ಬಹುಮತವಿದ್ದರೂ ನಾಯಕತ್ವದ್ದೇ ಗೊಂದಲ (ನೇರ ನೋಟ)

ಕರ್ನಾಟಕದ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಇವತ್ತು ಯುದ್ಧ ಮುನ್ನದ ಸ್ಥಿತಿಯಲ್ಲಿ ಇದ್ದಂತಿದೆ. ಯಾವ ಘಳಿಗೆಯಲ್ಲಿ ಬಹಿರಂಗ ಬಂಡಾಯ ಸಂಭವಿಸುತ್ತದೆಯೋ ಎಂಬ ವಾತಾವರಣ. ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್‌ ಸರಕಾರ.
DK Shivakumar- CM Siddaramaiah
ಡಿಕೆ ಶಿವಕುಮಾರ್- ಸಿಎಂ ಸಿದ್ದರಾಮಯ್ಯonline desk
Updated on

ಬೆಂಕಿ ಇಲ್ಲದೇ ಹೊಗೆಯಾಡುತ್ತಾ ಎಂಬುದು ಕನ್ನಡದ ಒಂದು ಹಳೆಯ ಗಾದೆ. ಕರ್ನಾಟಕದ ಕಾಂಗ್ರೆಸ್‌ ರಾಜಕಾರಣವನ್ನು ಗಮನಿಸಿದರೆ ಈ ಗಾದೆ ಮಾತು ಅತ್ಯಂತ ಸೂಕ್ತ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್‌ ಅಧಿಕಾರದಿಂದ ಕೆಳಗಿಳಿಸುತ್ತದೆ ಎಂದು ಸೂಚಿಸುವ ವಿದ್ಯಮಾನಗಳು ಆಡಳಿತಾರೂಢ ಕಾಂಗ್ರೆಸ್‌ ನಲ್ಲಿ ತಳಮಳ ಸೃಷ್ಟಿಸಿದೆ. ಬಣ ರಾಜಕಾರಣ ಸದ್ದು ಮಾಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿಎಂ ಗಾದಿಗೆ ಏರುವ ನಿರೀಕ್ಷೆಯಲ್ಲಿ ಅವರ ಬೆಂಬಲಿಗರು ಕಾದು ಕುಳಿತಿದ್ದಾರೆ. ಮುಟ್ಟಿದರೆ ಹುಷಾರ್ ಎಂಬಂತೆ ಸಿದ್ದರಾಮಯ್ಯ ಬೆಂಬಲಿಗರು ಹೈಕಮಾಂಡ್ ವಿರುದ್ಧವೇ ತಿರುಗಿ ಬೀಳುವ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಸಿ ಎಂ ಸಿದ್ದರಾಮಯ್ಯ ಅವರು ಗುರುವಾರ ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ನಿಂತು ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ. ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಪುನರುಚ್ಛರಿಸಿರುವುದು ಮುಂದಿನ ಬಣ ರಾಜಕಾರಣಕ್ಕೆ ನೀರೆರೆದಿದೆ.

ಕರ್ನಾಟಕದ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಇವತ್ತು ಯುದ್ಧ ಮುನ್ನದ ಸ್ಥಿತಿಯಲ್ಲಿ ಇದ್ದಂತಿದೆ. ಯಾವ ಘಳಿಗೆಯಲ್ಲಿ ಬಹಿರಂಗ ಬಂಡಾಯ ಸಂಭವಿಸುತ್ತದೆಯೋ ಎಂಬ ವಾತಾವರಣ. ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್‌ ಸರಕಾರ. ಜೊತೆಯಲ್ಲಿ ಮಾಸ್‌ ಲೀಡರ್ ಸಿದ್ದರಾಮಯ್ಯ ಅವರ ಪ್ರಬಲ ನಾಯಕತ್ವ. ಹೀಗಿದ್ದರೂ ನಾಯಕತ್ವದ್ದೇ ಗೊಂದಲ. ಇದಕ್ಕೆ ಹೊಣೆ ಕಾಂಗ್ರೆಸ್ಸೇ. ಆ ಪಕ್ಷದ ಶಾಸಕರೇ. ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಕಾಂಗ್ರೆಸ್ಸಿಗೆ ಬಹುಮತವಿದೆ. ಮೊದಲ ಅವಧಿಯಲ್ಲಿ ಅವರ ನಾಯಕತ್ವ ಗಟ್ಟಿ ಇತ್ತು. ಮೊದಲ ಅವಧಿಯದ್ದು ಭಾಗ್ಯಗಳ ಸರಕಾರ. ಎರಡನೇ ಅವಧಿಯಲ್ಲಿ ಗ್ಯಾರಂಟಿಗಳ ಘೋಷಣೆ ಹಾಗೂ ಅನುಷ್ಠಾನ. ಆದರೂ, ಸಿದ್ದರಾಮಯ್ಯ ಅವರ ನಾಯಕತ್ವ ಐದು ವರ್ಷಗಳ ಕಾಲ ಗ್ಯಾರಂಟಿ ಎಂದು ಹೇಳುವ ಸ್ಥಿತಿಯಲ್ಲಿ ಕೈಪಕ್ಷದ ಅನೇಕ ಶಾಸಕರೇ ಇಲ್ಲ. ಇದು ವಿಪರ್ಯಾಸ.

ಸಿಎಂ ಪಟ್ಟದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯುವರೆಂಬ ಚರ್ಚೆ ಬಿರುಸಾಗಲು ಅವರ ಆಪ್ತ ಸಚಿವರು, ಶಾಸಕರ ಹೇಳಿಕೆಗಳಿಗೆ ಕಾರಣ. ಹೈಕಮಾಂಡ್‌ ಈ ಕ್ಷಣದವರೆಗೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿಸಿಎಂ ಶಿವಕುಮಾರ್ ಅವರಿಗೆ ಪಟ್ಟ ಕಟ್ಟುವ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿಲ್ಲ. ಹಾಗಂತ ಇಷ್ಟೊಂದು ಚರ್ಚೆ ನಡೆಯುತ್ತಿರುವ ಹೊತ್ತಲ್ಲೂ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಎಂದು ಘಂಟಾಘೋಷವಾಗಿ ಹೇಳಿಲ್ಲ. ಇದೇ ಅನುಮಾನದ ಹುತ್ತವನ್ನು ಬೆಳೆಸಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಗಾದಿಯಲ್ಲಿ ಮುಂದುವರಿಯುವ ವಿಚಾರದಲ್ಲಿ ಎದ್ದಿರುವ ಗೊಂದಲಕ್ಕೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬೆಂಬಲಿಗ ಶಾಸಕರು ಎಷ್ಟು ಕಾರಣರೋ ಅಷ್ಟೇ ಕಾರಣ ಹೈಕಮಾಂಡ್ ಕೂಡ.

ಸರಕಾರ ರಚನೆಯ ಆರಂಭದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದರು. ಕೊನೆಗೆ ದೊರೆತಿದ್ದು ಡಿಸಿಎಂ ಹುದ್ದೆ. ಜೊತೆಯಲ್ಲಿ ಕೆಪಿಸಿಸಿ ಅಧ್ಯಕ್ಷಗಿರಿ ಮುಂದುವರಿಕೆ. ಯಾವಾಗ ಸರಕಾರದಲ್ಲಿ ಸಿದ್ದರಾಮಯ್ಯ ಅವರಿಗೆ ಶಿವಕುಮಾರ್ ಪ್ರತಿಸ್ಪರ್ಧಿಯಾಗಿ ರೂಪುಗೊಂಡರೋ ಅಲ್ಲಿಂದಲೇ ಸಿದ್ದರಾಮಯ್ಯ ಅವರ ನಾಯಕತ್ವ ಐದು ವರ್ಷಗಳ ಕಾಲ ಅಬಾಧಿತ ಎಂಬುದರ ಬಗ್ಗೆ ಗೊಂದಲಗಳು ಸೃಷ್ಟಿಯಾದವು. ಸರಕಾರ ರಚನೆಯ ಆರಂಭದಲ್ಲೇ ಅಪಸ್ವರಗಳು ಎದ್ದವು. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿ ಪ್ರತಿಸ್ಪರ್ಧಿಯೇ ಇರಲಿಲ್ಲ. ಆದರೆ, ಎರಡನೇ ಅವಧಿಯಲ್ಲಿ ಶಿವಕುಮಾರ್ ಸಡ್ಡು ಹೊಡೆದಿದ್ದರು. ಹಾಗೇ ನೋಡಿದರೆ ಮೊದಲ ಅವಧಿಯಲ್ಲಿ ಅನೇಕ ದಿನಗಳ ಕಾಲ ಶಿವಕುಮಾರ್‌ ಅವರನ್ನು ಸಿದ್ದರಾಮಯ್ಯ ತಮ್ಮ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿರಲೇ ಇಲ್ಲ.

DK Shivakumar- CM Siddaramaiah
DK Shivakumar ಅಸಹಜ ತಾಳ್ಮೆ ಹಿಂದಿನ ನಿಗೂಢ ಲೆಕ್ಕಾಚಾರ ಏನು? (ಸುದ್ದಿ ವಿಶ್ಲೇಷಣೆ)

ಸಿದ್ದರಾಮಯ್ಯ ಅವರ ನಾಯಕತ್ವ ಮುಂದುವರಿಯುವ ವಿಚಾರದಲ್ಲಿ ಎದ್ದಿರುವ ಗೊಂದಲಗಳಿಗೆ ಕೆಲವು ಹೇಳಿಕೆಗಳು, ನಡೆಗಳು ಕಾರಣ. ಇದಕ್ಕೆ ಇತ್ತೀಚಿನ ಸೇರ್ಪಡೆ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಇತರ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸದಸ್ಯರಾಗಿ ಸಿದ್ದರಾಮಯ್ಯ ನೇಮಕ. ಈ ಸಮಿತಿಗೆ ಸಿದ್ದರಾಮಯ್ಯ ಅಧ್ಯಕ್ಷರು ಎಂಬ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದ ಮರು ದಿನವೇ ಮುಖ್ಯಮಂತ್ರಿಗಳ ಕಚೇರಿಯಿಂದ ಸ್ಪಷ್ಟೀಕರಣ ಹೊರ ಬಿತ್ತು. ಸಿದ್ದರಾಮಯ್ಯ ಒಬಿಸಿ ಸಲಹಾ ಮಂಡಳಿ ಸದಸ್ಯರಲ್ಲಿ ಒಬ್ಬರು. ಅವರು ಅಧ್ಯಕ್ಷರಾಗಿ ನೇಮಕವಾಗಿಲ್ಲ ಎಂಬ ಸ್ಪಷ್ಟನೆ ಅದು.

ಒಬಿಸಿ ಸಲಹಾ ಮಂಡಳಿಗೆ ತಮ್ಮನ್ನು ನೇಮಿಸಿರುವುದು ಪತ್ರಿಕೆಗಳ ಮೂಲಕ ಗೊತ್ತಾಯಿತು. ತಮಗೆ ನೀಡಿರುವ ಹುದ್ದೆ ಏನೆಂಬುದನ್ನು ಹೈಕಮಾಂಡಿಗೇ ಕೇಳಿ ತಿಳಿಯುತ್ತೇನೆ ಎಂದರು ಸಿದ್ದರಾಮಯ್ಯ. ಅವರ ಈ ಮಾತು ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಸಂಪರ್ಕದ ಕೊರತೆಯನ್ನು ಸ್ಪಷ್ಟವಾಗಿ ಸಾರಿತು. ಇದೇ ವೇಳೆ ರಾಷ್ಟ್ರಮಟ್ಟದಲ್ಲಿ ಒಕ್ಕಲಿಗರು, ಲಿಂಗಾಯತರು ಒಬಿಸಿಗಳೇ ಎಂದು ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ಗಮನ ಸೆಳೆಯಿತು. ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಸಿದ್ದತೆ ನಡೆದಿದೆಯೇ? ಎಂಬ ಪ್ರಶ್ನೆಗಳು ತಲೆ ಎತ್ತಿದವು. ಸಿದ್ದರಾಮಯ್ಯ ಪರ ಅವರ ಆಪ್ತ ಶಾಸಕರು ಮತ್ತೆ ಮಾತಾಡಲು ಆರಂಭಿಸಿ ನಾಯಕತ್ವದ ಗೊಂದಲವನ್ನು ಮುನ್ನೆಲೆಗೆ ತಂದರು.

ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ರಾಜ್ಯದಲ್ಲಿ ನಾಯಕತ್ವದ ಬಗ್ಗೆ ಬಹಿರಂಗವಾಗಿ ಯಾರೂ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿ ಅನೇಕ ದಿನಗಳಾದವು. ಆದರೂ, ಸಿದ್ದರಾಮಯ್ಯ-ಶಿವಕುಮಾರ್ ಪರ ಶಾಸಕರ ಹೇಳಿಕೆಗಳು ನಿಂತಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿದ್ದರೂ ಕೆಲವು ಕಾಂಗ್ರೆಸ್ ನಾಯಕರು ಹೈಕಮಾಂಡ್‌ ಭೇಟಿಗೆ ದೆಹಲಿಗೆ ತೆರಳುವುದಾಗಿ ಹೇಳಿಕೆ ನೀಡುತ್ತಾರೆ. ಇದು ಹೈಕಮಾಂಡ್‌ ನಲ್ಲಿ ಖರ್ಗೆ ಅವರ ಪ್ರಾಬಲ್ಯ ಇದೆಯೇ ಎಂಬ ಅನುಮಾನಕ್ಕೆ ಪುಷ್ಟಿ ನೀಡುತ್ತದೆ.

ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್‌ ಶಾಸಕರ ಸಮಸ್ಯೆಗಳು ಹತ್ತು ಹಲವು. ರಾಜ್ಯದಲ್ಲಿ ಎಐಸಿಸಿ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೆವಾಲ ಅವರ ಮುಂದೆ ಶಾಸಕರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಸುರ್ಜೆವಾಲ ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಅಹವಾಲನ್ನು ಲಿಖಿತ ಮೂಲಕ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸಿಎಂ, ಡಿಸಿಎಂ ಉಪಸ್ಥಿತರಿರಲಿಲ್ಲ. ಸಿಎಂ, ಡಿಸಿಎಂ ಗೈರು ಹಾಜರಿಯಲ್ಲಿ ಸುರ್ಜೇವಾಲ ಶಾಸಕರ ಅಭಿಪ್ರಾಯ ಸಂಗ್ರಹಿಸಿರುವುದು ಹಲವರ ಹುಬ್ಬೇರಿಸಿದೆ. ಸಭೆ ನಂತರ ಸುರ್ಜೇವಾಲ ಹಾಗೂ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು ಪ್ರತ್ಯೇಕವಾಗಿ ಸುದ್ದಿಗಾರರ ಜೊತೆ ಆಡಿರುವ ಮಾತು ಗಮನಾರ್ಹ.

DK Shivakumar- CM Siddaramaiah
ಸಭಾಪತಿ ಬಸವರಾಜ ಹೊರಟ್ಟಿ ನಡೆ ಮೂಡಿಸಿರುವ ರಾಜಕೀಯ ಕುತೂಹಲ!! (ಸುದ್ದಿ ವಿಶ್ಲೇಷಣೆ)

ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ನಾವು ಒಂದು ಅಥವಾ ಎರಡು ವರ್ಷಕ್ಕೆ ಆಯ್ಕೆ ಮಾಡಿಲ್ಲ. ನಾಯಕತ್ವ ಬದಲಾವಣೆ ಏಕೆ ಮಾಡಬೇಕು ಎಂಬ ಪ್ರಶ್ನೆಯನ್ನು ಸುರ್ಜೆವಾಲ ಅವರನ್ನು ಭೇಟಿ ಮಾಡಿದ ನಂತರ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಮುಂದಿಟ್ಟಿದ್ದಾರೆ. ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರ ಆಪ್ತ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಅವರು ನಾಯಕತ್ವ ಬದಲಾವಣೆ ಮಾಡಬೇಕಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕಾಗುತ್ತದೆ ಎಂದಿದ್ದಾರೆ. ಇದಕ್ಕೆ ತಿರುಗೇಟು ಎಂಬಂತೆ ಪಕ್ಷದಲ್ಲಿ ಹೈಕಮಾಂಡ್‌ ಇದೆ. ನಾಯಕತ್ವ ತೀರ್ಮಾನ ಹೈಕಮಾಂಡ್‌ ನದು ಎಂದಿದ್ದಾರೆ ಸುರ್ಜೇವಾಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೇ ಐದು ವರ್ಷ ಮುಖ್ಯಮಂತ್ರಿ ಅಂತಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗವಾಗಿ ಮಾತಾಡಲಾರೆ. ನಾನುಂಟು, ಪಕ್ಷವುಂಟು, ನಾವೆಲ್ಲರೂ ಒಟ್ಟಿಗೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ. ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಅವರು ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು. ಅವರಿಗೆ ನೂರು ಶಾಸಕರ ಬೆಂಬಲವಿದೆ ಎಂದು ನೀಡಿದ ಹೇಳಿಕೆ ಇದೇ ವೇಳೆ ಸದ್ದು ಮಾಡಿತು. ತಮ್ಮ ಹೇಳಿಕೆಗೆ ಇಕ್ಬಾಲ್‌ ಹುಸೇನ್‌ ಶಿವಕುಮಾರ್ ಅವರಿಂದ ನೋಟಿಸ್ ಪಡೆಯಬೇಕಾಯಿತು. ಸಹಕಾರ ಸಚಿವ ರಾಜಣ್ಣ ಅವರಂತೂ ಸೆಪ್ಟೆಂಬರ್‌ ನಲ್ಲಿ ರಾಜಕೀಯ ಬದಲಾವಣೆ ನಡೆಯುತ್ತದೆ ಎಂದು ನೀಡಿರುವ ಹೇಳಿಕೆ ನಾಯಕತ್ವ ಬದಲಾವಣೆ ಚರ್ಚೆಯನ್ನು ಜೀವಂತವಾಗಿರಿಸಿದೆ.

ಸಿದ್ದರಾಮಯ್ಯ ಅವರ ನಾಯಕತ್ವದ ಸುತ್ತ ನಡೆಯುತ್ತಿರುವ ಈ ಚರ್ಚೆಗಳು ಉತ್ತರಕ್ಕಾಗಿ ಕೊನೆಗೆ ಹೈಕಮಾಂಡ್‌ನತ್ತಲೇ ಮುಖ ಮಾಡುತ್ತದೆ. ಚೆಂಡು ಹೈಕಮಾಂಡ್ ಅಂಗಳದಲ್ಲಿದೆ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com