ನಕ್ಷತ್ರಗಳ ಲೋಕದಲ್ಲಿ: ತುರ್ತಾಗಿ ಬೇಕಾಗಿದ್ದಾರೆ ಮಹಿಳಾ ಗಗನಯಾತ್ರಿಗಳು! (ಜಾಗತಿಕ ಜಗಲಿ)

ಇಂದಿಗೂ ಮಹಿಳಾ ಗಗನಯಾತ್ರಿಗಳ ಪ್ರಮಾಣ ಅತ್ಯಂತ ಕಡಿಮೆ ಇರುವುದರಿಂದ, ಮಹಿಳೆಯರ ದೇಹದ ಮೇಲೆ ಬಾಹ್ಯಾಕಾಶ ಯಾತ್ರೆ ಎಂತಹ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.
File pic
ಸಾಂಕೇತಿಕ ಚಿತ್ರonline desk
Updated on

ಅರುವತ್ತೆರಡು ವರ್ಷಗಳ ಹಿಂದೆ, ಸೋವಿಯತ್ ಒಕ್ಕೂಟದ ವ್ಯಾಲೆಂಟಿನಾ ತೆರೆಷ್ಕೋವಾ ಅವರು ಬಾಹ್ಯಾಕಾಶಕ್ಕೆ ತೆರಳಿದ ಪ್ರಥಮ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. ಅಂದಿನಿಂದ ಇಂದಿನತನಕ ಬಾಹ್ಯಾಕಾಶಕ್ಕೆ ತೆರಳಿದ ಗಗನಯಾತ್ರಿಗಳ ಪೈಕಿ ಮಹಿಳೆಯರ ಪಾಲು ಕೇವಲ 11% ಅಷ್ಟೇ ಆಗಿದೆ.

ಇಂದಿಗೂ ಮಹಿಳಾ ಗಗನಯಾತ್ರಿಗಳ ಪ್ರಮಾಣ ಅತ್ಯಂತ ಕಡಿಮೆ ಇರುವುದರಿಂದ, ಮಹಿಳೆಯರ ದೇಹದ ಮೇಲೆ ಬಾಹ್ಯಾಕಾಶ ಯಾತ್ರೆ ಎಂತಹ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ಇನ್ನು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯಾಚರಿಸುವವರಲ್ಲೂ ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚಾಗಿದೆ. ವರದಿಗಳ ಪ್ರಕಾರ, ಈ ಕ್ಷೇತ್ರದಲ್ಲಿ ಸಮತೋಲನ ಸಾಧಿಸಲು ಪ್ರಯತ್ನಗಳನ್ನು ನಡೆಸಿರುವ ಹೊರತಾಗಿಯೂ, ಉದ್ಯೋಗಿಗಳ ಸಂಖ್ಯೆಯಲ್ಲಿ ಪುರುಷರೇ ಹೆಚ್ಚಿನ ಸ್ಥಾನಗಳನ್ನು ಹೊಂದುತ್ತಿದ್ದಾರೆ.

ಯುರೋಪಿನ 11 ದೇಶಗಳಲ್ಲಿ, 8,000 ವಿದ್ಯಾರ್ಥಿಗಳನ್ನು ಒಳಗೊಂಡ ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮಹಿಳಾ ವಿದ್ಯಾರ್ಥಿನಿಯರ ಪೈಕಿ, 84.5% ವಿದ್ಯಾರ್ಥಿನಿಯರು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಪುರುಷರ ಪೈಕಿ 75.5% ಮಾತ್ರವೇ ಈ ಅಭಿಪ್ರಾಯ ಹೊಂದಿದ್ದಾರೆ.

ಬಾಹ್ಯಾಕಾಶ ಯೋಜನೆಗಳು ಹೆಚ್ಚು ಹೆಚ್ಚು ಸುದೀರ್ಘವಾಗುತ್ತಿದ್ದು, ವೈಯಕ್ತಿಕ ಹಂತದಲ್ಲಿ ಔಷಧಗಳ ಅಧ್ಯಯನ ನಡೆಸುವುದು ಹೆಚ್ಚಿನ ಪ್ರಸ್ತುತತೆ ಪಡೆದುಕೊಳ್ಳುತ್ತಿದೆ.

ಆದರೆ, ಈಗ ಲಭ್ಯವಿರುವ ಬಹುತೇಕ ಸಂಶೋಧನೆಗಳು ಪುರುಷ ಗಗನಯಾತ್ರಿಗಳನ್ನು ಆಧರಿಸಿದ್ದು, ಮಹಿಳೆಯರ ದೇಹದ ಮೇಲೆ ಬಾಹ್ಯಾಕಾಶ ಹೇಗೆ ಭಿನ್ನವಾಗಿ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟವಾಗಿ ತಿಳಿಯುವುದು ಕಷ್ಟಕರವಾಗಿದೆ.

ವೈಯಕ್ತಿಕ ಮತ್ತು ಲಿಂಗಾಧಾರಿತ ವ್ಯತ್ಯಾಸಗಳ ಜೊತೆಗೆ, ಮೂಳೆಯ ಶಕ್ತಿ, ಹಾರ್ಮೋನ್‌ಗಳು, ಮತ್ತು ಹೃದಯದ ಆರೋಗ್ಯಗಳಲ್ಲೂ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಿರುತ್ತದೆ. ಆದ್ದರಿಂದ, ಬಾಹ್ಯಾಕಾಶ ಔಷಧಗಳು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ರೂಪಿತವಾಗಿರುವ ಅಗತ್ಯವಿದೆ.

ಮಹಿಳೆಯರಲ್ಲಿನ ಈಸ್ಟ್ರೋಜನ್ ಮಟ್ಟದ ಕಾರಣದಿಂದಾಗಿ ಅವರು ಆಸ್ಟಿಯೊಪೊರೋಸಿಸ್‌‌ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. 2021ರ ಒಂದು ಅಧ್ಯಯನದ ಪ್ರಕಾರ, ಮಹಿಳೆಯರು ಸಾಮಾನ್ಯವಾಗಿ ಪುರುಷರಿಂದ ಕಡಿಮೆ ರಕ್ತದೊತ್ತಡ ಹೊಂದಿರುತ್ತಾರೆ.

ಆಸ್ಟಿಯೊಪೊರೋಸಿಸ್‌ ಎನ್ನುವುದು ಒಂದು ವೈದ್ಯಕೀಯ ಪರಿಸ್ಥಿತಿಯಾಗಿದ್ದು, ಇದರಿಗೆ ತುತ್ತಾದವರ ಮೂಳೆಗಳು ದುರ್ಬಲ ಮತ್ತು ಸುಲಭವಾಗಿ ಒಡೆಯುವ ಸಾಧ್ಯತೆಗಳಿರುತ್ತವೆ. ಇದರ ಪರಿಣಾಮವಾಗಿ, ಅವರಲ್ಲಿ ಮೂಳೆ ಮುರಿತದ ಸಾಧ್ಯತೆಗಳು ಹೆಚ್ಚಿರುತ್ತವೆ. ಮೂಳೆಯ ಸಾಂದ್ರತೆಯ ನಷ್ಟದ ವೇಗ (ಮೂಳೆಗಳು ಕ್ಯಾಲ್ಸಿಯಂ ಮತ್ತು ಖನಿಜಗಳನ್ನು ಕಳೆದುಕೊಳ್ಳುವ ಪ್ರಮಾಣ) ಮೂಳೆಯ ಬೆಳವಣಿಗೆಯ ದರಕ್ಕಿಂತ ಹೆಚ್ಚಾಗಿರುತ್ತದೆ.

ಅದರೊಡನೆ, ಮಹಿಳೆಯರು ಆಟೋಇಮ್ಯುನ್ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, 80% ಪ್ರಕರಣಗಳು ಮಹಿಳೆಯರನ್ನು ಬಾಧಿಸುತ್ತವೆ. ಆದ್ದರಿಂದ, ಬಾಹ್ಯಾಕಾಶ ಹೇಗೆ ಮಹಿಳೆಯರ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಅಧ್ಯಯನ ನಡೆಸಲು ಮಹಿಳಾ ಗಗನಯಾತ್ರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದುವುದು ಅಗತ್ಯವಾಗಿದೆ.

ದೇಹದ ರೋಗನಿರೋಧಕ ವ್ಯವಸ್ಥೆ ಅಕಸ್ಮಾತ್ತಾಗಿ ತನ್ನದೇ ದೇಹದ ಆರೋಗ್ಯಕರ ಜೀವಕೋಶಗಳ ಮೇಲೆ ದಾಳಿ ನಡೆಸುವುದರಿಂದ ಆಟೋಇಮ್ಯುನ್ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದರ ಪರಿಣಾಮವಾಗಿ, ದೇಹದಲ್ಲಿ ಉರಿತ, ನೋವು, ಮತ್ತು ದೇಹದ ಅಂಗಗಳು ಮತ್ತು ಅಂಗಾಂಶಗಳಿಗೆ ಹಾನಿ ಉಂಟಾಗುವ ಸಾಧ್ಯತೆಗಳಿರುತ್ತವೆ.

ಜೈವಿಕ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ಸಂಶೋಧನೆಯ ಮಹತ್ವ

ಇಲ್ಲಿಯ ತನಕ, 75 ಮಹಿಳೆಯರು ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಆದರೆ, ಒಂದು ಸಂಶೋಧನೆಯ ಪ್ರಕಾರ, ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಿಕೊಂಡು, ಈ ಅಧ್ಯಯನಗಳನ್ನು ಇನ್ನಷ್ಟು ವೇಗಗೊಳಿಸಬಹುದಾದರೂ, ವಿಶೇಷವಾಗಿ ಮಹಿಳೆಯರ ಆರೋಗ್ಯದ ಮೇಲೆ ಬಾಹ್ಯಾಕಾಶ ಯಾತ್ರೆ ಎಂತಹ ಪರಿಣಾಮಗಳನ್ನು ಬೀರುತ್ತದೆ ಎಂಬ ಕುರಿತು ಹೆಚ್ಚಿನ ವಿಸ್ತೃತ ಸಂಶೋಧನೆಗಳು ಲಭ್ಯವಿಲ್ಲ. ಈ ಕ್ಷೇತ್ರದಲ್ಲಿ ಎಐ ಸಂಪೂರ್ಣವಾಗಿ ಬಳಕೆಯಾಗುವ ಮುನ್ನ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ.

ವಿಜ್ಞಾನಿಗಳು ಸೂಕ್ಷ್ಮ ಗುರುತ್ವಾಕರ್ಷಣೆಗೆ ರಕ್ತನಾಳಗಳು ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬ ಕುರಿತು ಅಧ್ಯಯನ ನಡೆಸಿದ್ದು, ಇದಕ್ಕಾಗಿ 'μವೆಸೆಲ್ - ಗ್ರ್ಯಾವಿಟಿ ಬಯೋಸೆನ್ಸರ್' ಎಂಬ ನೂತನ ಉಪಕರಣವನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದರ ಕುರಿತ ವಿಜ್ಞಾನಿಗಳ ಸಂಶೋಧನಾ ಪ್ರಬಂಧ ಜನವರಿ 2025ರಲ್ಲಿ ಪ್ರಕಟಗೊಳ್ಳುವ ನಿರೀಕ್ಷೆಗಳಿದ್ದವು. ಈ ಉಪಕರಣ ರಕ್ತನಾಳಗಳು ತಮ್ಮ ಸುತ್ತಲಿನ ಬದಲಾವಣೆಗಳಾದ ಗುರುತ್ವಾಕರ್ಷಣೆಯ ವ್ಯತ್ಯಾಸ, ಮತ್ತಿತರ ಬದಲಾವಣೆಗಳಿಗೆ ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎನ್ನುವುದನ್ನು ನಿಖರವಾಗಿ ಗಮನಿಸುತ್ತದೆ. ಈ ಉಪಕರಣ ಸೂಕ್ಷ್ಮ ಗುರುತ್ವಾಕರ್ಷಣೆ ರಕ್ತನಾಳಗಳ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎನ್ನುವ ಅಧ್ಯಯನವನ್ನು ಬಹಳಷ್ಟು ಅಭಿವೃದ್ಧಿ ಪಡಿಸಬಹುದು.

ರಕ್ತನಾಳಗಳಿಗೆ ಹೇಗೆ ವಯಸ್ಸಾಗುತ್ತದೆ ಮತ್ತು ಖಾಯಿಲೆಗಳು ಇದಕ್ಕೆ ಹೇಗೆ ಸಂಬಂಧಿಸಿರುತ್ತವೆ ಎನ್ನುವುದರ ಅಧ್ಯಯನ ನಡೆಸುವುದರಿಂದ ಬಾಹ್ಯಾಕಾಶ ಔಷಧಿಗಳಿಗೆ ಯಾಕೆ ಇಷ್ಟೊಂದು ಮಹತ್ವ ನೀಡಲಾಗಿದೆ ಎಂದು ತಿಳಿಯುತ್ತದೆ. ಈ ಸಂಶೋಧನೆಗಳಿಂದ, ಬಾಹ್ಯಾಕಾಶ ಮತ್ತು ಭೂಮಿ ಎರಡೂ ಕಡೆ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ತಿಳಿಯಲು ಸಹಾಯವಾಗುತ್ತದೆ.

ಬಾಹ್ಯಾಕಾಶ ಪ್ರಯಾಣ ದೇಹದ ಬಹುತೇಕ ಎಲ್ಲಾ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಬೇರೆ ಬೇರೆ ಗಗನಯಾತ್ರಿಗಳ ದೇಹ ಬಾಹ್ಯಾಕಾಶಕ್ಕೆ ಹೇಗೆ ಭಿನ್ನವಾಗಿ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಅಧ್ಯಯನ ಮಾಡುವುದು ಮುಖ್ಯ ಎಂದು ಅವರು ಹೇಳುತ್ತಾರೆ.

ಮಹಿಳೆಯರು ಮತ್ತು ಪುರುಷರ ಮೇಲೆ ಬಾಹ್ಯಾಕಾಶ ಹೇಗೆ ಭಿನ್ನವಾಗಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ, ಅದರಿಂದ ಬಾಹ್ಯಾಕಾಶ ಯಾನದ ಯೋಜನೆಗಳನ್ನು ರೂಪಿಸಲು ಮತ್ತು ಪ್ರತಿಯೊಬ್ಬ ಗಗನಯಾತ್ರಿಯ ದೇಹದ ವೈಶಿಷ್ಟ್ಯಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ಎಸ್ಎಎನ್ಎಸ್ ಮತ್ತು ಗಗನಯಾತ್ರಿಗಳ ಕಣ್ಣಿನ ಆರೋಗ್ಯ

ಸ್ಪೇಸ್ ಫ್ಲೈಟ್ ಅಸೋಸಿಯೇಟೆಡ್ ನ್ಯೂರೋ ಆಕ್ಯುಲರ್ ಸಿಂಡ್ರೋಮ್ (ಎಸ್ಎಎನ್ಎಸ್) ಬಾಹ್ಯಾಕಾಶದಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಸಮಸ್ಯೆಯಾಗಿದ್ದು, ಗಗನಯಾತ್ರಿಗಳ ಕಣ್ಣುಗಳು ಮತ್ತು ದೃಷ್ಟಿಯ ಮೇಲೆ ಪರಿಣಾಮ ಬೀರುತ್ತವೆ.

ಬ್ಲಾಂಟನ್ ಐ ಇನ್ಸ್ಟಿಟ್ಯೂಟ್ ನಲ್ಲಿ ನರ - ನೇತ್ರ ಶಾಸ್ತ್ರಜ್ಞರಾದ ಡಾ. ಆ್ಯಂಡ್ರ್ಯೂ ಲೀ ಅವರು ಇಂಟರೆಸ್ಟಿಂಗ್ ಇಂಜಿನಿಯರಿಂಗ್ ಮಾಧ್ಯಮದೊಡನೆ ಮಾತನಾಡುತ್ತಾ, ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ಎಸ್ಎಎನ್ಎಸ್ ಕಾಣಿಸಿಕೊಳ್ಳುತ್ತದಾದರೂ, ಅದರಲ್ಲಿ ಲಿಂಗಾಧಾರಿತ ವ್ಯತ್ಯಾಸಗಳಿವೆ ಎಂಬ ಸುಳಿವು ನೀಡಿದ್ದಾರೆ.

ಮಹಿಳೆಯರು ಮತ್ತು ಪುರುಷರು ನೋಡುವ ರೀತಿ ಭಿನ್ನವಾಗಿದ್ದು, ಮಹಿಳಾ ಗಗನಯಾತ್ರಿಗಳಲ್ಲಿ ಹಾರ್ಮೋನ್ ಬದಲಾವಣೆಗಳ ಅಧ್ಯಯನ ಮಾಡುವುದರಿಂದ ಕಣ್ಣಿನ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸಾಧ್ಯ ಎಂದಿದ್ದಾರೆ. ಭವಿಷ್ಯದ ದೀರ್ಘಾವಧಿಯ ಬಾಹ್ಯಾಕಾಶ ಯೋಜನೆಗಳ ದೃಷ್ಟಿಯಿಂದ, ಇಂತಹ ವ್ಯತ್ಯಾಸಗಳ ಕುರಿತು ಅಧ್ಯಯನ ನಡೆಸುವುದು ಬಹಳ ಮುಖ್ಯ ಎಂದು ಡಾ. ಲೀ ಅಭಿಪ್ರಾಯ ಪಡುತ್ತಾರೆ.

ಭವಿಷ್ಯದಲ್ಲಿ ಸಂಶೋಧಕರು 'ಸ್ಪೇಸ್ ಫ್ಲೈಟ್ ಅಸೋಸಿಯೇಟೆಡ್ ಡ್ರೈ ಐ ಸಿಂಡ್ರೋಮ್ (SADES)' ಮತ್ತು ಹಾರ್ಮೋನ್‌ಗಳಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳ ಕುರಿತು ಅಧ್ಯಯನ ನಡೆಸುವ ಸಾಧ್ಯತೆಗಳಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಡಾ. ಲೀ ಅವರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳುವ ಮುನ್ನವೇ ಅವರಿಗೆ ವೈಯಕ್ತಿಕಗೊಳಿಸಿದ ಕಣ್ಣು ಮತ್ತು ವೈದ್ಯಕೀಯ ತಪಾಸಣೆಗಳಿಗೆ ಒಳಗಾಗುತ್ತಾರೆ ಎಂದಿದ್ದಾರೆ.

File pic
ಮರಳಿ ಭೂಮಿಯತ್ತ: ಸಾಗರದಲ್ಲಿಳಿಯಲು ಸುನಿತಾ ವಿಲಿಯಮ್ಸ್ ಮತ್ತು ತಂಡ ಸನ್ನದ್ಧ (ಜಾಗತಿಕ ಜಗಲಿ)

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಗಗನಯಾತ್ರಿಗಳು 'ಸ್ಪೇಸ್ ಆ್ಯಂಟಿಸಿಪೇಟೆಡ್ ಗ್ಲಾಸಸ್' ಎಂಬ ಕನ್ನಡಕಗಳನ್ನು ಬಳಸುತ್ತಿದ್ದರು ಎಂದು ಡಾ. ಲೀ ವಿವರಿಸಿದ್ದಾರೆ. ಈಗ ವಿಜ್ಞಾನಿಗಳು ಬಾಹ್ಯಾಕಾಶ ಪ್ರಯಾಣಕ್ಕೂ ಮುನ್ನವೇ ದೃಷ್ಟಿಯಲ್ಲಿನ ಬದಲಾವಣೆಗಳನ್ನು ಅಂದಾಜಿಸಲು ಸಾಧ್ಯವಿದ್ದು, ಅವರಿಗೆ ಪ್ರಿಸ್ಬಯೋಪಿಕ್ ಕನ್ನಡಕಗಳನ್ನು (ವಯಸ್ಸಿಗೆ ಸಂಬಂಧಿಸಿದ ದೃಷ್ಟಿ ಸಮಸ್ಯೆಗಳಿಗೆ ಮುಂಜಾಗರೂಕವಾಗಿ ಬಳಸುವ ಕನ್ನಡಕ) ಮೊದಲೇ ಒದಗಿಸುತ್ತಾರೆ. ಇನ್ನು ಭವಿಷ್ಯದಲ್ಲಿ ವೈಯಕ್ತಿಕಗೊಳಿಸಿದ ಜೆನೆಟಿಕ್ ಔಷಧಗಳು ಬಾಹ್ಯಾಕಾಶ ಯಾತ್ರೆಗಳಿಗೆ ಸಂಬಂಧಿಸಿದಂತೆ ಆರೋಗ್ಯ ಅಪಾಯಗಳನ್ನು ಅಂದಾಜಿಸಲು ಮತ್ತು ನಿರ್ವಹಿಸಲು ನೆರವಾಗಬಹುದು ಎಂದು ಡಾ.ಲೀ ಹೇಳಿದ್ದಾರೆ.

ಬಾಹ್ಯಾಕಾಶ ಸವಾಲುಗಳಿಗೆ ಮಹಿಳೆಯರು ಮತ್ತು ಪುರುಷರ ಹೊಂದಾಣಿಕೆಯಲ್ಲಿನ ಭಿನ್ನತೆ

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಂಪನ, ವಿಕಿರಣ, ಮತ್ತು ಏಕಾಂಗಿತನದಂತಹ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಧ್ಯಯನಗಳ ಪ್ರಕಾರ, ಪುರುಷರು ಮತ್ತು ಮಹಿಳೆಯರು ಬಾಹ್ಯಾಕಾಶಕ್ಕೆ ವಿಭಿನ್ನವಾಗಿ ವರ್ತಿಸುವ ಸಾಧ್ಯತೆಗಳಿವೆ. ಉದಾಹರಣೆಗೆ, ಮಹಿಳಾ ಗಗನಯಾತ್ರಿಗಳು ಬಾಹ್ಯಾಕಾಶ ಯಾನದ ಸಂದರ್ಭದಲ್ಲಿ ಹೆಚ್ಚಿನ ತಲೆಸುತ್ತಿನಂತಹ ಸಮಸ್ಯೆಯನ್ನು ಎದುರಿಸುತ್ತಾರೆ.

2022ರ ಒಂದು ಅಧ್ಯಯನದಲ್ಲಿ 51 ಗಗನಯಾತ್ರಿಗಳ (40 ಪುರುಷರು ಮತ್ತು 11 ಮಹಿಳೆಯರು) ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, ಅವರು 2006ರಿಂದ 2018ರ ನಡುವೆ 4ರಿಂದ ಆರು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ವಾಸಿಸಿದ್ದರು.

ಬಾಹ್ಯಾಕಾಶ ಯೋಜನೆಗೆ ಮುನ್ನ, ಯೋಜನೆಯ ಸಂದರ್ಭದಲ್ಲಿ ಮತ್ತು ಬಾಹ್ಯಾಕಾಶದಿಂದ ಮರಳಿದ ಬಳಿಕ ಸಂಗ್ರಹಿಸಿದ ರಕ್ತದ ಮಾದರಿಗಳು ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆಯನ್ನು (ದೇಹ ಹೇಗೆ ಶಕ್ತಿಯನ್ನು ಬಳಸುತ್ತದೆ ಎನ್ನುವುದನ್ನು) ತೋರಿಸಿದ್ದು, ವಿಶೇಷವಾಗಿ ಚೇತರಿಕೆಯ ಹಂತದಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಪ್ರದರ್ಶಿಸಿದೆ. ಅದರಲ್ಲೂ ಮಹಿಳೆಯರು ಸಹಜ ಸ್ಥಿತಿಗೆ ಹೊಂದಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಕಂಡುಬಂದಿದೆ.

ಸುದೀರ್ಘ ಬಾಹ್ಯಾಕಾಶ ಯೋಜನೆಗಳು ದೇಹ ಸಕ್ಕರೆ ಮತ್ತು ಪ್ರೊಟೀನ್ ಅನ್ನು ನಿರ್ವಹಿಸುವುದರ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎನ್ನುವುದನ್ನು ಈ ಅಧ್ಯಯನ ಪತ್ತೆಹಚ್ಚಿದೆ. ಆದರೆ, ಈ ಬದಲಾವಣೆಗಳನ್ನು ಇನ್ನಷ್ಟು ಉತ್ತಮವಾಗಿ ಗುರುತಿಸಲು ಇನ್ನೂ ಹೆಚ್ಚಿನ ಸಂಶೋಧನೆ ಮತ್ತು ಮಾಹಿತಿಗಳ ಅಗತ್ಯವಿದೆ ಎಂದು ಈ ಅಧ್ಯಯನ ಹೇಳಿದೆ.

ಮಾಹಿತಿಗಳ ಕೊರತೆ ಮತ್ತು ಸೀಮಿತ ವಿವರಗಳು

ಇಂಟರೆಸ್ಟಿಂಗ್ ಇಂಜಿನಿಯರಿಂಗ್ ಪ್ರಕಾರ, ಬಾಹ್ಯಾಕಾಶ ಮಾನವರ ದೇಹದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎನ್ನುವುದನ್ನು ಅಧ್ಯಯನ ನಡೆಸುತ್ತಿರುವ, ಮತ್ತು ಇಂಟರ್ನ್ಯಾಷನಲ್ ಸ್ಪೇಸ್ ಯುನಿವರ್ಸಿಟಿಯ ಮುಖ್ಯ ಶೈಕ್ಷಣಿಕ ಅಧಿಕಾರಿಯಾಗಿರುವ ಡಾ. ವರ್ಜಿನಿಯಾ ವೊಟ್ರಿಂಗ್ ಅವರು ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಬಾಹ್ಯಾಕಾಶ ಆಧಾರಿತ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಇತಿಹಾಸವೂ ಕಾರಣವಾಗಿರಬಹುದು ಎಂದಿದ್ದಾರೆ.

ಬಾಹ್ಯಾಕಾಶ ಸಂಸ್ಥೆಗಳು ಮಹಿಳಾ ಗಗನಯಾತ್ರಿಗಳನ್ನು ಆಯ್ಕೆ ಮಾಡಲು ಆರಂಭಿಸಿದ್ದು ಬಹಳ ಇತ್ತೀಚೆಗೆ ಎನ್ನಬಹುದು. ಅಮೆರಿಕಾ 1980ರ ದಶಕದಲ್ಲಿ ಮಹಿಳಾ ಗಗನಯಾತ್ರಿಗಳನ್ನು ಒಳಗೊಳ್ಳಲು ಆರಂಭಿಸಿದರೆ, ಸೋವಿಯತ್ ಒಕ್ಕೂಟ ಸುದೀರ್ಘ ಕಾಲ ಏಕೈಕ ಮಹಿಳಾ ಗಗನಯಾತ್ರಿಯನ್ನು ಹೊಂದಿತ್ತು.

ಯುರೋಪ್ ಬಹಳ ಇತ್ತೀಚೆಗೆ, ಅಂದರೆ ಕೇವಲ ಹತ್ತು ವರ್ಷಗಳ ಹಿಂದಷ್ಟೇ ಮಹಿಳಾ ಗಗನಯಾತ್ರಿಗಳನ್ನು ಒಳಗೊಳ್ಳಲು ಆರಂಭಿಸಿತು. ಇಂತಹ ವಿಳಂಬದ ಕಾರಣದಿಂದಾಗಿ ಮಹಿಳಾ ಗಗನಯಾತ್ರಿಗಳ ವಿಚಾರದಲ್ಲಿ ಬಹಳಷ್ಟು ಸಾಧನೆ ಇನ್ನಷ್ಟೇ ಆಗಬೇಕಿದೆ ಎಂದು ಡಾ. ವೊರ್ಟಿಂಗ್ ಹೇಳಿದ್ದಾರೆ.

ಮಹಿಳಾ ಗಗನಯಾತ್ರಿಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಮಹಿಳಾ ಗಗನಯಾತ್ರಿಗಳು ಕಡಿಮೆ ಸಂಖ್ಯೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿರುವುದರಿಂದ, ಮಹಿಳೆಯರ ದೇಹದ ಮೇಲೆ ಬಾಹ್ಯಾಕಾಶ ಬೀರುವ ಪರಿಣಾಮಗಳ ಕುರಿತು ಕಡಿಮೆ ವೈದ್ಯಕೀಯ ಮಾಹಿತಿಗಳು ಲಭ್ಯವಿವೆ ಎಂದು ಅವರು ವಿವರಿಸಿದ್ದಾರೆ. ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಮಹಿಳೆಯರು ಗಗನಯಾತ್ರಿಗಳಾಗಲು ಪ್ರಯತ್ನ ನಡೆಸಬೇಕು ಎಂದು ಅವರು ಕರೆ ನೀಡಿದ್ದಾರೆ.

File pic
ಭಾರತ-ಚೀನಾ ಸಂಬಂಧಕ್ಕೆ 75 ವರ್ಷ: ಕೊನೆಯಾಗದ ವೈರುಧ್ಯ (ಜಾಗತಿಕ ಜಗಲಿ)

ಮಹಿಳೆಯರನ್ನು ಬಾಹ್ಯಾಕಾಶ ಯೋಜನೆಗಳಲ್ಲಿ ಪಾಲ್ಗೊಳ್ಳದಂತೆ ತಡೆಯುವಂತಹ ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆಯನ್ನು ಪತ್ತೆ ಹಚ್ಚಲಾಗಿಲ್ಲ ಎಂದು ಡಾ. ವೊರ್ಟಿಂಗ್ ಹೇಳಿದ್ದಾರೆ. ಗಗನಯಾತ್ರಿಗಳಿಗೆ ವೈಯಕ್ತಿಕ ವೈದ್ಯಕೀಯ ನೆರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಂಶೋಧನೆಗಳು ಇನ್ನಷ್ಟು ಮುಂದುವರಿದಿವೆ. ಇವುಗಳು ಗಗನಯಾತ್ರಿಗಳಿಗೆ ಚಿಕಿತ್ಸೆ ಮತ್ತು ರೋಗ ತಡೆಗಟ್ಟುವಿಕೆಗಳಿಗೆ ಅವಶ್ಯಕವಾದ ವೈದ್ಯಕೀಯ ಸಹಾಯವನ್ನು ಅಭಿವೃದ್ಧಿ ಪಡಿಸುವುದನ್ನು ಒಳಗೊಂಡಿವೆ.

ಪ್ರಸ್ತುತ ಗಗನಯಾತ್ರಿಗಳ ಸಂಖ್ಯೆ ಸಾಕಷ್ಟು ಕಡಿಮೆ ಇರುವುದರಿಂದ, ಪ್ರತಿಯೊಬ್ಬರಿಗೂ ವೈಯಕ್ತಿಕ ವೈದ್ಯಕೀಯ ಯೋಜನೆಯನ್ನು ರೂಪಿಸುವುದು ಸುಲಭವಾಗಿದೆ. ಇದರಿಂದ ಬಾಹ್ಯಾಕಾಶ ವೈದ್ಯಕೀಯ ವ್ಯವಸ್ಥೆ ಅತ್ಯಂತ ವಿಸ್ತೃತವಾಗಿರುತ್ತದೆ. ಗಗನಯಾತ್ರಿಗಳ ಆರೋಗ್ಯದ ದೃಷ್ಟಿಯಿಂದ ಇದು ಒಂದು ಅತ್ಯುತ್ತಮ ವಿಧಾನ ಎಂದು ಡಾ. ವೊರ್ಟಿಂಗ್ ಹೇಳಿದ್ದಾರೆ.

ಗಗನಯಾತ್ರಿಗಳಿಗೆ ಬಳಸುವ ಬಹುತೇಕ ಎಲ್ಲ ಔಷಧಿಗಳು, ಚಿಕಿತ್ಸಾ ವಿಧಾನಗಳು ಭೂಮಿಯಲ್ಲೇ ಅಭಿವೃದ್ಧಿ ಪಡಿಸಿರುವ ವೈದ್ಯಕೀಯ ವ್ಯವಸ್ಥೆಯಿಂದ ರೂಪಿತವಾಗಿವೆ.

ಇನ್ನು ಬಾಹ್ಯಾಕಾಶದಲ್ಲಿ ನಡೆಸುವ ಸಂಶೋಧನೆಗಳ ಪರಿಣಾಮವಾಗಿ, ಭೂಮಿಯಲ್ಲೂ ವೈದ್ಯಕೀಯ ವ್ಯವಸ್ಥೆ ಸುಧಾರಣೆ ಹೊಂದಬಹುದು. ಬಹುತೇಕ ಎಲ್ಲ ಔಷಧಗಳು, ಪರೀಕ್ಷೆಗಳು, ಮತ್ತು ಚಿಕಿತ್ಸಾ ವಿಧಾನಗಳು ಭೂಮಿಯಲ್ಲೇ ಅಭಿವೃದ್ಧಿ ಹೊಂದುವುದು ಇದಕ್ಕೆ ಕಾರಣವಾಗಿದೆ.

ಕೋವಿಡ್-19ರ ಉದಾಹರಣೆ

ಡಾ. ವೊರ್ಟಿಂಗ್ ಅವರು ಕೋವಿಡ್-19 ಪರೀಕ್ಷೆಯ ಉದಾಹರಣೆಯನ್ನು ನೀಡಿದ್ದಾರೆ. ಹಿಂದೆ, ವೈದ್ಯರು ಗಂಟಲಿನ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದರು. ಅದರ ವರದಿಗಾಗಿ ದಿನಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ, ಈಗ ಕ್ಷಿಪ್ರ ಪರೀಕ್ಷೆಗಳು ಅಭಿವೃದ್ಧಿ ಹೊಂದಿದ್ದು, ಯಾರು ಬೇಕಾದರೂ ಮನೆಯಲ್ಲೇ ಕೇವಲ 15 ನಿಮಿಷಗಳ ಒಳಗಾಗಿ ಫಲಿತಾಂಶವನ್ನು ಪಡೆಯಬಹುದು. ಇಷ್ಟು ಸುಲಭವಾಗಿ ಪರೀಕ್ಷೆ ನಡೆಸಲು ಸಾಧ್ಯವಾಗಿರುವುದರಿಂದ ವೈದ್ಯಕೀಯ ವ್ಯವಸ್ಥೆ ಸಾಕಷ್ಟು ಸುಧಾರಣೆ ಕಂಡಿದ್ದು, ಇದು ಭೂಮಿಯಲ್ಲಿ ಮಾತ್ರವಲ್ಲದೆ ಬಾಹ್ಯಾಕಾಶದಲ್ಲೂ ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಮಹಿಳಾ ಗಗನಯಾತ್ರಿಗಳ ಮುಖ್ಯ ಪಾತ್ರ

ಹಿಂದೆ, ಬಾಹ್ಯಾಕಾಶ ಅನ್ವೇಷಣೆಯಲ್ಲಿ ಪುರುಷರೇ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದರು. ಅವರೇ ಗಗನಯಾತ್ರಿಗಳಾಗಿ, ಮತ್ತು ಬಾಹ್ಯಾಕಾಶ ವಿಜ್ಞಾನ ಉದ್ಯೋಗಿಗಳಾಗಿ ಕಾರ್ಯಾಚರಿಸುತ್ತಿದ್ದರು.

ಮಹಿಳೆಯರು ಸಾಕಷ್ಟು ಕಡಿಮೆ ಸಂಖ್ಯೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿರುವುದರಿಂದ, ಸೂಕ್ಷ್ಮ ಗುರುತ್ವಾಕರ್ಷಣೆ ಮತ್ತು ಇತರ ಬಾಹ್ಯಾಕಾಶ ಸವಾಲುಗಳು ಅವರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಸವಾಲಾಗಿದೆ.

ಆದರೆ ಮಹಿಳೆಯರು ಬಾಹ್ಯಾಕಾಶದಲ್ಲಿ ಯಶಸ್ವಿಯಾಗುವುದಕ್ಕೆ ಜೀವಶಾಸ್ತ್ರ ಅಡ್ಡಿಯಾಗುತ್ತದೆ ಎನ್ನಲು ಯಾವುದೇ ಪುರಾವೆಗಳು ಲಭ್ಯವಿಲ್ಲ. ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸುವುದು ಮುಖ್ಯ ಎನ್ನುವ ಸಂದೇಶವನ್ನು ಇದು ರವಾನಿಸುತ್ತದೆ. ಈ ನಿಟ್ಟಿನಲ್ಲಿ ನಡೆಯುವ ಸಂಶೋಧನೆಗಳು ಬಾಹ್ಯಾಕಾಶ ಯಾನದ ಭವಿಷ್ಯವನ್ನು ರೂಪಿಸಿ, ವೈಯಕ್ತಿಕ ಅವಶ್ಯಕತೆಗಳಿಗೆ ತಕ್ಕಂತೆ ವೈದ್ಯಕೀಯ ನೆರವು ರೂಪಿಸಲು ನೆರವಾಗಬಲ್ಲವು.

ಮಹಿಳಾ ಗಗನಯಾತ್ರಿಗಳು ಹೆಚ್ಚಾಗಿ ಬಾಹ್ಯಾಕಾಶ ಯಾನ ನಡೆಸಿದರೆ, ಇಲ್ಲಿನ ಅಂತರವನ್ನು ತಗ್ಗಿಸಲು ಸಾಧ್ಯವಾಗಿ, ಬಾಹ್ಯಾಕಾಶ ನಮ್ಮ ದೇಹದ ಮೇಲೆ ಎಂತಹ ಪರಿಣಾಮ ಎನ್ನುವ ಜ್ಞಾನ ಹೊಂದಲು ಸಹಾಯ ಒದಗಿಸಿ, ವೈದ್ಯಕೀಯ ಆಧುನೀಕರಣದ ಪ್ರಯೋಜನ ಎಲ್ಲರಿಗೂ ಲಭ್ಯವಾಗುವಂತೆ ಮಾಡಬಹುದು.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com