ಜಾಗತಿಕ shipment ವ್ಯಾಪಾರ ಶಿಫ್ಟ್ ಆಗಿದೆ, ಗೊತ್ತಾಯ್ತ? (ಹಣಕ್ಲಾಸು)

ಗಮನಿಸಿ ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಹಡಗುಗಳು ಭಾರತದ ಬಂದರುಗಳಲ್ಲಿ ಬಂದು ಲಂಗರು ಹಾಕಲು ಸಾಧ್ಯವಾಗುತ್ತಿರಲಿಲ್ಲ. ಸಮುದ್ರದ ತಟದಿಂದ ಕೆಳಗಿನ ಹಂತದದಲ್ಲಿ ಹಡಗುಗಳು ಬಂದು ನಿಲ್ಲಲು ಅನುಕೂಲವಾಗುವ ವ್ಯವಸ್ಥೆ ನಮ್ಮಲ್ಲಿ ಇರಲಿಲ್ಲ. (ಹಣಕ್ಲಾಸು-463)
Vizhinjam port
ವೆಹಿನ್ಯಾಮ್ ಪೋರ್ಟ್ online desk
Updated on

ಕೇರಳದ ತಿರುವನಂತಪುರ ಡಿಸ್ಟ್ರಿಕ್ಟ್ ನಿಂದ ಕೇವಲ 16 ಕಿಲೋ ಮೀಟರ್ ದೂರದಲ್ಲಿ ವೆಹಿನ್ಯಾಮ್ (Vizhinjam) ಇಂಟರ್ನ್ಯಾಷನಲ್ ಸೀ ಪೋರ್ಟ್ ಬರೋಬ್ಬರಿ 8,800 ಕೋಟಿ ರೂಪಾಯಿ ಖರ್ಚು ಮಾಡಿ ಕಟ್ಟಲಾಗಿದೆ. ಇದು ಸಮುದ್ರದ ದಡದಿಂದ 24 ಮೀಟರ್ ಕೆಳಗೆ ಹಡಗುಗಳು ಬಂದು ನಿಲ್ಲುವಂತೆ ಕಟ್ಟಲಾಗಿದೆ. ಇದು ಭಾರತದಲ್ಲಿ ಮೊಟ್ಟ ಮೊದಲ ಈ ರೀತಿಯ ಬಂದರು ಎನ್ನಿಸಿಕೊಂಡಿದೆ.

ಗಮನಿಸಿ ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಹಡಗುಗಳು ಭಾರತದ ಬಂದರುಗಳಲ್ಲಿ ಬಂದು ಲಂಗರು ಹಾಕಲು ಸಾಧ್ಯವಾಗುತ್ತಿರಲಿಲ್ಲ. ಸಮುದ್ರದ ತಟದಿಂದ ಕೆಳಗಿನ ಹಂತದದಲ್ಲಿ ಹಡಗುಗಳು ಬಂದು ನಿಲ್ಲಲು ಅನುಕೂಲವಾಗುವ ವ್ಯವಸ್ಥೆ ನಮ್ಮಲ್ಲಿ ಇರಲಿಲ್ಲ. ನೀವು ನಂಬುವುದಕ್ಕೆ ಕಷ್ಟವಾಗುತ್ತದೆ, ಆದರೆ ನಿಮಗೆ ಗೊತ್ತಿರಲಿ, ಭಾರತಕ್ಕೆ ಬರುತ್ತಿದ್ದ ಎಲ್ಲಾ ಅಂತಾರಾಷ್ಟ್ರೀಯ ಶಿಪ್ಮೆಂಟ್ ಗಳು ಕೊಲಂಬೊದಲ್ಲಿ ಲ್ಯಾಂಡ್ ಆಗುತ್ತಿದ್ದವು. ನಂತರ ಸರಕುಗಳನ್ನು ಸಣ್ಣ ಶಿಪ್ ಗಳಲ್ಲಿ ಭಾರತದ ಚನ್ನೈ, ಗುಜರಾತ್ ಇನ್ನಿತರ ಬಂದರುಗಳಿಗೆ ಕಳುಹಿಸಲಾಗುತ್ತಿತ್ತು. ಮೊದಲೇ ಹೇಳಿದಂತೆ ದೊಡ್ಡ ಬಂದರುಗಳು ಬಂದು ನಮ್ಮ ಬಂದರುಗಳಲ್ಲಿ ನಿಲ್ಲಿಸುವ ವ್ಯವಸ್ಥೆಯೇ ಇಷ್ಟು ವರ್ಷ ಇರಲಿಲ್ಲ. ಹೀಗಾಗಿ ಕೊಲಂಬೊ ದಲ್ಲಿ ಇಳಿಯುತ್ತಿದ್ದ ನಮ್ಮ ಸರಕುಗಳನ್ನು ಭಾರತದ ಇತರ ರಾಜ್ಯಗಳ ಬಂದರುಗಳಿಗೆ ತಲುಪಿಸಲು ವಾರ್ಷಿಕವಾಗಿ 1882 ಕೋಟಿ ರೂಪಾಯಿ ಖರ್ಚಾಗುತ್ತಿತ್ತು. ಕೇಂದ್ರ ಸರಕಾರ ಸುಮ್ಮನೆ ಸೋರಿಕೆಯಾಗುತ್ತಿದ್ದ ಇಷ್ಟು ಖರ್ಚನ್ನು ಉಳಿಸಿದೆ. ಆ ಮೂಲಕ ಸರಕುಗಳ ಬೆಲೆ ಕೂಡ ಅಷ್ಟರಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಗಳನ್ನು ಕೂಡ ಕಲ್ಪಿಸಿದೆ. ಕೇವಲ ಈ ಒಂದು ಲೆಕ್ಕಾಚಾರದಲ್ಲಿ ನೋಡಿದರೂ ಸರಿಸುಮಾರು ನಾಲ್ಕೂವರೆಯಿಂದ ಐದು ವರ್ಷದಲ್ಲಿ ಇದಕ್ಕಾಗಿ ಮಾಡಿರುವ ಹೂಡಿಕೆ ಹಣ ವಾಪಸ್ಸು ಬಂದಿರುತ್ತದೆ. ಗಮನಿಸಿ ಈ ಪ್ರಾಜೆಕ್ಟ್ ಪಿಪಿಪಿ ಮಾಡಲ್ ನಲ್ಲಿ ಕಟ್ಟಲಾಗಿದೆ. ಅಂದರೆ ಪಬ್ಲಿಕ್ -ಪ್ರೈವೇಟ್ ಪಾರ್ಟ್ನರ್ಶಿಪ್ ನಲ್ಲಿ ಕಟ್ಟಲಾಗಿದೆ. ಅದಾನಿ ಗ್ರೂಪ್ ಸಹಯೋಗದೊಂದಿಗೆ ಕೇಂದ್ರ ಸರಕಾರ ಈ ಯೋಜನೆಯನ್ನು ಮುಗಿಸಿದೆ.

ಭಾರತ ಜಾಗತಿಕವಾಗಿ ಇಷ್ಟು ಪ್ರಸಿದ್ದಿ ಹೊಂದಿದ್ದೂ, ಇಷ್ಟು ದೊಡ್ಡ ದೇಶವಾಗಿದ್ದೂ ಕೂಡ ಅಂತಾರಾಷ್ಟ್ರೀಯ ಹಡಗುಗಳನ್ನು ನಿಲ್ಲಿಸುವ ಸೌಕರ್ಯವನ್ನು ಇಲ್ಲಿಯವರೆಗೆ ಹೊಂದಿರಲಿಲ್ಲ ಎನ್ನುವುದು ಅದೆಷ್ಟು ಅವಮಾನಕರ ಸಂಗತಿಯಲ್ಲವೇ? ಇದು ಕೇವಲ ಮಾನ,ಅವಮಾನದ ಸಂಗತಿ ಮಾತ್ರವಲ್ಲ, ಇದಕ್ಕೂ ಮೀರಿದ ಜಾಗತಿಕ ನಡೆಗಳು ಇಲ್ಲಿ ಅಡಗಿವೆ. ಕೇವಲ 1882 ಕೋಟಿ ರೂಪಾಯಿ ವಾರ್ಷಿಕ ಉಳಿತಾಯ ಮಾತ್ರವಲ್ಲದೆ ಹತ್ತಾರು ಸಾವಿರ ಕೋಟಿ ರೂಪಾಯಿ ಹೊಸದಾಗಿ ಆದಾಯವನ್ನು ಕೂಡ ತಂದುಕೊಡಲಿದೆ. ಈ ಬಂದರು ನಿರ್ಮಾಣದಿಂದ ನೇರವಾಗಿ ದುಬೈ ನ ಜೆಬೆಲ್ ಆಲಿ ಎನ್ನುವ ಫ್ರೀ ಟ್ರೇಡ್ ಜೋನ್, ಶ್ರೀಲಂಕಾದ ಕೊಲಂಬೊ ಬಂದರು ಮತ್ತು ಸಿಂಗಾಪುರ್ ಬಂದರುಗಳು ಬಹಳಷ್ಟು ಶಿಪ್ಮೆಂಟ್ ಕಸಿಯುತ್ತದೆ. ಅಂದರೆ ಆ ದೇಶಗಳಿಗೆ ವ್ಯಾಪಾರ ಕಡಿಮೆಯಾಗುವುದು ಖಂಡಿತ.

ಇಲ್ಲಿಯವರೆಗೆ ಭಾರತಕ್ಕೆ ಬರಬೇಕಾಗಿದ್ದ ಸರಕುಗಳನ್ನು ಕೊಲಂಬೊ, ಸಿಂಗಾಪುರ ಅಥವಾ ಜೆಬೆಲ್ ಆಲಿ ಯಲ್ಲಿ ಇಳಿಸಿಕೊಳ್ಳುತ್ತಿದ್ದೆವು. ಈಗ ಈ ಮಾರ್ಗದಲ್ಲಿ ಹಾದು ಹೋಗುವ ಎಲ್ಲಾ ಶಿಪ್ಮೆಂಟ್ ಗಳಿಗೆ ನಾವು ಬಂದರಾಗಿ ಮಾರ್ಪಾಟಾಗಿದ್ದೇವೆ. ನಿಮಗೆಲ್ಲಾ ಗೊತ್ತಿರಲಿ ಯೂರೋಪ್, ಪೆರ್ಸಿಯನ್ ಗಲ್ಫ್, ಸೌತ್ ಈಸ್ಟ್ ಏಷ್ಯಾ, ಫಾರ್ ಈಸ್ಟ್ ಕಡೆಯಿಂದ ಈ ದಾರಿಯಲ್ಲಿ ಬಹಳಷ್ಟು ಟ್ರಾಫಿಕ್ ಉಂಟಾಗುತ್ತದೆ. ಈ ಹಡಗುಗಳು ಹಾದು ಹೋಗುವ ದಾರಿಯಿಂದ ಕೇವಲ 10 ನೌಟಿಕಲ್ ಮೈಲಿ ದೂರದಲ್ಲಿ ನಮ್ಮ ಹೊಸ ಸೀ ಪೋರ್ಟ್ ಇರುವ ಕಾರಣ ಈ ಎಲ್ಲಾ ಹಡಗುಗಳಿಗೂ ಇದು ಬಂದರಾಗಿ ಮಾರ್ಪಾಡಾಗುತ್ತದೆ. ಇದನ್ನು ಜಾಗತಿಕ ಶಿಪ್ಮೆಂಟ್ ವ್ಯಾಪಾರದಲ್ಲಿ ಗೇಮ್ ಚೇಂಜರ್ ಎಂದು ಬಣ್ಣಿಸಲಾಗುತ್ತಿದ್ದೆ. ಇಲ್ಲಿಯವರೆಗೆ ಲಾರ್ಜ್ ವೆಸೆಲ್ಸ್ ಹಡಗುಗಳನ್ನು ನಿಲ್ಲಿಸಲು ಆಗದಿದ್ದ ಭಾರತದ ಬಂದರು , ಈ ಹೊಸ ಸೀ ಪೋರ್ಟ್ ಮೂಲಕ ಅಲ್ಟ್ರಾ ಲಾರ್ಜ್ ಕಂಟೈನರ್ ಶಿಪ್ ಗಳನ್ನೂ ನಿಲ್ಲಿಸುವ ಕ್ಷಮತೆಯನ್ನು ಪಡೆದುಕೊಂಡಿದೆ. ಇಷ್ಟೇ ಅಲ್ಲ ಇದು ಪೂರ್ಣವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಉಪಯೋಗವನ್ನು ಕೂಡ ಪಡೆದುಕೊಂಡಿದೆ. ಸಿಂಗಪೂರ್ ಮತ್ತು ಶ್ರೀಲಂಕಾ ಮತ್ತು ಜೆಬೆಲ್ ಆಲಿ ಬಂದರುಗಳಿಗಿಂತ ವೇಗವಾಗಿ ಪ್ರೋಸೆಸ್ ಮಾಡುವ ಕ್ಷಮತೆಯನ್ನು ಹೊಂದಿದೆ. ಅಂದರೆ ಕೇವಲ ಹತ್ತು ನಿಮಿಷದಲ್ಲಿ ಒಂದು ಶಿಪ್ಮೆಂಟ್ ಕ್ಲಿಯರ್ ಮಾಡುವ ತಾಕತ್ತು ಈ ಹೊಸ ಸೀ ಪೋರ್ಟ್ ಹೊಂದಿದೆ. ಈ ಮೂಲಕ ಜಗತ್ತಿನ ಅತಿ ಹೆಚ್ಚು ಬ್ಯುಸಿ ಬಂದರು ಎನ್ನಿಸಿಕೊಂಡಿದ್ದ ಸಿಂಗಪೂರ್ ಬಂದರಿಗೆ ನೇರವಾಗಿ ಸವಾಲು ಎಸೆದಿದೆ.

Vizhinjam port
ಯುದ್ಧ ಖರ್ಚೆಷ್ಟು? ನಮ್ಮ ಶತ್ರುಗಳಾರು? ಮಿತ್ರರಾರು? (ಹಣಕ್ಲಾಸು)

ಕೇರಳದ ವೆಹಿನ್ಯಾಮ್ ಇಂಟರ್ನ್ಯಾಷನಲ್ ಸೀ ಪೋರ್ಟ್ ನೇರವಾಗಿ ಮೂರು ದೇಶಗಳ ಬಂದರುಗಳಿಗೆ ಸವಾಲು ಒಡ್ಡುವುದು ಖಂಡಿತ. ಇದರಲ್ಲಿ ಇದು ಹೇಗೆ ಗೆಲ್ಲುವ ಸಾಧ್ಯತೆಯಿದೆ ಎನ್ನುವುದಕ್ಕೆ ಆ ಬಂದರುಗಳಲ್ಲಿ ಇರುವ ಕೊರತೆ ಕಾರಣವಾಗಲಿದೆ. ಅದೇನು ಎನ್ನುವುದನ್ನು ಅವಲೋಕಿಸೋಣ.

  1. ಕೊಲಂಬೊ ಪೋರ್ಟ್: ಇಲ್ಲಿಯವರೆಗೆ ಭಾರತಕ್ಕೆ ಬರುತ್ತಿದ್ದ ಬಹಳಷ್ಟು ಸರಕುಗಳು ಇಲ್ಲಿಂದ ಭಾರತಕ್ಕೆ ಬರುತ್ತಿದ್ದವು. ಸಹಜವಾಗೇ ಶಿಪ್ಮೆಂಟ್ ಚಾರ್ಜಸ್, ಹ್ಯಾಂಡಲಿಂಗ್ ಚಾರ್ಜಸ್ ಇತ್ಯಾದಿಗಳನ್ನು ನಾವು ಶ್ರೀಲಂಕಾ ಸರಕಾರಕ್ಕೆ ಕಟ್ಟಬೇಕಾಗಿತ್ತು. ಇದು ಈಗ ಭಾರತ ಸರಕಾರದ ಬೊಕ್ಕಸಕ್ಕೆ ಹೋಗುತ್ತದೆ. ಕೊಲಂಬೊ ಬಂದರು ನಮ್ಮ ಹೊಸ ಬಂದರಿಗೆ ಹೋಲಿಸಿದರೆ ಚಿಕ್ಕದು. ಹೀಗಾಗಿ ಲಾರ್ಜ್ ಮತ್ತು ಅಲ್ಟ್ರಾ ಲಾರ್ಜ್ ಕಂಟೈನರ್ ಶಿಪ್ಗಳಿಗೆ ಕೊಲಂಬೊ ಬಂದರು ಆಕರ್ಷಕ ಎನ್ನಿಸುವುದಿಲ್ಲ. ಆಳ ಮತ್ತು ಅಗಲ ಎರಡರಲ್ಲೂ ಕೊಲಂಬೊ ಬಂದರು ನಮ್ಮ ಹೊಸ ಬಂದರಿಗಿಂತ ಸಣ್ಣದು. ಹೀಗಾಗಿ ಕೇವಲ ನಮ್ಮ ದೇಶಕ್ಕೆ ಬರುತ್ತಿದ್ದ ಶಿಪ್ ಮಾತ್ರವಲ್ಲದೆ ಈ ದಾರಿಯಲ್ಲಿ ಹೋಗುವ ಬೇರೆ ಶಿಪ್ಗಳು ಕೂಡ ಫ್ಯುಯೆಲ್ ತುಂಬಿಸಿ ಕೊಳ್ಳಲು, ಮತ್ತಿತರ ಕಾರಣಗಳಿಂದ ಇಲ್ಲಿ ನಿಂತು ಹೋಗಲು ಬಯಸುತ್ತವೆ.

  2. ಜೆಬೆಲ್ ಆಲಿ ಪೋರ್ಟ್: ಭಾರತದಿಂದ ಇತರ ದೇಶಗಳಿಗೆ ಹೋಗುವ ಸಿಂಹಪಾಲು ಶಿಪ್ಗಳು ದುಬೈ ನ ಈ ಜೆಬೆಲ್ ಆಲಿ ಏರ್ಪೋರ್ಟ್ ಮೂಲಕ ಹೋಗುತ್ತಿತ್ತು. ಜೆಬೆಲ್ ಆಲಿ ಈ ರೀಜನ್ ನಲ್ಲಿ ಅತ್ಯಂತ ಬ್ಯುಸಿ ಪೋರ್ಟ್. ಹೀಗಾಗಿ ವಿಳಂಬವಾಗುವುದು ಸಾಮಾನ್ಯವಾಗಿತ್ತು. ವೇಗವಾಗಿ ಶಿಪ್ ಆಗಬೇಕು ಎಂದರೆ ಅದಕ್ಕೆ ಇನ್ನೊಂದಷ್ಟು ಹೊಸ ಶುಲ್ಕ ನೀಡಬೇಕಿತ್ತು. ಕೆಲವೊಮ್ಮೆ ವಾರಗಟ್ಟಲೆ ಮುಂಚೆ ಶಿಪ್ ಮಾಡಬೇಕಾಗಿತ್ತು. ಭಾರತೀಯ ವರ್ತಕರು ಎಲ್ಲವನ್ನೂ ನಿಗದಿತ ಸಮಯಕ್ಕಿಂತ ಮುಂಚೆ ಶಿಪ್ ಮಾಡಬೇಕಿತ್ತು. ಏಕೆಂದರೆ ಹಲವಾರು ದಿನ ಜೆಬೆಲ್ ಆಲಿ ಯಲ್ಲಿ ನಮ್ಮ ಶಿಪ್ಗಳು ಕ್ಲಿಯರೆನ್ಸ್ ಗಾಗಿ ಕಾದು ಕುಳಿತಿರಬೇಕಾಗಿತ್ತು. ಇದೀಗ ಕೇರಳದಲ್ಲಿ ಶುರುವಾಗಿರುವ ಹೊಸ ಸೀ ಪೋರ್ಟ್ ನಿಂದ ಇವೆಲ್ಲವೂ ಇಲ್ಲವಾಗಿದೆ. ಹೊಸ ಮೂಲಭೂತ ಸೌಕರ್ಯ ಇರುವ, ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಪೋರ್ಟ್ ಕೇವಲ ಹತ್ತು ನಿಮಿಷದಲ್ಲಿ ಒಂದು ಶಿಪ್ ಕ್ಲಿಯರ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಕೇವಲ ಜೆಬೆಲ್ ಆಲಿ ಮಾತ್ರವಲ್ಲ, ಜಗತ್ತಿನಲ್ಲಿ ಪ್ರಸಿದ್ದವಾಗಿರುವ ಸಿಂಗಪೂರ್ ಗೂ ಭಾರಿ ಹೊಡೆತವನ್ನು ನೀಡಲಿದೆ.

  3. ಸಿಂಗಪೂರ್ ಪೋರ್ಟ್: ಮೊದಲಿಗೆ ಭಾರತಕ್ಕೆ ಬರಬೇಕಿದ್ದ ಕಂಟೈನರ್ ಗಳು ಸಿಂಗಪೂರ್ ಗೆ ಬರುತ್ತಿದ್ದವು. ಸಿಂಗಪೂರ್ ನಿಂದ ಮತ್ತೆ ಮರಳಿ ಭಾರತಕ್ಕೆ ಶಿಪ್ ಮಾಡಲು ಆಗುತ್ತಿದ್ದ ಟ್ರಾನ್ಸ್ಪೋರ್ಟಷನ್ ಖರ್ಚು ಉಳಿಯುತ್ತದೆ. ಸಿಗಪೋರ್ ನಮ್ಮ ಹೊಸ ಸೀ ಪೋರ್ಟ್ ಗೆ ಹೋಲಿಸಿದರೆ ಹಳೆಯ ಮೂಲಭೂತ ಸೌಕರ್ಯವನ್ನು ಹೊಂದಿದೆ. ಜೊತೆಗೆ ಇದು ಈ ವಲಯದಲ್ಲಿ ಅತ್ಯಂತ ಹೆಚ್ಚು ದಟ್ಟಣೆ ಇರುವ ಪೋರ್ಟ್ ಆಗಿರುವ ಕಾರಣ ಒಂದಷ್ಟು ಸಮಯವನ್ನು ಸದಾ ಮಾರ್ಜಿನ್ ಇಟ್ಟು ಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಇನ್ನು ಮುಂದೆ ಅವೆಲ್ಲವೂ ಇಲ್ಲವಾಗಲಿದೆ. ಸಿಂಗಪೂರ್ ಬಂದರಿನಲ್ಲಿ ಲಂಗರು ಹಾಕಲು ಬಯಸುವ, ಈ ದಾರಿಯಲ್ಲಿ ಹೋಗುವ ಎಲ್ಲಾ ಶಿಪ್ಗಳಿಗೂ ಹೊಸ ಸೀ ಪೋರ್ಟ್ ಫೀಡಿಂಗ್ ಸ್ಟೇಷನ್ ಕೂಡ ಆಗಲಿದೆ.

ಈ ಹೊಸ ಸೀ ಪೋರ್ಟ್ ಜಾಗತಿಕ ಶಿಪ್ಮೆಂಟ್ ವ್ಯಾಪಾರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ಇದೊಂದು ಗೇಮ್ ಚೇಂಜರ್ ಆಗಲಿದೆ ಎನ್ನುವ ಮಾತು ಅಂತಾರಾಷ್ಟ್ರೀಯ ವಲಯದಲ್ಲಿ ಆಗಲೇ ಶುರುವಾಗಿದೆ. ಇದರಿಂದ ಕೇವಲ ಭಾರತ ಮಾತ್ರವಲ್ಲ, ಯೂರೋಪು, ಪೆರ್ಸಿಯನ್ ಗಲ್ಫ್ ಮತ್ತು ಫಾರ್ ಈಸ್ಟ್ ದೇಶಗಳಿಗೂ ಅನುಕೂಲವಾಗಲಿದೆ. ಅದೇ ಸಮಯದಲ್ಲಿ ದುಬೈ, ಶ್ರೀಲಂಕಾ ಮತ್ತು ಸಿಂಗಪೂರ್ ದೇಶಗಳಿಗೆ ಬಿಸಿನೆಸ್ ಲಾಸ್ ಆಗುವುದು ಗ್ಯಾರಂಟಿ. ಈ ಬಂದರು ಇದೆ ಜಾಗದಲ್ಲಿ ನಿರ್ಮಿಸಲು ಪ್ರಕೃತ್ತಿ ಕೂಡ ಸಾಥ್ ನೀಡಿದೆ. ಸಹಜವಾಗೇ ಇರುವ ಆಳ ಮತ್ತು ಅಗಲ ಇಲ್ಲಿ ಈ ಮಟ್ಟದ ಬಂದರು ನಿರ್ಮಿಸಲು ಅನುಕೂಲ ಮಾಡಿಕೊಟ್ಟಿದೆ.

ಭಾರತಕ್ಕೆ ಇದು ಸಾವಿರಾರು ಕೋಟಿ ರೂಪಾಯಿ ಉಳಿತಾಯದ ಜೊತೆಗೆ ಸಾವಿರಾರು ಕೋಟಿ ರೂಪಾಯಿ ಹೊಸ ಆದಾಯವನ್ನು ಕೂಡ ತಂದು ಕೊಡಲಿದೆ. ಅದೇ ಸಮಯದಲ್ಲಿ ಸಾವಿರಾರು ನೇರ ಹೊಸ ಉದ್ಯೋಗವನ್ನು ಕೂಡ ಇದು ಸೃಷ್ಟಿಸಿದೆ. ಅಪರೋಕ್ಷವಾಗಿ ಕೂಡ ಸಾವಿರಾರು ಉದ್ಯೋಗವನ್ನು ಇದು ಸೃಷ್ಟಿ ಮಾಡಿದೆ. ಒಟ್ಟಾರೆ ಇದು ಕೇರಳದ ಸಿರಿವಂತಿಕೆ ಮತ್ತು ಭಾರತದ ಸಿರಿವಂತಿಕೆ ಹೆಚ್ಚಲು ಕೂಡ ದೇಣಿಗೆ ನೀಡಲಿದೆ.

Vizhinjam port
ಮುಂದಿನ ದಶಕಗಳು ಏಷ್ಯಾಕ್ಕೆ ಸೇರಿದ್ದು; ಹೆಜ್ಜೆಯಿಡುವ ಮುನ್ನ ಎಚ್ಚರವಾಗಿರಬೇಕಿದೆ ಭಾರತ! (ಹಣಕ್ಲಾಸು)

ಕೊನೆಮಾತು: ಇಷ್ಟು ವರ್ಷ ನಮ್ಮ ದೇಶಕ್ಕೆ ಸರಕು ಹೊತ್ತು ಬರುತ್ತಿದ್ದ ಹಡಗುಗಳನ್ನು ಲಂಗರು ಹಾಕಲು ಬೇಕಾದ ಬಂದರು ನಮ್ಮಲ್ಲಿ ಇರಲಿಲ್ಲ ಎನ್ನುವುದು ಖೇದಕರ ಸಂಗತಿ. ಅದೇ ಸಮಯದಲ್ಲಿ ತಡವಾದರೂ ಸರಿಯೇ , ಈಗ ನಾವು ಜಗತ್ತಿನ ಅತ್ಯುತ್ತಮ ಎನ್ನಿಸಿಕೊಂಡಿದ್ದ ಬಂದರುಗಳಿಗಿಂತ ಅತ್ಯುತ್ತಮ ಬಂದರು ಕಟ್ಟುವಲ್ಲಿ ಸಫಲವಾಗಿದ್ದೇವೆ. ಬೇರೆ ದೇಶಗಳ ಹಡಗುಗಳು ಈಗ ನಮ್ಮಲಿ ಸೇವೆ ಪಡೆಯಬಹುದು ಎನ್ನುವ ಮಟ್ಟಕ್ಕೆ ಕಟ್ಟಿದ್ದೇವೆ. ಇದರ ಜೊತೆಗೆ ನಿಜವಾದ ಆತ್ಮನಿರ್ಭರತೆ ಸಾಧಿಸಿದ್ದೇವೆ. ಇನ್ನು ಮುಂದೆ ನಾವು ದುಬೈ, ಶ್ರೀಲಂಕಾ ಅಥವಾ ಸಿಂಗಪೂರ್ ಮೇಲೆ ಅವಲಂಬಿಸುವ ಅವಶ್ಯಕತೆಯಿಲ್ಲ. ಇದು ಎಲ್ಲಕ್ಕಿಂತ ದೊಡ್ಡ ಉಪಲಬ್ಡಿ. ಇದರ ಜೊತೆಗೆ ಸಿಕ್ಕ ಮಿಕ್ಕ ಅವಕಾಶಗಳು, ಲಾಭ ಎಲ್ಲವೂ ಉದ್ದೇಶ ಸರಿಯಾಗಿದ್ದಕ್ಕೆ ಸಿಕ್ಕ ಬೋನಸ್. ಈ ಕಾರಣಕ್ಕಾಗಿ ಕೇಂದ್ರ ಸರಕಾರಕ್ಕೆ ಒಂದು ಮೆಚ್ಚುಗೆ ನೀಡಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com