
ಈ ವರ್ಷದಲ್ಲಿ ಭಾರತ ಡೀಪ್ ಸೀ ಮ್ಯಾನ್ಡ್ ಸಬ್‌ಮರ್ಸಿಬಲ್ ಎಂಬ ತನ್ನ ಮೊತ್ತಮೊದಲ ಮಾನವ ಸಹಿತ ಆಳ ಸಮುದ್ರ ವಾಹನದ ಮೊದಲ ಪ್ರಯೋಗವನ್ನು ನಡೆಸಲು ಸಿದ್ಧತೆ ನಡೆಸುತ್ತಿದೆ. ಈ ವಿಚಾರವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ ಜಿತೇಂದ್ರ ಸಿಂಗ್ ಅವರು ಗುರುವಾರ ದೆಹಲಿಯ ಪೃಥ್ವಿ ಭವನದಲ್ಲಿ ನಡೆದ 'ಆಳ ಸಮುದ್ರ ಯೋಜನೆ'ಯ ಯೋಜನಾ ನಿರ್ವಹಣಾ ಸಮಿತಿಯ ಸಭೆಯಲ್ಲಿ ಅಧಿಕೃತವಾಗಿ ಘೋಷಿಸಿದರು.
ಸಚಿವರು ಈ ಸಬ್‌ಮರ್ಸಿಬಲ್ ಆರಂಭಿಕವಾಗಿ ಸಮುದ್ರದ ಆಳದಲ್ಲಿ 500 ಮೀಟರ್‌ಗಳ ತನಕ ಇಳಿಯಲಿದ್ದು, ಮುಂದಿನ ವರ್ಷದ ವೇಳೆಗೆ ಇದು 6,000 ಮೀಟರ್‌ಗಳಷ್ಟು (ಅಂದಾಜು 20,000 ಅಡಿ) ಗಮನಾರ್ಹ ಆಳಕ್ಕೆ ಇಳಿಯಲಿದೆ ಎಂದರು. ಈ ಯೋಜನೆ ಯಶಸ್ವಿಯಾದರೆ, ಇಂತಹ ಮಹತ್ತರ ಸಾಧನೆ ನಡೆಸುವ ಸಾಮರ್ಥ್ಯ ಹೊಂದಿರುವ ಜಗತ್ತಿನ ಕೇವಲ ಆರನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.
ದೇಶದ ಪಾಲಿಗೆ ಬಹಳ ಮುಖ್ಯ ಯೋಜನೆಯಾಗಿರುವ ಆಳ ಸಮುದ್ರ ಯೋಜನೆ, ಭಾರತಕ್ಕೆ ಸಮುದ್ರದ ಆಳದಲ್ಲಿ ಬಚ್ಚಿಟ್ಟುಕೊಂಡಿರುವ ಮಹತ್ವದ ಸಂಪನ್ಮೂಲಗಳನ್ನು ಅನ್ವೇಷಿಸಲು ಮತ್ತು ಬಳಸಲು ಅವಕಾಶ ಮಾಡಿಕೊಡಲಿದೆ ಎಂದು ಸಚಿವರು ವಿವರಿಸಿದ್ದಾರೆ. ಆಳ ಸಮುದ್ರದ ಸಂಪನ್ಮೂಲಗಳಲ್ಲಿ ಅವಶ್ಯಕ ಖನಿಜಗಳು, ಆಧುನಿಕ ತಂತ್ರಜ್ಞಾನಗಳಲ್ಲಿ ಬಳಕೆಯಾಗುವ ಅಪರೂಪದ ಲೋಹಗಳು ಮತ್ತು ಇಲ್ಲಿಯತನಕ ಅನ್ವೇಷಿಸಿರದ ಸಮುದ್ರ ಜೀವಿಗಳು ಸೇರಿವೆ.
ಈ ಯೋಜನೆ ಕೇವಲ ಆಳ ಸಮುದ್ರದ ಅನ್ವೇಷಣೆಗೆ ಮಾತ್ರವೇ ಸೀಮಿತವಾಗಿರದೆ, ಭಾರತದ 'ನೀಲಿ ಆರ್ಥಿಕತೆ'ಗೆ ಉತ್ತೇಜನ ನೀಡಲಿದೆ ಎಂದು ಸಚಿವರು ಹೇಳಿದ್ದಾರೆ. ನೀಲಿ ಆರ್ಥಿಕತೆ (ಬ್ಲೂ ಎಕಾನಮಿ) ಎಂದರೆ, ದೇಶದ ಆರ್ಥಿಕ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಮುದ್ರ ಸಂಪನ್ಮೂಲಗಳ ಸುಸ್ಥಿರ ಬಳಕೆ ನಡೆಸಿ, ಜನರ ಜೀವನ ಮಟ್ಟ ಸುಧಾರಿಸಲು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಸಾಗರ ವಾತಾವರಣವನ್ನು ಸಂರಕ್ಷಿಸುವುದಾಗಿದೆ. ಈ ಕ್ರಮ ಭಾರತದ ಭವಿಷ್ಯದ ಅಭಿವೃದ್ಧಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.
ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಆಳ ಸಮುದ್ರ ಯೋಜನೆ ವಿಳಂಬಗೊಂಡಿದ್ದರೂ, ಇಲ್ಲಿಯವರೆಗೆ ಸಾಧಿಸಿರುವ ಪ್ರಗತಿ ತೃಪ್ತಿದಾಯಕವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆಳ ಸಮುದ್ರ ಯೋಜನೆಯೂ ಸಹ ಭಾರತದ ಮಹತ್ವಾಕಾಂಕ್ಷಿ 'ಗಗನಯಾನ' ಬಾಹ್ಯಾಕಾಶ ಯೋಜನೆಯಂತಹ ಪ್ರಮುಖ ಯೋಜನೆಗಳ ಮಾದರಿಯಲ್ಲಿ ಕಾಲಾವಧಿಯನ್ನು ಹಾಕಿಕೊಳ್ಳಲಿದೆ ಎಂದು ಅವರು ವಿವರಿಸಿದ್ದಾರೆ. ಈ ಯೋಜನೆ ಭಾರತದ ಬದ್ಧತೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಿದೆ ಎಂದು ಅವರು ಬಣ್ಣಿಸಿದ್ದಾರೆ. ಗಗನಯಾನ ಮತ್ತು ಆಳ ಸಮುದ್ರ ಯೋಜನೆಗಳು ಬಹುತೇಕ ಒಂದೇ ಸಮಯಕ್ಕೆ ನಡೆಯುವುದು ಒಂದು ಖುಷಿಯ ಕಾಕತಾಳೀಯವಾಗಿದ್ದು, ಭಾರತದ ವೈಜ್ಞಾನಿಕ ಪ್ರಗತಿ ಮತ್ತು ಬಾಹ್ಯಾಕಾಶ - ಸಮುದ್ರ ಎರಡರ ಅನ್ವೇಷಣೆಯಲ್ಲಿ ದೇಶದ ಸಾಧನೆಯನ್ನು ತೋರಿಸಲಿವೆ ಎಂದು ಅವರು ವಿವರಿಸಿದ್ದಾರೆ.
'ಮತ್ಸ್ಯ 6000' ಎಂಬ ಹೆಸರಿನ ಸಬ್‌ಮರ್ಸಿಬಲ್ ಅನ್ನು ಚೆನ್ನೈ ಬಳಿಯ ಬಂದರು ಒಂದರ ಸನಿಹ, ಮೂವರು ಸಿಬ್ಬಂದಿಗಳನ್ನು ಒಳಗೊಂಡಂತೆ ಪರೀಕ್ಷಿಸಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಯಶಸ್ವಿಯಾಗಿ ನಡೆದರೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶನ್ ಟೆಕ್ನಾಲಜಿ 2026ರಲ್ಲಿ ಸಿಬ್ಬಂದಿಗಳನ್ನು ಹಿಂದೂ ಮಹಾಸಾಗರದಲ್ಲಿ 6,000 ಮೀಟರ್‌ಗಳಷ್ಟು ಆಳಕ್ಕೆ ಕಳುಹಿಸುವ ಗುರಿ ಹೊಂದಿದೆ.
ಡಿಸೆಂಬರ್ 2024ರಲ್ಲಿ, ಚೆನ್ನೈನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶನ್ ಟೆಕ್ನಾಲಜಿಯ (ಎನ್ಐಒಟಿ) ವಿಜ್ಞಾನಿಯಾಗಿರುವ ರಮೇಶ್ ರಾಜು ಅವರು ಹೊಸ ವರ್ಷ 2025ರ ತನ್ನ ಯೋಜನೆಗಳಲ್ಲಿ ಕೇವಲ ಏಳು ಅಡಿ ಉದ್ದವಿರುವ ಸಣ್ಣ ಟೈಟಾನಿಯಂ ಚೇಂಬರ್‌ನಲ್ಲಿ ಕುಳಿತು, ಸಮುದ್ರದೊಳಗೆ ಎರಡು ಗಂಟೆಗಳ ಕಾಲ ಕಳೆಯುವುದು ಸಜ ಸೇರಿದೆ ಎಂದಿದ್ದರು. ರಾಜು ಅವರು ಭಾರತದ ಪ್ರಥಮ ಮಾನವ ಸಹಿತ ಆಳ ಸಮುದ್ರ ಯೋಜನೆಯಾದ 'ಸಮುದ್ರಯಾನ' ಯೋಜನೆಯ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.
ರಾಜು ಮತ್ತು ಎನ್ಐಒಟಿಯ ಇತರ 10 ವಿಜ್ಞಾನಿಗಳು ಕಳೆದ ಮೂರು ವರ್ಷಗಳಿಂದ ಮಹತ್ವಾಕಾಂಕ್ಷಿ 'ಸಮುದ್ರಯಾನ' ಯೋಜನೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ಸ್ಯ 6000ರ ಬಂದರು ಪರೀಕ್ಷೆಯನ್ನು ಮೂಲತಃ ಡಿಸೆಂಬರ್ 2024ರ ಮಧ್ಯಭಾಗದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಫೆಂಗಲ್ ಚಂಡಮಾರುತ ಮತ್ತು ಚೆನ್ನೈನ ಹವಾಮಾನ ವೈಪರೀತ್ಯಗಳಿಂದಾಗಿ ಅಂದುಕೊಂಡಂತೆ ಪರೀಕ್ಷೆಯನ್ನು ನಡೆಸಲು ವಿಜ್ಞಾನಿಗಳಿಗೆ ಸಾಧ್ಯವಾಗಲಿಲ್ಲ.
2024ರ ಡಿಸೆಂಬರ್ ಕೊನೆಯ ವೇಳೆಗೆ, ಚೆನ್ನೈ ಸನಿಹದ ಒಂದು ಬಂದರಿನಲ್ಲಿ 28 ಟನ್ ತೂಕದ ಈ ವಾಹನವನ್ನು ಮೂವರು ಸಿಬ್ಬಂದಿಗಳ ಸಹಿತವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಘೋಷಿಸಲಾಯಿತು. ಭಾರತೀಯ ಹವಾಮಾನ ಇಲಾಖೆಯಿಂದ (ಐಎಂಡಿ) ಅನುಮೋದನೆ ಪಡೆದ ಬಳಿಕ, ತಂಡ ಈಗ ಅಂತಿಮವಾಗಿ ಬಂಗಾಳ ಕೊಲ್ಲಿಯಲ್ಲಿ ಸಬ್‌ಮರ್ಸಿಬಲ್ ಅನ್ನು 15 ಮೀಟರ್‌ಗಳಷ್ಟು ಆಳ ಸಮುದ್ರಕ್ಕೆ ಇಳಿಸಲು ಸಿದ್ಧವಾಗಿದೆ. ಯೋಜನಾ ನಿರ್ದೇಶಕರು ಡಿಸೆಂಬರ್ ಮೂರನೇ ವಾರದಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದರೂ, ಆ ಬಳಿಕ ಯೋಜನೆಯ ಪ್ರಗತಿಯ ಕುರಿತು ಮಾಹಿತಿಗಳು ಲಭ್ಯವಾಗಿರಲಿಲ್ಲ.
ಆ ಸಮಯದಲ್ಲಿ ಮಾಹಿತಿ ನೀಡಿದ್ದ ನಿರ್ದೇಶಕರು, ಆರಂಭದಲ್ಲಿ ಪರೀಕ್ಷೆಗಳನ್ನು ಸಿಬ್ಬಂದಿ ರಹಿತವಾಗಿ ನಡೆಸಿ, ಬಳಿಕ ಸಿಬ್ಬಂದಿ ಸಹಿತ ಪರೀಕ್ಷೆ ನಡೆಸಲಾಗುತ್ತದೆ ಎಂದಿದ್ದರು. ಎಲ್ಲವೂ ಅಂದುಕೊಂಡಂತೆ ಸಾಗಿದರೆ, ಪರೀಕ್ಷೆಗಳನ್ನು ಮುಂದಿನ ವರ್ಷ ಬಂಗಾಳ ಕೊಲ್ಲಿಯಲ್ಲಿ 100 ಮೀಟರ್, 200 ಮೀಟರ್, ಹಾಗೂ 500 ಮೀಟರ್‌ಗಳಷ್ಟು ಆಳದಲ್ಲಿ ನಡೆಸಲಾಗುತ್ತದೆ. ವಿಜ್ಞಾನಿಗಳು ಈಗಾಗಲೇ ಬ್ಯಾಟರಿಗಳು, ಪ್ರೊಪೆಲರ್‌ಗಳು ಸಂವಹನ ವ್ಯವಸ್ಥೆಗಳಂತಹ ವಿವಿಧ ಭಾಗಗಳನ್ನು ಸಿದ್ಧಗೊಳಿಸಿ, ಅವುಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಲಾಗುತ್ತದೆ.
ಆದರೆ, ಬಂದರು ಪರೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಜೋಡಣೆಗೊಂಡಿರುವ ವಾಹನವನ್ನು ಸಿಬ್ಬಂದಿಗಳ ಸಹಿತವಾಗಿ ಸಮುದ್ರದಾಳದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದಕ್ಕಾಗಿ ಯೋಜನೆಯನ್ನು 2026ರ ಕೊನೆಯ ವೇಳೆಗೆ ಹಿಂದೂ ಮಹಾಸಾಗರದ ಮಧ್ಯ ಭಾಗದಲ್ಲಿರುವ ಉದ್ದೇಶಿತ ಪರೀಕ್ಷಾ ತಾಣಕ್ಕೆ ವರ್ಗಾಯಿಸಲಾಗುತ್ತದೆ.
50 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಚೆನ್ನೈನ ಎನ್ಐಒಟಿ ಕ್ಯಾಂಪಸ್‌ನಲ್ಲಿ ಈಗ ಉತ್ಸಾಹ ಮನೆ ಮಾಡಿದ್ದು, ಎಲ್ಲರೂ ಮುಂಬರುವ ಬಂದರು ಪರೀಕ್ಷೆಯ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ. ನಿರ್ದೇಶಕರ ಕಚೇರಿಯಿಂದ, ಮತ್ಸ್ಯ 6000 ವಾಹನವನ್ನು ಅಭಿವೃದ್ಧಿ ಪಡಿಸುತ್ತಿರುವ ಕಾರ್ಯಾಗಾರದ ತನಕ, ಬಹಳಷ್ಟು ಕಾರ್ಯಗಳು ನಡೆಯುತ್ತಿವೆ. ಮತ್ಸ್ಯ 6000 ಸಬ್‌ಮರ್ಸಿಬಲ್ ಅನ್ನು ಜೋಡಿಸಲು ಮೂರು ತಂಡಗಳು ಜೊತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳು ಮುಂಬರುವ ದೊಡ್ಡ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿವೆ.
ಜೋಡಣಾ ಕೇಂದ್ರದಾದ್ಯಂತ ವಿವಿಧ ಯಂತ್ರಗಳ ಲಯಬದ್ಧ ಸದ್ದುಗಳೇ ಕೇಳಿಬರುತ್ತಿವೆ. ಈ ಪ್ರದೇಶವನ್ನು ಹಾದುಹೋಗುವ ಯಾರೇ ಆದರೂ ಈ ಸದ್ದುಗಳನ್ನು ಕೇಳಿ, ಒಳಗೆ ಯಾವುದೇ ನಿಲುಗಡೆಯಿಲ್ಲದೆ ಕೆಲಸ ನಡೆಯುತ್ತಿರುವುದನ್ನು ಊಹಿಸಬಹುದು. ಭೂಮಿಯ ಮೇಲೆ ನೋಡುವಾಗ ಸಬ್‌ಮರ್ಸಿಬಲ್ ಬಹಳ ದೊಡ್ಡದಾಗಿ ಕಂಡುಬರುತ್ತದೆ. ಮತ್ಸ್ಯ 6000 ಉದ್ದನೆಯ ಮೈಯನ್ನು ಹೊಂದಿದ್ದು, ಕಬ್ಬಿಣದ ರೇಲಿಂಗ್‌ಗಳ ಬೆಂಬಲ ಹೊಂದಿದ್ದು, ಎರಡೂ ಬದಿಗಳಲ್ಲಿ ಆಯತಾಕಾರದ, ಕಿತ್ತಳೆ ಬಣ್ಣದ ಬ್ಯಾಟರಿಗಳನ್ನು ಹೊಂದಿದೆ. ಹಿಂಭಾಗದಲ್ಲಿ ಪ್ರೊಪೆಲ್ಲರ್‌ಗಳಾಗಿ ಕಾರ್ಯಾಚರಿಸುವ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಮೇಲ್ಭಾಗದಲ್ಲಿ ಒಂದು ತೇಲುವ ಗೋಳವಿದ್ದು, ವೀಕ್ಷಣೆಗಾಗಿ ಮೂರು ಕಿಟಕಿಗಳನ್ನು ಹೊಂದಿದೆ.
ಸಿಬ್ಬಂದಿಗಳು ವಾಹನದ ಸುತ್ತಲೂ ಕೆಲಸ ಮಾಡುತ್ತಾ, ಕೇಬಲ್‌ಗಳನ್ನು ಅಳವಡಿಸುತ್ತಾ, ವಿವಿಧ ವ್ಯವಸ್ಥೆಗಳನ್ನು ಪರಿಶೀಲಿಸುತ್ತಾ, ಎಲ್ಲವೂ ಸರಿಯಾಗಿದೆ ಎಂದು ಖಾತ್ರಿಪಡಿಸುತ್ತಿದ್ದಾರೆ. "ಬಂದರು ಪರೀಕ್ಷೆಯಲ್ಲಿ ಯೋಜನೆಯ ಎಲ್ಲವೂ ಒಂದಾಗಿ ಬರುತ್ತದೆ" ಎಂದು ಎನ್ಐಒಟಿಯ ಆಳ ಸಮುದ್ರ ತಂತ್ರಜ್ಞಾನ & ಸಬ್‌ಮರ್ಸಿಬಲ್ ಗುಂಪಿನ ನೇತೃತ್ವ ವಹಿಸಿರುವ, ಸಮುದ್ರಯಾನ ಯೋಜನೆಯ ಉಸ್ತುವಾರಿಯಾಗಿರುವ ರಮೇಶ್ ಸೇತುರಾಮನ್ ವಿವರಿಸಿದ್ದಾರೆ.
ರಾಜು ಅವರು ಮತ್ಸ್ಯ 6000 ವಾಹನದ ಇಲೆಕ್ಟ್ರಾನಿಕ್ಸ್ ಮತ್ತು ನ್ಯಾವಿಗೇಶನ್ ವ್ಯವಸ್ಥೆಗಳ ಜವಾಬ್ದಾರಿ ಹೊಂದಿದ್ದಾರೆ. ಅವರು ಎನ್ಐಒಟಿಯಲ್ಲಿ 20ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದು, ಅಪಾರ ಕೌಶಲ ಹೊಂದಿದ್ದಾರೆ. ಅವರು ರಿಮೋಟ್ ಚಾಲಿತ ವಾಹನಗಳು (ಆರ್‌ಒವಿ) ಮತ್ತು ಸ್ವಾಯತ್ತ ನೀರಿನಾಳದ ವಾಹನಗಳನ್ನು (ಎಯುವಿ) ಬಳಸಿ (ಆರ್‌ಒವಿ) 50ರಷ್ಟು ಆಳ ಸಮುದ್ರ ಜಿಗಿತಗಳನ್ನು ನಿರ್ವಹಿಸಿದ್ದಾರೆ. ಆರ್‌ಒವಿಗಳು ಮಾನವ ರಹಿತ ನೀರಿನಾಳದ ರೋಬೋಟ್‌ಗಳಾಗಿದ್ದು, ಅವುಗಳನ್ನು ಅವುಗಳ ಉದ್ದೇಶಗಳಿಗೆ ಅನುಗುಣವಾಗಿ ಅಳವಡಿಸಿರುವ 11,000 ಮೀಟರ್‌ಗಳಷ್ಟು ಉದ್ದನೆಯ ಕೇಬಲ್‌ಗಳ ಆಧಾರದಲ್ಲಿ ಭೂಮಿಯಿಂದಲೇ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇನ್ನು ಎಯುವಿಗಳು ಯಾವುದೇ ಕೇಬಲ್‌ಗಳ ಅಗತ್ಯವಿಲ್ಲದೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲವಾಗಿದ್ದು, ಅಂದಾಜು 6,000 ಮೀಟರ್‌ಗಳಷ್ಟು ಆಳದ ತನಕ ಸಾಗಬಲ್ಲವು. ಇವುಗಳನ್ನು ಎನ್ಐಒಟಿ ಅಭಿವೃದ್ಧಿ ಪಡಿಸಿದೆ.
ರಾಜು ಅವರು ಸಹಜವಾಗಿ ಮತ್ಸ್ಯ 6000ನ ಪೈಲಟ್ ಆಗಿ ಆಯ್ಕೆಯಾಗಿದ್ದು, ಈಗ ಪೈಲಟ್ ತರಬೇತಿ ಮತ್ತು ವೈದ್ಯಕೀಯ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅವರು ಆರ್‌ಒವಿ ಮತ್ತು ಎಯುವಿ ಅನುಭವಗಳನ್ನು ಹೊಂದಿದ್ದರೂ, ಅವರು ಮತ್ಸ್ಯ 6000 ಅನ್ನು ನಿರ್ವಹಿಸಲು ಅಗತ್ಯ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬೇಕಿದೆ. ರಾಜು ಅವರ ಸಹೋದ್ಯೋಗಿಗಳು ಅವರ ಸಾಮರ್ಥ್ಯ ಮತ್ತು ಬದ್ಧತೆಯ ಕುರಿತು ಸಂಪೂರ್ಣ ಭರವಸೆ ಹೊಂದಿದ್ದಾರೆ. ಅಕ್ಟೋಬರ್ 2024ರಲ್ಲಿ ಎನ್ಐಒಟಿ ಮತ್ಸ್ಯ 6000ಕ್ಕಾಗಿ ಮಾನವ ಗೋಳದ ಮಾದರಿಯನ್ನು ಸಿದ್ಧಪಡಿಸಿದ್ದು, ರಾಜು ಮತ್ತು ಸೇತುರಾಮನ್ ಅವರು ಸ್ವತಃ ಅದನ್ನು ಪರೀಕ್ಷಿಸಿ, ಸಂಸ್ಥೆಯ ಏಳು ಮೀಟರ್ ಆಳದ ಮುಳುಗು ಟ್ಯಾಂಕ್‌ನಲ್ಲಿ ಹಲವು ಗಂಟೆಗಳನ್ನು ಕಳೆದು, ಗೋಳ ಅಂದುಕೊಂಡಂತೆ ಕಾರ್ಯಾಚರಿಸುತ್ತಿದೆ ಎಂದು ಖಾತ್ರಿಪಡಿಸಿದ್ದರು.
ಆಳ ಸಮುದ್ರ ಯೋಜನೆಯಲ್ಲಿ 6,000 ಮೀಟರ್‌ಗಳಷ್ಟು ಆಳ ಸಾಗುವ ಗುರಿ ಹಾಕಿಕೊಂಡಿರುವುದು ಕಾರ್ಯತಂತ್ರದ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಭಾರತ ಸಮುದ್ರದ ತಳದಿಂದ 'ಪಾಲಿ ಮೆಟಾಲಿಕ್ ನಾಡ್ಯುಲ್‌ಗಳು' ಮತ್ತು 'ಪಾಲಿ ಮೆಟಾಲಿಕ್ ಸಲ್ಫೈಡ್'ಗಳಂತಹ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಮೇಲೆ ತರುವ ನಿರ್ಧಾರ ಕೈಗೊಂಡಿದೆ.
ಸಮುದ್ರದ ಆಳದಲ್ಲಿರುವ 'ಪಾಲಿ ಮೆಟಾಲಿಕ್ ನಾಡ್ಯುಲ್'ಗಳು ತಾಮ್ರ, ಮ್ಯಾಂಗನೀಸ್, ನಿಕ್ಕೆಲ್, ಕಬ್ಬಿಣ ಮತ್ತು ಕೋಬಾಲ್ಟ್‌ನಂತಹ ಲೋಹಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಈ ನಾಡ್ಯುಲ್‌ಗಳು ಸಾಮಾನ್ಯವಾಗಿ ಸಮುದ್ರದಲ್ಲಿ ಅಂದಾಜು 5,000 ಮೀಟರ್‌ಗಳಷ್ಟು ಆಳದಲ್ಲಿ ಸಿಗುತ್ತವೆ. ಅದೇ ರೀತಿ, 'ಪಾಲಿ ಮೆಟಾಲಿಕ್ ಸಲ್ಫೈಡ್'ಗಳು ಹಿಂದೂ ಮಹಾಸಾಗರದ ಮಧ್ಯದಲ್ಲಿ 3,000 ಮೀಟರ್‌ಗಳಷ್ಟು ಆಳದಲ್ಲಿ ಲಭಿಸುತ್ತವೆ.
ಈ ಉದ್ದೇಶಕ್ಕಾಗಿ ಹಿಂದೂ ಮಹಾಸಾಗರದ ಎರಡು ಪ್ರದೇಶಗಳಲ್ಲಿ ಅನ್ವೇಷಣೆ ನಡೆಸಲು ಇಂಟರ್ನ್ಯಾಷನಲ್ ಸೀ ಬೆಡ್ ಅಥಾರಿಟಿ (ಐಎಸ್ಎ) ಭಾರತಕ್ಕೆ ಅನುಮತಿ ನೀಡಿದೆ. ಒಂದು ಹಿಂದೂ ಮಹಾಸಾಗರದ ಕೇಂದ್ರ ಭಾಗದಲ್ಲಿರುವ 75,000 ಚದರ ಕಿಲೋಮಿಟರಗಳ ವಿಶಾಲ ಪ್ರದೇಶವಾದರೆ, ಇನ್ನೊಂದು 26° ದಕ್ಷಿಣದಲ್ಲಿರುವ ಸಣ್ಣದಾದ, 10,000 ಚದರ ಕಿಲೋಮೀಟರ್ ಪ್ರದೇಶವಾಗಿದೆ. ಇದು ಭಾರತಕ್ಕೆ ಸಮುದ್ರದಾಳದ ಮೌಲ್ಯಯುತವಾದ ಸಂಪನ್ಮೂಲಗಳನ್ನು ಅಧ್ಯಯನ ನಡೆಸಿ, ಅವುಗಳನ್ನು ಪಡೆದುಕೊಳ್ಳಲು ಅವಕಾಶ ನೀಡುತ್ತದೆ.
ಈ ಸಂಪನ್ಮೂಲಗಳತ್ತ ಕೈ ಚಾಚುವ ಉದ್ದೇಶದಿಂದ, ಭಾರತದ ಗಮನ ಸಮುದ್ರದಲ್ಲಿ 3,000 - 5,500 ಮೀಟರ್ ತನಕ ಆಳಕ್ಕೆ ಸಾಗುವತ್ತ ಇದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಎಂ ರವಿಚಂದ್ರನ್ ವಿವರಿಸಿದ್ದಾರೆ. ಆದ್ದರಿಂದ, 6,000 ಮೀಟರ್‌ಗಳಷ್ಟು ಆಳದಲ್ಲಿ ಕಾರ್ಯಾಚರಿಸಲು ಸಿದ್ಧತೆ ನಡೆಸುವುದರಿಂದ, ಭಾರತಕ್ಕೆ ತನ್ನ ವಿಶೇಷ ಆರ್ಥಿಕ ವಲಯ ಮತ್ತು ಹಿಂದೂ ಮಹಾಸಾಗರದ ಮಧ್ಯ ಭಾಗದಲ್ಲಿ ಅನ್ವೇಷಣೆ ನಡೆಸಲು, ಕಾರ್ಯಾಚರಿಸಲು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಭಾರತಕ್ಕೆ ಆಳ ಸಮುದ್ರ ಚಟುವಟಿಕೆಗಳನ್ನು ಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
ಆಳ ಸಮುದ್ರ ಅನ್ವೇಷಣೆಯನ್ನು ಬಾಹ್ಯಾಕಾಶ ಅನ್ವೇಷಣೆಗಿಂತಲೂ ಕಷ್ಟಕರ ಎಂದು ಪರಿಗಣಿಸಲಾಗಿದೆ. ಇದಕ್ಕೆ ಸಮುದ್ರ ಆಳದಿಂದ ಬರುವ ಅತಿಯಾದ ಒತ್ತಡ ಮುಖ್ಯ ಕಾರಣವಾಗಿದೆ. ಬಾಹ್ಯಾಕಾಶದ ಪರಿಸ್ಥಿತಿ ಬಹುತೇಕ ನಿರ್ವಾತದ್ದಾಗಿದ್ದು, ಅಲ್ಲಿ ಯಾವುದೇ ಒತ್ತಡ ಇರುವುದಿಲ್ಲ. ಆದರೆ, ಆಳ ಸಮುದ್ರ ಅತ್ಯಧಿಕ ಪ್ರಮಾಣದಲ್ಲಿ ಒತ್ತಡ ಹೇರುತ್ತದೆ. ಉದಾಹರಣೆಗೆ, ಸಮುದ್ರದಲ್ಲಿ ಒಂದು ಮೀಟರ್ ಆಳಕ್ಕಿಳಿಯುವುದೇ 10,000 ಕೆಜಿಯಷ್ಟು ತೂಕವನ್ನು ಒಯ್ಯುವಷ್ಟು ಒತ್ತಡವನ್ನು ಹೇರುತ್ತದೆ. ಈ ತೂಕವನ್ನು ಬಹುತೇಕ ಸಂಪೂರ್ಣವಾಗಿ ಬೆಳೆದ ಒಂದು ಆನೆಯ ತೂಕಕ್ಕೆ ಹೋಲಿಸಬಹುದು! ಹಾಗೆಯೇ ಸಮುದ್ರದ ಆಳಕ್ಕೆ ಸಾಗುತ್ತಿದ್ದಂತೆ, ಒತ್ತಡದ ಪ್ರಮಾಣವೂ ಅಷ್ಟೇ ಕ್ಷಿಪ್ರವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ಅದರಿಂದ ಇಷ್ಟೊಂದು ಕಠಿಣವಾದ ಸನ್ನಿವೇಶದಲ್ಲಿ ಕಾರ್ಯಾಚರಿಸುವುದಿರಲಿ, ನಾಶವಾಗದೆ ಉಳಿಯುವಂತಹ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದೇ ಬಹುದೊಡ್ಡ ಸವಾಲಾಗಿದೆ.
ಇಂತಹ ಅತಿಯಾದ ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯಾಚರಿಸಲು ಅತ್ಯಂತ ಗಟ್ಟಿಯಾದ, ಹೆಚ್ಚಿನ ಸಹಿಷ್ಣುತೆ ಹೊಂದಿರುವ ವಸ್ತುಗಳಿಂದ ನಿರ್ಮಿಸಿರುವ ಉಪಕರಣಗಳ ಅಗತ್ಯವಿರುತ್ತದೆ. ಬಾಹ್ಯಾಕಾಶದ ನಿರ್ವಾತದಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ಉಪಕರಣಗಳು ಹೆಚ್ಚು ಸುಲಭವಾಗಿ ಕಾರ್ಯಾಚರಿಸುತ್ತವೆ. ಆದರೆ, ಅವು ನೀರಿನಾಳದಲ್ಲಿ ಕಾರ್ಯಾಚರಿಸುವುದು ಬಹುದೊಡ್ಡ ಸವಾಲಾಗಿದೆ. ಒಂದುವೇಳೆ ಉಪಕರಣಗಳನ್ನು ಸರಿಯಾಗಿ ನಿರ್ಮಿಸದಿದ್ದರೆ, ಅವುಗಳು ಕುಸಿದು ಹೋಗಬಹುದು, ಅಥವಾ ನೀರಿನ ಅತಿಯಾದ ತೂಕಕ್ಕೆ ಸಿಲುಕಿ, ಸ್ಫೋಟಗೊಳ್ಳಬಹುದು. ಈ ಕಾರಣಕ್ಕಾಗಿಯೇ ಆಳ ಸಮುದ್ರ ಅನ್ವೇಷಣೆಗೆ ಬಳಸುವ ಉಪಕರಣಗಳು ಮತ್ತು ಯಂತ್ರಗಳನ್ನು ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಮರ್ಥವಾಗಿರುವಂತೆ ನಿರ್ಮಿಸಲಾಗುತ್ತದೆ.
ಸಮುದ್ರದ ತಳ ಅತ್ಯಂತ ಮೃದು ಮತ್ತು ಕೆಸರು ಹೊಂದಿರುವುದರಿಂದ, ಅಲ್ಲಿಗೆ ತಲುಪುವುದು ಬಹಳಷ್ಟು ಸವಾಲಿನ ಕಾರ್ಯವಾಗಿದೆ. ಅಲ್ಲಿನ ಕೆಸರು ಮತ್ತು ಮೃದುತ್ವದ ಕಾರಣದಿಂದ ಭಾರವಾದ ವಾಹನಗಳು ಕುಸಿದುಹೋಗುವ ಸಾಧ್ಯತೆಗಳಿದ್ದು, ಅವುಗಳು ಅಲ್ಲಿ ತಳವನ್ನು ಸ್ಪರ್ಶಿಸಲು, ಸುಲಭವಾಗಿ ಸಂಚರಿಸಲು ಬಹಳ ಕಷ್ಟವಾಗುತ್ತದೆ. ಅದರೊಡನೆ, ಸಮುದ್ರದ ತಳದಿಂದ ವಸ್ತುಗಳನ್ನು ಮೇಲಕ್ಕೆ ತರುವುದು ಸಹ ಸವಾಲಾಗಿದ್ದು, ಅವುಗಳನ್ನು ಮೇಲ್ಭಾಗಕ್ಕೆ ಪಂಪ್ ಮಾಡಬೇಕಾಗುತ್ತದೆ. ಇದಕ್ಕಾಗಿ ಅಪಾರ ಪ್ರಮಾಣದ ಇಂಧನ, ಶಕ್ತಿಯ ಅಗತ್ಯವಿದ್ದು, ಸವಾಲಿನ ಕಾರ್ಯವಾಗಿದೆ.
ವಾಸ್ತವವಾಗಿ, ಆಳ ಸಮುದ್ರದಲ್ಲಿ ವಾಹನವನ್ನು ನಿಯಂತ್ರಿಸುವುದು ದೂರದ ಗ್ರಹಗಳಲ್ಲಿ ರೋವರ್‌ಗಳನ್ನು ನಿಯಂತ್ರಿಸುವುದಕ್ಕಿಂತಲೂ ಕಷ್ಟಕರವಾಗಿದೆ. ಸಂವಹನಕ್ಕೆ ಬಳಸುವ ಇಲೆಕ್ಟ್ರೋಮ್ಯಾಗ್ನೆಟಿಕ್ ತರಂಗಗಳು ನೀರಿನ ಮೂಲಕ ಚಲಿಸಲು ಸಾಧ್ಯವಿಲ್ಲದಿರುವುದೂ ಇದಕ್ಕೆ ಒಂದು ಕಾರಣವಾಗಿದೆ. ಇದರಿಂದಾಗಿ, ದೂರದಿಂದ ನಿಯಂತ್ರಿಸುವ ವಾಹನಗಳು ಸಮುದ್ರದಲ್ಲಿ ಚೆನ್ನಾಗಿ ಕಾರ್ಯಾಚರಿಸದೆ, ಸಮುದ್ರದಾಳದ ಅನ್ವೇಷಣೆಗಳು ಇನ್ನಷ್ಟು ಸಂಕೀರ್ಣ, ಮತ್ತು ಅನಿಶ್ಚಿತವಾಗುತ್ತವೆ.
ಆಳ ಸಮುದ್ರದ ಅನ್ವೇಷಣೆಯಲ್ಲಿ ಗೋಚರತೆಯೂ ಇನ್ನೊಂದು ಪ್ರಮುಖ ಸವಾಲಾಗಿದೆ. ಸೂರ್ಯನ ಬೆಳಕು ಸಮುದ್ರದ ಮೇಲ್ಮೈಯಿಂದ ಕೇವಲ 200 ಮೀಟರ್‌ಗಳಷ್ಟು ಆಳಕ್ಕೆ (656 ಅಡಿ) ಮಾತ್ರವೇ ತಲುಪುತ್ತವೆ. ಆ ಬಳಿಕ, ಅಲ್ಲಿ ಸಂಪೂರ್ಣ ಕತ್ತಲೆಯೇ ಇರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬಾಹ್ಯಾಕಾಶದಲ್ಲಿ ದೂರದರ್ಶಕಗಳು ನಕ್ಷತ್ರಗಳು ಮತ್ತು ಇತರ ಆಕಾಶಕಾಯಗಳಿಂದ ಬೆಳಕನ್ನು ಪಡೆದು, ವೀಕ್ಷಣೆ ನಡೆಸುವುದು ಸುಲಭವಾಗುತ್ತದೆ. ಸಮುದ್ರದಾಳದಲ್ಲಿ ಬೆಳಕಿನ ಅಲಭ್ಯತೆಯಿಂದಾಗಿ ನೋಡುವುದು ಬಹಳ ಕಷ್ಟಕರವಾಗಿದ್ದು, ಸೂಕ್ತ ಬೆಳಕು ಮತ್ತು ಉಪಕರಣಗಳ ವ್ಯವಸ್ಥೆಯಿಲ್ಲದೆ ಅನ್ವೇಷಣೆ ನಡೆಸಲು ಸಾಧ್ಯವಿಲ್ಲ.
ಬದಲಾಗುವ ತಾಪಮಾನ, ತುಕ್ಕು ಹಿಡಿಯುವಿಕೆ ಮತ್ತು ನೀರಿನ ಅತಿಯಾದ ಉಪ್ಪಿನ ಅಂಶಗಳು ಸೇರಿ, ಆಳ ಸಮುದ್ರದ ಅನ್ವೇಷಣೆ ಇನ್ನಷ್ಟು ಸವಾಲಾಗುತ್ತದೆ. ಯಶಸ್ವಿ ಆಳ ಸಮುದ್ರ ಅನ್ವೇಷಣೆಗಾಗಿ ಇವೆಲ್ಲವನ್ನೂ ಸರಿಯಾಗಿ ನಿರ್ವಹಿಸಬೇಕಾಗುತ್ತದೆ.
1993ರಲ್ಲಿ ಸ್ಥಾಪನೆಗೊಂಡ ಎನ್ಐಒಟಿ ಭೂಮಿಗೆ ಸಂಬಂಧಿಸಿದ ವಿವಿಧ ಸವಾಲುಗಳಿಗೆ ವೈಜ್ಞಾನಿಕ ಮತ್ತು ಇಂಜಿನಿಯರಿಂಗ್ ಪರಿಹಾರಗಳನ್ನು ಒದಗಿಸಲು ಪ್ರಯತ್ನ ಪಡುತ್ತಿದೆ. ಈ ಸಂಸ್ಥೆ ಸಮುದ್ರ ತೀರಗಳ ಪುನಶ್ಚೇತನ, ತೇಲುವ ವ್ಯವಸ್ಥೆಗಳನ್ನು ಬಳಸಿ ಸಮುದ್ರದ ವೀಕ್ಷಣೆ ಕಾರ್ಯಗಳನ್ನು ನಡೆಸುತ್ತದೆ. ಅದಲ್ಲದೆ, ಧ್ರುವ ಪ್ರದೇಶಗಳಲ್ಲಿ ಮತ್ತು ಕೆರೆಗಳಲ್ಲಿ ಕಾರ್ಯಾಚರಿಸಲು ವಿಶೇಷ ವಾಹನಗಳನ್ನು ಅಭಿವೃದ್ಧಿ ಪಡಿಸಿದೆ. ಎನ್ಐಒಟಿಯ ಪ್ರಮುಖ ಗಮನ ಆಳ ಸಮುದ್ರ ಯೋಜನೆಗಳಿಗೆ ಆಧುನಿಕ ತಂತ್ರಜ್ಞಾನ ಮತ್ತು ಗಣಿಗಾರಿಕೆ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವುದು. ಈ ಕ್ಷೇತ್ರಗಳಲ್ಲಿ ಎನ್ಐಒಟಿ ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿದೆ.
ಮತ್ಸ್ಯ 6000 ಭಾರತದ ಮೊತ್ತಮೊದಲ ಮಾನವ ಸಹಿತ ಆಳ ಸಮುದ್ರ ಸಬ್‌ಮರ್ಸಿಬಲ್ ಆಗಿದ್ದು, ಸಮುದ್ರ ತಳವನ್ನು ಅನ್ವೇಷಿಸಲು 6,000 ಮೀಟರ್‌ಗಳ ತನಕ ಕೆಳಗಿಳಿಯುವ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶಿಷ್ಟ ಉಪಕರಣಗಳ ಜೊತೆಗೆ, ಮೂವರು ವ್ಯಕ್ತಿಗಳನ್ನು, ಅಂದರೆ 'ಆಕ್ವಾನಾಟ್'ಗಳನ್ನು ಸಮುದ್ರದ ಆಳಕ್ಕೆ ಒಯ್ಯಬಲ್ಲದು. ಈ ಸಬ್‌ಮರ್ಸಿಬಲ್ ಅನ್ನು ವಿಜ್ಞಾನಿಗಳಿಗೆ ಆಳ ಸಮುದ್ರದ ಅನ್ವೇಷಣೆ ನಡೆಸಿ, ಸಮುದ್ರದಾಳದಿಂದ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಗಳನ್ನು ನಡೆಸಲು, ವೀಡಿಯೋ ಮತ್ತು ಧ್ವನಿಮುದ್ರಣ ನಡೆಸಲು ವಿನ್ಯಾಸಗೊಳಿಸಲಾಗಿದೆ. ಆ ಮೂಲಕ ಸಮುದ್ರದಾಳದ ಅನ್ವೇಷಣೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಮತ್ಸ್ಯ 6000 ಯೋಜನೆಯ ಮುಖ್ಯ ಗುರಿಯೆಂದರೆ ಆಳ ಸಮುದ್ರ ಅನ್ವೇಷಣೆ ನಡೆಸುವುದಾಗಿದೆ. ಅಮೆರಿಕಾ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಜಪಾನ್‌ಗಳು ಈಗಾಗಲೇ ಮಾನವ ಸಹಿತ ಆಳ ಸಮುದ್ರ ಯೋಜನೆಗಳನ್ನು ಪೂರೈಸಿವೆ. ಭಾರತ ಈಗ ತನ್ನ ಆಧುನಿಕ ಆಳ ಸಮುದ್ರ ಅನ್ವೇಷಣಾ ಸಾಮರ್ಥ್ಯದೊಡನೆ ಅವುಗಳ ಸಾಲಿಗೆ ಸೇರಲು ಪ್ರಯತ್ನಿಸುತ್ತಿದೆ.
ಆಳ ಸಮುದ್ರ ಯೋಜನೆಗಳಿಗೆ ಮಾನವರನ್ನು ಕರೆದೊಯ್ದ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರಲಿರುವುದು ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ. ಭಾರತ ತನ್ನ 'ಆತ್ಮನಿರ್ಭರ ಭಾರತ' ಯೋಜನೆಯಡಿ ಈ ತಂತ್ರಜ್ಞಾನಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲು ಗಮನ ಹರಿಸಿರುವುದು ಇದನ್ನು ಇನ್ನಷ್ಟು ವಿಶೇಷವಾಗಿಸಿದೆ.
ಮತ್ಸ್ಯ 6000 ಯೋಜನೆ ಆರ್‌ಒವಿ ಮತ್ತು ಎಯುವಿಗಳ ಅತ್ಯುತ್ತಮ ವೈಶಿಷ್ಟ್ಯಗಳನ್ನು ಜೊತೆಯಾಗಿಸುತ್ತದೆ. ಇದು ಸುದೀರ್ಘ ಕಾಲದ ತನಕ ಸಮುದ್ರದಾಳದಲ್ಲಿ ನೆಲೆಸಲು ಸಾಧ್ಯವಿಲ್ಲದಿದ್ದರೂ, ಕೇಬಲ್‌ಗಳ ಅಗತ್ಯವಿಲ್ಲದೆ ಕಾರ್ಯಾಚರಿಸಲು ಬೇಕಾದ ಅತ್ಯಂತ ಸಮರ್ಥ ವ್ಯವಸ್ಥೆಯನ್ನು ಹೊಂದಿದೆ. ಇವು ಮತ್ಸ್ಯವನ್ನು ಆಳ ಸಮುದ್ರ ಅನ್ವೇಷಣೆಗೆ ಸೂಕ್ತ ವಾಹನವಾಗಿಸಿವೆ.
ಮತ್ಸ್ಯ 6000 ವಾಹನದ ಒಳಭಾಗ ವಿಶೇಷವಾಗಿ ವಿನ್ಯಾಸಗೊಂಡಿರುವ ವೃತ್ತಾಕಾರದ, 2.1 ಮೀಟರ್ ವ್ಯಾಸವುಳ್ಳ ಕ್ಯಾಬಿನ್ ಹೊಂದಿದ್ದು, ಇದರೊಳಗೆ ಮೂವರು ವ್ಯಕ್ತಿಗಳು ಇರಲು ಸಾಧ್ಯವಾಗುತ್ತದೆ. ಅಂದಾಜು 28 ಟನ್ ತೂಕ ಹೊಂದಿರುವ ಈ ಕ್ಯಾಬಿನ್, ಸಿಬ್ಬಂದಿಗಳು ಸಹಜ ಬಟ್ಟೆಗಳನ್ನು ಧರಿಸಿ ಇರುವಂತಹ ವಾತಾವರಣವನ್ನು ಹೊಂದಿರುತ್ತದೆ. ಇದು ಜೀವ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ಸಿಬ್ಬಂದಿಗಳಿಗೆ ಆಮ್ಲಜನಕವನ್ನು ಪೂರೈಸಿ, ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುತ್ತದೆ. ಆ ಮೂಲಕ ಯೋಜನೆಯಾದ್ಯಂತ ಆಕ್ವಾನಾಟ್‌ಗಳಿಗೆ ಉಸಿರಾಡಲು ಸುರಕ್ಷಿತವಾದ ವಾತಾವರಣವನ್ನು ಒದಗಿಸುತ್ತದೆ.
ಮತ್ಸ್ಯ 6000 ಯೋಜನೆಯ ಗೋಳವನ್ನು ಗಟ್ಟಿಯಾದ ಟೈಟಾನಿಯಂ ಮಿಶ್ರಲೋಹದಿಂದ ನಿರ್ಮಿಸಲಾಗಿದ್ದು, ಇದು 6,000 ಬಾರ್ ತನಕದ (1 ಬಾರ್ ಎಂದರೆ, ಅಂದಾಜು ಪ್ರತಿ ಚದರ ಸೆಂಟಿಮೀಟರ್‌ಗೆ 1.02 ಕೆಜಿಗೆ ಸಮನಾಗಿರುತ್ತದೆ. ಸರಳವಾಗಿ ಹೇಳುವುದಾದರೆ, 1 ಬಾರ್ ಒತ್ತಡ ಎಂದರೆ, ಮೇಲ್ಮೈಯ ಪ್ರತಿಯೊಂದು ಚದರ ಸೆಂಟಿಮೀಟರ್ ಮೇಲೆ 1 ಕೆಜಿಯಷ್ಟು ಒತ್ತಡಕ್ಕೆ ಸಮನಾಗಿರುತ್ತದೆ) ನೀರಿನಾಳದ ಒತ್ತಡವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ಸ್ಯ 6000 ಎಲ್ಲ ಆರು ದಿಕ್ಕುಗಳಿಗೂ ಚಲಿಸಬಲ್ಲ ಪ್ರೊಪೆಲ್ಲರ್‌ಗಳನ್ನು ಹೊಂದಿದ್ದು, ಆಳ ಸಮುದ್ರವನ್ನು ವೀಕ್ಷಿಸುವ ಸಲುವಾಗಿ ಮೂರು ಕಿಟಕಿಗಳನ್ನು ಹೊಂದಿದೆ.
ಮತ್ಸ್ಯ 6000 ಅಂದಾಜು 12 ಕ್ಯಾಮರಾಗಳು ಮತ್ತು 16 ಲೈಟ್‌ಗಳನ್ನು ಹೊಂದಿರಲಿದೆ. ಇವೆಲ್ಲಕ್ಕೂ 1kWh ಸಾಮರ್ಥ್ಯವಿರುವ ಲಿಥಿಯಂ ಪಾಲಿಮರ್ ಬ್ಯಾಟರಿಗಳು ಶಕ್ತಿ ತುಂಬಲಿವೆ. ಇದು ಸಂವಹನ ನಡೆಸಲು ಧ್ವನಿ ಆಧಾರಿತ ವ್ಯವಸ್ಥೆಯನ್ನು ವ್ಯವಸ್ಥೆಗಳಾದ ಅಕೌಸ್ಟಿಕ್ ಫೋನ್ ಮತ್ತು ಮಾಡೆಮ್‌ಗಳನ್ನು ಹೊಂದಿದೆ. ಇದರ ನ್ಯಾವಿಗೇಶನ್ (ಸಂಚರಣೆ) ಮತ್ತು ಪೊಸಿಷನಿಂಗ್ (ಸ್ಥಾನೀಕರಣ) ವ್ಯವಸ್ಥೆಗಳು ಬಹಳ ಆಧುನಿಕವಾಗಿದ್ದು, ವಾಹನಕ್ಕೆ ನೀರಿನಾಳದಲ್ಲಿ ಚಲಿಸಲು, ತನ್ನ ಸ್ಥಾನವನ್ನು ನಿಖರವಾಗಿ ಗುರುತಿಸಲು ನೆರವಾಗುತ್ತದೆ.
ಮತ್ಸ್ಯ 6000 ವಾಹನ 9 ಮೀಟರ್ ಉದ್ದ, 3 ಮೀಟರ್ ಅಗಲ ಮತ್ತು 5 ಮೀಟರ್ ಎತ್ತರವಿದೆ. ಇದು ಸಕ್ರಿಯವಾಗಿ ಮುಳುಗುವ ಬದಲು, ಸರಳವಾಗಿ ತೇಲುತ್ತಾ ಸಾಗುವ ರೀತಿಯ ವ್ಯವಸ್ಥೆಯನ್ನು ಹೊಂದಿ, ಸಾಕಷ್ಟು ಇಂಧನ ಉಳಿಸಲು ಸಾಧ್ಯವಾಗುತ್ತದೆ. ಇದು ಪ್ರತಿ ಗಂಟೆಗೆ 5.5 ಕಿಲೋಮೀಟರ್ ವೇಗದಲ್ಲಿ ಸಾಗಲು ನೆರವಾಗುವ ನೀರಿನಾಳದ ಥ್ರಸ್ಟರ್‌ಗಳನ್ನು ಹೊಂದಿದೆ. ಮತ್ಸ್ಯದ ಉದ್ದೇಶಗಳಿಗೆ ಈ ವೇಗ ಸಾಕಾಗುತ್ತದೆ.
ಮತ್ಸ್ಯ 6000 ಮೂಲಕ, ಭಾರತ ಎಲ್ಲ ರೀತಿಯ ಆಳ ಸಮುದ್ರ ವಾಹನಗಳನ್ನು ಹೊಂದಿರುವ ಏಕೈಕ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಇದರಲ್ಲಿ, ಆಳ ಸಮುದ್ರ ಆರ್‌ಒವಿಗಳು, ಪೋಲಾರ್ ಆರ್‌ಒವಿಗಳು, ಎಯುವಿಗಳು, ಆಳ ಸಮುದ್ರ ಕೊರೆಯುವ ವ್ಯವಸ್ಥೆಗಳು, ಇತ್ಯಾದಿಗಳು ಸೇರಿವೆ.
ಅಂತಿಮವಾಗಿ, ಯೋಜನೆಯ ಒಟ್ಟು ವೆಚ್ಚವೆಷ್ಟು?
ಈ ಆಳ ಸಮುದ್ರ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದಾಗ, 2021ರಿಂದ 2026ರ ನಡುವೆ ಎರಡು ಹಂತಗಳ ಯೋಜನೆಯ ಒಟ್ಟು ಬಜೆಟ್ 4,077 ಕೋಟಿ ರೂಪಾಯಿಗಳಾಗಿತ್ತು. ಈ ಆಳ ಸಮುದ್ರ ಸಬ್‌ಮರ್ಸಿಬಲ್ ಜೀವ ರಕ್ಷಕ ವ್ಯವಸ್ಥೆಗಳು, ನ್ಯಾವಿಗೇಶನ್ ಉಪಕರಣಗಳು, ಮಾದರಿ ಸಂಗ್ರಹಿಸಲು ರೋಬಾಟಿಕ್ ಕೈಗಳು, ಮತ್ತು ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗ್ರಹಣ ಉಪಕರಣಗಳಂತಹ ಆಧುನಿಕ ವ್ಯವಸ್ಥೆಗಳನ್ನು ಹೊಂದಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Advertisement