
ದಟ್ಟ ಮತ್ತು ಹೊಳಪಿನ ಕೇಶರಾಶಿ ಎಲ್ಲರ ಕನಸು. ಕೂದಲಿನ ಉತ್ತಮ ಆರೋಗ್ಯ, ಸೌಂದರ್ಯ ಮತ್ತು ಬೆಳವಣಿಗೆಗಾಗಿ ನಾವು ಭಾರತೀಯರು ಯಾವಾಗಲೂ ಪ್ರಕೃತಿಯಲ್ಲಿ ಪರಿಹಾರ ಕಂಡುಕೊಂಡಿದ್ದೇವೆ. ನಮ್ಮ ಅಜ್ಜಿಯರು ದುಬಾರಿ ಉತ್ಪನ್ನಗಳಿಗೆ ಮಾರುಹೋಗದೇ ಮನೆಮದ್ದು ಹಾಗೂ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ ಕೂದಲನ್ನು ಪೋಷಿಸುತ್ತಿದ್ದರು.
ಇಂದಿಗೂ ಗಿಡಮೂಲಿಕೆಗಳು ತಲೆಹೊಟ್ಟು, ಕೂದಲು ಉದುರುವಿಕೆ, ಬೆಳ್ಳಗಾಗುವಿಕೆ ಮತ್ತು ಅನೇಕ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರವಾಗಿವೆ.
ಭೃಂಗರಾಜ
ಭೃಂಗರಾಜ ಗಿಡವನ್ನು "ಕೇಶರಾಜ" ಎಂದೇ ಕರೆಯಲಾಗುತ್ತದೆ ಮತ್ತು ಇದು ಆಯುರ್ವೇದದಲ್ಲಿ ಶತಶತಮಾನಗಳಿಂದ ಕೂದಲಿನ ಆರೈಕೆಯ ಪ್ರಮುಖ ಗಿಡಮೂಲಿಕೆಯಾಗಿದ್ದು ಕೂದಲು ಉದುರುವಿಕೆ, ಅಕಾಲಿಕ ಬೂದುಬಣ್ಣ ಹಾಗೂ ನೆತ್ತಿಯ ಸೋಂಕುಗಳಿಗೆ ಉತ್ತಮ ಪರಿಹಾರವಾಗಿದೆ. ಇದು ಕೂದಲು ಬೆಳವಣಿಗೆಗೆ ಮತ್ತು ಸೌಂದರ್ಯಕ್ಕೆ ಉತ್ತೇಜನ ನೀಡುತ್ತದೆ ಹಾಗೂ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಭೃಂಗರಾಜ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ವಾರಕ್ಕೆ ಎರಡು ಬಾರಿ ತಲೆಗೆ ಹಚ್ಚಿದರೆ ಉತ್ತಮ. ಅಲ್ಲದೇ ಒಣಗಿದ ಭೃಂಗರಾಜ ಎಲೆಗಳ ಪುಡಿಯನ್ನು ಮೊಸರು ಅಥವಾ ತಾಜಾ ಅಲೋವೆರಾ ಎಲೆಯ ರಸದೊಂದಿಗೆ ಜೊತೆ ಬೆರೆಸಿ ತಲೆಗೆ ಹಚ್ಚಿ ಸ್ಪಲ್ಪ ಹೊತ್ತು ಬಿಟ್ಟು ತಲೆಗೆ ಸ್ನಾನ ಮಾಡುವುದು ಪರಿಣಾಮಕಾರಿ.
ಆಮ್ಲಾ
ಆಮ್ಲಾ ಅಥವಾ ಅಮಲಕಿ ಅಂದರೆ ಬೆಟ್ಟದ ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ "ರಸಾಯನ" ಎಂದೂ ಕರೆಯುತ್ತಾರೆ. ಇದರಲ್ಲಿ ವಿಟಮಿನ್ ಸಿ ಮತ್ತು ಶಕ್ತಿಯುತ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಬೆಟ್ಟದ ನೆಲ್ಲಿಕಾಯಿಯು ಕೂದಲು ಬೇರುಗಳನ್ನು ಬಲಪಡಿಸುತ್ತದೆ ಮತ್ತು ಅದರ ತ್ವರಿತ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುವುದರ ಜೊತೆಗೆ ಅಕಾಲಿಕವಾಗಿ ಅದರ ಬಣ್ಣ ಬದಲಾಗುವುದನ್ನು ತಡೆಯುತ್ತದೆ. ಇದರ ಎಣ್ಣೆಯನ್ನು ತಲೆ ಮಸಾಜಿಗೆ ಬಳಸಬಹುದು ಅಥವಾ ಪುಡಿಯನ್ನು ದಾಸವಾಳದ ಪುಡಿಯೊಂದಿಗೆ ಬೆರೆಸಿ ಹೇರ್ ಪ್ಯಾಕ್ ಆಗಿ ಬಳಸಬಹುದು. ಬೆಟ್ಟದ ನೆಲ್ಲಿಕಾಯಿಯ ರಸವನ್ನು ಪ್ರತಿದಿನ ಕುಡಿಯುವುದು ಒಳಗಿನಿಂದ ಕೂದಲನ್ನು ಪೋಷಿಸುತ್ತದೆ.
ಬ್ರಾಹ್ಮಿ
ಬ್ರಾಹ್ಮಿ ಅಂದರೆ ಒಂದೆಲಗ ಒತ್ತಡ ನಿವಾರಕ ಗುಣವನ್ನು ಹೊಂದಿರುವ ಮೌಲ್ಯಯುತ ಆಯುರ್ವೇದ ಗಿಡಮೂಲಿಕೆಯಾಗಿದೆ. ಇದು ಕೂದಲು ಉದುರುವಿಕೆಗೆ ಕಾರಣವಾಗುವ ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತದೆ. ಜೊತೆಗೆ ಇದು ಕೂದಲಿನ ಕೋಶಿಕೆಗಳನ್ನು ಬಲಪಡಿಸುತ್ತದೆ ಮತ್ತು ಕೂದಲು ದಟ್ಟವಾಗಿ ಹೊಳಪಿನಿಂದ ಬೆಳೆಯಲು ಸಹಾಯ ಮಾಡುತ್ತದೆ. ಬ್ರಾಹ್ಮಿ ಎಲೆಗಳನ್ನು ಬೆಚ್ಚಗಿನ ಎಣ್ಣೆಯಲ್ಲಿ ಕುದಿಸಿ ತಲೆ ಮೇಲೆ ಹಚ್ಚಬಹುದು. ಬ್ರಾಹ್ಮಿ ಪುಡಿಯನ್ನು ಮೊಸರು ಅಥವಾ ಬೇವು ಜತೆಗೆ ಹೇರ್ ಮಾಸ್ಕಿನಲ್ಲಿ ಬಳಸಬಹುದು. ಮಲಗುವ ಮುಂಚೆ ಬ್ರಾಹ್ಮಿ ಎಣ್ಣೆಯಿಂದ ತಲೆ ಮಸಾಜ್ ಮಾಡುವುದರಿಂದ ನರಗಳು ಶಾಂತವಾಗುತ್ತವೆ ಮತ್ತು ನಿದ್ರೆ ಚೆನ್ನಾಗಿ ಬರುತ್ತದೆ.
ಬೇವು
ಬೇವು ಒಂದು ನೈಸರ್ಗಿಕ ಶಿಲೀಂಧ್ರನಾಶಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗಿಡಮೂಲಿಕೆ. ಇದು ನೆತ್ತಿಯನ್ನು ಸ್ವಚ್ಛವಾಗಿ ಮತ್ತು ಸೋಂಕುರಹಿತವಾಗಿಡುತ್ತದೆ. ತಲೆಹೊಟ್ಟು, ತುರಿಕೆ ಮತ್ತು ನೆತ್ತಿಯಮ ಮೇಲೆ ಮೂಡುವ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಕೂದಲಿನ ಕಿರುಚೀಲಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಬೇವಿನ ಎಲೆಯ ಪೇಸ್ಟ್ ಅಥವಾ ಎಣ್ಣೆಯನ್ನು ನಿಯಮಿತವಾಗಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಧಾರಾಳವಾಗಿ ಬಳಸಬಹುದು.
ಮೆಂತ್ಯ
ಸಾಮಾನ್ಯವಾಗಿ ಮನೆಯಲ್ಲಿಯೇ ಸುಲಭವಾಗಿ ಸಿಗುವ ಮೆಂತ್ಯ (ಮೇಥಿ) ಬೀಜಗಳು ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲದಿಂದ ಸಮೃದ್ಧವಾಗಿವೆ, ಇವೆರಡೂ ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ವಿರುದ್ಧ ಹೋರಾಡಲು ಹೆಸರುವಾಸಿಯಾಗಿವೆ. ಮೆಂತ್ಯ ಕೂದಲನ್ನು ಮೃದುಗೊಳಿಸುತ್ತದೆ. ನೆನೆಸಿದ ಮೆಂತ್ಯದ ಪೇಸ್ಟ್ ಅಥವಾ ಅದರ ಎಣ್ಣೆಯನ್ನು ವಾರಕ್ಕೊಮ್ಮೆ ತಲೆಗೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ತೊಳೆದುಕೊಳ್ಳಬಹುದು.
ದಾಸವಾಳ
ದಾಸವಾಳದ ಮನಮೋಹಕ ಹೂವುಗಳು ಮತ್ತು ಎಲೆಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ದಪ್ಪವಾಗಿಸಲು ಅತ್ಯುತ್ತಮವಾಗಿವೆ. ಹೂವುಗಳಿಂದ ತಯಾರಿಸಿದ ಪೇಸ್ಟ್ ಅಥವಾ ಎಣ್ಣೆಯನ್ನು ಪೋಷಣೆಯ ಕೂದಲಿನ ಪ್ಯಾಕ್ ಆಗಿ ಹಚ್ಚಬಹುದು.
ಅಲೋವೆರಾ
ಅಲೋವೆರಾ (ಲೋಳೆಸರ) ನೆತ್ತಿಯನ್ನು ಶಮನಗೊಳಿಸುತ್ತದೆ, ತಲೆಹೊಟ್ಟು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ತಾಜಾ ಅಲೋವೆರಾದ ರಸವನ್ನು ನೇರವಾಗಿ ನೆತ್ತಿಗೆ ಹಚ್ಚಬಹುದು ಅಥವಾ ಇತರ ಗಿಡಮೂಲಿಕೆ ಪುಡಿಗಳೊಂದಿಗೆ ಬೆರೆಸಿ ಬಳಸಬಹುದು.
ಜಟಮಾಂಸಿ
ಜಟಮಾಂಸಿ ಎಂಬ ಹಿಮಾಲಯನ್ ಮೂಲಿಕೆ ಕೂದಲಿನಲ್ಲಿರುವ ಕಿರುಚೀಲಗಳನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ (ವಿಶೇಷವಾಗಿ ಬೋಳು ತೇಪೆಗಳಲ್ಲಿ). ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ.
ಕೊನೆಮಾತು: ಗಿಡಮೂಲಿಕೆಗಳು ಆರೋಗ್ಯಕರ, ಸೌಂದರ್ಯಯುತ, ದಟ್ಟ ಮತ್ತು ಹೊಳಪುಳ್ಳ ಕೂದಲಿಗೆ ಸೌಮ್ಯವಾದ, ರಾಸಾಯನಿಕಮುಕ್ತ ಮಾರ್ಗವಾಗಿವೆ. ಇವುಗಳನ್ನು ಸರಿಯಾಗಿ ಮತ್ತು ಸ್ಥಿರವಾಗಿ ಬಳಸಿದಾಗ ಈ ನೈಸರ್ಗಿಕ ಪರಿಹಾರಗಳು ಕೂದಲಿಗೆ ಚೈತನ್ಯವನ್ನು ನೀಡುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಗಿಡಮೂಲಿಕೆಗಳನ್ನು ನೇರವಾಗಿ ಅಥವಾ ಅವುಗಳ ಎಣ್ಣೆಗಳು ಅಥವಾ ಹೇರ್ ಪ್ಯಾಕುಗಳನ್ನು ನಿಯಮಿತವಾಗಿ ವಾರಕ್ಕೆ ಕನಿಷ್ಠ ಒಂದು ಅಥವಾ ಎರಡು ಬಾರಿ ಬಳಸಿ ಕೂದಲ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ದೀರ್ಘಕಾಲಿಕವಾಗಿ ಗಿಡಮೂಲಿಕೆಗಳನ್ನು ಬಳಸುವುದು ಸುಸ್ಥಿರ ಫಲಿತಾಂಶಗಳನ್ನು ನೀಡುತ್ತದೆ.
Advertisement