ಸುಂಕ ಸಮರದಲ್ಲಿ ಸೊರಗಲಿದೆ ಜಾಗತಿಕ ವಿತ್ತ ಜಗತ್ತು! (ಹಣಕ್ಲಾಸು)

ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಬಹಳಷ್ಟು ಅವಘಡಗಳಿಗೆ ಕಾರಣವಾಗಿದೆ. ಈಗಾಗಲೇ ಭಾರತೀಯ ಷೇರು ಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣಲು ಟ್ರಂಪ್ ಮುಂದಿನ ನಡೆಯನ್ನು ಕುರಿತು ಇರುವ ಅಸ್ಥಿರತೆ ಕೂಡ ಒಂದು ಪ್ರಮುಖ ಕಾರಣವಾಗಿದೆ. (ಹಣಕ್ಲಾಸು-452)
Trade war- Donald Trump
ಟ್ರೇಡ್ ವಾರ್ -ಡೊನಾಲ್ಡ್ ಟ್ರಂಪ್online desk
Updated on

ನೀವು ಡೊನಾಲ್ಡ್ ಟ್ರಂಪ್ ಅವರನ್ನು ಗಮನಿಸಿ ನೋಡಿ. ಅವರು ಕಳೆದ ಬಾರಿ ಅಧ್ಯಕ್ಷರಾಗಿದ್ದಾಗ ಇದ್ದ ದಾಢಸಿತನಕ್ಕಿಂತ ನೂರು ಪಟ್ಟು ಅಗ್ರೆಸಿವ್ ಆಗಿದ್ದಾರೆ. ಅವರು ಮಾಡುತ್ತಿರುವುದು ಅವರ ದೇಶಕ್ಕೆ ಕೂಡ ಪೂರ್ಣ ಪ್ರಮಾಣದಲ್ಲಿ ಒಳಿತನ್ನು ಮಾಡುವುದಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದಾಗ ಮೊದಲ ಬಾರಿ ಯಾವ ಅಗ್ರೆಶನ್ ತೋರಿಸಿದ್ದರು ಅದಕ್ಕಿಂತ ಹೆಚ್ಚಿನ ಮಟ್ಟದ ಅಗ್ರೆಶನ್ ಟ್ರಂಪ್ ತೋರುತ್ತಿದ್ದಾರೆ. ಭಾರತ ದೇಶದಲ್ಲಿ ಆದ ವಿದ್ಯಮಾನಗಳು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಪರಿಣಾಮವನ್ನು ಬೀರಲಿಲ್ಲ.

ಏಕೆಂದರೆ ಭಾರತ ಆಗಿನ್ನೂ ಇಂದಿನ ಮಟ್ಟದ ಶಕ್ತಿಯನ್ನು ಜಾಗತಿಕವಾಗಿ ಹೊಂದಿರಲಿಲ್ಲ. ಅದೇನೇ ಇರಲಿ ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಬಹಳಷ್ಟು ಅವಘಡಗಳಿಗೆ ಕಾರಣವಾಗಿದೆ. ಈಗಾಗಲೇ ಭಾರತೀಯ ಷೇರು ಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣಲು ಟ್ರಂಪ್ ಮುಂದಿನ ನಡೆಯನ್ನು ಕುರಿತು ಇರುವ ಅಸ್ಥಿರತೆ ಕೂಡ ಒಂದು ಪ್ರಮುಖ ಕಾರಣವಾಗಿದೆ.

ಇದೆ ವರ್ಷ ಏಪ್ರಿಲ್ 2 ರಿಂದ ಜಾರಿಗೆ ಬರುವಂತೆ ಟ್ರಂಪ್ ಬಹಳಷ್ಟು ದೇಶಗಳ ಮೇಲೆ ಸುಂಕವನ್ನು ಹೆಚ್ಚಿಸಿದ್ದಾರೆ. ಇದು ಸುಂಕ ಸಮರವನ್ನು ಸಾರಿದಂತಾಗಿದೆ. ನಿಮಗೆಲ್ಲಾ ನೆನಪಿರಲಿ , ಮೋದಿಯವರು ಅಮೇರಿಕಾ ಪ್ರವಾಸ ಹೋಗಿದ್ದ ಸಮಯದಲ್ಲೇ ಟ್ರಂಪ್ ಅವರು ' ಅಮೇರಿಕಾ , ಭಾರತದ ಮೇಲೆ ಸುಂಕ ವಿಧಿಸುವುದು ನೂರು ಪ್ರತಿಶತ ಖಚಿತ. ಅದರ ಬಗ್ಗೆ ನನ್ನ ನಿಲುವನ್ನು ಬದಲಿಸಲು , ಮಾತುಕತೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ' ಎನ್ನುವ ಮಾತನ್ನು ಹೇಳಿದ್ದರು. ಈ ನಿಟ್ಟಿನಲ್ಲಿ ನೋಡಿದಾಗ ಟ್ರಂಪ್ ಯಾರೊಂದಿಗೂ ಮಾತುಕತೆಗೆ ಕೂರುವ ಮನಸ್ಥಿತಿಯನ್ನು ಹೊಂದಿಲ್ಲ ಎನ್ನುವುದು ಸ್ಪಷ್ಟ. ಅದಕ್ಕೆ ಪೂರಕವಾಗಿ , ಏಪ್ರಿಲ್ 2 ರಿಂದ ಜಾರಿಗೆ ಬರುವಂತೆ ಹೊಸ ಸುಂಕವನ್ನು ಅಮೇರಿಕಾ ಹೊರಡಿಸಿದೆ.

ಅಧ್ಯಕ್ಷರಾದ ಬಳಿಕ ಸಂಸತ್ ಉದ್ದೇಶಿಸಿ ಮೊದಲ ಬಾರಿಗೆ ಮಾತನಾಡಿದ ಟ್ರಂಪ್ , ಭಾರತವನ್ನು ಟಾರ್ಗೆಟ್ ಮಾಡಿ ನಮ್ಮ ಆಟೋಮೊಬೈಲ್ ಬಿಡಿಭಾಗಗಳ ಉತ್ಪನಗಳ ಆಮದು ಮೇಲೆ ಭಾರತ ನೂರು ಪ್ರತಿಶತ ಸುಂಕವನ್ನು ವಿಧಿಸುತ್ತಿದೆ. ನಾವೇಕೆ ಸುಮ್ಮನೆ ಕೂರಬೇಕು. ಯಾವು ಎಷ್ಟು ಸುಂಕ ಹಾಕುತ್ತಾರೆ, ಅಷ್ಟೇ ಸುಂಕವನ್ನು ಅವರ ದೇಶದ ರಫ್ತು ಮೇಲೆ ನಾವೂ ವಿಧಿಸುತ್ತೇವೆ ಎನ್ನುವ ಮಾತನ್ನು ಆಡಿದ್ದಾರೆ. ಯೂರೋಪಿಯನ್ ಒಕ್ಕೊಟ , ಚೀನಾ , ಮೆಕ್ಸಿಕೋ , ಕೆನಡಾ , ಬ್ರೆಜಿಲ್ ದೇಶಗಳು ಸಹ ನಾವು ಯಾವ ಸುಂಕವನ್ನು ವಿಧಿಸುತ್ತ ಬಂದಿದ್ದೇವೆ , ಅದಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸುತ್ತ ಬಂದಿವೆ. ಇದು ಸರ್ವತಾ ನಮಗೆ ಒಪ್ಪಿತವಲ್ಲ. ನಾವು ಹಾಕುವ ಸುಂಕದ ದುಪ್ಪಟ್ಟು ಚೀನಾ ಹಾಕುತ್ತಿದೆ. ಸೌತ್ ಕೊರಿಯಾ ಉತ್ಪನ್ನಗಳ ಮೇಲೆ ನಾವು ಹಾಕುವ ತೆರಿಗೆಯ ನಾಲ್ಕು ಪಟ್ಟು ಅವರು ನಮ್ಮ ಉತ್ಪನ್ನಗಳ ಮೇಲೆ ಹಾಕುತ್ತಿದ್ದಾರೆ. ನೀವೇ ನೋಡಿ , ಸೌತ್ ಕೊರಿಯಾ ದೇಶಕ್ಕೆ ಬೇಕಾಗಿರುವ ಮಿಲಿಟರಿ ಸಹಾಯವನ್ನು ನಾವು ಅನಾದಿ ಕಾಲದಿಂದ ಮಾಡಿಕೊಂಡು ಬಂದು ಅವರನ್ನು ಮಿತ್ರ ದೇಶದಂತೆ ಕಂಡಿದ್ದೇವೆ. ಅವರು ನಮ್ಮ ಪದಾರ್ಥದ ಮೇಲೆ ನಾವು ಹಾಕುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ತೆರಿಗೆ ವಿಧಿಸಿ ನಮ್ಮನ್ನು ಶತ್ರುವಿನಂತೆ ನಡೆಸಿಕೊಳ್ಳುತ್ತಾರೆ. ಇದು ನಮಗೆ ಸಮ್ಮತವಲ್ಲ. ಎಲ್ಲರ ಮೇಲೆ ಸುಂಕ ಹೆಚ್ಚಿಸುವ ಟೈಮ್ ನಮ್ಮದು ಎಂದು ಉಗ್ರವಾಗಿ ಹೇಳಿಕೆಯನ್ನು ನೀಡಿದ್ದಾರೆ.

ಇದರ ಹಿಂದಿನ ಲೆಕ್ಕಾಚಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ನಾವು ಒಂದು ಸಣ್ಣ ಉದಾಹರಣೆಯನ್ನು ನೋಡೋಣ . ಅಮೇರಿಕಾ ದೇಶದಿಂದ ಆಟೋಮೊಬೈಲ್ ಬಿಡಿ ಭಾಗಗಳು ಭಾರತಕ್ಕೆ ಬರುತ್ತದೆ ಎಂದುಕೊಳ್ಳೋಣ. ಅದರ ಮಾರಾಟ ಬೆಲೆ 100 ರೂಪಾಯಿ ಎಂದುಕೊಳ್ಳೋಣ , ಭಾರತ ಇದರ ಮೇಲೆ 100 ರೂಪಾಯಿ ತೆರಿಗೆ ವಿಧಿಸುತ್ತದೆ ಎಂದುಕೊಳ್ಳೋಣ. ಆಗ ಪದಾರ್ಥದ ಬೆಲೆ ಭಾರತದಲ್ಲಿ 200 ರೂಪಾಯಿ ಆಯ್ತು. ಇಷ್ಟೊಂದು ಬೆಲೆಯನ್ನು ಕೊಟ್ಟು ಕೊಳ್ಳಲು ಭಾರತೀಯರು ಇಷ್ಟಪಡುವುದಿಲ್ಲ. ಆಗ ಅಮೇರಿಕಾ ಪದಾರ್ಥಕ್ಕೆ ಬೇಡಿಕೆ ಕಡಿಮೆಯಾಗುತ್ತದೆ. ಇದು ಅಮೆರಿಕಾದ ದೇಶದ ಉತ್ಪಾದನಾ ಘಟಕಗಳು ಬೇಡಿಕೆ ಇಲ್ಲದ ಕಾರಣ ಕೆಲಸ ಕಡಿತಕ್ಕೆ ಮುಂದಾಗುತ್ತವೆ. ಇದರ ಕೊನೆಯ ಫಲಿತಾಂಶ , ಉತ್ಪಾದನಾ ಘಟಕ ಮುಚ್ಚಿ ಹೋಗುವ ಸಾಧ್ಯತೆ ಕೂಡ ಇರುತ್ತದೆ.

Trade war- Donald Trump
ಶಿಕ್ಷಣ ವ್ಯವಸ್ಥೆ ಬದಲಾಗದೆ ಶಿಕ್ಷಣಕ್ಕೂ, ಶಿಕ್ಷಣ ಸಂಸ್ಥೆಗೂ ಭವಿಷ್ಯವಿಲ್ಲ! (ಹಣಕ್ಲಾಸು)

ಇದೆ ರೀತಿ ಚೀನಾ ಕೂಡ ಮಾಡುತ್ತಿದೆ. ಚೀನಾದಿಂದ ಅಮೇರಿಕಾ ದೇಶಕ್ಕೆ ಹೋದ ಪದಾರ್ಥದ ಮೇಲೆ ಅವರು 15 ಪ್ರತಿಶತ ಸುಂಕ ವಿಧಿಸಿದರೆ , ಅಮೇರಿಕಾ ದೇಶದಿಂದ ಚೀನಾಕ್ಕೆ ಬರುವ ಪದಾರ್ಥದ ಮೇಲೆ ಇವರು 30 ಪ್ರತಿಶತ ಸುಂಕ ವಿಧಿಸುತ್ತಿದ್ದಾರೆ. ಅಂದರೆ ಅಮೇರಿಕಾ ಎಷ್ಟು ಸುಂಕ ವಿಧಿಸುತ್ತದೆ ಅದರ ದುಪ್ಪಟ್ಟು. ಸೌತ್ ಕೊರಿಯಾ ಅಮೇರಿಕಾ ಎಷ್ಟು ಹಾಕುತ್ತದೆ ಅದರ ನಾಲ್ಕು ಪಟ್ಟು ಸುಂಕ ವಿಧಿಸುತ್ತಿದೆ.

ಹೀಗೆ ಮೆಕ್ಸಿಕೋ, ಕೆನಡಾ, ಯೂರೋಪಿಯನ್ ಒಕ್ಕೊಟ ಎಲ್ಲೆಡೆ ಇದೆ ಕಥೆ. ಒಟ್ಟಾರೆ ಸಾರಾಂಶ ಏನೆಂದರೆ, ಎಲ್ಲರಿಗೂ ಅಮೇರಿಕಾ ಮಾರುಕಟ್ಟೆಗೆ ತಮ್ಮ ಪದಾರ್ಥವನ್ನು ಮಾರಬೇಕು. ಅದೇ ಅಮೇರಿಕಾ ದೇಶದ ಪದಾರ್ಥ ಅವರ ದೇಶಕ್ಕೆ ಕೊಳ್ಳುವಾಗ ಅದರ ತೆರಿಗೆ ಹೆಚ್ಚಿಸಿ ತಮ್ಮ ಜನ ಅದನ್ನು ಹೆಚ್ಚು ಕೊಳ್ಳದಂತೆ ನೋಡಿಕೊಳ್ಳುತ್ತಾರೆ. ಇದರಿಂದ ಎರಡು ಅಂಶಗಳನ್ನು ನಾವು ಅರ್ಥ ಮಾಡಿಕೊಳ್ಳಬಹುದು

  1. ನಮ್ಮ ಪದಾರ್ಥಕ್ಕೆ ಅಮೇರಿಕಾ ಮಾರುಕಟ್ಟೆ ಬೇಕು. ಆಗ ಗ್ಲೋಬಲೈಸಷನ್ ಒಳ್ಳೆಯದು.

  2. ಅವರ ಪದಾರ್ಥ ಕೊಳ್ಳುವಾಗ ಗ್ಲೋಬಲೈಸಷನ್ ಒಳ್ಳೆಯದಲ್ಲ , ಸ್ವದೇಶಿ ಪದಾರ್ಥಕ್ಕೆ ಹೆಚ್ಚು ಒತ್ತು ಕೊಡಬೇಕು ಎನ್ನುವ ವರಾತ ಶುರುವಾಗುತ್ತದೆ. ಹೀಗಾಗಿ ಪ್ರತಿಯೊಂದು ದೇಶಗಳೂ ಡೊಮೆಸ್ಟಿಕ್ ಖರೀದಿ ಕೂಡ ಶಕ್ತಿಶಾಲಿಯಾಗುತ್ತದೆ ಮತ್ತು ಅಮೇರಿಕಾ ದೇಶಕ್ಕೆ ಮಾರಿ ಅಲ್ಲಿ ಕೂಡ ಫಾರಿನ್ ರಿಸರ್ವ್ ಹೆಚ್ಚಿಸಿಕೊಳ್ಳ ಬಹುದು.

ಇವುಗಳಿಂದ ಅಮೇರಿಕಾ ಎಕಾನಮಿ ಕುಸಿಯುತ್ತ ಹೋಯ್ತು. ಅಲ್ಲಿ ಉತ್ಪಾದನೆ ಮಾಡುವುದು ನಿಲ್ಲಿಸುತ್ತಾ ಹೋದರು. ಚೀನಾ ಮತ್ತಿತರ ದೇಶಗಳಿಂದ ಎಲ್ಲವನ್ನೂ ಆಮದು ಮಾಡಿಕೊಳ್ಳುತ್ತ ಹೋದರು. ಇದು ಟ್ರೇಡ್ ಡೆಫಿಸಿಟ್ ಗೆ ಕಾರಣವಾಯ್ತು. ಅಮೇರಿಕಾ ದೇಶದ ಸಾಲದ ಹೊರೆ ಆ ದೇಶದ ವಾರ್ಷಿಕ ಜಿಡಿಪಿಯನ್ನು ಕೂಡ ಮೀರಿ ಬೆಳೆದು ನಿಂತಿದೆ ಎನ್ನುವುದು ಅಮೇರಿಕಾ ಆರ್ಥಿಕತೆ ಅದೆಷ್ಟು ಸಂಕಷ್ಟದ್ದಲ್ಲಿದೆ ಎನ್ನುವುದು ತಿಳಿಯುತ್ತದೆ.

ಈ ನಿಟ್ಟಿನಲ್ಲಿ ನೋಡಿದಾಗ ಟ್ರಂಪ್ ತೆಗೆದುಕೊಂಡ ನಿರ್ಧಾರ ಸರಿಯಿದೆ ಎನ್ನಿಸುತ್ತದೆ. ಆದರೆ ಜಗತ್ತಿನಲ್ಲಿ ಇಂದು ಡಿಕ್ಟ್ಟೆಟರ್ ಶಿಪ್ ನಡೆಯುವುದಿಲ್ಲ . ಎಲ್ಲರನ್ನು ಕಾರಿದ್ದು ಕುಳಿತು ಮಾತನಾಡುವ ಬದಲು ಈ ರೀತಿ ಒಮ್ಮುಖ ಘೋಷಣೆ ಮಾಡಿರುವುದು , ಜಾಗತಿಕ ವಿತ್ತ ಜಗತ್ತು ತಲ್ಲಣ ಗೊಳ್ಳಲು ಕಾರಣವಾಗಿದೆ. ಚೀನಾ ಒಂದೆಜ್ಜೆ ಮುಂದೆ ಹೋಗಿ ಅಮೇರಿಕಾ ದೇಶದ ಜೊತೆಗೆ ಟ್ರೇಡ್ , ತೆರಿಗೆ ಮಾತ್ರವಲ್ಲ ಯಾವ ರೀತಿಯ ಯುದ್ದಕ್ಕೂ ಸಿದ್ದ ಎಂದಿದೆ. ಭಾರತ ಮಾತ್ರ ಸದ್ಯಕ್ಕೆ ಯಾವ ನಿಲುವನ್ನೂ ಪ್ರಕಟಿಸದೆ ಸುಮ್ಮನಿದೆ.

ಹೋಗುವ ಮುನ್ನ: ಇವತ್ತು ಜಗತ್ತಿನ ಯಾವ ದೇಶದ ಆರ್ಥಿಕತೆಯೂ ಬಲಿಷ್ಠವಾಗಿಲ್ಲ. ಇಂತಹ ಸಮಯದಲ್ಲಿ ಈ ರೀತಿಯ ಹೊಡೆದಾಟ ಸರಿಯಲ್ಲ. ಚೀನಾ , ಭಾರತದಂತಹ ದೇಶಗಳು ಕೂಡ ನಾವು ಸಿದ್ದ ಎಂದು ನಿಂತರೆ , ಆಗ ಖಂಡಿತ ಚೀನಾ ಮತ್ತು ಭಾರತದ ಒಂದು ಕಣ್ಣು ಹೋಗುತ್ತದೆ. ಆದರೆ ಅಮೇರಿಕಾ ತನ್ನ ಎರಡೂ ಕಣ್ಣುಗಳನ್ನೂ ಕಳೆದುಕೊಳ್ಳುತ್ತದೆ. ಇವತ್ತು ನಾವು ಒಬ್ಬರ ಮೇಲೊಬ್ಬರು ಬಹಳ ಅವಲಂಬಿತರಾಗಿದ್ದೇವೆ. ಹೀಗಾಗಿ ಒಮ್ಮುಖ ನಿರ್ಧಾರಗಳು , ಏಕಾಏಕಿ ನಿರ್ಧಾರಗಳು ಒಳ್ಳೆಯದಲ್ಲ. ಆದರೆ ಇದನ್ನು ಟ್ರಂಪ್ ಗೆ ಹೇಳುವರಾರು ? ಹೇಳಿದರೂ ಆತ ಸದ್ಯಕ್ಕಂತೂ ಕೇಳುವ ಸ್ಥಿತಯಲಿಲ್ಲ. ಹೀಗಾಗಿ ಜಾಗತಿಕ ವಿತ್ತ ಜಗತ್ತು ಇನ್ನಷ್ಟು ಸಂಕಷ್ಟಗಳನ್ನು ಎದುರಿಸಲಿದೆ. ಅಂದಹಾಗೆ , ಈ ಕೆಚ್ಚಾಟದಲ್ಲಿ ಭಾರತಕ್ಕೆ ಆಗುವ ಪೆಟ್ಟು ಬೇರೆ ದೇಶಗಳಿಗಿಂತ ಸ್ವಲ್ಪ ಕಡಿಮೆ ಇರಲಿದೆ. ಆದರೆ ಪೆಟ್ಟು ಬೀಳುವುದಂತೂ ಗ್ಯಾರಂಟಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com