
ಕೆಲವು ದಿನಗಳ ಹಿಂದೆ ಯುದ್ಧ ವಿರಾಮ ಘೋಷಿಸಲಾಗಿದೆ. ಈ ಯುದ್ಧ ವಿರಾಮವನ್ನು ನಾವು ಘೋಷಿಸುವ ಮುನ್ನವೇ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನನ್ನ ಮಧ್ಯಸ್ಥಿಕೆಯಲ್ಲಿ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅದರ ಜೊತೆಗೆ ನಾನು ಏನೆಲ್ಲಾ ಹೇಳಿದರೂ ಇಬ್ಬರೂ ಕೇಳುತ್ತಿರಲಿಲ್ಲ. ಕೊನೆಗೆ ಇಬ್ಬರ ಜೊತೆಗೂ ಟ್ರೇಡ್, ವ್ಯಾಪಾರ ಹೆಚ್ಚು ಮಾಡುತ್ತೇನೆ ಎಂದು ಹೇಳಿದೆ ಅಷ್ಟೇ, ತಕ್ಷಣ ಇಬ್ಬರೂ ಯುದ್ಧವನ್ನು ನಿಲ್ಲಿಸಲು ಒಪ್ಪಿದರು ಎನ್ನುವ ಮಾತನ್ನು ಕೂಡ ಆಡಿದ್ದಾರೆ.
ಪಾಕಿಸ್ತಾನದ ವಿಷಯದಲ್ಲಿ ಈ ವಿಷಯ ನಿಜ ಇರಬಹುದು. ಆದರೆ ಭಾರತದ ವಿಷಯದಲ್ಲಿ ಈ ಮಾತನ್ನು ನಾವು ಒಪ್ಪಲು ಆಗುವುದಿಲ್ಲ. ಭಾರತ ಮತ್ತು ಅಮೇರಿಕಾ ಜೊತೆಗಿನ ವ್ಯಾಪಾರ ನೋಡಿದಾಗ ಈ ಅಂಶ ಎದ್ದು ಕಾಣುತ್ತದೆ. ಉದಾಹರಣೆ ನೋಡೋಣ ಬನ್ನಿ..
2024ರಲ್ಲಿ ಭಾರತ ಸರಿಸುಮಾರು 132 ಬಿಲಿಯನ್ ವ್ಯಾಪಾರವನ್ನು ಅಮೇರಿಕಾ ಜೊತೆಗೆ ಮಾಡಿದೆ. ಕಳೆದ ನಾಲ್ಕು ವರ್ಷದಿಂದ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಈ ಕಾರಣಕ್ಕೆ ಟ್ರಂಪ್ ಆ ರೀತಿಯ ಉದ್ದಟತನದ ಮಾತನ್ನು ಆಡಿದ್ದಾರೆ. ಈ ಸಂಖ್ಯೆ ಮೇಲ್ನೋಟಕ್ಕೆ ನೋಡಿದಾಗ ಟ್ರಂಪ್ ಹೇಳಿದ್ದು ಸರಿಯೆನಿಸುತ್ತದೆ. ಆದರೆ ಈ ಸಂಖ್ಯೆಯನ್ನು ಒಂದಷ್ಟು ಮಾತನಾಡಿಸಿದರೆ ಅದು ಹೇಳುವ ಕಥೆಯೇ ಬೇರೆ. ಇದರಲ್ಲಿ 86.5 ಬಿಲಿಯನ್ ಡಾಲರ್ ಭಾರತ ಅಮೆರಿಕಕ್ಕೆ ರಫ್ತು ಮಾಡಿದೆ. ಅದೇ ಸಮಯದಲ್ಲಿ 45.5 ಬಿಲಿಯನ್ ಡಾಲರ್ ಉತ್ಪನ್ನವನ್ನು ಆಮದು ಮಾಡಿಕೊಂಡಿದೆ. ಗಮನಿಸಿ ನೋಡಿ, ಅಮೇರಿಕಾ ಟ್ರೇಡ್ ಡೆಫಿಸಿಟ್ ನಲ್ಲಿದೆ. ಅಂದರೆ ತಾನು ಭಾರತಕ್ಕೆ ಮಾರಾಟ ಮಾಡುವುದಕ್ಕಿಂತ ಭಾರತದಿಂದ ತರಿಸಿಕೊಳ್ಳುವುದು ಹೆಚ್ಚಾಗಿದೆ. ಇದರರ್ಥ ಅಮೇರಿಕಾ ಭಾರತದೊಂದಿಗೆ ಟ್ರೇಡ್ ಡೆಫಿಸಿಟ್ ನಲ್ಲಿದೆ ಎಂದಾಗುತ್ತದೆ. ಕೊಡುಕೊಳ್ಳುವಿಕೆ ಸಮವಾಗಿದ್ದಾಗ ಟ್ರೇಡ್ ಈಕ್ವಲ್ ಎನ್ನಲಾಗುತ್ತದೆ. ರಫ್ತು ಜಾಸ್ತಿಯಿದ್ದು ಆಮದು ಕಡಿಮೆಯಿದ್ದಾಗ ಯಾವ ದೇಶ ಹೆಚ್ಚು ರಫ್ತು ಜಾಸ್ತಿ ಮಾಡಿತು ಆ ದೇಶಕ್ಕೆ ಟ್ರೇಡ್ ಸರ್ಪ್ಲಸ್ ಎನ್ನಲಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಭಾರತಕ್ಕೆ ಅಮೆರಿಕಾದೊಂದಿಗೆ ಟ್ರೇಡ್ ಸರ್ಪ್ಲಸ್ ಆಗಿದೆ.
ಅಮೇರಿಕಾ ಅಧ್ಯಕ್ಷ ಟ್ರೇಡ್ ಹೆಚ್ಚು ಮಾಡಿಕೊಳ್ಳುವುದರ ಬಗ್ಗೆ ಮಾತನಾಡಿದ್ದಾರೆ. ಇದನ್ನು ಎರಡು ಆಯಾಮದಲ್ಲಿ ನೋಡಬಹುದು. ಮೊದಲಿಗೆ ಅವರು ಚೀನಾದ ಜೊತೆಗೆ ಕಡಿಮೆ ವ್ಯಾಪಾರ ಮಾಡಬೆಕಾಗಿದೆ. ಹೀಗಾಗಿ ಅವ್ರು ಭಾರತದೊಂದಿಗೆ ಹೆಚ್ಚು ವ್ಯಾಪಾರ ಮಾಡದೇ ವಿಧಿಯಿಲ್ಲ. ಎರಡನೆಯದಾಗಿ ಭಾರತದೊಂದಿಗೆ ತಮ್ಮ ಟ್ರೇಡ್ ಡೆಫಿಸಿಟ್ ಕಡಿಮೆ ಮಾಡಿಕೊಳ್ಳುವ ದರ್ದು ಅಮೆರಿಕಾದ ಮುಂದೆಯಿದೆ. ಏಕೆಂದರೆ ಈ ಟ್ರೇಡ್ ಡೆಫಿಸಿಟ್ ಹೆಚ್ಚುತ್ತಾ ಹೋದರೆ ಅಮೆರಿಕಕ್ಕೆ ಇದರಿಂದ ಯಾವುದೇ ಲಾಭವಿಲ್ಲ. ಚೀನಾವನ್ನು ಸರಿಸಿ ಆ ಜಾಗಕ್ಕೆ ಭಾರತವನ್ನು ಕೂಡಿಸಿದ ಹಾಗಾಗುತ್ತದೆ. ಹೀಗಾಗಿ ಅಮೇರಿಕಾ ಭಾರತದಿಂದ ಕಡಿಮೆ ತರಿಸಿಕೊಂಡು ತನ್ನ ಪದಾರ್ಥವನ್ನು ಹೆಚ್ಚು ಮಾರಲು ನೋಡಬಹುದು. ಇದು ಕೂಡ ಟ್ರೇಡ್ ಲೆಕ್ಕಾಚಾರದಲ್ಲಿ ಬರುತ್ತದೆ.
ಈ ಎರಡೂ ಆಯಾಮವನ್ನು ಗಮನಿಸಿ ನೋಡಿದಾಗ ತಿಳಿಯುವ ಅಂಶವೆಂದರೆ, ಯಾವುದೇ ಅಂಶವನ್ನು ಅಮೇರಿಕಾ ಬಯಸಿದರೂ ಅವರು ನಮಗಿಂತ ಹೆಚ್ಚಿನ ಅನಿವಾರ್ಯತೆಯಲ್ಲಿದ್ದರೆ ಎನ್ನುವುದು. ವಸ್ತುಸ್ಥಿತಿ ಹೀಗಿದ್ದೂ ಅಮೇರಿಕಾದ ನಡೆ, ಟ್ರಂಪ್ ಮಾತುಗಳಲ್ಲಿ ಗತ್ತು ಕಡಿಮೆಯಾಗಿಲ್ಲ. ಜಗತ್ತಿನ ದೊಡ್ಡಣ್ಣ ಇಂದಿಗೂ ನಾನೇ ಎನ್ನುವ ಅಹಂ ಅವರಲ್ಲಿದೆ. ಆದರೆ ವಾಸ್ತವ ಬೇರೆಯದಾಗಿದೆ. ಅಮೇರಿಕಾ ತನ್ನ ಇಬ್ಬಗೆ ನೀತಿಯನ್ನು ಇನ್ನೂ ಬಿಟ್ಟಿಲ್ಲ. ತನ್ನ ಹಳೆ ಚಾಳಿಯನ್ನು ಮುಂದುವರಿಸಿದೆ. ಐ ಎಂ ಎಫ್ ಎಂದರೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಎಂದರ್ಥ. ಇದನ್ನು ಚಲಾಯಿಸುವುದು ಅಮೇರಿಕಾ. ಯುದ್ಧ ನಿಂತ ಮರುದಿನವೇ ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಐಎಂಎಫ್ ಪಾಕಿಸ್ತಾನಕ್ಕೆ ನೀಡಿದೆ. ಇದನ್ನು ನೀಡಿದ್ದು ಅಮೇರಿಕಾ ಎನ್ನುವುದಕೆ ಪುರಾವೆ ಒದಗಿಸುವ ಅವಶ್ಯಕತೆಯಿಲ್ಲ. ಅಮೇರಿಕಾ ಸೌತ್ ಏಷ್ಯಾದಲ್ಲಿ ಭಾರತ ಬಲಿಷ್ಠವಾಗಿ ಬೆಳೆದು ಬಿಟ್ಟರೆ ಹೇಗೆ ಎನ್ನುವ ಭಯದಲ್ಲಿ ಸದಾ ಪಾಕಿಸ್ತಾನವನ್ನು ಸಾಕುತ್ತದೆ. ಭಾರತದಲ್ಲಿ ಪೂರ್ಣ ಪ್ರಮಾಣದ ಶಾಂತಿ ನೆಲೆಸಲು ಆ ಬಿಡುವುದಿಲ್ಲ. ಅಮೇರಿಕಾ ತೊಟ್ಟಿಲು ತೂಗುತ್ತದೆ, ಮಗುವನ್ನು ಚಿವುಟುತ್ತದೆ. ಅತ್ತ ಹಣ ನೀಡುವುದು, ಇತ್ತ ಟ್ರೇಡ್ ಹೆಚ್ಚಳದ ಬಗ್ಗೆ ಮಾತಾಡುವುದು ಎರಡೂ ಮಾಡುತ್ತದೆ. ಆದರೆ ಭಾರತ ಹಿಂದಿನ ಭಾರತವಾಗಿ ಉಳಿದಿಲ್ಲ. ಇಂತಹ ಕೃತ್ಯಗಳಿಗೆ ಸರಿಯಾಗಿ ಉತ್ತರ ಕೊಡುವ ಶಕ್ತಿ ಭಾರತದ ರಾಜತಾಂತ್ರಿಕರಿಗೆ ಇಂದು ಲಭಿಸಿದೆ.
ಯುದ್ಧ ಎಂದರೆ ಸಾವು ನೋವು ಎನ್ನುವುದು ಒಂದಂಶವಾದರೆ ಅದು ಆರ್ಥಿಕತೆಗೆ ಮುಳ್ಳು ಎನ್ನುವುದು ಇನ್ನೊಂದು ಅಂಶ. ಭಾರತ ಪಾಕಿಸ್ತಾನದ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಮಾಡಲಿಲ್ಲ. ಆದರೂ ನಾಲ್ಕು ದಿನದಲ್ಲಿ ಪರೋಕ್ಷ ಮತ್ತು ಅಪರೋಕ್ಷವಾಗಿ ಭಾರತಕ್ಕೆ 15 ಸಾವಿರ ಕೋಟಿ ರೂಪಾಯಿ ಹಣ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ನೇರ ಯುದ್ಧದ ಕಾರಣ ನಾಲ್ಕೂವರೆ ಸಾವಿರ ಕೋಟಿ ಖರ್ಚಾಗಿದ್ದರೆ, ಉಳಿದ ಹಣ ಐಪಿಎಲ್ ರದ್ದತಿ, ಏರ್ಪೋರ್ಟ್ ಮುಚ್ಚುವಿಕೆ, ಸ್ಟಾಕ್ ಮಾರ್ಕೆಟ್ ಕುಸಿತ, ಸಪ್ಲೈ ಚೈನ್ ವ್ಯತ್ಯಯಗಳಿಂದ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಪಾಕಿಸ್ತಾನ ನೇರ ಯುದ್ದದಲ್ಲಿ ನಮ್ಮಷ್ಟು ಹಣವನ್ನು ಖರ್ಚು ಮಾಡಿಲ್ಲ. ಏಕೆಂದರೆ ಅದರ ಬಳಿ ಯುದ್ಧಕ್ಕೆ ಖರ್ಚು ಮಾಡಲು ಹಣವಿಲ್ಲ.ಆದರೂ ನಾವು ಮಾಡಿರುವ ಖರ್ಚಿನ ಅರ್ಧದಷ್ಟು ಅವರೂ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರ ಆಸ್ತಿ ಪಾಸ್ತಿಗಳಿಗೆ ಹಾಗಿರುವ ಹಾನಿಯ ಮೊತ್ತ ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ದು ಒಟ್ಟಾರೆ ಭಾರತಕ್ಕೆ ಆದ ನಷ್ಟದ ಐದಾರು ಪಟ್ಟು ಎನ್ನುವುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಪಾಕಿಸ್ತಾನ ಈ ಆರ್ಥಿಕ ಕುಸಿತದಿಂದ ಹೊರಬರಲು ಬಹಳ ಸಮಯ ಹಿಡಿಯುತ್ತದೆ.
ಹಣದ ಲೆಕ್ಕಾಚಾರವನ್ನು ನಾವು ಇಂದಲ್ಲ ನಾಳೆ ನಿಖರವಾಗಿ ಕೊಡಬಹುದು. ಆದರೆ ಈ ಯುದ್ಧದಲ್ಲಿ ಸತ್ತ ನಮ್ಮ ಯೋಧರನ್ನು, ನಮ್ಮ ನಾಗರಿಕರನ್ನು ಮರಳಿ ಪಡೆಯುವುದು ಸಾಧ್ಯವಿಲ್ಲದ ಮಾತು. ಈ ಜೀವ ಹಾನಿಯನ್ನು ಯಾವ ಲೆಕ್ಕಕ್ಕೆ ಬರೆಯುವುದು? ಎಷ್ಟು ಎಂದು ಲೆಕ್ಕ ಹಾಕುವುದು? ಕೇವಲ ನಾಲ್ಕು ದಿನ ನಡೆದ ಯುದ್ಧದ ಪರಿಣಾಮವಿದು. ಇನ್ನು ಯುದ್ಧ ತಿಂಗಳುಗಟ್ಟಲೆ, ವರ್ಷ ನಡೆದರೆ ಗತಿಯೇನು? ಭಾರತದ ಮುಂದೆ ಭವ್ಯ ಭವಿಷ್ಯವಿದೆ. ಹೀಗಾಗಿ ನಾವು ಚೂರು ಅನುಸರಿಸಿಕೊಂಡು ಹೋಗುವುದು ಉತ್ತಮ ನಿರ್ಧಾರವಾಗಿದೆ. ಉಳಿದಂತೆ ಈ ಯುದ್ಧ ನಮ್ಮ ಮಿತ್ರರನ್ನು ಮತ್ತು ಶತ್ರುಗಳನ್ನು ನಮಗೆ ಚನ್ನಾಗಿ ಪರಿಚಯ ಮಾಡಿ ಕೊಟ್ಟಿದೆ.
ಪಾಕಿಸ್ತಾನ ಒಂದು ಫೇಲ್ಡ್ ನೇಶನ್. ಅದು ಮಾಡುತ್ತಿರುವ ಭಯೋತ್ಪಾದನೆ ಜಗತ್ತಿಗೆ ಗೊತ್ತಿದೆ. ಕೆಟ್ಟ ದೇಶವಾದರೂ ಸರಿಯೇ ಅದು ಮುಸ್ಲಿಂ ರಾಷ್ಟ್ರ ಎನ್ನುವ ಕಾರಣಕ್ಕೆ ಅಜರ್ಬಾಯ್ಜನ್ ಮತ್ತು ಟರ್ಕಿ ದೇಶಗಳು ಪಾಕಿಸ್ತಾನದ ಪರ ನಿಂತಿವೆ. ಮಿಕ್ಕೆಲ್ಲಾ ಮುಸ್ಲಿಂ ರಾಷ್ಟ್ರ್ರಗಳು ತಟಸ್ಥ ನೀತಿಯನ್ನು ಕಾಯ್ದು ಕೊಂಡಿವೆ. ಭಾರತ ಬಹು ದೊಡ್ಡ ದೇಶ. ಈ ದೇಶದ ಕೇವಲ 10 ಪ್ರತಿಶತ ಜನ ಮಾಡುವ ಖರ್ಚು ಹಲವಾರು ಯೂರೋಪಿಯನ್ ದೇಶದ ಜನರು ಕೂಡ ಮಾಡಲಾರರು. 2024ರಲ್ಲಿ ಅಜರ್ಬೈಜಾನ್ ದೇಶಕ್ಕೆ ಎರಡೂವರೆ ಲಕ್ಷ ಮತ್ತು ಟರ್ಕಿ ದೇಶಕ್ಕೆ 3 ಲಕ್ಷಕ್ಕೂ ಹೆಚ್ಚು ಭಾರತೀಯರು ಪ್ರವಾಸಕ್ಕೆ ಹೋಗಿದ್ದಾರೆ. ಈ ಎರಡೂ ದೇಶಗಳಲ್ಲಿ ಭಾರತೀಯರು ಕೇವಲ 2024 ಒಂದರಲ್ಲೇ ಆರು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಹೇಳಾಗುತ್ತಿದೆ. ಯಾವಾಗ ಯುದ್ಧ ಮುಗಿದ ಮೇಲೂ ಈ ಎರಡು ದೇಶಗಳು ನಾವು ಎಂದೆದಿಗೂ ಪಾಕಿಸ್ತಾನದ ಪರವಾಗಿ ನಿಲ್ಲುತ್ತೇವೆ ಎಂದವು, ಆಗ ಭಾರತೀಯ ಟೂರಿಸಂ ಕಾರ್ಪೊರೇಟ್ ಹೌಸ್ ಗಳು ಈ ದೇಶಕ್ಕೆ ಇದ್ದ ಎಲ್ಲಾ ರಿಸೆರ್ವಶನ್ ಕ್ಯಾನ್ಸಲ್ ಮಾಡ ತೊಡಗಿದವು. ಹಿಂದೊಮ್ಮೆ ಮಾಲ್ಡಿವ್ಸ್ ಇದೆ ತಪ್ಪನ್ನು ಮಾಡಿತ್ತು. ಎರಡೇ ದಿನದಲ್ಲಿ ಕ್ಷಮೆ ಬೇಡಿತ್ತು. ಟರ್ಕಿ ಗೆ ಇದರ ಮಹತ್ವ ಗೊತ್ತಾಗಿದೆ. ತಪ್ಪಾಯ್ತು ಎನ್ನುತ್ತಿದೆ. ಆದರೆ ಅಜರ್ಬೈಜಾನ್ ಇನ್ನೂ ತನ್ನ ಮೊಂಡುಬುದ್ಧಿಯನ್ನು ಬಿಡದೆ ಹಣ ಮುಖ್ಯವಲ್ಲ, ಟೂರಿಸ್ಟ್ ಬರದಿದ್ದರೆ ಬೇಕಿಲ್ಲ , ನಾವಂತೂ ಸದಾ ಪಾಕಿಸ್ತಾನದ ಪರ ಎಂದಿದ್ದಾರೆ.
ಕೊನೆಮಾತು: ಹಣದ ಮುಂದೆ ಯಾವ ಭೂತಪ್ಪನೂ ಹೆಚ್ಚು ಕಾಲ ನಿಲ್ಲಲು ಸಾಧ್ಯವಿಲ್ಲ. ಈ ಜಗತ್ತನ್ನು ಇಂದು ಆಳುತ್ತಿರುವುದು ಹಣ. ಅದನ್ನು ಪ್ರಾಮಖ್ಯವನ್ನಾಗಿಸಿ ಶುರು ಮಾಡಿರುವ ಈ ಜಾಗತಿಕ ವಿತ್ತ ಜಗತ್ತಿನಲ್ಲಿ ಯಾರ ಬಳಿ ಹೆಚ್ಚು ಹಣವಿದೆ ಆ ದೇಶದ ಮುಂದೆ ಉಳಿದವರು ತಲೆಬಾಗಲೇ ಬೇಕಾಗುತ್ತದೆ. ಭಾರತ ಅಂತಹ ಹಣದ ಮಸಲ್ ಪವರ್ ಜೊತೆಗೆ ತನ್ನ 150 ಕೋಟಿಗೂ ಮೀರಿದ ಜನಸಂಖ್ಯೆಯ ಶಕ್ತಿಯನ್ನು ಸಹ ಜಗತ್ತಿಗೆ ಪ್ರದರ್ಶಿಸಬಹುದು. ನಾವು ಇನ್ನಷ್ಟು ಆರ್ಗನೈಸ್ಡ್ ಆಗುವ ಅವಶ್ಯಕತೆಯಿದೆ.
Advertisement