
ಇರಾನ್‌ನಲ್ಲಿ ಭಾರತ ಚಬಹಾರ್ ಬಂದರಿನ ಅಭಿವೃದ್ಧಿ ನಡೆಸುವ ಯೋಜನೆ ಹಾಕಿಕೊಂಡಿತ್ತು. ಆದರೆ, ಈಗ ಆ ಯೋಜನೆ ಅನಿಶ್ಚಿತತೆ ಎದುರಿಸುತ್ತಿದ್ದು, ಅದರೊಂದಿಗೆ ತನ್ನ ಆರ್ಥಿಕ ಅಭಿವೃದ್ಧಿ ಮತ್ತು ಭೌಗೋಳಿಕ ರಾಜಕಾರಣದ ಮೇಲೆ ಪ್ರಭಾವ ಸಾಧಿಸುವ ಸಲುವಾಗಿ ಸುಧಾರಿತ ಪ್ರಾದೇಶಿಕ ಸಂಪರ್ಕ ಸ್ಥಾಪಿಸುವ ಭಾರತದ ಮಹತ್ವಾಕಾಂಕ್ಷೆಯೂ ಅನಿಶ್ಚಿತತೆಗಳ ಸುಳಿಗೆ ಸಿಲುಕಿದೆ. ಒಮಾನ್ ಕೊಲ್ಲಿಯಂತಹ ಕಾರ್ಯತಂತ್ರದ ತಾಣದಲ್ಲಿರುವ ಚಬಹಾರ್ ಬಂದರು ಕೇವಲ ಮೂಲಭೂತ ವ್ಯವಸ್ಥೆ ಮಾತ್ರವಲ್ಲ. ಬದಲಿಗೆ, ಯುರೇಷ್ಯಾದ ವ್ಯಾಪಾರ ವ್ಯವಸ್ಥೆಯನ್ನೇ ಬದಲಿಸಬಲ್ಲ ಬಹು ಹಂತ ಮತ್ತು ಬಹು ಮಾದರಿಗಳ ಭಾರತದ ಮಹತ್ವಾಕಾಂಕ್ಷಿ ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್ (ಐಎನ್ಎಸ್‌ಟಿಸಿ) ಯೋಜನೆಗೆ ಈ ಬಂದರು ಅತ್ಯಂತ ಮುಖ್ಯವಾಗಿದೆ.
ಆದರೆ, ಇರಾನ್ ಕುರಿತಂತೆ ಅಮೆರಿಕಾದ ನೀತಿಗಳು ಬದಲಾಗುತ್ತಿದ್ದು, ಭಾರತಕ್ಕೆ ನಿರ್ಬಂಧಗಳನ್ನು ಎದುರಿಸದೆ ಚಬಹಾರ್ ಬಂದರಿನಲ್ಲಿ ಕಾರ್ಯಾಚರಿಸಲು ಒದಗಿಸಿದ್ದ ವಿನಾಯಿತಿಗಳನ್ನು ಹಿಂಪಡೆಯುವ ಸಾಧ್ಯತೆಗಳಿವೆ. ಇದು ಭಾರತದ ಯೋಜನೆಗಳ ಮೇಲೆ ಕಾರ್ಮೋಡ ಉಂಟುಮಾಡಿದ್ದು, ನವದೆಹಲಿ ಈಗ ಸಂಕೀರ್ಣವಾದ ಭೌಗೋಳಿಕ ರಾಜಕಾರಣದ ಚಿತ್ರಣದಲ್ಲಿ ತನ್ನ ಲೆಕ್ಕಾಚಾರವನ್ನು ಕಾರ್ಯರೂಪಕ್ಕೆ ತರಲು ಮರು ಯೋಜನೆ ರೂಪಿಸಬೇಕಿದೆ.
ಭಾರತಕ್ಕೆ ಚಬಹಾರ್ ಬಂದರು ಹಲವು ರೀತಿಯ ಕಾರಣಗಳಿಂದ ಅತ್ಯಂತ ಮುಖ್ಯವಾಗಿದೆ. ತನಗೆ ಚಬಹಾರ್ ಬಂದರಿನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿರುವ ಭಾರತ, ಅಲ್ಲಿನ ಮೂಲಭೂತ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಅಂದಾಜು 24 ಮಿಲಿಯನ್ ಡಾಲರ್ ಮೊತ್ತವನ್ನು ವೆಚ್ಚ ಮಾಡಿದೆ. ಚಬಹಾರ್ ಬಂದರಿನ ಮೂಲಕ ಕಾರ್ಯಾಚರಿಸಲು ಸಾಧ್ಯವಾದರೆ, ಭಾರತಕ್ಕೆ ಇಕ್ಕಟ್ಟಾದ, ಮತ್ತು ಊಹಿಸಲಸಾಧ್ಯವಾದ ಪರಿಸ್ಥಿತಿಗಳನ್ನು ಎದುರಿಸುವ ಸೂಯೆಜ್ ಕಾಲುವೆಯ ಮಾರ್ಗದ ಬದಲಿಗೆ ಮಧ್ಯ ಏಷ್ಯಾ, ರಷ್ಯಾ ಮತ್ತು ಯುರೋಪಿನ ಮಾರುಕಟ್ಟೆಗಳನ್ನು ಕ್ಷಿಪ್ರವಾಗಿ, ಕಡಿಮೆ ವೆಚ್ಚದಲ್ಲಿ ತಲುಪಲು ಸಾಧ್ಯವಾಗುತ್ತದೆ. ಇದು ಸಾಗಾಣಿಕೆಯ ಸಂಕಷ್ಟಗಳನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೆ, ಭೌಗೋಳಿಕ ರಾಜಕಾರಣದ ಸವಾಲುಗಳನ್ನೂ ಕಡಿಮೆಗೊಳಿಸಲು ನೆರವಾಗುತ್ತದೆ. ಅದರೊಡನೆ, ತನ್ನ ಸಂಭಾವ್ಯ ವಿರೋಧಿಗಳ ಮೇಲಿನ ಭಾರತದ ಅವಲಂಬನೆಯನ್ನೂ ಇದು ತಗ್ಗಿಸುತ್ತದೆ. ಆರ್ಥಿಕ ಕಾರಣಗಳಿಗೆ ಮಾತ್ರವಲ್ಲದೆ, ಚಬಹಾರ್ ಬಂದರು ಕಾರ್ಯತಂತ್ರದ ಮಹತ್ವವನ್ನೂ ಹೊಂದಿದ್ದು, ಈ ಪ್ರದೇಶದ ಮೇಲೆ ಭಾರತದ ಪ್ರಭಾವವನ್ನು ಬೀರಿ, ಇತರ ಪ್ರಾದೇಶಿಕ ಶಕ್ತಿಗಳ ಉಪಸ್ಥಿತಿ, ಮತ್ತು ಪ್ರಭಾವವನ್ನು ಎದುರಿಸಲು ನೆರವಾಗುತ್ತದೆ. ಅದರೊಡನೆ, ಚಬಹಾರ್ ಬಂದರು ಯೋಜನೆ ಸುತ್ತಲೂ ಭೂ ಪ್ರದೇಶವನ್ನೇ ಹೊಂದಿರುವ ಅಫ್ಘಾನಿಸ್ತಾನಕ್ಕೆ ವ್ಯಾಪಾರ ಮತ್ತು ಸಾಗಣೆಯ ನೆರವು ನೀಡಿ, ವಿಶಾಲವಾದ ಪ್ರಾದೇಶಿಕ ಪ್ರಭಾವವನ್ನೂ ಬೀರುವುದರಿಂದ, ಇದನ್ನು ಅಮೆರಿಕಾ ತನ್ನ ನಿರ್ಬಂಧದ ವ್ಯಾಪ್ತಿಯಿಂದ ಹೊರಗಿಟ್ಟಿತ್ತು.
ಭಾರತದ ಪ್ರಾದೇಶಿಕ ಸಂಪರ್ಕದ ಕಾರ್ಯತಂತ್ರಕ್ಕೆ ಐಎನ್ಎಸ್‌ಟಿಸಿ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ. 7,200 ಕಿಲೋಮೀಟರ್‌ಗಳಷ್ಟು ದೀರ್ಘವಾದ ಈ ಬಹು ಮಾದರಿಯ ಸಾಗಾಣಿಕಾ ಜಾಲ ಭಾರತ, ಇರಾನ್, ರಷ್ಯಾ, ಮತ್ತು ಮಧ್ಯ ಏಷ್ಯಾಗಳನ್ನು ಸಂಪರ್ಕಿಸುವುದರಿಂದ, ವಾಣಿಜ್ಯ ಮತ್ತು ವ್ಯಾಪಾರಗಳ ಸಮಗ್ರ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ. ಚಬಹಾರ್ ಬಂದರನ್ನು ಇರಾನಿನ ಪ್ರವೇಶದ ಬಿಂದುವಾಗಿ ಹೊಂದಿರುವ ಐಎನ್ಎಸ್‌ಟಿಸಿ, ಸರಕುಗಳ ಸಾಗಾಣಿಕೆಯನ್ನು ಸಮರ್ಥವಾಗಿಸಿ, ಸಾಗಾಣಿಕಾ ವೆಚ್ಚವನ್ನು ಬಹುಮಟ್ಟಿಗೆ ಕಡಿಮೆಯಾಗಿಸುತ್ತದೆ. ಆ ಮೂಲಕ, ಭಾರತೀಯ ಉತ್ಪನ್ನಗಳು ಯುರೋಪಿನ ಮಾರುಕಟ್ಟೆಗಳಿಗೆ ತಲುಪಲು ಹೊಸ ಮಾರ್ಗಗಳನ್ನು ಕಲ್ಪಿಸುತ್ತದೆ. ಈ ಹೊಸ ವ್ಯಾಪಾರ ಮಾರ್ಗ ಕೇವಲ ಸರಕುಗಳ ಸಾಗಾಣಿಕೆಗೆ ಮಾತ್ರವೇ ಸೀಮಿತವಲ್ಲ. ಬದಲಿಗೆ, ಇದು ಅಂತಾರಾಷ್ಟ್ರೀಯ ಸಹಭಾಗಿತ್ವಗಳನ್ನು ನಿರ್ಮಿಸಿ, ಪರಸ್ಪರ ಆರ್ಥಿಕ ಸಹಕಾರವನ್ನು ವೃದ್ಧಿಸಿ, ಯುರೇಷ್ಯಾದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಶಕ್ತಿಯಾಗಿ ಭಾರತದ ಸ್ಥಾನವನ್ನು ಬಲಪಡಿಸಲಿದೆ. ಇದೊಂದು ಕಾರ್ಯತಂತ್ರದ ಯೋಜನೆಯಾಗಿದ್ದು, ಇದರಿಂದ ಭಾರತಕ್ಕೆ ತನ್ನ ಪ್ರಾದೇಶಿಕ ಪ್ರಭಾವ ಹೆಚ್ಚಿಸಿ, ಪ್ರಮುಖ ಸಂಪನ್ಮೂಲಗಳಿಗೆ ಸುಲಭ ಪ್ರವೇಶ ದೊರೆತು, ಬಹುಧ್ರುವೀಯ ಜಗತ್ತಿನ ನಿರ್ಮಾಣದ ಕುರಿತ ಭಾರತದ ದೃಷ್ಟಿಕೋನವನ್ನು ಪ್ರಚುರಪಡಿಸಲು ನೆರವಾಗಲಿದೆ.
ಆದರೆ, ಚಬಹಾರ್ ಬಂದರು ಯೋಜನೆಗೆ ಅಮೆರಿಕಾದ ನಿರ್ಬಂಧ ವಿನಾಯಿತಿಯನ್ನು ಹಿಂಪಡೆದರೆ, ಅದು ಭಾರತ ಜಾಗರೂಕವಾಗಿ ಕೈಗೊಂಡ ಮಹತ್ವದ ಯೋಜನೆಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ. ಅಮೆರಿಕಾ ಸರ್ಕಾರ ಇರಾನ್ ಮೇಲೆ ಅತ್ಯಧಿಕ ಒತ್ತಡ ಹೇರಿ, ಆ ದೇಶ ತನ್ನ ಪರಮಾಣು ಯೋಜನೆಗಳು ಮತ್ತು ಪ್ರಾದೇಶಿಕ ಚಟುವಟಿಕೆಗಳನ್ನು ಕೈಬಿಡುವಂತೆ ಮಾಡುವ ಗುರಿ ಹೊಂದಿದೆ. ಅದರ ಭಾಗವಾಗಿ, ಚಬಹಾರ್ ಬಂದರು ಯೋಜನೆಯ ಮೇಲೂ ಅಮೆರಿಕಾ ನಿರ್ಬಂಧ ಹೇರಿದರೆ, ಅದು ಭಾರತಕ್ಕೆ ಸಂಕಷ್ಟ ತಂದೊಡ್ಡಲಿದೆ. ಈಗ ವಿನಾಯಿತಿಗಳನ್ನು ಹಿಂಪಡೆದರೆ, ಅದರಿಂದ ಭಾರತ ಈಗಾಗಲೇ ಚಬಹಾರ್ ಬಂದರಿನ ಅಭಿವೃದ್ಧಿಗೆ ನಡೆಸಿರುವ ಹೂಡಿಕೆಗಳು ನಷ್ಟವಾಗುವುದು ಮಾತ್ರವಲ್ಲದೆ, ಒಟ್ಟಾರೆ ಐಎನ್ಎಸ್‌ಟಿಸಿಯ ಕಾರ್ಯಾಚರಣಾ ಸಾಮರ್ಥ್ಯ ಮತ್ತು ಸಾಧ್ಯತೆಗಳೇ ಕುಸಿದುಹೋಗುತ್ತವೆ. ಇದರ ಪರಿಣಾಮವಾಗಿ, ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಬಹಳ ಮುಖ್ಯ ಸ್ತಂಭದಂತಾಗಿರುವ ಮುಖ್ಯ ಕಾರ್ಯತಂತ್ರದ ಸಹಯೋಗಿ ಅಮೆರಿಕಾ ಮತ್ತು ತನ್ನ ಪ್ರಾದೇಶಿಕ ಸಂಪರ್ಕ ಹಾಗೂ ಐತಿಹಾಸಿಕವಾಗಿಯೂ ಮಿತ್ರನಾಗಿರುವ ಇರಾನ್ ಜೊತೆಗಿನ ಸಂಬಂಧದಲ್ಲಿ ಸಮತೋಲನ ಸಾಧಿಸುವ ಬಹುದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ.
ಅದರೊಡನೆ, ಈಗಿನ ಭೌಗೋಳಿಕ ರಾಜಕಾರಣದ ಆಯಾಮಗಳೂ ಭಾರತದ ಸಂದಿಗ್ಧತೆಗಳನ್ನು ಇನ್ನಷ್ಟು ಹೆಚ್ಚಿಸಲಿವೆ. ಮಹತ್ವದ ಕಾರ್ಯತಂತ್ರ ಮತ್ತು ಆರ್ಥಿಕ ಸಹಯೋಗಿಯಾಗಿರುವ ಅಮೆರಿಕಾದೊಡನೆ ಬಲವಾದ ಬಾಂಧವ್ಯವನ್ನು ಕಾಪಾಡಿಕೊಳ್ಳುವುದು ನವದೆಹಲಿಯ ಪಾಲಿಗೆ ಬಹಳ ಮಹತ್ವದ್ದಾಗಿದೆ. ಅದರೊಡನೆ, ಭಾರತ ಇರಾನ್ ಜೊತೆಗೂ ಸುದೀರ್ಘವಾದ, ಮತ್ತು ವಿಶೇಷವಾಗಿ ಇಂಧನ ಭದ್ರತೆ ಹಾಗೂ ಪ್ರಾದೇಶಿಕ ವ್ಯಾಪಾರದ ಸಂಬಂಧವನ್ನು ಹೊಂದಿದೆ. ಇರಾನ್ ಮೇಲೆ ಅಮೆರಿಕಾ ಹೆಚ್ಚಿನ ಒತ್ತಡ ಹೇರುವುದರಿಂದ, ಭಾರತ ಮತ್ತು ಇರಾನ್ ಸಂಬಂಧದ ಮೇಲೂ ತೊಡಕುಂಟಾಗಿ, ಭಾರತ ಅತ್ಯಂತ ಜಾಗರೂಕವಾದ ಹೆಜ್ಜೆಗಳನ್ನಿಟ್ಟು, ಅಳೆದು ತೂಗಿ ತನ್ನ ಪ್ರತಿಕ್ರಿಯೆ ನೀಡುವಂತಹ ಸನ್ನಿವೇಶ ಬಂದೊದಗಲಿದೆ.
ಐಎನ್ಎಸ್‌ಟಿಸಿ ಯೋಜನೆಗೆ ಬಂದೊದಗಬಹುದಾದ ಸಮಸ್ಯೆಗಳು ಭಾರತದ ಪ್ರಾದೇಶಿಕ ಸಂಪರ್ಕದ ಮಹತ್ವಾಕಾಂಕ್ಷೆಗಳಿಗೆ ಅಡಚಣೆ ತಂದೊಡ್ಡಲಿವೆ. ಈ ಮಾರ್ಗದ ಬದಲಿಗೆ ಇಸ್ರೇಲ್ ಮತ್ತು ಯುಎಇಗಳ ಮೂಲಕ ಸಾಗಬಹುದಾದ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಲು ಭಾರತ ಪ್ರಯತ್ನ ನಡೆಸುತ್ತಿದೆ. ಆದರೆ, ಈ ಮಾರ್ಗಗಳು ಚಬಹಾರ್ ಕೇಂದ್ರಿತ ಮಾರ್ಗ ಒದಗಿಸಬಹುದಾದ ದಕ್ಷತೆ ಮತ್ತು ಕಡಿಮೆ ವೆಚ್ಚದಾಯಕ ಸಾಗಾಣಿಕೆಯನ್ನು ಒದಗಿಸಲು ಸಾಧ್ಯವಿಲ್ಲ. ಅದಲ್ಲದೆ, ಐಎನ್ಎಸ್‌ಟಿಸಿ ಕೇವಲ ಭಾರತ ಒಂದರ ಪ್ರಯತ್ನವಲ್ಲ. ಈ ಯೋಜನೆ ರಷ್ಯಾ ಮತ್ತು ಚೀನಾಗಳಂತಹ ಪಾಲುದಾರರನ್ನೂ ಒಳಗೊಂಡಿದೆ. ಈ ರಾಷ್ಟ್ರಗಳು ಅಮೆರಿಕಾದ ನಿರ್ಬಂಧಗಳ ಹೊರತಾಗಿಯೂ ಇರಾನ್ ಜೊತೆಗೆ ಪ್ರಬಲ ಆರ್ಥಿಕ ಮತ್ತು ರಾಜಕೀಯ ಬಾಂಧವ್ಯವನ್ನು ಹೊಂದಿವೆ. ಇರಾನ್ ಜೊತೆಗೆ ಆರ್ಥಿಕ ಮತ್ತು ಭದ್ರತಾ ಸಹಯೋಗವನ್ನು ಬಲಪಡಿಸಲು ರಷ್ಯಾ ಪ್ರಯತ್ನ ನಡೆಸುತ್ತಿದ್ದು, ಅದು ನಿರಂತರವಾಗಿ ಅಮೆರಿಕಾದ ಒತ್ತಡವನ್ನು ನಿವಾರಿಸುತ್ತಲೇ ಸಾಗಿದೆ. ಅದೇ ರೀತಿ, ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ (ಬಿಆರ್‌ಐ) ಇರಾನಿಗೆ ಪರ್ಯಾಯ ಆರ್ಥಿಕ ಶಕ್ತಿಯನ್ನು ಒದಗಿಸಿದ್ದು, ಅಮೆರಿಕಾದ ನಿರ್ಬಂಧಗಳ ಪರಿಣಾಮವನ್ನು ತಗ್ಗಿಸಿ, ಬಹುಧ್ರುವೀಯ ಜಾಗತಿಕ ಆರ್ಥಿಕತೆಯ ಕುರಿತು ಹೆಚ್ಚುತ್ತಿರುವ ಮಹತ್ವಕ್ಕೆ ಸಾಕ್ಷಿಯಾಗಿದೆ.
ಇಂತಹ ಸಂಕೀರ್ಣ ವಾತಾವರಣದಲ್ಲಿ, ಭಾರತ ತನ್ನ ಆಯ್ಕೆಗಳನ್ನು ಜಾಗರೂಕವಾಗಿ ಮೌಲ್ಯಮಾಪನ ನಡೆಸುತ್ತಿದ್ದು, ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ರಾಜತಾಂತ್ರಿಕ ಮಾರ್ಗಗಳನ್ನು ಅನ್ವೇಷಿಸುವ ಪ್ರಯತ್ನದಲ್ಲಿದೆ. ವಿಶ್ವಸಂಸ್ಥೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳೊಡನೆ ಕಾರ್ಯಾಚರಿಸಿ, ಇರಾನ್‌ನಲ್ಲಿನ ತನ್ನ ಅಭಿವೃದ್ಧಿ ಯೋಜನೆಗಳು ಹೊಂದಿರುವ ನ್ಯಾಯಸಮ್ಮತತೆ ಮತ್ತು ಅಭಿವೃದ್ಧಿಯ ಗುಣವನ್ನು ಸಾರುವುದೂ ಸಹ ಒಂದು ಕಾರ್ಯತಂತ್ರವಾಗಿದೆ. ಐರೋಪ್ಯ ಒಕ್ಕೂಟ ಮತ್ತು ಇತರ ಪ್ರಮುಖ ಸಹಯೋಗಿಗಳೊಡನೆ ನೇರವಾಗಿ ವ್ಯವಹರಿಸಿ, ಆ ಮೂಲಕ ಅಮೆರಿಕಾದ ನಿರ್ಬಂಧಗಳ ಪರಿಣಾಮವನ್ನು ಕಡಿಮೆಗೊಳಿಸಿ, ವ್ಯಾಪಾರ ಮತ್ತು ಸಾಗಾಣಿಕೆಗೆ ಪರ್ಯಾಯ ವ್ಯವಸ್ಥೆಗಳನ್ನು ಅನ್ವೇಷಿಸುವುದು ಸಹ ಭಾರತ ಆಲೋಚಿಸುತ್ತಿರುವ ಇನ್ನೊಂದು ವಿಧಾನವಾಗಿದೆ. ಅಂತಿಮವಾಗಿ, ಭಾರತ ತಾನು ಅಮೆರಿಕಾದ ನಿರ್ಬಂಧ ನೀತಿಗೆ ಅನುಗುಣವಾಗಿ ನಡೆದುಕೊಂಡು, ತನ್ನ ಸ್ವಂತ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಕೈಬಿಡಬೇಕೇ, ಅಥವಾ ತನ್ನ ಪ್ರಾದೇಶಿಕ ಸಂಪರ್ಕದ ಗುರಿಗಳನ್ನು ಸಾಧಿಸುವ ಮತ್ತು ಇರಾನ್ ಜೊತೆ ಉತ್ತಮ ಸಂಬಂಧವನ್ನು ಮುಂದುವರಿಸುವ ಹೆಚ್ಚು ಸ್ವತಂತ್ರ ಮಾರ್ಗವನ್ನು ಹಿಡಿಯಬೇಕೇ ಎಂದು ನಿರ್ಧರಿಸಬೇಕಿದೆ.
ಈ ನಿರ್ಧಾರ, ಭಾರತದ ವಿದೇಶಾಂಗ ನೀತಿಯ ಮೇಲೆ, ಭಾರತದ ಪ್ರಾದೇಶಿಕ ನಿಲುವಿನ ಮೇಲೆ ಮತ್ತು ಬಹುಧ್ರುವೀಯ ಜಾಗತಿಕ ವ್ಯವಸ್ಥೆ ನಿರ್ಮಾಣವಾಗಬೇಕೆಂದ ಭಾರತದ ದೃಷ್ಟಿಕೋನದ ಮೇಲೆ ಸುದೀರ್ಘ ಪರಿಣಾಮಗಳನ್ನು ಬೀರಲಿದೆ. ಚಬಹಾರ್ ಬಂದರು ಸ್ಪರ್ಧಾತ್ಮಕ ಹಿತಾಸಕ್ತಿಗಳನ್ನು ನಿಭಾಯಿಸುವ, ಸಂಕೀರ್ಣ ಭೌಗೋಳಿಕ ರಾಜಕಾರಣದ ಸವಾಲುಗಳನ್ನು ಎದುರಿಸುವ ಮತ್ತು ಸವಾಲಿನ ಜಾಗತಿಕ ಸನ್ನಿವೇಶದಲ್ಲಿ ತನ್ನ ಕಾರ್ಯತಂತ್ರದ ಗುರಿಗಳನ್ನು ಸಾಧಿಸುವ ಭಾರತದ ಸಾಮರ್ಥ್ಯಕ್ಕೆ ಎದುರಾಗಿರುವ ಸವಾಲೂ ಹೌದು. ಇದು ಕಾರ್ಯತಂತ್ರದ ಸಹಯೋಗ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ನಡುವೆ ಇರುವ ಉದ್ವಿಗ್ನತೆಗಳನ್ನು ತೋರಿಸಿದೆ. ಅದರೊಡನೆ, ಜಾಗತಿಕ ವ್ಯಾಪಾರ ಮತ್ತು ಭೌಗೋಳಿಕ ರಾಜಕಾರಣವನ್ನು ರೂಪಿಸುವಲ್ಲಿ ಪ್ರಾದೇಶಿಕ ಸಂಪರ್ಕದ ಪಾತ್ರ ಹೆಚ್ಚಾಗುತ್ತಿರುವುದಕ್ಕೆ ಚಬಹಾರ್ ಬಂದರು ಒಂದು ಉತ್ತಮ ನಿದರ್ಶನವಾಗಿದೆ. ಆದರೆ, ಇಂತಹ ಸವಾಲಿಗೆ ಭಾರತ ಹೇಗೆ ಪ್ರತಿಕ್ರಿಯೆ ನೀಡಲಿದೆ ಎನ್ನುವುದರ ಮೇಲೆ ದಕ್ಷಿಣ ಏಷ್ಯಾ ಮತ್ತು ವಿಶಾಲ ಯುರೇಷ್ಯಾದ ಮೇಲೆ ಭಾರತದ ಪ್ರಭಾವ ಹೇಗಿರಲಿದೆ ಎನ್ನುವುದು ಅವಲಂಬಿತವಾಗಿದೆ.
- ಗಿರೀಶ್ ಲಿಂಗಣ್ಣ
ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್ ವಿಳಾಸ: girishlinganna@gmail.com
Advertisement