
ಈ ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಮೂರು ವಿನಿಮಯ ಮಾಧ್ಯಮಗಳಿವೆ. ಜ್ಞಾನ , ಸಮಯ ಮತ್ತು ಹಣ ಆ ಪ್ರಬಲ ಮಾಧ್ಯಮಗಳು. ಜಗತ್ತಿನ ತೊಂಬತ್ತು ಭಾಗ ಜನರು ಈ ಮೂರು ಅಂಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ಇರುವ ಕಾರಣ ಮತ್ತು ಇವುಗಳ ನಡುವಿನ ವ್ಯತ್ಯಾಸ ತಿಳಿದು ಕೊಳ್ಳದ ಕಾರಣ ಬಡತನದಲ್ಲಿ ಜೀವನವನ್ನು ಸವೆಸಿ ಬಿಡುತ್ತಾರೆ. ಜಗತ್ತಿನ ಬಹುಪಾಲು ಜನ ಸಮಯವನ್ನು ವಿನಿಮಯವನ್ನಾಗಿ ಬಳಸುತ್ತಾರೆ. ಅಂದರೆ ಭಗವಂತ ಅವರಿಗೆ ನೀಡಿರುವ ಸಮಯವನ್ನು ಟ್ರೇಡ್ ಮಾಡುತ್ತಾರೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ದಿನದಲ್ಲಿನ 24 ಗಂಟೆಗಳಲ್ಲಿ 8 ಗಂಟೆಯನ್ನು ಮಾರಾಟ ಮಾಡುತ್ತಾರೆ. ಅದಕ್ಕೆ ಬದಲಾಗಿ ಮಾಸಿಕ ಇಷ್ಟು ಹಣ ಎಂದು ಪಡೆದುಕೊಳ್ಳುತ್ತಾರೆ.
ಹೀಗೆ ಪಡೆದು ಕೊಂಡ ಹಣವನ್ನು ಟ್ರೇಡ್ ಮಾಡಿ ಬದುಕಲು ಬೇಕಾದ ಅವಶ್ಯಕ ವಸ್ತು ಇತ್ಯಾದಿಗಳನ್ನು ಪಡೆದುಕೊಳ್ಳುತ್ತಾರೆ. ಇಷ್ಟೆಲ್ಲಾ ಆಗಿ ಮಿಕ್ಕ ಹಣವನ್ನು ಉಳಿಸುವವರ ಮತ್ತು ಅದನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಕಡೆ ಪಕ್ಷ ಮಾರಾಟ ಮಾಡಿ ಉಳಿದ ವೇಳೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದಾರೆಯೇ? ಎನ್ನುವ ಪ್ರಶ್ನೆಗೆ ಕೂಡ ಉತ್ತರ ಇಲ್ಲ ಎನ್ನುವುದೇ ಆಗಿದೆ. ಇದೆ ಸಮಯದಲ್ಲಿ ಈ ಬಹುಪಾಲು ಜನರ ಉದ್ದೇಶ ಹಣ ಮಾಡುವುದಾಗಿರುತ್ತದೆ. ಆದರೆ ಕೆಲಸ ಮಾಡಿ ಸಿರಿವಂತರಾದವರ ಸಂಖ್ಯೆ ಈ ಜಗತ್ತಿನಲ್ಲಿ ಸೊನ್ನೆ ಎನ್ನುವುದು ಗೊತ್ತಿರುವುದಿಲ್ಲ. ಹಣ ಮಾಡುವುದು 90ಪ್ರತಿಶತಕ್ಕೂ ಹೆಚ್ಚು ಜನರ ಉದ್ದೇಶ. ಆದರೆ ನೆನಪಿರಲಿ ವೇಳೆಯನ್ನು ಗಳಿಸುವುದು ಬದುಕಿನ ಉದ್ದೇಶವಾಗಬೇಕು. ವೇಳೆಯನ್ನು ಗಳಿಸಲು ಏನು ಮಾಡಬೇಕು? ಹಣ ಗಳಿಸಬೇಕು! ಈ ಹಣವನ್ನು ಗಳಿಸಲು ಏನು ಮಾಡಬೇಕು? ಎಲ್ಲಕ್ಕೂ ಮೊದಲಿಗೆ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಆದರೆ ಬಹು ಪಾಲು ಜನ ವೇಳೆ ಮತ್ತು ಸಮಯವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಎಲ್ಲಕ್ಕೂ ಮೊದಲಿಗೆ ನಾವು ವೇಳೆಯನ್ನು ಮತ್ತು ಹಣವನ್ನು ಬಜೆಟ್ ಮಾಡುವುದು ಕಲಿಯಬೇಕು. ಬಜೆಟ್ ಎಂದರೆ ಅದೇನೋ ದೊಡ್ಡ ವ್ಯಾಪಾರೀ ಸಂಸ್ಥೆಗಳಿಗೆ, ಸರಕಾರದ ಹಣಕಾಸು ವಿಷಯಕ್ಕೆ ಸಂಬಂಧಪಟ್ಟದ್ದು ಎನ್ನುವ ಭಾವನೆ ಬೇಡ. ಬಜೆಟ್ ಎಂದರೆ ಎಲ್ಲವನ್ನೂ ವ್ಯವಸ್ಥಿತವಾಗಿ ಜೋಡಿಸಿ ಬದುಕನ್ನು ಇನ್ನಷ್ಟು ಒಪ್ಪವಾಗಿ ಇಟ್ಟುಕೊಳ್ಳುವುದು ಎಂದರ್ಥ.
ಸಮಯವನ್ನು ಬಹುತೇಕರು ಮಾರಾಟ ಮಾಡುವುದರಿಂದ ಉಳಿದ ಸಮಯವನ್ನು ಬಜೆಟ್ ಮಾಡಬೇಕು. ಅಂದರೆ ದಿನದಲ್ಲಿ ಇಷ್ಟು ಸಮಯ ಜ್ಞಾನವೃದ್ಧಿಗೆ ಮೀಸಲು , ಇಷ್ಟು ಸಮಯ ಪರಿವಾರಕ್ಕೆ , ಇನ್ನಿಷ್ಟು ಸಮಯ ಓಡಾಟ ಮತ್ತು ದೈನಂದಿನ ಚಟುವಟಿಕೆಗಳಿಗೆ , ಹೀಗೆ ಎಲ್ಲಕ್ಕೂ ಒಂದು ವೇಳೆಯನ್ನು ನಿಗದಿ ಪಡಿಸಿಕೊಳ್ಳಬೇಕು. ಎಂಟು ಗಂಟೆ ಕೆಲಸಕ್ಕೆ ಹೋದರೆ , ಎಂಟು ಗಂಟೆ ನಿದ್ದೆಗೆ ಹೋಗುತ್ತದೆ. ಉಳಿದ ಎಂಟು ಗಂಟೆಗಳಲ್ಲಿ ಏನೆಲ್ಲಾ ಮಾಡೋಣ ಎನ್ನುವ ಪ್ರಶ್ನೆ ಕೇಳುವ ಮುನ್ನ , ಸೋಶಿಯಲ್ ಮೀಡಿಯಾದಲ್ಲಿ , ಮೊಬೈಲ್ ನಲ್ಲಿ , ಟಿವಿ , ಒಟ್ಟಾರೆ ನಿಮ್ಮ ಸ್ಕ್ರೀನ್ ಟೈಮ್ ಎಷ್ಟು ಎನ್ನುವುದನ್ನು ನೀವೇ ಗಮನಿಸಿ ನೋಡಿಕೊಂಡು ಉತ್ತರಿಸಿ.
ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಮೂರು ಭಾಗವಾಗಿ ವಿಂಗಡಿಸಿದಾಗ ಎರಡು ಭಾಗ ನಿದ್ದೆ ಮತ್ತು ಕೆಲಸಕ್ಕೆ ಹೋಗುತ್ತದೆ. ಉಳಿದ ಒಂದು ಭಾಗದ ಎಂದು ಗಂಟೆಯನ್ನು ನಾಲ್ಕು ಭಾಗವನ್ನಾಗಿ ವಿಂಗಡಿಸೋಣ. ಎರಡು ಗಂಟೆ ಓಡಾಟಕ್ಕೆ ಹೋಗಿಬಿಡುತ್ತದೆ. ಇನ್ನೆರೆಡು ಗಂಟೆಯಲ್ಲಿ ಒಂದು ತಾಸು ನಿತ್ಯ ಕರ್ಮಗಳಿಗೆ ಎಂದು ಮೀಸಲಿಡೋಣ , ಒಂದು ತಾಸು ವ್ಯಾಯಾಯಕ್ಕೆ ತೆಗೆದಿರಿಸೋಣ. ಉಳಿದ ನಾಲ್ಕು ಗಂಟೆಯಲ್ಲಿ ಒಂದು ತಾಸು ಮಕ್ಕಳ ಜೊತೆಗೆ ಮಾತುಕತೆಗೆ , ಒಂದು ತಾಸು ಹೆಂಡತಿ ,ಹೆತ್ತವರ ಜೊತೆಗೆ ಕಳೆದರೂ ಇನ್ನೆರೆಡು ತಾಸು ಸೆಲ್ಫ್ ಡೆವಲಪ್ಮೆಂಟ್ ಗೆ ಅಂದರೆ ಜ್ಞಾನ ವೃದ್ಧಿಗೆ ಖಂಡಿತ ಬಳಸಿಕೊಳ್ಳಬಹುದು.
ಇದನ್ನು ನಾವು ಈ ರೀತಿ ಬಜೆಟ್ ಮಾಡದೆ ಹೋದರೆ ಅಯ್ಯೋ ಟೈಮ್ ಇಲ್ಲ ಎನ್ನುವುದು ಬಿಟ್ಟು ನಾವು ಮುಂದಕ್ಕೆ ಹೋಗುವುದಿಲ್ಲ. ಮೇಲಿನಲ್ಲೂ ಇನ್ನಷ್ಟು ಬದಲಾವಣೆ ಮಾಡಿಕೊಳ್ಳಬಹುದು. ಉದಾಹರಣೆಗೆ ಮಕ್ಕಳ ಜೊತೆಗೆ ಅಥವಾ ಹೆಂಡತಿ /ಗಂಡ ನ ಜೊತೆಗೆ ವಾಕ್ ಹೋದರೆ , ವ್ಯಾಯಾಮದ ಸಮಯದಲ್ಲಿ ಅವರೊಂದಿಗೆ ಸಮಯ ಕಳೆದಂತೆ ಆಗುತ್ತದೆ. ಅಲ್ಲಿ ಒಂದು ತಾಸು ಉಳಿಸಿಕೊಳ್ಳಬಹುದು. ಓಡಾಟಕ್ಕೆ ಎಂದು ಎರಡು ತಾಸು ನಿಗದಿ ಪಡಿಸಿದ್ದೇವೆ. ದೊಡ್ಡ ನಗರದಲ್ಲಿ ಅದು ಬೇಕು ಕೂಡ. ಈ ಸಮಯದಲ್ಲಿ ಸಂಸ್ಥೆಯ ಬಸ್ ಅಥವಾ ಕಾರಿನಲ್ಲಿ ಹೋಗುವ ಜನ ಓದಲು ಸಾಧ್ಯವಾದರೆ ಓದಬಹುದು , ಇಲ್ಲವೇ ಇಂದಿನ ದಿನಗಳಲ್ಲಿ ಓದಿಗೆ ಪರ್ಯಾಯವಾಗಿ ಬೆಳೆದಿರುವ ಪಾಡ್ಕಾಸ್ಟ್ ಕೇಳುವುದು ಮಾಡಬಹುದು. ಇನ್ನು ಕೆಲಸದ ಸಮಯದಲ್ಲಿ ಆದಷ್ಟೂ ಮೆಟ್ಟಿಲು ಹತ್ತುವುದು , ನಡೆಯುವುದು ಮಾಡಿದರೆ ದೈಹಿಕ ಚಟುವಟಿಕೆಯ ಸಮಾಯದಲ್ಲೂ ಸ್ವಲ್ಪ ಉಳಿಸಿಕೊಳ್ಳಬಹುದು.
ನಿತ್ಯ ಕರ್ಮಗಳನ್ನು ಒಂದು ತಾಸಿನ ಬದಲಾಗಿ ಅರ್ಧ ಗಂಟೆಯಲ್ಲಿ ಮುಗಿಸಬಹುದು. ಒಟ್ಟಾರೆ ಸರಳವಾಗಿ ಹೇಳಬೇಕೆಂದರೆ ಒಮ್ಮೆ ಬಜೆಟ್ ಮಾಡಲು ಶುರು ಮಾಡಿದರೆ ಎಲ್ಲಿ ಉಳಿಸಬಹುದು ಎನ್ನುವುದು ಗಮನಕ್ಕೆ ಬರುತ್ತದೆ. ಮನಸಿದ್ದರೆ ಮಾರ್ಗ ತಾನಾಗೆ ಸೃಷ್ಟಿಯಾಗುತ್ತದೆ.
ಈ ಜಗತ್ತಿನಲ್ಲಿ ಅತ್ಯಂತ ಪ್ರಬಲ ಕರೆನ್ಸಿ ವೇಳೆ. ಈ ವೇಳೆ ಗಳಿಸಿಕೊಳ್ಳಲು ಹಣ ಬೇಕು. ಹಣಗಳಿಸಲು ಜ್ಞಾನ ಬೇಕು. ಜ್ಞಾನ ಗಳಿಸಲು ಸಮಯ ಬೇಕು. ಹೀಗಾಗಿ ಇವೆಲ್ಲವೂ ಒಂದಕ್ಕೊಂದು ಪೂರಕವಾದವು. ಒಂದನ್ನು ಬಿಟ್ಟು ಇನ್ನೊಂದು ಸಾಧ್ಯವಿಲ್ಲ. ಹೀಗಾಗಿ ಎಲ್ಲಕ್ಕೂ ಮೊದಲು ಟೈಮ್ ಮ್ಯಾನೇಜ್ಮೆಂಟ್, ಟೈಮ್ ಬಜೆಟಿಂಗ್ ಮಾಡುವುದು ಕಲಿಯಬೇಕು.
ಇನ್ನು ಹಣಕಾಸು ಬಜೆಟಿಂಗ್ಗೆ ಸರಳ ಸೂತ್ರವಿದೆ. ಗಳಿಕೆ ಮೈನಸ್ ಹೂಡಿಕೆ ಉಳಿದದ್ದು ಖರ್ಚು. ಉದಾಹರಣೆ ನೋಡೋಣ, ಗಳಿಕೆ ನೂರು ರೂಪಾಯಿ ಇದ್ದಾಗ ಮೊದಲಿಗೆ ಇಪ್ಪತ್ತು ರೂಪಾಯಿ ತೆಗೆದಿರಿಸಿ, ಉಳಿದ 80 ರೂಪಾಯಿಯಲ್ಲಿ ಜೀವನ ನಡೆಸಬೇಕು. ಇದನ್ನು ಸರಳವಾಗಿ 50:30:20 ಅನುಪಾತ ಎನ್ನುತ್ತಾರೆ. ಗಳಿಕೆಯ ಐವತ್ತು ಪ್ರತಿಶತ ದೈನಂದಿನ ಬದುಕಿಗೆ, ಮೂವತ್ತು ಪ್ರತಿಶತ ಓಡಾಟ, ಮಕ್ಕಳು, ಅನಿರೀಕ್ಷಿತ ಖರ್ಚು ಇತ್ಯಾದಿಗಳಿಗೆ, ಇಪ್ಪತ್ತು ಪ್ರತಿಶತ ಕಡ್ಡಾಯವಾಗಿ ಉಳಿಸಿ, ಹೂಡಿಕೆ ಮಾಡುವುದಕ್ಕೆ ಎನ್ನುವುದು ಈ ಅನುಪಾತದ ಉದ್ದೇಶ. ಇದು ಸಾಮಾನ್ಯವಾಗಿ ಹೇಳುವ ಅನುಪಾತ. ಹೊಸದಾಗಿ ಕೆಲಸ ಶುರು ಮಾಡಿದವರು, ಬದುಕಿನಲ್ಲಿ ಇನ್ನೂ ಜವಾಬ್ದಾರಿ, ಸಂಸಾರ ಭಾರ ಇಲ್ಲದವರು 40/50 ಪ್ರತಿಶತ ಉಳಿಸಿ ಅದನ್ನು ಹೂಡಿಕೆ ಮಾಡುವುದು ಉತ್ತಮ. ಎಷ್ಟು ವರ್ಷ ಈ ಮಟ್ಟದ ಉಳಿಕೆ, ಹೂಡಿಕೆ ಮಾಡಲು ಸಾಧ್ಯ ಅಷ್ಟೂ ಉತ್ತಮ. ಕನಿಷ್ಠ ಪ್ರಥಮ 3/5 ವರ್ಷ ಈ ರೀತಿ ಮಾಡಿದರೆ ಅಂತಹವರಿಗೆ ಉತ್ತಮ ಆರಂಭ ಸಿಕ್ಕಂತೆ.
ಬದುಕನ್ನು ಬಜೆಟ್ ಮಾಡದಿದ್ದರೆ ಅದು ಜಾಳು ಜಾಳಾಗಿ ಕಳೆದು ಹೋಗುತ್ತದೆ. ವೇಳೆಗೆ ಸಾವಿರ ಕಾಲು. ಏನು ಎಂದು ಅರ್ಥವಾಗುವ ವೇಳೆಗೆ ಮಧ್ಯವಯಸ್ಸು ದಾಟಿರುತ್ತದೆ. ಆ ನಂತರ ವೇಳೆಯನ್ನು ಮಾರಾಟ ಮಾಡುತ್ತಾ ಉಳಿದ ಸಮಯ ಕಳೆಯುವ ಆಟಕ್ಕೆ ನಾವು ಹೊಂದಿಕೊಂಡು ಬಿಡುತ್ತೇವೆ. ಹೀಗಾಗಿ ಬಜೆಟಿಂಗ್ ಬದುಕಿನ ಬಹುದೊಡ್ಡ ನಿರ್ಧಾರ. ಅದನ್ನು ಬದುಕಿನಲ್ಲಿ ಎಷ್ಟು ಬೇಗ ಅಳವಡಿಸಿಕೊಳ್ಳುತ್ತೇವೆ ಅಷ್ಟು ನಮಗೆ ಒಳಿತು.
ವೇಳೆ ಬಜೆಟ್: 8:8:8, ಮೊದಲ ಎರಡು ಎಂಟುಗಳನ್ನು ನಾವು ಮುಟ್ಟಲು ಸಾಧ್ಯವಿಲ್ಲ. ನಮ್ಮ ಗುರಿ ಇದರಲ್ಲಿ ನಾವು ಮಾರಾಟ ಮಾಡುತ್ತಿರುವ ಎಂಟು ಗಂಟೆಯನ್ನು ಗಳಿಸುವುದಾಗಿರಬೇಕು. ಒಮ್ಮೆ ಹೀಗೆ ಆ ಎಂಟು ಗಂಟೆಯನ್ನು ಮರಳಿ ನಮ್ಮದಾಗಿಸಿಕೊಂಡರೆ ಮತ್ತು ಅದನ್ನು ಸರಿಯಾಗಿ ಬಳಸಿ ಕೊಂಡರೆ ಸಿರಿವಂತಿಕೆ ಕಷ್ಟವೇನಲ್ಲ. ಇದನ್ನು ಮರಳಿ ಪಡೆಯಲು ನಮ್ಮದಾಗಿ ಉಳಿದಿರುವ ಕೊನೆಯ ಎಂಟು ಗಂಟೆಯನ್ನು ಸಶಕ್ತವಾಗಿ ದುಡಿಸಿಕೊಳ್ಳಬೇಕು.
ಹಣದ ಬಜೆಟ್: 50:30:20, ಬದುಕಿನ ಪ್ರಾರಂಭಿಕ ಹಂತದಲ್ಲಿ 50:50 ಅಂದರೆ 50 ಪ್ರತಿಶತ ಉಳಿಸಬೇಕು. ಸಾಧ್ಯವಾದರೆ ಅದನ್ನು 90:10 ಕೂಡ ಮಾಡಬಹುದು. ಅಂದರೆ ಗಳಿಕೆಯ 10 ಪ್ರತಿಶತ ಖರ್ಚು ಮಾಡಿ 90 ಪ್ರತಿಶತ ಉಳಿಸುವುದು, ಹೂಡಿಕೆ ಮಾಡುವುದು. ಮಾಹಿತಿಗಾಗಿ, ನನ್ನ ಬದುಕಿನ ಪ್ರಥಮ 7 ವರ್ಷ 90 ಪ್ರತಿಶತ ಹಣವನ್ನು ಉಳಿಸಿ , ಹೂಡಿಕೆ ಮಾಡಿದ ಕಾರಣ 39 ವಯಸ್ಸಿಗೆ ನಾನು ಮಾರಾಟ ಮಾಡುತ್ತಿದ್ದ ದಿನದ 8 ಗಂಟೆಯನ್ನು ಗಳಿಸಿ ಕೊಳ್ಳಲು ಸಾಧ್ಯವಾಯ್ತು.
ಉದ್ದೇಶ: ವೇಳೆಯನ್ನು ಮರಳಿ ಪಡೆಯುವುದಾಗಿರಲಿ, ಅದಕ್ಕೆ ಪೂರಕವಾಗಿ ಜ್ಞಾನ ಮತ್ತು ಹಣ ಸಂಪಾದನೆಗೆ ದಾರಿಯಾಗುತ್ತದೆ.
Advertisement