
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್ಎಸ್) 15 ವಿವಿಧ ದೇಶಗಳ ಐದು ಬಾಹ್ಯಾಕಾಶ ಸಂಸ್ಥೆಗಳು ಒಂದೇ ತಂಡವಾಗಿ ಕಾರ್ಯಾಚರಿಸುತ್ತಾ, ನಿರ್ವಹಿಸುತ್ತಿವೆ.
ನವೆಂಬರ್ 2000ದಿಂದ ನಿರಂತರವಾಗಿ ಐಎಸ್ಎಸ್‌ನಲ್ಲಿ ಗಗನಯಾತ್ರಿಗಳು ವಾಸಿಸುತ್ತಾ ಬಂದಿದ್ದಾರೆ.
ವಿವಿಧ ದೇಶಗಳಿಗೆ ಸೇರಿದ, ಏಳು ಸಿಬ್ಬಂದಿಗಳ ತಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸುತ್ತಾ, ಕಾರ್ಯ ನಿರ್ವಹಿಸುತ್ತಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರತಿ ಸೆಕೆಂಡಿಗೆ 8 ಕಿಲೋಮೀಟರ್ ವೇಗದಲ್ಲಿ ಭೂಮಿಗೆ ಪರಿಭ್ರಮಣೆ ನಡೆಸುತ್ತಿದ್ದು, ಪ್ರತಿ 90 ನಿಮಿಷಗಳಿಗೆ ಭೂಮಿಯ ಒಂದು ಪ್ರದಕ್ಷಿಣೆ ಪೂರ್ಣಗೊಳಿಸುತ್ತದೆ. ಕೆಲವೊಂದು ಬಾರಿ ಸಿಬ್ಬಂದಿಗಳ ಬದಲಾವಣೆಯ ಸಂದರ್ಭದಲ್ಲಿ ಏಳಕ್ಕೂ ಹೆಚ್ಚಿನ ಸಂಖ್ಯೆಯ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿರುತ್ತಾರೆ.
ಪ್ರತಿದಿನವೂ ಬಾಹ್ಯಾಕಾಶ ನಿಲ್ದಾಣ ಭೂಮಿಗೆ 16 ಬಾರಿ ಪರಿಭ್ರಮಣೆ ನಡೆಸುತ್ತದೆ. ಅಂದರೆ, ಗಗನಯಾತ್ರಿಗಳು ಪ್ರತೀ 24 ಗಂಟೆಗಳಲ್ಲಿ 16 ಸೂರ್ಯೋದಯ ಮತ್ತು 16 ಸೂರ್ಯಾಸ್ತಗಳನ್ನು ವೀಕ್ಷಿಸುತ್ತಾರೆ.
ಪೆಗ್ಗಿ ವಿಟ್ಸನ್ ಎಂಬ ಅಮೆರಿಕನ್ ಗಗನಯಾತ್ರಿ ಸೆಪ್ಟೆಂಬರ್ 2, 2017ರ ವೇಳೆಗೆ ಬಾಹ್ಯಾಕಾಶದಲ್ಲಿ 665 ದಿನಗಳನ್ನು ಕಳೆದು, ಅಮೆರಿಕಾ ಪರ ದಾಖಲೆ ನಿರ್ಮಿಸಿದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಆರು ಕೋಣೆಗಳ ಮನೆಗಿಂತಲೂ ದೊಡ್ಡದಾಗಿದ್ದು, ಆರು ಮಲಗುವ ಸ್ಥಳಗಳು, ಎರಡು ಸ್ನಾನಗೃಹಗಳು, ಒಂದು ಜಿಮ್ ಮತ್ತು ಬಾಹ್ಯಾಕಾಶ ಮತ್ತು ಭೂಮಿಯನ್ನು 360 ಡಿಗ್ರಿ ವೀಕ್ಷಿಸಬಹುದಾದ ದೊಡ್ಡ ಕಿಟಕಿಯನ್ನೂ ಹೊಂದಿದೆ.
ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಗಗನಯಾತ್ರಿಗಳು ಪ್ರತಿದಿನವೂ ಕನಿಷ್ಠ ಎರಡು ಗಂಟೆಗಳಷ್ಟು ವ್ಯಾಯಾಮ ಮಾಡಬೇಕಾಗುತ್ತದೆ. ಇದು ಅವರಿಗೆ ಬಾಹ್ಯಾಕಾಶದಲ್ಲಿ ಸ್ನಾಯುಗಳು ಮತ್ತು ಮೂಳೆಗಳ ನಷ್ಟವನ್ನು ತಡೆಗಟ್ಟಲು ನೆರವಾಗುತ್ತದೆ.
