ಮೂಳೆ ಆರೋಗ್ಯಕ್ಕಾಗಿ ಆಹಾರ (ಕುಶಲವೇ ಕ್ಷೇಮವೇ)

ಗಾಢ ಹಸಿರು ಸೊಪ್ಪುಗಳು ಕೇವಲ ಉತ್ತಮ ಚರ್ಮ ಹೊಂದಲು ಅಥವಾ ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುವ ಪೋಷಕಾಂಶಗಳಿಂದ ಕೂಡಿದೆ.
Best foods and vitamins for bone health
ಮೂಳೆ ಆರೋಗ್ಯಕ್ಕಾಗಿ ಅತ್ಯುತ್ತಮ ಆಹಾರಗಳು (ಸಾಂಕೇತಿಕ ಚಿತ್ರ)online desk
Updated on

ಮೂಳೆಗಳು ನಮ್ಮ ದೇಹದ ಆಧಾರಸ್ತಂಭಗಳು. ದೇಹಕ್ಕೆ ಅಗತ್ಯ ಬೆಂಬಲ ನೀಡುವುದರ ಜೊತೆಗೆ ಮೂಳೆಗಳು ನಮ್ಮ ಪ್ರತಿಯೊಂದು ಚಲನೆಯ ಹಿಂದಿನ ಅಡಿಪಾಯವಾಗಿವೆ. ನಾವು ಮೆಟ್ಟಿಲುಗಳನ್ನು ಹತ್ತುತ್ತಿರಲಿ, ಯಾವುದೇ ವಸ್ತುಗಳನ್ನು ಎತ್ತುತ್ತಿರಲಿ ಅಥವಾ ಸರಳವಾಗಿ ನಿಂತಿರಲಿ ಮೂಳೆಗಳ ಹಂದರವಾದ ಅಸ್ಥಪಂಜರ ಸದಾ ಕೆಲಸ ಮಾಡುತ್ತಿರುತ್ತದೆ. ಆದ್ದರಿಂದ ಮೂಳೆಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಬೇಕು. ನಡಿಗೆ ಮತ್ತು ವ್ಯಾಯಾಮಗಳ ಜೊತೆಗೆ ನಾವು ದಿನನಿತ್ಯ ಸೇವಿಸುವ ಆಹಾರದ ಮೂಲಕ ಮೂಳೆಗಳ ಆರೋಗ್ಯದ ಬಗೆಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ.

ಮೂಳೆಗಳ ಆರೋಗ್ಯವು ಈಗ ಅನೇಕರು ತಿಳಿದಿರುವಂತೆ ಕೇವಲ ಕ್ಯಾಲ್ಸಿಯಂ ಮಾತ್ರೆಗಳು ಮತ್ತು ಹಾಲು ಕುಡಿಯುವುದರ ಮೂಲಕ ದೊರೆಯುವುದಿಲ್ಲ. ಅನೇಕ ದೈನಂದಿನ ಖಾದ್ಯ ಪದಾರ್ಥಗಳು ಮೂಳೆಗಳನ್ನು ಬಲವಾಗಿ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಮತ್ತು ಬಳಕೆಗೆ ಸದಾ ಸಿದ್ಧವಾಗಿಡಲು ಸಹಾಯ ಮಾಡುತ್ತವೆ. ಮೂಳೆಗಳ ಆರೋಗ್ಯಕ್ಕೆ ಬೇಕಾದ ಪೋಷಕಾಂಷಗಳಿರುವ ಆಹಾರ ಸುಲಭವಾಗಿ ದೊರಕುತ್ತದೆ ಮತ್ತು ಸೇವಿಸಲು ರುಚಿಕರವಾಗಿಯೂ ಇರುತ್ತದೆ.

ಹಸಿರು ಸೊಪ್ಪುಗಳು

ಗಾಢ ಹಸಿರು ಸೊಪ್ಪುಗಳು ಕೇವಲ ಉತ್ತಮ ಚರ್ಮ ಹೊಂದಲು ಅಥವಾ ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುವ ಪೋಷಕಾಂಶಗಳಿಂದ ಕೂಡಿದೆ.

ಎಲೆಕೋಸು, ಪುದೀನಾ, ಕರಿಬೇವು, ಕೊತ್ತಂಬರಿ ಸೊಪ್ಪು, ಪಾಲಕ್, ದಂಟು, ನುಗ್ಗೆ, ಮೆಂತ್ಯ ಸೊಪ್ಪು ಮತ್ತು ಬೊಕ್ ಚಾಯ್‌ನಂತಹ (ಚೀನೀ ಎಲೆಕೋಸು) ಹಸಿರೆಲೆಗಳು ಕ್ಯಾಲ್ಸಿಯಂ, ವಿಟಮಿನ್ ಕೆ ಮತ್ತು ಮೆಗ್ನೀಸಿಯಮ್ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವು ಮೂಳೆಗಳ ಸಾಂದ್ರತೆಯನ್ನು ಬೆಂಬಲಿಸುತ್ತವೆ ಮತ್ತು ಅವುಗಳನ್ನು ದೃಢವಾಗಿಡುವ ಖನಿಜಗಳನ್ನು ದೇಹವು ಹಿಡಿದಿಡಲು ಸಹಾಯ ಮಾಡುತ್ತವೆ. ಈ ಸೊಪ್ಪುಗಳನ್ನು ಬೇಯಿಸಿ/ಹಸಿಯಾಗಿ ಆಹಾರದಲ್ಲಿ ಸೇರಿಸಿ, ಸ್ಮೂಥಿಗಳಲ್ಲಿ ಮಿಶ್ರಣ ಮಾಡಿ ಅಥವಾ ಬೆಳ್ಳುಳ್ಳಿಯೊಂದಿಗೆ ಹುರಿದು ತರಕಾರಿಗಳೊಂದಿಗೆ ಸೇರಿಸಿ ಪಲ್ಯ ಅಥವಾ ಸಾಂಬಾರ್ ಮಾಡಿ ಸವಿಯಿರಿ.

Best foods and vitamins for bone health
PSSD ಅಥವಾ SSRI ನಂತರದ ಲೈಂಗಿಕ ಅಪಸಾಮಾನ್ಯ ಕ್ರಿಯೆ ಸಮಸ್ಯೆ (ಕುಶಲವೇ ಕ್ಷೇಮವೇ)

ಬಾದಾಮಿ, ಎಳ್ಳು, ಸೂರ್ಯಕಾಂತಿ

ಪುಷ್ಟಿಕರ ಬಾದಾಮಿ, ಎಳ್ಳು, ಸೂರ್ಯಕಾಂತಿ ಮತ್ತು ಅಗಸೆಬೀಜಗಳು ಕ್ಯಾಲ್ಸಿಯಂ, ಆರೋಗ್ಯಕರ ಕೊಬ್ಬು ಮತ್ತು ಮೂಳೆಗಳಿಗೆ ಬಲವನ್ನು ನೀಡುತ್ತವೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಒಟ್ಟಿಗೆ ಕೆಲಸ ಮಾಡುವ ಖನಿಜಗಳನ್ನು ಹೊಂದಿರುತ್ತವೆ. ಅವು ಖಾದ್ಯಗಳಾಗಿ ಪರಿಪೂರ್ಣವಾಗಿವೆ. ಹೆಚ್ಚಿನ ರುಚಿಗಾಗಿ ಆಹಾರದ ಜೊತೆಗೆ (ಉದಾಹರಣೆಗೆ ಪಾಯಸ) ಇವುಗಳನ್ನು ಸಾಮಾನ್ಯವಾಗಿ ಸೇರಿಸಲಾಗುತ್ತದೆ. ವಾಲ್ನಟ್ಸ್ (ಅಕ್ರೋಟ್) ಮತ್ತು ಅಗಸೆಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ಅವು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ. ದೀರ್ಘಕಾಲದ ಉರಿಯೂತವು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು ಮೂಳೆಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ.

ಮೊಸರು, ಚೀಸ್ ಮತ್ತು ಹಾಲು

ಮೊಸರು, ಚೀಸ್ ಮತ್ತು ಹಾಲು ಮೂಳೆಗಳ ಆರೋಗ್ಯಕ್ಕೆ ಸಹಾಯಕವಾದ ಕ್ಯಾಲ್ಸಿಯಂನ ಜನಪ್ರಿಯ ಮೂಲಗಳಾಗಿವೆ. ಆದರೆ ಇತ್ತೀಚೆಗೆ ಕೆಲವರು ಹಾಲು ಮತ್ತು ಅದರ ಪದಾರ್ಥಗಳನ್ನು ಸೇರಿಸುವುದಿಲ್ಲ. ಸಸ್ಯ ಆಧಾರಿತ ಮೊಸರಿನ ಜೊತೆಗೆ ಬಾದಾಮಿ, ಸೋಯಾ ಅಥವಾ ಓಟ್ ಹಾಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಇವುಗಳನ್ನು ಸ್ಮೂಥಿಗಳು, ಉಪಾಹಾರ ಅಥವಾ ಖಾರದ ಭಕ್ಷ್ಯಗಳಿಗೆ ಸೇರಿಸಿ ಸೇವಿಸಬಹುದು.

ಸಸ್ಯಾಹಾರಗಳು ಪ್ರೋಟೀನ್ ನ ಉತ್ತಮ ಮೂಲಗಳಷ್ಟೇ ಅಲ್ಲ - ಕ್ಯಾಲ್ಸಿಯಂ, ರಂಜಕ ಮತ್ತು ಮೆಗ್ನೀಷಿಯಮ್ಗಳನ್ನು ಹೊಂದಿವೆ. ಕ್ಯಾಲ್ಸಿಯಂಯುಕ್ತ ಟೋಫು ಮೂಳೆಗಳಿಗೆ ವಿಶೇಷವಾಗಿ ಸಹಾಯಕವಾಗಿದೆ. ಬೀನ್ಸುಗಳನ್ನು ಸೂಪ್, ಪಲ್ಯ ಮತ್ತು ಸಲಾಡುಗಳಿಗೆ ಸೇರಿಸುವುದು ಸುಲಭ.

Best foods and vitamins for bone health
ಆರೋಗ್ಯಕ್ಕಾಗಿ ಹರ್ಬಲ್ ಟೀ (ಕುಶಲವೇ ಕ್ಷೇಮವೇ)

ಸಾಲ್ಮನ್ ಮತ್ತು ಸಾರ್ಡೀನ್ ಮೀನುಗಳು

ಸಾಲ್ಮನ್ ಮತ್ತು ಸಾರ್ಡೀನುಗಳಂತಹ ಎಣ್ಣೆಯುಕ್ತ ಮೀನುಗಳು ವಿಟಮಿನ್ ಡಿ ಮತ್ತು ಒಮೆಗಾ-3 ಕೊಬ್ಬುಗಳಿಂದ ತುಂಬಿವೆ. ಇದು ದೇಹವು ಕ್ಯಾಲ್ಸಿಯಂಅನ್ನು ಹೀರಿಕೊಳ್ಳಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದು ಮೂಳೆಗಳಿಗೆ ಬಲವನ್ನು ನೀಡುತ್ತದೆ. ಜೊತೆಗೆ ಕೀಲುಗಳು ಮತ್ತು ಸ್ನಾಯುಗಳನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತವೆ.

ಧಾನ್ಯಗಳು

ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಡೀ ಧಾನ್ಯಗಳು ಬಹಳ ಮುಖ್ಯ. ಈ ಧಾನ್ಯಗಳು ಮೆಗ್ನೀಸಿಯಮ್, ರಂಜಕ ಮತ್ತು ಬಿ ಜೀವಸತ್ವಗಳಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ, ಇವೆಲ್ಲವೂ ಮೂಳೆಯ ಬಲ ಮತ್ತು ಬೆಳವಣಿಗೆಗೆ ಬಹು ಮುಖ್ಯವಾಗಿವೆ. ಮೂಳೆ ಸಾಂದ್ರತೆಗೆ ಪ್ರಮುಖ ಖನಿಜವಾದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯಲ್ಲಿ ಮೆಗ್ನೀಸಿಯಮ್ ಸಹಾಯ ಮಾಡುತ್ತದೆ. ಧಾನ್ಯಗಳು ನಾರನ್ನು ಸಹ ಹೊಂದಿರುತ್ತವೆ, ಇದು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತವೆ. ಇವುಗಳು ಹಾಲಿನ ಉತ್ಪನ್ನಗಳಂತೆ ಕ್ಯಾಲ್ಸಿಯಂಭರಿತವಾಗಿಲ್ಲದಿದ್ದರೂ ಸಮತೋಲಿತ ಆಹಾರಕ್ಕೆ ಪೂರಕವಾಗಿವೆ.

ಗೋಧಿ, ಸಿರಿಧಾನ್ಯ ಮತ್ತು ರಾಗಿ

ಗೋಧಿ, ಸಿರಿಧಾನ್ಯಗಳು ಮತ್ತು ರಾಗಿ ನಮ್ಮ ದೇಹದ ಒಟ್ಟಾರೆ ಪೋಷಣೆಯನ್ನು ಹೆಚ್ಚಿಸುತ್ತವೆ. ಜೊತೆಗೆ ಕಂದು ಅಕ್ಕಿ, ಓಟ್ಸ್ ಮತ್ತು ಕ್ವಿನೋವಾದಂತಹ ಧಾನ್ಯಗಳು ಮೆಗ್ನೀಸಿಯಮ್ಮಿನಂತಹ ಖನಿಜಗಳಿಂದ ತುಂಬಿರುತ್ತವೆ. ಇದು ದೇಹವು ಕ್ಯಾಲ್ಸಿಯಮ್ಮನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಈ ಧಾನ್ಯಗಳನ್ನು ತಪ್ಪದೇ ದೈನಂದಿನ ಊಟಕ್ಕೆ ಸೇರಿಸಿಕೊಳ್ಳಬೇಕು.

ಕೊನೆಮಾತು: ಕೊನೆಯದಾಗಿ ಹೇಳುವುದಾದರೆ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಬಹಳ ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ, ವಿಟಮಿನ್ ಡಿ, ಮೆಗ್ನೀಷಿಯಮ್ ಮುಂತಾದ ಪೋಷಕಾಂಶಗಳಿರುವ ಸಮತೋಲನ ಆಹಾರ ಸೇವನೆ ಮೂಳೆಗಳನ್ನು ಬಲಪಡಿಸಲು ಅಗತ್ಯ. ಪೋಷಕಾಂಶಭರಿತ ಆಹಾರ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದರಿಂದ ಮೂಳೆಗೆಳ ಆರೋಗ್ಯವನ್ನು ದೀರ್ಘಕಾಲ ಚೆನ್ನಾಗಿ ಕಾಪಾಡಿಕೊಳ್ಳಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com