ರಾಜತಾಂತ್ರಿಕ ವೈಫಲ್ಯ: ಜೆಲೆನ್ಸ್‌ಕಿ ಶ್ವೇತ ಭವನ ಭೇಟಿ ವಾದ ವಿವಾದದಲ್ಲಿ ಅಂತ್ಯ!

ರಾಜತಾಂತ್ರಿಕ ವೈಫಲ್ಯ: ಜೆಲೆನ್ಸ್‌ಕಿ ಶ್ವೇತ ಭವನ ಭೇಟಿ ವಾದ ವಿವಾದದಲ್ಲಿ ಅಂತ್ಯ!

Published on

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ಅವರು ಫೆಬ್ರವರಿ 28ರಂದು ಶ್ವೇತ ಭವನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಅಮೆರಿಕಾ ಮತ್ತು ಉಕ್ರೇನ್‌ಗಳ ಸಂಬಂಧ ಒಂದು ರೀತಿ ಅಸ್ಪಷ್ಟವಾಗಿರುವಂತೆ ಕಂಡುಬಂದಿತ್ತು.

ಉಕ್ರೇನ್ ಅಧ್ಯಕ್ಷ ಜೆಲೆನ್ಸ್‌ಕಿ ಶ್ವೇತ ಭವನದಿಂದ ತೆರಳುವಾಗ, ಅಮೆರಿಕಾ ಮತ್ತು ಉಕ್ರೇನ್ ಸಂಬಂಧ ಸಂಪೂರ್ಣವಾಗಿ ಮುರಿದುಹೋದಂತೆ ಕಂಡುಬಂದಿತ್ತು. ಕ್ಯಾಮರಾದಲ್ಲಿ ಸೆರೆಯಾದ ಮಾತುಕತೆಗಳಲ್ಲಿ, ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಅವರು ಜೆಲೆನ್ಸ್‌ಕಿ ಅಮೆರಿಕಾದ ನೆರವಿನ ಕುರಿತು ಕೃತಜ್ಞತೆ ಹೊಂದಿಲ್ಲದವರು ಎಂದು ಆರೋಪಿಸಿದ್ದು, ಜೆಲೆನ್ಸ್‌ಕಿ ಈಗ ಜಗತ್ತನ್ನು ಮೂರನೇ ಜಾಗತಿಕ ಯುದ್ಧದತ್ತ ತಳ್ಳುತ್ತಿದ್ದಾರೆ ಎಂದಿದ್ದಾರೆ. ಈ ತೀವ್ರವಾದ ಮಾತುಕತೆಗಳ ಬಳಿಕ, ಜೆಲೆನ್ಸ್‌ಕಿ ಇನ್ನೂ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಾ ಮನೆಗೆ ಮರಳುತ್ತಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಶಾಂತಿ ಒಪ್ಪಂದ ನಡೆಸುವುದು ಹಿಂದೆಂದಿಗಿಂತಲೂ ಹೆಚ್ಚು ಕಷ್ಟಕರವಾಗಿರುವಂತೆ ಕಾಣುತ್ತಿದೆ.

ಈಗ ಜೆಲೆನ್ಸ್‌ಕಿ ಮತ್ತು ಅಮೆರಿಕಾ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದ್ದು, ಉಕ್ರೇನ್ ಈಗ ಶಾಂತಿ ಮಾತುಕತೆಗೆ ಸಿದ್ಧವಾಗಿರುವಂತೆ ಕಂಡುಬರುತ್ತಿಲ್ಲ. ಇದರ ಪರಿಣಾಮವಾಗಿ, ಟ್ರಂಪ್ ಆಡಳಿತ ಉಕ್ರೇನಿಗೆ ಮಿಲಿಟರಿ ಮತ್ತು ಆರ್ಥಿಕ ನೆರವು ಒದಗಿಸುವುದನ್ನು ನಿಲ್ಲಿಸುವ ಸಾಧ್ಯತೆಗಳಿವೆ. ಯುದ್ಧದಲ್ಲಿ ರಷ್ಯಾ ಇನ್ನೂ ಮೇಲುಗೈ ಹೊಂದಿರುವ ಸನ್ನಿವೇಶದಲ್ಲಿ ಇಂತಹ ಬೆಳವಣಿಗೆ ನಡೆದಿರುವುದು ಜೆಲೆನ್ಸ್‌ಕಿಗೆ ತೀವ್ರ ಸವಾಲಾಗಿದೆ. ಇತ್ತೀಚಿನ ಸಮಯದಲ್ಲಿ ಇಷ್ಟೊಂದು ಕೆಟ್ಟ ರೀತಿಯಲ್ಲಿ ನಡೆದ ಯಾವುದೇ ರಾಜತಾಂತ್ರಿಕ ಪ್ರಯತ್ನ ನಡೆದ ಉದಾಹರಣೆಗಳಿಲ್ಲ.

ಓವಲ್ ಆಫೀಸಿನಲ್ಲಿ ಜೆಲೆನ್ಸ್‌ಕಿ, ಜೆ ಡಿ ವ್ಯಾನ್ಸ್ ಮತ್ತಿತರ ಸಹಯೋಗಿಗಳ ಜೊತೆ ಕುಳಿತು ಸಮಾಲೋಚನೆ ನಡೆಸುತ್ತಿದ್ದ ಸಂದರ್ಭದಲ್ಲಿ, ಡೊನಾಲ್ಡ್ ಟ್ರಂಪ್ ಅವರು "ನನ್ನ ನಿಷ್ಠೆ ಏನಿದ್ದರೂ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸೇರಿದ್ದು. ನಾನು ಇಲ್ಲಿ ಯಾವುದೇ ಪಕ್ಷಕ್ಕೆ ಬೆಂಬಲ ಒದಗಿಸಲು ಸಿದ್ಧವಿಲ್ಲ" ಎಂದು ಹೇಳಿದ್ದಾರೆ.

ಅಮೆರಿಕಾ ರಾಜತಾಂತ್ರಿಕತೆಗೆ ಬೆಲೆ ನೀಡುವುದರಿಂದಲೇ ಒಂದು ಮಹಾನ್ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಅದನ್ನೇ ತಾನೂ ಮಾಡುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.

ರಾಜತಾಂತ್ರಿಕತೆ ಎನ್ನುವುದು ಕದನ, ಚಕಮಕಿಗಳ ಬದಲಾಗಿ, ಮಾತುಕತೆಗಳು ಮತ್ತು ಒಪ್ಪಂದಗಳ ಮೂಲಕ ರಾಷ್ಟ್ರಗಳ ನಡುವಿನ ಸಂಬಂಧವನ್ನು ನಿರ್ವಹಿಸುವ ವಿಧಾನವಾಗಿದೆ. ಇದು ವಿವಿಧ ರಾಷ್ಟ್ರಗಳಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಿ, ಪರಸ್ಪರ ನಂಬಿಕೆ ಮೂಡಿಸಿ, ಜೊತೆಯಾಗಿ, ಶಾಂತಿಯುತವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ.

ಟ್ರಂಪ್ ಇಂತಹ ಮಾತುಗಳನ್ನು ಆಡಿದ ಸಂದರ್ಭದಲ್ಲಿ, ಇತ್ತೀಚೆಗೆ ಶ್ವೇತ ಭವನಕ್ಕೆ ಭೇಟಿ ನೀಡಿದ ಫ್ರಾನ್ಸ್ ಅಧ್ಯಕ್ಷ ಇಮ್ಮಾನುವೆಲ್ ಮಾಕ್ರೋನ್ ಮತ್ತು ಬ್ರಿಟನ್ ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ರೀತಿಯಲ್ಲಿ ಜೆಲೆನ್ಸ್‌ಕಿ ಸಹ ಟ್ರಂಪ್‌ರನ್ನು ಹೊಗಳಿ ಮಾತನಾಡಬಹುದಿತ್ತು. ಇದರಿಂದ ಪರಿಸ್ಥಿತಿ ಸುಧಾರಿಸುತ್ತಿತ್ತು. ಆದರೆ, ಜೆಲೆನ್ಸ್‌ಕಿ 2014ರಿಂದ ನಡೆದ ಚಕಮಕಿಯ ಇತಿಹಾಸದ ಕುರಿತು ಮಾತನಾಡುತ್ತಾ, ವ್ಲಾಡಿಮಿರ್ ಪುಟಿನ್ ಹಿಂದೆ ನಡೆಸಿದ ಯಾವುದೇ ಒಪ್ಪಂದವನ್ನು ಉಳಿಸಿಕೊಂಡಿಲ್ಲ ಎಂದು ವಿವರಿಸತೊಡಗಿದರು.

ಕೊಂಚ ಹರುಕುಮುರುಕು, ಆದರೆ ವ್ಯಂಗ್ಯಭರಿತವಾದ ಇಂಗ್ಲಿಷ್‌ನಲ್ಲಿ ಮಾತನಾಡಿದ ಜೆಲೆನ್ಸ್‌ಕಿ, ಉಪಾಧ್ಯಕ್ಷರನ್ನು ಉದ್ದೇಶಿಸಿ, "ಜೆಡಿ, ನೀವು ಯಾವ ರೀತಿಯ ರಾಜತಾಂತ್ರಿಕತೆಯ ಬಗ್ಗೆ ಮಾತನಾಡುತ್ತಿದ್ದೀರಿ?" ಎಂದು ಪ್ರಶ್ನಿಸಿದರು.

ಆರಂಭದಲ್ಲೇ ಜೆಲೆನ್ಸ್‌ಕಿ ಅವರನ್ನು ಟೀಕಿಸಿ, ಅವರಿಗೆ ಮುಜುಗರ ಉಂಟಮಾಡುವ ಉದ್ದೇಶ ಹೊಂದಿದ್ದಂತೆ ಕಾಣಿಸಿದ ಜೆ ಡಿ ವ್ಯಾನ್ಸ್ ಕೈಗೆ ಜೆಲೆನ್ಸ್‌ಕಿ ಸ್ವತಃ ಒಂದು ಅವಕಾಶ ನೀಡಿದರು.

ಜೆಲೆನ್ಸ್‌ಕಿ ಮೂಲತಃ ಎರಡು ಗುರಿಗಳನ್ನು ಇಟ್ಟುಕೊಂಡು ವಾಷಿಂಗ್ಟನ್‌ಗೆ ಭೇಟಿ ನೀಡಿದ್ದರು. ಅವೆಂದರೆ: ಉಕ್ರೇನಿನ ಯುದ್ಧ ಪ್ರಯತ್ನಗಳಿಗೆ ಹೆಚ್ಚಿನ ಆಯುಧಗಳನ್ನು ಗಳಿಸುವುದು, ಮತ್ತು ದೀರ್ಘಾವಧಿಯ ಶಾಂತಿ ಒಪ್ಪಂದಕ್ಕೆ ಸೂಕ್ತ ತಳಹದಿ ಸ್ಥಾಪಿಸುವುದು.

ಪಾಶ್ಚಾತ್ಯ ದೇಶಗಳಿಂದ ಪ್ರಬಲ ಭದ್ರತಾ ಗ್ಯಾರಂಟಿಗಳ ಹೊರತಾಗಿ ಕದನ ವಿರಾಮದ ಸ್ಥಾಪನೆಯಾದರೆ, ಅದು ತನ್ನ ವಿರುದ್ಧ ಹೆಣೆದ ಬಲೆಯಾಗಲಿದೆ ಎಂದು ಉಕ್ರೇನ್ ಬಲವಾಗಿ ನಂಬಿದೆ. ಹಾಗಾದರೆ, ರಷ್ಯಾಗೆ ಮರಳಿ ತನ್ನ ಶಕ್ತಿ ಸಂಪಾದಿಸಿ, ಉಕ್ರೇನ್ ಒಳಗೆ ಅಸ್ಥಿರತೆ ಉಂಟುಮಾಡಲು ಸಮಯಾವಕಾಶ ಲಭಿಸುತ್ತದೆ ಎಂದು ಉಕ್ರೇನ್ ಆತಂಕ ಹೊಂದಿದೆ.

ನಾವು ಕೇವಲ ಒಂದು ಕದನ ವಿರಾಮವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಜೆಲೆನ್ಸ್‌ಕಿ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಕುರಿತು ಅಮೆರಿಕಾದ ನಾಯಕರೊಡನೆ ಸಮಾಲೋಚನೆ ನಡೆಸಲು ಅದು ಸೂಕ್ತ ಸಂದರ್ಭವಾಗಿರಲಿಲ್ಲ. ಅದನ್ನು ಅರ್ಥ ಮಾಡಿಕೊಳ್ಳಲು ಜೆಲೆನ್ಸ್‌ಕಿ ವಿಫಲರಾದರು.

ಜೆಲೆನ್ಸ್‌ಕಿ ಮಾತುಗಳಿಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಜೆ ಡಿ ವ್ಯಾನ್ಸ್, "ಓವಲ್ ಆಫೀಸಿಗೆ ಆಗಮಿಸಿ, ಅಮೆರಿಕಾದ ಮಾಧ್ಯಮಗಳ ಎದುರು ಈ ರೀತಿ ವಾದ ನಡೆಸುವುದು ಅಗೌರವದ ನಡವಳಿಕೆ" ಎಂದು ವ್ಯಾನ್ಸ್ ಕರೆದಿದ್ದರು. ಅವರು ಉಕ್ರೇನನ್ನು ಟೀಕಿಸುತ್ತಾ, ಮಿಲಿಟರಿಗೆ ಸೇರಿ ಸೇವೆ ಸಲ್ಲಿಸಬೇಕಾದ ಜನರ ಮೇಲೆ ಉಕ್ರೇನ್ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಜೆಲೆನ್ಸ್‌ಕಿ ನೀವು ಉಕ್ರೇನಿಗೆ ಭೇಟಿ ನೀಡಿದ್ದೀರಾ ಎಂದು ಪ್ರಶ್ನಿಸಿದಾಗ, ವ್ಯಾನ್ಸ್ ಇತರ ಜಾಗತಿಕ ನಾಯಕರ ಉಕ್ರೇನ್ ಭೇಟಿಯನ್ನೂ ಟೀಕಿಸಿ, ಅವರು ಕೇವಲ ಪ್ರೊಪಗಾಂಡಾ ಪ್ರವಾಸ ನಡೆಸುತ್ತಿದ್ದಾರೆ ಎಂದರು.

ಈ ಭೇಟಿಗೆ ಮುನ್ನ, ಉಭಯ ನಾಯಕರ ನಡುವಿನ ಉದ್ವಿಗ್ನ ಸಂಬಂಧ ಕೊಂಚ ಮಟ್ಟಿಗೆ ಸುಧಾರಿಸಬಹುದು ಎಂಬ ನಿರೀಕ್ಷೆಗಳಿದ್ದವು. ಈ ಭೇಟಿಯ ಮುನ್ನಾದಿನ ಸರ್ ಕೀರ್ ಸ್ಟಾರ್ಮರ್ ಜೊತೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಟ್ರಂಪ್, ತಾನು ಎಂದಿಗೂ ಜೆಲೆನ್ಸ್‌ಕಿ ಅವರನ್ನು ಸರ್ವಾಧಿಕಾರಿ ಎಂದು ಕರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಅದಕ್ಕೆ ವ್ಯತಿರಿಕ್ತವಾಗಿ, ಟ್ರಂಪ್ ಉಕ್ರೇನ್ ಅಧ್ಯಕ್ಷರನ್ನು ಅತ್ಯಂತ ಧೈರ್ಯಶಾಲಿ ವ್ಯಕ್ತಿ ಎಂದು ಕರೆದು, ಜೆಲೆನ್ಸ್‌ಕಿ ಕುರಿತು ತನಗೆ ಅಪಾರ ಗೌರವವಿದೆ ಎಂದಿದ್ದರು. ಉಕ್ರೇನಿನ ನೆಲದಿಂದ ಖನಿಜಗಳನ್ನು ಹೊರತೆಗೆಯುವ ಕುರಿತು ಉಭಯ ದೇಶಗಳ ನಡುವೆ ಒಪ್ಪಂದ ಇನ್ನೇನು ಏರ್ಪಡುವುದಿತ್ತು. ಈ ಮಾತುಕತೆಗೂ ಮುನ್ನ, ಕೀವ್‌ನಲ್ಲಿದ್ದ ಯುರೋಪಿಯನ್ ಅಧಿಕಾರಿಯೊಬ್ಬರು "ನಾವು ಮಾತುಕತೆಯ ಬಳಿಕ ಉಭಯ ನಾಯಕರೂ ನಗುವಿನೊಂದಿಗೆ ನಿರ್ಗಮಿಸುವುದನ್ನು ಬಯಸುತ್ತೇವೆ" ಎಂದು ಆಶಾಭಾವನೆ ವ್ಯಕ್ತಪಡಿಸಿದ್ದರು.

ವ್ಯಾನ್ಸ್ ಮತ್ತು ಜೆಲೆನ್ಸ್‌ಕಿ ನಡುವಿನ ತೀವ್ರ ಮಾತಿನ ನಡುವೆಯೂ ಟ್ರಂಪ್ ಹೆಚ್ಚು ಪ್ರತಿಕ್ರಿಯೆ ತೋರದೆ, ಮೌನವಾಗಿಯೇ ಇರಲು ಪ್ರಯತ್ನ ನಡೆಸುತ್ತಾ, ಉತ್ತಮ ಪೊಲೀಸ್ ರೀತಿಯಲ್ಲಿ ಕಂಡುಬರುತ್ತಿದ್ದರು. ಆದರೆ ಜೆ ಡಿ ವ್ಯಾನ್ಸ್ ತೀವ್ರ ವಿಚಾರಣೆ ನಡೆಸುವ ಪೊಲೀಸ್ ಪಾತ್ರ ನಿರ್ವಹಿಸುವಂತೆ ತೋರುತ್ತಿದ್ದರು. ಆದರೆ ಜೆಲೆನ್ಸ್‌ಕಿ ಮಾತ್ರ ಈ ವಿಚಾರವನ್ನು ಒಂದು ಹೆಜ್ಜೆ ಅತಿರೇಕಕ್ಕೆ ಒಯ್ಯುತ್ತಾ, "ಒಂದು ಯುದ್ಧದ ಸಂದರ್ಭದಲ್ಲಿ ಎಲ್ಲರೂ ಸಮಸ್ಯೆಗಳನ್ನು ಎದುರಿಸುತ್ತಾರೆ. ಸದ್ಯದ ಮಟ್ಟಿಗೆ ಅಮೆರಿಕಾ ಸಮುದ್ರಗಳಿಂದ ರಕ್ಷಿಸಲ್ಪಟ್ಟಿದೆ. ಆದರೆ, ಯುದ್ಧದ ಪರಿಣಾಮಗಳು ಕ್ರಮೇಣ ನಿಮ್ಮನ್ನೂ ತಲುಪುತ್ತವೆ" ಎಂದುಬಿಟ್ಟರು.

ಜೆಲೆನ್ಸ್‌ಕಿ ಆಡಿದ ಮಾತುಗಳು ಟ್ರಂಪ್ ಅವರಿಗೆ ಇಷ್ಟವಾಗಲಿಲ್ಲ. ಅವರು ತಕ್ಷಣವೇ ಮಧ್ಯ ಪ್ರವೇಶಿಸಿ, "ನಾವು ಏನನ್ನು ಎದುರಿಸಲಿದ್ದೇವೆ ಎಂಬ ಕುರಿತು ನೀವು ನಮಗೆ ಹೇಳಲು ಬರುವ ಅಗತ್ಯವಿಲ್ಲ" ಎಂದರು. ಇದಾದ ಬಳಿಕ ಮಾತುಕತೆ ಮುರಿದುಬಿದ್ದಂತೆ ಕಂಡುಬಂತು. ಟ್ರಂಪ್ ಉಕ್ರೇನ್ ಈಗ ಸಂಕಷ್ಟಕರ ಪರಿಸ್ಥಿತಿಯಲ್ಲಿದ್ದು, ಮೂರನೇ ಮಹಾಯುದ್ಧದತ್ತ ಜಗತ್ತನ್ನು ತಳ್ಳುವ ಅಪಾಯವನ್ನು ತಂದೊಡ್ಡುತ್ತಿದೆ ಎಂದರು. ಜೆಲೆನ್ಸ್‌ಕಿ ಬಳಿ "ನಿಮ್ಮ ಕ್ರಮಗಳು ನಮ್ಮ ದೇಶಕ್ಕೆ ಅತ್ಯಂತ ಅಗೌರವಕಾರಿಯಾಗಿ ಕಾಣುತ್ತಿದೆ" ಎಂದು ಎಚ್ಚರಿಸಿದರು.

ತಕ್ಷಣವೇ ಮಧ್ಯ ಪ್ರವೇಶಿಸಿದ ಜೆ ಡಿ ವ್ಯಾನ್ಸ್, ಟ್ರಂಪ್ ಅವರಿಗೆ ಕಳೆದ ವರ್ಷದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜೆಲೆನ್ಸ್‌ಕಿ ಪೆನ್ಸಿಲ್ವೇನಿಯಾದಲ್ಲಿ ಡೆಮಾಕ್ರಟಿಕ್ ಪಕ್ಷದವರೊಡನೆ ಕಾಣಿಸಿಕೊಂಡಿದ್ದರು ಎಂದು ನೆನಪಿಸಿದರು. ನಿಮಗೆ ಯಾರು ನೆರವಾಗುತ್ತಿದ್ದಾರೋ ಅವರ ಕುರಿತು ಕೃತಜ್ಞತೆ ಹೊಂದಬೇಕು ಎಂದು ವ್ಯಾನ್ಸ್ ಜೆಲೆನ್ಸ್‌ಕಿಗೆ ಹೇಳಿದರು. ಈ ವಿಚಾರ ಟ್ರಂಪ್ ಅವರಿಗೆ ಇನ್ನಷ್ಟು ಕೋಪ ತರಿಸಿತು.

ಟ್ರಂಪ್ ತಕ್ಷಣವೇ ಮಾಜಿ ಅಧ್ಯಕ್ಷ ಜೋ ಬೈಡನ್ ಪುತ್ರ, ಹಂಟರ್ ಬೈಡನ್ ಕುರಿತು ಮಾತನಾಡಲಾರಂಭಿಸಿದರು. ಬರಾಕ್ ಒಬಾಮಾ ಅವಧಿಯಲ್ಲಿ ಉಕ್ರೇನಿಗೆ ಆಯುಧಗಳನ್ನು ಕಳುಹಿಸಲು ನಿರಾಕರಿಸಿದ್ದರೂ, ಹಂಟರ್ ಬೈಡನ್ ಜ್ಯಾವೆಲಿನ್ ಕ್ಷಿಪಣಿಗಳನ್ನು ಉಕ್ರೇನಿಗೆ ಸರಬರಾಜು ಮಾಡಿದ್ದರು ಎಂದು ಟ್ರಂಪ್ ಎಲ್ಲರಿಗೂ ನೆನಪಿಸಿದರು. "ಈ ರೀತಿಯಲ್ಲಿ ವ್ಯವಹಾರ ನಡೆಸುವುದು ಬಹಳ ಕಷ್ಟಕರವಾಗಲಿದೆ" ಎಂದ ಟ್ರಂಪ್, ನೇರವಾಗಿ ಜೆಲೆನ್ಸ್‌ಕಿ ಮತ್ತು ಅವರ ದೇಶವನ್ನು ಟೀಕಿಸಲಾರಂಭಿಸಿದರು.

ರಾಜತಾಂತ್ರಿಕ ವೈಫಲ್ಯ: ಜೆಲೆನ್ಸ್‌ಕಿ ಶ್ವೇತ ಭವನ ಭೇಟಿ ವಾದ ವಿವಾದದಲ್ಲಿ ಅಂತ್ಯ!
ಟ್ರಂಪ್, ಮೋದಿ, ಹಾಗೂ ಭಾರತ-ಅಮೆರಿಕಾ ಬಾಂಧವ್ಯದ ಭವಿಷ್ಯ (ಜಾಗತಿಕ ಜಗಲಿ)

ಫೆಬ್ರವರಿ 24ರಂದು ಫ್ರಾನ್ಸ್ ಅಧ್ಯಕ್ಷ ಇಮ್ಮಾನುವೆಲ್ ಮಾಕ್ರೋನ್ ವಾಷಿಂಗ್ಟನ್‌ಗೆ ಭೇಟಿ ನೀಡಿದರೆ, ಫೆಬ್ರವರಿ 27ರಂದು ಬ್ರಿಟನ್ ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ಭೇಟಿ ನೀಡಿದ್ದರು. ಇವರಿಬ್ಬರ ಅಮೆರಿಕಾ ಭೇಟಿಯನ್ನು ಯುರೋಪ್ ಯಶಸ್ವಿ ಭೇಟಿ ಎಂದು ಪರಿಗಣಿಸಿತ್ತು. ಅವರಿಬ್ಬರೂ ಟ್ರಂಪ್ ಅವರೊಡನೆ ಭದ್ರತಾ ಭರವಸೆಗಳ ಕುರಿತು ಸಮಾಲೋಚನೆ ನಡೆಸಿದ್ದು, ಎರಡು ಭೇಟಿಗಳೂ ಧನಾತ್ಮಕವಾಗಿ ಮುಕ್ತಾಯಗೊಂಡಿದ್ದವು.

ಆದರೆ, ಫೆಬ್ರವರಿ 28ರಂದು ನಡೆದ ತೀವ್ರ ಮಾತುಕತೆಗಳು ಯುರೋಪಿಯನ್ ರಾಜಧಾನಿಗಳಲ್ಲಿ ಗಂಭೀರ ಆತಂಕ ಮೂಡಿಸಿದೆ. ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ "ಪ್ರಿಯ ಜೆಲೆನ್ಸ್‌ಕಿ, ಪ್ರಿಯ ಉಕ್ರೇನಿನ ಸ್ನೇಹಿತರೇ, ನೀವು ಏಕಾಂಗಿಯಲ್ಲ" ಎಂದು ಹೇಳಿಕೆ ನೀಡಿದರು. ಬಹುತೇಕ ಎಲ್ಲ ಮುಖ್ಯ ಯುರೋಪಿಯನ್ ಮುಖಂಡರೂ ಇದೇ ರೀತಿ ಉಕ್ರೇನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಯುರೋಪಿಯನ್ ನಾಯಕರು ಮಾರ್ಚ್ 2ರಂದು ಲಂಡನ್ನಿನಲ್ಲಿ ಸಭೆ ಸೇರಲಿದ್ದು, ಕದನ ವಿರಾಮದ ಜಾರಿಯ ಬಳಿಕ ಉಕ್ರೇನಿಗೆ ಸೇನೆಯನ್ನು ರವಾನಿಸುವ ಕುರಿತು, ಮತ್ತು ಹೆಚ್ಚುತ್ತಿರುವ ರಕ್ಷಣಾ ವೆಚ್ಚಕ್ಕೆ ಹಣವನ್ನು ಒದಗಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಗಳು ಈಗ ಇನ್ನಷ್ಟು ತುರ್ತಿನ ವಿಚಾರವಾಗಿವೆ. ಉಕ್ರೇನಿನ ಯುದ್ಧದ ವಿಚಾರದಲ್ಲಿ ಅಮೆರಿಕಾ ಇಂದಿಗೂ ಅತ್ಯಂತ ಮುಖ್ಯವಾಗಿರುವುದಂತೂ ನಿಜ.

ಅಮೆರಿಕಾದ 40% ನೆರವಿಗೆ ಹೋಲಿಸಿದರೆ, ಯುರೋಪ್ ಇಂದು ಉಕ್ರೇನಿಗೆ 60% ನೆರವು ನೀಡುತ್ತಿದೆ. ಆದರೆ, ವಾಯು ರಕ್ಷಣಾ ಇಂಟರ್ಸೆಪ್ಟರ್‌ಗಳು, ಗುಪ್ತಚರ ಮಾಹಿತಿ, ಮತ್ತು ಅಮೆರಿಕನ್ ಆಯುಧಗಳ ಬಿಡಿಭಾಗಗಳ ಪೂರೈಕೆಗಾಗಿ ಉಕ್ರೇನ್ ಅಮೆರಿಕಾದ ಮೇಲೆ ಅವಲಂಬಿತವಾಗಿದೆ.

ಇದೇ ವೇಳೆ, ಜೆಲೆನ್ಸ್‌ಕಿ ಭೇಟಿಯ ಬಳಿಕ ಮಾಸ್ಕೋದಲ್ಲಿ ಬಹಿರಂಗ ಸಂಭ್ರಮಾಚರಣೆ ನಡೆದಿದೆ. ರಷ್ಯಾದ ಭದ್ರತಾ ಸಮಿತಿಯ ಉಪಾಧ್ಯಕ್ಷರಾದ ಡಿಮಿಟ್ರಿ ಮೆಡ್ವೆಡೆವ್ ಅವರು ಈಗಿನ ಪರಿಸ್ಥಿತಿಯನ್ನು ಹಾಸ್ಯಗೈದಿದ್ದು, ಓವಲ್ ಆಫೀಸಿನಲ್ಲಿ ಕೊನೆಗೂ ಜೆಲೆನ್ಸ್‌ಕಿಗೆ ಅವರ ಸ್ಥಾನವನ್ನು ತೋರಿಸಲಾಗಿದೆ ಎಂದಿದ್ದಾರೆ. ಕೀವ್ ಸರ್ಕಾರ ಮೂರನೇ ಮಹಾಯುದ್ಧಕ್ಕೆ ಹಾದಿ ಮಾಡಿಕೊಡುವಂತಹ ಅಪಾಯಗಳನ್ನು ತಂದಿಡುತ್ತಿದೆ ಎಂದು ಅವರೂ ಆರೋಪಿಸಿದ್ದಾರೆ.

ಈ ಭೇಟಿಯ ನಂತರ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಟ್ರಂಪ್, ಜನರು ಭಾವನಾತ್ಮಕವಾದಾಗ ಏನೇನು ಮಾತನಾಡುತ್ತಾರೆ ಎನ್ನುವುದು ನಿಜಕ್ಕೂ ಆಶ್ಚರ್ಯಕರ ವಿಚಾರ ಎಂದಿದ್ದಾರೆ. ಅವರು ಜೆಲೆನ್ಸ್‌ಕಿ ಇನ್ನೂ ಶಾಂತಿಗೆ ಸಿದ್ಧವಾಗಿಲ್ಲ ಎಂದಿದ್ದು, ಅವರು ಅಮೆರಿಕಾಗೆ ಅಗೌರವ ತೋರಿದ್ದಾರೆ ಎಂದು ಟೀಕಿಸಿದ್ದಾರೆ. "ಜೆಲೆನ್ಸ್‌ಕಿ ಶಾಂತಿಗೆ ಸಿದ್ಧರಾದಾಗ ಅವರು ಅಮೆರಿಕಾಗೆ ಮತ್ತೊಮ್ಮೆ ಮರಳಬಹುದು" ಎಂದು ಟ್ರಂಪ್ ಹೇಳಿದ್ದಾರೆ. ಈ ಮಾತುಕತೆಯ ಬಳಿಕ ನಡೆಸಲು ಉದ್ದೇಶಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಲಾಯಿತು. ಜೆಲೆನ್ಸ್‌ಕಿ ವಾಷಿಂಗ್ಟನ್ ಭೇಟಿಯ ಹಿಂದಿನ ಮುಖ್ಯ ಉದ್ದೇಶವಾಗಿದ್ದ ಖನಿಜಗಳ ಒಪ್ಪಂದಕ್ಕೆ ಸಹಿ ಹಾಕದೆಯೇ ಜೆಲೆನ್ಸ್‌ಕಿ ಶ್ವೇತ ಭವನದಿಂದ ತೆರಳಿದ್ದಾರೆ.

ಸದ್ಯದ ಮಟ್ಟಿಗಂತೂ ಉಕ್ರೇನಿನ ಭವಿಷ್ಯ ಅನಿಶ್ಚಿತವಾಗಿದ್ದು, ಅಪಾಯಗಳಿಂದ ತುಂಬಿರುವಂತೆ ಕಾಣುತ್ತಿದೆ. ಜೆಲೆನ್ಸ್‌ಕಿ ಮೇಲೆ ರಾಜೀನಾಮೆ ನೀಡುವಂತೆ, ಅಥವಾ ಚುನಾವಣೆ ನಡೆಸುವಂತೆ, ಅಥವಾ ರಾಜೀನಾಮೆ ನೀಡಿ, ಚುನಾವಣೆ ನಡೆಸುವಂತೆ ದೇಶದ ಒಳಗೆ ಮತ್ತು ಹೊರಗಿನಿಂದ ಒತ್ತಡ ಎದುರಾಗುವ ಸಾಧ್ಯತೆಗಳಿವೆ. ಆದರೆ, ಯುದ್ಧದ ಸಂದರ್ಭದಲ್ಲಿ ನಾಗರಿಕ ಆಡಳಿತದ ಮೇಲೆ ಇರುವ ಮಿಲಿಟರಿ ಕಾನೂನನ್ನು ಹಿಂಪಡೆಯದೆ ಈ ಕ್ರಮಗಳನ್ನು ಕೈಗೊಂಡರೆ ದೇಶಾದ್ಯಂತ ಕೋಲಾಹಲ ಉಂಟಾಗುವ ಸಾಧ್ಯತೆಗಳಿವೆ. ಇದನ್ನು ಉಕ್ರೇನ್ ಹೇಗೆ ನಿಭಾಯಿಸಲಿದೆ ಎನ್ನುವುದೂ ಸ್ಪಷ್ಟವಾಗಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಕ್ರೇನಿನ ವಿರೋಧ ಪಕ್ಷದ ಸಂಸದರೊಬ್ಬರು, "ಡೊನಾಲ್ಡ್ ಟ್ರಂಪ್ ಅವರೊಡನೆ ಈ ರೀತಿ ವಾದ ಮಾಡುವುದರಿಂದ ಜೆಲೆನ್ಸ್‌ಕಿಗೆ ಯಾವುದೇ ಪ್ರಯೋಜನವಾಗದು. ಈಗಂತೂ ಟ್ರಂಪ್ ಜೆಲೆನ್ಸ್‌ಕಿ ಅವರನ್ನು ಕೆಳಗಿಳಿಸಲು ಪ್ರಯತ್ನ ನಡೆಸುವ ಸಾಧ್ಯತೆಗಳಿವೆ. ಜೆಲೆನ್ಸ್‌ಕಿ ಕ್ರಮಗಳಿಗೆ ಸಮಸ್ತ ಉಕ್ರೇನ್ ಬೆಲೆ ತೆರಬೇಕಾಗಿ ಬರಬಹುದೇನೋ ಎನ್ನುವುದು ನಮ್ಮ ಆತಂಕವಾಗಿದೆ" ಎಂದಿದ್ದಾರೆ.

ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com