ಗಗನಯಾತ್ರಿಗಳು ಆಗಾಗ ಬಾಹ್ಯಾಕಾಶ ನಡಿಗೆ ಕೈಗೊಳ್ಳುತ್ತಾ, ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ, ದುರಸ್ತಿ ಮತ್ತು ಮೇಲ್ದರ್ಜೆಗೇರಿಸುವಿಕೆ ನಡೆಸುತ್ತಾರೆ.
ಐಎಸ್ಎಸ್‌ನ ಸೌರ ಫಲಕ 109 ಮೀಟರ್‌ಗಳಷ್ಟು (356 ಅಡಿ) ಅಗಲವಿದ್ದು, ಇದು ಅತಿದೊಡ್ಡ ಪ್ರಯಾಣಿಕ ವಿಮಾನವಾದ, 80 ಮೀಟರ್‌ಗಳಿಗೂ (262 ಅಡಿ) ದೊಡ್ಡದಾದ ಏರ್‌ಬಸ್ ಎ380 ವಿಮಾನಕ್ಕಿಂತಲೂ ದೊಡ್ಡದಾಗಿದೆ.
ಇಷ್ಟು ದೊಡ್ಡದಾದ ಬಾಹ್ಯಾಕಾಶ ನಿಲ್ದಾಣದ ಪ್ರಮುಖ ಬಿಡಿಭಾಗಗಳು ಮತ್ತು ಇತರ ಉಪಕರಣಗಳನ್ನು 42 ಜೋಡಣಾ ಯೋಜನೆಗಳ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಅವುಗಳ ಪೈಕಿ 37ನ್ನು ಅಮೆರಿಕಾದ ಬಾಹ್ಯಾಕಾಶ ನೌಕೆಗಳು ನಡೆಸಿದರೆ, ಉಳಿದ 5 ಯೋಜನೆಗಳನ್ನು ರಷ್ಯಾದ ಪ್ರೋಟೋನ್ ಅಥವಾ ಸೊಯುಜ್ ರಾಕೆಟ್‌ಗಳು ಉಡಾವಣೆಗೊಳಿಸಿದವು.
ಐಎಸ್ಎಸ್ ಒಂದು ತುದಿಯಿಂದ ಇನ್ನೊಂದು ತುದಿಗೆ 109 ಮೀಟರ್ (ಅಂದಾಜು 356 ಅಡಿ) ಇದೆ. ಇದು ಅಮೆರಿಕನ್ ಫುಟ್‌ಬಾಲ್ ಮೈದಾನಕ್ಕಿಂತ ಕೇವಲ ಮೂರು ಅಡಿಗಳಷ್ಟು ಸಣ್ಣದಾಗಿದೆ.
ಐಎಸ್ಎಸ್‌ನ ವ್ಯವಸ್ಥೆಗಳಿಗೆ ವಿದ್ಯುತ್ ಶಕ್ತಿ ಪೂರೈಕೆ ನಡೆಸಲು 13 ಕಿಲೋಮೀಟರ್‌ಗಳಷ್ಟು ಉದ್ದದ ವಯರ್‌ಗಳನ್ನು ಅಳವಡಿಸಲಾಗಿದೆ.
ಐಎಸ್ಎಸ್ ಹೊಂದಿರುವ ಕ್ಯಾನಾಡಾರ್ಮ್ 2 ಎಂಬ ರೊಬಾಟಿಕ್ ಆರ್ಮ್ 55 ಅಡಿಗಳಷ್ಟು ಉದ್ದವಿದ್ದು, ಇದು ಏಳು 'ಜಾಯಿಂಟ್'ಗಳು ಮತ್ತು ಎರಡು ಕೈಗಳನ್ನು ಹೊಂದಿದೆ. ಇದು ದೊಡ್ಡ ಮಾಡ್ಯುಲ್‌ಗಳನ್ನು ಚಲಿಸಲು ಮತ್ತು ಪ್ರಯೋಗಗಳನ್ನು ಕೈಗೊಳ್ಳಲು, ಹಾಗೂ ಬಾಹ್ಯಾಕಾಶ ನಡಿಗೆಗಾಗಿ ಗಗನಯಾತ್ರಿಗಳನ್ನು ಮೇಲೆತ್ತಲು ಬಳಕೆಯಾಗುತ್ತದೆ.
ಐಎಸ್ಎಸ್‌ಗೆ ಏಕಕಾಲದಲ್ಲಿ ಗರಿಷ್ಠ ಎಂಟು ಬಾಹ್ಯಾಕಾಶ ನೌಕೆಗಳನ್ನು ಜೋಡಿಸಬಹುದು.
ಭೂಮಿಯಿಂದ ಉಡಾವಣೆಗೊಳ್ಳುವ ಕೆಲವು ಬಾಹ್ಯಾಕಾಶ ನೌಕೆಗಳು ಕೇವಲ ನಾಲ್ಕು ಗಂಟೆಗಳಲ್ಲೂ ಬಾಹ್ಯಾಕಾಶ ನಿಲ್ದಾಣವನ್ನು ತಲುಪಬಲ್ಲವು.
ನಾಲ್ಕು ಕಾರ್ಗೋ ಬಾಹ್ಯಾಕಾಶ ನೌಕೆಗಳು ನಿರಂತರವಾಗಿ ಉಪಕರಣಗಳು, ಸಂಶೋಧನಾ ವ್ಯವಸ್ಥೆಗಳು ಮತ್ತು ಆಹಾರ ವಸ್ತುಗಳನ್ನು ಐಎಸ್ಎಸ್‌ಗೆ ಸಾಗಿಸುತ್ತವೆ. ಅವುಗಳೆಂದರೆ: ನಾರ್ತ್‌ರೋಪ್ ಗ್ರುಮ್ಮನ್‌ನ ಸೈಗನ್ಸ್, ಸ್ಪೇಸ್ಎಕ್ಸ್‌ನ ಡ್ರ್ಯಾಗನ್, ಜಪಾನಿನ ಎಚ್‌ಟಿವಿ ಮತ್ತು ರಷ್ಯಾದ ಪ್ರೋಗ್ರೆಸ್.
ಎಕ್ಸ್‌ಪೆಡಿಷನ್ 60 ಯೋಜನೆಯ ಮೂಲಕ, ಐಎಸ್ಎಸ್ 108ಕ್ಕೂ ಹೆಚ್ಚು ದೇಶಗಳ ಬಹುತೇಕ 3,000 ವೈಜ್ಞಾನಿಕ ಪ್ರಯೋಗಗಳಿಗೆ ಬೆಂಬಲ ನೀಡಿದೆ.
ಆಕ್ಸಿಯಮ್-4 ಯೋಜನೆ (ಎಎಕ್ಸ್-4) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಯಾವುದೋ ನಿರ್ದಿಷ್ಟ ಯೋಜನಾ ಸಂಖ್ಯೆಯನ್ನು ಹೊಂದಿಲ್ಲ. ನಾಸಾದ ಅಧಿಕೃತ ಮಾಹಿತಿಗಳ ಪ್ರಕಾರ, ಎಎಕ್ಸ್-4 ಯೋಜನೆ ಎಕ್ಸ್ಪೆಡಿಷನ್ 73 ಸಿಬ್ಬಂದಿಗಳು ಮತ್ತು ಸ್ಪೇಸ್ ಎಕ್ಸ್ ಕ್ರ್ಯೂ 11 ಯೋಜನೆಯ ತಂಡಗಳಷ್ಟು ಕಾಲ ಕಳೆಯಲಿದೆ.
ಐಎಸ್ಎಸ್ ಭೂಮಿಯ ಪರಿಭ್ರಮಣೆ ನಡೆಸುವ ಸಂದರ್ಭದಲ್ಲಿ, ಭೂಮಿಯ 90%ಕ್ಕೂ ಹೆಚ್ಚು ಜನರ ಮೇಲೆ ಹಾದುಹೋಗುತ್ತದೆ. ಗಗನಯಾತ್ರಿಗಳು ಬಾಹ್ಯಾಕಾಶದಿಂದ ಮಿಲಿಯಾಂತರ ಛಾಯಾಚಿತ್ರಗಳನ್ನು ತೆಗೆದಿದ್ದಾರೆ.
ಬಾಹ್ಯಾಕಾಶ ನಿಲ್ದಾಣ ತನ್ನ ಹೊರಭಾಗದಲ್ಲಿ 20ಕ್ಕೂ ಹೆಚ್ಚು ವಿಭಿನ್ನ ಸಂಶೋಧನಾ ಉಪಕರಣಗಳು ಮತ್ತು ಪ್ರಯೋಗಗಳನ್ನು ಹೊಂದಿದೆ. ಇವುಗಳಲ್ಲಿ ಭೂ ವೀಕ್ಷಣಾ ಉಪಕರಣಗಳು, ಬಾಹ್ಯಾಕಾಶ ವೀಕ್ಷಣಾ ವ್ಯವಸ್ಥೆಗಳನ್ನು ಒಳಗೊಂಡಿದೆ. ಇವುಗಳಲ್ಲಿ ಬಾಹ್ಯಾಕಾಶದಲ್ಲಿನ ಅಸಹಜ ಕಣಗಳನ್ನು ಗುರುತಿಸಲು ಬಳಕೆಯಾಗುವ ಆಲ್ಫಾ ಮ್ಯಾಗ್ನೆಟಿಕ್ ಸ್ಪೆಕ್ಟ್ರೋಮೀಟರ್-02 ಸಹ ಸೇರಿದೆ.
ಭೂಮಿಯಿಂದ ಚಂದ್ರನಲ್ಲಿಗೆ ತೆರಳಿ, ಮರಳಿ ಭೂಮಿಗೆ ಮರಳುವಷ್ಟು ಅಂತರವನ್ನು ಐಎಸ್ಎಸ್ ಪ್ರತಿದಿನವೂ ಕ್ರಮಿಸುತ್ತದೆ.
ಐಎಸ್ಎಸ್ ವ್ಯವಸ್ಥೆಗಳನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು 50ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ನಿರಂತರವಾಗಿ ಕಾರ್ಯಾಚರಿಸುತ್ತಿರುತ್ತವೆ. ಇವುಗಳು ವಿದ್ಯುತ್ ಶಕ್ತಿಯಿಂದ ಗಾಳಿಯ ಪೂರೈಕೆ, ಸಂವಹನದಿಂದ ಸುರಕ್ಷತೆಯ ತನಕ ಎಲ್ಲವನ್ನೂ ನಿಯಂತ್ರಿಸುತ್ತವೆ. ಆ ಮೂಲಕ ಐಎಸ್ಎಸ್ ಸುಗಮವಾಗಿ ಕಾರ್ಯಾಚರಿಸಿ, ಗಗನಯಾತ್ರಿಗಳು ಸದಾ ಸುರಕ್ಷಿತವಾಗಿರುವಂತೆ ಮಾಡುತ್ತವೆ.
ಬಾಹ್ಯಾಕಾಶ ನಿಲ್ದಾಣಕ್ಕೆ ಭೂಮಿಯಿಂದ ಬೆಂಬಲ ನೀಡುವ ಸಲುವಾಗಿ 3 ಮಿಲಿಯನ್ ಸಾಲುಗಳಿಗೂ ಹೆಚ್ಚಿನ ಸಾಫ್ಟ್‌ವೇರ್ ಕೋಡ್‌ಗಳನ್ನು ಬಳಸಲಾಗಿದೆ. ಇವು ಬಾಹ್ಯಾಕಾಶ ನಿಲ್ದಾಣದಲ್ಲಿ ಬಳಕೆಯಾಗುತ್ತಿರುವ 1.5 ಮಿಲಿಯನ್ ಸಾಲುಗಳಿಗೂ ಹೆಚ್ಚಿನ ಕೋಡ್‌ಗಳೊಡನೆ (ಫ್ಲೈಟ್ ಸಾಫ್ಟ್‌ವೇರ್) ಕಾರ್ಯಾಚರಿಸುತ್ತವೆ. ಜೊತೆಯಾಗಿ ಈ ಸಾಫ್ಟ್‌ವೇರ್ ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಯನ್ನು ನಿಯಂತ್ರಿಸಿ, ಎಲ್ಲವೂ ಸರಿಯಾಗಿ ಕಾರ್ಯಾಚರಿಸುವಂತೆ ಮಾಡುತ್ತದೆ.
ಬಾಹ್ಯಾಕಾಶ ನಿಲ್ದಾಣದ ಅಮೆರಿಕನ್ ವಿಭಾಗದಲ್ಲಿ 44 ಕಂಪ್ಯೂಟರ್‌ಗಳು ಜೊತೆಯಾಗಿ ಕಾರ್ಯಾಚರಿಸುತ್ತವೆ. ಅವುಗಳು 100ಕ್ಕೂ ಹೆಚ್ಚು ಡೇಟಾ ನೆಟ್ವರ್ಕ್‌ಗಳು ಮೂಲಕ ಸಂಪರ್ಕ ಹೊಂದಿದ್ದು, 1.5 ಮಿಲಿಯನ್ ಸಾಲುಗಳಿಗೂ ಹೆಚ್ಚಿನ ಕೋಡ್‌ಗಳನ್ನು ನಿರ್ವಹಿಸುತ್ತವೆ. ಈ ನೆಟ್ವರ್ಕ್‌ಗಳು ಕಂಪ್ಯೂಟರ್‌ಗಳಿಗೆ ಅಂದಾಜು 4 ಲಕ್ಷ ಸಂಕೇತಗಳನ್ನು (ಗಾಳಿಯ ಒತ್ತಡ ತಪಾಸಣೆ, ತಾಪಮಾನ, ಅಥವಾ ಕವಾಟಗಳು ತೆರೆದಿವೆಯೇ, ಮುಚ್ಚಿವೆಯೇ ಎಂಬಂತಹ ಸಂಕೇತಗಳು) ಹಂಚಿಕೊಳ್ಳಲು ನೆರವಾಗುತ್ತವೆ.
ಪ್ರೆಶರೈಸ್ಡ್ ಮಾಡ್ಯುಲ್ ಉದ್ದ: ಮುಚ್ಚಲ್ಪಟ್ಟಿರುವ ಈ ಪ್ರಮುಖ ಪ್ರದೇಶದಲ್ಲಿ ಗಗನಯಾತ್ರಿಗಳು ಜೀವನ ಮತ್ತು ಕೆಲಸಗಳನ್ನು ನಡೆಸುತ್ತಾರೆ. ಇದು ಅಂದಾಜು 218 ಅಡಿ (67 ಮೀಟರ್) ಉದ್ದವಿದ್ದು, ಇದು ಅಂದಾಜು ಎರಡು ಪ್ರಯಾಣಿಕ ವಿಮಾನಗಳಷ್ಟು ಉದ್ದವಿದೆ.
ಟ್ರಸ್ ಲೆಂತ್: ಬಾಹ್ಯಾಕಾಶ ನಿಲ್ದಾಣದ ಟ್ರಸ್ (ಉದ್ದನೆಯ ಲೋಹದ ರಚನೆಯಾಗಿದ್ದು, ಬಾಹ್ಯಾಕಾಶ ನಿಲ್ದಾಣದ ಬೆನ್ನೆಲುಬಿನ ರೀತಿಯಲ್ಲಿ ಕಾರ್ಯಾಚರಿಸುತ್ತದೆ. ಇದು ಸೌರ ಫಲಕಗಳು ಮತ್ತು ಇತರ ಪ್ರಮುಖ ಉಪಕರಣಗಳನ್ನು ಹೊಂದಿದೆ) ಅಂದಾಜು 310 ಅಡಿ (94 ಮೀಟರ್) ಉದ್ದವಾಗಿದ್ದು, ಬಹುತೇಕ ಒಂದು ಫುಟ್‌ಬಾಲ್ ಮೈದಾನದಷ್ಟು ಉದ್ದವಿದೆ.
ತೂಕ: ಬಾಹ್ಯಾಕಾಶ ನಿಲ್ದಾಣ ಅಂದಾಜು 420 ಟನ್ ತೂಕ ಹೊಂದಿದೆ. ಇದು ಅಂದಾಜು 320 ಕಾರ್‌ಗಳ ತೂಕಕ್ಕೆ ಸಮನಾಗಿದೆ. ಇದು ಒಟ್ಟಾರೆ ಬಾಹ್ಯಾಕಾಶ ನಿಲ್ದಾಣ ಎಷ್ಟು ಬೃಹತ್ತಾದ ರಚನೆ ಎಂಬ ಚಿತ್ರಣವನ್ನು ಒದಗಿಸುತ್ತದೆ.
ವಾಸಯೋಗ್ಯ ಸ್ಥಳ: ಬಾಹ್ಯಾಕಾಶ ನಿಲ್ದಾಣದೊಳಗೆ 13,696 ಘನ ಅಡಿಗಳಷ್ಟು (388 ಘನ ಮೀಟರ್) ವಾಸ ಸ್ಥಳವಿದ್ದು, ಇದು ಭೇಟಿ ನೀಡುವ ಬಾಹ್ಯಾಕಾಶ ನೌಕೆಗಳ ಒಳಗಿನ ಸ್ಥಳಾವಕಾಶವನ್ನು ಹೊರತುಪಡಿಸಿದೆ. ಇಲ್ಲಿ ಗಗನಯಾತ್ರಿಗಳು ಸಂಚರಿಸಲು, ಆಹಾರ ಸೇವಿಸಲು, ಕಾರ್ಯ ನಿರ್ವಹಿಸಲು, ಮತ್ತು ಮಲಗಲು ಸಾಧ್ಯವಾಗುತ್ತದೆ. ಇದು ಸಣ್ಣ ಮೂರು ಕೊಠಡಿಗಳ ಮನೆಯಷ್ಟು ಸ್ಥಳಾವಕಾಶ ಹೊಂದಿದೆ.
ಪ್ರೆಶರೈಸ್ಡ್ ವಾಲ್ಯೂಮ್: ಇದು ಬಾಹ್ಯಾಕಾಶ ನಿಲ್ದಾಣದ ಒಳಗಿನ ಒಟ್ಟು ಸೀಲ್ ಮಾಡಲಾದ ಸ್ಥಳವಾಗಿದ್ದು, ಗಗನಯಾತ್ರಿಗಳಿಗೆ ಸ್ಪೇಸ್ ಸೂಟ್ ಧರಿಸದೆ ವಾಸಿಸಲು, ಕೆಲಸ ಮಾಡಲು ಅವಶ್ಯಕ ಗಾಳಿಯನ್ನು ಹೊಂದಿದೆ. ಇದು 35,491 ಘನ ಅಡಿಗಳಷ್ಟು ವಿಶಾಲವಾಗಿದೆ. ಇದು ಅಂದಾಜು ಒಂದು ದೊಡ್ಡ ಪ್ರಯಾಣಿಕ ವಿಮಾನದ ಒಳಮೈ ಗಾತ್ರಕ್ಕೆ ಸಮನಾಗಿದೆ.
ವಿದ್ಯುತ್ ಉತ್ಪಾದನೆ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದನೆ ನಡೆಸಲು ಎಂಟು ದೊಡ್ಡ ಸೌರ ಫಲಕಗಳನ್ನು ಹೊಂದಿದೆ. ಜೊತೆಯಾಗಿ ಈ ಸೌರ ಫಲಕಗಳು 75ರಿಂದ 90 ಕಿಲೋವ್ಯಾಟ್ ವಿದ್ಯುತ್ ಶಕ್ತಿ ಉತ್ಪಾದಿಸುತ್ತವೆ. ಈ ಪ್ರಮಾಣದ ವಿದ್ಯುತ್ 40ರಿಂದ 60 ಗೃಹೋಪಯೋಗಿ ಉಪಕರಣಗಳನ್ನು ಏಕಕಾಲದಲ್ಲಿ ಬಳಸಲು ಸಾಕಷ್ಟಾಗುತ್ತದೆ.
ಕಂಪ್ಯೂಟರ್ ಕೋಡ್‌ಗಳು: ಬಾಹ್ಯಾಕಾಶ ನಿಲ್ದಾಣ ಬಹುತೇಕ 1.5 ಮಿಲಿಯನ್ ಸಾಲುಗಳಷ್ಟು ಕಂಪ್ಯೂಟರ್ ಕೋಡ್‌ಗಳನ್ನು ಕಾರ್ಯಾಚರಿಸುತ್ತದೆ. ಈ ಸಾಫ್ಟ್‌ವೇರ್ ಜೀವ ಬೆಂಬಲ ವ್ಯವಸ್ಥೆಗಳಿಂದ ಸಂವಹನ, ವಿದ್ಯುತ್ ಶಕ್ತಿಯ ತನಕ ಎಲ್ಲವನ್ನೂ ನಿಯಂತ್ರಿಸಿ, ಬಾಹ್ಯಾಕಾಶ ನಿಲ್ದಾಣ ಸುಗಮವಾಗಿ ಮತ್ತು ಸುರಕ್ಷಿತವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement