ಉತ್ತಮ ಹಣಕಾಸು ಬದುಕಿಗೆ ಹತ್ತು ಸೂತ್ರಗಳು! (ಹಣಕ್ಲಾಸು)
ನಮ್ಮ ಸಮಾಜದಲ್ಲಿ ಬಹುತೇಕ ಸಮಸ್ಯೆಗಳು ಹಣಕ್ಕೆ ಸಂಬಂದಿಸಿದ್ದು, ಉತ್ತಮ ಹಣಕಾಸು ನಿರ್ವಹಣೆ ಅಷ್ಟರಮಟ್ಟಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. ನಿಮಗೆಲ್ಲಾ ಒಂದಂಶ ನೆನಪಿರಲಿ ಎಷ್ಟೇ ಹಣ ಸಂಪಾದನೆ ಮಾಡುತ್ತಿದ್ದರೂ ಕೂಡ ಅದು ಮುಖ್ಯವಾಗುವುದಿಲ್ಲ. ಅದರ ನಿರ್ವಹಣೆ ಮತ್ತು ಮನಸ್ಥಿತಿ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಕೆಳಗಿನ ಕೆಲವು ಅಂಶಗಳನ್ನು ನಾವು ಬದುಕಿನಲ್ಲಿ ಹೊಂದಿಸಿಕೊಂಡರೆ ಉತ್ತಮ ಹಣಕಾಸು ಬದುಕು ನಮ್ಮದಾಗುತ್ತದೆ. ಆ ಮೂಲಕ ಒಟ್ಟಾರೆ ಬದುಕು ಕೂಡ ಹಸನಾಗುತ್ತದೆ.
ಅವಶ್ಯಕತೆ ಮತ್ತು ಐಷಾರಾಮದ ನಡುವಿನ ಅಂತರತಿಳಿದಿರಲಿ: ಇದನ್ನು ಇಂಗ್ಲಿಷ್ನಲ್ಲಿ ನೀಡ್ ಮತ್ತು ವಾಂಟ್ ಎಂದು ಕರೆಯಲಾಗುತ್ತದೆ. ಬದುಕಿಗೆ ಬೇಕಾದ ಊಟ, ಬಟ್ಟೆ, ಮನೆ, ವಿದ್ಯಾಭ್ಯಾಸ, ಕೆಲಸ ಇವೆಲ್ಲವೂ ಅವಶ್ಯಕತೆ ಎನ್ನಿಸಿಕೊಳ್ಳುತ್ತವೆ. ಇವುಗಳಿಲ್ಲದೆ ಬದುಕುವುದು ಸಾಧ್ಯವಿಲ್ಲ. ಆದರೆ ಓಡಾಟಕ್ಕೆ ಕಾರು ಬೇಕು ಅದರಲ್ಲೂ BMW ಕಾರು ಬೇಕು ಎನ್ನುವುದು ವಾಂಟ್ ಎನ್ನಿಸಿಕೊಳ್ಳುತ್ತದೆ. ಅದಿಲ್ಲದೆ ಕೂಡ ಬದುಕಬಹುದು. ಒಟ್ಟಾರೆ ಬದುಕಿಗೆ ಅತ್ಯಂತ ಅವಶ್ಯಕವಿರುವ ವಸ್ತುಗಳ ಮೇಲೆ ಖರ್ಚು ಮಾಡಬೇಕು. ಆದರೆ ಬೇಕುಗಳ ಮೇಲೆ ಐಷಾರಾಮದ ಮೇಲೆ ಖರ್ಚು ಮಾಡುವ ಮುನ್ನ ಒಂದಷ್ಟು ಚಿಂತಿಸುವುದು ಉತ್ತಮ. ಗಮನಿಸಿ ಕೆಲವೊಮ್ಮೆ ಕಾರು ಕೂಡ ಅವಶ್ಯಕವಾಗಬಹುದು. ಆದರೆ ದುಬಾರಿ ಕಾರು ಅವಶ್ಯಕವೇ? ಹೀಗೆ ನೀಡ್ ಮತ್ತು ವಾಂಟ್ ಗಳನ್ನು ಈಗ ವರ್ಗಿಕರಿಸಿದರೂ ಬದುಕು ಬದಲಾಗುತ್ತ ಹೋದಂತೆ ವಾಂಟ್ ಎನ್ನುವುದು ನೀಡ್ ಆಗಿ ಬದಲಾಗಬಹುದು. ಸಮಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಬೇಕು.
ಅನವಶ್ಯಕ ಸ್ಪರ್ಧೆಗೆ ಬೀಳಬೇಡಿ: ರಾಟ್ ರೇಸ್ ಎನ್ನುವ ಪದವನ್ನು ನಾವೆಲ್ಲಾ ಕೇಳಿದ್ದೇವೆ. ಇದು ಗಳಿಕೆ ಮತ್ತು ಖರ್ಚಿನ ನಡುವಿನ ಸ್ಪರ್ಧೆ. ಗಳಿಸುವುದು ಮತ್ತು ಸಮಾಜದ ಮುಂದೆ ತೋರ್ಪಡಿಸಕೊಳ್ಳುವ ಸಲುವಾಗಿ ಹೆಚ್ಚು ಖರ್ಚುಮಾಡುವುದು. ಕೆಲವೊಮ್ಮೆ ಹಣವಿಲ್ಲದಿದ್ದರೂ ಸಮಾಜದ ಮುಂದೆ ಘನತೆ ಕಾಪಾಡಿಕೊಳ್ಳಬೇಕು ಎನ್ನುವ ಹುಚ್ಚಿಗೆ ಬಿದ್ದು ಕೂಡ ಖರ್ಚು ಮಾಡುವುದು ತಪ್ಪು. ಇಂದಿನ ಸೋಶಿಯಲ್ಮೀಡಿಯಾ ಯುಗದಲ್ಲಿ ಅವರು ಮಾಡಿದರು ಎಂದು ಇವರು, ಇವರು ಮಾಡಿದರು ಎಂದು ಅವರು ಖರ್ಚು ಮಾಡುವಪರಿಪಾಠ ಹೆಚ್ಚಾಗಿದೆ. ನಮ್ಮ ಬೇಕು ಬೇಡ ಮತ್ತು ಜೇಬು ನೋಡಿಕೊಂಡು ಖರ್ಚು ಮಾಡಬೇಕು.
ಹೋಲಿಕೆ ಬೇಡವೇ ಬೇಡ: ನನ್ನ ಗೆಳೆಯ ಮಹಿಮ ಪ್ರಸಾದ್ ಹಳ್ಳಿಯಲ್ಲಿ ಟೈಲರಿಂಗ್ ಅಂಗಡಿಯನ್ನು ಇಟ್ಟುಕೊಂಡಿದ್ದಾನೆ. ಇಡಿ ಊರಿಗೆ ಇರುವುದು ಒಂದೇ ಟೈಲರಿಂಗ್ ಅಂಗಡಿ. ಹೀಗಾಗಿ ವ್ಯಾಪಾರ ಚೆನ್ನಾಗಿದೆ. ಮಾಸಿಕ ಆದಾಯ 35 ಸಾವಿರ ರೂಪಾಯಿ. ಅದರಲ್ಲಿ 20 ಸಾವಿರ ಉಳಿಸುತ್ತೇನೆ ಎಂದು ಹೇಳಿದ ಆದರೆ ಹಾಗೆ ಹೇಳುವಾಗ ಅವನಲ್ಲಿ ಖುಷಿಯಿಲ್ಲ. ಏಕೆಂದರೆ ಅವನ ಇನ್ನೊಬ್ಬ ಸ್ನೇಹಿತ ರಾಜೀವ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ, ಮಾಸಿಕ ಲಕ್ಷ ರೂಪಾಯಿ ಸಂಬಳ ತೆಗೆದುಕೊಳ್ಳುತ್ತಾನೆ ಅವನ ಜೀವನ ಚೆಂದವಿದೆ ಎನ್ನುವುದು ಮಹಿಮ ಪ್ರಸಾದ್ ಊಹೆ. ರಾಜೀವನನ್ನು ಮಾತನಾಡಿಸಿದರೆ ಲಕ್ಷ ಬಂದರೂ ಹತ್ತು ಸಾವಿರ ಉಳಿಸಲಾಗುತ್ತಿಲ್ಲ. ಮಹಿಮಾ ಪ್ರಸಾದ್ ಜೀವನ ಎಷ್ಟೋ ಬೆಸ್ಟ್ ಎನ್ನುವುದು ಅವನು ಹೇಳುವ ಮಾತು. ಅರ್ಥವಿಷ್ಟೆ ಪ್ರತಿಯೊಬ್ಬರೂ ಇನ್ನೊಬ್ಬರ ಜೀವನ ಉತ್ತಮವಾಗಿದೆ ನನ್ನ ಜೀವನ ಮಾತ್ರ ಹೀಗಾಗಿದೆ ಎಂದುಕೊಳ್ಳುತ್ತಾರೆ. ನಮಗೆ ಸಿಕ್ಕಿರುವ ಬದುಕನ್ನು ಸ್ವರ್ಗ ಅಥವಾ ನರಕ ಮಾಡುವುದು ಈ ಹೋಲಿಕೆ. ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳದಿದ್ದರೆ ಅದೇ ಸ್ವರ್ಗ. ಹೋಲಿಕೆ ಶುರುವಾದರೆ ಬದುಕು ನರಕವಾಗುತ್ತದೆ. ಎಚ್ಚರ !
ಖರ್ಚಿನಲ್ಲಿ ಆದ್ಯತೆಯಿರಲಿ: ಬದುಕಿಗೆ ಅತ್ಯಂತ ಮುಖ್ಯವಾಗಿಮಾಡಿಕೊಳ್ಳಬೇಕಾದ ಪಟ್ಟಿ ಆದ್ಯತೆಯದ್ದು! ನಾನೇನು ಓದಬೇಕು? ಯಾವ ಕೋರ್ಸ್? ಯಾವ ವಲಯದಲ್ಲಿ ಮುಂದುವರಿಯಬೇಕು? ಇಲ್ಲಿಂದ ಶುರವಾದದ್ದು ಯಾವಖರ್ಚು ಮೊದಲು ಮಾಡಬೇಕು ?ಯಾವುದು ನಂತರದ್ದು ? ಎನ್ನುವುದನ್ನು ಪಟ್ಟಿ ಮಾಡಬೇಕು. ಉದಾಹರಣೆಗೆ ಅಮ್ಮನ ಕಣ್ಣಿನ ಆಪರೇಷನ್ ಮೊದಲ ಆದ್ಯತೆ ಪಡೆಯಬೇಕು. ಪ್ರವಾಸ ಆದ್ಯತೆಯಲ್ಲಿ ಕೊನೆಯ ಸ್ಥಾನ ಪಡೆಯಬೇಕು. ಪ್ರವಾಸ ಮಾಡಬಾರದು ಎಂದಲ್ಲ. ಹಣದ ಕೊರತೆಯಿದ್ದಾಗ ಯಾವುದು ಪ್ರಮುಖ ಎನ್ನುವುದನ್ನು ಆದ್ಯತೆ ಎನ್ನಲಾಗುತ್ತದೆ.
ಬದುಕಿಗೊಂದು ಗುರಿ ಬೇಕು: ಗಮನಿಸಿ ನೋಡಿ ನಾವು ಯಾವುದೇ ಗುರಿ ಅಥವಾ ಗೋಲ್, ಟಾರ್ಗೆಟ್ ಇಟ್ಟು ಕೊಳ್ಳದೆಹೋದರೆ ಜೀವನ ಹಾಗೆ ಜಾಳುಜಾಳಾಗಿ ಕಳೆದುಹೋಗುತ್ತದೆ. ಗುರಿ ಬದುಕಿಗೆ ಒಂದು ಉದ್ದೇಶವನ್ನು ನೀಡುತ್ತದೆ. ತಿಂಗಳಿಗೆ ಆದಾಯದ 20 ಪ್ರತಿಶತ ಉಳಿಸಬೇಕು ಎನ್ನುವುದು ಒಂದು ಗುರಿ. ಆ ಹಣವನ್ನು ಏಕೆ ಉಳಿಸುತ್ತಿದ್ದೇನೆ ಎನ್ನುವುದು ಉದ್ದೇಶದ ಮೇಲೆ ಡಿಪೆಂಡ್ ಆಗುತ್ತದೆ. ಮಗ ಅಥವಾ ಮಗಳ ಉನ್ನತ ವಿದ್ಯಾಭ್ಯಾಸ, ಪ್ರವಾಸಕ್ಕೆ, ನಿವೃತ್ತಿ ಜೀವನಕ್ಕೆ, ಹೀಗೆ ಯಾವುದಾದರೊಂದು ನಿರ್ದಿಷ್ಟ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಆ ರೀತಿಯ ಉಳಿಕೆ ಸಾಧ್ಯವಾಗುತ್ತದೆ. ತನ್ಮೂಲಕ ಹಣಕಾಸು ಬದುಕು ಕೂಡ ಹಸನಾಗುತ್ತದೆ.
ಬಜೆಟಿಂಗ್ ಎನ್ನುವ ಮಹಾಮಂತ್ರ ಮರೆಯಬೇಡಿ: ಬಜೆಟ್ ಎಂದರೆ ಆದಾಯ ಮತ್ತು ವ್ಯಯವನ್ನ ನಿಗದಿತ ಸಮಯಕ್ಕೆ ನಿಗದಿಪಡಿಸುವ ಸರಳ ಲೆಕ್ಕ. ಉದಾಹರಣೆ ನೋಡೋಣ, ನಿಮ್ಮ ಮಾಸಿಕ ಆದಾಯ ಐವತ್ತು ಸಾವಿರ ಎಂದು ಕೊಳ್ಳಿ ಇದರಮುಂದೆ ನಿಮ್ಮ ಖರ್ಚುಗಳ ಬರೆಯಬೇಕು. ಮನೆ ಬಾಡಿಗೆ ಹತ್ತು ಸಾವಿರ, ಮನೆ ಖರ್ಚು ಐದು ಸಾವಿರ, ಮಕ್ಕಳ ಶಾಲೆಯ ವೆಚ್ಚ ಎರಡು ಸಾವಿರ ಹೀಗೆ, ಹಣಕಾಸಿನ ಸಮಸ್ಯೆಗೆ ಸಿಕ್ಕವರು ಬಜೆಟ್ ಮಾಡುವುದಿಲ್ಲ ಇವರಿಗೆ ತಮ್ಮ ಆದಾಯದ ಲೆಕ್ಕವಿರುತ್ತದೆ ಖರ್ಚಿನ ಲೆಕ್ಕ ಮಾತ್ರ ನಿಖರವಿರುವುದಿಲ್ಲ. ಬಜೆಟ್ ಎಂದರೆ ನಮ್ಮ ಆದಾಯದ ಜೊತೆಗೆ ನಮ್ಮ ಖರ್ಚನ್ನ ಹೊಂದಿಸುವ, ಸರಿದೂಗಿಸಿಕೊಂಡು ಹೋಗುವ ಕಲೆಯೂ ಹೌದು. ಅವಶ್ಯವಲ್ಲದ ಖರೀದಿಯನ್ನ ಮುಂದೂಡುವುದು ಅಥವಾ ತೆಗೆದೇ ಹಾಕುವುದು ಉತ್ತಮ.
ಕಾಣದ ಖರ್ಚುಗಳಿಗೆ ಒಂದಷ್ಟು ಮೀಸಲು ನಿಧಿ ತೆಗೆದಿರಿಸಿ: ಬದುಕು ಎಂದರೆ ಅನಿಶ್ಚಿತ ಎನ್ನುವ ಮಟ್ಟಕ್ಕೆ ಇಂದು ಬದುಕು ಬದಲಾಗಿದೆ. ಇವತ್ತು ಉತ್ತಮ ಹುದ್ದೆಯಲ್ಲಿರುವವರಿಗೆ ನಾಳೆ ಕೆಲಸ ಹೋಗಬಹುದು. ಆಗ ಆದಾಯ ನಿಂತು ಹೋಗುತ್ತದೆ. ಮನೆಯ ಖರ್ಚು ನಿಲ್ಲುವುದಿಲ್ಲ. ಈ ರೀತಿಯ ತುರ್ತುಪರಿಸ್ಥಿತಿಗಳಿಗೆ ಎಂದು ಒಂದಷ್ಟು ಹಣವನ್ನು ತೆಗೆದಿರಿಸಿದರೆ ಅಂತಹ ದಿನಗಳು ಬಂದಾಗ ಕೂಡ ಹೆಚ್ಚಿನ ಏರುಪೇರು ಆಗುವುದಿಲ್ಲ.
ಕುಟುಂಬದ ಆರ್ಥಿಕ ಸುರಕ್ಷತೆ ಬಗ್ಗೆ ಗಮನವಿರಲಿ: ಇವತ್ತು ಕೆಲಸ, ಬದುಕು ಯಾವುದರಲ್ಲೂ
ಭದ್ರತೆಯಿಲ್ಲ. ಯಾವಾಗಬೇಕಾದರೂ ಏನು ಬೇಕಾದರೂ ಆಗಬಹುದು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಜೀವವಿಮೆ ಮಾಡಿಸುವುದು ಅತ್ಯಂತ ಅವಶ್ಯಕ. ಟರ್ಮ್ ಪ್ಲಾನ್ ವರದಾನದಂತೆ ಕೆಲಸ ಮಾಡುತ್ತದೆ. ಇದರ ಜೊತೆಗೆ ಆರೋಗ್ಯವಿಮೆ ಕೂಡ ಅವಶ್ಯಕ. ಇವೆಲ್ಲವೂ ಇಂದು ನೀಡ್ ಆಗಿ ಬದಾಲಾಗಿದೆ ಎನ್ನುವುದನ್ನು ಗಮನಿಸಬೇಕು.
ನಿವೃತ್ತಿಗೆ ಬೇಕಾಗುವ ಹಣವನ್ನು ಸೃಷ್ಟಿಸಿಕೊಳ್ಳಿ: ಹಿಂದೆ ನಮ್ಮ ಸಮಾಜದಲ್ಲಿ ನಿವೃತ್ತಿಗಾಗಿ ಎಂದು ಹಣವನ್ನು ತೆಗೆದಿರಿಸುವ ಪರಿಪಾಠವಿರಲಿಲ್ಲ. ಆದರೆ ಇಂದು ಬದುಕು ಬದಲಾಗಿದೆ. ಹೀಗಾಗಿ ನಮ್ಮ ಇಳಿ ವಯಸ್ಸಿಗೆ ಬೇಕಾಗುವ ಹಣವನ್ನು ನಾವೇ ಹೊಂದಿಸಿ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಇದಕ್ಕೆಂದು ಹಲವಾರು ಉತ್ತಮ ಯೋಜನೆಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳ ಲಾಭವನ್ನು ಪಡೆದು ಬದುಕಿನ ಕೊನೆಯ ಹಂತದಲ್ಲಿ ಕೂಡ ನೆಮ್ಮದಿಯನ್ನು ಕಾಣಬಹುದು.
ಹಣಕಾಸು ವಂಚನೆಗಳಿಗೆ ಬಲಿಯಾಗಬೇಡಿ: ಹಣಕಾಸು ಬದುಕು ಉತ್ತಮವಾಗಿರಬೇಕು ಎಂದರೆ ಪೊಂಝಿ ಸ್ಕೀಮುಗಳಿಂದ ದೂರವಿರಬೇಕು. ಕಳೆದ ಅಧ್ಯಾಯವನ್ನು ಮತ್ತೊಮ್ಮೆ ಓದಿ. ಹಣ ದುಪ್ಪಟ್ಟು ಮಾಡಬೇಕು ಎನ್ನುವ ಧಾವಂತಕ್ಕೆ ಬಲಿಯಾಗದಿರುವುದು ಉತ್ತಮ ಹಣಕಾಸು ಜೀವನಕ್ಕೆ ರಹದಾರಿ. ಇದರ ಜೊತೆಗೆ ಅನವಶ್ಯಕ ಸಾಲಗಳಿಂದ ಕೂಡ ದೂರ ಇರುವುದು ಉತ್ತಮ.
ನೆನಪಿರಲಿ: ಮೇಲೆ ಹೇಳಿದ ಅಂಶಗಳು ಕೇವಲ ಉದಾಹರಣೆ ಅಂಶಗಳಾಗಿವೆ. ಇದನ್ನು ಮೀರಿ ಕೂಡ ಹತ್ತಾರು ಅಂಶಗಳು ಉತ್ತಮ ಹಣಕಾಸು ಬದುಕಿಗೆ ಬೇಕಾಗುತ್ತದೆ. ವ್ಯಕ್ತಿ ಮತ್ತು ಸನ್ನಿವೇಶಗಳಿಗೆ ತಕ್ಕಂತೆ ಇವು ಬದಲಾಗುತ್ತದೆ. ಆದರೆ ಕೆಲವು ಮೂಲಭೂತ ಅಂಶಗಳು ಬದಲಾಗುವುದಿಲ್ಲ. ಅದು ಎಲ್ಲರಿಗೂ ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ.
ನಮ್ಮ ಇತಿ ಮಿತಿಗಳನ್ನು ಅರಿತು ಬದುಕಬೇಕಾಗುತ್ತದೆ. ಇದರರ್ಥ ಅಪಾಯ ತೆಗೆದುಕೊಳ್ಳಬಾರದು ಎಂದಲ್ಲ. ನುಂಗಲಾಗದ ತುತ್ತನ್ನು ಬಾಯಿಗಿಡುವ ಹುಚ್ಚುತನ ಬೇಡ. ಅಳೆದುತೂಗಿದ ಅಪಾಯ ತೆಗೆದುಕೊಳ್ಳದೆ ಬೇರೆ ದಾರಿಯಿಲ್ಲ. ಅಪಾಯವೆಂದು ಹೂಡಿಕೆಮಾಡದೆ ಹೋದರೆ ಅದಕ್ಕಿಂತ ದೊಡ್ಡ ಅಪಾಯ ಬೇರೊಂದಿಲ್ಲ. ಇಂದಿನ ಹಣದುಬ್ಬರದ ಕಾಲಘಟ್ಟದಲ್ಲಿ ಗಳಿಕೆ -ಉಳಿಕೆ ಸಾಲದು ಅದನ್ನು ಸರಿಯಾಗಿ ಹೂಡಿಕೆ ಮಾಡುವುದು ಕೂಡ ಬಹಳ ಮುಖ್ಯ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