ಭಾರತಕ್ಕೆ Iran ನ Chabahar Port ಏಕೆ ಮುಖ್ಯ? ಗೊಂದಲದಲ್ಲಿರುವ ಅಮೇರಿಕಾ ಬೆದರಿಕೆಗೆ ಬಗ್ಗುತ್ತಾ India?

ಇರಾನ್‌ನ ದಕ್ಷಿಣ ಕರಾವಳಿ ಭಾಗಕ್ಕೆ ಸೇರಿದ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಚಬಹಾರ್ ಬಂದರು ತಂತ್ರಗಾರಿಕೆ, ವ್ಯಾಪಾರ ವಹಿವಾಟಿನ ಮೂಲಕ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶದಲ್ಲಿದೆ. ಮಧ್ಯಪ್ರಾಚ್ಯ, ಯುರೇಷ್ಯಾ, ಯುರೋಪ್ ಗಳೊಂದಿಗೆ ಸಂಪರ್ಕ ಬೆಸೆಯುವುದಕ್ಕೆ ಭಾರತ, ಚೀನಾಗಳ geopolitical ಹಿತಾಸಕ್ತಿಗಳ ಕಾರಣದಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ.
Chabahar Port, US president Joe Biden-PM Narendra Modi
ಚಬಹಾರ್ ಬಂದರು, ಅಮೇರಿಕಾ ಅಧ್ಯಕ್ಷ ಜೋ ಬೈಡನ್- ಪ್ರಧಾನಿ ಮೋದಿonline desk
Updated on

ಕದಡಿದ ಮಧ್ಯಪ್ರಾಚ್ಯದ ಭಾಗದಲ್ಲಿರುವ ಚಬಹಾರ್ ಬಂದರು ಮತ್ತೊಮ್ಮೆ ಸುದ್ದಿಯಲ್ಲಿದೆ. ಕಾರಣ, ಮುಂದಿನ 10 ವರ್ಷಗಳ ಕಾಲ ಚಬಹಾರ್‌ ಬಂದರಿನಲ್ಲಿರುವ ಶಾಹಿದ್‌ ಬೆಹೆಷ್ತಿ ಟರ್ಮಿನಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆ ಒಪ್ಪಂದಕ್ಕೆ ಭಾರತ ಮತ್ತು ಇರಾನ್‌ ಮೇ.13 ರಂದು ಸಹಿ ಹಾಕಿರುವುದು.

ಈ ಒಪ್ಪಂದದ ಪ್ರಕಾರ, $120 ಮಿಲಿಯನ್ ಹೂಡಿಕೆ ಮಾಡಲಿರುವ ಭಾರತ ಚಬಹಾರ್‌ನ ಶಾಹಿದ್ ಬೆಹೆಷ್ಟಿ ಬಂದರಿನಲ್ಲಿ ಕಾರ್ಯನಿರ್ವಹಿಸುವ ಟರ್ಮಿನಲ್ ಮತ್ತು ಸಂಬಂಧಿತ ಯೋಜನೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು $250 ಮಿಲಿಯನ್ ಸಾಲ ಸೌಲಭ್ಯ ನೀಡಲಿದೆ.

ಲೋಕಸಭಾ ಚುನಾವಣೆಯ ಮಧ್ಯಭಾಗದಲ್ಲಿ ವಿದೇಶ ವ್ಯವಹಾರಗಳಿಗೆ ಸಂಬಂಧಿಸಿದ ಯಾವುದೇ ಸಚಿವರೂ ದೇಶಬಿಟ್ಟು ತೆರಳಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವುದು ಅಸಾಧಾರಣ ಬೆಳವಣಿಗೆಯೇ. ಆದರೆ ಮೇ.13 ರಂದು ಭಾರತದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ಇರಾನ್ ಗೆ ತೆರಳಿ ಕೆಲಸ ಮುಗಿಸಿ ಬಂದಿರುವುದನ್ನು ಗಮನಿಸಿದರೆ, ಈ ಒಪ್ಪಂದದ ಪ್ರಾಧಾನ್ಯತೆ ಅರ್ಥವಾಗುತ್ತದೆ. ‘ಭಾರತದಿಂದ ಅಭಿವೃದ್ಧಿ‍ಪಡಿಸುತ್ತಿರುವ ಮೊದಲ ಸಾಗರೋತ್ತರ ಬಂದರು ಯೋಜನೆ ಇದಾಗಿದೆ. ಚಬಹಾರ್‌ನ ದೀರ್ಘಕಾಲದ ಕಾರ್ಯಾಚರಣೆಗೆ ಅಡಿಗಲ್ಲು ಹಾಕಿದ್ದೇವೆ. ಈ ಒಪ್ಪಂದವು ಎರಡೂ ದೇಶಗಳ ನಡುವೆ ಆರ್ಥಿಕ ಬೆಳವಣಿಗೆ ಮತ್ತು ಹೂಡಿಕೆಗೆ ನೆರವಾಗಲಿದೆ’ ಎಂದು ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.

Chabahar Port, US president Joe Biden-PM Narendra Modi
ಚಬಹಾರ್ ಹೂಡಿಕೆ ಭರವಸೆ ಈಡೇರಿಸದಿದ್ದರೆ ವಿಶೇಷ ಸವಲತ್ತುಗಳಿಗೆ ಕತ್ತರಿ: ಭಾರತಕ್ಕೆ ಇರಾನ್ ಎಚ್ಚರಿಕೆ

ಭಾರತಕ್ಕೆ ಚಬಹಾರ್ ಬಂದರು ಏಕೆ ಮುಖ್ಯ?

ಇರಾನ್‌ನ ದಕ್ಷಿಣ ಕರಾವಳಿ ಭಾಗಕ್ಕೆ ಸೇರಿದ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಚಬಹಾರ್ ಬಂದರು ತಂತ್ರಗಾರಿಕೆ, ವ್ಯಾಪಾರ ವಹಿವಾಟಿನ ಮೂಲಕ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶದಲ್ಲಿದೆ. ಮಧ್ಯಪ್ರಾಚ್ಯ, ಯುರೇಷ್ಯಾ, ಯುರೋಪ್ ಗಳೊಂದಿಗೆ ಸಂಪರ್ಕ ಬೆಸೆಯುವುದಕ್ಕೆ ಭಾರತ, ಚೀನಾಗಳ geopolitical ಹಿತಾಸಕ್ತಿಗಳ ಕಾರಣದಿಂದ ಹೇಗೆಲ್ಲಾ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಚಬಹಾರ್ ನ ಮತ್ತೊಂದು ಬದಿಯಲ್ಲಿ ಪಾಕಿಸ್ತಾನದ ಗ್ವದಾರ್ ಬಂದರಿದ್ದು ಈಗಾಗಲೆ ಅಲ್ಲಿ ಚೀನಾ ಬಂದರು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದೆ. ಆದರೆ ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಮಧ್ಯಪ್ರಾಚ್ಯವನ್ನು ಹಾಗೂ ತನ್ನದೇ ಪ್ರಾಂತ್ಯದ ಕ್ಸಿನ್ ಜಿಯಾಂಗ್ ತಲುಪುವುದಕ್ಕೆ ಚೀನಾ ರೂಪಿಸಿರುವ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (CPEC) ಕಾರಿಡಾರ್ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗದೇ ಚೀನಾ ನಷ್ಟ ಎದುರಿಸುತ್ತಿದೆ. ಒಂದು ಹಂತಕ್ಕೆ ಚೀನಾ ಸಹ ಚಬಹಾರ್ ನ ಮೇಲೆ ಕಣ್ಣಿಟ್ಟಿದ್ದು ಇರಾನ್ ಗೆ ಹತ್ತಿರವಾಗಲು ಯತ್ನಿಸುತ್ತಿದೆ ಎಂಬ ವರದಿಗಳು ಇತ್ತೀಚಿಗೆ ಪ್ರಕಟವಾಗಿವೆ.

ಇತ್ತ ಭಾರತಕ್ಕೆ ಪಾಕಿಸ್ತಾನದ ಅಡೆತಡೆ ಇಲ್ಲದೆ, ಅಫ್ಘಾನಿಸ್ಥಾನ, ಮಧ್ಯ ಏಷ್ಯಾಗಳೊಂದಿಗೆ ವ್ಯಾಪಾರ-ವಹಿವಾಟು ನಡೆಸುವುದಕ್ಕೆ ಪಾರ್ಯಯ ಮಾರ್ಗ ಕಂಡುಕೊಳ್ಳುವುದು ಮತ್ತು ಇರಾನ್, ಅಝರ್ ಬೈಝಾನ್, ರಷ್ಯಾಗಳ ಮೂಲಕ ಯುರೇಷ್ಯಾ, ಯುರೋಪ್, ಪ್ರದೇಶಗಳಿಗೆ ಹತ್ತಿರವಾಗುವಂತೆ ಮಾಡುವ ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ International North-South Transport Corridor (INSTC) ಕ್ಕೆ ಜೋಡಿಸಿಕೊಳ್ಳುವುದು ಮುಖ್ಯ. ಇವೆರೆದೂ ಕಾರ್ಯಸಾಧುವಾಗಬೇಕೆಂದರೆ ಅದಕ್ಕೆ ಚಬಹಾರ್ ಪ್ರಮುಖ ಹಾಗೂ ಏಕೈಕ ಕೊಂಡಿ.

ಸ್ವಲ್ಪ ವ್ಯತ್ಯಾಸವಾದರೂ ಇರಾನ್ ಚೀನಾದತ್ತ ವಾಲುವ ಅಪಾಯ ಇದೆ. ಇದಕ್ಕೆ ಪೂರಕವೆಂಬಂತೆ ಚೀನಾ ಮತ್ತು ಇರಾನ್ ಇತ್ತೀಚೆಗೆ 25 ವರ್ಷಗಳ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದಿವೆ. ಒಪ್ಪಂದದ ವಿವರಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲವಾದರೂ ಇರಾನಿನ ಮಾಧ್ಯಮಗಳ ಪ್ರಕಾರ, ಇರಾನ್‌ನ ಸಮುದ್ರದ ವ್ಯಾಪಾರದ ಸುಮಾರು 85% ನ್ನು ನಿರ್ವಹಿಸುವ ಬಂದರ್ ಅಬ್ಬಾಸ್ ಬಂದರು ನಗರದಲ್ಲಿ ಮೊದಲ ಚೀನೀ ದೂತಾವಾಸ ಕಚೇರಿಯನ್ನು ಡಿಸೆಂಬರ್ 2022 ರಲ್ಲಿ ತೆರೆದಿದ್ದು, ಚೀನಾ ಯೋಜನೆಗಳ ಅನುಷ್ಠಾನದ ಮೊದಲ ಹಂತ ಎಂದು ವಿಶ್ಲೇಷಿಸಲಾಗುತ್ತಿದೆ.

Chabahar Port, US president Joe Biden-PM Narendra Modi
ಭಾರತ-ಪಾಕಿಸ್ತಾನ, ಭಾರತ-ಚೀನಾ ನಡುವೆ ಸಶಸ್ತ್ರ ಸಂಘರ್ಷ; ಯುಎಸ್ ಇಂಟೆಲ್ ಆತಂಕ: ವರದಿ

ಪಾಕಿಸ್ತಾನದ ಗ್ವದಾರ್ ಬಂದರಿನ ನಿರ್ವಹಣೆ ನೋಡಿಕೊಳುವ ಮೂಲಕ ಮಧ್ಯ ಏಷ್ಯಾವನ್ನು ತಲುಪುವುದಕ್ಕೆ ಚೀನಾ ಬೆಲ್ಟ್-ರೋಡ್ ಇನಿಶಿಯೇಟಿವ್ (BRI) ಜಾಲವನ್ನು ಹೆಣೆಯುತ್ತಿದೆ. ಹಿಂದೂ ಮಹಾಸಾಗರದಲ್ಲಿ ಈಗಾಗಲೇ ಭಾರತವನ್ನು ಸುತ್ತುವರೆಯುವುದಕ್ಕೆ ಸ್ಟ್ರಿಂಗ್ ಆಫ್ ಪರ್ಲ್ಸ್ ಎಂಬ ತಂತ್ರ ರೂಪಿಸಿದೆ. ಹೀಗಿರುವಾಗ ಚೀನಾ ಹಾಗೂ ಪಾಕಿಸ್ತಾನಳೆರಡರ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವುದಕ್ಕೆ ಅಥವಾ ಅವುಗಳನ್ನು bypass ಮಾಡಿ ಮದ್ಯ ಏಷ್ಯಾದೊಂದಿಗೆ ತನ್ನ ಭೌಗೋಳಿಕ-ರಾಜಕೀಯ ಪ್ರಭಾವ ವಿಸ್ತರಿಸಿಕೊಳ್ಳುವುದಕ್ಕೆ ಹಾಗೂ ಆರ್ಥಿಕತೆಯ ನಂಟನ್ನು ಬಲಗೊಳಿಸಿಕೊಳ್ಳುವುದಕ್ಕೆ ಭಾರತಕ್ಕೆ ಚಬಹಾರ್ ಬಂದರು ಅತ್ಯಂತ ನಿರ್ಣಾಯಕ. ಅಷ್ಟೇ ಅಲ್ಲದೇ ಆರ್ಥಿಕತೆ ಹಾಗೂ ವೇಳೆಯ ದೃಷ್ಟಿಯಿಂದಲೂ ಚಬಹಾರ್ ಬಂದರಿನ ಮಹತ್ವ ಹೆಚ್ಚು. ಪಾಕ್ ನ ಗ್ವದಾರ್ ಪೋರ್ಟ್ ನಿಂದ 200 ಕಿ.ಮೀ ದೂರದಲ್ಲಿರುವ ಚಬಹಾರ್ ನ ಈ ಪರ್ಯಾಯ ಸುಯೆಜ್ ಮಾರ್ಗದಲ್ಲಿ ಒಮ್ಮೆ INSTC ಪೂರ್ಣ ಕಾರ್ಯಾರಂಭ ಮಾಡಿದರೆ, ಖಂಡಾಂತರ ವ್ಯಾಪಾರಕ್ಕೆ ಸುರಿಯುವ ಹಣ, ವ್ಯಯಿಸುವ ಸಮಯ ಎರಡೂ ಗಣನೀಯವಾಗಿ ಕಡಿಮೆಯಾಗಲಿದೆ. ಸದಾ ಅಸ್ಥಿರತೆಯಿಂದಲೇ ಬಳಲುತ್ತಿರುವ ಮಧ್ಯ ಏಷ್ಯಾದ ದೇಶಗಳು ಭಾರತ-ನೇತೃತ್ವದ ಸಂಪರ್ಕ ಯೋಜನೆಗಳನ್ನು ಈ ಪ್ರದೇಶದಲ್ಲಿನ ಗೇಮ್-ಚೇಂಜರ್‌ಗಳನ್ನಾಗಿ ಗುರುತಿಸುತ್ತವೆ.

ಭಾರತ-ಇರಾನ್ ಒಪ್ಪಂದಕ್ಕೆ ಸಹಿ ಹಾಕಿದರೆ ಅಮೇರಿಕಾ ಏಕೆ ಆರ್ಥಿಕ ದಿಗ್ಬಂಧನದ ಬೆದರಿಕೆ ಹಾಕಬೇಕು?

ಮಧ್ಯಪ್ರಾಚ್ಯದ ರಾಷ್ಟ್ರಗಳನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವುದಕ್ಕೆ ಎಂದಿಗೂ ಹವಣಿಸುವ ಅಮೇರಿಕಾ ಈಗ ನ್ಯೂಕ್ಲಿಯರ್ ಡೀಲ್ ವಿಚಾರವಾಗಿ ಇರಾನ್ ವಿರುದ್ಧ ಕೊತ ಕೊತ ಕುದಿಯುತ್ತಿರುವುದು, ಆರ್ಥಿಕ ದಿಗ್ಬಂಧನ ಹೇರಿರುವುದು ಹೊಸತೇನಲ್ಲ. ಇರಾನ್ ಜೊತೆಗೆ ಯಾರೇ ವ್ಯಾಪಾರ ವಹಿವಾಟುಗಳನ್ನು ನಡೆಸಿದರೆ, ಅವರಿಗೂ ಈ ದಿಗ್ಬಂಧನಗಳು ಅಂಟಿಕೊಳ್ಳುತ್ತದೆ ಎಂದು ಫರ್ಮಾನು ಹೊರಡಿಸಿದ್ದ ಅಮೇರಿಕಾ ಈಗ ಚಬಹಾರ್ ವಿಷಯದಲ್ಲಿ ಭಾರತಕ್ಕೂ ಬೆದರಿಕೆ ಹಾಕಲು ಯತ್ನಿಸುತ್ತಿದೆ.

ಚಬಹಾರ್ ಬಂದರಿನ ವಿಷಯದಲ್ಲಿ ಭಾರತ ಮುಂದಡಿ ಇಟ್ಟಿದ್ದು ಹಾಗೂ ಅಮೇರಿಕಾ ಭಾರತಕ್ಕೆ ಬೆದರಿಕೆ ಹಾಕುತ್ತಿರುವ ಎರಡೂ ಪ್ರಕ್ರಿಯೆಗಳು ಇದೇ ಮೊದಲೇನಲ್ಲ. ಹಿಂದೆ 2003 ರಲ್ಲೇ ಭಾರತ ಚಬಹಾರ್ ಬಂದರು ನಿರ್ವಗಣೆಗೆ ಮುಂದಡಿ ಇಟ್ಟಿತ್ತು. ಆದರೆ ಇರಾನ್ ನ ಅಣ್ವಸ್ತ್ರ ಯೋಜನೆಯ ಪರಿಣಾಮ ಇರಾನ್ ಮೇಲೆ ಅಮೇರಿಕ, ವಿಶ್ವಸಂಸ್ಥೆ ಆರ್ಥಿಕ ನಿರ್ಬಂಧ ಹೇರಿದ್ದರ ಪರಿಣಾಮ ದಶಕಗಳ ಕಾಲ ಇದು ನೆನೆಗುದಿಗೆ ಬಿತ್ತು. ಇದಾದ ಬಳಿಕ 2015 ರಲ್ಲಿ ಅಮೇರಿಕಾ-ಇರಾನ್ ನ್ಯೂಕ್ಲಿಯರ್ ಒಪ್ಪಂದಕ್ಕೆ ಮುಂದಾಗಿ, ಅಮೇರಿಕಾ ನಿರ್ಬಂಧಗಳನ್ನು ಸಡಿಲಗೊಳಿಸಿತ್ತು. ಆ ನಂತರ ಭಾರತ ಇರಾನ್ ಜೊತೆ MoUಗೆ ಸಹಿ ಹಾಕಿತ್ತು. ಅಂತಿಮವಾಗಿ 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇರಾನ್ ಗೆ ಭೇಟಿ ನೀಡಿದ್ದಾಗ ಈ ಒಪ್ಪಂದ ಜಾರಿಯಾಗಿತ್ತು. ಆದರೆ ಅಮೇರಿಕಾ 2018 ರಲ್ಲಿ ಇರಾನ್ ಜೊತೆಗಿನ ನ್ಯೂಕ್ಲಿಯರ್ ಡೀಲ್ ನ್ನು ಏಕಪಕ್ಷೀಯವಾಗಿ ಹಿಂಪಡೆದು, ಮತ್ತೆ ನಿರ್ಬಂಧಗಳನ್ನು ವಿಧಿಸಿದ್ದರ ಪರಿಣಾಮ ಇರಾನ್ ಜೊತೆಗೆ ಭಾರತದ ಒಪ್ಪಂದಗಳು ಅಸ್ಥಿರತೆ ಎದುರಿಸಿತ್ತು. ಆಗ ಡೊನಾಲ್ಡ್ ಟ್ರಂಪ್ ಆಡಳಿತವಿದ್ದ ಅಮೇರಿಕಾವನ್ನು ಭಾರತ ಸಂಭಾಳಿಸಿ ನಿರ್ಬಂಧಗಳ ಹೊರತಾಗಿಯೂ, ತಾತ್ಕಾಲಿಕ ಕ್ರಮಗಳ ಆಧಾರದಲ್ಲಿ ಇರಾನ್ ಗೆ ಸಂಬಂಧಿಸಿದ ತನ್ನ ಹಿತಾಸಕ್ತಿಗಳನ್ನು ಮುಂದುವರೆಸುವಲ್ಲಿ ಯಶಸ್ವಿಯಾಗಿತ್ತು!

Chabahar Port, US president Joe Biden-PM Narendra Modi
ಪನ್ನುನ್ ಹತ್ಯೆ ಯತ್ನ ಆರೋಪ: ಭಾರತದ ಕೈವಾಡಕ್ಕೆ ಆಧಾರಗಳಿಲ್ಲ; ಮಿತ್ರನ ಬೆನ್ನಿಗೆ ನಿಂತ ರಷ್ಯಾ

ಗಮನಾರ್ಹ ವಿಷಯವೆಂದರೆ, ಭಾರತ ಅಮೇರಿಕಾದೊಂದಿಗೆ ನಿಕಟವಾಗುತ್ತಿರುವುದು ಇತ್ತೀಚಿನ ದಶಕಗಳಲ್ಲಿ. ಅದಕ್ಕೂ ಮುನ್ನ ಅಫ್ಘಾನಿಸ್ಥಾನವನ್ನು ನಿಯಂತ್ರಿಸುವ ವಿಷಯದಲ್ಲಿ ಅಮೇರಿಕಾದ ವಿಶ್ವಾಸ ಗಳಿಸುವಲ್ಲಿ ಪಾಕಿಸ್ತಾನ ಮುಂದಿತ್ತು. ಈಗ ಪಾಕಿಸ್ತಾನದೊಂದಿಗೆ ಅಮೇರಿಕಾದ ದ್ವಿಪಕ್ಷೀಯ ಸಂಬಂಧ ಹಿಂದಿನಷ್ಟು ಉತ್ತಮವಾಗಿಯೇನು ಇಲ್ಲ. ಪಾಕಿಸ್ತಾನ ಚೀನಾದೊಂದಿಗೆ ನಿಕಟವಾದಷ್ಟೂ ಅಮೇರಿಕಾ ಭಾರತದೊಂದಿಗೆ ಕೈಜೋಡಿಸಲು ಮುಂದಾಗುತ್ತಿದೆ.

