ಬಲಾಬಲ ಪ್ರದರ್ಶನಕ್ಕೆ ಸಿದ್ದವಾದ ಸಿದ್ದು (ನೇರ ನೋಟ)

ಮೈಸೂರಿನಲ್ಲಿ ಜುಲೈ 19 ರಂದು ರಾಜ್ಯ ಸರಕಾರದ ಸಾಧನೆಯ ಸಮಾವೇಶ. ನಾಯಕತ್ವದ ಉಳಿವಿಗೆ ಸಿದ್ದರಾಮಯ್ಯ ಅವರ ಶಕ್ತಿಪ್ರದರ್ಶನದ ಅಖಾಡ.
Siddaramaiah- DK Shivakumar
ಸಿದ್ದರಾಮಯ್ಯ-ಡಿಕೆ ಶಿವಕುಮಾರ್ online desk
Updated on

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಸಂಕಷ್ಟ ಇಲ್ಲವೇ ಸವಾಲು ಎದುರಾದಾಗ ಸಮಾವೇಶನಗಳನ್ನು ನಡೆಸುವುದು ಲಾಗಾಯ್ತಿನಿಂದಲೂ ರೂಢಿ. ಜೆಡಿಎಸ್‌ ನಲ್ಲಿದ್ದಾಗ ಅದು ಅಹಿಂದ ಸಮಾವೇಶ ಆಗಿರಬಹುದು, ಕಾಂಗ್ರೆಸ್‌ ನಲ್ಲಿದ್ದಾಗ ಹುಟ್ಟುಹಬ್ಬದ ನೆಪದಲ್ಲಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಆಗಿರಬಹುದು, ಮುಡಾ ಹಗರಣದಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಶಕ್ತಿ ಪ್ರದರ್ಶನದ ಸಮಾವೇಶ ಆಗಿರಬಹುದು, ಸರಕಾರವಿದ್ದಾಗ ನಾಯಕತ್ವದ ಉಳಿವಿಗಾಗಿ ಶನಿವಾರ ನಡೆಯುವ ಸಾಧನಾ ಸಮಾವೇಶ ಇರಬಹುದು ಒಟ್ಟಿನಲ್ಲಿ ಉದ್ದೇಶ ಸ್ಪಷ್ಟ. ಅದು ಶಕ್ತಿಪ್ರದರ್ಶನವೇ. ಪಕ್ಷದೊಳಗೆ ಹಾಗೂ ಪ್ರತಿಪಕ್ಷದವರಿಗೆ ಸಂದೇಶ ರವಾನಿಸುವ ಕಣ.

ಮೈಸೂರಿನಲ್ಲಿ ಜುಲೈ 19 ರಂದು ರಾಜ್ಯ ಸರಕಾರದ ಸಾಧನೆಯ ಸಮಾವೇಶ. ನಾಯಕತ್ವದ ಉಳಿವಿಗೆ ಸಿದ್ದರಾಮಯ್ಯ ಅವರ ಶಕ್ತಿಪ್ರದರ್ಶನದ ಅಖಾಡ. ಸಿದ್ದರಾಮಯ್ಯ ಅವರ ಆಪ್ತ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಸಮಾವೇಶ ಸಿದ್ದತೆಯ ಮುಂದಾಳು. ಡಾ.ಮಹದೇವಪ್ಪ ಅವರ ಪುತ್ರ, ಚಾಮರಾಜನಗರದ ಸಂಸದ ಸುನೀಲ್‌ ಬೋಸ್, ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಬಲಪಡಿಸುವ ಅಗತ್ಯವಿದೆ. ವರುಣಾ ಹಾಗೂ ತಿ.ನರಸೀಪುರ ಕ್ಷೇತ್ರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶಿಸಬೇಕೆಂದು ಈ ಕ್ಷೇತ್ರಗಳಲ್ಲಿ ಭಾಷಣ ಮಾಡುತ್ತಾ ಸಂಘಟನೆಯಲ್ಲಿ ನಿರತರು. ಹಳೇ ಮೈಸೂರು ಭಾಗದ ಸಚಿವರು, ಶಾಸಕರಿಗೆ ಸಮಾವೇಶದ ಯಶಸ್ಸಿಗೆ ಗುರಿ ನಿಗದಿ. ಇದು ಸಿದ್ದರಾಮಯ್ಯ ಅವರ ನಾಯಕತ್ವದ ವಿಚಾರದಲ್ಲಿ ಈ ಸಮಾವೇಶದ ಪ್ರಾಮುಖ್ಯತೆಯನ್ನು ಸಾರುತ್ತದೆ. ಸರಕಾರದ ಸಮಾವೇಶಕ್ಕೆ ಆಯ್ಕೆ ಮಾಡಿಕೊಂಡ ಸ್ಥಳವೂ ಸಿದ್ದರಾಮಯ್ಯ ಅವರ ತವರೂರು ಮೈಸೂರೇ.

ಸಿದ್ದರಾಮಯ್ಯ ಅವರು ಯಾವಾಗ ದೆಹಲಿಯ ಹೈಕಮಾಂಡ್‌ ಅಂಗಳದಲ್ಲಿ ಕಳೆದ ವಾರ ನಿಂತು ತಾವೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ. ಅಧಿಕಾರ ಹಂಚಿಕೆಯ ಒಪ್ಪಂದ ಆಗಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವಿಲ್ಲ. 2028ರ ಅಸೆಂಬ್ಲಿ ಚುನಾವಣೆಗೂ ತಮ್ಮದೇ ನಾಯಕತ್ವ ಎಂದು ಸ್ಪಷ್ಟವಾಗಿ ಮೊದಲ ಬಾರಿಗೆ ಸಾರಿದರೋ ಆಗಿನಿಂದಲೇ ರಾಜ್ಯ ಕಾಂಗ್ರೆಸ್‌ ಶಾಸಕಾಂಗ ಪಕ್ಷದಲ್ಲಿ ಹೊಸ ಅಧ್ಯಾಯದ ಆರಂಭ. ಮುಖಾಮುಖಿಯೂ ಸ್ಪಷ್ಟ. ಸಂಘರ್ಷವೂ ನಿಚ್ಛಳ.

ಸಿದ್ದರಾಮಯ್ಯ ಮಾಸ್‌ ಲೀಡರ್. ಜನತಾ ಪರಿವಾರದ ಸಿದ್ದರಾಮಯ್ಯ ಅವರಿಗೂ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರಿಗೂ ನಾಯಕತ್ವದ ವಿಚಾರದಲ್ಲಿ ಒಂದು ವ್ಯತ್ಯಾಸ. ಸಿದ್ದರಾಮಯ್ಯ ಜನತಾ ಪರಿವಾರದಲ್ಲಿ ಮಾಸ್ ಲೀಡರ್‌ ಆಗಿದ್ದರೂ ಅವರಂತೆಯೇ ಹಾಗೂ ಅವರಿಗಿಂತ ಹೆಚ್ಚು ಮಾಸ್‌ ಲೀಡರ್‌ ಆ ಪಕ್ಷದಲ್ಲಿ ಆ ಕಾಲದಲ್ಲಿ ಇದ್ದರು. ಸಿದ್ದರಾಮಯ್ಯ ಸಡ್ಡು ಹೊಡೆದರೆ ಅವರಿಗೆ ಸಡ್ಡು ಒಡೆದು ನಿಲ್ಲುವ ನಾಯಕರಿದ್ದರು. ಪ್ರಾದೇಶಿಕ ಹಾಗೂ ಜಿಲ್ಲಾ ಮಟ್ಟಗಳಲ್ಲಿ ವರ್ಚಸ್ವಿ ನಾಯಕರಿದ್ದರು. ಆದರೆ, ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರಿಗೆ ಈ ಸವಾಲು ಇಲ್ಲ. ಸಿದ್ದರಾಮಯ್ಯ ಅವರಿಂದ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಹೆಚ್ಚಿನ ಶಕ್ತಿ ಬಂದಿದೆ. ಅದೇ ರೀತಿ ಕಾಂಗ್ರೆಸ್‌ ತನ್ನಲ್ಲಿದ್ದ ಶಕ್ತಿಯನ್ನು ಸಿದ್ದರಾಮಯ್ಯ ಅವರಿಗೂ ಧಾರೆ ಎರೆದಿದೆ. ಆದರೆ, ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಿದಾಗಿನಿಂದ ತಮ್ಮದೇ ಆದ ಬೆಂಬಲಿಗರ ಪಡೆಯನ್ನು ಪಕ್ಷದಲ್ಲಿ ಪ್ರಜ್ಞಾಪೂರ್ವಕವಾಗಿಯೇ ಪೋಷಿಸಿಕೊಂಡು ಬಂದಿದ್ದಾರೆ. ಇದರಲ್ಲಿ ಮೂಲ ಕಾಂಗ್ರೆಸ್ಸಿಗರೂ ಇದ್ದಾರೆ. ಆದರೆ, ಬಹುತೇಕರು ಜನತಾ ಪರಿವಾರದವರು. ಹೈಕಮಾಂಡ್ ಅಂಗಳದಲ್ಲೇ ನಿಂತು ನಿರ್ಣಾಯಕ ಎಂಬಂತೆ ಸಿದ್ದರಾಮಯ್ಯ ಘರ್ಜಿಸಿದ್ದಕ್ಕೆ ಅವರಿಗಿರುವ ಶಾಸಕರ ಬೆಂಬಲವೇ ಶಕ್ತಿ. ಇದು ಹೈಕಮಾಂಡ್‌ ಗೆ ನೇರ ಸಂದೇಶ. ಮುಟ್ಟಿದರೆ ಸಂಘರ್ಷಕ್ಕೆ ಸಿದ್ದ ಎಂಬ ಎಚ್ಚರಿಕೆ.

Siddaramaiah- DK Shivakumar
ಬಹುಮತವಿದ್ದರೂ ನಾಯಕತ್ವದ್ದೇ ಗೊಂದಲ (ನೇರ ನೋಟ)

ಹೈಕಮಾಂಡ್‌ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪರ ಕೆಲವು ನಾಯಕರು ಆಟ ಆಡುತ್ತಿರುವುದು ಗೊತ್ತಾಗಿಯೇ ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವಿಲ್ಲ ಎಂದು ಸಿದ್ದರಾಮಯ್ಯ ಅಂತಹ ನಾಯಕರಿಗೂ ಚುರುಕು ಮುಟ್ಟಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಬದಲಿಸಬೇಕಿದ್ದರೆ ಆ ನಿರ್ಧಾರವನ್ನು ಹೈಕಮಾಂಡ್‌ ಮಾಡುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದನ್ನು ಸಿದ್ದರಾಮಯ್ಯ ಗಮನಿಸಿದ್ದರು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಖರ್ಗೆ ಮೊದಲ ಬಾರಿಗೆ ಹೀಗೆ ಹೇಳಿದ್ದರು. ಖರ್ಗೆ ಅವರ ಈ ಹೇಳಿಕೆ ನಂತರ ಸಿದ್ದರಾಮಯ್ಯ ಅವರ ಗುಡುಗು ಹೆಚ್ಚು ಅರ್ಥಗರ್ಭೀತ.

ಇಂತಹ ಸನ್ನಿವೇಶದಲ್ಲಿ ಶಿವಕುಮಾರ್ ದುಡುಕಿಲ್ಲ. ಇದು ಅವರ ಪಕ್ಷ ನಿಷ್ಠೆ. ರಾಜಕೀಯ ಅನಿವಾರ್ಯ ಕೂಡ. ಏಕೆಂದರೆ, ಸಿದ್ದರಾಮಯ್ಯ ಅವರಿಗೆ ಇರುವ ಶಾಸಕರ ಬೆಂಬಲವನ್ನು ಚೆನ್ನಾಗಿ ಬಲ್ಲರು. ಶಿವಕುಮಾರ್ ಮುಖ್ಯಮಂತ್ರಿ ಗಾದಿಗೆ ಏರಲು ಕಾಂಗ್ರೆಸ್‌ ಹೈಕಮಾಂಡ್ ಆಶೀರ್ವಾದ ಬೇಕು. ಶಿವಕುಮಾರ್‌ ಸಂಘಟಕ. ರಾಜಕೀಯ ವ್ಯೂಹಗಳನ್ನು ರಚಿಸಬಲ್ಲ, ತಂತ್ರಗಳನ್ನು ಹೆಣೆಯಬಲ್ಲ ಚಾಣಾಕ್ಷ್ಯ. ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವರ ಶ್ರಮ ದೊಡ್ಡದು. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮಾಜದ ಮತದಾರರು ಶಿವಕುಮಾರ್‌ ಮುಖ್ಯಮಂತ್ರಿಯಾಗಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಪರ ಒಲವು ತೋರಿದ್ದರು. ಆದರೆ, ಶಿವಕುಮಾರ್ ರಾಜ್ಯಾದ್ಯಂತ ಪ್ರಭಾವ ಬೀರುವ ಮಾಸ್‌ ಲೀಡರ್ ಅಲ್ಲ. ಮಾಸ್‌ ಲೀಡರ್ ಆಗಿರುವ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್‌ ಅಧಿಕಾರದಿಂದ ಕೆಳಗಿಳಿಸಲು ಹೊರಟರೆ ಸಿದ್ದರಾಮಯ್ಯ ಬಂಡೆದ್ದರೂ ಆಶ್ಚರ್ಯವಿಲ್ಲ. ಇದು ಹೈಕಮಾಂಡ್‌ ಸಂಕಷ್ಟ.

ಸಿದ್ದರಾಮಯ್ಯ ಅವರಿಗೆ ಪಕ್ಷಕ್ಕಿಂತಲೂ ತಮ್ಮ ಶಕ್ತಿ, ಸಾಮರ್ಥ್ಯದಲ್ಲಿ ನಂಬಿಕೆ ಹೆಚ್ಚು. ಅವರದು ಮೊದಲಿನಿಂದಲೂ ಪಕ್ಷಕ್ಕಿಂತ ವ್ಯಕ್ತಿಗತ ನೆಲೆಯ ಮೇಲಿನ ರಾಜಕಾರಣ. ಅದು ಮಾಸ್‌ ಲೀಡರ್‌ ಗಳಿಗೆ ಇರುವ ತಾಕತ್ತು. ಜೆಡಿಎಸ್‌ ನಲ್ಲೂ ಅವರು ಹೀಗೆ ಇದ್ದರು. ಕಾಂಗ್ರೆಸ್‌ ಹೈಕಮಾಂಡ್‌ ಗೆ ಇರುವ ಆತಂಕವೂ ಇದೆ. ಹೈಕಮಾಂಡ್‌ ಶಿವಕುಮಾರ್ ಅವರನ್ನು ಸಂಭಾಳಿಸಬಹುದು, ಆದರೆ, ಸಿದ್ದರಾಮಯ್ಯ ಅವರನ್ನಲ್ಲ. ಸಿದ್ದರಾಮಯ್ಯ ಅವರಿಗೆ ಸೈದ್ಧಾಂತಿಕ ಹಿನ್ನೆಲೆಯೂ ಇದೆ. ತಾವಿರುವ ಪಕ್ಷದಲ್ಲಿ ತಮ್ಮನ್ನು ಯಾವಾಗ ನಿರ್ಲಕ್ಷಿಸಲಾಗುತ್ತದೆಯೋ ಆಗೆಲ್ಲಾ ಅವರು ಬಂಡೆದಿದ್ದಾರೆ. ಅಹಿಂದ ಅಸ್ತ್ರ ಝಳಪಿಸಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್‌ ನಲ್ಲಿ ಅಹಿಂದ ವರ್ಗಕ್ಕೆ ಸೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರೇ.

ಬೆಂಗಳೂರಿನಲ್ಲಿ ಇದೇ ವಾರ ಎರಡು ದಿನಗಳ ಕಾಲ ನಡೆದ ಅಖಿಲ ಭಾರತ ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆ ಅಧ್ಯಕ್ಷತೆಯನ್ನು ಸಿಎಂ ಸಿದ್ದರಾಮಯ್ಯ ಅವರೇ ವಹಿಸಿದ್ದರು. ಈ ಸಭೆ ಬೆಂಗಳೂರು ಘೋಷಣೆಯನ್ನು ಹೊರಡಿಸಿದೆ. ಸಭೆ ನಂತರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅಖಿಲ ಭಾರತ ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಡಾ.ಅನಿಲ್ ಜೈ ಹಿಂದ್‌ ಪ್ರತಿಕ್ರಿಯೆ ಹೀಗಿತ್ತು- ಕಾಂಗ್ರೆಸ್ ನಲ್ಲಿ ಹಿಂದುಳಿದ ವರ್ಗಗಳ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ. ಕಾಂಗ್ರೆಸ್‌ ನಲ್ಲಿ ಇವರ ನಾಯಕತ್ವವನ್ನು ಬದಲಿಸುವ ಯಾವ ಪ್ರಸ್ತಾಪವೂ ಇಲ್ಲ. ನಾವೆಲ್ಲಾ ಸಿದ್ದರಾಮಯ್ಯ ಅವರ ಪರವಾಗಿದ್ದೇವೆ. ಇದು ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ವಿಭಾಗವು ರಾಷ್ಟ್ರ ಮಟ್ಟದಲ್ಲಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿರುವುದನ್ನು ಸಾರುತ್ತದೆ.

ಹೈಕಮಾಂಡ್‌ ಸಿದ್ದರಾಮಯ್ಯ ಅವರ ತಂಟೆಗೆ ಹೋಗುವಾಗ ಹತ್ತು ಸಲ ಯೋಚಿಸಬೇಕಾಗುತ್ತದೆ. ಕಾಂಗ್ರೆಸ್‌ ಹೈಕಮಾಂಡ್‌ ಇಂದಿರಾ ಗಾಂಧಿ, ರಾಜೀವ ಗಾಂಧಿ ಅವರ ಕಾಲದ ಪ್ರಬಲ ನಾಯಕತ್ವದಲ್ಲ. ಹೈಕಮಾಂಡ್‌ ಶಕ್ತಿಯುತವಾಗಿದ್ದಾಗ ಘಟಾನುಘಟಿ ಪ್ರಾದೇಶಿಕ ನಾಯಕರನ್ನೇ ರಾತ್ರೋರಾತ್ರಿ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿ ತಮಗೆ ನಿಷ್ಠರನ್ನು ತಂದು ಕೂರಿಸಿದ ಉದಾಹರಣೆಗಳು ಸಾಕಷ್ಟಿವೆ.

ಆದರೆ, ದೇಶದಲ್ಲಿ ಕಾಂಗ್ರೆಸ್ಸಿನ ಈಗಿನ ಪರಿಸ್ಥಿತಿಯಲ್ಲಿ ಇದು ಕಷ್ಟ. ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ದೃಷ್ಟಿಯಿಂದ ನೋಡಿದಾಗ ಇದೊಂದು ರೀತಿ ಒಳ್ಳೆಯದೇ. ಜನತಂತ್ರದಲ್ಲಿ ಬಹುಮತದ ಶಾಸಕರ ಬೆಂಬಲವಿದ್ದಾಗ ತಮಗೆ ನಿಷ್ಠರಲ್ಲ ಎಂಬ ಒಂದೇ ಕಾರಣಕ್ಕೆ ಅಧಿಕಾರದಿಂದ ಕೆಳಗಿಳಿಸುವುದು ಆರೋಗ್ಯಕರ ಲಕ್ಷಣವಲ್ಲ. ಪ್ರಾದೇಶಿಕ ನಾಯಕರು ಬಲಿಷ್ಠವಾದರೆ ರಾಷ್ಟ್ರಮಟ್ಟದಲ್ಲಿ ಅಂತಹ ಪಕ್ಷವು ಬಲಿಷ್ಠವಾಗಿರುತ್ತದೆ ಎಂಬ ವಾದವನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ. ರಾಜಕಾರಣ ನಿಂತ ನೀರಲ್ಲ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com