ಪಿನಾಕ ಬಿರುಗಾಳಿಗೆ ತತ್ತರಿಸಿದ ಪಾಕ್: ಭಯೋತ್ಪಾದನೆಗೆ ಭಾರತದ ಬೆಂಕಿಯ ಪ್ರತ್ಯುತ್ತರ (ಜಾಗತಿಕ ಜಗಲಿ)

ಪಿನಾಕ ವ್ಯವಸ್ಥೆ ದಾಳಿ ನಡೆಸಿ, ಬಳಿಕ ವೇಗವಾಗಿ ಚಲಿಸಬಲ್ಲದಾಗಿದ್ದು, ಆ ಮೂಲಕ ಶತ್ರುಗಳ ದಾಳಿಗೆ ತುತ್ತಾಗುವುದರಿಂದ ತಪ್ಪಿಸುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಪಹಲ್ಗಾಮ್‌ನಲ್ಲಿ ಪಾಕ್ ಬೆಂಬಲಿತ ಭಯೋತ್ಪಾದಕರು 26 ಜನ ಅಮಾಯಕ ಪ್ರವಾಸಿಗರ ಹತ್ಯೆ ನಡೆಸಿದ್ದಕ್ಕೆ ಮತ್ತು ಭಾರತದ ಮೇಲೆ ಪಾಕ್ ಕ್ಷಿಪಣಿ ಪ್ರಯೋಗ ನಡೆಸಿದ್ದಕ್ಕೆ ಪ್ರತಿಯಾಗಿ, ಮೇ 7, 2025ರಂದು ಭಾರತ ಆಪರೇಷನ್ ಸಿಂದೂರ ರೂಪದಲ್ಲಿ ಅತ್ಯಂತ ಶಕ್ತಿಶಾಲಿ ಪ್ರತಿಕ್ರಿಯೆ ನೀಡಿತು. ಭಾರತದಲ್ಲಿನ ನೆಲೆಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದರೆ, ಭಾರತ ಅದಕ್ಕಿಂತಲೂ ಬಲವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿತು. ಆಪರೇಷನ್ ಸಿಂದೂರದಲ್ಲಿ ರಷ್ಯಾ ನಿರ್ಮಿತ ಎಸ್-400 ಜೊತೆಗೆ, ಭಾರತದ ದೇಶೀಯ ನಿರ್ಮಾಣದ ಪಿನಾಕ ರಾಕೆಟ್ ವ್ಯವಸ್ಥೆ ವಾಯು ರಕ್ಷಣಾ ಗೋಡೆಯನ್ನೇ ಒದಗಿಸಿತು. ಇವೆರಡೂ ಜೊತೆಯಾಗಿ, ಭಾರತಕ್ಕೆ ಬೆಂಕಿಯ ರಕ್ಷಣಾ ಗೋಡೆಯನ್ನೇ ನಿರ್ಮಿಸಿದವು.

ಆಪರೇಷನ್ ಸಿಂದೂರ ಕೇವಲ ಮಿಲಿಟರಿ ಕಾರ್ಯಾಚರಣೆ ಮಾತ್ರವಲ್ಲ. ಬದಲಿಗೆ, ಭಾರತ ತನ್ನ ಜನರನ್ನು ಅಸಾಧಾರಣ ಸಾಮರ್ಥ್ಯ ಬಳಸಿ ರಕ್ಷಿಸಿಕೊಳ್ಳಲಿದೆ ಎಂಬ ಸಂದೇಶವನ್ನು ರವಾನಿಸಿದೆ.

ಏನು ಈ ಪಿನಾಕ?

ಪಿನಾಕ ಭಾರತ ನಿರ್ಮಿಸಿರುವ ರಾಕೆಟ್ ವ್ಯವಸ್ಥೆಯಾಗಿದೆ. ಇದು ಕೇವಲ 44 ಸೆಕೆಂಡುಗಳಲ್ಲಿ 12 ರಾಕೆಟ್‌ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ 90 ಕಿಲೋಮೀಟರ್ ದೂರದಲ್ಲಿರುವ ಶತ್ರು ಗುರಿಗಳ ಮೇಲೆ ದಾಳಿ ನಡೆಸಬಲ್ಲದು. ಶಿವನ ಧನುಸ್ಸಾದ ಪಿನಾಕದ ಹೆಸರು ಹೊಂದಿರುವ ಈ ಆಯುಧ ವ್ಯವಸ್ಥೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿ ಪಡಿಸಿದ್ದು, ಇದು ಶತ್ರುಗಳ ಬಂಕರ್‌ಗಳು, ಶಿಬಿರಗಳು ಮತ್ತು ಆಯುಧಗಳನ್ನು ಕ್ಷಿಪ್ರವಾಗಿ, ಮತ್ತು ನಿಖರವಾಗಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.

ಇದರಲ್ಲಿನ ಪ್ರತಿಯೊಂದು ರಾಕೆಟ್ ಸಹ ಬೃಹತ್ ಸ್ಫೋಟಕಗಳ ಪೇಲೋಡ್‌ಗಳನ್ನು ಹೊಂದಿದ್ದು, ಶತ್ರುಗಳಿಗೆ ಹಾನಿ ಉಂಟುಮಾಡಲು ಅಥವಾ ಶತ್ರುವಿನ ಸಂಚಾರವನ್ನು ತಡೆಯಲು ಸೂಕ್ತವಾದ ಸಿಡಿತಲೆಗಳನ್ನು ಬಳಸಬಲ್ಲದು.

ಪಿನಾಕ ವ್ಯವಸ್ಥೆ ದಾಳಿ ನಡೆಸಿ, ಬಳಿಕ ವೇಗವಾಗಿ ಚಲಿಸಬಲ್ಲದಾಗಿದ್ದು, ಆ ಮೂಲಕ ಶತ್ರುಗಳ ದಾಳಿಗೆ ತುತ್ತಾಗುವುದರಿಂದ ತಪ್ಪಿಸುತ್ತದೆ. ಡ್ರೋನ್‌ಗಳು ಮತ್ತು ಕ್ಷಿಪಣಿಗಳಿಂದ ತುಂಬಿರುವ ಆಧುನಿಕ ಯುದ್ಧದಲ್ಲಿ ಪಿನಾಕ ಅತ್ಯಂತ ಸೂಕ್ತ ಆಯುಧವಾಗಿದೆ.

ಪಿನಾಕ ಶಕ್ತಿಶಾಲಿ ಆವೃತ್ತಿಗಳು ಮತ್ತು ಹೆಚ್ಚುತ್ತಿರುವ ವ್ಯಾಪ್ತಿ

ಪಿನಾಕ ಎಂಕೆ-1 ಎನ್ಹಾನ್ಸ್ಡ್: 45 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.

ಪಿನಾಕ ಎಂಕೆ-2 ಇಆರ್: ಗರಿಷ್ಠ 90 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.

ಭವಿಷ್ಯದ ಆವೃತ್ತಿಗಳು: 120ರಿಂದ 300 ಕಿಲೋಮೀಟರ್ ವ್ಯಾಪ್ತಿ ಹೊಂದುವಂತೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಪಿನಾಕ ವ್ಯವಸ್ಥೆಯನ್ನು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಎಲ್&ಟಿ, ಮತ್ತು ಸೋಲಾರ್ ಇಂಡಸ್ಟ್ರೀಸ್‌ನಂತಹ ಭಾರತೀಯ ಸಂಸ್ಥೆಗಳು ನಿರ್ಮಿಸಿವೆ. ಇದು ಆತ್ಮನಿರ್ಭರ ಭಾರತ ಯೋಜನೆಗೆ ಸಂದ ನೈಜ ಗೆಲುವಾಗಿದೆ.

ಭಾರತದ ಉತ್ಪಾದನಾ ಸಾಮರ್ಥ್ಯ ಅತ್ಯಂತ ಬಲವಾಗಿದ್ದು, ವರ್ಷಕ್ಕೆ 5,000ಕ್ಕೂ ಹೆಚ್ಚು ರಾಕೆಟ್‌ಗಳನ್ನು ಉತ್ಪಾದಿಸಲಾಗುತ್ತದೆ. ಆ ಮೂಲಕ, ನಮ್ಮ ಸೇನೆಗೆ ಅವಶ್ಯಕತೆ ಎದುರಾದಾಗ ರಾಕೆಟ್‌ಗಳ ಕೊರತೆ ಉಂಟಾಗುವುದಿಲ್ಲ.

ಪಿನಾಕ ಅಭಿವೃದ್ಧಿಯ ಹಾದಿ

1980ರ ದಶಕದಲ್ಲಿ ರಷ್ಯನ್ ನಿರ್ಮಾಣದ ರಾಕೆಟ್ ವ್ಯವಸ್ಥೆಗಳ ಬದಲಿಗೆ, ಸ್ಥಳೀಯ ಪರ್ಯಾಯ ವ್ಯವಸ್ಥೆಯನ್ನು ಹೊಂದಬೇಕೆಂದು ಭಾರತ ಆಲೋಚಿಸತೊಡಗಿತು. ಡಿಆರ್‌ಡಿಒ ಹಲವಾರು ವರ್ಷಗಳ ಕಾಲ ಅಭಿವೃದ್ಧಿ ನಡೆಸಿದ ಬಳಿಕ, ಈ ರಾಕೆಟ್ ವ್ಯವಸ್ಥೆಯನ್ನು 1999ರ ಕಾರ್ಗಿಲ್ ಯುದ್ಧದಲ್ಲಿ ಬಳಸಲಾಯಿತು. ಅಂದಿನಿಂದ ಇದು ಭಾರತದ ಬಹುಮುಖ್ಯ ಆರ್ಟಿಲರಿ ಆಯುಧಗಳಲ್ಲಿ ಒಂದಾಗಿದೆ.

ಇಂದು, ಭಾರತದ ಬಳಿ ನಾಲ್ಕು ಪಿನಾಕ ರೆಜಿಮೆಂಟ್‌ಗಳಿವೆ. ಭಾರತ ಇನ್ನೂ ಆರು ರೆಜಿಮೆಂಟ್‌ಗಳನ್ನು ಹೊಂದುವ ಗುರಿ ಹಾಕಿಕೊಂಡಿದ್ದು, ಕೆಲವು ರೆಜಿಮೆಂಟ್‌ಗಳನ್ನು ಚೀನಾ ಗಡಿಯ ಬಳಿ ಅಳವಡಿಸಲಾಗಿದೆ.

ಆಪರೇಷನ್ ಸಿಂದೂರದಲ್ಲಿ ಪಿನಾಕ ಪಾತ್ರ

ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪಿನಾಕ ಬಹುದೊಡ್ಡ ಪಾತ್ರ ನಿರ್ವಹಿಸಿತ್ತು. ಇದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತು.

ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಲು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಪ್ರಯೋಗಿಸಿದಾಗ, ಭಾರತದ ಪಿನಾಕ ಮತ್ತು ಎಸ್-400 ವ್ಯವಸ್ಥೆಗಳು ತಮ್ಮ ಸಂಪೂರ್ಣ ಬಲದಿಂದ ಪ್ರತಿಕ್ರಿಯೆ ನೀಡಿದವು. ಇವುಗಳ ದಾಳಿಗೆ ಪಾಕಿಸ್ತಾನದ ನೂರ್ ಖಾನ್ ಮತ್ತು ರಹೀಮ್ ಯಾರ್ ಖಾನ್‌ನಂತಹ ವಾಯು ನೆಲೆಗಳು ಧ್ವಂಸಗೊಂಡವು. ಭಾರತೀಯ ಸೇನೆ ಬಿಡುಗಡೆಗೊಳಿಸಿದ ವೀಡಿಯೋದಲ್ಲಿ ಭಾರತದ ದಾಳಿ ಎಷ್ಟು ನಿಖರ, ಕ್ಷಿಪ್ರ ಮತ್ತು ತೀಕ್ಷ್ಣವಾಗಿತ್ತು ಎಂದು ತಿಳಿಯುತ್ತದೆ.

ಮೇ 10ರ ವೇಳೆಗೆ ಭಾರತದ ಹೊಡೆತಕ್ಕೆ ನಲುಗಿ ಹೋದ ಪಾಕಿಸ್ತಾನ ಕದನ ವಿರಾಮಕ್ಕಾಗಿ ಮೊರೆ ಇಡತೊಡಗಿತು.

ಸಂಗ್ರಹ ಚಿತ್ರ
ಯಾರ ನೆರವೂ ಇಲ್ಲ, ಬೆಂಬಲವೂ ಇಲ್ಲ: ಭಯೋತ್ಪಾದನೆ ವಿರುದ್ಧ ಭಾರತ ಏಕಾಂಗಿ ಸಮರ (ಜಾಗತಿಕ ಜಗಲಿ)

ರಫ್ತು ಯಶಸ್ಸು: ಜಾಗತಿಕ ಆಯುಧವಾದ ಪಿನಾಕ

ಪಿನಾಕ ಕೇವಲ ಭಾರತವನ್ನು ಮಾತ್ರವೇ ರಕ್ಷಿಸುತ್ತಿಲ್ಲ. ಬದಲಿಗೆ, ಅದು ಈಗ ಜಾಗತಿಕ ಗಮನ ಸೆಳೆದ ಆಯುಧವಾಗಿದೆ.

2023ರಲ್ಲಿ, ಅರ್ಮೇನಿಯಾ ಪಿನಾಕ ಖರೀದಿಸಲು ಭಾರತದೊಡನೆ 245 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿತು. ಅನಿರೀಕ್ಷಿತ ಬೆಳವಣಿಗೆಯಲ್ಲಿ, ಸಾಮಾನ್ಯವಾಗಿ ಭಾರತಕ್ಕೆ ಆಯುಧ ರಫ್ತು ಮಾಡುವ ಫ್ರಾನ್ಸ್ ಪಿನಾಕ ವ್ಯವಸ್ಥೆಯನ್ನು ಖರೀದಿಸಲು ಮಾತುಕತೆ ಆರಂಭಿಸಿದೆ. ಇನ್ನು ವಿಯೆಟ್ನಾಂ ಮತ್ತು ಆಫ್ರಿಕಾದ ದೇಶಗಳೂ ಸಹ ಪಿನಾಕ ರಾಕೆಟ್ ವ್ಯವಸ್ಥೆಯ ಖರೀದಿಗೆ ಆಸಕ್ತಿ ತೋರಿವೆ.

ಅಮೆರಿಕಾದ ಹಿಮಾರ್ಸ್ ಅಥವಾ ಚೀನಾದ ಪಿಎಚ್ಎಲ್-03 ವ್ಯವಸ್ಥೆಗಳಿಗೆ ಹೋಲಿಸಿದರೆ, ಪಿನಾಕ ಹೆಚ್ಚಿನ ವೇಗ, ಶಕ್ತಿ ಹೊಂದಿದ್ದು, ಕಡಿಮೆ ವೆಚ್ಚದಾಯಕವಾಗಿದೆ. ಆದ್ದರಿಂದ ಪಿನಾಕ ಹಲವಾರು ದೇಶಗಳ ಸೇನೆಗಳಿಗೆ ಸೂಕ್ತ ಆಯುಧವಾಗಿ ತೋರುತ್ತಿದೆ.

ಭವಿಷ್ಯದ ಹಾದಿ

10,000 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಪಿನಾಕ ವ್ಯಾಪಾರ ಒಪ್ಪಂದಗಳಿಗೆ ಈಗಾಗಲೇ ಸಹಿ ಹಾಕಲಾಗಿದ್ದು, ಇನ್ನಷ್ಟು ಹೆಚ್ಚಿನ ವ್ಯಾಪ್ತಿಯ ಪಿನಾಕ ರಾಕೆಟ್ ವ್ಯವಸ್ಥೆಯ ಅಭಿವೃದ್ಧಿ ನಡೆಯುತ್ತಿದೆ. ಇದರಿಂದಾಗಿ ಪಿನಾಕ ಜಾಗತಿಕ ಆಯುಧವಾಗುವತ್ತ ದಾಪುಗಾಲಿಡುತ್ತಿದೆ.

ಭಾರತದ ಪಾಲಿಗೆ ಪಿನಾಕ ಶಕ್ತಿ, ತಂತ್ರಜ್ಞಾನ ಮತ್ತು ದೃಢ ನಿಶ್ಚಯದ ಸಂಕೇತವಾಗಿದೆ.

ಪಿನಾಕ ಕೇವಲ ರಾಕೆಟ್ ಲಾಂಚರ್ ಮಾತ್ರವಲ್ಲ. ಇದು ಭಾರತದ ಪಾಲಿಗೆ ಒಂದು ರಕ್ಷಣಾ ಗುರಾಣಿಯಾದರೆ, ಶತ್ರುಗಳ ಪಾಲಿಗೆ ಇರಿಯುವ ಖಡ್ಗದಂತಿದೆ. ಆಪರೇಷನ್ ಸಿಂದೂರದಲ್ಲಿ ಭಾರತದ ಸಾಮರ್ಥ್ಯವೇನು ಎನ್ನುವುದನ್ನು ಪಿನಾಕ ತೋರಿಸಿಕೊಟ್ಟಿದೆ.

ಭಾರತೀಯ ಸೇನೆಯ ಪಶ್ಚಿಮ ಕಮಾಂಡ್ ಹೇಳುವಂತೆ, ಪಿನಾಕ 'ಭಾರತದ ಅಭೇದ್ಯ ಬೆಂಕಿಯ ಗೋಡೆ'ಯಾಗಿದೆ. ಇದು ಭಾರತವನ್ನು ರಕ್ಷಿಸುತ್ತಾ, ಶತ್ರುವಿಗೆ ನೀನು ಗೆರೆ ದಾಟಿದರೆ ಶಿವನ ಧನುಸ್ಸಿನ ಹೊಡೆತಕ್ಕೆ ಸಿದ್ಧವಾಗು ಎಂಬ ಎಚ್ಚರಿಕೆಯನ್ನೂ ನೀಡುತ್ತಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com