ಭೂಗಡಿಗಳಿಂದಲೇ ಸುತ್ತುವರೆದಿರುವ ಅಫ್ಘಾನಿಸ್ಥಾನಕ್ಕೆ ಚೀನಾ-ಪಾಕಿಸ್ತಾನದ ಅಡೆತಡೆಗಳಿಲ್ಲದೇ ಸರಕುಗಳು ಪೂರೈಕೆಯಾಗಲು ಚಬಹಾರ್ ಬಂದರು ಒಂದೇ ಮಾರ್ಗ. 2021 ವರೆಗೂ ಅಫ್ಘಾನಿಸ್ಥಾನದಲ್ಲಿ ಅಮೇರಿಕಾದ ಸೇನೆ ಇದ್ದ ಕಾರಣ, ಚಬಹಾರ್ ಬಂದರಿನ ಕಾರ್ಯಾಚರಣೆಗಳಿಗೆ ಮಾತ್ರ ಅಮೇರಿಕಾ ನಿರ್ಬಂಧಗಳಿಂದ ಒಂದಷ್ಟು ವಿನಾಯಿತಿ ನೀಡಿತ್ತು. ಒಂದು ಅಂಕಿ-ಅಂಶದ ಪ್ರಕಾರ, 2018 ರಲ್ಲಿ 6 ತಿಂಗಳ ಅವಧಿಯಲ್ಲಿ ಈ ಬಂದರು 90,000 ಯುನಿಟ್ ಗಳಷ್ಟು ಕಂಟೇನರ್ ಟ್ರಾಫಿಕ್ ನಿರ್ವಹಿಸಿತ್ತು, ಇಲ್ಲಿಂದ 2.5 ಮಿಲಿಯನ್ ಟನ್ ಗೋಧಿ ಮತ್ತಿತರ ನೆರವಿನ ಸರಕುಗಳು ಭಾರತದಿಂದ ಅಫ್ಘಾನಿಸ್ಥಾನಕ್ಕೆ ಸಾಗಣೆಯಾಗಿತ್ತು.

ಇದರ ಅರ್ಥ ಸ್ಪಷ್ಟ ಎಲ್ಲಿಯವರೆಗೂ ಅಫ್ಘಾನಿಸ್ಥಾನದಲ್ಲಿ ಅಮೇರಿಕಾ ಸೇನೆ ಇತ್ತೋ ಅಲ್ಲಿಯವರೆಗೂ ಚಬಹಾರ್ ಬಂದರಿನಲ್ಲಿ ಭಾರತದ ಹಿತಾಸಕ್ತಿಗಳಿಗೆ ಅಮೇರಿಕಾ ಮೃದು ಧೋರಣೆ ತೋರುವ ಯೋಚನೆ ಮಾಡುತ್ತಿತ್ತು. 2018 ರಲ್ಲಿ ಅಮೇರಿಕಾ ಪಡೆಗಳು ಕಾಬೂಲ್ ನಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಸರ್ಕಾರವನ್ನು ಬೆಂಬಲಿಸುತ್ತಿದ್ದವು ಮತ್ತು ಚಬಹಾರ್ ಬಂದರಿನಲ್ಲಿ ಭಾರತಕ್ಕೆ ನಿರ್ಬಂಧಗಳ ವಿನಾಯಿತಿಯಿಂದ ಪರೋಕ್ಷವಾಗಿ ಕಾಬೂಲ್ ಸಹ ಫಲಾನುಭವಿಯಾಗಿತ್ತು. ಆದರೆ ಈಗ ಅಫ್ಘಾನಿಸ್ಥಾನದಿಂದ ಅಮೇರಿಕಾ ತನ್ನ ಸೇನೆಯನ್ನು ಹಿಂತೆಗೆದುಕೊಂಡಿದೆ. ಅಫ್ಘಾನಿಸ್ಥಾನದಲ್ಲಿ ಈಗ ತಾಲೀಬಾನ್ ಆಡಳಿತವಿದೆ. ಈ ಪ್ರಾಂತ್ಯದಲ್ಲಿ ಅಮೇರಿಕಾದ ಹಿತಾಸಕ್ತಿಗಳೂ ಬದಲಾಗಿದೆ. ಅಮೇರಿಕಾದ ಗಮನ ಈಗ ಇರಾನ್ ನ್ನು ಕಟ್ಟಿ ಹಾಕುವುದರತ್ತ ಹೆಚ್ಚು ಕೇಂದ್ರೀಕೃತವಾಗಿದೆ.

ಜೊತೆಗೆ ಇಲ್ಲಿ ಚಬಹಾರ್ ಬಂದರಿನ ಮೂಲಕ ಭಾರತ ಹೈಡ್ರೋಕಾರ್ಬನ್ ಸಮೃದ್ಧವಾದ Eurasian ಪ್ರದೇಶದೊಂದಿಗೆ, ಪ್ರಮುಖವಾಗಿ, ರಷ್ಯಾ ಜೊತೆಗೆ ಯಾವುದೇ ಅಡೆತಡೆಗಳಿಲ್ಲದೇ ವ್ಯಾಪಾರ ವಹಿವಾಟುಗಳನ್ನು ನಡೆಸುವುದು ಅಮೇರಿಕಾಗೆ ಬೇಕಿಲ್ಲ. ಅಮೇರಿಕಾದ ಈ ಮನಸ್ಥಿತಿ ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ, ಭಾರತ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುತ್ತಿದೆ ಎಂದು ರೋಧಿಸಿದ್ದಾಗಲೂ ಬಹಿರಂಗವಾಗಿತ್ತು. ಆ ದಿನಗಳಲ್ಲಿಯೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಯುರೋಪ್ ಹಾಗೂ ಅಮೇರಿಕಾ ದೇಶಗಳ ಸ್ವಹಿತಾಸಕ್ತಿ- hypocrisyಗಳನ್ನು ಬಹಿರಂಗ ವೇದಿಕೆಗಳಲ್ಲಿ ಟೀಕಿಸಿ ಪಶ್ಚಿಮದ ದೇಶಗಳನ್ನು ಸುಮ್ಮನಾಗಿಸಿದ್ದರು.

ಭಾರತ ಇರಾನ್ ಹಾಗೂ ಚಬಹಾರ್ ವಿಷಯದಲ್ಲಿ ಅಮೇರಿಕಾದ ನೀತಿಗಳ ಬದಲಾವಣೆಯಾದಂತೆಲ್ಲಾ ಅಸ್ಥಿರತೆ ಎದುರಿಸಿದೆ. ಇತ್ತೀಚಿನ ದಿನಗಳಲ್ಲಿ ಅಮೇರಿಕಾದ ನೀತಿ ಏನೇ ಇರಲಿ, ಅದಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿ, ಬೆದರಿಕೆಗೂ ಬಗ್ಗದೇ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದರತ್ತ ಮುನ್ನಡೆಯುತ್ತಿದೆ.

Chabahar Port, US president Joe Biden-PM Narendra Modi
US Sanction: ಇರಾನ್ ಜೊತೆ ವಹಿವಾಟು ಆರೋಪ, ಭಾರತ ಮೂಲದ 3 ಕಂಪನಿ ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ

ಭಾರತಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆಗಳೇನು?

ರಷ್ಯಾದಿಂದ ತೈಲ ಹಾಗೂ ಯುದ್ಧ ಉಪಕರಣಗಳ ಖರೀದಿ ವಿಷಯವಾಗಿ ಸ್ಯಾಂಕ್ಷನ್ಸ್ ಬೆದರಿಕೆ ಹಾಕಿ ಅಮೇರಿಕಾ ಈಗಾಗಲೇ ತೀವ್ರ ಮುಜುಗರ ಎದುರಿಸಿದೆ. ಈಗ ಮತ್ತೆ ಇರಾನ್ ವಿಷಯದಲ್ಲಿ ನಿರ್ಬಂಧ ವಿಧಿಸುವ ಮಾತನ್ನಾಡುತ್ತಿದೆ. ಒಂದೆಡೆ ಚೀನಾವನ್ನು ನಿಯಂತ್ರಣದಲ್ಲಿಡಲು ಅಮೇರಿಕಾಗೆ ಭಾರತ ಅತ್ಯಗತ್ಯ ಮತ್ತೊಂದೆಡೆ ಇರಾನ್ ಮೇಲಿನ ನಿರ್ಬಂಧಗಳನ್ನು ಸಡಿಲಿಸುವುದಕ್ಕೂ ಸಿದ್ಧವಿಲ್ಲದ ಗೊಂದಲದ ಪರಿಸ್ಥಿತಿಯಲ್ಲಿ ಅಮೇರಿಕ ಇದೆ.

ಜೊತೆಗೆ ಭಾರತದಲ್ಲಿನ ಅವಕಾಶಗಳು ವಿಫುಲವಾಗಿದ್ದು, ಈ ಹಿಂದಿನಂತೆ ಅಮೇರಿಕಾಗೆ ಭಾರತವನ್ನು ನಿರ್ಲಕ್ಷ್ಯ ಮಾಡಲು ಬರುವುದಿಲ್ಲ. ಭಾರತ ಸದ್ಯಕ್ಕೆ ಜಗತ್ತಿನಲ್ಲಿ ವೇಗಗತಿಯ ಆರ್ಥಿಕ ಬೆಳವಣಿಗೆಯನ್ನು ಹೊಂದಿದೆ. ಭಾರತದ ಆರ್ಥಿಕತೆ ಶೀಘ್ರವೇ 5 ಟ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ. ಭಾರತ ಈ ಗುರಿ ತಲುಪಬೇಕೆಂದರೆ 2030 ರ ವೇಳೆಗೆ ಜಾಗತಿಕವಾಗಿ ಉತ್ಪಾದನಾ ಕೇಂದ್ರ (manufacturing hub) ಆಗುವುದು ಎಷ್ಟು ಮುಖ್ಯವೋ, ಬೆಳವಣಿಗೆಯ ಗತಿ ಕಾಪಿಟ್ಟುಕೊಳ್ಳುವುದೂ ಅಷ್ಟೇ ಮುಖ್ಯ. ಈ ಗುರಿ ತಲುಪಲು ಯುರೇಷ್ಯಾದಾದ್ಯಂತ ಸಾಗಣೆ ಮಾಡುವುದಕ್ಕೆ ವಿಶ್ವಾಸಾರ್ಹ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳು ಮತ್ತು ಸಂಪರ್ಕ ಅಭಿವೃದ್ಧಿಪಡಿಸಿಕೊಳ್ಳುವ ದೃಷ್ಟಿಯಿಂದ ಭಾರತಕ್ಕೆ ಚಬಹಾರ್ ಅತ್ಯಂತ ಮಹತ್ವದ್ದಾಗಿದೆ. ಭಾರತದಂತಹ ವೇಗಗತಿಯ ಆರ್ಥಿಕತೆ ಮೇಲೆ ನಿರ್ಬಂಧ ವಿಧಿಸುವಂತಹ ದುಸ್ಸಾಹಸಕ್ಕೆ ಅಮೇರಿಕಾ ಈ ಹಂತದಲ್ಲಿ ಕೈ ಹಾಕಲಾರದು, ಹೆಚ್ಚೆಂದರೆ ಚಬಹಾರ್ ನಲ್ಲಿ ತೊಡಗಿಸಿಕೊಳ್ಳುವ ಸಂಸ್ಥೆಗಳು ನಿರ್ಬಂಧ ಎದುರಿಸಬೇಕಾಗಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ಭಾರತದ ಚಬಹಾರ್ ಬಂದರು ಯೋಜನೆಯಿಂದ ಈ ಇಡೀ ಪ್ರಾಂತ್ಯಕ್ಕೆ ಹೇಗೆಲ್ಲಾ ಅನುಕೂಲವಾಗಲಿದೆ ಎಂಬುದನ್ನು ಭಾರತ ಅಮೇರಿಕಾಗೆ ಮನವರಿಕೆ ಮಾಡಿಕೊಡುವ ವಿಶ್ವಾಸವನ್ನು ವಿದೇಶಾಂಗ ಸಚಿವ ಜೈಶಂಕರ್ ವ್ಯಕ್ತಪಡಿಸಿದ್ದಾರೆ. ಭಾರತ-ಅಮೇರಿಕಾದಲ್ಲಿ ಸದ್ಯದಲ್ಲೇ ಚುನಾವಣೆ ಮುಗಿದು ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರಗಳು ಈ ವಿಷಯವನ್ನು ಹೇಗೆ ನಿಭಾಯಿಸುವುದೆಂಬ ಕುತೂಹಲ ಇದ್ದೇ ಇದೆ.

-ಶ್ರೀನಿವಾಸ್ ರಾವ್

srinivas.v4274@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com