ಪಾತ್ರವನ್ನೂ ನಿರ್ವಹಿಸಲಿದ್ದಾರೆ. ಮೊಳಕೆ (ಸ್ಪ್ರೌಟ್ಸ್) ಪ್ರಯೋಗದ ಮೂಲಕ, ಗುರುತ್ವಾಕರ್ಷಣೆಯ ಅನುಪಸ್ಥಿತಿಯಲ್ಲಿ ಸಸ್ಯಗಳು ಹೇಗೆ ಮೊಳಕೆಯೊಡೆಯುತ್ತವೆ, ಬೆಳವಣಿಗೆ ಹೊಂದುತ್ತವೆ ಎನ್ನುವುದನ್ನು ಶುಭಾಂಶು ಅಧ್ಯಯನ ನಡೆಸಲಿದ್ದಾರೆ. ಭವಿಷ್ಯದ ಬಾಹ್ಯಾಕಾಶ ನೌಕೆಗಳಲ್ಲಿ ತಾಜಾ ಆಹಾರ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಬೆಳೆದು, ಗಗನಯಾತ್ರಿಗಳ ಆರೋಗ್ಯ ಕಾಪಾಡಲು ಮತ್ತು ಒಟ್ಟಾರೆ ಪೋಷಕಾಂಶಗಳ ಪೂರೈಕೆಯನ್ನು ನಡೆಸಲು ಈ ಪ್ರಯೋಗ ಮುಖ್ಯವಾಗಿದೆ. ಅದರೊಡನೆ, ಈ ಪ್ರಯೋಗದ ಮೂಲಕ ಗಳಿಸಿದ ಜ್ಞಾನದಿಂದ ಭೂಮಿಯಲ್ಲಿರುವ ಸವಾಲಿನ ಪ್ರದೇಶಗಳಲ್ಲಿ ಅಥವಾ ಸಂಪನ್ಮೂಲಗಳ ಕೊರತೆ ಇರುವಲ್ಲಿ ಪ್ರಯೋಜನ ಪಡೆಯಬಹುದು.

Research Days of India with Shubanshu Shukla
ಗಗನಯಾತ್ರಿ ಪಿನ್ ಇತಿಹಾಸ: 634 ಸಾಧಕರ ಯಾದಿಗೆ ಸೇರಿದ ಶುಭಾಂಶು ಶುಕ್ಲಾ (ಜಾಗತಿಕ ಜಗಲಿ)

ಟಾರ್ಡಿಗ್ರೇಡ್ ಅಧ್ಯಯನ

ಶುಭಾಂಶು ಶುಕ್ಲಾ ಅವರ ಪ್ರಯೋಗಗಳಲ್ಲಿ ಅತ್ಯಂತ ಆಸಕ್ತಿಕರವಾದುದೆಂದರೆ, ಅವರು ಕೈಗೊಳ್ಳಲಿರುವ ಟಾರ್ಡಿಗ್ರೇಡ್‌ಗಳ ಅಧ್ಯಯನ. ಸೂಕ್ಷ್ಮಾಣು ಜೀವಿಗಳಾದ ಈ 'ಜಲ ಕರಡಿ'ಗಳು ತಮ್ಮ ಗಟ್ಟಿತನಕ್ಕೆ ಹೆಸರಾಗಿದ್ದು, ಬಾಹ್ಯಾಕಾಶದ ವಿಕಿರಣಗಳೂ ಸೇರಿದಂತೆ, ಅತ್ಯಂತ ಕಠಿಣವಾದ ವಾತಾವರಣದಲ್ಲೂ ಬದುಕುಳಿಯಬಲ್ಲವು. ಜೀವಲೋಕದ ಈ ಅದ್ಭುತ ಜೀವಿಗಳು ತಮ್ಮ ಕೋಶಗಳಿಗೆ ಹಾನಿಯಾಗದಂತೆ ಹೇಗೆ ತಡೆಯುತ್ತವೆ ಎಂದು ಅಧ್ಯಯನ ನಡೆಸುವುದರಿಂದ, ಅವುಗಳ ರಹಸ್ಯವನ್ನು ಬಯಲಾಗಿಸಬಹುದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ಈ ಜ್ಞಾನ ವಿಕಿರಣಗಳಿಂದ ಮಾನವರ ಜೀವಕೋಶಗಳನ್ನು ರಕ್ಷಿಸುವ ಹೊಸ ಕಾರ್ಯತಂತ್ರಗಳನ್ನು ರೂಪಿಸಲು ನೆರವಾಗಲಿದೆ. ಇದು ಗಗನಯಾತ್ರಿಗಳಿಗೆ ಮತ್ತು ಭೂಮಿಯಲ್ಲಿ ವಿಕಿರಣ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಬಹುಮುಖ್ಯವಾಗಿದೆ.

ಅಡೆತಡೆಗಳನ್ನು ಮೀರಿ: ರಾಷ್ಟ್ರೀಯ ಹೆಮ್ಮೆಯ ದ್ಯೋತಕ

ಶುಭಾಂಶು ಶುಕ್ಲಾ ಅವರು ಐಎಸ್ಎಸ್‌ಗೆ ತೆರಳಿರುವುದು ಕೇವಲ ವೈಜ್ಞಾನಿಕ ಯೋಜನೆಗೆ ಸೀಮಿತಲ್ಲ. ಬದಲಿಗೆ, ಇದು ಜಾಗತಿಕ ಬಾಹ್ಯಾಕಾಶ ರಂಗದಲ್ಲಿ ಭಾರತದ ಪ್ರಗತಿಯ ಸಂಕೇತವೂ ಹೌದು. ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸಿದ, ಕಾರ್ಯಾಚರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಗಳಿಸುವ ಜೊತೆಗೆ, ಭಾರತೀಯ ಬಾಹ್ಯಾಕಾಶ ಯೋಜನೆಗಳು ಈಗ ಕೇವಲ ಉಪಗ್ರಹ ಉಡಾವಣೆಗೆ ಸೀಮಿತವಾಗಿರದೆ, ಅತ್ಯಾಧುನಿಕ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳು, ಸಂಶೋಧನೆ ಮತ್ತು ಅಭಿವೃದ್ಧಿಗೂ ಭಾರತ ಕೊಡುಗೆ ನೀಡುತ್ತಿರುವುದಕ್ಕೆ ಶುಕ್ಲಾ ಸಾಕ್ಷಿಯಾಗಿದ್ದಾರೆ.

ಪ್ರಧಾನಿ ಮೋದಿಯವರೊಡನೆ ಐತಿಹಾಸಿಕ ಸಮಾಲೋಚನೆ

ಶುಭಾಂಶು ಶುಕ್ಲಾ ಅವರು ಜೂನ್ 28ರಂದು ಪ್ರಧಾನಿ ನರೇಂದ್ರ ಮೋದಿಯವರೊಡನೆ ಬಾಹ್ಯಾಕಾಶದಿಂದ ನೇರವಾಗಿ ಸಮಾಲೋಚನೆ ನಡೆಸಿದ್ದು ಯೋಜನೆಯ ವಿಶೇಷತೆಗಳಲ್ಲಿ ಒಂದಾಗಿತ್ತು. ಈ ಕರೆ ಕೇವಲ ರಾಜತಾಂತ್ರಿಕ ಕರೆಯಾಗಿರಲಿಲ್ಲ. ಬದಲಿಗೆ, ಭಾರತದ ಅಸಾಧಾರಣ ಬಾಹ್ಯಾಕಾಶ ಸಾಧನೆಗಳನ್ನು ಪ್ರದರ್ಶಿಸುತ್ತಾ, ಯುವ ಭಾರತೀಯರು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಶಾಸ್ತ್ರದಲ್ಲಿ (ಎಸ್‌ಟಿಇಎಂ), ಅದರಲ್ಲೂ ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಹೊಂದುವಂತೆ ಪ್ರೇರಣೆ ನೀಡಿದೆ‌.

ಶೈಕ್ಷಣಿಕ ಮಹತ್ವ: ಮುಂದಿನ ತಲೆಮಾರುಗಳಿಗೆ ಸ್ಫೂರ್ತಿ

ಬಿಡುವಿಲ್ಲದ ವೈಜ್ಞಾನಿಕ ಅನ್ವೇಷಣೆಗಳ ಜೊತೆಗೆ, ಸ್ಕ್ವಾಡ್ರನ್ ಲೀಡರ್ ಶುಭಾಂಶು ಶುಕ್ಲಾ ಅವರು ಭಾರತದಾದ್ಯಂತ ವಿದ್ಯಾರ್ಥಿಗಳೊಡನೆ ಸಮಾಲೋಚಿಸಿ, ಶೈಕ್ಷಣಿಕ ರಾಯಭಾರಿಯ ಪಾತ್ರವನ್ನೂ ನಿರ್ವಹಿಸಿದರು. ಅವರು ಹಲವಾರು ಶೈಕ್ಷಣಿಕ ವೀಡಿಯೋಗಳನ್ನು ಚಿತ್ರಿಸಿ, ಬಾಹ್ಯಾಕಾಶದ ವಿಭಿನ್ನ ವಾತಾವರಣದಲ್ಲಿ ಭೌತಶಾಸ್ತ್ರದ ಮೂಲಭೂತ ವಿಚಾರಗಳು ಮತ್ತು ರಾಸಾಯನಿಕ ಬದಲಾವಣೆಗಳು ಹೇಗೆ ಭಿನ್ನವಾಗಿರುತ್ತವೆ ಎಂದು ವಿವರಿಸಿದ್ದಾರೆ. ಇಂತಹ ಆಸಕ್ತಿಕರ ವಿವರಣೆಗಳು ಸಂಕೀರ್ಣವಾದ ವೈಜ್ಞಾನಿಕ ವಿಚಾರಗಳನ್ನು ಸರಳವಾಗಿ, ಸಂತೋಷದಾಯಕ ರೀತಿಯಲ್ಲಿ ಕಲಿಸುತ್ತವೆ. ಆ ಮೂಲಕ ವಿದ್ಯಾರ್ಥಿಗಳು ನೈಜ ಬಾಹ್ಯಾಕಾಶ ಉದಾಹರಣೆಗಳೊಡನೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ನಾಳಿನ ವಿಶೇಷ ಕಾರ್ಯಕ್ರಮ

ಶಿಕ್ಷಣದ ಕುರಿತ ಶುಕ್ಲಾ ಬದ್ಧತೆ ಜುಲೈ 7ರಂದೂ ಮುಂದುವರಿಯಲಿದ್ದು, ಅವರು ಭಾರತೀಯ ವಿದ್ಯಾರ್ಥಿಗಳೊಡನೆ ವಿಶೇಷ ನೇರ ಸಂವಾದ ನಡೆಸಲಿದ್ದಾರೆ. ನೇರ ಪ್ರಸಾರದ ಈ ಸಮಾಲೋಚನೆ ವಿದ್ಯಾರ್ಥಿಗಳಿಗೆ ಶುಭಾಂಶು ಶುಕ್ಲಾ ಅವರ ಆಸಕ್ತಿದಾಯಕ ಅನುಭವವನ್ನು ತಿಳಿದುಕೊಂಡು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ಜೀವನ ಮತ್ತು ಕಾರ್ಯಗಳ ಕುರಿತು ನೇರ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.

ಅಚ್ಚರಿದಾಯಕ ಅಂಕಿ ಸಂಖ್ಯೆಗಳು: ಅಸಾಧಾರಣ ಹನ್ನೊಂದು ದಿನಗಳು

ಕೇವಲ ಹನ್ನೊಂದು ದಿನಗಳ ಅವಧಿಯಲ್ಲಿ, ಸ್ಕ್ವಾಡ್ರನ್ ಲೀಡರ್ ಶುಭಾಂಶು ಶುಕ್ಲಾ ಅವರ ಕೊಡುಗೆಗಳು ಮತ್ತು ಅನುಭವಗಳು ನಿಜಕ್ಕೂ ಅಸಾಧಾರಣವಾಗಿವೆ:

ಶುಭಾಂಶು ಶುಕ್ಲಾ 170ಕ್ಕೂ ಹೆಚ್ಚು ಬಾರಿ ಭೂಮಿಯ ಪರಿಭ್ರಮಣೆ ನಡೆಸಿದ್ದಾರೆ. ಸಾಟಿಯಿಲ್ಲದ ವಾಂಟೇಜ್ ಬಿಂದುವಿನಿಂದ ಅಸಂಖ್ಯ ಸೂರ್ಯೋದಯ, ಸೂರ್ಯಾಸ್ತಗಳಿಗೆ ಅವರು ಸಾಕ್ಷಿಯಾಗಿದ್ದಾರೆ.

ಅವರು ಐಎಸ್ಎಸ್‌ನಲ್ಲಿ 7 ಮಿಲಿಯನ್ ಕಿಲೋಮೀಟರ್‌ಗೂ ಹೆಚ್ಚು ದೂರವನ್ನು ಕ್ರಮಿಸಿದ್ದು, ಇದು ಭೂಮಿಯಿಂದ ಚಂದ್ರನ ನಡುವೆ 18 ಬಾರಿ ಕ್ರಮಿಸುವುದಕ್ಕೆ ಸಮನಾಗಿದೆ. ಇದು ಕಕ್ಷೀಯ ಸಂಚಾರ ಎಷ್ಟು ಹೆಚ್ಚಿನ ವೇಗ ಹೊಂದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಶುಕ್ಲಾ ಈಗಾಗಲೇ ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದು, ವಿಶಾಲ ವ್ಯಾಪ್ತಿಯ ಸಂಶೋಧನೆಗಳಿಗೆ ಪೂರಕವಾದ ಮಾಹಿತಿಗಳನ್ನು ಕಲೆಹಾಕಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ, ಅವರು ತನ್ನ ನೇರ ಪ್ರಸಾರದ ಸಂವಾದಗಳ ಮೂಲಕ, ಶೈಕ್ಷಣಿಕ ಮಾಹಿತಿಗಳ ಮೂಲಕ, ಮತ್ತು ಬಾಹ್ಯಾಕಾಶದಲ್ಲಿ ತನ್ನ ಉಪಸ್ಥಿತಿಯ ಮೂಲಕವೂ ಜಗತ್ತಿನಾದ್ಯಂತ ಮಿಲಿಯಾಂತರ ಜನರಿಗೆ ಸ್ಫೂರ್ತಿ ನೀಡಿದ್ದಾರೆ.

ಮುಂದಿನ ಹಾದಿ: ಐತಿಹಾಸಿಕ ಯೋಜನೆ ಪೂರ್ಣ

ಆಕ್ಸಿಯಮ್-4 ಯೋಜನೆ ಪೂರ್ಣಗೊಳ್ಳಲು ಇನ್ನು ಕೇವಲ ಮೂರು ದಿನಗಳು ಉಳಿದಿದ್ದು, ಶುಕ್ಲಾ ಅಲ್ಲಿಯ ತನಕ ವೇಳಾಪಟ್ಟಿಯಂತೆ ತನ್ನ ಪ್ರಯೋಗಗಳನ್ನು ಮುಂದುವರಿಸಲಿದ್ದಾರೆ. ಅವರ ಕಾರ್ಯಗಳು 31 ದೇಶಗಳ ಸಹಭಾಗಿತ್ವ ಇರುವ 60ಕ್ಕೂ ಹೆಚ್ಚು ವೈಜ್ಞಾನಿಕ ಯೋಜನೆಗಳಿಗೆ ಪೂರಕವಾಗಿದ್ದು, ಇವು ಎಎಕ್ಸ್-4 ಅತಿಹೆಚ್ಚು ಸಂಶೋಧನೆಗಳನ್ನು ಕೈಗೊಂಡ ಖಾಸಗಿ ಯೋಜನೆ ಎಂಬ ಕೀರ್ತಿ ಸಂಪಾದಿಸಲು ನೆರವಾಗಲಿವೆ. ವೈಜ್ಞಾನಿಕ ಅನ್ವೇಷಣೆಗಳು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಅಂತಾರಾಷ್ಟ್ರೀಯ ಸಹಯೋಗಕ್ಕೆ ಕಾರಣವಾಗಿವೆ.

ಭಾರತಕ್ಕೊಂದು ಹೊಸ ಅಧ್ಯಾಯ: ಭವಿಷ್ಯದತ್ತ ದಾಪುಗಾಲು

ಸ್ಕ್ವಾಡ್ರನ್ ಲೀಡರ್ ಶುಭಾಂಶು ಶುಕ್ಲಾ ಅವರ ಯೋಜನೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಅಸಾಧಾರಣ ಪ್ರಗತಿ ಸಾಧಿಸಿರುವುದಕ್ಕೆ ಸಾಕ್ಷಿಯಾಗಿದೆ. ಈ ಮೊದಲು ರಾಕೆಟ್‌ಗಳ ಉಡಾವಣೆ ಮತ್ತು ಉಪಗ್ರಹಗಳ ಚಾಲನೆಗೆ ಸೀಮಿತವಾಗಿದ್ದ ಭಾರತ, ಈಗ ಮಾನವ ಸಹಿತ ಬಾಹ್ಯಾಕಾಶ ಯಾನದಂತಹ ಅರ್ಥವತ್ತಾದ, ಸವಾಲಿನ ಅತ್ಯಾಧುನಿಕ ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದೆ. ಐಎಸ್ಎಸ್‌ನಲ್ಲಿ ಶುಭಾಂಶು ಕೈಗೊಂಡಿರುವ ಕಾರ್ಯಗಳು, ಗಗನಯಾನ ಯೋಜನೆ ಸೇರಿದಂತೆ, ಭಾರತದ ಭವಿಷ್ಯದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಭದ್ರ ಬುನಾದಿ ಹಾಕಲಿವೆ.

ಭೂಮಿಯಿಂದ 400 ಕಿಲೋಮೀಟರ್ ಎತ್ತರದಲ್ಲಿ ತೇಲುತ್ತಾ ಸಾಗುತ್ತಿರುವ ಸ್ಕ್ವಾಡ್ರನ್ ಲೀಡರ್ ಶುಭಾಂಶು ಶುಕ್ಲಾ ತನ್ನೊಡನೆ 140 ಕೋಟಿ ಭಾರತೀಯರ ಕನಸುಗಳು, ಮಹತ್ವಾಕಾಂಕ್ಷೆಗಳನ್ನು ಒಯ್ದಿದ್ದಾರೆ. ಅವರ 14 ದಿನಗಳ ಪ್ರಯಾಣ ವೈಯಕ್ತಿಕ ಸಾಧನೆಯನ್ನು ಮೀರಿದ್ದು, ಭಾರತದ ಬಾಹ್ಯಾಕಾಶ ಕನಸುಗಳಿಗೆ ಬಹುದೊಡ್ಡ ಜಿಗಿತವಾಗಿದೆ. ಮುಂದಿನ ತಲೆಮಾರುಗಳ ಪಾಲಿಗೆ ಇದೊಂದು ಸ್ಫೂರ್ತಿಯಾಗಿರಲಿದೆ.

ಎಎಕ್ಸ್-4 ಸಿಬ್ಬಂದಿಗಳು ಜುಲೈ 9, 2025ರಂದು ಭೂಮಿಗೆ ಮರಳುವ ಮೂಲಕ ಯೋಜನೆ ಮುಕ್ತಾಯಗೊಳ್ಳಲಿದೆ. ಶುಕ್ಲಾ ಬೆಲೆಕಟ್ಟಲಾಗದ ವೈಜ್ಞಾನಿಕ ಮಾಹಿತಿಗಳು ಮತ್ತು ಮರೆಯಲಾಗದ ಅನುಭವಗಳೊಡನೆ ಭೂಮಿಗೆ ಮರಳಲಿದ್ದು, ಮಾನವ ಸಹಿತ ಬಾಹ್ಯಾಕಾಶ ಯಾನದಲ್ಲಿ ಭಾರತದ ಛಾಪು ಮೂಡಿಸಿದ್ದಾರೆ.

Research Days of India with Shubanshu Shukla
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ: ಬಾಹ್ಯಾಕಾಶದ ಅತ್ಯಾಧುನಿಕ ಪ್ರಯೋಗಾಲಯ! (ಜಾಗತಿಕ ಜಗಲಿ)

ಕಕ್ಷೆಯಲ್ಲಿ 11 ದಿನಗಳು: ಶುಭಾಂಶು ಶುಕ್ಲಾ ಯೋಜನೆಯ ಹಿನ್ನೋಟ (ಜೂನ್ 25 - ಜುಲೈ 6)

ಸ್ಕ್ವಾಡ್ರನ್ ಲೀಡರ್ ಶುಭಾಂಶು ಶುಕ್ಲಾ ಅವರ ಪ್ರಯಾಣದ ದೈನಂದಿನ ಮಾಹಿತಿಗಳು ಇಂತಿವೆ:

ದಿನ 1 (ಜೂನ್ 25, 2025): ಉಡಾವಣಾ ದಿನ

ಭಾರತೀಯ ಕಾಲಮಾನ, ಬೆಳಗ್ಗೆ 11:51: ಸ್ಕ್ವಾಡ್ರನ್ ಲೀಡರ್ ಶುಭಾಂಶು ಶುಕ್ಲಾ ಅವರು ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಚಿಮ್ಮಿ, ಬಾಹ್ಯಾಕಾಶಕ್ಕೆ ತೆರಳಿದ ಎರಡನೇ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು. ಎಎಕ್ಸ್-4 ಯೋಜ‌ನೆ ಐಎಸ್ಎಸ್ ಕಡೆಗೆ ತನ್ನ 28 ಗಂಟೆಗಳ ಸುದೀರ್ಘ ಪ್ರಯಾಣವನ್ನು ಆರಂಭಿಸಿತು.

ದಿನ 2 (ಜೂನ್ 26, 2025): ಐಎಸ್ಎಸ್‌ಗೆ ಆಗಮನ

ಭಾರತೀಯ ಕಾಲಮಾನ, ಸಂಜೆ 4:01 - ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಯಶಸ್ವಿಯಾಗಿ ಡಾಕಿಂಗ್ ನಡೆಸಿತು.

ಸಂಜೆ 5:53 - ಶುಕ್ಲಾ ಮತ್ತು ಎಎಕ್ಸ್-4 ಗಗನಯಾತ್ರಿಗಳು ಐಎಸ್ಎಸ್ ಪ್ರವೇಶಿಸಿ, ತಮ್ಮ 14 ದಿ‌ನಗಳ ಯೋಜನೆಯನ್ನು ಅಧಿಕೃತವಾಗಿ ಆರಂಭಿಸಿದರು. ಅವರು ಸೂಕ್ಷ್ಮ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಆರಂಭಿಸಿ, ಎಕ್ಸ್‌ಪೆಡಿಷನ್ 73 ಸಿಬ್ಬಂದಿಗಳು ಅವರನ್ನು ಸ್ವಾಗತಿಸಿದರು.

ಸಂಜೆ: ಶುಭಾಂಶು ಶುಕ್ಲಾ ಐಎಸ್ಎಸ್‌ಗೆ ಆಗಮಿಸಿದ್ದಕ್ಕೆ ತನ್ನ ಉತ್ಸಾಹ ಮತ್ತು ಸಂತೋಷವನ್ನು ವ್ಯಕ್ತಪಡಿಸಿದರು. ಅವರು ಸೂಕ್ಷ್ಮ ಗುರುತ್ವಾಕರ್ಷಣೆಗೆ ಹೊಂದಿಕೊಂಡು, ಪ್ರಯೋಗಗಳನ್ನು ನಡೆಸುವುದಾಗಿ ವಿವರಿಸಿದರು.

ದಿನ 3 (ಜೂನ್ 27, 2025): ಆರಂಭಿಕ ಕಾರ್ಯಾಚರಣೆಗಳು ಮತ್ತು ಹೊಂದಿಕೊಳ್ಳುವಿಕೆ

ಐಎಸ್ಎಸ್ ಪ್ರಯೋಗಾಲಯ ವ್ಯವಸ್ಥೆಗಳ ಪರಿಚಯ.

ಇಸ್ರೋದ ಆರಂಭಿಕ ಪೇಲೋಡ್‌ಗಳು ಮತ್ತು ಉಪಕರಣಗಳ ಚಾಲನೆ.

ಶುಕ್ಲಾ ಸೂಕ್ಷ್ಮ ಗುರುತ್ವಾಕರ್ಷಣೆಗೆ ಹೇಗೆ ಹೊಂದಿಕೊಂಡಿದ್ದಾರೆ ಎಂದು ತಿಳಿಯಲು ಮೊದಲ ವೈದ್ಯಕೀಯ ಸಮಾಲೋಚನೆ ನಡೆಸಿ, ಅವರ ಆರೋಗ್ಯದ ಕುರಿತು ಧನಾತ್ಮಕ ವರದಿಗಳು ಬಂದವು.

ಸಿಬ್ಬಂದಿಗಳ ಜೀವ ವೈದ್ಯಕೀಯ ಮತ್ತು ಮನಶ್ಶಾಸ್ತ್ರೀಯ ಮೇಲ್ವಿಚಾರಣೆ.

ದಿನ 4 (ಜೂನ್ 28, 2025): ಪ್ರಧಾನಿ ಮೋದಿಯವರೊಡನೆ ಐತಿಹಾಸಿಕ ಕರೆ

ವೈಜ್ಞಾನಿಕ ಕಾರ್ಯಾಚರಣೆಗಳು ಮುಂದುವರಿದು, ಭಾರತದ ಪ್ರಯೋಗಗಳತ್ತ ಹೆಚ್ಚಿನ ಗಮನ ನೀಡಲಾಯಿತು.

ಮುಖ್ಯ ಬೆಳವಣಿಗೆ: ಸ್ಕ್ವಾಡ್ರನ್ ಲೀಡರ್ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದಲೇ ಪ್ರಧಾನಿ ನರೇಂದ್ರ ಮೋದಿಯವರೊಡ‌ನೆ ವೀಡಿಯೋ ಕರೆಯಲ್ಲಿ ಮಾತನಾಡಿ, ಭಾರತದ ಬಾಹ್ಯಾಕಾಶ ಸಾಧನೆಗಳನ್ನು ಪ್ರದರ್ಶಿಸಿ, ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ ನೀಡಿದರು. ಅವರು ರಾಷ್ಟ್ರೀಯ ಹೆಮ್ಮೆ, ಬಾಹ್ಯಾಕಾಶದಿಂದ ಭೂಮಿ ಕಾಣುವ ರೀತಿ, ಮತ್ತು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರಗಳ ಕುರಿತು ಮಾತನಾಡಿದರು.

ಸಿಬ್ಬಂದಿಗಳ ಅನುಭವ ಮತ್ತು ಚಿತ್ರೀಕರಣ.

ದಿನ 5 (ಜೂನ್ 29): ವೈಜ್ಞಾನಿಕ ಸಂಶೋಧನೆಗಳತ್ತ ಗಮನ

ಶುಭಾಂಶು ಶುಕ್ಲಾ ಲೈಫ್ ಸೈನ್ಸಸ್ ಗ್ಲೋವ್ ಬಾಕ್ಸ್ ಬಳಸಿ ಮಯೋಜೆನೆಸಿಸ್ ಪ್ರಯೋಗದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅವರು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸ್ನಾಯುಗಳ ಬಲಹೀನತೆಯ ಅಧ್ಯಯನ ನಡೆಸಿ, ಭೂಮಿಯಲ್ಲಿ ಮತ್ತು ದೀರ್ಘಾವಧಿಯ ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ ಅದರ ಚಿಕಿತ್ಸೆಯ ಕುರಿತು ಗಮನ ಹರಿಸಿದರು.

ಇಸ್ರೋ ನೇತೃತ್ವದ ಸೈನೋಬ್ಯಾಕ್ಟೀರಿಯಾ ಪ್ರಯೋಗ ಮತ್ತು ಸುಸ್ಥಿರ ಜೀವ ಬೆಂಬಲ ವ್ಯವಸ್ಥೆಗಳ ಪ್ರಯೋಗಗಳಿಗೆ ಸಿದ್ಧತೆ ನಡೆಸಲಾಯಿತು.

ದಿನ 6 (ಜೂನ್ 30): ಬಾಹ್ಯಾಕಾಶ ಕೃಷಿ

'ಸ್ಪ್ರೌಟ್ಸ್' ಪ್ರಯೋ್ ಆರಂಭಗೊಂಡು, ಶೂನ್ಯ ಗುರುತ್ವಾಕರ್ಷಣೆಯಲ್ಲಿ ಸಸ್ಯಗಳ ಬೆಳವಣಿಗೆಯನ್ನು ಗಮನಿಸುವ ಸಲುವಾಗಿ ಬೀಜಗಳನ್ನು ನಡೆಲಾಯಿತು. ಇದು ಬಾಹ್ಯಾಕಾಶದಲ್ಲಿ ಕೃಷಿ ಕ್ರಾಂತಿ ನಡೆಸುವ ಮಹತ್ವದ ಗುರಿಯನ್ನು ಹೊಂದಿದೆ.

ಟಾರ್ಡಿಗ್ರೇಡ್ ಅಧ್ಯಯನ ನಡೆಸಿ, 'ಜಲ ಕರಡಿ' ಎಂದು ಕರೆಯಲಾಗುವ ಈ ಸೂಕ್ಷ್ಮ ಜೀವಿಗಳು ಹೇಗೆ ಬಾಹ್ಯಾಕಾಶ ವಿಕಿರಣಗಳಂತಹ ಕಠಿಣ ಪರಿಸ್ಥಿತಿಯಲ್ಲೂ ಉಳಿಯಬಲ್ಲವು ಎಂದು ಪರೀಕ್ಷಿಸಲಾಯಿತು.

ದಿನ 7 (ಜುಲೈ 1): ಅರಿವು ಮತ್ತು ವಾತಾವರಣದ ಮೇಲ್ವಿಚಾರಣೆ

ಶುಕ್ಲಾ ವರ್ಚುವಲ್ ರಿಯಾಲಿಡಿ ಹೆಡ್ ಸೆಟ್‌ಗಳು ಮತ್ತು ಎಫ್ಎನ್ಐಆರ್‌ಎಸ್ ಗಳನ್ನು ಬಳಸಿಕೊಳ್ಳುವ, ನ್ಯೂರೋ ಮೋಷನ್ ವಿಆರ್ ಯೋಜನೆಯಲ್ಲಿ ಪಾಲ್ಗೊಂಡರು. ಇವು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಅರಿವಿನ ಮಟ್ಟವನ್ನು ತಿಳಿಯಲು ಸಾಧ್ಯವಾಗುತ್ತದೆ.

ರಾಡ್ ನ್ಯಾನೊ ಡಾಸಿಮೀಟರ್ ಬಳಸಿಕೊಂಡು, ವಿಕಿರಣ ಮಟ್ಟವನ್ನು ಅಳೆಯಲಾಯಿತು.

ಮುಂದಿನ ಪ್ರಯೋಗಗಳ ಕುರಿತು ತಂಡದ ಸಮಾಲೋಚನೆ.

ದಿನ 8 (ಜುಲೈ 25): ಪ್ರಯೋಗಗಳ ಪ್ರಗತಿ ವೃದ್ಧಿ

ಫ್ರೀಜರ್‌ನಲ್ಲಿ ಇಟ್ಟ ಮಯೋಜೆನೆಸಿಸ್ ಮಾದರಿಗಳನ್ನು ಮರಳಿ ಪಡೆಯಲಾಯಿತು.

ಸ್ಪೇಸ್ ಮೈಕ್ರೋ ಆಲ್ಗೇ ತನಿಖೆಗಾಗಿ ಮಾದರಿಗಳನ್ನು ನಿಯೋಜಿಸಿ, ಅವುಗಳ ಮೇಲ್ವಿಚಾರಣೆ ನಡೆಸಲಾಯಿತು. ಆ ಮೂಲಕ, ಸುಸ್ಥಿರ ಆಹಾರ ಮತ್ತು ಆಮ್ಲಜನಕ ಮೂಲಗಳಿಗೆ ಕೊಡುಗೆ ನೀಡಲಾಗಿದೆ.

ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಮೂಳೆಗಳ ಸವೆತ ಮತ್ತು ಚೇತರಿಕೆಯ ಅಧ್ಯಯನ ನಡೆಸಲು ಐಎಸ್ಎಸ್‌ನಲ್ಲಿ ಪ್ರಯೋಗ ನಡೆಸಲಾಯಿತು.

ದಿನ 9 (ಜುಲೈ 3): ಶೈಕ್ಷಣಿಕ ಸಮಾಲೋಚನೆ ಮತ್ತು ಸಿಸ್ಟಮ್‌ಗಳ ಪರಿಶೀಲನೆ

ಭಾರತೀಯ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಸಲುವಾಗಿ, ಬಾಹ್ಯಾಕಾಶದಲ್ಲಿ ಭೌತಿಕ ಮತ್ತು ರಾಸಾಯನಿಕ ಬದಲಾವಣೆಗಳನ್ನು ಪ್ರದರ್ಶಿಸುವ ಪ್ರಯೋಗಗಳನ್ನು ಚಿತ್ರೀಕರಿಸಲಾಯಿತು.

ಐಎಸ್ಎಸ್ ಸಿಸ್ಟಮ್‌ಗಳು ಮತ್ತು ಪ್ರಯೋಗ ವ್ಯವಸ್ಥೆಗಳನ್ನು ಪರಿಶೀಲನೆ ನಡೆಯಿತು.

ಭಾರತದ ಮೂಲಕ ಹಾದು ಹೋಗುವಾಗ ಸಿಬ್ಬಂದಿ ಭೂ ವೀಕ್ಷಣಾ ಅವಧಿ ನಡೆಸಿ, ವೈಜ್ಞಾನಿಕ ಅಥವಾ ವಿಸ್ತರಣಾ ಉದ್ದೇಶಗಳಿಗಾಗಿ ಛಾಯಾಗ್ರಹಣ ನಡೆಯಿತು.

ದಿನ 10 (ಜುಲೈ 4): ವಿದ್ಯಾರ್ಥಿಗಳೊಡನೆ ಸಂವಹನ (ಹ್ಯಾಮ್ ರೇಡಿಯೋ)

ಶುಭಾಂಶು ಶುಕ್ಲಾ ಒಂದು ಹ್ಯಾಮ್ ರೇಡಿಯೋ ಸಂವಾದದಲ್ಲಿ ಭಾರತೀಯ ವಿದ್ಯಾರ್ಥಿಗಳು ಮತ್ತು ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರದ ವಿಜ್ಞಾನಿಗಳೊಡನೆ ಸಮಾಲೋಚನೆ ನಡೆಸಿದರು. ಶುಕ್ಲಾ ಬಾಹ್ಯಾಕಾಶದ ಜೀವನ, ದೈನಂದಿನ ಚಟುವಟಿಕೆಗಳು, ಮತ್ತು ತನ್ನ ವೈಜ್ಞಾನಿಕ ಕಾರ್ಯಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದರು.

ಮಾನವ ಶರೀರ ಶಾಸ್ತ್ರ ಸೇರಿದಂತೆ, ವಿವಿಧ ಸಂಶೋಧನೆ ಮತ್ತು ತಾಂತ್ರಿಕ ಪ್ರದರ್ಶನಗಳನ್ನು ಶುಕ್ಲಾ ಮುಂದುವರಿಸಿದರು.

ದಿ‌ನ 11 (ಜುಲೈ 5): ವಿಜ್ಞಾನ ಮತ್ತು ಸಿದ್ಧತೆಯ ಸಹಭಾಗಿತ್ವ

ಇಲೆಕ್ಟ್ರಾನಿಕ್ ಡಿಸ್‌ಪ್ಲೇಯ ಮಾನವ ಸಂಶೋಧನಾ ಅಧ್ಯಯ‌ನದ ಭಾಗವಾಗಿ, ದೈನಂದಿನ ಸಾಫ್ಟ್‌ವೇರ್ ಆಧಾರಿತ ಅರಿವು ಮತ್ತು ಇಂಟರ್ಫೇಸ್ ಮೌಲ್ಯಮಾಪನದಲ್ಲಿ ಶುಕ್ಲಾ ಪಾಲ್ಗೊಂಡರು.

ಯೋಜನೆಯ 60 ವೈಜ್ಞಾನಿಕ ಪ್ರಯೋಗಗಳ ಪ್ರಗತಿಯ ಕುರಿತು ಚರ್ಚಿಸಲು ಆಕ್ಸಿಯಮ್ ಸ್ಪೇಸ್ ಮುಖ್ಯ ವಿಜ್ಞಾನಿಯೊಡನೆ ಸಮಾಲೋಚನೆ ನಡೆಯಿತು.

ಇನ್ನುಳಿದ ದಿನಗಳ ಯೋಜನೆಯ ಕುರಿತು ಮಾತುಕತೆ ನಡೆಸಿ, ಭೂಮಿಗೆ ಮರಳುವ ಮುನ್ನ ಗರಿಷ್ಠ ವೈಜ್ಞಾನಿಕ ಫಲಿತಾಂಶ ಗಳಿಸುವತ್ತ ಗಮನ ಹರಿಸಲಾಯಿತು.

ಇದು ಕಳೆದ ಹನ್ನೊಂದು ದಿನಗಳಲ್ಲಿ ಶುಭಾಂಶು ಶುಕ್ಲಾ ಮತ್ತು ಅವರ ಸಹ ಗಗನಯಾತ್ರಿಗಳು ಕೈಗೊಂಡ ಪ್ರಮುಖ ಕಾರ್ಯಗಳ ಅವಲೋಕನವಾಗಿದೆ. ಶುಭಾಂಶು ಶುಕ್ಲಾ ನಿರಂತರವಾಗಿ ಬದ್ಧತೆಯಿಂದ ಕಾರ್ಯಾಚರಿಸಿದ್ದು, ಅವರ ಪ್ರಯಾಣದಿಂದ ಮಹತ್ವದ ವೈಜ್ಞಾನಿಕ ಸಾಧನೆಗಳಾಗಲಿದ್ದು, ಭಾರತೀಯರಿಗೆ ಸ್ಫೂರ್ತಿ ನೀಡಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com