ಮರಳಿ ಭೂಮಿಯತ್ತ: ಸಾಗರದಲ್ಲಿಳಿಯಲು ಸುನಿತಾ ವಿಲಿಯಮ್ಸ್ ಮತ್ತು ತಂಡ ಸನ್ನದ್ಧ (ಜಾಗತಿಕ ಜಗಲಿ)

ಕ್ರ್ಯೂ-10 ಯೋಜನೆಯ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ 'ಎಂಡ್ಯುರೆನ್ಸ್' ಎಂಬ ಹೆಸರು ಹೊಂದಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಮಾರ್ಚ್ 16ರ ಭಾನುವಾರ ಮಧ್ಯರಾತ್ರಿ 12:04 ಈಸ್ಟರ್ನ್ ಟೈಮ್‌ಗೆ (ಭಾರತದಲ್ಲಿ ಬೆಳಗಿನ 9:34) ತಲುಪಿ, ಹಾರ್ಮೊನಿ ಮಾಡ್ಯುಲ್ ಜೊತೆ ಡಾಕಿಂಗ್ ನಡೆಸಿತು.
sunita williams
ಸುನಿತಾ ವಿಲಿಯಮ್ಸ್ online desk
Updated on

ಸ್ಪೇಸ್ಎಕ್ಸ್ ಸಂಸ್ಥೆಯ ಕ್ರ್ಯೂ-10 ಯೋಜನೆ ಕಕ್ಷೆಯ ಮೂಲಕ 28 ಗಂಟೆಗಳ ಪಯಣವನ್ನು ನಡೆಸಿ, ಅಂತಿಮವಾಗಿ ತನ್ನ ಗುರಿಯಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್ಎಸ್) ತಲುಪಿದೆ.

ಮಾರ್ಚ್ 14ರ ಸಂಜೆ (ಈಸ್ಟರ್ನ್ ಟೈಮ್), ಸ್ಪೇಸ್ಎಕ್ಸ್ ಸಂಸ್ಥೆಯ ಫಾಲ್ಕನ್ 9 ರಾಕೆಟ್ ಮೂರು ದೇಶಗಳ ನಾಲ್ವರು ಗಗನಯಾತ್ರಿಗಳನ್ನು ಹೊತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ (ಐಎಸ್ಎಸ್) ಉಡಾವಣೆಗೊಂಡಿತು. ಕ್ರ್ಯೂ-10 ಎಂದು ಕರೆಯಲಾದ ಈ ಯೋಜನೆ, ಈಗಾಗಲೇ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಸಮಸ್ಯೆಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಾಕಿಯಾಗಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿದಂತೆ, ನಾಲ್ವರು ಗಗನಯಾತ್ರಿಗಳನ್ನು ಭೂಮಿಗೆ ಮರಳಿ ತರಲಿದೆ.

ಕ್ರ್ಯೂ-10 ಯೋಜನೆಯ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ 'ಎಂಡ್ಯುರೆನ್ಸ್' ಎಂಬ ಹೆಸರು ಹೊಂದಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಮಾರ್ಚ್ 16ರ ಭಾನುವಾರ ಮಧ್ಯರಾತ್ರಿ 12:04 ಈಸ್ಟರ್ನ್ ಟೈಮ್‌ಗೆ (ಭಾರತದಲ್ಲಿ ಬೆಳಗಿನ 9:34) ತಲುಪಿ, ಹಾರ್ಮೊನಿ ಮಾಡ್ಯುಲ್ ಜೊತೆ ಡಾಕಿಂಗ್ ನಡೆಸಿತು.

ಎರಡು ಬಾಹ್ಯಾಕಾಶ ನೌಕೆಗಳು, ಅಂದರೆ, ಹೊಸ ಸಿಬ್ಬಂದಿಗಳನ್ನು ಹೊತ್ತೊಯ್ದ ಎಂಡ್ಯುರೆನ್ಸ್ ಮತ್ತು ಬಾಹ್ಯಾಕಾಶದಲ್ಲಿ ಪರಿಭ್ರಮಣೆ ನಡೆಸುತ್ತಿರುವ ಪ್ರಯೋಗಾಲಯವಾದ ಐಎಸ್ಎಸ್ ಅಟ್ಲಾಂಟಿಕ್ ಸಮುದ್ರದಿಂದ 260 ಮೈಲಿ ಎತ್ತರದಲ್ಲಿ (ಅಂದಾಜು 418 ಕಿಲೋಮೀಟರ್) ಡಾಕಿಂಗ್ ನಡೆಸಿವೆ. ಹಾರ್ಮೊನಿ ಮಾಡ್ಯುಲ್ ಐಎಸ್ಎಸ್‌ನ ಪ್ರಮುಖ ಜೋಡಣಾ ತಾಣವಾಗಿದ್ದು, ಎಂಡ್ಯುರೆನ್ಸ್‌ನಂತಹ ಬಾಹ್ಯಾಕಾಶ ನೌಕೆಗಳಿಗೆ ಡಾಕಿಂಗ್ ಪೋರ್ಟ್ ಮತ್ತು ಬಾಹ್ಯಾಕಾಶ ನಿಲ್ದಾಣದ ಘಟಕಗಳ ನಡುವೆ ಚಲನೆಗಳಿಗೆ ಅವಕಾಶ ಮಾಡಿಕೊಡುತ್ತದೆ.

ಕ್ರ್ಯೂ-10 ಯೋಜನಾ ತಜ್ಞರಾದ ಜಪಾನಿನ ಜಾಕ್ಸಾ (ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೊರೇಶನ್ ಏಜೆನ್ಸಿ) ಸಂಸ್ಥೆಯ ಟಕುಯಾ ಒನಿಶಿ ಡಾಕಿಂಗ್ ನಡೆಸಿದ ಬಳಿಕ ತನ್ನ ಸಂತಸವನ್ನು ಹಂಚಿಕೊಂಡಿದ್ದು, "ಈ ಯೋಜನೆಯ ಭಾಗವಾಗಿರುವುದು ನಿಜಕ್ಕೂ ಗೌರವದ ವಿಚಾರವಾಗಿದೆ. ನಮ್ಮ ಮುಂದೆ ಬಹಳಷ್ಟು ರೋಚಕ ಕಾರ್ಯಗಳಿವೆ. ನಾವು ಅವುಗಳನ್ನು ಉತ್ಸಾಹದಿಂದ ಎದುರು ನೋಡುತ್ತಿದ್ದೇವೆ. ಈ ಪ್ರಯಾಣವನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು" ಎಂದಿದ್ದಾರೆ.

ಭಾನುವಾರ ಮಧ್ಯರಾತ್ರಿ 1:35ರ ಸುಮಾರಿಗೆ (ಭಾರತೀಯ ಕಾಲಮಾನದಲ್ಲಿ ಬೆಳಗ್ಗೆ 11:05) ಕ್ರ್ಯೂ ಡ್ರ್ಯಾಗನ್ ಎಂಡ್ಯುರೆನ್ಸ್ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ನಡುವಿನ ಹ್ಯಾಚ್‌ಗಳು ತೆರೆದುಕೊಂಡವು. ಅದಾಗಿ ಅಂದಾಜು ಹತ್ತು ನಿಮಿಷಗಳ ಬಳಿಕ, ಕ್ರ್ಯೂ-10ರ ಗಗನಯಾತ್ರಿಗಳು ಐಎಸ್ಎಸ್ ಒಳಗೆ ತೇಲುತ್ತಾ ಸಾಗಿದರು. ಆ ಮೂಲಕ ಪರಿಭ್ರಮಣೆ ನಡೆಸುತ್ತಿರುವ ಪ್ರಯೋಗಾಲಯವನ್ನು ಯಶಸ್ವಿಯಾಗಿ ಸೇರಿಕೊಂಡರು.

ಜಾಕ್ಸಾದ ಟಕುಯಾ ಒನಿಶಿ, ನಾಸಾದ ಗಗನಯಾತ್ರಿಗಳಾದ ಆ್ಯನ್ ಮೆಕ್‌ಕ್ಲೇನ್ ಮತ್ತು ನಿಕೋಲ್ ಆಯರ್ಸ್, ಹಾಗೂ ರಷ್ಯಾದ ಬಾಹ್ಯಾಕಾಶ ಸಂಸ್ಥೆಯಾದ ರಾಸ್‌ಕಾಸ್ಮೋಸ್‌ನ ಕಿರಿಲ್ ಪೆಸ್ಕೋವ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ನೂತನ ಸಿಬ್ಬಂದಿಗಳಾಗಿದ್ದಾರೆ.

ಆ್ಯನ್ ಮೆಕ್‌ಕ್ಲೇನ್ ಕ್ರ್ಯೂ-10ರ ಕಮಾಂಡರ್ ಆಗಿದ್ದು, ನಿಕೋಲ್ ಆಯರ್ಸ್ ಅವರು ಪೈಲಟ್ ಆಗಿದ್ದಾರೆ. ಟಕುಯಾ ಒನಿಶಿ ಮತ್ತು ಕಿರಿಲ್ ಪೆಸ್ಕೋವ್ ಅವರು ಯೋಜನಾ ತಜ್ಞರಾಗಿದ್ದಾರೆ. ಈ ನಾಲ್ವರು ಗಗನಯಾತ್ರಿಗಳು ಅಂದಾಜು ಮುಂದಿನ ಆರು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಇರಲಿದ್ದಾರೆ. ಸಾಮಾನ್ಯವಾಗಿ ಸಿಬ್ಬಂದಿಗಳ ಬದಲಾವಣೆಗೆ ಆರು ತಿಂಗಳು ನಿಗದಿತ ಅವಧಿಯಾಗಿದೆ.

ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್, ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್, ಮತ್ತು ನಾಸಾದ ಗಗನಯಾತ್ರಿ ನಿಕ್ ಹೇಗ್ ಅವರು ಬುಧವಾರ (ಮಾರ್ಚ್ 19) ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಭೂಮಿಗೆ ಮರಳುವ ನಿರೀಕ್ಷೆಗಳಿವೆ.

ಬೋಯಿಂಗ್ ಸಂಸ್ಥೆಯ ನೂತನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಪರೀಕ್ಷಾ ಪೈಲಟ್‌ಗಳಾಗಿದ್ದ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅವರು ಮೂಲತಃ ಕೇವಲ ಎಂಟು ದಿನಗಳ ಯೋಜನೆಗಾಗಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ, ಬಾಹ್ಯಾಕಾಶ ನೌಕೆಯಲ್ಲಿ ಕಾಣಿಸಿಕೊಂಡ ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್ ಅಸಮರ್ಪಕ ಕಾರ್ಯಾಚರಣೆಯ ಪರಿಣಾಮವಾಗಿ, ಅವರು ತೆರಳಿದ್ದ ಬಾಹ್ಯಾಕಾಶ ನೌಕೆ ಭೂಮಿಗೆ ಅವರನ್ನು ಮರಳಿ ಕರೆತರಲು ನಂಬಿಕಾರ್ಹವಲ್ಲ ಎಂದು ಭಾವಿಸಿ, ಅವರ ಯೋಜನೆ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ವಿಸ್ತರಿಸಿತು. ಇದೆಲ್ಲದರಿಂದ, ಸೆಪ್ಟೆಂಬರ್ ತಿಂಗಳಲ್ಲಿ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯನ್ನು ಖಾಲಿಯಾಗಿಯೇ ಭೂಮಿಗೆ ಮರಳಿ ತರಲಾಯಿತು.

ಬಾಹ್ಯಾಕಾಶದಿಂದ ಭೂಮಿಗೆ ಮರಳುವ ಗಗನಯಾತ್ರಿಗಳು ಸಾಮಾನ್ಯವಾಗಿ ನಡೆದಾಡಲು ಕಷ್ಟವಾಗುವುದು, ದೃಷ್ಟಿ ದೋಷ, ತಲೆ ಸುತ್ತು, ಮತ್ತು 'ಬೇಬಿ ಫೀಟ್' ಎಂದು ಕರೆಯಲ್ಪಡುವ ಸಮಸ್ಯೆಗಳನ್ನು ಎದುರಿಸುತ್ತಾರೆ. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೆಚ್ಚಾಗಿ ನಡೆದಾಡದಿರುವುದರಿಂದ, ಅವರ ಹಿಮ್ಮಡಿಗಳ ದಪ್ಪನೆಯ ಚರ್ಮ ಇಲ್ಲವಾಗಿ, ಹಿಮ್ಮಡಿ ಬಹಳಷ್ಟು ಮೃದು ಮತ್ತು ಸಂವೇದನೆಯನ್ನು ಹೊಂದುತ್ತದೆ. ಅದು ಒಂದು ಮಗುವಿನ ಚರ್ಮದಂತೆ ಭಾಸವಾಗುತ್ತದೆ.

ಭೂಮಿಯಲ್ಲಿ, ನಮ್ಮ ಪಾದಗಳು ನಿರಂತರವಾಗಿ ಗುರುತ್ವಾಕರ್ಷಣೆ ಮತ್ತು ಘರ್ಷಣೆಯನ್ನು ಎದುರಿಸುತ್ತಿರುತ್ತವೆ. ಅದು ಸಹಜವಾಗಿಯೇ ಪಾದದ ಚರ್ಮವನ್ನು ದಪ್ಪಗಾಗಿಸಿ, ನೋವಿನಿಂದ, ಸವೆಯುವಿಕೆಯಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ, ಬಾಹ್ಯಾಕಾಶದಲ್ಲಿ ತಿಂಗಳುಗಳ ಕಾಲ ಕಳೆದ ಬಳಿಕ, ಗಗನಯಾತ್ರಿಗಳ ಕಾಲಿನಲ್ಲಿ ಈ ಘರ್ಷಣೆ ಇರುವುದಿಲ್ಲ. ಅದರಿಂದ ಅವರ ಹಿಮ್ಮಡಿಯ ಗಟ್ಟಿಯಾದ ಚರ್ಮ ಸುಲಿದುಹೋಗುತ್ತದೆ.

sunita williams
ಗಗನಯಾನದಿಂದ ಸಮುದ್ರಯಾನದ ತನಕ: ಭವಿಷ್ಯಕ್ಕಾಗಿ ಭಾರತದ ಅನ್ವೇಷಣಾ ದೂರದೃಷ್ಟಿ (ಜಾಗತಿಕ ಜಗಲಿ)

ಒಂದು ಬಾರಿ ಭೂಮಿಗೆ ಮರಳಿದ ಬಳಿಕ, ಹಿಮ್ಮಡಿಯ ಚರ್ಮ ಮತ್ತೆ ಗಟ್ಟಿಯಾಗಲು ಹಲವು ವಾರಗಳಿಂದ ಹಲವು ತಿಂಗಳುಗಳೇ ಬೇಕಾಗುತ್ತದೆ. ಅಲ್ಲಿಯತನಕ ನಡೆದಾಡುವುದು ಅನನುಕೂಲಕರ ಮತ್ತು ನೋವಿನ ಅನುಭವವಾಗುವ ಸಾಧ್ಯತೆಗಳಿವೆ. ಆ ಬಳಿಕ ಗಗನಯಾತ್ರಿಗಳ ಪಾದಗಳು ಕ್ರಮೇಣ ಹೊಂದಿಕೊಳ್ಳುತ್ತವೆ.

ಸುನಿತಾ ವಿಲಿಯಮ್ಸ್ ಮತ್ತು ಕ್ರ್ಯೂ ಡ್ರ್ಯಾಗನ್ ಭೂಮಿಗೆ ಆಗಮನ

ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಸಹಜ ಪುನರಾಗಮನದ ಸಮಯವನ್ನು ಗಮನಿಸಿದರೆ, ಸುನಿತಾ ವಿಲಿಯಮ್ಸ್ ಮತ್ತು ಅವರ ಸಿಬ್ಬಂದಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್ಎಸ್) ಅಂದಾಜು ಮಾರ್ಚ್ 19, ಬುಧವಾರದಂದು ಭೂಮಿಯತ್ತ ಮರು ಪ್ರಯಾಣ ನಡೆಸುವ ಸಾಧ್ಯತೆಗಳಿವೆ. ಅವರು ಭೂಮಿಗೆ ತಲುಪಲು 12ರಿಂದ 24 ಗಂಟೆಗಳ ಸಮಯ ಬೇಕಾಗುತ್ತದೆ.

ಭೂಮಿಗೆ ಮರಳುವ ಪ್ರಕ್ರಿಯೆಯ ಹಂತಗಳು

ಐಎಸ್ಎಸ್‌ನಿಂದ ಹೊರಡುವುದು: ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನಿಲ್ದಾಣದಿಂದ ಅನ್‌ಡಾಕ್ ನಡೆಸಿ, ತನ್ನ ಮರು ಪ್ರಯಾಣವನ್ನು ಆರಂಭಿಸಲಿದೆ.

ಡಿ ಆರ್ಬಿಟ್ ಬರ್ನ್: ಅನ್ ಡಾಕಿಂಗ್ ನಡೆಸಿದ ಹಲವು ಗಂಟೆಗಳ ಬಳಿಕ, ಬಾಹ್ಯಾಕಾಶ ನೌಕೆ ತನ್ನ ಇಂಜಿನ್‌ಗಳನ್ನು ಚಾಲ್ತಿಗೊಳಿಸಿ, ತನ್ನ ವೇಗವನ್ನು ಕಡಿಮೆಗೊಳಿಸಿ, ಕಕ್ಷೆಯಿಂದ ಹೊರ ತೆರಳಲಿದೆ. ಬಾಹ್ಯಾಕಾಶ ನೌಕೆಯನ್ನು ಭೂಮಿಯತ್ತ ನಿರ್ದೇಶಿಸಲು ಇದು ಮುಖ್ಯ‌ ಚಲನೆಯಾಗಿದೆ.

ವಾತಾವರಣಕ್ಕೆ ಮರುಪ್ರವೇಶ: ಬಾಹ್ಯಾಕಾಶ ನೌಕೆ ಭೂಮಿಗೆ ಮರಳುತ್ತಿದ್ದಂತೆ, ಅದು ಅಪಾರ ಪ್ರಮಾಣದ ಉಷ್ಣ ಮತ್ತು ಕ್ಷಿಪ್ರ ಇಳಿಯುವಿಕೆಯನ್ನು ಅನುಭವಿಸಲಿದೆ.

ಪ್ಯಾರಾಶೂಟ್ ಚಾಲನೆ: ವಾತಾವರಣವನ್ನು ಮರಳಿ ಪ್ರವೇಶಿಸುವ ಬಹುಮುಖ್ಯ ಹಂತದ ಬಳಿಕ, ಬಾಹ್ಯಾಕಾಶ ನೌಕೆಯ ಪ್ಯಾರಾಶೂಟ್‌ಗಳು ತೆರೆದು, ಲ್ಯಾಂಡಿಂಗ್ ನಡೆಸುವ ಮುನ್ನ ಬಾಹ್ಯಾಕಾಶ ನೌಕೆಯ ವೇಗವನ್ನು ಕಡಿಮೆಗೊಳಿಸುತ್ತವೆ.

ಸ್ಪ್ಲಾಶ್ ಡೌನ್: ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಸಮುದ್ರದಲ್ಲಿನ ತನ್ನ ಪೂರ್ವ ನಿಯೋಜಿತ ಇಳಿಯುವ ಸ್ಥಳದಲ್ಲಿ ಇಳಿಯಲಿದೆ. ಬಳಿಕ ರಕ್ಷಣಾ ತಂಡದ ಸದಸ್ಯರು ಸಿಬ್ಬಂದಿಗಳನ್ನು ರಕ್ಷಿಸುತ್ತಾರೆ.

ಅಂದಾಜು ಲ್ಯಾಂಡಿಂಗ್ ಸಮಯ: ಒಂದು ವೇಳೆ ಸಿಬ್ಬಂದಿ ಬುಧವಾರ (ಭಾರತೀಯ ಕಾಲಮಾನ) ಬಾಹ್ಯಾಕಾಶ ನಿಲ್ದಾಣದಿಂದ ಹೊರಟರೆ, ಅವರು ಭಾರತೀಯ ಕಾಲಮಾನದಲ್ಲಿ ಮಾರ್ಚ್ 20ರ ಗುರುವಾರ ಸಮುದ್ರದಲ್ಲಿ ಇಳಿಯುವ ಸಾಧ್ಯತೆಗಳಿವೆ.

ಆದರೆ, ಅವರು ಭೂಮಿಯಲ್ಲಿ ಇಳಿಯುವ ನಿಖರವಾದ ಸಮಯ ಯೋಜನಾ ನಿಯತಾಂಕಗಳು, ಹವಾಮಾನ ಪರಿಸ್ಥಿತಿ, ಮತ್ತು ಲ್ಯಾಂಡಿಂಗ್ ತಾಣದ ಹೊಂದಾಣಿಕೆಗಳ ಅನುಸಾರವಾಗಿ ಬದಲಾಗಬಹುದು. ಹಿಂದಿನ ಕ್ರ್ಯೂ ಡ್ರ್ಯಾಗನ್ ಯೋಜನೆಗಳ ಅನುಸಾರವಾಗಿ ನೋಡಿದರೆ, ಅನ್ ಡಾಕಿಂಗ್ ನಡೆಸಿದ ಬಳಿಕ, 12ರಿಂದ 24 ಗಂಟೆಗಳ ಅವಧಿಯಲ್ಲಿ ಬಾಹ್ಯಾಕಾಶ ನೌಕೆ ಭೂಮಿಯಲ್ಲಿ ಇಳಿಯಬಹುದು.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com