
ಭಾರತ ನಿರಂತರವಾಗಿ ಪಾಕಿಸ್ತಾನದ ಜೊತೆಗಿನ ಸಮಸ್ಯೆಗೆ ಮೂರನೆಯವರ ಮಧ್ಯಸ್ಥಿಕೆ ಬೇಕಾಗಿಲ್ಲವೆಂದು ಹೇಳುತ್ತಲೇ ಬಂದಿದೆ. ಆದರೂ, ಅಮೆರಿಕಾ ಮತ್ತೊಮ್ಮೆ ತಾನು ಮಧ್ಯಸ್ಥಿಕೆ ವಹಿಸಬಲ್ಲೆ ಎಂದು ಮುಂದೆ ಬಂದಿದೆ. ಕುತೂಹಲಕರ ಅಂಶವೆಂದರೆ, ಭಾರತೀಯ ಸಂಜಾತೆಯನ್ನು ವಿವಾಹವಾಗಿರುವ, ತನ್ನ ಕಠಿಣ ನಿಲುವಿಗೆ ಹೆಸರಾಗಿರುವ ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಈ ಯುದ್ಧದಲ್ಲಿ ಮಧ್ಯ ಪ್ರವೇಶಿಸುವುದು ಅಮೆರಿಕಾಗೆ ಅಗತ್ಯವಿಲ್ಲ ಎಂದಿದ್ದಾರೆ. ಈ ಮೊದಲು ಇಂತಹ ಪರಿಸ್ಥಿತಿ ತಲೆದೋರಿದಾಗ ಅಮೆರಿಕನ್ ನಾಯಕರು ಪಾಕಿಸ್ತಾನಿ ಮುಖಂಡರನ್ನು ವಾಷಿಂಗ್ಟನ್‌ಗೆ ಕರೆದು, ಕದನದಿಂದ ಹಿಂದೆ ಸರಿಯುವಂತೆ ಕಠಿಣ ಎಚ್ಚರಿಕೆ ನೀಡುತ್ತಿದ್ದರು. ಆದರೆ, ಅಮೆರಿಕಾದ ಈಗಿನ ನಿಲುವಿನಲ್ಲಿ ಮಹತ್ತರ ಬದಲಾವಣೆ ಆಗಿರುವಂತೆ ತೋರುತ್ತಿದೆ.
ಆಶ್ಚರ್ಯಕರವಾಗಿ, ಭಾರತ - ಪಾಕಿಸ್ತಾನ ನಡುವಿನ ಇತ್ತೀಚಿನ ಕದನ ಹೆಚ್ಚೇನೂ ಜಾಗತಿಕ ಗಮನ ಸೆಳೆಯಲಿಲ್ಲ. ಈ ಯುದ್ಧದಲ್ಲಿ ಹಲವಾರು ವಿದೇಶೀ ಶಕ್ತಿಗಳು ಹಿನ್ನೆಲೆಯಲ್ಲಿ ಕಾರ್ಯಾಚರಿಸುತ್ತಿದ್ದರೂ, ವಿದೇಶೀ ಮಾಧ್ಯಮಗಳಲ್ಲಿ ಇದಕ್ಕಿಂತಲೂ ಹೆಚ್ಚು ನೂತನ ಪೋಪ್ ಆಯ್ಕೆಯ ವರದಿಗಳೇ ಕಾಣಿಸಿಕೊಂಡಿದ್ದವು. ಹಾಗೆಂದು ಈ ಕದನದ ಕುರಿತು ಕಡಿಮೆ ಆಸಕ್ತಿ ವ್ಯಕ್ತವಾಗಿರುವುದೇನೂ ಆಶ್ಚರ್ಯಕರ ಬೆಳವಣಿಗೆಯಲ್ಲ. ಈಗಾಗಲೇ ಗಾಜಾ, ಉಕ್ರೇನ್, ಯೆಮೆನ್, ಮಯನ್ಮಾರ್, ಅಷ್ಟೇ ಏಕೆ, ಅಂತರ್ಯುದ್ಧದಿಂದಾಗಿ ಪಾಕಿಸ್ತಾನದಲ್ಲೂ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ದುರದೃಷ್ಟವಶಾತ್, ಯುದ್ಧ ಮತ್ತು ಹಿಂಸಾಚಾರಗಳು ಈಗ ಸಾಮಾನ್ಯ ಸುದ್ದಿಯಂತಾಗಿದ್ದು, ಸಾಮಾನ್ಯ ನಾಗರಿಕರು ಇದಕ್ಕೆ ಪ್ರತಿಕ್ರಿಯಿಸುವುದು ಬಹಳಷ್ಟು ಕಡಿಮೆಯಾಗಿದೆ.
ಅಮೆರಿಕಾದ ದ್ವಂದ್ವ ನಿಲುವು ವಿಚಿತ್ರವಾಗಿ ಕಂಡುಬರುತ್ತಿದೆ. ಎಪ್ರಿಲ್ 24ರಂದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿ, ಅಮೆರಿಕಾ ಭಾರತದೊಡನೆ ನಿಲ್ಲುವುದಾಗಿ ಹೇಳಿದರು. ಮೇ 8ರಂದು ಅಮೆರಿಕಾದ ಸ್ಟೇಟ್ ಡಿಪಾರ್ಟ್ಮೆಂಟ್ ಸಹ ಈ ಬೆಂಬಲವನ್ನು ಪುನರುಚ್ಚರಿಸಿತು. ಆದರೆ, ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ ತಕ್ಷಣ ಅಮೆರಿಕಾದ ವರಸೆ ಬದಲಾಯಿತು. ಅಧ್ಯಕ್ಷ ಟ್ರಂಪ್ ಈ ಪರಿಸ್ಥಿತಿಯನ್ನು 'ಶೇಮ್' ಎಂದು ಕರೆದರು. ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರು ಪಾಕಿಸ್ತಾನಿ ಪ್ರಧಾನಿ ಶೆಹಬಾ ಶರೀಫ್ ಅವರೊಡನೆ ಮಾತುಕತೆ ನಡೆಸಿ, ನಾಗರಿಕರ ಸಾವಿಗೆ ಸಂತಾಪ ಸೂಚಿಸಿದರು. ಆ ಬಳಿಕ, ಭಯೋತ್ಪಾದನೆಗೆ ಬೆಂಬಲಿಸುವಲ್ಲಿ ಪಾಕಿಸ್ತಾನದ ಪಾತ್ರವನ್ನು ಕುರಿತು ಯಾವುದೇ ಮಾತುಗಳು ಕೇಳಿಬರಲಿಲ್ಲ!
ಮೇ 9ರಂದು ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಭಾರತ - ಪಾಕಿಸ್ತಾನ ಯುದ್ಧದಲ್ಲಿ ಅಮೆರಿಕಾ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅದು 'ಅಮೆರಿಕಾದ ಆಸಕ್ತಿಯಲ್ಲ' ಎಂದ ವ್ಯಾನ್ಸ್, ಈ ಕದನಕ್ಕೂ, ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು.
ಅದೇ ದಿನ, ತನ್ನ ಇತರ ಜವಾಬ್ದಾರಿಗಳೊಡನೆ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಆಗಿರುವ ಮಾರ್ಕೊ ರುಬಿಯೊ ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದರ್ ಜೊತೆಗೂ ಸಮಾಲೋಚನೆ ನಡೆಸಿದರು. ಇದರ ಹಿಂದಿನ ದಿನವಷ್ಟೇ ರುಬಿಯೊ ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಜೊತೆ ಮಾತನಾಡಿದ್ದರು.
ಈ ಎರಡೂ ಮಾತುಕತೆಗಳ ಹಿಂದಿನ ಸಾರಾಂಶವೆಂದರೆ, ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ಅಮೆರಿಕಾ ಒಂದೇ ಸಣ್ಣ ಮತ್ತು ತಟಸ್ಥ ಸಂದೇಶ ನೀಡಿತ್ತು. ಇದು ಹಿಂದಿನ ಅಮೆರಿಕಾ ಆಡಿದ ಮಾತಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಹಿಂದಿನ ಸಂದೇಶದಲ್ಲಿ, ಅಮೆರಿಕಾ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಬೆಂಬಲಿಸುವುದಾಗಿ ಹೇಳಿತ್ತು.
ಇತ್ತೀಚಿನ 'ಕದನ ವಿರಾಮವನ್ನು' ಭಾರತ ಕೇವಲ ಗುಂಡಿನ ದಾಳಿ ಮತ್ತು ಮಿಲಿಟರಿ ಕ್ರಮದ ತಾತ್ಕಾಲಿಕ ಸ್ಥಗಿತ ಎಂದಷ್ಟೇ ಹೇಳಿದೆ. ಆದರೆ, ಅಮೆರಿಕಾ ಕದನ ವಿರಾಮಕ್ಕಾಗಿ ಭಾರತ - ಪಾಕಿಸ್ತಾನ ಎರಡನ್ನೂ ಸಮಾನವಾಗಿ ಶ್ಲಾಘಿಸಿದೆ. ಭಯೋತ್ಪಾದನೆಗೆ ಬೆಂಬಲ ಕೊಡುತ್ತಿದ್ದವರು ಯಾರು, ಅಮೆರಿಕಾ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದದ್ದು ಯಾರು ಎಂಬುದನ್ನೂ ಗಮನಿಸದೆ, ಭಾರತ-ಪಾಕಿಸ್ತಾನ ಎರಡನ್ನೂ ಸಮಾನವಾಗಿ ಪರಿಗಣಿಸಿದೆ!
ಸರಳವಾಗಿ ಹೇಳುವುದಾದರೆ, ಅಮೆರಿಕನ್ ಸರ್ಕಾರದೊಳಗೇ ಎರಡು ವಿಭಿನ್ನ ದೃಷ್ಟಿಕೋನಗಳು ಇರುವಂತೆ ತೋರುತ್ತಿದೆ. ಒಂದು ಗುಂಪು 'ಅಮೆರಿಕಾ ಫಸ್ಟ್' ಎಂಬ ಆದ್ಯತೆಯನ್ನು ಹೊಂದಿ, ಇತರ ದೇಶಗಳ ಕದನದಿಂದ ಅಮೆರಿಕಾ ದೂರ ಉಳಿಯಬೇಕು ಎಂದು ಆಗ್ರಹಿಸುತ್ತದೆ. ಆದರೆ ಇನ್ನೊಂದು ಗುಂಪು ಇಂತಹ ಚಕಮಕಿಯಲ್ಲಿ ಪಾಲ್ಗೊಳ್ಳುತ್ತದಾದರೂ, ಒಂದು ಮಿತಿಯಲ್ಲಷ್ಟೇ ಮಧ್ಯ ಪ್ರವೇಶಿಸುತ್ತದೆ.
ಸಾಮಾನ್ಯ ಪರಿಸ್ಥಿತಿಯಲ್ಲಿ ಉಕ್ರೇನ್ ಯುದ್ಧ ಅಮೆರಿಕಾದ ವಿದೇಶಾಂಗ ನೀತಿಯಲ್ಲಿ ಪ್ರಧಾನ ಭಾಗವಾಗಿರುತ್ತಿತ್ತು. ಆದರೆ, ಈಗ ಅಮೆರಿಕಾ ಅದರಿಂದಲೂ ಹಿಂದೆ ಸರಿದಿದೆ.
ಹಿಂದಿನ ಅಮೆರಿಕನ್ ನಾಯಕತ್ವದ ರೀತಿಯಲ್ಲದೆ, ಈಗಿನ ಆಡಳಿತಕ್ಕೆ ಭಾರತ-ಪಾಕಿಸ್ತಾನಗಳ ಸುದೀರ್ಘ ಮತ್ತು ಸಂಕೀರ್ಣ ಇತಿಹಾಸದ ಅರಿವಿಲ್ಲ. ಅದರೊಡನೆ, ಭಾರತ ಪಾಕಿಸ್ತಾನದಲ್ಲಿ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ ಪ್ರತಿಯೊಂದು ತಾಣವೂ ಸಹ ಅಮೆರಿಕನ್ ಸರ್ಕಾರದ ಭಯೋತ್ಪಾದಕ ಸಂಸ್ಥೆಗಳ ಪಟ್ಟಿಯಲ್ಲಿ ದಾಖಲಾಗಿತ್ತು ಎಂಬ ಸತ್ಯವನ್ನೂ ಅಮೆರಿಕಾ ಸರ್ಕಾರ ಗಮನಿಸಿದಂತಿಲ್ಲ.
ಮೇ 9ರಂದು, ಅಮೆರಿಕಾ ಅತಿಹೆಚ್ಚು ಮತದ ಪಾಲು ಹೊಂದಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪಾಕಿಸ್ತಾನಕ್ಕೆ 2.4 ಬಿಲಿಯನ್ ಡಾಲರ್ ಮೊತ್ತದ ಸಾಲ ನೀಡಲು ಅನುಮತಿಸಿತು. ಅದೇ ದಿನ ಪಾಕ್ ಪ್ರಧಾನಿ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ನಿರ್ವಹಣೆ ನಡೆಸುವ ನ್ಯಾಷನಲ್ ಕಮಾಂಡ್ ಅಥಾರಿಟಿಯೊಡನೆ ಸಭೆ ನಡೆಸಿದರು. ಈ ನಡೆಯನ್ನು ಜಗತ್ತು ಎಚ್ಚರಿಕೆಯ ಗಂಟೆಯಾಗಿ, ಯುದ್ಧ ಇನ್ನಷ್ಟು ತೀವ್ರತೆ ಪಡೆದುಕೊಳ್ಳುವುದರ ಸಂಕೇತವಾಗಿ ಪರಿಗಣಿಸಿತು.
ಈ ಸಂದೇಶವನ್ನು ರವಾನಿಸಿದ ಬಳಿಕ, ಪಾಕಿಸ್ತಾನವೂ ತನ್ನ ಧಾಟಿಯನ್ನು ಬದಲಾಯಿಸಿತು. ಮಧ್ಯಸ್ಥಿಕೆಗೆ ಪ್ರಯತ್ನ ನಡೆಸಿದ ದೇಶಗಳಿಗೆ ಪಾಕಿಸ್ತಾನ ಧನ್ಯವಾದ ಅರ್ಪಿಸಿತು. ಪಾಕಿಸ್ತಾನ ಕಳೆದ 30 ವರ್ಷಗಳಿಂದ ಭಾರತ - ಪಾಕಿಸ್ತಾನ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯವನ್ನೂ ಒಳಗೊಳ್ಳಲು ಪ್ರಯತ್ನ ನಡೆಸುತ್ತಿತ್ತು. ಭಾರತದ ದಾಳಿಯಲ್ಲಿ ಪಾಕಿಸ್ತಾನು ಮಿಲಿಟರಿ ಭಾರೀ ಹೊಡೆತ ತಿಂದರೂ, ಇಸ್ಲಾಮಾಬಾದ್ ದೃಷ್ಟಿಯಲ್ಲಿ ಈ ಪರಿಸ್ಥಿತಿ ಅದರ ಪಾಲಿಗೆ ದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.
ಪಾಕಿಸ್ತಾನದ ವಿಚಾರದಲ್ಲಿ ಇನ್ನಷ್ಟು ತೊಂದರೆದಾಯಕ ಬೆಳವಣಿಗೆ ಎಂದರೆ, ಪಾಕಿಸ್ತಾನ 'ಯೋಜನೆಗಳ ಜಾರಿಯಲ್ಲಿ ಉತ್ತಮ ಕ್ರಮ ಕೈಗೊಂಡಿದೆ' ಎಂದು ಶ್ಲಾಘಿಸಿರುವ ಐಎಂಎಫ್, ಆ ದೇಶಕ್ಕೆ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಎರಡನೇ ಮಹಾಯುದ್ಧದ ಬಳಿಕ, ಜಗತ್ತಿನಲ್ಲಿ ಆರ್ಥಿಕ ಸ್ಥಿರತೆ ತರುವ ನಿಟ್ಟಿನಲ್ಲಿ ಐಎಂಎಫ್ ಅನ್ನು ಸ್ಥಾಪಿಸಲಾಯಿತು. ಶಾಂತಿ ಸ್ಥಾಪನೆಗೆ ಮತ್ತು ಸ್ಥಿರ ಆರ್ಥಿಕತೆಯ ನಿರ್ಮಾಣಕ್ಕಾಗಿ ಬೆಂಬಲ ನೀಡುವುದು ಇದರ ಗುರಿಯಾಗಿದೆ.
ಆದರೆ, ನಿರಂತರವಾಗಿ ಉದ್ವಿಗ್ನತೆಗೆ ಕಾರಣವಾಗುತ್ತಿರುವ ಪಾಕಿಸ್ತಾನದಂತಹ ದೇಶಕ್ಕೆ ಹಣ ನೀಡುವುದು ಐಎಂಎಫ್ ಉದ್ದೇಶದ ವಿರುದ್ಧವಾಗಿದೆ. ಯುದ್ಧಕ್ಕೆ ಸಕ್ರಿಯವಾಗಿ ಬೆಂಬಲ ನೀಡುವ ದೇಶವೊಂದನ್ನು ಆರ್ಥಿಕವಾಗಿ ಜವಾಬ್ದಾರಿಯುತ ಅಥವಾ ಸ್ಥಿರ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಹಿಂದಿನ ಉದಾಹರಣೆಗಳನ್ನು ಗಮನಿಸಿದರೆ, ಪಾಕಿಸ್ತಾನ ಯಾವಾಗೆಲ್ಲ ಭಯ ಸೃಷ್ಟಿಸಲು ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆ ಒಡ್ಡಿದೆ, ಅಲ್ಲೆಲ್ಲ ಒಂದು ಮಾದರಿ ಸ್ಪಷ್ಟವಾಗಿ ಕಾಣುತ್ತದೆ. 1999ರ ಕಾರ್ಗಿಲ್ ಯುದ್ಧದ ವೇಳೆ, ಭಾರತೀಯ ಮಿಲಿಟರಿಯ, ಅದರಲ್ಲೂ ಭಾರತೀಯ ವಾಯುಪಡೆಯ ತೀವ್ರ ಪ್ರತಿಕ್ರಿಯೆ ಪಾಕಿಸ್ತಾನವನ್ನು ಹೊಸಕಿ ಹಾಕತೊಡಗಿತ್ತು. ಯುದ್ಧದ ಸಂಪೂರ್ಣ ವಿವರವನ್ನೇ ತಿಳಿದಿರದ ಆಗಿನ ಪ್ರಧಾನಿ ನವಾಜ್ ಶರೀಫ್ ಯುದ್ಧ ನಿಲ್ಲಿಸಲು ನೆರವು ಕೋರಿ ವಾಷಿಂಗ್ಟನ್‌ಗೆ ತರಾತುರಿಯಲ್ಲಿ ತೆರಳಿದ್ದರು.
ಅಮೆರಿಕಾ ಪ್ರಧಾನಿ ಬಿಲ್ ಕ್ಲಿಂಟನ್ ಮಾತ್ರವಲ್ಲದೆ, ಯುಕೆ ಪ್ರಧಾನಿ ಟೋನಿ ಬ್ಲೇರ್ ಅವರಂತಹ ನಾಯಕರು, ಅಷ್ಟೇ ಯಾಕೆ, ರಷ್ಯಾ ಸಹ ಯುದ್ಧದ ನಿಲುಗಡೆಗೆ ನೆರವಾಗಿದ್ದರು. ಹಿಂದೆ ಪಾಕಿಸ್ತಾನ ಉದ್ವಿಗ್ನತೆಯನ್ನು ತೀವ್ರಗೊಳಿಸಿದಾಗ ಅಂತಾರಾಷ್ಟ್ರೀಯ ಒತ್ತಡಗಳು ಹೇಗೆ ಕಾರ್ಯಾಚರಿಸುತ್ತಿದ್ದವು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಆಗ ನೀಡಿದ ಅಧಿಕೃತ ಹೇಳಿಕೆಯಲ್ಲಿ, ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆಯುತ್ತಿರುವ ಯುದ್ಧ ಅಪಾಯಕಾರಿಯಾಗಿದ್ದು, ಇನ್ನಷ್ಟು ತೀವ್ರ ಯುದ್ಧಕ್ಕೆ ಹಾದಿ ಮಾಡಿಕೊಡುವ ಸಾಧ್ಯತೆಗಳಿವೆ ಎಂದು ಕ್ಲಿಂಟನ್ ಮತ್ತು ನವಾಜ್ ಶರೀಫ್ ಅಭಿಪ್ರಾಯ ಪಟ್ಟಿದ್ದರು. ಭಾರತ ಮತ್ತು ಪಾಕಿಸ್ತಾನಗಳೆರಡೂ 1972ರ ಶಿಮ್ಲಾ ಒಪ್ಪಂದದಲ್ಲಿ ಜಾರಿಗೆ ಬಂದ ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಅನ್ನು ಗೌರವಿಸಬೇಕು ಎಂದೂ ಅವರು ಅಭಿಪ್ರಾಯ ಪಟ್ಟಿದ್ದರು.
ಆದರೆ, ಅಮೆರಿಕಾ ಮಧ್ಯಸ್ಥಿಕೆದಾರನಾಗುವ, ಅಥವಾ ಯಾವುದಾದರೂ ನಿರ್ಣಯ ನೀಡುವ ಕುರಿತು ಆಗಲೂ ಯಾವುದೇ ಮಾತುಕತೆಗಳಾಗಿರಲಿಲ್ಲ. ಆಗಿನ ಗಮನ ಸಂಪೂರ್ಣವಾಗಿ ಹಿಂದಿನ ಒಪ್ಪಂದಗಳಿಗೆ ಬದ್ಧವಾಗಿದ್ದು, ಇನ್ನಷ್ಟು ಚಕಮಕಿ ನಡೆಯದಂತೆ ತಡೆಯುವುದರತ್ತಲೇ ಇತ್ತು.
ಡಿಸೆಂಬರ್ 13, 2001ರಂದು ಉಗ್ರಗಾಮಿ ಸಂಘಟನೆಯಾದ ಜೈಷ್ ಎ ಮೊಹಮ್ಮದ್ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ, ಭಾರತ 'ಆಪರೇಷನ್ ಪರಾಕ್ರಮ್' ನಡೆಸಿತ್ತು. ಭಯೋತ್ಪಾದನಾ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಸಾವಿರಾರು ಸೈನಿಕರು ಮತ್ತು ಭಾರೀ ಆಯುಧಗಳನ್ನು ಭಾರತ - ಪಾಕ್ ಗಡಿಗೆ ರವಾನಿಸಿತ್ತು.
ಗಡಿಯಲ್ಲಿ ಯೋಧರ ಕಲೆಹಾಕುವಿಕೆ ಭಾರತ - ಪಾಕಿಸ್ತಾನ ಎರಡನ್ನೂ ಅಪಾಯಕಾರಿ ಯುದ್ಧದಂಚಿಗೆ ತಂದು ನಿಲ್ಲಿಸಿತ್ತು. ಪರಿಸ್ಥಿತಿಯನ್ನು ತಿಳಿಯಾಗಿಸುವ ಸಲುವಾಗಿ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್ ರಮ್ಸ್‌ಫೆಲ್ಡ್ ನವದೆಹಲಿಗೆ ಬಂದಿದ್ದರು. ಜಪಾನ್ ಮತ್ತು ಯುಕೆ ಸಹ ಉದ್ವಿಗ್ನತೆ ಶಮನಗೊಳಿಸಿ, ಪೂರ್ಣ ಪ್ರಮಾಣದ ಯುದ್ಧ ಉಂಟಾಗದಂತೆ ತಡೆಯಲು ಪ್ರಯತ್ನ ನಡೆಸಿದ್ದವು.
2019ರ ಬಾಲಾಕೋಟ್ ವಾಯುದಾಳಿಯ ಸಂದರ್ಭದಲ್ಲಿ, ಅಮೆರಿಕಾ ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಭಾರತೀಯ ಪೈಲಟ್ ಪಾಕಿಸ್ತಾನದಲ್ಲಿ ಸೆರೆಯಾದ ಬಳಿಕ, ಆತನನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಅಮೆರಿಕಾ ಪಾಕ್ ಮೇಲೆ ಭಾರೀ ಒತ್ತಡ ಹೇರಿತ್ತು. ಆ ಬಳಿಕ, ಡೊನಾಲ್ಡ್ ಟ್ರಂಪ್ ತನ್ನ ಮೊದಲನೇ ಅಧ್ಯಕ್ಷೀಯ ಅವಧಿಯಲ್ಲಿ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿ ಮೂರು ಬಾರಿ ಹೇಳಿದ್ದರು.
ಆದರೆ, ಪ್ರತಿ ಬಾರಿಯೂ ಭಾರತ ಡೊನಾಲ್ಡ್ ಟ್ರಂಪ್ ಸಲಹೆಯನ್ನು ದೃಢವಾಗಿ ನಿರಾಕರಿಸಿತ್ತು. ಕಾಶ್ಮೀರ ವಿಚಾರ ಭಾರತ - ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ವಿಚಾರ ಎನ್ನುವುದು ಭಾರತದ ಸ್ಪಷ್ಟ ನಿಲುವಾಗಿತ್ತು. ಈ ಬಾರಿಯೂ ಭಾರತ ಇದೇ ಪ್ರತಿಕ್ರಿಯೆ ನೀಡುವ ನಿರೀಕ್ಷೆಗಳಿದ್ದು, ಭಾರತ ಯಾವುದೇ ಬಾಹ್ಯ ಮಧ್ಯಸ್ಥಿಕೆಯನ್ನು ಒಪ್ಪುವ ಸಾಧ್ಯತೆಗಳಿಲ್ಲ.
ಭಾರತ-ಪಾಕ್ ವಿಚಾರದಲ್ಲಿ ಪಾಲ್ಗೊಳ್ಳುತ್ತಿರುವ ಹೊಸ ರಾಷ್ಟ್ರಗಳತ್ತ ಈಗ ಗಮನ ಹರಿಸೋಣ.
ಅಂತಹ ರಾಷ್ಟ್ರಗಳ ಪೈಕಿ ಅಜರ್‌ಬೈಜಾನ್ ಸಹ ಒಂದಾಗಿದ್ದು, ಪಾಕಿಸ್ತಾನಕ್ಕೆ ಆಯುಧ ಪೂರೈಕೆ ನಡೆಸುವುದು ಮಾತ್ರವಲ್ಲದೆ, ಆ ದೇಶಕ್ಕೆ ಬಲವಾದ ಬೆಂಬಲ ನೀಡಿದೆ. ಅಜರ್‌ಬೈಜಾನ್ ಇತ್ತೀಚೆಗೆ ಲೇಸರ್ ಆಧಾರಿತ ಆಯುಧಗಳು ಮತ್ತು ಮೂಲತಃ ಟರ್ಕಿ ನಿರ್ಮಾಣದ ಬೇರಾಕ್ತರ್ ಟಿಬಿ-2 ಡ್ರೋನ್‌ಗಳು ಸೇರಿದಂತೆ, ರಕ್ಷಣಾ ಉಪಕರಣಗಳ ಉತ್ಪಾದನೆಯನ್ನು ಹೆಚ್ಚಿಸಿದೆ. ಈ ಡ್ರೋನ್ ಒಂದು ವಿವಾದಿತ ಪ್ರದೇಶಕ್ಕಾಗಿ ಅಜರ್‌ಬೈಜಾನ್ ಮತ್ತು ಅರ್ಮೇನಿಯಾಗಳ ನಡುವೆ ನಡೆದ ನಗೊರ್ನೊ - ಕರಾಬಾಖ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಬೇರಾಕ್ತರ್ ಟಿಬಿ-2 ಡ್ರೋನ್ ಆಗಸದಿಂದಲೇ ಶತ್ರು ನೆಲೆಗಳ ಮೇಲೆ ದಾಳಿ ನಡೆಸಲು ಯಶಸ್ವಿಯಾಗಿ, ಆ ಯುದ್ಧದಲ್ಲಿ ಅಜರ್‌ಬೈಜಾನ್‌ಗೆ ಮೇಲುಗೈ ಸಾಧಿಸಲು ನೆರವಾಗಿತ್ತು.
ಇನ್ನು ಟರ್ಕಿ ಸಹ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎನ್ನಲಾಗಿದೆ. ಮೇ 8ರಂದು ಟರ್ಕಿ ಮಿಲಿಟರಿ ಸಾಗಾಣಿಕಾ ವಿಮಾನವೊಂದು ಕರಾಚಿಯಲ್ಲಿ ಕಾಣಿಸಿಕೊಂಡಿತ್ತು. ಅದಕ್ಕೆ ಕೆಲ ದಿನಗಳ ಹಿಂದಷ್ಟೇ ಒಂದು ಟರ್ಕಿ ಯುದ್ಧನೌಕೆ ಅಲ್ಲಿ ಡಾಕಿಂಗ್ ನಡೆಸಿತ್ತು.
ಪಾಕಿಸ್ತಾನ ಈಗಾಗಲೇ ಬೇರಾಕ್ತರ್ ಅಕಿಂಚಿಯಂತಹ ಶಕ್ತಿಶಾಲಿ, ಸಶಸ್ತ್ರ ಡ್ರೋನ್ ಸೇರಿದಂತೆ ಟರ್ಕಿಶ್ ಡ್ರೋನ್‌ಗಳನ್ನು ಬಳಸುತ್ತಿದೆ. ಈ ಡ್ರೋನ್ 1,500 ಕೆಜಿಯಷ್ಟು ತೂಕದ ಆಯುಧಗಳನ್ನು ಒಯ್ಯಬಲ್ಲದಾಗಿದ್ದು, 6,000 ಕಿಲೋಮೀಟರ್‌ಗಳಷ್ಟು ದೂರ ಸಾಗಬಲ್ಲದು. ಇದೊಂದು ಕೇವಲ ಕಣ್ಗಾವಲು ಡ್ರೋನ್ ಮಾತ್ರವಲ್ಲದೆ, ಸಂಪೂರ್ಣ ಯುದ್ಧದ ಏರ್‌ಕ್ರಾಫ್ಟ್ ಆಗಿದ್ದು, ಬಹಳಷ್ಟು ದೂರದಲ್ಲಿರುವ ಗುರಿಗಳ ಮೇಲೂ ದಾಳಿ ನನಡೆಸಬಲ್ಲದು
ಇಲ್ಲಿಯತನಕ ಪಾಕಿಸ್ತಾನ ಕೇವಲ ಸೊಂಗಾರ್ ಡ್ರೋನ್‌ಗಳನ್ನು ಮಾತ್ರವೇ ಬಳಸಿಕೊಂಡಿದೆ ಎನ್ನಲಾಗಿದೆ. ಈ ಡ್ರೋನ್‌ಗಳು ಕೇವಲ 10 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಮೆಷಿನ್ ಗನ್‌ಗಳನ್ನು ಬಳಸಬಲ್ಲದು. ಇದೊಂದು ಹಗುರವಾದ, ಕಡಿಮೆ ಬೆಲೆಯ, ಮತ್ತು ಸುಲಭವಾಗಿ ಖರೀದಿಸಬಹುದಾದ ಡ್ರೋನ್ ಆಗಿದೆ.
ಅದರೊಡನೆ, ಪಾಕಿಸ್ತಾನ ಒಂದು ಚೀನಾ ನಿರ್ಮಿತ ಕ್ಷಿಪಣಿಯನ್ನೂ ಉಡಾವಣೆಗೊಳಿಸಿರುವ ವರದಿಗಳಿವೆ. ಇನ್ನು ಟರ್ಕಿ ಹಲವಾರು ಸಂದರ್ಭಗಳಲ್ಲಿ ಚೀನಾದ ಪ್ರಾಕ್ಸಿಯಂತೆ ವರ್ತಿಸಿದ್ದು, ಚೀನಾ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲದ ಕಡೆಗಳಲ್ಲಿ ಚೀನಾದ ಪರವಾಗಿ ಕಾಲಿಟ್ಟಿದೆ. ಈ ಸನ್ನಿವೇಶದಲ್ಲೂ ಅದೇ ರೀತಿ ಆಗಿರುವ ಸಾಧ್ಯತೆಗಳಿವೆ.
ಈ ಆಟಕ್ಕೆ ಚೀನಾ ಏನೂ ಹೊಸ ಆಟಗಾರನಲ್ಲ. ಚೀನಾ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಪಾಕಿಸ್ತಾನಕ್ಕೆ ಕ್ಷಿಪಣಿ ಮತ್ತು ಪರಮಾಣು ತಂತ್ರಜ್ಞಾನದ ನೆರವು ನೀಡುತ್ತಿದೆ. ಇಂದು ಪಾಕಿಸ್ತಾನ ಹೊಂದಿರುವ 80% ದೈನಂದಿನ ಆಯುಧಗಳು ಚೀನಾದಿಂದ ಆಮದಾಗಿವೆ.
ಭಾರತದ ವಿರುದ್ಧದ ತನ್ನ ಚಕಮಕಿಯಲ್ಲಿ ಪಾಕಿಸ್ತಾನ ಕನಿಷ್ಠ ಒಂದು ಚೀನಾ ನಿರ್ಮಿತ ಪಿಎಲ್-15 ಕ್ಷಿಪಣಿಯನ್ನು ಪ್ರಯೋಗಿಸಿದೆ ಎನ್ನುತ್ತವೆ ವರದಿಗಳು. ಈ ಕ್ಷಿಪಣಿಯನ್ನು ಹಾನಿಯಾಗದ ಸ್ಥಿತಿಯಲ್ಲಿ ಭಾರತೀಯ ಪಡೆಗಳು ಪತ್ತೆಹಚ್ಚಿದ್ದು, ಚೀನಾ ಯಾವ ರೀತಿಯ ಆಯುಧಗಳನ್ನು ಪೂರೈಸುತ್ತಿದೆ ಎಂಬ ಚಿತ್ರಣ ನೀಡಿದೆ.
ಪಾಕಿಸ್ತಾನ ತಾನು ಭಾರತದ ರಫೇಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಸುಳ್ಳು ಹೇಳಿಕೆ ನೀಡಿತ್ತು. ಈ ಹೇಳಿಕೆಯನ್ನು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಸಂಭ್ರಮಿಸಲಾಯಿತು!
ಅನಧಿಕೃತ ವರದಿಗಳ ಪ್ರಕಾರ, ಪಾಕಿಸ್ತಾನಕ್ಕೆ ಬೆಂಬಲ ನೀಡುವ ಸಲುವಾಗಿ ಚೀನೀ ಯುದ್ಧ ವಿಮಾನ ಒಂದರಿಂದಲೂ ಕ್ಷಿಪಣಿಗಳನ್ನು ಭಾರತದತ್ತ ಉಡಾವಣೆಗೊಳಿಸಲಾಗಿದೆ. ಇದು ಚೀನಾ ಮೌನವಾಗಿದ್ದರೂ, ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ಬೆಂಬಲ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಆರಂಭದಲ್ಲಿ ಚೀನಾ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಕಟುವಾಗಿ ಖಂಡಿಸಿತ್ತು. ಆದರೆ, ಮೇ 8ರ ಬಳಿಕ ಚೀನಾ ಉಭಯ ದೇಶಗಳನ್ನು ಶಾಂತಿ ಕಾಪಾಡುವಂತೆ ಆಗ್ರಹಿಸಿದ್ದು, ಸಮಸ್ಯೆಯನ್ನು ನಿವಾರಿಸಲು ನೆರವಾಗುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿತ್ತು.
ಎಪ್ರಿಲ್ 30ರಂದು ಮಾಸ್ಕೋದಲ್ಲಿ ನಡೆದ ಬ್ರಿಕ್ಸ್ ಭದ್ರತಾ ಸಲಹೆಗಾರರ ಸಮಾವೇಶದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ನಗುತ್ತಾ ಸಮಾಲೋಚಿಸುತ್ತಿದ್ದ ದೃಶ್ಯಾವಳಿಗಳು ಕಂಡುಬಂದವು. ಈ ಸಭೆ ಭಯೋತ್ಪಾದನಾ ನಿಗ್ರಹದತ್ತ ಕೇಂದ್ರಿತವಾಗಿದ್ದರೂ, ಸಭೆಯೇ ನಿರರ್ಥಕ ಎನಿಸಿತ್ತು. ಯಾಕೆಂದರೆ, ಯಾವೊಂದು ಬ್ರಿಕ್ಸ್ ರಾಷ್ಟ್ರವೂ ಭಾರತ - ಪಾಕಿಸ್ತಾನದ ನಡುವೆ ನಡೆಯುತ್ತಿರುವ ಕದನದ ಕುರಿತು ಪ್ರಸ್ತಾಪಿಸಿರಲಿಲ್ಲ.
ರಷ್ಯಾ ಇಂದಿಗೂ ಈ ವಿಚಾರದಲ್ಲಿ ಭಾಗಿಯಾಗಿದ್ದು, ತನ್ನ ರಕ್ಷಣಾ ಉದ್ಯಮವನ್ನು ಬೆಳೆಸಲು ಪ್ರಯತ್ನ ನಡೆಸುತ್ತಿದೆ. ಆದರೆ, ರಷ್ಯಾ ಹಿಂದೆ ಇದ್ದಂತೆ ಒಂದು ನಂಬಿಕಾರ್ಹ ಸಹಯೋಗಿಯಾಗಿ ಮುಂದುವರಿದಿಲ್ಲ. ತನ್ನ ಆರಂಭಿಕ ಹೇಳಿಕೆಯಲ್ಲಿ ರಷ್ಯಾ ಭಾರತಕ್ಕೆ ಪೂರ್ಣ ಬೆಂಬಲ ನೀಡಿದ್ದು, ಬಳಿಕ ಆ ನಿಲುವಿನಿಂದ ಹಿಂದೆ ಸರಿದಿದೆ.
ಬದಲಿಗೆ, ರಷ್ಯಾದ ವಿದೇಶಾಂಗ ಸಚಿವ ಸರ್ಗೇ ಲವ್ರೋವ್ ಮಧ್ಯಸ್ಥಿಕೆ ವಹಿಸುವ ಮಾತನ್ನಾಡಿದ್ದು, ಪಾಕಿಸ್ತಾನದ ರಕ್ಷಣಾ ಸಚಿವರೊಡನೆಯೂ ಸಮಾಲೋಚನೆ ನಡೆಸಿದ್ದರು. ಹಿಂದೆ ರಷ್ಯಾ ಭಾರತದ ಸಂಪೂರ್ಣ ಬೆಂಬಲಿಗನಾಗಿತ್ತು. ಅದಕ್ಕೆ ಹೋಲಿಸಿದರೆ ಇದು ಸಂಪೂರ್ಣ ಭಿನ್ನ ನಡೆಯಾಗಿದ್ದು, ಭಾರತ ಇದನ್ನು ಕಡೆಗಣಿಸಲು ಸಾಧ್ಯವಿಲ್ಲ.
ಸರಳವಾಗಿ ಹೇಳುವುದಾದರೆ, ಭಾರತ ತನ್ನ ಮೇಲಷ್ಟೇ ತಾನು ಅವಲಂಬಿತವಾಗಬಹುದು. ಜಗತ್ತು ಈಗ ಹಿಂಸಾತ್ಮಕ ಕದನಗಳಲ್ಲಿ ಸಿಲುಕಿದ್ದು, ಭಾರತದ ಆತ್ಮೀಯ ಸ್ನೇಹಿತರೂ ಈಗ ಅಷ್ಟು ಒಗ್ಗಟ್ಟಿನಿಂದಿಲ್ಲ. ಇಂತಹ ಸನ್ನಿವೇಶದಲ್ಲಿ ಭಾರತ 'ನಿನ್ನ ಕೆಲಸ ನೀನೇ ಮಾಡು' ಎಂಬ ವಿಧಾನದತ್ತ ತಳ್ಳಲ್ಪಟ್ಟಿದ್ದು, ಇತರ ದೇಶಗಳ ಮೇಲೆ ಭಾರತ ಅವಲಂಬಿಸುವಂತಿಲ್ಲ.
ಅಮೆರಿಕಾ ಈಗ ತನ್ನ ಉನ್ನತ ಅಧಿಕಾರಿಗಳನ್ನು ತೆಗೆಯುವತ್ತ, ಅಥವಾ ಪುನರ್ ರಚನೆಯತ್ತ ಗಮನ ಹರಿಸುತ್ತಿದೆ. ಇದೇ ವೇಳೆ, ಅಮೆರಿಕಾ ದಕ್ಷಿಣ ಏಷ್ಯಾವನ್ನು ನಿಯಂತ್ರಿಸುವತ್ತ ಅಥವಾ ಪ್ರಭಾವ ಬೀರುವತ್ತ ಗಮನ ಹರಿಸುತ್ತಿದೆ. ಇದನ್ನು ಅಮೆರಿಕಾ ಹಿಂದಿನಿಂದಲೂ ನಡೆಸುತ್ತಾ ಬಂದಿದೆ.
ಇಂತಹ ಹಿನ್ನೆಲೆಯಲ್ಲಿ, ಭಾರತದ ವಿದೇಶಾಂಗ ನೀತಿ ತಜ್ಞರು ಕ್ವಾಡ್ ಗುಂಪು ಒಂದರ ಜೊತೆ ಮಾತ್ರವಲ್ಲದೆ (ಭಾರತ, ಅಮೆರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನು ಒಳಗೊಂಡ ಗುಂಪು), ಅಮೆರಿಕಾದ ಜೊತೆಗಿನ ದ್ವಿಪಕ್ಷೀಯ ಸಂಬಂಧದಲ್ಲಿ ಭಾರತ ಎಂತಹ ಸ್ಥಾನ ಹೊಂದಿದೆ ಎನ್ನುವುದನ್ನೂ ಸರಿಯಾಗಿ ಅವಲೋಕಿಸಬೇಕಿದೆ. ಇಂತಹ ಸಹಯೋಗಿಗಳ ಮೇಲೆ ಎಷ್ಟರಮಟ್ಟಿಗೆ ನಾವು ಅವಲಂಬಿಸಬಹುದು ಎನ್ನುವುದನ್ನು ಮತ್ತೊಮ್ಮೆ ಆಲೋಚಿಸಲು ಇದು ಸೂಕ್ತ ಸಮಯವಾಗಿದೆ.
ಎರಡನೆಯದಾಗಿ, ಈಗ ವೈಮಾನಿಕ ಯುದ್ಧ ಏನಾದರೂ ನಡೆದರೆ, ಪಾಕಿಸ್ತಾನ ಮತ್ತು ಚೀನಾಗಳು ಜೊತೆಯಾಗಿ, ಚೀನೀ ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು, ಭಾರತದ ವಿರುದ್ಧ ಕಾರ್ಯಾಚರಿಸುವ ಸಾಧ್ಯತೆಗಳಿವೆ. ಇಂತಹ ಜಂಟಿ, ಹೈಟೆಕ್ ಅಪಾಯಗಳನ್ನು ಭಾರತ ಕಡೆಗಣಿಸಲು ಸಾಧ್ಯವಿಲ್ಲ.
ಭಾರತ ತನ್ನ ಸಂಪೂರ್ಣ ವಾಯು ರಕ್ಷಣೆ ಮತ್ತು ಯುದ್ಧ ಕಾರ್ಯತಂತ್ರವನ್ನು ಮರು ಪರಿಶೀಲಿಸಿ, ಅಭಿವೃದ್ಧಿ ಪಡಿಸುವ ಅವಶ್ಯಕತೆಯಿದೆ. ಈಗ ಪರಿಸ್ಥಿತಿ ಕೇವಲ ಒಂದು ಪಾಕಿಸ್ತಾನವನ್ನು ಮಾತ್ರ ಎದುರಿಸುವುದಕ್ಕೆ ಸೀಮಿತವಾಗಿಲ್ಲ. ಬದಲಿಗೆ, ಒಂದು ಬಲವಾದ ಮಿಲಿಟರಿ ಸಹಭಾಗಿತ್ವವನ್ನೇ ಭಾರತ ಎದುರಿಸಬೇಕಿದೆ.
ಮೂರನೆಯದಾಗಿ, ಇಲ್ಲಿಯ ತನಕ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳು ಭಾರತದ ಅತ್ಯಂತ ಶಕ್ತಿಶಾಲಿ ಆಯುಧಗಳಾಗಿವೆ. ಆದರೆ, ಭಾರತ ಏನಾದರೂ ರಷ್ಯಾದಿಂದ ಇನ್ನಷ್ಟು ಆಧುನಿಕ ಆಯುಧ ವ್ಯವಸ್ಥೆಗಳನ್ನು ಖರೀದಿಸಬೇಕಾದರೆ, ಭಾರತ ರಷ್ಯಾ - ಉಕ್ರೇನ್ ಯುದ್ಧ ಕೊನೆಗೊಳ್ಳುವ ತನಕ ಕಾಯಬೇಕಾಗಬಹುದು.
ಅಂದರೆ, ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಸ್ಥಾಪಿಸುವ ಸಲುವಾಗಿ ಮಧ್ಯಸ್ಥಿಕೆ ವಹಿಸಲು ಭಾರತ ಪ್ರಯತ್ನ ನಡೆಸಬೇಕಾಗಬಹುದು. ಭಾರತದ ವತಿಯಿಂದ ನಡೆಸುವ ಒಂದಷ್ಟು ರಾಜತಾಂತ್ರಿಕ ಪ್ರಯತ್ನಗಳು ಅಥವಾ ಮಧ್ಯಸ್ಥಿಕೆ ಭಾರತದ ದೀರ್ಘಕಾಲಿಕ ರಕ್ಷಣಾ ಹಿತಾಸಕ್ತಿಗಳನ್ನು ರಕ್ಷಿಸಲು ನೆರವಾಗಬಹುದು.
ನಾಲ್ಕನೆಯದಾಗಿ, ಈಗಾಗಲೇ ಒಂದು ಶಕ್ತಿ ಗುಂಪು ಅಥವಾ ಮೈತ್ರಿಕೂಟ ನಿರ್ಮಾಣವಾಗುತ್ತಿದ್ದು, ಭಾರತ ಇದಕ್ಕೆ ಸರಿಯಾಗಿ ತನ್ನ ಕಾರ್ಯವಿಧಾನವನ್ನು ಸರಿಹೊಂದಿಸಬೇಕಿದೆ. ಇದು ಭಾರತಕ್ಕೆ ಟರ್ಕಿಯೊಡನೆ ನೇರವಾಗಿ ವ್ಯವಹರಿಸುವುದನ್ನು ಆರಂಭಿಸುವ ಸಮಯವಾಗಿದ್ದು, ಅರ್ಮೇನಿಯಾಗೆ ಬೆಂಬಲ ನೀಡುವ ಕುರಿತು ಮರು ಪರಿಶೀಲಿಸಬೇಕಿದೆ. ಅದರಲ್ಲೂ ಅಜರ್‌ಬೈಜಾನ್‌ಗೆ ಈಗ ಇಸ್ರೇಲ್ ಮಿಲಿಟರಿ ನೆರವು ನೀಡುತ್ತಿರುವುದರಿಂದ, ಭಾರತ ತನ್ನ ನಿಲುವನ್ನು ಪರಿಶೀಲಿಸುವ ಅಗತ್ಯವಿದೆ.
ಅದರೊಡನೆ, ಭಾರತ ಇಸ್ರೇಲ್ ಅನ್ನು ತನ್ನ ರಕ್ಷಣಾ ಸಹಯೋಗದಲ್ಲಿ ಹೆಚ್ಚು ಸಕ್ರಿಯಗೊಳಿಸುವ ಕುರಿತೂ ಚಿಂತಿಸಬೇಕು. ಆದರೆ, ಭಾರತ ಇಂತಹ ಕ್ರಮ ಕೈಗೊಂಡರೆ, ಅದರಿಂದ ಅಮೆರಿಕಾಗೆ, ವಿಶೇಷವಾಗಿ ಪ್ರಮುಖ ರಕ್ಷಣಾ ಒಪ್ಪಂದಗಳ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ಉಂಟಾಗಬಹುದು. ಆದ್ದರಿಂದ ಭಾರತ ಹೊಸ ಆಯ್ಕೆಗಳನ್ನು ಪರಿಶೀಲಿಸುತ್ತಾ, ತನ್ನ ಸಹಯೋಗಗಳಲ್ಲಿ ಸಮತೋಲನ ಸಾಧಿಸಬೇಕು.
ನಮ್ಮ ಸುತ್ತಲಿನ ಜಗತ್ತು ಇಂದು ಸಾಕಷ್ಟು ಬದಲಾಗಿದೆ. ಭಾರತದ ಒಂದಷ್ಟು ಹಳೆಯ ಸ್ನೇಹಿತರು ಇಂದು ನಂಬಿಕಾರ್ಹರಾಗಿ ಮುಂದುವರಿದಿಲ್ಲ. ಹಾಗೆಂದು ಹಳೆಯ ಶತ್ರುಗಳೇನೂ ಸ್ನೇಹಿತರಾಗಿ ಮಾರ್ಪಟ್ಟಿಲ್ಲ. ಆದರೆ, ಮಿತ್ರರು ಮತ್ತು ಶತ್ರುಗಳ ನಡುವಿನ ರೇಖೆ ಮಾತ್ರ ಮಸುಕಾಗುತ್ತಾ ಸಾಗಿದೆ. ಇದು ಭಾರತಕ್ಕೆ 'ನೀನು ನಿನ್ನ ಕಾಲ ಮೇಲೆ ನಿಲ್ಲಬೇಕು' ಎಂಬ ಸ್ಪಷ್ಟ ಸಂದೇಶ ನೀಡಿದೆ.
ಭಾರತ ಸರ್ಕಾರ ಈಗಾಗಲೇ ಸ್ಪಷ್ಟ ಮಾತುಗಳಲ್ಲಿ ಮಾಹಿತಿ ನೀಡಿದ್ದು, ಸದ್ಯ ಭಾರತ - ಪಾಕಿಸ್ತಾನ ನಡುವೆ ಚಕಮಕಿಯನ್ನು ನಿಲ್ಲಿಸುವ ಒಪ್ಪಂದ ಮಾತ್ರವೇ ಜಾರಿಯಲ್ಲಿದ್ದು, ಅದಕ್ಕಿಂತ ಹೆಚ್ಚಿನ ಯಾವುದೇ ಒಪ್ಪಂದವಿಲ್ಲ ಎಂದಿದೆ. ಪಾಕಿಸ್ತಾನ ಈ ಅವಧಿಯನ್ನು ಬಳಸಿಕೊಂಡು, ತನ್ನ ಭಯೋತ್ಪಾದಕ ಜಾಲವನ್ನು ಮರು ನಿರ್ಮಿಸುವ ಸಾಧ್ಯತೆಗಳಿವೆ.
ಆತಂಕಕಾರಿ ಬೆಳವಣಿಗೆಯಲ್ಲಿ, ಅಮೆರಿಕಾ ಈಗ ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಶಿಬಿರಗಳು ಕಾರ್ಯಾಚರಿಸುತ್ತಿರುವುದನ್ನು ಒಪ್ಪಿಕೊಳ್ಳುವುದನ್ನು ನಿಲ್ಲಿಸಿದೆ. ಇದು ಭಾರತಕ್ಕೆ ಇನ್ನಷ್ಟು ಕಷ್ಟಕರ ಸನ್ನಿವೇಶ ಸೃಷ್ಟಿಸಿದೆ. ಒಟ್ಟಾರೆಯಾಗಿ, ಪರಿಸ್ಥಿತಿ ಸದ್ಯಕ್ಕೆ ಸರಿಹೋಗುವ ಸಾಧ್ಯತೆಗಳಿಲ್ಲ. ಬದಲಿಗೆ, ಭಾರತದ ಮುಂದೆ ಇನ್ನಷ್ಟು ಸವಾಲುಗಳ ಸಾಲು ನಿಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement