
ಹೃದಯದ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಆಹಾರದ ಮೂಲಕ ನೈಸರ್ಗಿಕವಾಗಿ ರಕ್ತದೊತ್ತಡವನ್ನು ನಿರ್ವಹಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಕೆಲವು ಆಹಾರಗಳು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ನಾರು ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದರಿಂದ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇವೆಲ್ಲವೂ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅಂತಹ ಕೆಲವು ಆಹಾರಗಳು ಹೀಗಿವೆ:
ಹಸಿರು ಸೊಪ್ಪು ಪೊಟ್ಯಾಸಿಯಮ್ಮಿನ ಅತ್ಯುತ್ತಮ ಮೂಲವಾಗಿದೆ, ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಖನಿಜವಾಗಿದೆ. ಪೊಟ್ಯಾಸಿಯಮ್ ದೇಹವು ಮೂತ್ರದ ಮೂಲಕ ಹೆಚ್ಚುವರಿ ಸೋಡಿಯಂಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ರಕ್ತನಾಳಗಳ ಗೋಡೆಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ತಾಜಾ ಹಸಿರು ಸೊಪ್ಪಿನ ನಿಯಮಿತ ಸೇವನೆ ಹೃದಯದ ಕಾರ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ದೇಹದಲ್ಲಿ ದ್ರವದ ಸಮತೋಲನ ಮಾಡುತ್ತದೆ. ಪಾಲಕ್, ದಂಟು, ಮೆಂತ್ಯ, ಲೆಟ್ಯೂಸ್ ಮತ್ತಿತರ ತಾಜಾ ಹಸಿರು ಸೊಪ್ಪುಗಳನ್ನು ಸಲಾಡುಗಳು, ಸೂಪುಗಳು, ಪಲ್ಯಗಳು ಅಥವಾ ಸ್ಮೂಥಿಗಳಿಗೆ ಸೇರಿಸಿ ಸೇವಿಸಬಹುದು.
ಬೀಟ್ರೂಟ್ ನೈಟ್ರೇಟ್ ಪೋಷಕಾಂಶಗಳಿಂದ ಸಮೃದ್ಧವಾಗಿದೆ, ಇದನ್ನು ದೇಹವು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುತ್ತದೆ - ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ವಿಸ್ತರಿಸುತ್ತದೆ, ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಬೀಟ್ರೂಟ್ ರಸವನ್ನು ಕುಡಿಯುವುದರಿಂದ ಕೆಲವೇ ಗಂಟೆಗಳಲ್ಲಿ ರಕ್ತದೊತ್ತಡದ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಬೀಟ್ರೂಟ್, ಕ್ಯಾರೆಟ್, ಬಾಳೆಹಣ್ಣುಗಳ ಜೊತೆಗೆ ಸ್ವಲ್ಪ ಬೆಲ್ಲ/ಜೇನುತುಪ್ಪ ಮತ್ತು ನೀರನ್ನು ಸೇರಿಸಿ ಜೂಸ್ ಮಾಡಿ ಸೇವಿಸಬಹುದು (ಡಯಾಬಿಟೀಸ್ ಇದ್ದವವರು ಮೇಲೆ ಸಿಹಿಗೆ ಏನನ್ನು ಹಾಕಿಕೊಳ್ಳಬಾರದು) ಅಥವಾ ಪಲ್ಯದ ರೂಪದಲ್ಲಿ ಅಥವಾ ಸಾಂಬಾರ್/ಸಲಾಡ್/ಪಲಾವಿಗೆ ಸೇರಿಸಬಹುದು. ಬೀಟ್ರೂಟ್ ಬೇಯಿಸಿದ ನೀರಿನಿಂದ ರುಚಿಕರ ಸಾರನ್ನು ಮಾಡಬಹುದು.
ಬಾಳೆಹಣ್ಣುಗಳು ಹೆಚ್ಚಿನ ಪೊಟ್ಯಾಸಿಯಮ್ ಅಂಶಕ್ಕೆ ಹೆಸರುವಾಸಿಯಾಗಿವೆ. ಒಂದು ಬಾಳೆಹಣ್ಣಿನಲ್ಲಿ ಸುಮಾರು 400 ಮಿಗ್ರಾಂ ಪೊಟ್ಯಾಸಿಯಮ್ ಇರುತ್ತದೆ. ಪೊಟ್ಯಾಸಿಯಮ್ ಇರುವ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ-ಪೊಟ್ಯಾಸಿಯಮ್ ಅನುಪಾತವನ್ನು ಸಮತೋಲನ ಮಾಡಬಹುದು. ಇದು ರಕ್ತದೊತ್ತಡವನ್ನು ಸಾಮಾನ್ಯ ಮಟ್ಟದಲ್ಲಿಡಲು ನಿರ್ಣಾಯಕವಾಗಿದೆ. ಬಾಳೆಹಣ್ನನ್ನು ಹಾಗೆಯೇ ತಿನ್ನಬಹುದು. ಹಾಲು ಮತ್ತು ಜೇನುತುಪ್ಪ ಸೇರಿಸಿ ಜೂಸ್ ರೂಪದಲ್ಲಿ ಸೇವಿಸಬಹುದು. ಇತರ ಹಣ್ಣುಗಳೊಂದಿಗೆ ರಸಾಯನ ಮಾಡಿ ತಿನ್ನಬಹುದು.
ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಸಂಯುಕ್ತವಿದೆ. ಇದು ರಕ್ತ ಪರಿಚಲನೆ ಸುಧಾರಿಸುವ ಮೂಲಕ ಮತ್ತು ರಕ್ತನಾಳಗಳ ಸ್ನಾಯುಗಳಿಗೆ ವಿಶ್ರಾಂತಿ ನೀಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡುಬಂದಿದೆ. ಇದು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಸಹ ಹೊಂದಿದೆ. ದಿನನಿತ್ಯದ ಅಡುಗೆಯಲ್ಲಿ ತಾಜಾ ಬೆಳ್ಳುಳ್ಳಿಯನ್ನು ಬಳಸುವುದು ಅತ್ಯುತ್ತಮ ಮಾರ್ಗ.
ಸಾಮಾನ್ಯವಾಗಿ ಸಿಗುವ ಹಣ್ಣುಗಳು ಫ್ಲೇವನಾಯ್ಡುಗಳಿಂದ ತುಂಬಿರುತ್ತವೆ. ಫ್ಲೇವನಾಯ್ಡುಗಳು ನೈಸರ್ಗಿಕ ಉತ್ಕರ್ಷಣ ನಿರೋಧಕಗಳು, ಇವು ಎಂಡೋಥೀಲಿಯಲ್ (ರಕ್ತನಾಳಗಳ ಒಳಪದರ ಕಾರ್ಯವನ್ನು) ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಹಣ್ಣುಗಳ ನಿಯಮಿತ ಸೇವನೆಯು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ. ಹಣ್ಣುಗಳನ್ನು ಹಾಗೆಯೇ ತಿನ್ನುವುದು ಒಳ್ಳೆಯದು. ಓಟ್ ಮೀಲ್, ಮೊಸರು, ಸಲಾಡ್ಗಳಿಗೆ ಸೇರಿಸಿ ಸೇವಿಸಬಹುದು.
ಓಟ್ಸ್ ನಾರಿನ ಸಮೃದ್ಧ ಮೂಲ. ಇದರಲ್ಲಿರುವ ಬೀಟಾಗ್ಲುಕನ್ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಾರು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಮೂಲಕ ಮತ್ತು ಹೃದಯದ ಕಾರ್ಯವನ್ನು ಹೆಚ್ಚಿಸುವ ಮೂಲಕ ರಕ್ತದೊತ್ತಡ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಉಪಾಹಾರಕ್ಕಾಗಿ ಓಟ್ ಮೀಲ್ ಅನ್ನು ಸೇವಿಸಿ ಅಥವಾ ಸೂಪುಗಳ ರೀತಿಯಲ್ಲಿಯೂ ಮಾಡಿಕೊಂಡು ಕುಡಿಯಬಹುದು.
ಕೊಬ್ಬಿನ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲ. ಕೊಬ್ಬಿನಾಮ್ಲ ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು ರಕ್ತನಾಳಗಳ ಕಾರ್ಯವನ್ನು ಸುಧಾರಿಸುತ್ತವೆ ಮತ್ತು ಅಪಧಮನಿಯ ಬಿಗಿತವನ್ನು ತಡೆಯುತ್ತವೆ. ವಾರಕ್ಕೆ 2-3 ಬಾರಿ ಬೇಯಿಸಿದ ಕೊಬ್ಬಿನ ಮೀನುಗಳನ್ನು ಸೇವಿಸಬಹುದು.
ಕಡಿಮೆ ಕೊಬ್ಬಿರುವ ಡೈರಿ ಪದಾರ್ಥಗಳು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ದೇಹಕ್ಕೆ ಒದಗಿಸುತ್ತದೆ - ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಈ ಎರಡು ಖನಿಜಗಳು ಅಗತ್ಯ. ಕ್ಯಾಲ್ಸಿಯಂ ರಕ್ತನಾಳಗಳನ್ನು ಬಿಗಿಗೊಳಿಸಲು ಮತ್ತು ಸರಿಯಾಗಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ, ಆದರೆ ಮೆಗ್ನೀಸಿಯಮ್ ರಕ್ತನಾಳಗಳನ್ನು ಸುಸ್ಥಿತಿಯಲ್ಲಿಡುತ್ತದೆ. ಹೀಗಾಗಿ ಪ್ರತಿದಿನ ಮೊಸರು, ಮಜ್ಜಿಗೆ ಅಥವಾ ಒಂದು ಲೋಟ ಹಾಲು ಸೇವಿಸಿದರೆ ಉತ್ತಮ.
ದಾಳಿಂಬೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ (ವಿಶೇಷವಾಗಿ ಪಾಲಿಫಿನಾಲುಗಳು). ಇದು ಹೃದಯ ಮತ್ತು ರಕ್ತನಾಳಗಳನ್ನು ರಕ್ಷಿಸುತ್ತದೆ. ದಾಳಿಂಬೆ ರಸವನ್ನು ಪ್ರತಿದಿನ ಕುಡಿಯುವುದರಿಂದ ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡ ಎರಡನ್ನೂ ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ದಾಳಿಂಬೆಯ ತಾಜಾ ರಸವನ್ನು ಕುಡಿಯಿರಿ ಅಥವಾ ಹಣ್ಣನ್ನು ಬಿಡಿಸಿ ಹಾಗೆಯೇ ತಿನ್ನಬಹುದು.
ಡಾರ್ಕ್ ಚಾಕೊಲೇಟ್ ಫ್ಲೇವನಾಯ್ಡುಗಳನ್ನು ಹೊಂದಿದೆ. ಇದು ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳು ಇರುವುದರಿಂದ ಮಿತವಾಗಿ ವಾರಕ್ಕೊಮ್ಮೆ ಸೇವಿಸಬೇಕು.
Advertisement