
ಹವಾಲಾ ಎಂದರೆ ಬ್ಯಾಂಕುಗಳು ಅಥವಾ ಸಾಂಪ್ರದಾಯಿಕ ಹಣಕಾಸು ವ್ಯವಸ್ಥೆಗಳ ಮೇಲೆ ಅವಲಂಬಿತವಾಗದೆ, ಹಣಕಾಸಿನ ವ್ಯವಹಾರ ನಡೆಸುವ ಅನಧಿಕೃತ ವ್ಯವಸ್ಥೆಯಾಗಿದೆ. ಬ್ಯಾಂಕುಗಳಂತಹ ಸಾಂಪ್ರದಾಯಿಕ ಸಂಸ್ಥೆಗಳು ಮತ್ತು ವ್ಯವಸ್ಥೆಗಳ ಬದಲಿಗೆ, ಹವಾಲಾ ವ್ಯವಸ್ಥೆ ಹವಾಲ್ದಾರರು ಎಂದು ಕರೆಯಲಾಗುವ, ಹಣಕಾಸಿನ ವ್ಯವಹಾರಗಳನ್ನು ನಡೆಸುವ ಹಣಕಾಸು ಮಧ್ಯಸ್ಥಿಕೆದಾರರ (ಬ್ರೋಕರ್) ಜಾಲದ ಮೂಲಕ ಕಾರ್ಯಾಚರಿಸುತ್ತದೆ.
ಈ ವ್ಯವಸ್ಥೆ ಹಲವಾರು ಶತಮಾನಗಳಿಂದ ಚಾಲ್ತಿಯಲ್ಲಿದ್ದು, ಹವಾಲಾ ಸಾಮ್ರಾಜ್ಯ ಸಂಪೂರ್ಣವಾಗಿ ನಂಬಿಕೆಯ ಮೇಲೆಯೇ ನಿರ್ಮಿತವಾಗಿದೆ. ಇಲ್ಲಿ ಭೌತಿಕ ಹಣದ ವರ್ಗಾವಣೆಯ ಅಗತ್ಯವಿಲ್ಲದೆಯೇ ಹಣಕಾಸು ವರ್ಗಾವಣೆ ನಡೆಸಲಾಗುತ್ತದೆ. ಹವಾಲಾ ಜಾಗತಿಕವಾಗಿ ಬಳಕೆಯಾಗುತ್ತದಾದರೂ, ಅದು ವಿಶೇಷವಾಗಿ ದಕ್ಷಿಣ ಏಷ್ಯಾ, ಮಧ್ಯ ಪೂರ್ವ ಮತ್ತು ಉತ್ತರ ಆಫ್ರಿಕಾಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಬ್ಯಾಂಕ್ ಸೇವೆಗಳ ಲಭ್ಯತೆ ಇಲ್ಲದ ಪ್ರದೇಶಗಳಲ್ಲಿ ಜನರಿಗೆ ಹಣ ಕಳುಹಿಸಲು ಮತ್ತು ಪಡೆದುಕೊಳ್ಳಲು ಹವಾಲಾ ನೆರವಾಗುತ್ತದೆ. ಆದರೆ, ಇದು ಅನಧಿಕೃತ ವ್ಯವಸ್ಥೆಯಾಗಿರುವುದರಿಂದ, ಇದನ್ನು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವಿನಂತಹ ಅಕ್ರಮ ಚಟುವಟಿಕೆಗಳಿಗೂ ಬಳಸಬಹುದು.
ಹವಾಲಾ 8ನೇ ಶತಮಾನದ ಭಾರತದಲ್ಲಿ ಆರಂಭಗೊಂಡಿತು. ವ್ಯಾಪಾರಿಗಳು ಗಡಿಯಾಚೆಗಿನ ಹಣಕಾಸು ವ್ಯವಹಾರಗಳನ್ನು ಸುಲಭಗೊಳಿಸಲು ಇದನ್ನು ಬಳಸತೊಡಗಿದರು. ಹವಾಲಾ ಎನ್ನುವುದು ಅರೇಬಿಕ್ ಶಬ್ದವಾಗಿದ್ದು, 'ವರ್ಗಾವಣೆ' ಅಥವಾ 'ನಂಬಿಕೆ' ಎಂಬ ಅರ್ಥವನ್ನು ಹೊಂದಿದೆ. ಕಾಲ ಕಳೆದಂತೆ, ಕಳ್ಳತನದ ಭೀತಿಯಿಂದ ಭೌತಿಕ ಹಣವನ್ನು ಒಯ್ಯುವುದು ಸವಾಲಾಗಿದ್ದರಿಂದ, ಹವಾಲಾ ವ್ಯವಸ್ಥೆ ದಕ್ಷಿಣ ಏಷ್ಯಾ ಮತ್ತು ಸಿಲ್ಕ್ ರೋಡಿನಾದ್ಯಂತ ವ್ಯಾಪಿಸಿತು.
ಆಧುನಿಕ ಬ್ಯಾಂಕುಗಳು ಹವಾಲಾ ವ್ಯವಸ್ಥೆಯ ಪಾತ್ರವನ್ನು ಬಹುಪಾಲು ಅಧಿಕೃತವಾಗಿ ನಿರ್ವಹಿಸುತ್ತವಾದರೂ, ಇಂದಿಗೂ ಬ್ಯಾಂಕಿಂಗ್ ಸೇವೆಗಳು ಲಭ್ಯವಿಲ್ಲದ ಮತ್ತು ಅವುಗಳ ಮೇಲೆ ಜನರು ನಂಬಿಕೆ ಹೊಂದಿರದ ಪ್ರದೇಶಗಳಲ್ಲಿ ಹವಾಲಾ ಬಳಕೆಯಲ್ಲಿದೆ. ಇಂದು ಹವಾಲಾ ಬಹುತೇಕ ವೈಯಕ್ತಿಕ ಅಥವಾ ಔದ್ಯಮಿಕ ಹಣಕಾಸು ವರ್ಗಾವಣೆಗೆ ಮತ್ತು ವಲಸಿಗರಿಗೆ ಹಣಕಾಸು ವರ್ಗಾವಣೆ ನಡೆಸಲು ಬಳಕೆಯಾಗುತ್ತದೆ. ಹವಾಲಾ ಮೂಲಕ ಹಣವನ್ನು ಕ್ಷಿಪ್ರವಾಗಿ ವರ್ಗಾಯಿಸಲಾಗುತ್ತದಾದರೂ, ಅದು ಅಧಿಕೃತ ದಾಖಲೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆ ಮೂಲಕ ಹವಾಲಾ ಹಣ ವರ್ಗಾವಣೆಯನ್ನು ಗುರುತಿಸುವುದು, ಗಮನಿಸುವುದು ಕಷ್ಟಕರವಾಗಿದೆ. ಇದರಿಂದಾಗಿ, ಹವಾಲಾ ಹಣವನ್ನು ಅಕ್ರಮ ಚಟುವಟಿಕೆಗಳಿಗೂ ಬಳಸಬಹುದಾಗಿದೆ.
ಹವಾಲ್ದಾರರು ಎಂದೂ ಗುರುತಿಸಲ್ಪಡುವ ಹವಾಲಾ ದಲ್ಲಾಳಿಗಳು ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯಾಚೆಗೆ ಕಾರ್ಯ ನಿರ್ವಹಿಸುತ್ತಾರೆ. ಅವರು ಬಹುತೇಕ ನಂಬಿಕೆ, ಕೌಟುಂಬಿಕ ನಂಟು ಮತ್ತು ಸ್ಥಳೀಯ ಜಾಲಗಳ ಮೂಲಕ ಕಾರ್ಯಾಚರಿಸುತ್ತಾರೆ. ಅವರ ವ್ಯವಸ್ಥೆ ಹಲವು ಹಂತಗಳನ್ನು ಒಳಗೊಂಡಿದ್ದು, ಸಾಂಪ್ರದಾಯಿಕ ಬ್ಯಾಂಕಿಂಗ್ ಪ್ರಕ್ರಿಯೆಗಳಿಂದ ಹೆಚ್ಚಾಗಿ, ವೈಯಕ್ತಿಕ ಸಂಪರ್ಕಗಳ ಮೇಲೆ ನಿರ್ಮಾಣಗೊಂಡಿರುತ್ತದೆ.
ಹವಾಲಾ ಪ್ರಕ್ರಿಯೆಯ ಆರಂಭ: 'ಎ' ದೇಶದಲ್ಲಿರುವ ಓರ್ವ ವ್ಯಕ್ತಿ ಅದೇ ದೇಶದಲ್ಲಿರುವ ಓರ್ವ ಹವಾಲ್ದಾರನನ್ನು ಸಂಪರ್ಕಿಸಿ, 'ಬಿ' ದೇಶಕ್ಕೆ ಹಣ ಕಳುಹಿಸಲು ಕೋರುತ್ತಾನೆ.
ಹವಾಲ್ದಾರನಿಗೆ ಪಾವತಿ: ಹಣ ಪಾವತಿ ಮಾಡಬೇಕಾದ ವ್ಯಕ್ತಿ, ಕಳುಹಿಸಬೇಕಾದ ಮೊತ್ತವನ್ನು ಹವಾಲ್ದಾರನಿಗೆ ನೀಡುತ್ತಾನೆ. ಅದರೊಡನೆ, ಹವಾಲ್ದಾರನಿಗೆ ನೀಡಬೇಕಾದ ಶುಲ್ಕವನ್ನೂ ಪಾವತಿಸುತ್ತಾನೆ. ಈ ಶುಲ್ಕ ವರ್ಗಾವಣೆ ಮಾಡಬೇಕಾದ ಮೊತ್ತದ 0.5%ದಿಂದ 0.7% ತನಕ ಇರುತ್ತದೆ. ಇದು ವರ್ಗಾವಣೆ ಮಾಡಬೇಕಾದ ಸ್ಥಳ ಮತ್ತು ಹಣದ ರೀತಿಯನ್ನು ಅವಲಂಬಿಸಿ ಬದಲಾಗುತ್ತದೆ.
ಸಹಯೋಗಿಯನ್ನು ಸಂಪರ್ಕಿಸುವುದು: ಹವಾಲ್ದಾರ 'ಬಿ' ದೇಶದಲ್ಲಿ ಹಣ ಪಡೆದುಕೊಳ್ಳಬೇಕಾದ ವ್ಯಕ್ತಿಯ ಸನಿಹದಲ್ಲಿರುವ ಇನ್ನೊಬ್ಬ ಹವಾಲ್ದಾರನನ್ನು ಸಂಪರ್ಕಿಸುತ್ತಾನೆ.
ಒಂದು ರಹಸ್ಯ ಕೋಡ್: ಒಂದು ಬಾರಿ ವರ್ಗಾವಣೆ ನಡೆಸಲು ವ್ಯವಸ್ಥೆ ಆದ ಬಳಿಕ, 'ಎ' ದೇಶದಲ್ಲಿರುವ ವ್ಯಕ್ತಿ ಹಣ ವರ್ಗಾಯಿಸುವವನಿಗೆ ಒಂದು ವಿಭಿನ್ನ ಕೋಡ್ ನೀಡುತ್ತಾನೆ. ಹಣ ಪಡೆದುಕೊಳ್ಳುವ ವ್ಯಕ್ತಿ ಹಣವನ್ನು ಸ್ವೀಕರಿಸಲು ಈ ಕೋಡ್ ಬೇಕಾಗುತ್ತದೆ.
ಹಣದ ಬಿಡುಗಡೆ: 'ಎ' ದೇಶದಲ್ಲಿರುವ ಹವಾಲ್ದಾರನಿಂದ ಹಣ ಪಾವತಿಯ ಸೂಚನೆಗಳು ಬಂದ ಬಳಿಕ, 'ಬಿ' ದೇಶದಲ್ಲಿರುವ ಹವಾಲ್ದಾರ ಹಣ ಸ್ವೀಕರಿಸುವ ವ್ಯಕ್ತಿಗೆ ಹಣ ಒದಗಿಸುತ್ತಾನೆ. ಹಣ ಪಡೆದುಕೊಳ್ಳುವ ವ್ಯಕ್ತಿ ಹವಾಲ್ದಾರನಿಗೆ ಕೇವಲ ಕೋಡ್ ತೋರಿಸಿದರೆ ಸಾಕಾಗುತ್ತದೆ.
ಹವಾಲ್ದಾರರ ನಡುವೆ ವ್ಯವಹಾರ ಇತ್ಯರ್ಥ: ಒಂದು ಬಾರಿ ಹಣದ ವರ್ಗಾವಣೆ ಪೂರ್ಣಗೊಂಡ ಬಳಿಕ, ಹವಾಲ್ದಾರ 'ಎ' ಮತ್ತು 'ಬಿ'ಗಳು ಕೆಲ ಸಮಯದ ಬಳಿಕ ತಮ್ಮ ಖಾತೆಗಳನ್ನು ಸರಿದೂಗಿಸುತ್ತಾರೆ.
ಇದನ್ನು ಹಲವು ರೀತಿಗಳಿಂದ ನಡೆಸಬಹುದು, ಅವೆಂದರೆ:
ಹಿಮ್ಮುಖ ವಹಿವಾಟು: ಭೌತಿಕವಾಗಿ ಹಣವನ್ನು ಕಳುಹಿಸದೆ, 'ಒಳಬರುವ ಹಣ' ಮತ್ತು 'ಹೊರಹೋಗುವ ಹಣ'ವನ್ನು ಸಮಗೊಳಿಸಿ ಖಾತೆಯನ್ನು ಸರಿದೂಗಿಸಲಾಗುತ್ತದೆ.
ನೇರ ಹಣ ವರ್ಗಾವಣೆಗಳು: ಹವಾಲ್ದಾರರ ನಡುವೆ ಹಣಕಾಸಿನ ಸಾಗಾಣಿಕೆದಾರರನ್ನು ಬಳಸಿ, ಅದರಲ್ಲೂ ಕನಿಷ್ಠ ಗಡಿ ನಿಯಂತ್ರಣಗಳಿರುವ ಪ್ರದೇಶಗಳ ಮೂಲಕ ನೇರ ಹಣ ವರ್ಗಾವಣೆ ನಡೆಸಲಾಗುತ್ತದೆ.
ಪೂರೈಕೆದಾರರ ನಡುವೆ ಸಮತೋಲನ: ವಿವಿಧ ಸ್ಥಳಗಳಲ್ಲಿ ನಡೆಸುವ ಪಾವತಿಗಳನ್ನು ಸರಿದೂಗಿಸಲು ಹಲವಾರು ಹವಾಲ್ದಾರರನ್ನು ಒಳಗೊಳ್ಳುವುದು.
ದಾಖಲಾತಿಗಳನ್ನು ಗಮನಿಸುವುದು: ಕೆಲವು ಹವಾಲಾ ನಿರ್ವಾಹಕರು ತಮ್ಮ ವ್ಯವಹಾರದ ಕನಿಷ್ಠ ದಾಖಲೆಗಳನ್ನು ನಿರ್ವಹಿಸುತ್ತಾರೆ. ಆದರೆ, ಈ ದಾಖಲೆಗಳಲ್ಲಿರುವ ಮೊತ್ತಗಳ ಮಾಹಿತಿಗಳು ಒಂದರಿಂದೊಂದ ಭಿನ್ನವಾಗಿರುತ್ತದೆ.
ಹವಾಲಾ ವ್ಯವಸ್ಥೆ ಬಹಳಷ್ಟು ಹೊಂದಿಕೊಳ್ಳುವಂತಹ ವ್ಯವಸ್ಥೆಯಾಗಿದೆ. ಹವಾಲ್ದಾರರು ತಮ್ಮ ವ್ಯವಹಾರಗಳನ್ನು ಕ್ಷಿಪ್ರ ಮತ್ತು ಸುಲಭವಾಗಿಸಲು ಈಗ ಡಿಜಿಟಲ್ ವ್ಯವಸ್ಥೆಗಳು ಮತ್ತು ಕ್ರಿಪ್ಟೋ ಕರೆನ್ಸಿಗಳನ್ನು ಬಳಸತೊಡಗಿದ್ದಾರೆ. ಇದು ವಲಸಿಗರಿಗೆ, ನಿರಾಶ್ರಿತರಿಗೆ, ಮತ್ತು ಮಾಮೂಲಿ ಆರ್ಥಿಕ ಸೇವೆಗಳ ಲಭ್ಯತೆ ಇಲ್ಲದ ಪ್ರದೇಶಗಳ ಜನರಿಗೆ ಪ್ರಯೋಜನಕಾರಿ ವ್ಯವಸ್ಥೆಯಾಗಿದೆ. ಹವಾಲಾ ವ್ಯವಸ್ಥೆ ಜಾಗತಿಕ ಜಾಲವನ್ನು ಹೊಂದಿದ್ದು, ಜನರಿಗೆ ಬೇರೆ ದೇಶಗಳಿಗೆ ಹಣ ಕಳುಹಿಸುವುದನ್ನು ಸುಲಭವಾಗಿಸುತ್ತದೆ.
ಆದರೆ, ಹವಾಲಾ ಕಾರ್ಯಾಚರಿಸುವ ವಿಧಾನದ ಕಾರಣದಿಂದಾಗಿ, ಅದು ಭಯೋತ್ಪಾದನೆ, ಮಾದಕ ದ್ರವ್ಯಗಳ ಸಾಗಾಣಿಕೆ, ಕಳ್ಳ ಸಾಗಾಣಿಕೆ, ಮತ್ತು ಅಕ್ರಮ ಹಣ ವರ್ಗಾವಣೆಯಂತಹ ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಇಂತಹ ಸಮಸ್ಯೆಗಳ ಕಾರಣದಿಂದಾಗಿ ಹವಾಲಾ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕೆಂಬ ಬೇಡಿಕೆಗಳು ಮೂಡಿವೆ.
ಅನಾಮಧೇಯತೆ, ಅಧಿಕೃತ ದಾಖಲೆಗಳ ಕೊರತೆ, ಮತ್ತು ನಂಬಿಕೆ ಆಧಾರಿತ ವ್ಯವಸ್ಥೆಗಳು ಹವಾಲಾದ ಮುಖ್ಯ ವೈಶಿಷ್ಟ್ಯಗಳಾಗಿದ್ದು, ಅಕ್ರಮ ಹಣಕಾಸು ವ್ಯವಹಾರಗಳಲ್ಲಿ ತೊಡಗಿರುವವರಿಗೆ ಹವಾಲಾ ಅತ್ಯಂತ ಆಕರ್ಷಕ ವ್ಯವಸ್ಥೆಯಂತೆ ಗೋಚರಿಸುತ್ತದೆ. ಇದರಿಂದಾಗಿ, ಹಲವಾರು ಅಕ್ರಮ ಚಟುವಟಿಕೆಗಳು ಹವಾಲಾವನ್ನು ಬಳಸುತ್ತವೆ. ಅವೆಂದರೆ:
ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ: ಹವಾಲ್ದಾರರು ಸಾಮಾನ್ಯವಾಗಿ ಹಣ ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸದಿರುವುದರಿಂದ, ಮಾದಕ ವಸ್ತುಗಳ ದಲ್ಲಾಳಿಗಳು ಮತ್ತು ಕ್ರಿಮಿನಲ್ ಗುಂಪುಗಳು ಸಾಮಾನ್ಯವಾಗಿ ಹವಾಲಾವನ್ನು ಬಳಸಿಕೊಳ್ಳುತ್ತವೆ. ಇದು ಹಣ ಕಳುಹಿಸುವವರು ಮತ್ತು ಪಡೆದುಕೊಳ್ಳುವವರನ್ನು ಪತ್ತೆಹಚ್ಚಲು ಕಷ್ಟಕರವಾಗಿಸುತ್ತದೆ. ಅಫ್ಘಾನಿಸ್ತಾನದಲ್ಲಿ, ಹವಾಲ್ದಾರರು ಗಸಗಸೆ ಬೆಳೆಗಾರರು ಮತ್ತು ಅಫೀಮು ಖರೀದಿದಾರರ ನಡುವೆ ಹಣ ವರ್ಗಾವಣೆಗೆ ನೆರವಾಗಬಹುದು.
ಮಾನವ ಕಳ್ಳಸಾಗಣೆ: ಹವಾಲಾ ವ್ಯವಸ್ಥೆಯನ್ನು ಬಳಸಿಕೊಂಡು, ಮಾನವ ಕಳ್ಳಸಾಗಣೆಯಂತಹ, ಅಕ್ರಮ ವಲಸೆಯಂತಹ ಕಾನೂನು ಬಾಹಿರ ಕಾರ್ಯಗಳಿಗೂ ಹಣ ಪಾವತಿಸಬಹುದು. ಇದರಿಂದಾಗಿ ಹಣ ಎಲ್ಲಿಂದ ಬಂತು, ಎಲ್ಲಿಗೆ ಹೋಯಿತು ಎನ್ನುವುದು ತಿಳಿಯದೆಯೇ ಜನರನ್ನು ಗಡಿಯಾಚೆ ಸಾಗಿಸಲು ಸಾಧ್ಯವಾಗುತ್ತದೆ.
ಭಯೋತ್ಪಾದನೆಗೆ ಹೂಡಿಕೆ: ಅಲ್ ಖೈದಾ ಮತ್ತು ತಾಲಿಬಾನ್‌ನಂತಹ ಭಯೋತ್ಪಾದಕ ಸಂಘಟನೆಗಳು ರಹಸ್ಯವಾಗಿ ಹಣ ಕಳುಹಿಸಲು ಮತ್ತು ತಮ್ಮ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಪಡೆದುಕೊಳ್ಳಲು ಹವಾಲಾ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತವೆ.
ಇದೇ ರೀತಿ, ಹವಾಲಾ ವ್ಯವಸ್ಥೆಯನ್ನು ಲಂಚ ನೀಡಲು, ತೆರಿಗೆ ತಪ್ಪಿಸಲು ಮತ್ತು ಇತರ ಮೋಸದ ಉದ್ದೇಶಗಳಿಗೆ ಬಳಸಲಾಗುತ್ತದೆ.
ಹವಾಲಾ ಜಾಲದ ಬಳಕೆಯನ್ನು ನಿಯಂತ್ರಿಸುವ ಸಲುವಾಗಿ ವಿವಿಧ ದೇಶಗಳು ಹಲವಾರು ನಿಯಮಗಳನ್ನು ಜಾರಿಗೆ ತಂದಿವೆ. ಈ ನಿಯಮಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ. ಕೆಲವು ದೇಶಗಳಲ್ಲಿ, ಹವಾಲಾ ವ್ಯವಸ್ಥೆ ಅಕ್ರಮವಾಗಿದ್ದರೆ, ಕೆಲವು ದೇಶಗಳಲ್ಲಿ ಅದು ನಿಯಂತ್ರಿತವಾಗಿ ಬಳಕೆಯಲ್ಲಿದೆ. ಉದಾಹರಣೆಗೆ, ಹವಾಲಾ ದಲ್ಲಾಳಿಗಳು ತಮ್ಮ ಕೇಂದ್ರೀಯ ಬ್ಯಾಂಕುಗಳಲ್ಲಿ ನೋಂದಣಿ ನಡೆಸಿ, ಆ್ಯಂಟಿ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ ವಿರೋಧಿ ಕ್ರಮ - ಎಎಂಎಲ್) ಮತ್ತು ನೋ ಯುವರ್ ಕಸ್ಟಮರ್ (ಕೆವೈಸಿ) ನೀತಿಗಳನ್ನು ಪಾಲಿಸಿದರೆ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ಗಳಲ್ಲಿ ಹವಾಲಾ ಜಾಲ ಕಾನೂನುಬದ್ಧವಾಗಿರುತ್ತದೆ. ಅಮೆರಿಕಾದಲ್ಲಿ 9/11 ಭಯೋತ್ಪಾದಕ ದಾಳಿ ನಡೆದ ಬಳಿಕ, ಅಮೆರಿಕಾ ಹವಾಲಾವನ್ನು ನಿಷೇಧಿಸಿತು. ಹವಾಲಾ ನಿರ್ವಾಹಕರು ಭಯೋತ್ಪಾದಕ ಗುಂಪುಗಳಿಗೆ ಹಣ ವರ್ಗಾವಣೆಗೆ ನೆರವಾಗಿರಬಹುದು ಎಂಬ ಅನುಮಾನದಿಂದ ಅಮೆರಿಕಾ ಈ ಕ್ರಮ ಕೈಗೊಂಡಿತ್ತು.
ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜಾರಿಗೆ ತರುವುದರಿಂದ, ಹವಾಲಾವನ್ನು ಜನರು ಯಾಕೆ ಬಳಸುತ್ತಾರೆ ಎನ್ನುವುದನ್ನು ಸರಿಪಡಿಸದೆ, ಹವಾಲಾ ಜಾಲ ಭೂಗತವಾಗುವ ಸಾಧ್ಯತೆಗಳಿವೆ. ಹಾಗೇನಾದರೂ ಆದರೆ, ಕಾನೂನು ಜಾರಿಗೆ ಹವಾಲಾ ಇನ್ನೂ ದೊಡ್ಡ ತೊಡಕಾಗಿ ಪರಿಣಮಿಸೀತು.
ಹವಾಲಾ ಯಾವುದೇ ಗಡಿಯ ತಡೆಯಿಲ್ಲದೆ ಕಾರ್ಯ ನಿರ್ವಹಿಸುವುದರಿಂದ, ಕಾನೂನು ಜಾರಿ ವ್ಯವಸ್ಥೆಗೆ ಅದರ ನಿಯಂತ್ರಣ ಕಷ್ಟಕರವಾಗಿದೆ. ಹವಾಲಾ ಜಾಲವನ್ನು ಬಳಸಿ, ಅಧಿಕೃತ ವ್ಯವಸ್ಥೆಗಳ ಅವಶ್ಯಕತೆಯಿಲ್ಲದೆ ಹಣ ಕಳುಹಿಸಲು ಮತ್ತು ಪಡೆದುಕೊಳ್ಳಲು ಸಾಧ್ಯವಿರುವುದರಿಂದ, ಹಣ ಎಲ್ಲಿಂದ ಬಂತು, ಎಲ್ಲಿಗೆ ಹೋಯಿತು ಎನ್ನುವುದನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಹವಾಲಾ ಅನಾಮಧೇಯ ವ್ಯವಸ್ಥೆಯಾಗಿದ್ದು, ಹವಾಲ್ದಾರರ ನಡುವಿನ ನಂಬಿಕೆಯ ಆಧಾರದಲ್ಲಿ, ಅಸಾಂಪ್ರದಾಯಿಕ ವ್ಯವಹಾರಗಳ ರೀತಿಯಲ್ಲಿ ನಡೆಯುವುದರಿಂದ, ಅದರ ವಿಚಾರಣೆ ನಡೆಸುವುದೂ ದುಸ್ತರವಾಗಿದೆ. ಅದರಲ್ಲೂ ಕಾನೂನುಗಳು ದುರ್ಬಲವಾಗಿರುವ ಪ್ರದೇಶಗಳಲ್ಲಿ ಹವಾಲಾದ ನಿಯಂತ್ರಣ ಬಹಳ ಕಷ್ಟಕರವಾಗಿದೆ.
ಹವಾಲಾ ಜಗತ್ತಿನಾದ್ಯಂತ ಕಾರ್ಯಾಚರಿಸುತ್ತದೆಯಾದರೂ, ಕಾನೂನು ನಿಯಮಗಳು ಸಾಮಾನ್ಯವಾಗಿ ಅಸ್ಥಿರವಾಗಿರುತ್ತವೆ. ಆದರೂ, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಿ, ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಕಾನೂನು ನಿಯಂತ್ರಣಗಳು ಅನಿವಾರ್ಯವಾಗಿವೆ.
ಇತರ ಅಸಾಂಪ್ರದಾಯಿಕ ಹಣ ವರ್ಗಾವಣಾ ವ್ಯವಸ್ಥೆಗಳಾದ ಚೀನಾದ ಭೂಗತ ಬ್ಯಾಂಕಿಂಗ್ ಗಳಂತಲ್ಲದೆ, ಹವಾಲಾವನ್ನು ಸಾಮಾನ್ಯವಾಗಿ ಪ್ರಾಮಾಣಿಕ ಉದ್ದೇಶಗಳಿಗೆ ಬಳಸಲಾಗುತ್ತದೆ. ಹಲವಾರು ಜನರಿಗೆ ಹವಾಲಾ ವೇಗದ, ಕಡಿಮೆ ವೆಚ್ಚದಾಯಕವಾದ ಮತ್ತು ಸುಲಭವಾದ ಹಣ ವರ್ಗಾವಣಾ ವ್ಯವಸ್ಥೆಯಾಗಿದೆ.
ಆದರೆ, ಹವಾಲಾದ ಇವೇ ವೈಶಿಷ್ಟ್ಯಗಳು ಕ್ರಿಮಿನಲ್‌ಗಳನ್ನೂ ಆಕರ್ಷಿಸಿ, ಹವಾಲಾವನ್ನು ಬಳಸುವ ಅವೇ ಸಮುದಾಯಗಳನ್ನು ಅಪಾಯದಂಚಿಗೆ ತಳ್ಳುತ್ತವೆ. ಸರ್ಕಾರಗಳು ಇದನ್ನು ನಿಯಂತ್ರಿಸಲು ಪ್ರಯತ್ನ ನಡೆಸುತ್ತಿದ್ದರೆ, ಅಧಿಕೃತ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗೆ ನಿಂತು ಕಾರ್ಯಾಚರಿಸುವ ಹವಾಲಾ ಜಾಲ ತನ್ನನ್ನು ನಿಯಂತ್ರಿಸುವುದು ಸುಲಭವಲ್ಲ ಎನ್ನುತ್ತದೆ. ಹವಾಲಾ ಒಂದು ಜಾಗತಿಕ ವ್ಯವಸ್ಥೆಯಾಗಿ ರೂಪುಗೊಂಡಿರುವುದರಿಂದ, ಅದನ್ನು ನಿಜಕ್ಕೂ ನಿಯಂತ್ರಿಸಬೇಕಾದರೆ ಜಾಗತಿಕ ಕಾನೂನು ಜಾರಿ ಸಂಸ್ಥೆಗಳು ಪರಸ್ಪರ ಸಹಕರಿಸಿ, ಜೊತೆಯಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ.
ಹವಾಲಾ ಸದ್ಯದ ಮಟ್ಟಿಗೆ ಜಗತ್ತಿನಿಂದ ದೂರಾಗುವ ಯಾವುದೇ ಸಾಧ್ಯತೆಗಳಿಲ್ಲ. ಇದರ ಬೇರುಗಳು ಐತಿಹಾಸಿಕವಾಗಿದ್ದು, ಸಾಂಸ್ಕೃತಿಕ ಮಹತ್ವವನ್ನೂ ಹೊಂದಿದೆ. ಅದರೊಡನೆ, ಹವಾಲಾ ಪ್ರಾಯೋಗಿಕ ಪ್ರಯೋಜನಗಳನ್ನು ಹೊಂದಿದ್ದು, ಬಹಳಷ್ಟು ಜನರಿಗೆ ಅನುಕೂಲಕರ ಆಯ್ಕೆಯಾಗಿದೆ. ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ನೆರವು ನೀಡುವಂತಹ ದುರ್ಬಳಕೆಯನ್ನು ತಡೆಯಲು ಕ್ರಮ ಕೈಗೊಳ್ಳುವುದು ಬಹಳ ಅಗತ್ಯವಾಗಿದೆ. ಒಂದು ವೇಳೆ ಹವಾಲಾ ಜಾಲದ ಮೇಲೆ ಅವಲಂಬಿತವಾಗಿರುವ ಸಮುದಾಯಗಳು ಅದರ ಬದಲಿಗೆ ಬೇರೆ ಪರ್ಯಾಯ ವಿಧಾನಗಳ ಬಳಕೆಗೆ ಒಪ್ಪಿಕೊಂಡರೆ ಮಾತ್ರವೇ ಹವಾಲಾವನ್ನು ನಿಯಂತ್ರಿಸುವ ಕ್ರಮಗಳು ಯಶಸ್ಸು ಕಾಣಬಹುದು. ಆದರೂ, ಹವಾಲಾ ಜಾಲದಲ್ಲಿ ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳುವುದು ಒಂದು ಸವಾಲಾಗಿ ಮುಂದುವರಿಯಲಿದೆ.
ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement