ಪಾಕಿಸ್ತಾನ - ಬಾಂಗ್ಲಾದೇಶ ಬಾಂಧವ್ಯ ಎಂದಿಗಾದರೂ ಸಾಧ್ಯವೇ? (ಜಾಗತಿಕ ಜಗಲಿ)

1971ರ ವಿಮೋಚನಾ ಯುದ್ಧದ ಬಳಿಕ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳು ಸಂಪೂರ್ಣವಾಗಿ ಭಿನ್ನವಾದ ಆರ್ಥಿಕ ಮತ್ತು ಕಾರ್ಯತಂತ್ರದ ಮಾರ್ಗಗಳನ್ನು ಹಿಡಿದಿದ್ದವು. ಅವೆರಡು ದೇಶಗಳ ಸಂವಹನದ ತಳಹದಿಯೇ ಉದ್ವಿಗ್ನವಾಗಿತ್ತು.
ಪಾಕಿಸ್ತಾನ - ಬಾಂಗ್ಲಾದೇಶ ಬಾಂಧವ್ಯ ಎಂದಿಗಾದರೂ ಸಾಧ್ಯವೇ? (ಜಾಗತಿಕ ಜಗಲಿ)
Updated on

ಇತ್ತೀಚಿನ ಒಂದು ಪ್ರಮುಖ ರಾಜತಾಂತ್ರಿಕ ಬೆಳವಣಿಗೆಯಲ್ಲಿ, ಬಾಂಗ್ಲಾದೇಶ ತಾನು ಪಾಕಿಸ್ತಾನದ ಅಮನ್ 2025 ನೌಕಾಪಡೆಯ ಅಭ್ಯಾಸದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದೆ. ಈ ಮೂಲಕ ಒಂದು ದಶಕಕ್ಕೂ ಹೆಚ್ಚಿನ ಸಮಯದ ಬಳಿಕ, ಇದೇ ಮೊದಲ ಬಾರಿಗೆ ಬಾಂಗ್ಲಾದೇಶದ ಪ್ರಮುಖ ಯುದ್ಧನೌಕೆ ಪಾಕಿಸ್ತಾನದತ್ತ ನಿಯೋಜನೆಗೊಳ್ಳಲಿದೆ. ಪ್ರಸ್ತುತ ನೌಕಾಪಡೆಯ ಜಂಟಿ ಅಭ್ಯಾಸಕ್ಕೂ ಮುನ್ನ, ಪಾಕಿಸ್ತಾನದ ಐಎಸ್ಐ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಅಸೀಮ್ ಮಲಿಕ್ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದು, ಬಾಂಗ್ಲಾದೇಶ ಮತ್ತು ಪಾಕಿಸ್ತಾನಿ ಸೇನೆಗಳ ಜಂಟಿ ಮಿಲಿಟರಿ ತರಬೇತಿಯ ಕುರಿತು ಸಮಾಲೋಚನೆ ನಡೆಸಿದ್ದಾರೆ. ಇದು ಐತಿಹಾಸಿಕವಾಗಿ ಮಂಜುಗಡ್ಡೆಯಂತಾಗಿದ್ದ ಬಾಂಗ್ಲಾದೇಶ - ಪಾಕಿಸ್ತಾನಗಳ ಸಂಬಂಧವನ್ನು ಮರಳಿ ಸರಿಪಡಿಸುವ ಪ್ರಯತ್ನದ ಆರಂಭದಂತೆ ಕಂಡುಬರುತ್ತಿದೆ. ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರ ನಿರ್ಗಮನದ ಬಳಿಕ, ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ಅವರ ನೇತೃತ್ವದ ಮಧ್ಯಂತರ ಸರ್ಕಾರದ ಆಗಮನ ಮತ್ತು ಪಾಕಿಸ್ತಾನದ ಜೊತೆಗಿನ ಸ್ನೇಹಗಳು ಏಕಕಾಲದಲ್ಲಿ ಸಂಭವಿಸುತ್ತಿರುವುದು ಮಾತ್ರ ಕಾಕತಾಳೀಯ ಎನ್ನಲಾಗದು. ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ ನಡುವಿನ ಸ್ನೇಹದ ವೃದ್ಧಿ ಭಾರತಕ್ಕೆ ಪ್ರಾದೇಶಿಕ ಭದ್ರತೆಯ, ಅದರಲ್ಲೂ ತನ್ನ ಈಶಾನ್ಯದ ಗಡಿಯ ಭದ್ರತೆಯ ಕುರಿತು ಆತಂಕಕ್ಕೆ ಕಾರಣವಾಗಿದೆ.

ಈಗೇನೋ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಸ್ನೇಹ ಸಂಬಂಧದ ಮಾತುಗಳನ್ನು ಆಡುತ್ತಿವೆ. ಆದರೆ, ಅವುಗಳ ಸಂಬಂಧದ ಇತಿಹಾಸ ಪೂರ್ತಿ ಮುರಿದು ಬಿದ್ದ ಭರವಸೆಗಳು, ಅಪನಂಬಿಕೆಗಳು ಮತ್ತು ಪರಿಹಾರ ಕಾಣದ ಕುಂದುಕೊರತೆಗಳಿಂದಲೇ ತುಂಬಿವೆ. 1971ರ ವಿಮೋಚನಾ ಯುದ್ಧದ ಬಳಿಕ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳು ಸಂಪೂರ್ಣವಾಗಿ ಭಿನ್ನವಾದ ಆರ್ಥಿಕ ಮತ್ತು ಕಾರ್ಯತಂತ್ರದ ಮಾರ್ಗಗಳನ್ನು ಹಿಡಿದಿದ್ದವು. ಅವೆರಡು ದೇಶಗಳ ಸಂವಹನದ ತಳಹದಿಯೇ ಉದ್ವಿಗ್ನವಾಗಿತ್ತು. ಈಗ ಹೊಸದಾಗಿ ಆರಂಭಗೊಂಡಿರುವ ಪಾಕಿಸ್ತಾನ - ಬಾಂಗ್ಲಾದೇಶಗಳ ಸ್ನೇಹವೂ ಇದಕ್ಕೆ ಹೊರತಲ್ಲ. ಐತಿಹಾಸಿಕ ವಿರೋಧ ಮತ್ತು ರಚನಾತ್ಮಕ ಅಸಾಮರಸ್ಯಗಳ ಕಾರಣದಿಂದಾಗಿ ಈ ಬಾರಿಯ ಸ್ನೇಹವೂ ಮುರಿದುಬೀಳುವ ಸಾಧ್ಯತೆಗಳೇ ಹೆಚ್ಚಿವೆ.

ಇಂದಿಗೂ ಕಾಡುವ 1971ರ ಯುದ್ಧ

ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ ಸಂಬಂಧವನ್ನು 1971ರ ವಿಮೋಚನಾ ಯುದ್ಧ ಉಂಟುಮಾಡಿರುವ ಗಾಯಗಳೇ ಬಣ್ಣಿಸುತ್ತವೆ. ಆ ಸಂದರ್ಭದಲ್ಲಿ ಪಾಕಿಸ್ತಾನಿ ಸೇನೆ ಬಾಂಗ್ಲಾದೇಶದಲ್ಲಿ ನಡೆಸಿದ ಸಾಮೂಹಿಕ ಹತ್ಯಾಕಾಂಡ, ಲೈಂಗಿಕ ಹಿಂಸಾಚಾರ, ಮತ್ತು ಬಲವಂತದ ಸ್ಥಳಾಂತರಗಳಂತಹ ಹಿಂಸಾಚಾರಗಳು ಬಾಂಗ್ಲಾದೇಶದ ರಾಷ್ಟ್ರೀಯ ಪ್ರಜ್ಞೆಯಲ್ಲಿ ಅಳಿಸಲಾಗದ ಗುರುತನ್ನು ಮೂಡಿಸಿವೆ. ಆ ಹಿಂಸಾಚಾರದಲ್ಲಿ 3ರಿಂದ 30 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ಆ ಭೀಕರ ಕ್ರೌರ್ಯ ಎಸಗಿದ್ದಕ್ಕೆ ಕ್ಷಮಾಪಣೆ ಕೋರಲು ಅಥವಾ ತಾನು ನಡೆಸಿದ ನರಮೇಧವನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಇಂದಿಗೂ ನಿರಾಕರಿಸುತ್ತಿದ್ದು, ಇದು ಬಾಂಗ್ಲಾದೇಶಕ್ಕಾದ ಆಘಾತವನ್ನು ಇನ್ನಷ್ಟು ಹೆಚ್ಚಿಸಿದೆ.

ವಿಮೋಚನಾ ಯುದ್ಧದ ಸಂದರ್ಭದಲ್ಲಿ ನಡೆದ ಹಿಂಸಾಚಾರ ಇಂದಿಗೂ ಢಾಕಾಗೆ ಮುಖ್ಯ ವಿಚಾರವಾಗಿದೆ. ಕೈರೋದಲ್ಲಿ ನಡೆದ ಡಿ-8 ಶೃಂಗಸಭೆಯಲ್ಲಿ ಬಾಂಗ್ಲಾದೇಶದ ಮುಖ್ಯ ಸಲಹೆಗಾರರಾದ ಮುಹಮ್ಮದ್ ಯೂನುಸ್ ಅವರು ಪಾಕಿಸ್ತಾನ ತಾನು ಹಿಂದೆ ನಡೆಸಿದ ಅಪರಾಧಕ್ಕೆ ಕ್ಷಮೆಯಾಚಿಸಬೇಕು ಎಂದು ಮತ್ತೊಮ್ಮೆ ಆಗ್ರಹಿಸಿದ್ದರು. ಆದರೆ ಇಸ್ಲಾಮಾಬಾದ್ ಮತ್ತೊಮ್ಮೆ ಈ ವಿಚಾರವನ್ನು ಕಡೆಗಣಿಸಿ, ಐತಿಹಾಸಿಕವಾಗಿ ತಲೆದೋರಿರುವ ಅಪನಂಬಿಕೆಯನ್ನು ಪರಿಹರಿಸುವಲ್ಲಿನ ತನ್ನ ವೈಫಲ್ಯವನ್ನು ಮುಂದುವರಿಸಿದೆ. ಐತಿಹಾಸಿಕ ವಿಚಾರಗಳನ್ನು ಸ್ಪಷ್ಟವಾಗಿ ಪರಿಹರಿಸಿಕೊಳ್ಳದಿದ್ದರೆ, ರಾಜತಾಂತ್ರಿಕ ಪ್ರಗತಿ ಕೇವಲ ಒಂದು ಕನಸಾಗಿ ಉಳಿಯುವ ಸಾಧ್ಯತೆಗಳಿವೆ.

ಪಾಕಿಸ್ತಾನ - ಬಾಂಗ್ಲಾದೇಶ ಬಾಂಧವ್ಯ ಎಂದಿಗಾದರೂ ಸಾಧ್ಯವೇ? (ಜಾಗತಿಕ ಜಗಲಿ)
ಬಾಂಗ್ಲಾದೇಶದ ಚುನಾವಣಾ ಅನಿಶ್ಚಿತತೆ ಕೊನೆಗೊಳಿಸಲಿದೆಯೇ ಭಾರತ? (ಜಾಗತಿಕ ಜಗಲಿ)

ಮೇಲ್ನೋಟದ ರಾಜತಾಂತ್ರಿಕತೆ, ಪ್ರಾಯೋಗಿಕ ವೈಫಲ್ಯ

ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಮೇಲ್ನೋಟಕ್ಕೆ ಆಗಾಗ ರಾಜತಾಂತ್ರಿಕ ಮಾತುಕತೆಗಳಲ್ಲಿ ತೊಡಗಿಕೊಳ್ಳುತ್ತವೆ. ಇದು ಮೇಲ್ನೋಟಕ್ಕೆ ಭರವಸೆದಾಯಕವಾಗಿ ಕಾಣಬಹುದು. ಬಾಂಗ್ಲಾದೇಶ ಪಾಕಿಸ್ತಾನಗಳ ನಡುವೆ ನೇರ ವಿಮಾನ ಸಂಚಾರ, ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ ವೃದ್ಧಿಯಂತಹ ಸಾಧ್ಯತೆಗಳು ಆಗಾಗ ಸುದ್ದಿಯಾಗುವುದುಂಟು. ಆದರೆ, ಇಂತಹ ಪ್ರಯತ್ನಗಳು ಕೇವಲ ಮಾತಿನ ಹಂತದಲ್ಲಿರುತ್ತವೆಯೇ ಹೊರತು, ಕಾರ್ಯರೂಪಕ್ಕೆ ಬರುವುದಿಲ್ಲ. ಉದಾಹರಣೆಗೆ, ಬಾಂಗ್ಲಾದೇಶ - ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಅತ್ಯಂತ ಕನಿಷ್ಠ ಪ್ರಮಾಣದಲ್ಲಿದ್ದು, ಬಾಂಗ್ಲಾದೇಶದ ಒಟ್ಟಾರೆ ವ್ಯಾಪಾರದ 1%ಗೂ ಕಡಿಮೆ ಪಾಲು ಹೊಂದಿದೆ. ಹಲವಾರು ಬಾರಿ ಮಾತುಕತೆಗಳನ್ನು ನಡೆಸಿದ್ದರೂ, 1971ರಲ್ಲಿ ನಿಲುಗಡೆಯಾಗಿರುವ ಬಾಂಗ್ಲಾದೇಶ - ಪಾಕಿಸ್ತಾನಗಳ ನಡುವಿನ ನೇರ ವಿಮಾನ ಹಾರಾಟ ಇಂದಿಗೂ ಜಾರಿಗೆ ಬಂದಿಲ್ಲ.

ಇಂತಹ ಪ್ರಮುಖ ವಿಚಾರಗಳ ಕುರಿತಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ ಹೊಸ ಸ್ನೇಹ ಕೇವಲ ಮೇಲ್ನೋಟಕ್ಕಷ್ಟೇ ಸೀಮಿತ ಎಂಬ ಭಾವನೆಯನ್ನು ಬಲಪಡಿಸುತ್ತಿದೆ. ಇಂತಹ ಸಾಂಕೇತಿಕ ಕ್ರಮಗಳು ಆ ಕ್ಷಣದ ಮಟ್ಟಿಗೆ ಉದ್ವಿಗ್ನತೆಗಳನ್ನು ಕಡಿಮೆಗೊಳಿಸಬಹುದಾದರೂ, ದೀರ್ಘಕಾಲೀನ ಸ್ನೇಹ ಸಂಬಂಧಕ್ಕೆ, ಸಹಯೋಗಕ್ಕೆ ಅವಶ್ಯಕವಾದ ಪರಸ್ಪರ ವಿಶ್ವಾಸವನ್ನು ಮೂಡಿಸಲು ಸಾಧ್ಯವಿಲ್ಲ.

ಆರ್ಥಿಕ ಮತ್ತು ಕಾರ್ಯತಂತ್ರದ ವಾಸ್ತವಗಳಲ್ಲಿನ ಭಿನ್ನತೆ

ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಪ್ರತ್ಯೇಕ ದೇಶಗಳಾದ ಬಳಿಕ, ಅವುಗಳ ಆರ್ಥಿಕ ಪಥಗಳು ಸಾಕಷ್ಟು ಭಿನ್ನವಾಗಿವೆ. ಬಾಂಗ್ಲಾದೇಶ ತಾನು ಹೊಂದಿರುವ ಉತ್ತಮ ವಸ್ತ್ರ ಉದ್ಯಮ, ಮೂಲಭೂತ ಅಭಿವೃದ್ಧಿ, ಮತ್ತು ಸ್ಥಿರವಾದ ಹಣದ ಹರಿವಿನ ಮೂಲಕ ಒಂದು ಪ್ರಾದೇಶಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಅತಿಯಾದ ಹಣದುಬ್ಬರ, ಖಾಲಿಯಾಗುತ್ತಿರುವ ವಿದೇಶೀ ಮೀಸಲು, ಮತ್ತು ತೀವ್ರ ರಾಜಕೀಯ ಅಸ್ಥಿರತೆಗಳ ಸುಳಿಗೆ ಸಿಲುಕಿರುವ ಪಾಕಿಸ್ತಾನದ ಆರ್ಥಿಕತೆ ಯಾವಾಗ ಬೇಕಾದರೂ ಕುಸಿಯುವ ಹಂತದಲ್ಲಿದೆ.

ಕಾರ್ಯತಂತ್ರದ ದೃಷ್ಟಿಯಿಂದ ನೋಡಿದರೆ, ಬಾಂಗ್ಲಾದೇಶ ಪ್ರಾದೇಶಿಕ ಸ್ಥಿರತೆ ಮತ್ತು ಆರ್ಥಿಕ ಒಳಗೊಳ್ಳುವಿಕೆಯ ನೀತಿಗಳನ್ನು ಅನುಸರಿಸುತ್ತಿದ್ದು, ಇದು ಭಾರತದೊಡನೆ ಮತ್ತು ಬಿಐಎಂಎಸ್‌ಟಿಇಸಿ ರೀತಿಯ ಬಹುರಾಷ್ಟ್ರೀಯ ಒಕ್ಕೂಟಗಳೊಡನೆ ಹೊಂದಿಕೊಳ್ಳಲು ಸೂಕ್ತವಾಗಿದೆ. ಆದರೆ, ಪಾಕಿಸ್ತಾನದ ಗಮನ ಭಾರತದ ಜೊತೆಗಿನ ತನ್ನ ವೈರತ್ವದ ಮೇಲಿದ್ದು, ಅದು ಚೀನಾ ಮೇಲಿನ ಅತಿಯಾದ ಅವಲಂಬನೆಗೆ ಸಿಲುಕಿ, ಢಾಕಾ ಪಾಲಿಗೆ ಅತ್ಯಂತ ಕನಿಷ್ಠ ಕಾರ್ಯತಂತ್ರದ ಮೌಲ್ಯ ಹೊಂದಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಸಂಪೂರ್ಣವಾಗಿ ಭಿನ್ನ ಆದ್ಯತೆಗಳನ್ನು ಹೊಂದಿದ್ದು, ಅವೆರಡರ ನಡುವೆ ಉತ್ತಮ ಸಹಕಾರ ಅಸಂಭವಾಗಿ ತೋರುತ್ತಿದೆ.

ಸಾರ್ವಜನಿಕ ಭಾವನೆಗಳು: ಸೇತುವೆ ನಿರ್ಮಿಸಲಾಗದ ಕಂದಕ

ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿರುವ ಸಾರ್ವಜನಿಕ ಅಭಿಪ್ರಾಯಗಳು ಅವುಗಳ ಸಂಬಂಧವನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ. ಬಾಂಗ್ಲಾದೇಶದ ಪಾಲಿಗೆ ವಿಮೋಚನಾ ಯುದ್ಧ ಕೇವಲ ಒಂದು ಐತಿಹಾಸಿಕ ಘಟನೆಯಲ್ಲ. ಬದಲಿಗೆ, ಅದು ಬಾಂಗ್ಲಾದೇಶದ ರಾಷ್ಟ್ರೀಯ ಗುರುತಿನ‌ ತಳಹದಿ. 1971ರ ಯುದ್ಧದ ವೇಳೆ ನಡೆದ ಹಿಂಸಾಚಾರಗಳು, ಅದನ್ನು ಪಾಕಿಸ್ತಾನ ಒಪ್ಪಿಕೊಂಡು ಕ್ಷಮೆ ಕೋರಬೇಕೆಂಬ ಆಗ್ರಹಗಳು, ನ್ಯಾಯಕ್ಕಾಗಿ ಆಗ್ರಹಗಳು ಬಾಂಗ್ಲಾದೇಶದಲ್ಲಿ ಸಾರ್ವಜನಿಕ ಚರ್ಚೆಯ ಬಹುದೊಡ್ಡ ವಿಚಾರವಾಗಿದೆ. ಇತ್ತೀಚೆಗೆ, ಅಂದರೆ ಅಕ್ಟೋಬರ್ 2024ರಲ್ಲಿ, ಬಾಂಗ್ಲಾದೇಶದ ವಿದೇಶಾಂಗ ಸಲಹೆಗಾರ ಮಹಮ್ಮದ್ ತೌಹಿದ್ ಹೊಸೇನ್ ಅವರು ಪಾಕಿಸ್ತಾನ ಕ್ಷಮೆಯಾಚಿಸಲು ವಿಫಲವಾಗಿರುವುದು ಉಭಯ ದೇಶಗಳ ಸಂಬಂಧ ವೃದ್ಧಿಗೆ ಬಹುದೊಡ್ಡ ತೊಡಕಾಗಿದೆ ಎಂದಿದ್ದರು.

ಆದರೆ, 1971ರ ಯುದ್ಧಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಅಭಿಪ್ರಾಯಗಳು ಭಿನ್ನವಾಗಿದ್ದು, ಪ್ರತ್ಯೇಕ ದೇಶ ಬಾಂಗ್ಲಾದೇಶೀಯರ ಆಂತರಿಕ ಬೇಡಿಕೆಯಾಗಿರದೆ, ಭಾರತ ಪ್ರಾಯೋಜಿತ ಹೋರಾಟವಾಗಿತ್ತು ಎಂದು ಪಾಕಿಸ್ತಾನ ಭಾವಿಸುತ್ತದೆ. ಪಾಕಿಸ್ತಾನ ಬಾಂಗ್ಲಾದೇಶೀಯರ ಭಾವನೆಗಳನ್ನು ತಿರಸ್ಕರಿಸುವುದರಿಂದ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪರ್ಕದ ಕಡಿತವಾಗುತ್ತದೆ. ಇದರಿಂದಾಗಿ, ಜನರ ನಡುವಿನ ಸೌಹಾರ್ದ ಸಂಬಂಧದ ಸಾಧ್ಯತೆಯೇ ಇಲ್ಲವಾಗುತ್ತದೆ.

ಭೌಗೋಳಿಕ ರಾಜಕಾರಣದ ಲೆಕ್ಕಾಚಾರಗಳು: ಏಕಪಕ್ಷೀಯ ನಡೆ

ಬಾಂಗ್ಲಾದೇಶದ ರಾಜತಾಂತ್ರಿಕ ಕಾರ್ಯತಂತ್ರ ಬಹುತೇಕ ವಾಸ್ತವವಾದ ಮತ್ತು ವೈವಿಧ್ಯತೆಯ ಆಧಾರಿತವಾಗಿದೆ. ಭಾರತದ ಜೊತೆಗಿನ ಆತ್ಮೀಯ ಸ್ನೇಹವನ್ನು ನಿಭಾಯಿಸುತ್ತಲೇ, ಬಾಂಗ್ಲಾದೇಶ ವಿವಿಧ ಮೂಲಭೂತ ಅಭಿವೃದ್ಧಿ ಯೋಜನೆಗಳಿಗಾಗಿ ಚೀನಾದೊಡನೆ ಸಹಯೋಗ ಹೊಂದಿ, ಪ್ರಾದೇಶಿಕ ಮತ್ತು ಜಾಗತಿಕ ವೇದಿಕೆಗಳಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿತ್ತು. ಆದರೆ, ಪಾಕಿಸ್ತಾನದ ಗಮನವೆಲ್ಲ ಭಾರತದ ಮೇಲುಗೈಯನ್ನು ತಡೆಯುವತ್ತಲೇ ಕೇಂದ್ರಿತವಾಗಿದ್ದು, ಇದಕ್ಕಾಗಿ ಮುಖ್ಯ ಕಾರ್ಯತಂತ್ರದ ವಿಚಾರಗಳನ್ನು ಕಡೆಗಣಿಸಲೂ ಪಾಕಿಸ್ತಾನ ಸಿದ್ಧವಿದೆ.

ಬಾಂಗ್ಲಾದೇಶದ ಪಾಲಿಗೆ ಪಾಕಿಸ್ತಾನದ ಜೊತೆಗಿನ ಸ್ನೇಹ ಸಾಂಕೇತಿಕವಾಗಿರುವುದಕ್ಕಿಂತ ಹೆಚ್ಚಿನ ಲಾಭವನ್ನೇನೂ ಒದಗಿಸುವುದಿಲ್ಲ. ಪಾಕಿಸ್ತಾನದ ವಿಚಾರದಲ್ಲಿ ಬಾಂಗ್ಲಾದೇಶ ಜಾಗರೂಕವಾಗಿ ಹೆಜ್ಜೆ ಇಡುವ ಮೂಲಕ, ಕೇವಲ ಮೇಲ್ನೋಟದ, ಸಾಂಕೇತಿಕವಾದ ಸ್ನೇಹ ಪರಸ್ಪರ ಗೌರವ ಮತ್ತು ಸಮಾನ ಹಿತಾಸಕ್ತಿಗಳ ಆಧಾರದಲ್ಲಿ ನಿರ್ಮಿತವಾದ ಸ್ನೇಹಕ್ಕೆ ಬದಲಿಯಾಗಲು ಸಾಧ್ಯವಿಲ್ಲ ಎನ್ನುವುದನ್ನು ಸೂಚಿಸಿದೆ.

ಪಾಕಿಸ್ತಾನ - ಬಾಂಗ್ಲಾದೇಶ ಬಾಂಧವ್ಯ ಎಂದಿಗಾದರೂ ಸಾಧ್ಯವೇ? (ಜಾಗತಿಕ ಜಗಲಿ)
Hawala: ಕತ್ತಲ ಲೋಕದ ಬ್ಯಾಂಕಿಂಗ್ ಜಾಲ; ಡಿಜಿಟಲ್ ಜಗತ್ತಿನಲ್ಲಿ ಹವಾಲಾ ವ್ಯಾಪ್ತಿ ಎಷ್ಟು? (ಜಾಗತಿಕ ಜಗಲಿ)

ಸಹಯೋಗ ಎನ್ನುವ ಮರೀಚಿಕೆ

ಇತ್ತೀಚಿನ ಸ್ನೇಹ ಹಸ್ತದ ಚಾಚುವಿಕೆಯ ಹೊರತಾಗಿಯೂ, ಪಾಕಿಸ್ತಾನ - ಬಾಂಗ್ಲಾದೇಶಗಳ ಸಂಬಂಧದ ವಾಸ್ತವತೆ ಬದಲಾಗುವ ಸಾಧ್ಯತೆಗಳಿಲ್ಲ. ಐತಿಹಾಸಿಕ ಸಮಸ್ಯೆಗಳು, ಆರ್ಥಿಕ ಅಸಮಾನತೆಗಳು, ಮತ್ತು ಸಂಪೂರ್ಣ ವೈರುಧ್ಯಮಯವಾದ ಭೌಗೋಳಿಕ ರಾಜಕಾರಣದ ಆದ್ಯತೆಗಳ ಕಾರಣದಿಂದಾಗಿ ಬಾಂಗ್ಲಾದೇಶ - ಪಾಕಿಸ್ತಾನದ ಸ್ನೇಹ ಕೇವಲ ಒಂದು ಭ್ರಮೆಯಂತೆ ಕಂಡುಬರುತ್ತಿದೆ. ಒಂದು ಅರ್ಥಪೂರ್ಣ ಸ್ನೇಹವನ್ನು ಸಾಧಿಸಬೇಕಾದರೆ, ಪಾಕಿಸ್ತಾನ ತನ್ನ ಐತಿಹಾಸಿಕ ತಪ್ಪುಗಳಿಗೆ ಪಶ್ಚಾತ್ತಾಪ ಪಡಬೇಕಿದೆ. 1971ರಲ್ಲಿ ತಾನು ಬಾಂಗ್ಲಾದೇಶದಲ್ಲಿ ನಡೆಸಿದ ದೌರ್ಜನ್ಯಗಳಿಗೆ ಪಾಕಿಸ್ತಾನ ಔಪಚಾರಿಕವಾಗಿ ಕ್ಷಮೆಯಾಚಿಸಿದರೆ, ಅದು ಪಾಕಿಸ್ತಾನದ ಪ್ರಾಮಾಣಿಕತೆಯನ್ನು ಪ್ರದರ್ಶಿಸುವುದು ಮಾತ್ರವಲ್ಲದೆ, ಪರಸ್ಪರ ನಂಬಿಕೆಯ ಹಾದಿ ನಿರ್ಮಿಸಲು ನೆರವಾದೀತು. ಆದರೆ ಈ ಹೆಜ್ಜೆಯನ್ನಿಡಲು ಪಾಕಿಸ್ತಾನ ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಅಪನಂಬಿಕೆ ಹಾಗೆಯೇ ಮುಂದುವರಿದಿದೆ ಮತ್ತು ಅವಕಾಶಗಳು ಕೈತಪ್ಪುತ್ತಿವೆ.

ಬಾಂಗ್ಲಾದೇಶ 1971ರಲ್ಲಿ ತೋರಿದ ಸ್ಥೈರ್ಯವೇ ಆ ದೇಶದ ವಿದೇಶಾಂಗ ನೀತಿಯ ತಳಹದಿಯಾಗಿದೆ. ಬಾಂಗ್ಲಾದೇಶ ತನ್ನ ಸಾರ್ವಭೌಮತ್ವ, ಆರ್ಥಿಕ ಪ್ರಗತಿ, ಮತ್ತು ಸಮತೋಲನದ ವ್ಯವಹಾರಕ್ಕೆ ಆದ್ಯತೆ ನೀಡುವುದರಿಂದ, ಅರ್ಥಪೂರ್ಣವಲ್ಲದ ಸ್ನೇಹಗಳಿಗೆ ಅದು ಹೆಚ್ಚಿನ ಮಹತ್ವ ನೀಡುವ ಸಾಧ್ಯತೆಗಳಿಲ್ಲ. ಉಭಯ ದೇಶಗಳ ಸಂಬಂಧದಲ್ಲಿ ಕಳಂಕ ತಂದಿರುವ ವಿಚಾರವನ್ನು ಪಾಕಿಸ್ತಾನ ಸರಿಪಡಿಸಿಕೊಳ್ಳುವ ತನಕ, ಅವೆರಡು ದೇಶಗಳ ನಡುವೆ ನೈಜ ಸ್ನೇಹ, ಸಹಭಾಗಿತ್ವ ಕೇವಲ ಮರೀಚಿಕೆಯಾಗಿರಲಿದೆ.

ಐತಿಹಾಸಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದಿದ್ದರೆ ಅದರ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ಪಾಕಿಸ್ತಾನ - ಬಾಂಗ್ಲಾದೇಶಗಳ ಸಂಬಂಧವೇ ಎಚ್ಚರಿಕೆಯ ಉದಾಹರಣೆಯಾಗಿದೆ. ರಾಜತಾಂತ್ರಿಕ ಮಾತುಕತೆಗಳು ತಾತ್ಕಾಲಿಕ ಪರಿಹಾರ ನೀಡಬಹುದಾದರೂ, ಉಭಯ ದೇಶಗಳ ವ್ಯವಹಾರಕ್ಕೆ ಮೂಲವಾಗಿರುವ 1971ರ ಇತಿಹಾಸವನ್ನು ಮರೆಸಲು ಅವುಗಳಿಂದ ಸಾಧ್ಯವಿಲ್ಲ. ಉಭಯ ದೇಶಗಳಿಗೆ ಸೌಹಾರ್ದ ಸಂಬಂಧ ನಿರ್ಮಿಸಲು ಕೇವಲ ಸಾಂಕೇತಿಕ ಹೆಜ್ಜೆಗಳು ಮಾತ್ರವೇ ಸಾಲದು. ಬದಲಿಗೆ, ಹೊಣೆಗಾರಿಕೆ, ನಂಬಿಕೆ ಮತ್ತು ಪರಸ್ಪರ ಗೌರವಗಳ ಆಧಾರಿತವಾದ ವಿಧಾನದತ್ತ ಅವುಗಳು ಹೊರಳಬೇಕಾಗುತ್ತದೆ. ಇದರ ಹೊರತಾಗಿ, ಅವುಗಳ ಸಂಬಂಧ ಒಂದು ಭ್ರಮೆಯಾಗಿಯೇ ಉಳಿಯಲಿದ್ದು, ವಾಸ್ತವದ ಕಠಿಣ ಬೆಳಕಿನಲ್ಲಿ ಆ ಸ್ನೇಹ ಉಳಿಯುವುದು ಅಸಾಧ್ಯ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com