
ಮಾಸ್ಕೋ: ಸಿಖ್ ಪ್ರತ್ಯೇಕತಾವಾದಿ ಉಗ್ರ ಗುರ್ಪತ್ವಂತ್ ಸಿಂಗ್ ಪನ್ನು ಹತ್ಯೆ ಯತ್ನದ ಆರೋಪದಲ್ಲಿ ರಷ್ಯಾ ಭಾರತದ ಬೆನ್ನಿಗೆ ನಿಂತಿದೆ.
ಅಮೇರಿಕಾ ಭಾರತದ ವಿರುದ್ಧ ಹೊರಿಸಿರುವ ಆರೋಪಗಳಿಗೆ ರಷ್ಯಾ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಅಮೇರಿಕಾ ಪನ್ನುನ್ ಪ್ರಕರಣದಲ್ಲಿ ಭಾರತೀಯರ ಕೈವಾಡವಿದೆ ಎಂಬ ಆರೋಪಗಳಿಗೆ ಈ ವರೆಗೂ ವಿಶ್ವಾಸಾರ್ಹವಾದ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ಹೇಳಿದ್ದಾರೆ.
ಈ ವಿಷಯದಲ್ಲಿ ಸಾಕ್ಷ್ಯಾಧಾರಗಳಿಲ್ಲದೇ ಊಹೆಗಳನ್ನು ಮಾಡುವುದು ಸ್ವೀಕಾರಾರ್ಹವಾದುದ್ದಲ್ಲ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ, ಮಾರಿಯಾ ಜಖರೋವಾ ಹೇಳಿದ್ದಾರೆ.
ಯುಎಸ್ ರಾಷ್ಟ್ರೀಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ, ಹಾಗೆಯೇ ಭಾರತೀಯ ದೇಶದ ಅಭಿವೃದ್ಧಿಯ ಐತಿಹಾಸಿಕ ಸಂದರ್ಭವನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಅದು ಭಾರತವನ್ನು ಒಂದು ದೇಶವನ್ನಾಗಿ ಅಗೌರವಿಸುತ್ತದೆ ಎಂದು ಮಾರಿಯಾ ಜಖರೋವಾ ಅಭಿಪ್ರಾಯಪಟ್ಟಿದ್ದಾರೆ.
ಶತ್ರುಗಳ ವಿರುದ್ಧ ರಷ್ಯಾ ಹಾಗೂ ಸೌದಿ ಅರೇಬಿಯಾಗಳು ನಡೆಸಿದ ಕಾರ್ಯಾಚರಣೆ ಮಾದರಿಯಲ್ಲಿಯೇ ಭಾರತವೂ ಕಾರ್ಯಾಚರಣೆ ನಡೆಸುತ್ತಿದೆ ಎಂದು ವಾಷಿಂಗ್ ಟನ್ ಪೋಸ್ಟ್ ವರದಿ ಪ್ರಕಟಿಸಿದ್ದರ ಕುರಿತ ಪ್ರಶ್ನೆಗಳಿಗೆ ಮಾರಿಯಾ ಜಖರೋವಾ ಉತ್ತರಿಸಿದ್ದಾರೆ.
"ವಾಷಿಂಗ್ಟನ್ ಪೋಸ್ಟ್, 'ದಮನಕಾರಿ ಆಡಳಿತ' ಮತ್ತು ನೀವು ಉಲ್ಲೇಖಿಸಿದ ಎಲ್ಲವನ್ನೂ ವಾಷಿಂಗ್ಟನ್, DC ಗೆ ಸಂಬಂಧಿಸಿದಂತೆ ಬಳಸಬೇಕು. ದೇಶೀಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ವಾಷಿಂಗ್ಟನ್‌ಗಿಂತ ಹೆಚ್ಚು ದಮನಕಾರಿ ಆಡಳಿತವನ್ನು ಕಲ್ಪನೆ ಮಾಡಿಕೊಳ್ಳುವುದು ಕಷ್ಟ ಎಂದು ಅಮೇರಿಕಾಗೆ ಮಾರಿಯಾ ಜಖರೋವಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
Advertisement