ಸಮುದ್ರದಲ್ಲಿ ಚದುರಂಗ: ಹಿಂದೂ ಮಹಾಸಾಗರ ಆಯಿತೇ ಭಾರತ-ಚೀನಾ ಸ್ಪರ್ಧಾ ರಂಗ?

ಭಾರತೀಯ ನೌಕಾ ಸೇನೆ ದ್ವೀಪಗಳೂ ಸೇರಿದಂತೆ, 7,500 ಕಿಲೋಮೀಟರ್‌ಗೂ ಹೆಚ್ಚಿನ ಕರಾವಳಿ ಪ್ರದೇಶಗಳನ್ನು ಕಾಯುತ್ತಾ, 2 ಮಿಲಿಯನ್ ಚದರ ಕಿಲೋಮೀಟರ್‌ಗೂ ಹೆಚ್ಚಿನ ವಿಶೇಷ ಆರ್ಥಿಕ ವಲಯವನ್ನು (SEZ) ಕಾಪಾಡಬೇಕಿದೆ.
ಸಮುದ್ರದಲ್ಲಿ ಚದುರಂಗ: ಹಿಂದೂ ಮಹಾಸಾಗರ ಆಯಿತೇ ಭಾರತ-ಚೀನಾ ಸ್ಪರ್ಧಾ ರಂಗ?
Updated on

ಈ ವರ್ಷದ ಜನವರಿ ತಿಂಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಮೂರು ಸ್ವದೇಶಿ ನಿರ್ಮಾಣದ, ಶಕ್ತಿಶಾಲಿ ಯುದ್ಧ ನೌಕೆಗಳನ್ನು ಭಾರತೀಯ ನೌಕಾ ಸೇನೆಗ ಅಧಿಕೃತವಾಗಿ ಸೇರ್ಪಡೆಗೊಳಿಸಿದರು. ಈ ನೌಕೆಗಳಲ್ಲಿ ಒಂದು ಡೆಸ್ಟ್ರಾಯರ್, ಒಂದು ಫ್ರಿಗೇಟ್ ಮತ್ತು ಒಂದು ಸಬ್‌ಮರೀನ್‌ಗಳು ಸೇರಿದ್ದು, ಭಾರತದ ನೌಕಾ ಶಕ್ತಿಗೆ ಭಾರೀ ಉತ್ತೇಜನ ನೀಡಿದೆ. ಅದಾದ ಕೆಲ ಸಮಯದಲ್ಲಿ, ನೌಕಾಪಡೆಯ ಪಶ್ಚಿಮ ವಿಭಾಗ ಭಾರತಕ್ಕಾಗಿ ರಷ್ಯಾದಲ್ಲಿ ನಿರ್ಮಿಸಿದ ಕ್ರಿವಾಕ್ 3 ಮಾದರಿಯ ಇನ್ನೊಂದು ಫ್ರಿಗೇಟ್ ಅನ್ನು ಸ್ವಾಗತಿಸಿತು. ಕೇವಲ ಒಂದು ತಿಂಗಳ ಅವಧಿಯಲ್ಲಿ ನಾಲ್ಕನೇ ಯುದ್ಧ ನೌಕೆಯನ್ನು ಸೇರ್ಪಡೆಗೊಳಿಸಿರುವುದು ಭಾರತದ ನೌಕಾ ಸೇನೆಯನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಭಾರತೀಯ ನೌಕಾ ಸೇನೆಯ ಬಲವರ್ಧನೆ ಮಾಡುವಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಇಷ್ಟು ಯುದ್ಧ ನೌಕೆಗಳನ್ನು ಸೇರ್ಪಡೆಗೊಳಿಸುವುದು ಅಸಾಧಾರಣ ಕಾರ್ಯವೇನೋ ಹೌದು. ಆದರೆ, ಭಾರತ ತನ್ನ ಗುರಿಯಾದ 200 ಯುದ್ಧ ನೌಕೆಗಳ ಬಳಗವನ್ನು ಹೊಂದಲು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಭಾರತೀಯ ಸೇನಾಧಿಕಾರಿ ಅಜಯ್ ಶುಕ್ಲಾ ಅವರು ಭಾರತದ ಸುತ್ತಲೂ ನೆರೆಹೊರೆಗಿಂತಲೂ ಅಪಾಯವೇ ಹೆಚ್ಚಾಗಿದ್ದು, ಇಂತಹ ಸನ್ನಿವೇಶದಲ್ಲಿ ದೇಶವನ್ನು ಕಾಯಲು 200 ಯುದ್ಧ ನೌಕೆಗಳ ಪಡೆ ಕನಿಷ್ಠ ಅಗತ್ಯವಾಗಿದೆ ಎಂದಿದ್ದಾರೆ.

ಡೆಸ್ಟ್ರಾಯರ್‌ಗಳು ದೊಡ್ಡ ಯುದ್ಧ ನೌಕೆಗಳಾಗಿದ್ದು, ಸಾಮಾನ್ಯವಾಗಿ 150-160 ಮೀಟರ್ ಉದ್ದ, 18-20 ಮೀಟರ್ ಅಗಲವಿರುತ್ತವೆ. ಇವುಗಳನ್ನು ವೇಗದ ಯುದ್ಧ ಮತ್ತು ವಾಯು ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗುತ್ತದೆ. ಫ್ರಿಗೇಟ್‌ಗಳು ಸಣ್ಣ ನೌಕೆಗಳಾಗಿದ್ದು, 130-150 ಮೀಟರ್ ಉದ್ದ, 14-16 ಮೀಟರ್ ಅಗಲವಿರುತ್ತವೆ. ಇವುಗಳನ್ನು ಸಾಮಾನ್ಯವಾಗಿ ಬೆಂಗಾವಲು ಕಾರ್ಯಾಚರಣೆಗಳಿಗೆ, ಆ್ಯಂಟಿ ಸಬ್‌ಮರೀನ್ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. ಡೆಸ್ಟ್ರಾಯರ್‌ಗಳು ಹೆಚ್ಚಿನ ಆಯುಧ ಸಾಮರ್ಥ್ಯ ಹೊಂದಿದ್ದರೆ, ಫ್ರಿಗೇಟ್‌ಗಳು ವೈವಿಧ್ಯತೆ ಮತ್ತು ಸಹಿಷ್ಣುತೆಯತ್ತ ಗಮನ ಹರಿಸುತ್ತವೆ.

ಭಾರತೀಯ ನೌಕಾಪಡೆಗೆ ತನ್ನ ದೈನಂದಿನ ಯೋಜನೆಗಳನ್ನು ನಿರ್ವಹಿಸಲು ಪ್ರಬಲ ನೌಕಾ ಬಳಗದ ಅವಶ್ಯಕತೆಯಿದೆ. ಭಾರತೀಯ ನೌಕಾ ಸೇನೆ ದ್ವೀಪಗಳೂ ಸೇರಿದಂತೆ, 7,500 ಕಿಲೋಮೀಟರ್‌ಗೂ ಹೆಚ್ಚಿನ ಕರಾವಳಿ ಪ್ರದೇಶಗಳನ್ನು ಕಾಯುತ್ತಾ, 2 ಮಿಲಿಯನ್ ಚದರ ಕಿಲೋಮೀಟರ್‌ಗೂ ಹೆಚ್ಚಿನ ವಿಶೇಷ ಆರ್ಥಿಕ ವಲಯವನ್ನು (SEZ) ಕಾಪಾಡಬೇಕಿದೆ. ಇಷ್ಟೊಂದು ವಿಶಾಲ ಸಮುದ್ರ ಪ್ರದೇಶವನ್ನು ಸುರಕ್ಷಿತವಾಗಿಡಲು ಅಗತ್ಯವಿರುವಷ್ಟು ಸಂಖ್ಯೆಯ ಯುದ್ಧ ನೌಕೆಗಳನ್ನು ಹೊಂದುವುದು ಅತ್ಯಂತ ಮುಖ್ಯವಾಗಿದೆ. ನೌಕಾಪಡೆಯ ಸಮುದ್ರ ಗಸ್ತು ನೌಕೆಗಳು ವ್ಯಾಪಾರಿ ಹಡಗುಗಳನ್ನು ಹಾರ್ನ್ ಆಫ್ ಆಫ್ರಿಕಾ ಬಳಿಕ ಕಾವಲಿಲ್ಲದ ಸಮುದ್ರ ಪ್ರದೇಶದಲ್ಲಿ ಕಾರ್ಯಾಚರಿಸುವ ಕಡಲ್ಗಳ್ಳರಿಂದ, ಅಪರಾಧಿಗಳಿಂದ ಮತ್ತು ಭಯೋತ್ಪಾದಕರಿಂದ ರಕ್ಷಿಸುತ್ತವೆ.

ಹಿಂದೂ ಮಹಾಸಾಗರದ ಸ್ವಯಂಘೋಷಿತ ರಕ್ಷಕನಾಗಿರುವ ಭಾರತ, ಪ್ರಮುಖ ವ್ಯಾಪಾರ ಮಾರ್ಗಗಳನ್ನು ಮುಕ್ತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಮಾರ್ಗಗಳಲ್ಲಿ (ಹೊರ್ಮುಸ್ ಜಲಸಂಧಿ ಮತ್ತು ಏಡನ್ ಕೊಲ್ಲಿಯಿಂದ ಮಲಾಕ್ಕಾ ಜಲಸಂಧಿಯ ತನಕ) ಜಾಗತಿಕ ವ್ಯಾಪಾರದ 30%ದಷ್ಟು ಸಾಗಾಣಿಕೆ ನಡೆಯುತ್ತಿದ್ದು, ಇವುಗಳ ಭದ್ರತೆ ಜಾಗತಿಕ ಆರ್ಥಿಕತೆಗೆ ಮುಖ್ಯವಾಗಿದೆ. ಭಾರತೀಯ ನೌಕಾಪಡೆ ಈ ಪ್ರದೇಶಕ್ಕಾಗಿ ಭದ್ರತಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿ, ಸಣ್ಣ ಪುಟ್ಟ ಪ್ರಾದೇಶಿಕ ನೌಕಾ ಶಕ್ತಿಗಳ ಕೌಶಲ, ಸಂಪನ್ಮೂಲಗಳನ್ನು ವೃದ್ಧಿಸಿ, ಅವುಗಳೂ ಗಸ್ತು ಕಾರ್ಯಾಚರಣೆ ನಡೆಸಿ, ಸಮುದ್ರ ಪ್ರದೇಶವನ್ನು ರಕ್ಷಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಹೊಂದಿದೆ.

ಭಾರತ ಪಶ್ಚಿಮದಲ್ಲಿ ಆಫ್ರಿಕನ್ ಕರಾವಳಿಯಿಂದ ಉತ್ತರದಲ್ಲಿ ದಕ್ಷಿಣ ಸಮುದ್ರ, ಮತ್ತು ಅಂಟಾರ್ಟಿಕಾ ತನಕ, ಪೂರ್ವದಲ್ಲಿ ಮಯನ್ಮಾರ್, ಥೈಲ್ಯಾಂಡ್, ಮಲೇಷ್ಯಾ, ಮತ್ತು ಇಂಡೋನೇಷ್ಯಾ ತನಕ ತನ್ನ ಸಾಗರ ರಕ್ಷಣಾ ಸೀಮೆಯನ್ನು ಹೊಂದಿದೆ. ತಮ್ಮ ಆರ್ಥಿಕ, ಗಸ್ತು, ಮತ್ತು ರಾಜತಾಂತ್ರಿಕ ಪಾತ್ರಗಳ ಜೊತೆಗೆ, ಭಾರತೀಯ ಯುದ್ಧ ನೌಕೆಗಳು ನಿರಂತರವಾಗಿ ಅಭ್ಯಾಸ ನಡೆಸುತ್ತಿದ್ದು, ಯಾವುದೇ ಸಂದರ್ಭದಲ್ಲಾದರೂ ತಮ್ಮ ಮುಖ್ಯ ಕರ್ತವ್ಯವಾದ ಯುದ್ಧಕ್ಕೂ ಸನ್ನದ್ಧವಾಗಿರುತ್ತವೆ.

ಆದರೆ, ಭಾರತೀಯ ನೌಕಾ ಸೇನೆ ಇತ್ತೀಚೆಗೆ ಹೆಚ್ಚುತ್ತಿರುವ ಚೀನಾ - ಪಾಕಿಸ್ತಾನಗಳ ಬಲವಾದ ಸಹಯೋಗದಿಂದ ತನ್ನನ್ನು ತಾನು ಸುರಕ್ಷಿತವಾಗಿಸಬೇಕು. ಚೀನಾ - ಪಾಕಿಸ್ತಾನಗಳ ಸಹಯೋಗ, ಭಾರತದ ಪ್ರದೇಶದಲ್ಲಿ ಚೀನಾದ ಪ್ರವೇಶದಂತೆ ಭಾಸವಾಗುತ್ತಿದೆ. ಭಾರತ ಅಧಿಕೃತವಾಗಿ ಯಾವುದೇ ಮಿಲಿಟರಿ ಸಹಭಾಗಿತ್ವವನ್ನು ಹೊಂದದೆ, ಅಲಿಪ್ತ ನೀತಿಯನ್ನು ಅನುಸರಿಸುವುದು ಭಾರತದ ಭದ್ರತಾ ಸವಾಲುಗಳನ್ನು ಹೆಚ್ಚಿಸಿವೆ.

ಇಂತಹ ಪರಿಸ್ಥಿತಿ ಅಂದಾಜು 160 ಯುದ್ಧ ನೌಕೆಗಳು, 20 ಸಬ್‌ಮರೀನ್‌ಗಳನ್ನು ಹೊಂದಿರುವ ಭಾರತೀಯ ನೌಕಾಪಡೆಯ ಮೇಲೆ ಒತ್ತಡ ಹೆಚ್ಚಿಸುತ್ತಿದ್ದು, ಚೀನಾ ಬಳಿ ಬಹುತೇಕ 500 ಯುದ್ಧ ನೌಕೆಗಳು ಮತ್ತು 60 ಸಬ್‌ಮರೀನ್‌ಗಳು ಇರುವುದು ಈ ಒತ್ತಡವನ್ನು ಹೆಚ್ಚಿಸಿದೆ. ಒಂದು ವೇಳೆ ಚೀನಾ ಮತ್ತು ಭಾರತದ ನಡುವೆ ಯುದ್ಧ ಸಂಭವಿಸಿದರೆ, ಆಗ ಚೀನೀ ನೌಕಾಪಡೆ (ಪಿಎಲ್ಎಎನ್) ಪಾಕಿಸ್ತಾನಿ ನೌಕಾಪಡೆಯ ಬೆಂಬಲ ಪಡೆಯಬಹುದು. ಪಾಕಿಸ್ತಾನಿ ನೌಕಾಪಡೆ ಈಗ 70 ಯುದ್ಧ ನೌಕೆಗಳು ಮತ್ತು 13 ಸಬ್‌ಮರೀನ್‌ಗಳ ಬಳಗವನ್ನು ನಿರ್ಮಿಸಲು ಪ್ರಯತ್ನ ನಡೆಸುತ್ತಿದೆ. ಭಾರತ ಇದಕ್ಕಾಗಿ ತನ್ನ ಕಾರ್ಯತಂತ್ರದ ಬಲವನ್ನು, ಅಂದರೆ ಮಿಲಿಟರಿ ಸಾಮರ್ಥ್ಯ, ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುವಂತಹ ಕ್ರಮಗಳನ್ನು ಕೈಗೊಂಡು, ಶತ್ರುಗಳಿಗೆ ಪರಮಾಣು ಯುದ್ಧದ ಅಪಾಯದ ಭೀತಿಯನ್ನು ಮೂಡಿಸಬೇಕಾಗುತ್ತದೆ.

ಸಮುದ್ರದಲ್ಲಿ ಚದುರಂಗ: ಹಿಂದೂ ಮಹಾಸಾಗರ ಆಯಿತೇ ಭಾರತ-ಚೀನಾ ಸ್ಪರ್ಧಾ ರಂಗ?
ಟ್ರಂಪ್ ಸುಂಕ ನೀತಿ ಎದುರಿಸಲು ಕ್ಸಿ ಜಿನ್‌ಪಿಂಗ್ ಹೈ ಟೆಕ್ ಯೋಜನೆ (ಜಾಗತಿಕ ಜಗಲಿ)

ಇದೇ ಸಮಯದಲ್ಲಿ, ಭಾರತೀಯ ನೌಕಾಪಡೆ ತನ್ನ ಯುದ್ಧ ನೌಕೆಗಳಿಗೆ ಹೆಚ್ಚಿನ ಸಾಂಪ್ರದಾಯಿಕ ಆಯುಧಗಳನ್ನು, ಅಂದರೆ ನೌಕೆಗಳು ಯುದ್ಧದಲ್ಲಿ ಬಳಸುವ ಆಯುಧಗಳು ಮತ್ತು ಉಪಕರಣಗಳಾದ ಕ್ಷಿಪಣಿಗಳು, ಟಾರ್ಪೆಡೋಗಳು, ಗನ್‌ಗಳು ಮತ್ತು ಇತರ ಪರಮಾಣು ರಹಿತ ಆಯುಧಗಳನ್ನು ಅಳವಡಿಸಬೇಕಾಗುತ್ತದೆ. ಇದಕ್ಕೆ ಸೂಕ್ತ ಉದಾಹರಣೆಯನ್ನು ಹಿಂದಿನ ಸೋವಿಯತ್ ಒಕ್ಕೂಟದ ನೌಕಾಪಡೆಯಲ್ಲಿ ನಾವು ಗಮನಿಸಬಹುದು. ಅದರ ಉದಾಲೊಯ್ ಮತ್ತು ಸಾವ್ರೆಮೆನ್ನಿ ವರ್ಗದ ಡೆಸ್ಟ್ರಾಯರ್‌ಗಳು ಅತ್ಯಂತ ಶಸ್ತ್ರಸಜ್ಜಿತವಾಗಿದ್ದು, ಪ್ರತಿಯೊಂದೂ ಬಲವಾದ ದಾಳಿಗೆ ವಿನ್ಯಾಸಗೊಂಡಿದ್ದ 16 ಶಕ್ತಿಶಾಲಿ ಕ್ಷಿಪಣಿಗಳನ್ನು ಹೊಂದಿದ್ದವು.

ಲ್ಯಾಂಚೆಸ್ಟರ್ ಲಾ ಎಂಬ ಗಣಿತದ ಪ್ರಮೇಯ ಯುದ್ಧದ ಫಲಿತಾಂಶ ಏನಾಗಬಹುದು ಎಂಬ ಲೆಕ್ಕಾಚಾರ ಮಾಡಲು ನೆರವಾಗುತ್ತದೆ. ಇದರ ಪ್ರಕಾರ, ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದು, ಚೀನಾವನ್ನು ಅದರಿಂದ ಹೊರಗಿಟ್ಟು, ಭಾರತೀಯ ನೌಕಾಪಡೆ ತನ್ನ ಸಂಪೂರ್ಣ ಗಮನವನ್ನು ಪಾಕಿಸ್ತಾನದ ಮೇಲೆ ನಿಯೋಜಿಸಿದರೆ, ಆಗ ಕೇವಲ 24ರಿಂದ 48 ಗಂಟೆಗಳ ಒಳಗಾಗಿ ಪಾಕಿಸ್ತಾನದ ನೌಕಾಪಡೆ ನಾಮಾವಶೇಷಗೊಳ್ಳಬಹುದು. ಪಾಕಿಸ್ತಾನಕ್ಕೂ ತನ್ನ ನೌಕಾಪಡೆ ಭಾರತೀಯ ನೌಕಾಪಡೆಯಷ್ಟು ಶಕ್ತಿಶಾಲಿಯಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿದಿದ್ದು, ಅದು ತೆರೆದ ಸಮುದ್ರಗಳಲ್ಲಿ ಭಾರತದೊಡನೆ ಯುದ್ಧ ಮಾಡುವುದನ್ನು ತಪ್ಪಿಸುತ್ತದೆ. ಅಂತಹ ಸನ್ನಿವೇಶದಲ್ಲಿ ಯುದ್ಧ ಮಾಡುವುದು ಭಾರತದ ಹೆಚ್ಚು ಶಕ್ತಿಯುತವಾದ ನೌಕಾಪಡೆಯ ಕೈಗೆ ಸಿಲುಕಿ, ನಷ್ಟ ಅನುಭವಿಸುವಂತಾದೀತು ಎನ್ನುವುದು ಪಾಕಿಸ್ತಾನಕ್ಕೆ ಅನನುಕೂಲಕರವಾಗಿದೆ.

ತೆರೆದ ಸಮುದ್ರಗಳಲ್ಲಿ ಯುದ್ಧ ಮಾಡುವ ಬದಲು, ಪಾಕಿಸ್ತಾನಿ ಯುದ್ಧ ನೌಕೆಗಳು ಹೆಚ್ಚಾಗಿ ಹಿಂದಕ್ಕೆ, ಕರಾವಳಿ ಪ್ರದೇಶಗಳತ್ತ ಚಲಿಸಬಹುದು. ಅಲ್ಲಿ ಅವುಗಳನ್ನು ರಕ್ಷಿಸಲು ಪಾಕಿಸ್ತಾನದ ವಾಯು ಸೇನೆಯೂ ನೆರವು ನೀಡುವ ಸಾಧ್ಯತೆಗಳಿರುವುದರಿಂದ, ಅವುಗಳು ದಾಳಿಯಿಂದ ರಕ್ಷಣೆ ಹೊಂದಬಹುದು. ಪಾಕಿಸ್ತಾನದ ನೌಕಾ ಕಾರ್ಯತಂತ್ರ ಸಾಧ್ಯವಾದಷ್ಟೂ ಮಟ್ಟಿಗೆ ಭಾರತೀಯ ನೌಕಾ ಸೇನೆಯೊಡನೆ ನೇರ ಯುದ್ಧವನ್ನು ತಪ್ಪಿಸುವುದೇ ಆಗಿದೆ. ಸಂಖ್ಯೆ ಮತ್ತು ಅವಧಿ ಎರಡರಲ್ಲೂ ಭಾರತದೊಡನೆ ಸೆಣಸುವುದನ್ನು ಕಡಿಮೆಗೊಳಿಸಿದರೆ, ಆಗ ಪಾಕಿಸ್ತಾನ ತನ್ನ ನಷ್ಟದ ಅಪಾಯವನ್ನು ಕಡಿಮೆಗೊಳಿಸಿ, ಭಾರತೀಯ ನೌಕಾಪಡೆ ತನ್ನ ಹೆಚ್ಚಿನ ಯುದ್ಧ ನೌಕೆಗಳು ಮತ್ತು ಆಯುಧ ಸಾಮರ್ಥ್ಯದ ಮೇಲುಗೈಯನ್ನು ಹೊಂದುವ ಅಪಾಯವನ್ನು ಕಡಿಮೆಗೊಳಿಸಲು ಸಾಧ್ಯ.

ಇಂತಹ ಸನ್ನಿವೇಶದಲ್ಲಿ, ಭಾರತದ ಮುಂದಿನ ಸವಾಲು ಪಾಕಿಸ್ತಾನ ನೌಕಾಪಡೆ ಯುದ್ಧಕ್ಕಿಳಿಯುವಂತೆ ಮಾಡುವುದು ಹೇಗೆ ಎನ್ನುವುದಾಗಿರುತ್ತದೆ. ಒಂದು ವೇಳೆ ಪಾಕಿಸ್ತಾನದ ನೌಕಾಪಡೆ ಯುದ್ಧ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಿದರೆ, ಭಾರತದ ಯುದ್ಧ ನೌಕೆಗಳು ಮತ್ತು ಯುದ್ಧ ವಿಮಾನಗಳು ದಾಳಿ ನಡೆಸಲು ಪಾಕಿಸ್ತಾನದ ವಾಯುಪಡೆಯ ರಕ್ಷಣೆ ಹೊಂದಿರುವ, ಪಾಕಿಸ್ತಾನದ ಬಂದರುಗಳ ಬಳಿ ತೆರಳುವುದು ಅನಿವಾರ್ಯವಾಗುತ್ತದೆ.

ಪಾಕಿಸ್ತಾನದ ಕರಾವಳಿಯ ಬಳಿ ತೆರಳುವಾಗ, ಭಾರತೀಯ ನೌಕಾಪಡೆಯ ಯುದ್ಧ ನೌಕೆಗಳನ್ನು ಸುರಕ್ಷಿತವಾಗಿಡಲು ಅವುಗಳಿಗೆ ಇಸ್ರೇಲ್ ಸಹಯೋಗದೊಡನೆ ನಿರ್ಮಿಸಿರುವ ವಿಶೇಷ ವಾಯು ರಕ್ಷಣಾ ಕ್ಷಿಪಣಿಗಳನ್ನು ಅಳವಡಿಸಬೇಕಾಗುತ್ತದೆ. ಎಲ್ಆರ್ - ಎಸ್ಎಎಂ ಎಂಬ ಹೆಸರಿನ ಈ ಕ್ಷಿಪಣಿ ಅತ್ಯಂತ ಶಕ್ತಿಶಾಲಿಯಾಗಿದ್ದು, 70 ಕಿಲೋಮೀಟರ್ ದೂರದಿಂದಲೇ ಶತ್ರುವನ್ನು ನಾಶಪಡಿಸಬಲ್ಲದು.

ಸಮುದ್ರದಲ್ಲಿ ಚದುರಂಗ: ಹಿಂದೂ ಮಹಾಸಾಗರ ಆಯಿತೇ ಭಾರತ-ಚೀನಾ ಸ್ಪರ್ಧಾ ರಂಗ?
ಭಾರತ-ಚೀನಾ ಸಂಬಂಧಕ್ಕೆ 75 ವರ್ಷ: ಕೊನೆಯಾಗದ ವೈರುಧ್ಯ (ಜಾಗತಿಕ ಜಗಲಿ)

ಹಾಗೆ ನೋಡಿದರೆ, ನೌಕಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮುಂದಿರುವ ಆಯ್ಕೆಗಳು ಸೀಮಿತವಾಗಿವೆ. ಪಾಕಿಸ್ತಾನದ ಬಳಿ ಇರುವ ಲಾಂಗ್ ರೇಂಜ್ ಮಾರಿಟೈಮ್ ಪೆಟ್ರೋಲ್ (ಎಲ್ಆರ್‌ಎಂಪಿ) ವಿಮಾನಗಳ ಪೈಕಿ, ಕೇವಲ ಪಿ-3ಸಿ ಓರಿಯನ್ ಮಾತ್ರವೇ 16 ಗಂಟೆಗಳಷ್ಟು ಕಾಲ ನಿರಂತರವಾಗಿ ಹಾರಾಟ ನಡೆಸಿ, ಸಮುದ್ರದಲ್ಲಿರುವ ಹಡಗುಗಳು ಮತ್ತು ಇತರ ಗುರಿಗಳನ್ನು ಹುಡುಕುವ ಸಾಮರ್ಥ್ಯ ಹೊಂದಿದೆ. ಆದರೆ, ಓರಿಯನ್ ಯುದ್ಧ ವಿಮಾನ ಆಕಾಶಕ್ಕೆ ಹಾರಿ, ಅದರ ಗರಿಷ್ಠ ವ್ಯಾಪ್ತಿಯಾದ 50 ಕಿಲೋಮೀಟರ್ ದೂರದಿಂದ ತನ್ನ ಮೊದಲ ಹಡಗು ನಿರೋಧಕ ಕ್ಷಿಪಣಿಯನ್ನು ಉಡಾಯಿಸುತ್ತಿದ್ದಂತೆಯೇ ಅದರ ಸ್ಥಾನ ಜಾಹೀರಾಗಿಬಿಡುತ್ತದೆ.

ಎಲ್ಆರ್-ಎಸ್ಎಎಂ ಕ್ಷಿಪಣಿ 70 ಕಿಲೋಮೀಟರ್ ವ್ಯಾಪ್ತಿ ಹೊಂದಿರುವುದರಿಂದ, ಅದು ಪಾಕಿಸ್ತಾನದ ಓರಿಯನ್ ವಿಮಾನಕ್ಕಿಂತಲೂ ಸಾಕಷ್ಟು ದೂರದಿಂದಲೇ ಗುರಿಗಳ ಮೇಲೆ ದಾಳಿ ನಡೆಸಬಲ್ಲದು. ಇದು ಓರಿಯನ್ ವಿಮಾನವನ್ನು ನೇರವಾಗಿ ಅಪಾಯಕ್ಕೆ ತಳ್ಳಿದಂತಾಗಲಿದೆ. ಇಂತಹ ಸನ್ನಿವೇಶದಲ್ಲಿ ಭಾರತೀಯ ವಿಮಾನ ವಾಹಕ ನೌಕೆಯ ಉಪಸ್ಥಿತಿಯ ಅಗತ್ಯವೇ ಬೀಳುವುದಿಲ್ಲ. ಒಂದು ವೇಳೆ ವಿಮಾನ ವಾಹಕ ನೌಕೆಯೂ ಆಗಮಿಸಿದರೆ, ಆಗ ಪಾಕಿಸ್ತಾನದ ಓರಿಯನ್ ಯುದ್ಧ ವಿಮಾನ ಹೊರಡುವ ಮುನ್ನವೇ ಹೊಡೆದುರುಳಿಸಲು ಸಾಧ್ಯ.

ಪಿಎಲ್ಎಎನ್ ನಿಂದ ಪರಿಣಾಮಕಾರಿ ನೆರವೂ ಲಭಿಸದಿದ್ದಾಗ, ಪಾಕಿಸ್ತಾನದ ಮುಂದಿರುವ ಉತ್ತಮ ಆಯ್ಕೆ ಎಂದರೆ ಶತ್ರು ಸಮುದ್ರವನ್ನು ಪ್ರವೇಶಿಸದಂತೆ ತಡೆಯುವುದು. ಈ ಕಾರ್ಯತಂತ್ರ ಮುಖ್ಯವಾಗಿ ಸಬ್‌ಮರೀನ್‌ಗಳು ಮತ್ತು ನೀರಿನಾಳದ ಮೈನ್ಸ್‌ಗಳನ್ನು ಬಳಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಮಾಮೂಲಿ ಸಬ್‌ಮರೀನ್‌ಗಳು ನಿಧಾನಗತಿಯವಾಗಿದ್ದು, ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ (ಎಐಪಿ) ಹೊಂದಿದ್ದರೂ ಅವುಗಳನ್ನು ಶತ್ರು ಯುದ್ಧ ನೌಕೆಗಳು ಖಂಡಿತವಾಗಿಯೂ ಸಾಗಿ ಬರುವ, ಕಾರ್ಯತಂತ್ರದ, ಸಪುರವಾದ ಪ್ರದೇಶಗಳಲ್ಲಿ ಇಡಬೇಕಾಗುತ್ತದೆ. ಇವುಗಳಲ್ಲಿ ಮುಂಬೈ ಬಂದರಿನ ಪ್ರವೇಶ ಸ್ಥಾನ, ಕಚ್ ಕೊಲ್ಲಿ ಮತ್ತು ಕ್ಯಾಂಬೇ ಕೊಲ್ಲಿಗಳು ಸೇರಿವೆ.

ಒಂದು ವೇಳೆ ಉದ್ದೇಶಪೂರ್ವಕವಾಗಿ ವಿಶಾಖಪಟ್ಟಣಂ ಅಥವಾ ಕಾರವಾರದಂತಹ ಮುಖ್ಯ ನೌಕಾ ನೆಲೆಯ ಪ್ರವೇಶ ದ್ವಾರದ ಬಳಿ ಹಡಗೊಂದನ್ನು ಮುಳುಗಿಸಿದರೆ, ಅಥವಾ ಅದರ ಪ್ರವೇಶ ದ್ವಾರವನ್ನು ನೀರಿನಾಳದ ಮೈನ್ಸ್ ಬಳಸಿ ತಡೆಗಟ್ಟಿದರೆ, ಪಾಕಿಸ್ತಾನದ ಕೆಲವೇ ಯುದ್ಧ ನೌಕೆಗಳು ಭಾರತದ ನೌಕಾ ಪಡೆಯನ್ನು ಒಳಗೇ ನಿರ್ಬಂಧಿಸಬಲ್ಲವು. ಹೀಗಾದಾಗ, ಭಾರತೀಯ ಯುದ್ಧ ನೌಕೆಗಳಿಗೆ ಒಳ ಹೊರಗೆ ಸಂಚರಿಸಲು ಕಷ್ಟಕರವಾಗಿ, ನೌಕಾ ಕಾರ್ಯಾಚರಣೆಗಳಿಗೆ ಕಷ್ಟಕರವಾಗಬಹುದು.

ಇಂತಹ ಅಪಾಯವನ್ನು ತಡೆಗಟ್ಟುವ ಸಲುವಾಗಿಯೇ, 1971ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧ ಆರಂಭವಾಗುವ ಮುನ್ನ ಭಾರತದ ಏಕೈಕ ವಿಮಾನ ವಾಹಕ ನೌಕೆಯಾಗಿದ್ದ ಐಎನ್ಎಸ್ ವಿಕ್ರಾಂತ್ ವಿಶಾಖಪಟ್ಟಣಂನಿಂದ ತೆರಳಿತ್ತು. ಅದು ಅಲಿಜಾ ಮತ್ತು ಸೀಹಾಕ್ ಯುದ್ಧ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿತ್ತು. ಇಷ್ಟಾದರೂ ಭಾರತೀಯ ನೌಕಾಪಡೆ ತನ್ನ ಪೂರ್ವ ಮತ್ತು ಪಶ್ಚಿಮ ಕರಾವಳಿಗಳಲ್ಲಿ ಸಬ್‌ಮರೀನ್‌ಗಳು ಮತ್ತು ಆ್ಯಂಟಿ ಮೈನ್ ಹಡಗುಗಳ ಕೊರತೆಯನ್ನು ಎದುರಿಸುತ್ತಿದೆ.

ಭಾರತಕ್ಕೆ ಚೀನಾದ ಸಬ್‌ಮರೀನ್ ಮತ್ತು ಯುದ್ಧ ನೌಕೆಗಳು ಹಿಂದೂ ಮಹಾಸಾಗರ ಪ್ರವೇಶಿಸದಂತೆ ತಡೆಗಟ್ಟುವ ಸಲುವಾಗಿ ದೊಡ್ಡದಾದ ಸಬ್‌ಮರೀನ್ ಪಡೆಯ ಅಗತ್ಯವಿದೆ. ಈ ಚೀನೀ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿರುವ ತಮ್ಮ ನೆಲೆಗಳಿಂದ ನಾಲ್ಕು ಮುಖ್ಯ ಮಾರ್ಗಗಳ ಮೂಲಕ ಸಾಗುತ್ತವೆ. ಅವೆಂದರೆ: ಮಲಾಕ್ಕಾ, ಸುಂದಾ, ಲೊಂಬೊಕ್ ಮತ್ತು ಒಂಬಾಯ್ - ವೆಟ್ಟರ್ ಜಲಸಂಧಿ. ಭಾರತ ತನ್ನ ಸಬ್‌ಮರೀನ್ ಬಲವನ್ನು ಹೆಚ್ಚಿಸುವುದರಿಂದ, ತನ್ನ ಸಮುದ್ರಗಳನ್ನು ಕಾಪಾಡಿಕೊಳ್ಳಲು ಮತ್ತು ಚೀನಾದ ನೌಕೆಗಳ ಚಲನವಲನಗಳನ್ನು ಗಮನಿಸಲು ಸಾಧ್ಯವಾಗುತ್ತದೆ.

ಸಮುದ್ರದಲ್ಲಿ ಚದುರಂಗ: ಹಿಂದೂ ಮಹಾಸಾಗರ ಆಯಿತೇ ಭಾರತ-ಚೀನಾ ಸ್ಪರ್ಧಾ ರಂಗ?
Chabahar Port: ಅಮೆರಿಕಾ ನೀತಿ, ಭಾರತದ ಕಾರ್ಯತಂತ್ರಗಳ ನಡುವೆ ಪ್ರಾದೇಶಿಕ ಸಂಪರ್ಕದ ಭವಿಷ್ಯ (ಜಾಗತಿಕ ಜಗಲಿ)

ದೂರದ ಪ್ರದೇಶಗಳಲ್ಲಿ ಇಂತಹ ದೊಡ್ಡ ಕಾರ್ಯಾಚರಣೆಗಳನ್ನು ನಡೆಸುವ ಸಲುವಾಗಿ, ಸಬ್‌ಮರೀನ್‌ಗಳು ತಮ್ಮ ಮುಖ್ಯ ಭೂ ನೆಲೆಗಳೊಡನೆ ಸಂಪರ್ಕದಲ್ಲಿರಬೇಕಾಗುತ್ತದೆ. ಅವುಗಳು ನಂಬಿಕಾರ್ಹವಾದ, ಬಲಶಾಲಿಯಾದ ವೆರಿ ಲೋ ಫ್ರೀಕ್ವೆನ್ಸಿ (ವಿಎಲ್ಎಫ್) ಸಂಕೇತಗಳನ್ನು ಬಳಸಿಕೊಂಡು ಸಂಪರ್ಕ ಕಾಯ್ದುಕೊಳ್ಳುತ್ತವೆ. ಈ ಸಂಕೇತಗಳು ಸಮುದ್ರದ ಆಳದಿಂದಲೂ ಸಂವಹನ ನಡೆಸಲು ನೆರವಾಗುತ್ತವೆ. 2012ರಲ್ಲಿ, ಭಾರತೀಯ ನೌಕಾಪಡೆ ತಮಿಳುನಾಡಿನ ಐಎನ್ಎಸ್ ಕಟ್ಟಬೊಮ್ಮನ್‌ನಲ್ಲಿ ಒಂದು ವಿಎಲ್ಎಫ್ ಸಂವಹನಾ ವ್ಯವಸ್ಥೆಯನ್ನು ಅಳವಡಿಸಿ, ಸಬ್‌ಮರೀನ್‌ಗಳು ನೌಕಾನೆಲೆಯೊಡನೆ ಸಂಪರ್ಕದಲ್ಲಿರಲು ಅನುಕೂಲ ಕಲ್ಪಿಸಿತ್ತು.

ಅಕ್ಟೋಬರ್ 15, 2024ರಂದು, ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ತೆಲಂಗಾಣದ ಡಮಗುಂಡಂ ಅಭಯಾರಣ್ಯದಲ್ಲಿ ಒಂದು ನೂತನ ಸಂವಹನ ಕೇಂದ್ರವನ್ನು ಉದ್ಘಾಟಿಸಿದ್ದರು. ಈ ಕೇಂದ್ರ ಸಬ್‌ಮರೀನ್‌ಗಳು ಆಳ ಸಮುದ್ರದಲ್ಲಿ ಇರುವಾಗಲೂ ನೌಕಾಪಡೆಯ ಕೇಂದ್ರ ಕಚೇರಿಗಳೊಡನೆ ಸಂಪರ್ಕದಲ್ಲಿರಲು ನೆರವಾಗುತ್ತದೆ. ಈ ವ್ಯವಸ್ಥೆ ದೂರದ ಪ್ರದೇಶಗಳಿಗೂ ಸಂವಹನ ನಡೆಸಲು ನೆರವಾಗಿ, ಭಾರತೀಯ ನೌಕಾಪಡೆ ದೇಶದ ಸಮುದ್ರಗಳನ್ನು ಸಂರಕ್ಷಿಸಲು ಪೂರಕವಾಗಿವೆ.

ಈ ಸಂವಹನ ವ್ಯವಸ್ಥೆ ಭಾರತದ ಪರಮಾಣು ಚಾಲಿತ ಸಬ್‌ಮರೀನ್‌ಗಳಿಗೆ ಅತ್ಯಂತ ಮುಖ್ಯವಾಗಿವೆ. ಭಾರತೀಯ ನೌಕಾ ಸೇನೆ ಪರಮಾಣು ಶಸ್ತ್ರಾಸ್ತ್ರಗಳನ್ನು ಒಯ್ಯಬಲ್ಲ ಎರಡು ಅರಿಹಂತ್ ವರ್ಗದ ಸಬ್‌ಮರೀನ್‌ಗಳನ್ನು ಹೊಂದಿದೆ. ಸಬ್‌ಮರೀನ್‌ಗಳ ಸುರಕ್ಷತೆ ಕಾಯ್ದುಕೊಳ್ಳಲು ಮತ್ತು ಯಾವುದೇ ತಪ್ಪಾಗದಂತೆ ತಡೆಯಲು ಈ ಸಬ್‌ಮರೀನ್‌ಗಳಿಗೆ ನೆಲದ ಮೇಲಿರುವ ಕಮಾಂಡ್ ಸೆಂಟರ್‌ನಿಂದ ಸ್ಪಷ್ಟ ಸೂಚನೆಗಳನ್ನು ನೀಡಬೇಕಾಗುತ್ತದೆ. ನಂಬಿಕಾರ್ಹ ಸಂವಹನ ಪರಮಾಣು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಅಪಾಯಗಳನ್ನು ತಪ್ಪಿಸಲು ನೆರವಾಗುತ್ತದೆ.

ನವದೆಹಲಿಗೆ ತನ್ನ ನೌಕಾಪಡೆಯ ಬಳಿ ಅವಶ್ಯಕತೆಗೆ ತಕ್ಕಷ್ಟು ಯುದ್ಧ ನೌಕೆಗಳಿಲ್ಲ ಎಂಬುದು ಅರಿವಿದೆ. ಆದರೂ ನೌಕಾಪಡೆ ತನ್ನ ಕಡಲ್ಗಳ್ಳತನ ನಿರೋಧಕ ಕಾರ್ಯಾಚರಣೆಗೆ ಒಂದು ಹಡಗನ್ನು ಎಲ್ಲ ಸಮಯದಲ್ಲೂ ಏಡನ್ ಕೊಲ್ಲಿಯಲ್ಲಿ ನಿಯೋಜಿಸಲು ಕಷ್ಟಪಡುತ್ತಿದೆ. ಇನ್ನೊಂದೆಡೆ ಚೀನಾದ ಪಿಎಲ್ಎಎನ್ ಕಡಲ್ಗಳ್ಳತನ ತಡೆ ಕಾರ್ಯಾಚರಣೆಗಳಿಗಾಗಿ ಮೂರು ಗುಂಪು ಯುದ್ಧ ನೌಕೆಗಳನ್ನು ನಿಯೋಜಿಸುತ್ತದೆ. ಪ್ರತಿಯೊಂದು ಗುಂಪೂ ಸಹ ಎರಡು ಶಕ್ತಿಶಾಲಿ ಡೆಸ್ಟ್ರಾಯರ್‌ಗಳು, ಒಂದು ವಿಶೇಷ ಪಡೆಗಳ ತಂಡ, ಮತ್ತು ಕನಿಷ್ಠ ಒಂದು ಸಬ್‌ಮರೀನ್ ಮತ್ತು 20,000 ಟನ್‌ಗಳಷ್ಟು ಇಂಧನವನ್ನು ಹೊಂದಿರುವ ಒಂದು ದೊಡ್ಡ ಪೂರೈಕೆ ಹಡಗನ್ನು ಹೊಂದಿರುತ್ತದೆ.

ಭಾರತದ ರೀತಿಯಲ್ಲದೆ, ಚೀನಾ ಬಳಿ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಅಗತ್ಯವಾದ ಅತ್ಯಾಧುನಿಕ ಯುದ್ಧ ನೌಕೆಗಳಿದ್ದು, ಅದು ಜಗತ್ತಿಗೆ ಅರಿವಿದೆ. ಆದ್ದರಿಂದ ಇತರ ದೇಶಗಳು ಚೀನಾದ ನೌಕಾ ಶಕ್ತಿಯನ್ನು ಅತ್ಯಂತ ಜಾಗರೂಕವಾಗಿ ಗಮನಿಸುತ್ತಿರುತ್ತವೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com