
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಬಳಿಕ ತಲೆದೋರಿದ ಉದ್ವಿಗ್ನತೆಯಲ್ಲಿ, ಪಾಕಿಸ್ತಾನ ನವದೆಹಲಿಯನ್ನು ಗುರಿಯಾಗಿಸಿ ಫತಾಹ್ 2 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಯೋಗಿಸಿತ್ತು ಎನ್ನಲಾಗಿದ್ದು, ಈಗ ಭಾರತ 1990ರ ದಶಕದ ಭಾರತದಂತಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ಅಸಾಧಾರಣವಾಗಿ ಕಾರ್ಯ ನಿರ್ವಹಿಸಿದ್ದು, ಡ್ರೋನ್‌ಗಳು, ಕ್ಷಿಪಣಿಗಳು, ಅಥವಾ ಯುದ್ಧ ವಿಮಾನಗಳೂ ಸೇರಿದಂತೆ, ಪಾಕಿಸ್ತಾನದ 98 - 99% ದಾಳಿಯನ್ನು ಯಶಸ್ವಿಯಾಗಿ ತಡೆಗಟ್ಟಿದ್ದವು.
ಭಾರತದ ಈ ಅಸಾಧಾರಣ ಯಶಸ್ಸಿನ ಹಿಂದೆ, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಮತ್ತು ಪ್ರಬಲವಾದ ವಾಯು ರಕ್ಷಣಾ ವ್ಯವಸ್ಥೆಗಳನ್ನೊಳಗೊಂಡ ದೇಶೀಯ ನಿರ್ಮಾಣದ ಆಯುಧ ಉಪಕರಣಗಳು ಕಾರ್ಯ ನಿರ್ವಹಿಸಿವೆ. ಇದು ತಂತ್ರಜ್ಞಾನ ಮತ್ತು ಬದ್ಧತೆಯ ಕತೆಯಾಗಿದ್ದು, ಹೊಸ ಭಾರತ ಹೇಗೆ ತನ್ನನ್ನು ತಾನು ರಕ್ಷಿಸುತ್ತಾ, ಶತ್ರುಗಳ ಮೇಲೆ ಅತ್ಯಂತ ನಿಖರವಾದ ದಾಳಿಯನ್ನು ನಡೆಸಬಲ್ಲದು ಎನ್ನುವುದನ್ನು ಸಾಬೀತುಪಡಿಸಿದೆ.
ಬ್ರಹ್ಮೋಸ್ ಒಂದು ಕ್ರೂಸ್ ಕ್ಷಿಪಣಿಯಾಗಿದ್ದು, ವಿಮಾನದ ರೀತಿಯಲ್ಲಿ ಹಾರುತ್ತಾ, ನೀರಿನ ಮೇಲೆ ಕೇವಲ 5ರಿಂದ 10 ಮೀಟರ್ ಎತ್ತರದಲ್ಲಿ ಸಾಗಿ, ರೇಡಾರ್ ಕಣ್ಣಿಗೆ ಬೀಳದಂತೆ ಗುರಿ ತಲುಪುತ್ತದೆ. ಇದು ಮ್ಯಾಕ್ 2.8 ವೇಗದಲ್ಲಿ, ಅಂದರೆ ಶಬ್ದದ ವೇಗಕ್ಕಿಂತ ಬಹುತೇಕ ಮೂರು ಪಟ್ಟು ಹೆಚ್ಚಿನ ವೇಗದಲ್ಲಿ ಸಾಗುತ್ತದೆ. ಇದರ ಅಸಾಧಾರಣ ವೇಗ ಶತ್ರುಗಳಿಗೆ ಪ್ರತಿಕ್ರಿಯಿಸಲು ಕೇವಲ 12ರಿಂದ 15 ಸೆಕೆಂಡ್ ಸಮಯವನ್ನಷ್ಟೇ ಒದಗಿಸುತ್ತದೆ.
ಓರ್ವ ವಿಜ್ಞಾನಿ ಬ್ರಹ್ಮೋಸ್ ಕುರಿತು ತಮಾಷೆಯಾಗಿ ಮಾತನಾಡುತ್ತಾ, "ಬ್ರಹ್ಮೋಸ್ ಶತ್ರುಗಳಿಗೆ ಅವರ ಅಂತಿಮ ಪ್ರಾರ್ಥನೆ ಸಲ್ಲಿಸಲಷ್ಟೇ ಸಮಯ ಒದಗಿಸುತ್ತದೆ" ಎಂದಿದ್ದರು.
ಬ್ರಹ್ಮೋಸ್ ಕ್ಷಿಪಣಿಯನ್ನು ನೆಲ, ನೌಕೆಗಳು, ಅಥವಾ ಸುಖೋಯಿ-30 ಎಂಕೆಐ ಯುದ್ಧ ವಿಮಾನಗಳಿಂದಲೂ ಪ್ರಯೋಗಿಸಬಹುದು. ಈ ರೀತಿ ಮೂರೂ ಕಡೆಗಳಿಂದ ಉಡಾವಣೆಗೊಳ್ಳುವ ಸಾಮರ್ಥ್ಯ ಬ್ರಹ್ಮೋಸ್ ಅನ್ನು ವಿಶಿಷ್ಟವಾಗಿಸಿದೆ.
ಬ್ರಹ್ಮೋಸ್ ಕ್ಷಿಪಣಿ 300 ಕಿಲೋಮೀಟರ್ ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದು. ಇನ್ನು ಸುಖೋಯಿ ಯುದ್ಧ ವಿಮಾನದಿಂದ ಪ್ರಯೋಗಿಸಿದಾಗ, ಅದು 3,400 ಕಿಲೋಮೀಟರ್ ದೂರ ಸಾಗಿ, ಸಾಕಷ್ಟು ದೂರದಲ್ಲಿರುವ ಶತ್ರು ನೆಲೆಗಳನ್ನು ನಾಶಪಡಿಸಬಲ್ಲದು.
ಪರೀಕ್ಷಾ ಸಂದರ್ಭದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ ಬ್ರಹ್ಮೋಸ್ ಕ್ಷಿಪಣಿ, 4,500 ಟನ್ ಹಡಗೊಂದನ್ನು ನಿಮಿಷಗಳಲ್ಲಿ ಎರಡು ತುಂಡು ಮಾಡಿತ್ತು. ಅಷ್ಟೊಂದು ಸಾಮರ್ಥ್ಯ ಹೊಂದಿರುವ ಕ್ಷಿಪಣಿ ವಾಯು ನೆಲೆಗಳು, ರನ್‌ವೇಗಳು, ರೇಡಾರ್‌ಗಳು ಮತ್ತು ಕಮಾಂಡ್ ಸೆಂಟರ್‌ಗಳನ್ನು ಏನು ಮಾಡಬಹುದು ಎಂದು ಊಹಿಸಿಕೊಳ್ಳಿ!
ಪಾಕಿಸ್ತಾನದ ಫತಾಹ್ 2 ಸಹ ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದರೂ, ಅದು ಎಸೆದ ಕಲ್ಲಿನ ರೀತಿ ಒಂದೇ ನಿರ್ದಿಷ್ಟ ಕಮಾನಿನ ರೀತಿಯಲ್ಲಿ ಚಲಿಸುತ್ತದೆ. ಆದರೆ, ಬ್ರಹ್ಮೋಸ್ ಕ್ಷಿಪಣಿ ಹಾರಾಟದ ಮಧ್ಯದಲ್ಲೇ ತನ್ನ ಪಥವನ್ನು ಬದಲಿಸಬಲ್ಲದು, ಮೇಲಕ್ಕೆ ಸಾಗಬಲ್ಲದು, ಕೆಳಕ್ಕೂ ಇಳಿಯಬಲ್ಲದು. ಅಥವಾ ಇವೆರಡೂ ರೀತಿಯ ಚಲೆನಗಳನ್ನು ಮಿಶ್ರಗೊಳಿಸಿ, ಶತ್ರುವಿನ ರಕ್ಷಣಾ ವ್ಯವಸ್ಥೆಗೆ ಗೊಂದಲ ಸೃಷ್ಟಿಸಬಲ್ಲದು.
ಪಾಕಿಸ್ತಾನ ಮಾತ್ರವಲ್ಲ, ಚೀನಾ ಬಳಿಯೂ ಸಹ ಭಾರತದ ಈ ಸೂಪರ್‌ಸಾನಿಕ್ ಕ್ಷಿಪಣಿಯನ್ನು ತಡೆಯುವ ವ್ಯವಸ್ಥೆಗಳಿಲ್ಲ.
ಬ್ರಹ್ಮೋಸ್ ರಷ್ಯಾದೊಡನೆ ಜಂಟಿಯಾಗಿ ನಿರ್ಮಿಸಿರುವ ಆಯುಧವಾಗಿದ್ದರೂ, ಇದನ್ನು ಸಂಪೂರ್ಣವಾಗಿ ಭಾರತದಲ್ಲೇ, ಅಂದರೆ ದೆಹಲಿ, ಹೈದರಾಬಾದ್, ನಾಗಪುರ, ಮತ್ತು ಸದ್ಯದಲ್ಲೇ ಲಕ್ನೋದಲ್ಲಿ ನಿರ್ಮಿಸಲಾಗುತ್ತಿದೆ. ಈ ಮೂಲಕ ಬ್ರಹ್ಮೋಸ್ 'ಮೇಕ್ ಇನ್ ಇಂಡಿಯಾ' ಯೋಜನೆಗೊಂದು ಹೆಮ್ಮೆಯ ಗರಿಯಾಗಿದೆ.
ಬ್ರಹ್ಮೋಸ್ ಕ್ಷಿಪಣಿಯ ನೂತನ ಆವೃತ್ತಿಯಾದ ಬ್ರಹ್ಮೋಸ್ ಎನ್‌ಜಿ (ನೆಕ್ಸ್ಟ್ ಜನರೇಶನ್) ಗಾತ್ರದಲ್ಲಿ ಸಣ್ಣ ಮತ್ತು ಹಗುರವಾಗಿದ್ದರೂ, ಅಷ್ಟೇ ಘಾತಕವಾಗಿದೆ.
2026ರ ವೇಳೆಗೆ, ಒಂದೇ ಸುಖೋಯಿ ಯುದ್ಧ ವಿಮಾನ ಐದು ಬ್ರಹ್ಮೋಸ್ ಕ್ಷಿಪಣಿಗಳನ್ನು ಒಯ್ಯಲು ಸಾಧ್ಯವಾಗಲಿದ್ದು, ಆ ಮೂಲಕ ಆಗಸದ ಮೇಲೆ ಭಾರತದ ಪಾರಮ್ಯ ಸಾಧಿತವಾಗಲಿದೆ.
ಇದಿಷ್ಟೂ ಭಾರತದ ದಾಳಿ ಸಾಮರ್ಥ್ಯದ ಮಾತಾಯಿತು. ಇನ್ನು ಭಾರತದ ರಕ್ಷಣಾ ಸಾಮರ್ಥ್ಯದತ್ತ ಗಮನ ಹರಿಸೋಣ. ಪಾಕಿಸ್ತಾನದ ದಾಳಿಯ ಸಂದರ್ಭದಲ್ಲಿ, ಡಿಜಿಟಲ್ ಫೈರ್ ಕಂಟ್ರೋಲ್, ಥರ್ಮಲ್ ಇಮೇಜಿಂಗ್, ಮತ್ತು ಲೇಸರ್ ರೇಂಜ್ ಫೈಂಡರ್ ವ್ಯವಸ್ಥೆಗಳನ್ನು ಅಳವಡಿಸಿರುವ ಎಲ್-70 ಆ್ಯಂಟಿ ಏರ್‌ಕ್ರಾಫ್ಟ್ ಗನ್‌ಗಳು ಕೆಳಭಾಗದಲ್ಲಿ ಸಾಗುತ್ತಿದ್ದ ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದವು.
ದೇಶೀಯ ನಿರ್ಮಾಣದ ಈ 40 ಎಂಎಂ ಗನ್‌ಗಳು ಪಂಜಾಬ್ ಮತ್ತು ಜಮ್ಮುವಿನಂತಹ ಗಡಿ ಪ್ರದೇಶಗಳಲ್ಲಿ ಬಳಕೆಗೆ ಸೂಕ್ತವಾಗಿದೆ.
ಇನ್ನು ಭಾರತ್ ಡೈನಾಮಿಕ್ಸ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಆಕಾಶ್ ಕ್ಷಿಪಣಿ ವ್ಯವಸ್ಥೆ, 25 ಕಿಲೋಮೀಟರ್ ಪ್ರದೇಶವನ್ನು ರಕ್ಷಿಸಿ, ಗಡಿಯೊಳಗೆ ಒಂದು 'ಸೊಳ್ಳೆಯೂ ನುಸುಳದ' ಮಟ್ಟಿಗೆ ಭದ್ರತೆ ಒದಗಿಸುತ್ತದೆ. ಹೆಚ್ಚಿನ ವ್ಯಾಪ್ತಿಯ ರಕ್ಷಣೆಗಾಗಿ ಇಸ್ರೇಲ್ ಜೊತೆಗೂಡಿ ನಿರ್ಮಿಸಿರುವ ಎಂಆರ್-ಎಸ್ಎಎಂ (ಬಾರಕ್ 8) ವ್ಯವಸ್ಥೆ 70 ಕಿಲೋಮೀಟರ್‌ಗಳಷ್ಟು ದೂರದಲ್ಲಿದ್ದ ಶತ್ರು ಕ್ಷಿಪಣಿಗಳನ್ನು ಹೊಡೆದುರುಳಿಸಿತು.
ಇನ್ನು, ರಷ್ಯಾ ನಿರ್ಮಿತ, ಭಾರತೀಯ ಸೇನೆಯ 'ಸುದರ್ಶನ ಚಕ್ರ'ವಾದ ಎಸ್-400 ವ್ಯವಸ್ಥೆ ಅತ್ಯಂತ ಸಮರ್ಥವಾಗಿತ್ತು. ವರದಿಗಳ ಪ್ರಕಾರ, ಎಸ್-400 ಪಾಕಿಸ್ತಾನದ ಫತಾಹ್-2 ಕ್ಷಿಪಣಿಯನ್ನೂ ಹೊಡೆದುರುಳಿಸಿದ್ದು, ಇದು ಶತ್ರುಗಳ ಕ್ಷಿಪಣಿಗಳು ಮತ್ತು ಯುದ್ಧ ವಿಮಾನಗಳನ್ನು 400 ಕಿಲೋಮೀಟರ್ ದೂರದಿಂದಲೇ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.
ಇವೆಲ್ಲ ವ್ಯವಸ್ಥೆಗಳು, ಅಂದರೆ, ಎಲ್-70, ಆಕಾಶ್, ಎಂಆರ್-ಎಸ್ಎಎಂ, ಮತ್ತು ಎಸ್-400ಗಳು ಜೊತೆಯಾಗಿ, ಭಾರತದ ಪಾಲಿಗೆ ರಕ್ಷಾ ಕವಚದಂತೆ ಕಾರ್ಯ ನಿರ್ವಹಿಸಿದವು.
ಇನ್ನೂ ಹೆಮ್ಮೆ ಪಡುವ ವಿಚಾರವೆಂದರೆ, ಎಂಆರ್-ಎಸ್ಎಎಂ 70% ಭಾರತೀಯ ಬಿಡಿಭಾಗಗಳನ್ನು ಹೊಂದಿದ್ದರೆ, ಆಕಾಶ್ ವ್ಯವಸ್ಥೆ ಸಂಪೂರ್ಣವಾಗಿ ಭಾರತೀಯ ನಿರ್ಮಾಣದ ವ್ಯವಸ್ಥೆಯಾಗಿದೆ. ಈಗ ಭಾರತ ಕೇವಲ ರಕ್ಷಣಾ ಉಪಕರಣಗಳನ್ನು ಖರೀದಿಸುತ್ತಿಲ್ಲ. ಬದಲಿಗೆ, ಭಾರತದಲ್ಲಿ ಅವುಗಳನ್ನು ಉತ್ಪಾದಿಸುತ್ತಿದೆ.
ಮೇ 11, 2025ರಂದು ರಾಷ್ಟ್ರೀಯ ತಂತ್ರಜ್ಞಾನ ದಿನದಂದೇ ಲಕ್ನೋದಲ್ಲಿ ನೂತನ ಬ್ರಹ್ಮೋಸ್ ಕಾರ್ಖಾನೆಯನ್ನು ಉದ್ಘಾಟಿಸಲಾಯಿತು. ಇದು ಬ್ರಹ್ಮೋಸ್ ಕ್ಷಿಪಣಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನೆರವಾಗಲಿದ್ದು, ಫಿಲಿಪೈನ್ಸ್, ವಿಯೆಟ್ನಾಂಗಳಂತಹ ದೇಶಗಳಿಗೆ ಬ್ರಹ್ಮೋಸ್ ರಫ್ತು ಮಾಡಲು ಪೂರಕವಾಗಿದೆ.
ಪಹಲ್ಗಾಮ್ ದಾಳಿಯ ಬಳಿಕ ನಡೆದ ಆಪರೇಷನ್ ಸಿಂದೂರ ಕೇವಲ ಇನ್ನೊಂದು ಕಾರ್ಯಾಚರಣೆ ಮಾತ್ರವಲ್ಲ. ಈ ಕಾರ್ಯಾಚರಣೆಯಲ್ಲಿ ಭಾರತ ಪಾಕಿಸ್ತಾನದ ಡ್ರೋನ್‌ಗಳು, ಜೆಎಫ್-17 ಯುದ್ಧ ವಿಮಾನಗಳು, ಮತ್ತು ಕ್ಷಿಪಣಿಗಳನ್ನೂ ಮಣಿಸಿತ್ತು.
ಇಂದಿನ ಯುದ್ಧಗಳು ಟಾಪ್ ಗನ್ ಸಿನೆಮಾದ ರೀತಿಯಲ್ಲಿ ವೈಮಾನಿಕ ಚಕಮಕಿಯನ್ನು (ಡಾಗ್ ಫೈಟ್ಸ್) ಹೊಂದಿಲ್ಲ. ಈಗ ಯುದ್ಧ ವಿಮಾನಗಳು ಮೂರು ಕಿಲೋಮೀಟರ್ ದೂರದಿಂದಲೇ ಸೆಣಸುತ್ತವೆ. ಯುದ್ಧಗಳನ್ನು ಇಂದು ಕೇವಲ ವೇಗದಿಂದಲ್ಲ, ಸ್ಮಾರ್ಟ್ ತಂತ್ರಜ್ಞಾನದ ಬಳಕೆಯಿಂದ ಗೆಲ್ಲಲಾಗುತ್ತದೆ.
ಡಿಆರ್‌ಡಿಒ ಮತ್ತು ಭಾರತ್ ಡೈನಾಮಿಕ್ಸ್ ಅಭಿವೃದ್ಧಿ ಪಡಿಸಿರುವ ಭಾರತದ ಕ್ಷಿಪಣಿಗಳು, ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಶತ್ರುವನ್ನು ಮೀರಿಸಿದ್ದವು.
ಓರ್ವ ವಿಜ್ಞಾನಿ 'ಕ್ಷಿಪಣಿಗಳ ವಿಚಾರಕ್ಕೆ ಬಂದರೆ, ಭಾರತವೇ ಸೂಪರ್ ಪವರ್' ಎಂದು ಸರಿಯಾಗಿಯೇ ವಿಶ್ಲೇಷಿಸಿದ್ದರು. ಅದು ಕೇವಲ ಮಾತಿಗೆ ಸೀಮಿತವಾದ ಹೇಳಿಕೆಯಲ್ಲ. ಬ್ರಹ್ಮೋಸ್‌ನಿಂದ ಆಕಾಶ್ ತನಕ, ಭಾರತದ ತಂತ್ರಜ್ಞಾನ ಇಂದು ಜಾಗತಿಕ ಗುಣಮಟ್ಟದ್ದಾಗಿದೆ.
ಹಾಗೆಂದು ಭಾರತ ಇಷ್ಟಕ್ಕೇ ನಿರಾಳವಾಗುವಂತಿಲ್ಲ. ಭಾರತ ಇನ್ನೂ ನಾವೀನ್ಯತೆಗಳನ್ನು ನಡೆಸುತ್ತಾ, ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಬೇಕು. ನೂತನ ಬ್ರಹ್ಮೋಸ್ ಎನ್‌ಜಿ ಮತ್ತು ಹೊಸ ಕ್ಷಿಪಣಿ ಕಾರ್ಖಾನೆಗಳು ಭಾರತ ಭವಿಷ್ಯಕ್ಕಾಗಿ ಸಜ್ಜಾಗುತ್ತಿದೆ ಎಂಬ ಸಂದೇಶ ಸಾರಿವೆ.
ಆಪರೇಷನ್ ಸಿಂದೂರ ಭಾರತ ತನ್ನ ಆಗಸವನ್ನು ರಕ್ಷಿಸುವುದು ಮಾತ್ರವಲ್ಲದೆ, ಅವಶ್ಯಕತೆ ಬಿದ್ದರೆ ಶತ್ರುವಿನ ಒಳನುಗ್ಗಿ ದಾಳಿ ನಡೆಸಬಲ್ಲೆ ಎಂದು ಸಾಬೀತುಪಡಿಸಿದೆ. ಇದು ಹೊಸ ಭಾರತ - ಸ್ವಾವಲಂಬಿ, ನಿರ್ಭೀತ ಮತ್ತು ತಡೆಯಲಸಾಧ್ಯವಾದ ಭಾರತ!
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement